ಸಿನಿವ್ಯೂ

ProfileImg
15 Jan '24
4 min read


image

ತೆಲುಗು ಚಿತ್ರರಂಗ ಭಾರತದ ಬೇರೆ ಬೇರೆ ಭಾಷೆಯ ಬಹಳಷ್ಟು ನಟರ ಪಾಲಿಗೆ ತಾಯಿಯಿದ್ದಂತೆ.  ಹಿಂದಿ, ತಮಿಳು,ಮಲಯಾಳಂ, ಕನ್ನಡ ಭಾಷೆಯ ಬೇಡಿಕೆ ಕಳೆದುಕೊಂಡ ನಟರ ಪಾಲಿಗೆ ಅನ್ನದಾತ ಆಗಿದ್ದೂ ಅಲ್ಲದೆ ಅವರಿಗೆ ಮರುಜನ್ಮ ನೀಡಿದೆ.

ತೆಲುಗು ಸಿನಿಮಾ ರಂಗ ಯಾವತ್ತು ಅದ್ದೂರಿತನಕ್ಕೆ ಹೆಸರುವಾಸಿ. ತೆಲುಗು ಸಿನಿಮಾಗಳಲ್ಲಿ ಹಾಡುಗಳು,ಫೈಟುಗಳು ಅದ್ದೂರಿಯಾಗಿ ಇರುತ್ತವೆ. ಪ್ರತಿ ಸೀನಿನಲ್ಲೂ ಪ್ರತಿ ಪ್ರೇಮಿನಲ್ಲೂ ಶ್ರೀಮಂತಿಕೆ ಎದ್ದು ಕಾಣುವಂತಿರುತ್ತದೆ. ಹಾಗಿರುವಾಗ ಹೀರೋಗೆ ಟಕ್ಕರ್ ಕೊಡುವ ವಿಲನ್ ಸಾಧಾರಣ ಇದ್ದಾರೆ ಸಾಕೇ ..ಪೋಷಕ ಪಾತ್ರಗಳು ಸಾಧಾರಣವಾಗಿದ್ದರೆ ಏನು ಚಂದ ಹಾಗಾಗಿ ತೆಲುಗು ಸಿನಿಮಾ ರಂಗ ಪೋಷಕ ನಟ ಮತ್ತು ಖಳನಟರುಗಳ ಆಯ್ಕೆಯಲ್ಲಿ ಬಹಳ ಮುತುವರ್ಜಿ ವಹಿಸುತ್ತದೆ. ಅದಕ್ಕಾಗಿ ಬೇರೆ ಭಾಷೆಯ ನಟರನ್ನು ಆಯ್ಕೆ ಮಾಡುತ್ತದೆ. ಅವರಿಗೆ ಅವರ ಭಾಷೆಯಲ್ಲಿ ಬೇಡಿಕೆ ಇಲ್ಲದಿದ್ದರೂ ತಮ್ಮ ಕತೆಗೆ ಅಂತಹಾ ಪರ್ಸನಾಲಿಟಿ ಬೇಕು ಅಂದರೆ ತೆಲುಗು ಸಿನಿರಂಗ ಅವರಿಗೆ ಅವಕಾಶ ನೀಡಿಯೇ ಬಿಡುತ್ತದೆ.

ಸುಮಾರು 15 ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ರಾಹುಲ್ ದೇವ್ ಎಂಬ ನವ ನಟ ಪಾದಾರ್ಪಣೆ ಮಾಡಿದ್ದ. ಆತನ ಮೊದಲ ಸಿನೆಮಾ ಸನ್ನಿ ಡಿಯೋಲ್ ಹೀರೋ ಆಗಿ ನಟಿಸಿದ್ದ ಚಾಂಪಿಯನ್ ಎಂಬ ಸಿನಿಮಾ. ಇದರಲ್ಲಿ ಆತನದ್ದು ಸೈಕೊ ಕಿಲ್ಲರ್ ಪಾತ್ರ. ಇದರ ಅಭಿನಯಕ್ಕೆ ಅವನಿಗೆ ಪ್ರಶಸ್ತಿ ದೊರಕಿತ್ತು.

ಮೊದಲ ಸಿನಿಮಾದಲ್ಲಿ ಪ್ರಶಸ್ತಿ ಪಡೆದ ಅಂತಹ ನಟನಿಗೆ ನಂತರ ಅಷ್ಟೊಂದು ಅವಕಾಶಗಳಿಲ್ಲದೆ ಮೂಲೆಗುಂಪಾಗಿದ್ದ ಸಮಯದಲ್ಲಿ ಆತನಿಗೆ ಪುನರ್ಜನ್ಮ ನೀಡಿದ್ದು ತೆಲುಗು ಚಿತ್ರರಂಗ. ಬಹಳಷ್ಟು ತೆಲುಗು ಸಿನೆಮಾಗಳಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಅಬ್ಬರಿಸಿ ಜನಪ್ರಿಯತೆ ಪಡೆದ ಆ ಮೂಲಕ ಬೇರೆ ಭಾಷೆಗಳಲ್ಲೂ ಅವಕಾಶಗಳನ್ನು ಪಡೆದ, ಈಗಲೂ ಬೇಡಿಕೆ ಇರುವ ನಟ.

ತೆಲುಗು ಚಿತ್ರರಂಗ ಜೀವದಾನ ನೀಡಿದ್ದ ಇನ್ನೊಬ್ಬ ನಟ ಮುಖೇಶ್ ರಿಷಿ. ಅಮೀರ್ ಖಾನ್ ಅಭಿನಯದ ಸರ್ಪರೋಷ್ ಸಿನಿಮಾದಲ್ಲಿ ಇನ್ಸ್ಪೆಕ್ಟರ್ ಸಲೀಂ ಪಾತ್ರದಲ್ಲಿ ಮಿಂಚಿದ್ದ ಮುಕೇಶ್ ರಿಷಿ ಆನಂತರ ಅಷ್ಟೊಂದು ಅವಕಾಶಗಳಿಲ್ಲದೆ ತೆರೆಮರೆಗೆ ಸೇರಿದ ಸಂದರ್ಭದಲ್ಲಿ ಆತನನ್ನು ಕರೆದು ಅವಕಾಶ ನೀಡಿ ಮರುಜನ್ಮ ನೀಡಿದ್ದು ತೆಲುಗು ಚಿತ್ರರಂಗ.
ರಾಜಮೌಳಿಯ ನಿರ್ದೇಶನದ ಜ್ಯೂ ಎನ್ಟಿಆರ್ ನಟನೆಯ ಸೂಪರ್ ಹಿಟ್ ಸಿನೆಮಾ ಸಿಂಹಾದ್ರಿ, ಮೆಗಾಸ್ಟಾರ್ ಚಿರಂಜೀವಿಗೆ ಬಹಳ ಸಮಯದ ಬಳಿಕ ಬ್ರೇಕ್ ನೀಡಿದ ಬ್ಲಾಕ್ ಬಸ್ಟರ್ ಸಿನೆಮಾ 'ಇಂದ್ರ ' ಸೇರಿದಂತೆ ಬಹಳಷ್ಟು ಸಿನೆಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿ ಈಗಲೂ ಎಲ್ಲಾ ಭಾಷೆಗಳಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟ ಮುಕೇಶ್ ರಿಷಿ. ತನ್ನ ಮಾತೃಭಾಷೆಗಿಂತಲೂ ತೆಲುಗು ಭಾಷೆಯ ಮೂಲಕ ದೇಶದಾದ್ಯಂತ ಹೆಸರಾದ ನಟ ಈತ.

ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ಅಶ್ವತ್ಥಾಮ ಪಾತ್ರ ನಿರ್ವಹಿಸಿದ್ದ ಪ್ರದೀಪ್ ರಾವತ್ ಎಂಬ ನಟನಿಗೆ ಜೀವದಾನ ನೀಡಿದ್ದು ಸಹ ತೆಲುಗು ಚಿತ್ರರಂಗ.
ಮಹಾಭಾರತದ ನಂತರ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಸಣ್ಣಪುಟ್ಟ ವಿಲನ್ ಪಾತ್ರ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರದೀಪ್ ರಾವತ್ ಒಂದು ಹಂತದಲ್ಲಿ ಮೂಲೆಗುಂಪಾಗಿದ್ದಂತ ಸಮಯದಲ್ಲಿ ಆತನನ್ನು ಮೇಲಕ್ಕೆತ್ತಿದ್ದು ತೆಲುಗು ಚಿತ್ರರಂಗ ಅಲ್ಲಿಯವರೆಗೆ ಹೊಸ ವಿಲನ್ ಪಾತ್ರಕ್ಕೆ ಅನ್ವೇಷಣೆ ಮಾಡುತ್ತಿದ್ದ ತೆಲುಗು ಚಿತ್ರರಂಗ ಪ್ರದೀಪ್ ರಾವತ್ ನನ್ನು ಆರಿಸಿ ಒಳ್ಳೊಳ್ಳೆಯ ಸೂಪರ್ ಸ್ಟಾರ್ ಗಳ ಸಿನಿಮಾಗಳಲ್ಲಿ ಮುಖ್ಯ ವಿಲ್ಲನ್ ಪಾತ್ರ ನೀಡಿ ಆತನನ್ನು ಪೋಷಿಸಿತು. ಒಂದು ಟೈಮಲ್ಲಿ ಹೀರೋ ಯಾರೇ ಆಗಿರಲಿ ಅದರಲ್ಲಿ ವಿಲನ್ ಮಾತ್ರ ಈತನೇ ಆಗಿರುತ್ತಿದ್ದ ಅಷ್ಟು ಹವಾ ಇತ್ತು ಈತನದ್ದು ವಿಲನ್ ಪಾತ್ರದಲ್ಲಿ.

ರಾಜ ಮೌಳಿ ನಿರ್ದೇಶನದ ಪ್ರಭಾಸ್ ಅಭಿನಯದ ಸೂಪರ್ ಹಿಟ್ ಚಿತ್ರ ಛತ್ರಪತಿಯಲ್ಲಿ ಮುಖ್ಯ ವಿಲನ್ ಪಾತ್ರ ಪ್ರದೀಪ್ ರಾವತ್ ಮಾಡಿದ್ದ.
ತೆಲುಗಿನಲ್ಲಿ ಹೀಗೆ ಅತಿ ಬೇಡಿಕೆ ಪಡೆದುಕೊಂಡ ಪ್ರದೀಪ್ ರಾವತ್ ಜನಪ್ರಿಯತೆ ನೋಡಿ ತಮಿಳು ಸಿನಿಮಾ ನಿರ್ದೇಶಕ ಎ ಆರ್ ಮುರುಗದಾಸ್ ಘಜ್ನಿಯಲ್ಲಿ ವಿಲನ್ ಆಗಿ ನಟಿಸಲು ಆಹ್ವಾನಿಸಿದರು. ಘಜ್ನಿ ಸಿನಿಮಾ ಸೂಪರ್ ಹಿಟ್ ಆದ ಕಾರಣ ಅದನ್ನು ಬಾಲಿವುಡ್ ನಲ್ಲಿ ಅಮೀರ್ ಖಾನ್ ಸಹ ರಿಮೇಕ್ ಮಾಡಿದ್ದ ಅಲ್ಲಿಯೂ ವಿಲನ್ ಪಾತ್ರಕ್ಕೆ ಪ್ರದೀಪ್ ರಾವತ್ ನನ್ನೇ ಆಯ್ಕೆ ಮಾಡಿದ್ದ
ಹೀಗೆ ಬಾಲಿವುಡ್ ನಲ್ಲಿ ಬೇಡಿಕೆ ಕಳೆದುಕೊಂಡಿದ್ದ ಪ್ರದೀಪ ರಾವತ್ ತೆಲುಗು ಸಿನಿಮಾಗಳ ಮೂಲಕ ಮರಳಿ ಜನಪ್ರಿಯತೆ ಪಡೆದು ಬಾಲಿವುಡ್ ಸಿನಿಮಾದಲ್ಲಿ ನಟನೆ ಮಾಡುವಂತಾಯಿತು.

ಹಿಂದಿ ಸಿನಿಮಾಗಳಲ್ಲಿ ಪೋಷಕ ನಟ ಪಾತ್ರ ಮಾಡುತ್ತಾ ಸಾಧಾರಣ ಯಶಸ್ಸು ಕಂಡಿದ್ದ ಮುರಳಿ ಶರ್ಮಗೆ ತೆಲುಗು ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪೋಷಕ ಪಾತ್ರ ದೊರಕಿ ಈಗ ಆತ ಬೇಡಿಕೆಯ ಪೋಷಕ ನಟನಾಗಿದ್ದಾನೆ.

ಬಾಲಿವುಡ್ ನಟ ರವಿ ಕಿಶನ್ ಸಿಂಗ್ ಹಿಂದಿ ಸಿನಿಮಾಗಳಲ್ಲಿ ಅಲ್ಲೊಂದು ಇಲ್ಲೊಂದು ಸಾಧಾರಣ ಪಾತ್ರ ನಿರ್ವಹಿಸುತ್ತಾ ಇದ್ದ ಸಮಯದಲ್ಲಿ ತೆಲುಗು ಚಿತ್ರರಂಗ ಆತನನ್ನು ಕರೆದು ಮುಖ್ಯ ವಿಲ್ಲನ್ ಪಾತ್ರ ಹಾಗೂ ಅತಿ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸಲು ಅವಕಾಶ ನೀಡಿ ಆತನಿಗೆ ಬೇಡಿಕೆ ಕುದುರುವಂತೆ ಮಾಡಿದ್ದಲ್ಲದೆ ಜನಪ್ರಿಯತೆ ತಂದುಕೊಟ್ಟಿತ್ತು.

ಬಾಲಿವುಡ್ ನಟ ಸೋನು ಸೂದ್ ಹೀರೋ ಆಗಿ ಮಿಂಚುವ ಎಲ್ಲಾ ರೀತಿಯ ಅರ್ಹತೆಗಳು ಇದ್ದರೂ ಹಿಂದಿ ಸಿನಿಮಾಗಳಲ್ಲಿ ಜಾಸ್ತಿ ಅವಕಾಶಗಳಿಲ್ಲದೆ ಸೊರಗಿದ್ದ ಸಮಯದಲ್ಲಿ ಆತನನ್ನು ಕರೆತಂದು ಮುಖ್ಯ ವಿಲ್ಲನ್ ಪಾತ್ರಗಳನ್ನು ನೀಡಿ ಈಗ ದೇಶದಾದ್ಯಂತ ಹೆಸರಾಗುವಂತೆ , ಬಹು ಬೇಡಿಕೆ ಇರುವಂತೆ ಮಾಡಿದ್ದು ತೆಲುಗು ಚಿತ್ರರಂಗ.

ಮೇಲೆ ಹೇಳಿದ ಬಾಲಿವುಡ್ ನಟರ ಪ್ರತಿಭೆಯನ್ನು ಹೊರ ತೆಗೆಯಲು ತೆಲುಗು ಚಿತ್ರರಂಗ ಬರಬೇಕಾಯಿತು. ಬಾಲಿವುಡ್ ನವರಿಗೆ ಹಿತ್ತಲ ಗಿಡ ಮದ್ದಲ್ಲ ಅನ್ನುವಂತೆ ತಮ್ಮಲ್ಲಿರುವ ಪ್ರತಿಭಾವಂತರ ಬಗ್ಗೆ ಗಣನೆಯೇ ಇಲ್ಲ.

ಮಲಯಾಳಂ ನ ಸೂಪರ್ ಸ್ಟಾರ್ ಮೋಹನ್ ಲಾಲ್ ತಮಿಳಿನಲ್ಲಿ ವಿಜಯ್ ಅಭಿನಯದ ಜಿಲ್ಲಾ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಕಂಡು ತೆಲುಗರು ಜ್ಯೂ ಎನ್ಟಿಆರ್ ನಟನೆಯ ಜನತಾ ಗ್ಯಾರೇಜ್ ಎಂಬ ಸಿನೆಮಾದಲ್ಲಿ ನಾಯಕನಷ್ಟೇ ಪ್ರಮುಖ ಪಾತ್ರ ನೀಡಿದ್ದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿಯ ಜೀವನಗಾಥೆಯನ್ನು ಸಿನೆಮಾ ಮಾಡಲು ಹೊರಟು ನಾಯಕನಾಗಿ ಯಾರೂ ಸೂಟೇಬಲ್ ಅಲ್ಲ ಅನಿಸಿದಾಗ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿಯನ್ನು ಕರೆತಂದು ಸಿನೆಮಾ ಮಾಡಿದರು 

ಹಿಂದಿನ ಮಲಯಾಳಂ ಸಿನೆಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದ ನಟ ಜಯರಾಂ ಸಹ ತೆಲುಗು ಮೂವೀಗಳಲ್ಲಿ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾನೆ.

ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅಲ್ಲು ಅರ್ಜುನ್ ನ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ. ಜೊತೆಗೆ ನಮ್ಮ ಕಿಚ್ಚ ಸುದೀಪ್ ಈಗ ಎಂಬ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದ. ಅದರ ಹೀರೋ ನಾಣಿ ಆಗಿದ್ದರೂ ಸಿನೆಮಾ ಪೂರ್ತಿ ಸುದೀಪ್ ಆವರಿಸಿಕೊಂಡಿದ್ದ ಕಾರಣ ಅದು ಸುದೀಪ್ ಸಿನೆಮಾ ಅನಿಸಿತ್ತು.

ಕನ್ನಡದಲ್ಲಿ ಈಗಲೂ ಹಿಟ್ ಚಿತ್ರಗಳನ್ನು ನೀಡುತ್ತಿರುವ ದುನಿಯಾ ವಿಜಯ್ ತೆಲುಗಿನ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದಾನೆ

 ನಮ್ಮ ಹಳೆಯ ಹೀರೋ ಟೈಗರ್ ಪ್ರಭಾಕರ್ ಹಾಗೂ ಶಶಿಕುಮಾರ್ ಅವರುಗಳು ಹೆಚ್ಚಾಗಿ ಮುಂಚಿನಿಂದಲೇ ತೆಲುಗು ಸಿನಿಮಾ ಗಳಲ್ಲಿ ಪೋಷಕ ಪಾತ್ರಗಳಲ್ಲಿ. ನಟಿಸಿದವರೇ.

.ಯಾವತ್ತು ಅದ್ದೂರಿ ತನಕ್ಕೆ ಮೊರೆಹೋಗುವ ತೆಲುಗು ಸಿನಿಮಾಗಳಲ್ಲಿ ನಾಯಕನಿಗೆ ಸರಿಸಮವಾಗಿ ಮಿಂಚುವಂತಹ ಪೋಷಕ ನಟರನ್ನು ಹಾಗೂ ಖಳ ನಟರನ್ನು ಆಯ್ಕೆ ಮಾಡುತ್ತಾರೆ ಅದಕ್ಕಾಗಿ ಬೇರೆ ಭಾಷೆಯ ಅತ್ಯುತ್ತಮ ನಟರನ್ನು ಕರೆತಂದು ಕೇಳಿದಷ್ಟು ದುಡ್ಡು ಕೊಟ್ಟು ತಂದು ನಟಿಸಲು ಕೇಳಿಕೊಳ್ಳುತ್ತಾರೆ

ನಡುವಲ್ಲಿ ಪರಭಾಷೆಯ ವಿಲನ್ ಗಳ ಅಬ್ಬರದ ಮದ್ಯೆ ರಾವ್ ರಮೇಶ್ ಎಂಬ ತೆಲುಗು ನಟ ಕೆಲವು ಸಿನೆಮಾಗಳಲ್ಲಿ ಮುಖ್ಯ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ.

ಈಗ ತೆಲುಗಿನ ಹಳೆಯ ಹೀರೋ ನಟ ಜಗಪತಿಬಾಬು   ಅದ್ದೂರಿಯಾಗಿ ವಿಲನ್ ಪಾತ್ರಗಳ ಮೂಲಕ ರೀ ಎಂಟ್ರಿ ಆದ ನಂತರ ಈಗ ಹೆಚ್ಚಿನ ಸಿನಿಮಾಗಳಲ್ಲಿ ಆತನೇ ಮುಖ್ಯ ವಿಲನ್ ಆಗಿದ್ದು ಪರಭಾಷೆಯ ನಟರಿಗೆ ಬೇಡಿಕೆ ಅಲ್ಪ ಕಡಿಮೆಯಾಗಿದೆ.

Category:Movies and TV Shows



ProfileImg

Written by Ranjan Hemanth G.

Nothing

0 Followers

0 Following