Do you have a passion for writing?Join Ayra as a Writertoday and start earning.

ಕ್ರಿಕೆಟಿಗರ ಜೊತೆಗೆ ಸಿನಿಮಾ ನಟಿಯರ ತಳಕು!

ProfileImg
22 May '24
4 min read


image

ಭಾರತದಲ್ಲಿ ಕ್ರಿಕೆಟಿಗರು ಅಕ್ಷರಶಃ ಆರಾಧಕರು. ಜನಪ್ರಿಯತೆ, ಹಣದ ಹೊಳೆಯಲ್ಲಿ ಮುಳುಗಿ ಏಳುವ ಕ್ರಿಕೆಟಿಗರನ್ನು ಹಣ, ಜನಪ್ರಿಯತೆಯಲ್ಲಿ ಸಮಾನ ಅಂಶಗಳನ್ನು ಒಳಗೊಂಡ ಸಿನೆಮಾ ಕ್ಷೇತ್ರದ ನಟಿಯರು ಚುಂಬಕದoತೆ ಆಕರ್ಷಿಸಿದ್ದಾರೆ. ಇದಕ್ಕೆ ಶತಮಾನಗಳ ಇತಿಹಾಸವೇ ಇದೆ. ಒಂದಷ್ಟು  ಕ್ರಿಕೆಟಿಗರ-ನಟಿಯರ ಒಡನಾಟ ಮದುವೆಗೆ ಕಾಲಿರಿಸಿದರೆ, ಹೆಚ್ಚಿನ ಸಂಬoಧಗಳು ಅರ್ಧದಲ್ಲೇ ಮುರಿದು ಹೋಗಿವೆ.

ಕ್ರಿಕೆಟ್ ಪಂದ್ಯಗಳ ಬಳಿಕ ನಡೆಯುವ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಸಿನೆಮಾ ತಾರೆಯರು ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟಿಗರ ಜೊತೆ ಬೆರೆತು ಅವರ ಸ್ನೇಹ ಸಂಪಾದಿಸಲು ಸಿನೆಮಾ ನಟಿಯರು ಹಾತೊರೆಯುತ್ತಾರೆ. ಪಾರ್ಟಿಗಳಲ್ಲಿ ಅರಳುವ ಸ್ನೇಹ ಹಲವು ಬಾರಿ ಡೇಟಿಂಗ್, ಪ್ರೇಮ, ವಿವಾಹದ ಕಡೆಗೂ ತಿರುಗುತ್ತದೆ.

ಸಿನೆಮಾ ತಾರೆಯರ ಜೊತೆಗೆ ಕ್ರಿಕೆಟಿಗರ ಹೆಸರು ತಳಕು ಹಾಕಿಕೊಂಡ ಕೂಡಲೇ ದಿನಕ್ಕೊಂದು ಗಾಸಿಪ್ ಹರಡಲು ಶುರುವಾಗುತ್ತದೆ. ಸಿನೆಮಾ ತಾರೆಯರ, ನಟಿಯರ ಒಡನಾಟದ ಗುಂಗಿನಲ್ಲಿ ಅಭಿಮಾನಿಗಳ ಬಾಯಿ ಮಾತಾಗುವ ಈ ಸಂಬ0ಧಗಳು ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವುದೂ ಇದೆ.

ಕೊಯ್ಲಿಯೂ ಹೊರತಲ್ಲ: 

2014ರ ಇಂಗ್ಲೆoಡ್ ಪ್ರವಾಸದಲ್ಲಿ ಫಾರ್ಮ್ ಕಳೆದುಕೊಂಡ ಹಾಲಿ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ, ನಟಿ ಅನುಷ್ಕಾ ಶರ್ಮಾ ಜೊತೆಗಿನ ಸಂಬoಧ ಹಿನ್ನೆಲೆ ಸುದ್ದಿಗೆ ಆಹಾರವಾದರು. ಇಂಗ್ಲೆoಡ್ ಪ್ರವಾಸದಲ್ಲಿ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡದ್ದೇ ಬೀದಿ ಬದಿಯ ಮಾತಿಗೆ ಕಾರಣವಾಯಿತು. ಕೊಹ್ಲಿ ಆಡದೆ ಇರಲು ಅನುಷ್ಕಾ ಕಾರಣ ಎಂದು ಅಭಿಮಾನಿಗಳು ಕೋಪಗೊಂಡರು.

ಈ ಮುನ್ನ ಕೊಹ್ಲಿ ಹೆಸರು ನಟಿ ತಮನಾ, ಸಂಜನಾ ಜೊತೆಗೆ ಕೇಳಿಸಿತ್ತು. ಬಳಿಕ ಅನುಷ್ಕಾ ಜೊತೆ ಬಹಳ ಸಮಯ ಅಂಗಳದ ಹೊರಗೆ ಬ್ಯಾಟ್ ಬೀಸಿದ ಕೊಹ್ಲಿ 2017ರಲ್ಲಿ ಅವರನ್ನೇ ವಿವಾಹವಾದರು.

 

ರವಿಶಾಸ್ತ್ರಿ-ಅಮೃತಾ ಸಿಂಗ್: 

1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರವಿ ಶಾಸ್ತ್ರಿ, ನಟಿ ಅಮೃತಾ ಸಿಂಗ್ ಜೊತೆ ಆಗಾಗ ಕಾಣಿಸಿಕೊಂಡಿದ್ದರು. ಈ ಸಂಬoಧವನ್ನು ಆವರಿಬ್ಬರೂ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಈ ಜೋಡಿ ಬೇರ್ಪಟ್ಟಿತು. ಮುಂದೆ ರವಿ ಶಾಸ್ತ್ರಿ ಅವರು ರೀತೂ ಸಿಂಗ್ ಅವರನ್ನು ವಿವಾಹವಾದರೆ, ಅಮೃತಾ ಸಿಂಗ್ ಅವರು 'ಟೈಗರ್ ಪಟೌಡಿ' ಮಗ ಸೈಫ್ ಅಲಿ ಖಾನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು. ವಿವಾದ ಏನೇ ಇದ್ದರೂ ಅಂಗಣದಲ್ಲಿ  ಶಾಸ್ತ್ರಿ ಪ್ರದರ್ಶನದಲ್ಲಿ ಸೋತಿದ್ದು ಕಡಿಮೆ.

ಕಪಿಲ್ ದೇವ್-ಸಾರಿಕಾ: 

ಚೊಚ್ಚಲ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್, 80ರ ದಶಕದ ನಟಿ ಸಾರಿಕಾ ಜೊತೆ ಆಗಾಗ ಕಾಣಿಸಿಕೊಂಡಿದ್ದು ಬಲುದೊಡ್ಡ ಮಾತಾಗಿತ್ತು. ಆದರೆ ಈ ಸಂಬoಧ ಹೆಚ್ಚು ಸಮಯ ಬಾಳಲಿಲ್ಲ. ಸಾರಿಕಾ ಮುಂದೆ ಕಮಲ್‌ಹಾಸನ್ ಅವರನ್ನು ವಿವಾಹವಾದರು. ಸುನಿಲ್ ಗವಾಸ್ಕರ್ ಜತೆಗಿನ ಮನಸ್ತಾಪ, ಬೌಲಿಂಗ್ ವೈಫಲ್ಯ ಕಪಿಲ್‌ರನ್ನು ಕಾಡಿದ್ದು ಬಿಟ್ಟರೆ ವೃತ್ತಿ ಬದುಕಿಗೆ ಕಪಿಲ್‌ದೇವ್ ಅವರು ಸಾರಿಕಾ ಜೊತೆಗಿನ ಸಂಬ0ಧದಿ0ದ ಯಾವುದೇ ಘಾಸಿ ಮಾಡಿಕೊಳ್ಳಲಿಲ್ಲ.

ಮೊಹಮ್ಮದ್ ಅಜರುದ್ದೀನ್: 

ಭಾರತದ ಯಶಸ್ವೀ ನಾಯಕ ಮೊಹಮ್ಮದ್ ಅಜರುದ್ದೀನ್ ಸಹ ಬಣ್ಣದ ಲೋಕದ ಬೆರಗಿಗೆ ಆಕರ್ಷಿತಗೊಂಡವರು. ಹೈದರಾಬಾದ್‌ನ ಬಲಗೈ ಬ್ಯಾಟ್ಸ್ಮನ್‌ಗೆ ರೂಪದರ್ಶಿ, ನಟಿ ಸಂಗೀತಾ ಬಿಜಲಾನಿ ಸೆಳೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. 1996ರಲ್ಲಿ ಬಿಜಲಾನಿ ಅವರನ್ನು ಮದುವೆಯಾದಾಗ ಅಜರುದ್ದೀನ್‌ಗೆ ಮೊದಲ ಪತ್ನಿ ನೌರಿನ್ ಅವರಿಂದ ಅಸಾದ್, ಅಯಾಜ್ ಎನ್ನುವ ಇಬ್ಬರು ಮಕ್ಕಳಿದ್ದರು. ಮುಂದೆ ಅಜರುದ್ದೀನ್‌ಗೆ ಮ್ಯಾಚ್ ಫಿಕ್ಸಿಂಗ್ ವೃತ್ತಿ ಬದುಕಿಗೆ ಮುಳುವಾಯಿತು.

ಕೆಲ ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆ ಅಜರುದ್ದೀನ್ ಹೆಸರು ತಳಕು ಹಾಕಿಕೊಂಡಿತು. ಮುಂದೆ ಬಿಜಿಲಾನಿ ಜೊತೆಗಿನ ಸಂಬ0ಧ ಹಳಸಿತು.

ಸೌರವ್ ಗಂಗೂಲಿ-ನಗ್ಮಾ: 

ಭಾರತದ ಶ್ರೇಷ್ಠ ನಾಯಕರೆನಿಸಿದ ಸೌರವ್ ಗಂಗೂಲಿ ನಾಯಕನಾಗಿದ್ದಾಗ ನಟಿ ನಗ್ಮಾ ಜೊತೆ 2001ರಲ್ಲಿ ಆಂಧ್ರ ಪ್ರದೇಶದ ಕಾಳಹಸ್ತಿ ಮಂದಿರದಲ್ಲಿ ಒಟ್ಟಿಗೆ ಕಾಣಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದರು. ಈ ವೇಳೆಗೆ 'ಕೋಲ್ಕತ್ತಾದ ಮಹಾರಾಜ' ಗಂಗೂಲಿ ಡಾನ್ಸರ್ ಡೋನಾ ಅವರನ್ನು ಮದುವೆಯಾಗಿದ್ದರು. ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿದ ಈ ಪ್ರಕರಣ ಮುಂದೆ ತಣ್ಣಗಾಗಿ ತನ್ನ ಕಾವು ಕಳೆದುಕೊಂಡಿತು. ಆದರೆ ಈ ಘಟನೆಯ ಬಗ್ಗೆ ಗಂಗೂಲಿ ತುಟಿ ಬಿಚ್ಚದೆ ಹೋದರೂ ಅವರನ್ನು ಘಾಸಿಗೊಳಿಸಿದ್ದು ನಿಜ. `ದಾದಾ' ಒಂದಷ್ಟು ಸಮಯ ಅಂಗಳದಲ್ಲಿ ಮಂಕಾಗಿ ಕಂಡು ಬಂದಿದ್ದರು.

ಜಹೀರ್ ಖಾನ್-ಇಶಾ ಶರ್ಬಾನಿ:

ವೇಗಿ ಜಹೀರ್ ಖಾನ್ ಬಾಲಿವುಡ್ ನಟಿ ಇಶಾ ಶರ್ಬಾನಿ ಜೊತೆ ಬಹಳಷ್ಟು ಆತ್ಮೀಯತೆ ಹೊಂದಿದ್ದರು. ಅಂತಾರಾಷ್ಟಿಯ ಪ್ರವಾಸಗಳಿಂದ ಹಿಂತಿರುಗುತ್ತಿದ್ದ ಜಹೀರ್‌ನ್ನು ಸ್ವಾಗತಿಸಲು ಖುದ್ದು ಇಶಾ ಶರ್ಬಾನಿ ಆಗಮಿಸುತ್ತಿದ್ದರು. ಆದರೆ ಅದ್ಯಾರ ಶಾಪ ತಾಗಿತೋ ಗೊತ್ತಿಲ್ಲ. ಕೆಲ ತಿಂಗಳಲ್ಲಿ ಈ ಜೋಡಿಯ ಬಾಂಧವ್ಯ ಹಳಸಿತು. ಗಾಯದ ಸಮಸ್ಯೆ ಜಹೀರ್‌ನ್ನು ಹಲವು ಬಾರಿ ಅಂಗಣದಿoದ ದೂರ ಇರುವಂತೆ ಮಾಡಿತೇ ಹೊರತು ಖಾನ್ ವೈಯಕ್ತಿಕ ಬದುಕಿನ ನೋವನ್ನು ಅಂಗಣಕ್ಕೆ ತರಲಿಲ್ಲ. ಮುಂದೆ ಜಹೀರ್ ಖಾನ್ ಮಾಡೆಲ್, ನಟಿ ಸಾಗರಿಕಾ ಘಾಟ್ಕೆ ಅವರನ್ನು ವಿವಾಹವಾದರು.

ಹರ್ಭಜನ್ ಸಿಂಗ್ -ಗೀತಾ ಬಸ್ರಾ:  

ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ನಟಿ ಗೀತಾ ಬಸ್ರಾ ಜೊತೆ ಸಾಕಷ್ಟು ಸಮಯ ಡೇಟಿಂಗ್‌ನಲ್ಲಿದ್ದರು. ಮುಂಗೋಪಿ ಆಗಿದ್ದ ಈ ಆಫ್ ಸ್ಪಿನ್ನರ್, ಮಾಂತ್ರಿಕ ಸ್ಪಿನ್ ಮೋಡಿ ಕಳೆದುಕೊಂಡು ತಂಡದಿoದ ಸಾಕಷ್ಟು ಸಮಯ ಹೊರಗೆ ಉಳಿದರು. ಬಳಿಕ ಐಪಿಎಲ್‌ಗೆ ಸೀಮಿತಗೊಂಡ ಬಜ್ಜಿ, ಗೀತಾ ಬಸ್ರಾ ಅವರನ್ನು ಮದುವೆಯಾದರು.

ಯುವರಾಜ್ ಸಿಂಗ್-ಕಿಮ್ ಶರ್ಮಾ:  

ಕ್ಯಾನ್ಸರ್ ಗೆದ್ದು ಮತ್ತೆ ಕ್ರಿಕೆಟ್ ಅಂಗಣಕ್ಕೆ ಮರಳಿದ್ದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಹೆಸರು ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ತಳಕು ಹಾಕಿಕೊಂಡಿತ್ತು. ಪ್ರೀತಿಯ ಮತ್ತಲ್ಲಿ ಒಂದಷ್ಟು ವಿಹರಿಸಿದ ಈ ಜೋಡಿ ಮುಂದೆ ಬೇರ್ಪಟ್ಟಿತು. ಯುವರಾಜ್ ಸ್ವತ: ಕಿಮ್ ಶರ್ಮಾ ಜೊತೆ ಸಂಬ0ಧ ಹೊಂದಿರುವುದನ್ನು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು.

ಮಹೇ0ದ್ರ ಸಿಂಗ್ ಧೋನಿ :

ಭಾರತದ ಯಶಸ್ವೀ ನಾಯಕ ಎಂ.ಎಸ್. ಧೋನಿ ಕೂಡಾ ಸಿನೆಮಾ ತಾರೆಯರ ಸಂಘದ ವಿವಾದದಿಂದ ಹೊರತಾಗಿರಲಿಲ್ಲ. ಅವರು `ಡಿಂಪಲ್' ನಟಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಂಡಿದ್ದರು. ಆದರೆ ಈ ಸಂಬOಧ ಹೆಚ್ಚು ಹೊತ್ತು ಬಾಳಲಿಲ್ಲ. ಧೋನಿ ಜೊತೆ ಕಾಣಿಸಿಕೊಂಡಿದ್ದ ದೀಪಿಕಾ, ಯುವರಾಜ್ ಸಿಂಗ್ ಜೊತೆಗೂ ಸ್ವಲ್ಪ ಸಮಯ ಕಾಣಿಸಿಕೊಂಡಿದ್ದರು. 2008ರಲ್ಲಿ ದಕ್ಷಿಣ ಭಾರತದ ನಟಿ ಲಕ್ಷ್ಮೀ ರೈ ಜೊತೆಗೂ ಧೋನಿ ಹೆಸರು ತಳಕು ಹಾಕಿಕೊಂಡಿತ್ತು. ಚಾಣಾಕ್ಷ ನಾಯಕನಾಗಿರುವ ಧೋನಿ ಇವೆಲ್ಲವನ್ನೂ ಅಂಗಳದ ಜೊತೆ ಸರಿತೂಗಿಸಿಕೊಂಡು ಹೋದದ್ದು ಅವರ ಹೆಚ್ಚುಗಾರಿಕೆ ಎಂದೇ ಭಾವಿಸಲಾಗಿದೆ.

ಶ್ರೀಶಾಂತ್-ಲಕ್ಷ್ಮೀ ರೈ: 

ಸ್ಪಾಟ್ ಫಿಕ್ಸಿಂಗ್ ಮೂಲಕ ವೃತ್ತಿ ಬದುಕಿಗೆ ಕುಂದು ತಂದುಕೊoಡ ಮಾಜಿ ವೇಗಿ ಕೇರಳದ ಶಾಂತ ಕುಮಾರ್ ಶ್ರೀಶಾಂತ್ ಒಂದಷ್ಟು ಕಾಲ ದಕ್ಷಿಣ ಭಾರತದ ನಟಿ ಲಕ್ಷ್ಮೀ ರೈ ಜೊತೆ ಕಾಣಿಸಿಕೊಂಡಿದ್ದರು. ಆದರೆ ಈ ಸಂಬoಧ ಹೆಚ್ಚು ಕಾಲ ಬಾಳಲಿಲ್ಲ. ಮುಂದೆ ಶ್ರೀಶಾಂತ್ ಜೈಪುರದ ತಮ್ಮ ಗೆಳತಿ ಭುವನೇಶ್ವರಿ ಕುಮಾರಿಯನ್ನು 2013ರ ಡಿಸೆಂಬರ್‌ನಲ್ಲಿ ವಿವಾಹವಾದರು. ಸ್ಪಾಟ್ ಫಿಕ್ಸಿಂಗ್, ಅಶಿಸ್ತು ಅವರ ವೃತ್ತಿ ಬದುಕಿಗೆ ಮುಳುವಾಯಿತು ಎಂದರೆ ತಪ್ಪಲ್ಲ.

`ಟೈಗರ್ ಪಟೌಡಿ': 

ಬಾಲಿವುಡ್- ಕ್ರಿಕೆಟ್‌ನ ಯಶಸ್ವಿ ಪ್ರೇಮಕಥೆ `ಟೈಗರ್ ಪಟೌಡಿ' ಎಂದೇ ಖ್ಯಾತವಾದ ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಠಾಗೋರ್ ಅವರದ್ದು. 1969ರಲ್ಲಿ ವಿವಾಹವಾದ ಈ ಜೋಡಿ 4ದಶಕಗಳ ದಾಂಪತ್ಯ ಜೀವನ ನಡೆಸಿತು. ಸೈಫ್ ಅಲಿ ಖಾನ್, ಸೋಹಾ ಅಲಿ ಖಾನ್, ಸಬಾ ಅಲಿ ಖಾನ್ ಈ ಜೋಡಿಯ ಹೆಮ್ಮೆಯ ಮಕ್ಕಳು.

 ಜಸ್‌ಪ್ರೀತ್ ಬೂಮ್ರಾ -ಅನುಪಮಾ ಪರಮೇಶ್ವರನ್:

ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಹೆಸರು ಕನ್ನಡದ ಚಿತ್ರ ‘ನಟ ಸಾರ್ವಭೌಮ’ದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ನಟಿಸಿದ್ದ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಜೊತೆಗೆ ಕೇಳಿಸಿತ್ತು. ಜಸ್‌ಪ್ರೀತ್ ಬೂಮ್ರಾ ಅವರು ತಮ್ಮ ಟೀಟ್ವರ್ ಅಕೌಂಟ್‌ನಲ್ಲಿ ಮಹಿಳೆಯರ ಪೈಕಿ ಅನುಪಮಾ ಪರಮೇಶ್ವರನ್ ಅವರನ್ನು ಮಾತ್ರ ಫಾಲೋ ಮಾಡಿದ್ದಾರೆ ಎನ್ನುವುದು ಕುತೂಹಲಿಗರ ಸಂದೇಹ. ಆದರೆ ನಮ್ಮ ನಡುವೆ ಏನಿಲ್ಲ ಎಂದು ಅನುಪಮಾ ಪರಮೇಶ್ವರನ್ ಅವರು ಹೇಳಿದರೂ ಇದು ಕ್ರಿಕೆಟ್‌ಪ್ರೇಮಿಗಳಿಗೆ ಸಮಾಧಾನವನ್ನು ತರಲಿಲ್ಲ. ಬೂಮ್ರಾ ಮದುವೆ ಆಗುವ ಮೂಲಕ ಈ ಸಂಬಂಧಕ್ಕೆ ತೆರೆ ಬಿದ್ದಿದೆ.

-ಅರುಣ್ ಕಿಲ್ಲೂರು

Category:Sports


ProfileImg

Written by Arun Killuru

Author,Journalist,Photographer