ಜೇಬು ಹರಿದು ಗುಂಡಿಕಿತ್ತು ಹೋದ ಬಣ್ಣ ಮಾಸಿದ ಅಂಗಿ, ಸವೆದು ಅಲ್ಲಲ್ಲಿ ತೂತಾಗಿದ್ದ ಕೇವಲ ಹೆಸರಿಗೆ ಮಾತ್ರದಂತಿದ್ದ ಚಡ್ಡಿ, ನೀಲಿ-ಬಿಳಿ ಹೆಸರಿನ ಆದರೆ ಬಿಳಿ ಎಲ್ಲಿತ್ತೆಂದು ಇನ್ನೂ ಅರಿಯದ ಸಮವಸ್ತ್ರ, ಹರಕಲು ಚೀಲ, ಕೈಯಲ್ಲೊಂದು ಕಲ್ಪನೆಯ ಗಾಡಿ. ಬಾಲ್ಯ ಎಂದೊಡನೆ ನನ್ನ ಕಣ್ಣ ಮುಂದೆ ಮೂಡುವ ಹಳೆಯ ನನ್ನದೇ ಚಿತ್ರಣ. ಬರಿಯ ಬಾಲ್ಯವಲ್ಲ, ಭವ್ಯ ಬಾಲ್ಯ.!
ಅದು ಸವಿನೆನಪುಗಳಿಂದ, ತುಂಟಾಟಗಳಿಂದ ತುಂಬಿಹೋಗಿದ್ದ ಶ್ರೀಮಂತ ಬಾಲ್ಯ. ದೊಡ್ಡದಾದ ಮನೆ. ಮನೆ ತುಂಬಾ ಮಂದಿ, ಮನ ತುಂಬಾ ಪ್ರೀತಿ. ಬಹುಶಃ ನಾವಿಬ್ಬರೂ ನಮಗಿಬ್ಬರು ಯೋಜನೆಯವರಿಗೆ ತಿಳಿಯದು ಇದು, ಅನುಭವಿಸಿಯೇ ತೀರಬೇಕು. ಅಪ್ಪನ ಗದರುವಿಕೆಯ ಭಯ, ಅಜ್ಜಿ ಕಥೆಯ ಕುತೂಹಲ, ಅಣ್ಣನ ಜತೆಗಿನ ಮಿನಿ ಸಮರ, ತೀರಾ ಮೊನ್ನೆಯವರೆಗೂ ಮಲಗಿದ್ದ ಅಮ್ಮನ ಮಡಿಲು. ಇದಕ್ಕಿಂತ ಬೇಕೆ? ಇನ್ನು ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಜಾತ್ರೆಯ ವಾತಾವರಣ. ಬಂಧು ಬಳಗವೆಲ್ಲಾ ಒಂದೇ ಮನೆಯಲ್ಲಿ ಸೇರುತ್ತಿದ್ದೆವು. ನಮಗಂತೂ ಬರುವಾಗ ತಂದಿದ್ದ ತಿಂಡಿ ಪ್ಯಾಕೆಟ್ ಕೊಟ್ಟಾಗ ಮತ್ತು ಹಿಂತಿರುಗುವಾಗ ಚಾಕಲೇಟಿಗಾಗಿ ಕೈಯಲ್ಲಿ ಚಿಕ್ಕ ನೋಟು ನೀಡಿದಾಗ ನೋಡಿದ ನೆನಪು ಮಾತ್ರ ನೆಂಟರನ್ನು. ಉಳಿದ ಸಮಯ ಆಟದಲ್ಲೇ ಹಬ್ಬ ಕಳೆಯುತ್ತಿತ್ತು. ಹೇಳುವುದಂದರೆ ಶಾಲೆಗೆ ರಜೆ ಇದ್ದಾಗಲಂತೂ ನಿಜವಾದ ಹಬ್ಬ ನಮಗೆ. ಎಂದೂ ಬಿಡದ ನಿದ್ದೆ ಅಂದು ಬೇಗನೆ ಬಿಟ್ಟಿರುತಿತ್ತು. ಅಣ್ಣ ಅಕ್ಕಂದಿರ, ಗೆಳೆಯ ಗೆಳತಿಯರ ಜೊತೆ ಮಾಡಿಕೊಂಡು ಆಟೋಟ, ಅಲೆದಾಟ ಶುರು. ಅಂದಿನ ನಮ್ಮ ಚರ್ಚೆಗಳು ಯಾವ ಸಂಸತ್ತಿಗೂ ಕಡಿಮೆಯಿರಲಿಲ್ಲ. ಕೆರೆ, ಗದ್ದೆ ನೀರಿನಲ್ಲಿ ಆಟವಾಡುತ್ತಾ ಇದ್ದವರಿಗೆ ಹೊಟ್ಟೆ ನೆನಪಿಸಿದಾಗಲೇ ಮನೆಯ ನೆನಪಾಗುವುದು. ಮತ್ತೇ ಸಂಜೆಯ ಪಾಳಿ ಹುಡುಗರ ಜೊತೆ ಕ್ರಿಕೆಟ್ ಮೈದಾನದಲ್ಲಿ. ಅಲ್ಲಿನ ಆ ನಿಯಮಗಳು, ಬ್ಯಾಟ್ ತಂದವನಿಗೆ ನೀಡುವ ಮೊದಲ ಆದ್ಯತೆ, ಬ್ಯಾಟಿಂಗ್ ಗಾಗಿ ಪರದಾಟ, ಬ್ಯಾಟ್ ಸಿಗದವನಿಗೆ ನೀಡುವ ಬೌಲಿಂಗ್ ನ ಮೊದಲ ಆದ್ಯತೆ, ನೆನೆದಾಗ ಈಗಲೂ ಮುಖದಲ್ಲಿ ಮಂದಹಾಸ ಮೂಡುತ್ತದೆ. ಪಂದ್ಯ ರದ್ದಾದಲ್ಲಿ ಮನೆಗೆ ಹೋಗುವ ಮಾತೇ ಇಲ್ಲ, ತಂಡಕ್ಕೆ ಮರದಿಂದ ಹಣ್ಣು ಕೀಳುವ, ಮೀನು ಹಿಡಿಯುವ ಕೆಲಸ ಶುರುವಾಗುತ್ತಿತ್ತು. ಮನೆಯಿಂದ ಎರಡು ಮೂರು ಬಾರಿ ಕರೆಯೋಲೆ ಬಂದ ಮೇಲೆಯೇ ಮನೆ ಕಡೆ ಮುಖ.
ಇನ್ನು ರಜೆಯ ಮರುದಿನ ಶಾಲೆ. ಅಯ್ಯಯ್ಯೋ ಅಂದು ಎಲ್ಲಿಲ್ಲದ ಸುಸ್ತು, ಆಯಾಸ ರೋಗ ರುಜಿನಗಳು ಒಮ್ಮೆಲೇ ಬಂದು ಬಡಿಯುತ್ತವೆ. ಉಳಿದ ದಿನಗಳಲ್ಲಿ ಶಾಲೆಗೆ ಹೋಗುವುದೆಂದರೆ ಮಜಾ. ಅದರಲ್ಲೂ ಮಳೆ ಸುರಿಯುವ ದಿನಗಳಲ್ಲಿ ಕೇಳುವುದೇ ಬೇಡ. ಇಂದಿನಂತೆ ಮನೆಬಾಗಿಲಿಗೆ ಸ್ಕೂಲ್ ಬಸ್, ಆಟೋ ರಿಕ್ಷಾಗಳು ಬರುತ್ತಿರಲಿಲ್ಲ. ಗದ್ದೆ ಬದಿ, ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದೆವು ಆ ಮಳೆ ನೀರಿನ ಜೊತೆಗೆ ಆಟವಾಡುತ್ತಾ. ಸೋರುವ ಛತ್ರಿ ಹಿಡಿದು ಶಾಲೆಗೆ ಹೋದ ದಿನಗಳೇ ಸ್ವರ್ಗ. ದೊಡ್ಡ ಮೈದಾನದ ಕೊನೆಯಲ್ಲಿ ಒಡೆದ ಹಂಚಿನ ಎಂಟು ಕೊಠಡಿಗಳ ಕಟ್ಟಡವೇ ನಮ್ಮ ಶಾಲೆ. ಅಂದು ಜೊತೆಗಿದ್ದ ಸ್ನೇಹಿತರು, ಕಲಿಸಿದ ಗುರುಗಳು ಇಂದಿಗೂ ಕಣ್ಣಿಗೆ ಕಟ್ಟುವಂತೆ ನೆನಪಿದ್ದಾರೆ. ನಾವು ಕೂರುತ್ತಿದ್ದ ಸ್ಥಳ, ಆ ಅರ್ಧ ತುಂಡಾದ ಬೆಂಚು, ಮೇಷ್ಟ್ರು ಕೂರುತ್ತಿದ್ದ ಆ ಮೂರೂವರೆ ಕಾಲಿನ ಮರದ ಕುರ್ಚಿ ಎಲ್ಲವೂ. ಆ ಸೋರುತ್ತಿದ್ದ ತರಗತಿಗಳು, ಮರದಡಿಯಲ್ಲಿ ನಡೆಸುತ್ತಿದ್ದ ಪಾಠಗಳು. ಅಂದು ತಮಾಷೆಗಾಗಿ ಹೇಳುತ್ತಿದ್ದ ಚುಟುಕು ನೆನಪಾಯಿತು,
ನಮ್ಮ ಶಾಲೆಗೆ ನಾಲ್ಕು ಮೂಲೆಗಳು,
ಒಂದು ಮೂಲೆಯಲ್ಲಿ ಮೇಷ್ಟ್ರು ಕೂರುವುದು,
ಉಳಿದ ಮೂಲೆ ನೀರು ಸೋರುವುದು.
ಮೂಲೆ ಎಂದಾಗ ನೆನಪಾಯಿತು ಟೀಚರ್ ನೀಡುತ್ತಿದ್ದ ಪನಿಷ್,ಮೆಂಟ್ ಗಳು ಮೂಲೆಯಲ್ಲಿ ಕುಳಿತು ಮಗ್ಗಿ ಕಲಿಯುವಂತೆ. ಹನ್ನೆರಡರ ಮಗ್ಗಿಯೇ ನಮಗೆ ಅಂತಿಮ. ಟೀಚರ್ ಹೇಳುತ್ತಿದ್ದ ಪಾಠವೇ ವೇದವಾಕ್ಯ. ಬಿಸಿಯೂಟವೇ ಮೃಷ್ಟಾನ್ನ. ಅದಕ್ಕೆ ಮಿಗಿಲಾಗಿದ್ದು ಇನ್ನೊಂದಿಲ್ಲ. ಶಾಲೆಯ ಹಿಂಭಾಗದಲ್ಲಿರುವ ಗೇರುಬೀಜ ಮರ ಹತ್ತಿ ಬೀಜ ಕೀಳುವುದು, ತರಗತಿ ಗುಡಿಸಿ ಬೋರ್ಡ್ ಸ್ವಚ್ಛವಾಗಿರಿಸಿಕೊಳ್ಳುವುದು, ಟೀಚರ್ ಗೆ ಬೆತ್ತ ತಂದು ಕೊಡುವುದು ಎಲ್ಲಾ ಪ್ರಶಂಸೆಗಾಗಿ. ಇನ್ನು ಸಂಜೆ 3.30ರ ಬೆಲ್ ಹೊಡೆಯುವುದಕ್ಕೆ ಕಾಯುತ್ತಿದ್ದ ನೆನಪು. ಅಂದು ಈಗಿನಂತೆ ಆಟಕ್ಕೆ ಪ್ರತ್ಯೇಕದ ಅವಧಿ ಇರಲಿಲ್ಲ. 3.30ರ ನಂತರ ಆಟದ ಸಮಯ ಎಂದರೆ ಕೇಳಬೇಕೆ? ನೀಲಿ ಬಿಳಿ ಸಮವಸ್ತ್ರ ಕೆಂಪು-ಕೇಸರಿ ಮತ್ತು ಮಗದೊಂದು ಬಣ್ಣಕ್ಕೆ ತಿರುಗುತ್ತಿತ್ತು. ಈಗಿನ ಮಕ್ಕಳಂತೆ ನಮಗೆ ಸಮವಸ್ತ್ರಕ್ಕೆ ಅಂಕ ನೀಡುತ್ತದ್ದ ಮಿಸ್ ಇರಲಿಲ್ಲ. ಕೊನೆಗೆ ಮನೆಗೆ ಹಿಂತಿರುಗುವ ಕಾರ್ಯಕ್ರಮ. ಸಂಜೆಯ ರಾಷ್ಟ್ರಗೀತೆ ಮುಗಿಸಿ ಗೆಳೆಯರೊಡನೆ ಕೇಕೆ ಹಾಕುತ್ತಾ ಮನೆಯ ಕಡೆಗೆ ದಾರಿ. ಒಂದು ಕೈಯಲ್ಲಿ ಕೋಲು, ಮನದಲ್ಲಿ ಅದೊಂದು ಶಸ್ತ್ರ. ಅಂದು ಪಾಠದಲ್ಲಿ ಬಂದಿದ್ದ ಪಾತ್ರವೇ ನಾನೆಂದು, ಎದುರು ಕಾಣುವ ಪೊದೆ-ಪಾರ್ಥೇನಿಯಂ ಗಿಡಗಳೇ ಶತ್ರು ಪಾಳೆಯದವರು. ನಡುವೆ ಭಯಂಕರ ಯುದ್ಧ. ಕೆಲವೊಮ್ಮೆ ಯುದ್ಧ ನೆರೆಯ ರಾಜ್ಯದ ಜೊತೆಗಾರರ ಅರ್ಥಾತ್ ಸ್ನೇಹಿತರ ಮೇಲೆ ಆರಂಭವಾದರೆ ದಾರಿಹೋಕರಾರದರು ಗದರಿದ ಮೇಲಷ್ಟೆ ನಿಲ್ಲುತ್ತಿತ್ತು.
ಇಂದಿನ ಮಕ್ಕಳು ನಿಜವಾಗಿಯೂ ನತದೃಷ್ಟರೆಂದು ನನ್ನ ಭಾವನೆ. ಹೆಚ್ಚೆಂದರೆ ನಾಲ್ಕು ಮುಖಗಳಿರುವ ಮನೆ, ಅಂಗಳವಿಲ್ಲದ ಅಪಾರ್ಟ್,ಮೆಂಟ್ ಉಸಿರು ಕಟ್ಟುವಂತಹ ಸಮವಸ್ತ್ರ, ಶಾಲೆಯವರಿಗೂ ಬಸ್ಸು, ಬುತ್ತಿಯ ಒಣಕಲು ತಿಂಡಿ. ಬಿಸಿಲಿಗೆ ನಡೆದರೆ ಸುಸ್ತು, ಮಳೆಯಲ್ಲಿ ನೆನೆದರೆ ನೆಗಡಿ, ತಣ್ಣೀರು ಕುಡಿದರೆ ಶೀತ. ಎಲ್ಲಾ ಕಟ್ಟುಪಾಡುಗಳಿಗೆ ಒಗ್ಗಿ ಹೋಗಿದ್ದಾರೆ. ಮನೆಯವರ ಹೊರತಾಗಿ ಟ್ಯೂಷನ್ ಆಂಟಿಯೊಬ್ಬರೇ ಪರಿಚಯಸ್ಥರು. ನನ್ನ ಪ್ರಕಾರ ಬಾಲ್ಯ ಬದಲಾಗಿಲ್ಲ, ಸುಲಭವಾಗಿದೆ. ಮರ ಹತ್ತಿ ತಿನ್ನುತ್ತಿದ್ದ ಹಣ್ಣು ಈಗ ಬಾಗಿಲು ತೆರೆದರೆ ಫ್ರಿಜ್ಜಿನಲ್ಲಿ ಸಿಗುತ್ತದೆ. ಬೆವರು ಹರಿಸಿ ಮೈದಾನದಲ್ಲಿ ಆಡುತ್ತಿದ್ದ ಆಟಗಳು ಇಂದು ಬೆರಳ ತುದಿಯಲ್ಲಿದೆ. ಕೆರೆ ನದಿಯ ಈಜಾಟಗಳ ಈ ಬಾತ್ ಟಬ್ ಮರೆಸಿದೆ. 49 ಅಕ್ಷರಗಳ ಬದಲು 26ಅಕ್ಷರಗಳು ಬಂದುಬಿಟ್ಟಿವೆ. ಆದರೆ ಅಪ್ಪ ಕೈಯಾರೆ ತಯಾರಿಸಿ ಕೊಟ್ಟಂತಹ ರಟ್ಟಿನ ಕಾರು, ಅಮ್ಮನ ಮಡಿಲ ಸುಖ, ಗೆಳೆಯರೊಡನೆ ಕದ್ದು ಮುಚ್ಚಿ ತಿಂದಂತಹ ಐಸ್ ಕ್ಯಾಂಡಿ ರುಚಿ, ಊರಿನ ಜಾತ್ರೆಯಲ್ಲಿ ಕೊಳ್ಳುತ್ತಿದ್ದ ಆಟಿಕೆಗಳನ್ನು ಯಾವುದರಿಂದಲೂ ಮರಳಿಸಲಾಗದು. ಆ ಅನುಭವಗಳನ್ನು ಆ ಬಾಲ್ಯವನ್ನು ಕಳೆದುಕೊಳ್ಳಲು ನಾನು ಒಲ್ಲೆ. ಅಂದು ಬರೆಯುವ ಸಮಯದಲ್ಲಿ ಬಾಲ್ಯವನ್ನು ಅನುಭವಿಸುತ್ತಿದ್ದೆ, ಇಂದು ಅನುಭವಿಸಲು ಬಾಲ್ಯವಿಲ್ಲ ನೆನೆದು ಬರೆಯುತ್ತಿದ್ದೇನೆ. ಈಗಲೂ ಹೇಳುತ್ತೇನೆ ನಿನ್ನೆಯ ದಿನದವರೆಗೂ ನನಗದು ಬಾಲ್ಯವೇ.
✒ ನಿಶಿತ್ ಶೆಟ್ಟಿ
@neenondu_marichike
0 Followers
0 Following