ಸರೀಸೃಪಗಳ ಸರಸರ ಸದ್ದಿನ ವಿನಃ ಬೇರೇನೂ ಕೇಳಿಸದ, ಕೈಯಲ್ಲಿ ಹಿಡಿದಿರುವ ಪಂಜಿನ ಬೆಳಕು ಒಂದು ಅಡಿಯೂ ಮುಂದೆ ಸಾಗದ ಕಡು ಕಪ್ಪು ಕಗ್ಗತ್ತಲ ರಾತ್ರಿ. ಸುಮಾರು ರಾತ್ರಿ 11 ಇರಬಹುದು, ಮೋಡಗಳು ಕರೀ ಛತ್ರಿಯ ತರ ಹರಡಿಕೊಂಡಿದೆ, ನಕ್ಷತ್ರಗಳೂ ಕಾಣಿಸದ ಅಮವಾಸ್ಯೆ ರಾತ್ರಿ.
ರುದ್ರಭೈರವನು ಕೂತೂಹಲ ಭರಿತದಿಂದ ಹಾಗೂ ಅತ್ಯಂತ ಆತ್ಮ ವಿಶ್ವಾಸದಿಂದ ತನ್ನ ಪ್ರಾಣ ಸ್ನೇಹಿತ ರಾಘವನ ಜೊತೆ ಸರಸರನೆ ಸ್ಮಶಾನದ ಕಡೆಗೆ ಹೆಜ್ಜೆ ಹಾಕುತ್ತಿದ್ದಾನೆ. ಈ ದಿನ ಸಿದ್ಧಿ ಮಾಡಿಕೊಳ್ಳಲೇಬೇಕು, ಇದು ಹಿಂದೆ ಮಾಡಿರುವುದಕ್ಕಿಂತ ಒಂದು ಕೈ ಮೇಲು. ಇಂದಿನ ಸಿದ್ಧಿ ನೇರವಾಗಿ ಜಗನ್ಮಾತೆಯೊಡನೆ ಮಾತನಾಡಬಹುದಾದ ಸಿದ್ಧಿ, ಮೃತ್ಯು ಜಯಿಸುವ ಸಿದ್ಧಿ. ಇದುವರೆಗೂ ಸಿದ್ಧಿಸಿಕೊಂಡಿರುವುದು ದೈವದೊಂದಿಗೆ ಪರೋಕ್ಷ ಅನುಭೂತಿ, ಇಂದು! ಏನೋ ಕಾಲಿಗೆ ತಗುಲಿದಂತಾಗಿ ರುದ್ರಭೈರವ ಒಂದು ಕ್ಷಣ ನಿಂತ.
ಏನೋ ಏನಾಯಿತೋ ರಾಮ ಜೋಯಿಸ ಹೀಗೆ ನಿಂತೆ, ಭಯವಾಯಿತೆ? ಭಯ!, ಎಷ್ಟು ಸಲ ಹೇಳಿಲ್ಲ ನಿನಗೆ, ನನ್ನ ಪೂರ್ವಾಶ್ರಮದ ಹೆಸರು ಹಿಡಿದು ಕರಿಬೇಡ ಎಂದು, ಜನಿವಾರದ ಜೊತೆಗೆ ಹೆಂಡತಿ,ಮಕ್ಕಳು, ಜಾತಿ ಎಲ್ಲಾ ಬಿಟ್ಟು ಹತ್ತು ವರ್ಷವಾಯಿತು. ಸಾತ್ವಿಕ ರೀತಿಯಲ್ಲಿ ಸಾಧ್ಯವಾದದ್ದು ವಾಮಾಚಾರ ವಿದ್ಯೆಯಿಂದ ಸಾಧಿಸಿ ಕೊಂಡಿದ್ದೇನೆ. ದೇವರಿಗೆ ದೆವ್ವ ಹಿಡಿಸುವ ಮಹಾ ಭೈರವ ವಿದ್ಯೆಯನ್ನು ಸಾಧಿಸಿದ್ದೇನೆ, ಈಗಾಗಲೇ ನಾಲ್ಕು ಶವ ಸಾಧನೆ ಸಿದ್ಧಿ ಆಗಿದೆ. ಎಲ್ಲಾ ಹುಣ್ಣಿಮೆಯ ದಿನ ಆಗಬೇಕು, ಇದು ವಿಶೇಷ ಅದಕ್ಕೆ ಅಮಾವಾಸ್ಯೆ ಆರಿಸಿಕೊಂಡಿದ್ದೇನೆ. ನನಗೆ ಹಸಿ ಬಾಣಂತಿ ಶವ ಬೇಕಾಗಿತ್ತು ಈ ದಿಕ್ಕಿನ ಸ್ಮಶಾನದಲ್ಲಿ ಇಂದು ಮಣ್ಣು ಮಾಡಲಿದ್ದಾರೆ ಎಂದು ನನಗೆ ಕರ್ಣ ಪಿಶಾಚಿ ಬಂದು ಹೇಳಿದ್ದರಿಂದ ನಿನ್ನನ್ನೂ ಕರೆದುಕೊಂಡು ಘಟ್ಟದ ಕಾಡುಗಳಿಂದ ಕೆಳಗೆ ಬರುತ್ತಿದ್ದೇನೆ. ನೀನು ನನ್ನ ಜೊತೆಯಲ್ಲೇ ಇದ್ದರೂ ಇನ್ನೂ ಏನೂ ಕಲಿತಿಲ್ಲ, ಪೂರ್ವದ ಬುದ್ಧಿಯೂ ಮರೆತಿಲ್ಲ, ನನ್ನ ಜೊತೆಗೆ ಇರುವ ಧೈರ್ಯ ಇದೆಯಲ್ಲ ಅಷ್ಟು ಸಾಕು, ನನ್ನ ಹಳೆ ಹೆಸರು ಕರೆದು ಹಳೆಯದನ್ನ ನೆನಪಿಸಬೇಡ, ಬೇಗ ಬಾ ಮಹೂರ್ತ ಮೀರಿದರೆ ಇನ್ನೂ ಮೂರು ವರ್ಷ ಕಾಯಬೇಕು.
ಅಲ್ವೋ ರಾಮ, ಅಲ್ಲ ಅಲ್ಲ ರುದ್ರಭೈರವ ಈಗ ಸಾಧಿಸಿರುವ ವಿದ್ಯೆ ಸಾಲದೇನೋ, ಮೊನ್ನೆ ಹೊನ್ನಾಂಬಿಕೆ ದೇವಿಗೆ ಮಾಟ ಮಾಡಿ ತಾಯಿಯ ಮಾಂಗಲ್ಯ ಬಿಚ್ಚಿ ವಾಮಾಚಾರಕ್ಕೆ ಬಳಕೆ ಮಾಡಿರುವೆ, ಅದರಿಂದ ಆ ಮುಖ್ಯಮಂತ್ರಿಯ ಶತ್ರುವನ್ನು ಕೊಂದು ಹಣ, ಕೀರ್ತಿ ಎರಡೂ ಸಂಪಾದನೆ ಮಾಡಿರುವೆ, ಇನ್ನೇನು ಬೇಕು ನಿನಗೆ ಇದೆಲ್ಲ ನಿಲ್ಲಿಸಿ ಊರಿಗೆ ಹೊರಡಬಾರದೆ?, ಬ್ರಾಹ್ಮಣನಾಗಿ ಇದೆಲ್ಲಾ ಸರಿಯೇ?.
ಇಂದು ನಿನಗೆ ಏನಾಗಿದೆ, ಇಷ್ಟು ದಿನ ಇಲ್ಲದ ಈ ನೆನಪು ಈಗೇಕೆ, ನನಗೆ ಹೊರಡುವಾಗ ಯಾವ ಅಪಶಕುನವೂ ಕಾಣಲಿಲ್ಲ, ಆ ಪುರೋಹಿತ ಕೆಲಸದಲ್ಲಿ ಏನು ಸಿಗುತ್ತಿತ್ತು ಅಬ್ಬಾ ಎಂದರೆ ಒಂದು ಒಳ್ಳೆ ಮಹೂರ್ತ ನೋಡಿ ಅವರು ಒಳಗೆ ಬೈದುಕೊಂಡು ಕೊಡುವ ದಕ್ಷಿಣೆ, ಸಾವಿರ ಸಾವಿರ ಬಾರಿ ಗಾಯತ್ರಿ ಮಂತ್ರ ಜಪ ಮಾಡಿದರೂ ತೀರದ ಕಷ್ಟ, ಅದಕ್ಕೆ ಬ್ರಾಹ್ಮಣ್ಯಕ್ಕೆ ಎಳ್ಳು ನೀರು ಬಿಟ್ಟು ಇದನ್ನ ಹಿಡಿದಿರುವುದು, ನಿನಗ ಗೊತ್ತಲ್ಲ ಈ ಹೊತ್ತಿಗೆ ಭಾರತದಲ್ಲಿ ಇರುವ ಕೆಲವೇ ಪ್ರಚಂಡ ತಾಂತ್ರೀಕರಲ್ಲಿ ನಾನೂ ಒಬ್ಬ.
ಈ ರಾತ್ರಿ ಹಸಿ ಬಾಣಂತಿ ಶವದ ಮೇಲೆ ಪದ್ಮಾಸನ ಹಾಕಿ ಕೂತು ತಾಯಿಯನ್ನು ಕರೆದರೆ? ಬಿಡು ನಿನಗೇನು ಗೊತ್ತು?, ಈ ಸಿದ್ಧಿ ನನ್ನನ್ನು ಭೈರವ, ಕಾಪಾಲಿಕ, ಅಘೋರಿ ಮತ್ತು ನಾಗ ಸಾಧುಗಳಲ್ಲೇ ಅಗ್ರಗಣ್ಯ ಪಟ್ಟಕ್ಕೆ ಏರಿಸುತ್ತದೆ?. ಆಗ ತಿಳಿಯುತ್ತದೆ ನನ್ನ ಶಕ್ತಿ ಏನೆಂದು ಸುಮ್ಮನೆ ಬೇಗ ಬಾ ಶವ ಹೂತು ಈಗಾಗಲೇ ಎಂಟು ಗಂಟೆ ಕಳೆದಿದೆ.
ಮುಂದೆ ಮಾತು ಹೊರಡದೆ ರಾಘವ ಮೌನವಾಗಿ ಹಿಂಬಾಲಿಸಿದ, ಎಷ್ಟು ಛಲ ಇವನಿಗೆ, ಬೆತ್ತಲೆ ಶವದ ಮೇಲೆ ಕುಳಿತು ಏನೋ ಮಹತ್ ಸಾಧಿಸಬೇಕೆಂಬ ತಪನ ಮತ್ತು ಕೀರ್ತಿಯ ದುರಾಸೆ, ಎರಡೂ ಅಂಟಿಕೊಂಡಿದೆ ಇವನಿಗೆ. ಅಸಹ್ಯ?
ರುದ್ರಭೂಮಿ ಅತ್ಯಂತ ಭಯಾನಕವಾಗಿ ಕಾಣುತ್ತಿದೆ, ಅಲ್ಲಲ್ಲಿ ಹಳೆಯ ಬಟ್ಟೆಗಳು, ಬಿದುರಿನ ಕಡ್ಡಿಗಳು, ಮೂಳೆಗಳು, ಇದು ಯಾವ ಸ್ಮಶಾನ, ಯಾವ ಕಾವಲುಗಾರನೂ ಇಲ್ಲ, ಗಲೀಜು. ಪಾಶ್ಚಾತ್ಯ ದೇಶಗಳಲ್ಲಿ ಸರಿ, ಯಾರಿಗೋ ಮಾಟ ಮಾಡಲು ಅಲ್ಲಿಗೂ ಹೋಗಿದ್ದವು, ಎಷ್ಟು ಸುಂದರವಾಗಿದೆ ಅಲ್ಲಿನ ಸ್ಮಶಾನ ಒಳ್ಳೆ ಹನಿಮೂನ್ ಜಾಗ ಇದ್ದ ಹಾಗಿದೆ ಇಲ್ಲೋ! ಅಂದುಕೊಳ್ಳುವಷ್ಟರಲ್ಲಿ ಆಗ ತಾನೇ ಗುಂಡಿ ಮುಚ್ಚಿದ್ದ ಕಡೆ ರುದ್ರನ ಜೊತೆ ಬಂದು ನಿಂತ ರಾಘವ.
ಸರಿ ಹೆಣ ತೆಗಿ ಅದರ ಮೈಮೇಲೆ ಏನೂ ಇರಬಾರದು, ಸಂಪೂರ್ಣ ಬೆತ್ತಲೆ ನಾನು ಜಾಗ ಸಮತಟ್ಟು ಮಾಡುತ್ತೇನೆ ಬೇಗ ಬಾ ಎಂದು ಹೇಳಿ ರುದ್ರ ಸ್ಮಶಾನದಲ್ಲಿ ಇರುವ ಬಿಲ್ವ ಮರದ ಕಳಗೆ ಹೊರಟ.
ಸಣ್ಣ ಹಣತೆಯನ್ನು ಹಚ್ಚಿ ಜಾಗ ಸಮತಟ್ಟು ಮಾಡಿ ಸುತ್ತಲೂ ಕುಂಕುಮದಿಂದ ವೃತ್ತವನ್ನು ಬರೆದು ಎಂಟು ದಿಕ್ಕಿಗೂ ಪಂಜುಗಳನ್ನು ಚುಚ್ಚಿ ,ಬೇಗ ಬಾ ಮಹೂರ್ತ ಹತ್ತಿರವಾಗುತ್ತಿದೆ.
ರಾಘವ ಗುಂಡಿ ತೋಡುತ್ತಾ ಏನು ಆತುರ ಇವನಿಗೆ ಈಗಾಗಲೇ ನಾಲ್ಕು ಶವ ಸಾಧನೆ ಮುಗಿಸಿದ್ದಾನೆ ಏನು ಮಹಾ, ಬೆತ್ತಲೆ ಹೆಣದ ಸೊಂಟದ ಮೇಲೆ ಹೆಣದ ಮುಖಕ್ಕೆ ಮುಖ ಮಾಡಿ ಪದ್ಮಾಸನದಲ್ಲಿ ಕುಳಿತು ಜಪ ಮಾಡುತ್ತಾನೆ, ಮನಸ್ಸಿನಲ್ಲಿ ನಡೆಯುತ್ತಿದ್ದ ಜಪ ಆಕಾಶ ಮುಟ್ಟುವಷ್ಟು ಜೋರಾಗಿ ಹೇಳುವಷ್ಟರಲ್ಲಿ ಹೆಣ ದೊತ್ತನೆ ಕಣ್ಣು ತೆರೆದು ಮೇಲೆ ಎದ್ದು ಇವನ ಕಣ್ಣುಗಳನ್ನು ತನ್ನ ಭಯಾನಕ ಕಣ್ಣುಗಳಿಂದ ನೋಡುತ್ತದೆ, ಆಗ ಇವನು ಕಣ್ಣು ಬಿಟ್ಟು ಶವದ ದೃಷ್ಟಿಯಲ್ಲಿ ತನ್ನ ದೃಷ್ಟಿ ಇಟ್ಟು ಮಂತ್ರ ಜಪಿಸಬೇಕು. ಆಗ ಸ್ಮಶಾನದಲ್ಲಿ ಇರುವ ಪ್ರೇತಗಳು ಆಕರ್ಷಿತವಾಗಿ ಕೆಲಸ ಕೆಡಿಸಲು ಪ್ರಯತ್ನಿಸುತ್ತವೆ. ಆಗ ನನ್ನ ಕೆಲಸ ಶುರು, ಸುತ್ತಲೂ ಇಟ್ಟಿರುವ ಪಂಜುಗಳನ್ನ ಹಚ್ಚುವುದರಿಂದ ಬೆಳಕಿನ ದಿಗ್ಬಂಧನ ಉಂಟಾಗಿ ಶವ ಸಾಧನೆ ಪೂರ್ಣಗೊಳ್ಳುತ್ತದೆ ಹೀಗೆ ಏನೋ ಅಂದುಕೊಳ್ಳುವಷ್ಟರಲ್ಲಿ ಹೆಣ ಕೈಗೆ ತಾಗಿತು.
ಗುಂಡಿಯಿಂದ ಹೆಣವನ್ನು ತೆಗೆದು ಅದನ್ನು ನೀರಿನಿಂದ ಶುದ್ಧಿಮಾಡಿ ನಿಧಾನವಾಗಿ ಏನೂ ಗಾಯವಾಗದ ಹಾಗೆ ಎಳೆದುಕೊಂಡು ಹೋಗಿ ದಿಗ್ಬಂಧನ ಚಕ್ರದಲ್ಲಿ ರುದ್ರನ ಮುಂದೆ ಮಲಗಿಸಿ ಸ್ವಲ್ಪ ದೂರ ಹೋಗಿ ಬೆನ್ನು ಮಾಡಿ ಕುಳಿತ.
ಅರ್ಧ ಗಂಟೆ ಆಗಿರಬಹುದು ದುರ್ಗಾ ಕವಚದ ಯಾವುದೋ ಮಂತ್ರ ಆರೋಹಣ ಕ್ರಮದಲ್ಲಿ ಕೇಳಿಸುತ್ತದೆ, ದ್ವನಿ ಜೋರಾಗುತ್ತಿದೆ ಹಿಂದುರುಗಿ ನೋಡಿದರೆ ಹೆಣ ಎದ್ದು ಕಣ್ಣು ಬಿಟ್ಟು ರುದ್ರನ ಕಣ್ಣುಗಳನ್ನೇ ನೋಡುತ್ತಿದೆ! ಅಬ್ಬಾ ಎಂಥಾ ಭಯಾನಕ!, ನಖ ಶಿಖಾಂತ ನಡುಕ ಹತ್ತಿದೆ!, ಬೆತ್ತಲೆ ಹೆಣ್ಣಿನ ಶವ,ಎಂದೂ ನನಗೆ ಈ ಅನುಭವ ಆಗಿಲ್ಲ!, ತಕ್ಷಣವೇ ಕರ್ತವ್ಯದ ನೆನಪಾಗಿ ಸುತ್ತಲೂ ನೋಡಿದ ಅನಾಥ ಪ್ರೆತಗಳಿಂದ ವಿಕಾರ ಶಬ್ದಗಳು ಕೇಳುತ್ತಿವೆ, ಪಂಜುಗಳನ್ನು ಹತ್ತಿಸುವ ಸಮಯ, ರುದ್ರನು ಕಣ್ಣು ಬಿಡುವ ಸಮಯ. ಸಾವರಿಸಿಕೊಂಡು ಪಂಜುಗಳನ್ನು ಸರಸರನೆ ಹಚ್ಚಿದ.
ತಕ್ಷಣವೇ ಹುಣ್ಣಿಮೆ ಬಂದಂತಾಗಿ ಬೆಳಕು ಮೂಡಿತು. ಮಂತ್ರಗಳನ್ನು ಸ್ಪಷ್ಟವಾಗಿ ಜೋರಾಗಿ ಹೇಳುತ್ತಾ ನಿಧಾನವಾಗಿ ಕಣ್ಣು ತೆರೆದ ರುದ್ರ. ಶವದ ಕಣ್ಣುಗಳಿಗೆ ತನ್ನ ಕಣ್ಣನ್ನು ಅನುಸಂಧಾನ ಮಾಡಲು ಪ್ರತ್ನಿಸಿದ, ಏನೂ ಎಡವಟ್ಟು ಆಯಿತು, ಬೆತ್ತಲೆ ಹೆಣ್ಣಿನ ಶವದ ಮುಖವನ್ನು ಮಂದ ಬೆಳಕಿನಲ್ಲಿ ದಿಟ್ಟಿಸಿ ನೋಡಿದ. ಲಕ್ಷ್ಮೀ, ನನ್ನ ಮಗಳೇ! ಜಗತ್ತಿಗೇ ಕೇಳುವ ಹಾಗೆ ರುದ್ರ ಕಿರುಚಿದ.
ರಾಘವ ರುದ್ರನ ಮಾತನ್ನು ಕೇಳಿ ಏನಾಯಿತು ಎಂದು ನೋಡುವಷ್ಟರಲ್ಲಿ , ಮಹಾ ತಾಂತ್ರಿಕ, ಭೈರವ ಪದವಿ ಪಡೆದು ಪ್ರಚಂಡ ವಾಮಾಚಾರಿಯಾಗಿ ಮೆರೆದ ರುದ್ರಭೈರವ, ಸಾಮಾನ್ಯ ರಾಮ ಜೋಯಿಸನಂತೆ ರಕ್ತ ಕಾರಿ ಕೆಳಗೆ ಮಲಗಿದ್ದ. ಮಹಾ ಧೈರ್ಯವಂತನ ಮುಖದ ಮೇಲೆ ಭಯದ ನೆರಳು ಆವರಿಸಿತ್ತು!. ಹೆಣ್ಣಿನ ಬೆತ್ತಲೆ ದೇಹ ಅವನ ಮೇಲೆ ಕುಳಿತು ಕತ್ತು ಹಿಸುಕಿ ತನ್ನ ರಕ್ತ ತುಂಬಿದ ವಿಕಾರ ಕಣ್ಣುಗಳಿಂದ ರಾಘವನನ್ನೇ ದೃಷ್ಟಿಸಿ ನೋಡುತ್ತಿತ್ತು.
picture source: Deep Ai
0 Followers
0 Following