ವೈರಸ್ ಯುಗದಲ್ಲಿ ಮಕ್ಕಳನ್ನು ಬೆಳೆಸೋದು ಹೇಗೆ ಅರೋಗ್ಯವಂತರನ್ನಾಗಿ ಮಾಡೋದು ಹೇಗೆ ಅನ್ನೋದು ದೊಡ್ಡ ಯಕ್ಷ ಪ್ರಶ್ನೆ ಅಂತ ನನಗನಿಸ್ತಾ ಇದೆ." ಮಕ್ಳು ಹೇಗಿದಾರೆ"? ಅಂತ ಯಾರಾಲ್ಲಾದ್ರೂ ಕೇಳೋಕ್ಕಿಂತ "ಡಾಕ್ಟರ್ ಅಪ್ಪೋಯಿಂಟ್ಮೆಂಟ್ ಯಾವಾಗ?"ಅಂತ ಕೇಳೋ ಪರಿಸ್ಥಿತಿ ಈಗ ಬಂದಿದೆ.
ಒಂದುಕಡೆ ಮಕ್ಕಳಿಲ್ಲ ಅಂತ ಮಕ್ಕಳಾಗೋಕೆ ಚಿಕಿತ್ಸೆ ಪಡ್ಕೊಳ್ಳೋರಾದ್ರೆ ಇನ್ನೊಂದು ಕಡೆ ಹುಟ್ಟಿದ ಮಕ್ಕಳಿಗೆ ಹುಷಾರಿಲ್ಲ ಅಂತ ಚಿಕಿತ್ಸೆ ಪಡ್ಕೊಳೋದು. ಇಷ್ಟೇ ಅಲ್ವಾ ಜೀವನ?
ಇದ್ಕೆ ಏನು ಕಾರಣ ಆಗಿರ್ಬೋದು ಅಂತ ಆಲೋಚನೆ ಮಾಡಿದ್ರೆ ಸ್ಪಷ್ಟ ವಾದ ಉತ್ತರ ಅಲ್ಲದಿದ್ದರೂ ಅಂದಾಜು ಅಂತೂ ಆಗಿರುತ್ತೆ.
ಮೊದಲಿನ ಕಾಲವೇ ಚೆನ್ನಗಿತ್ತಾ ಅಥವಾ ಈಗಿನ ಕಾಲವೇ ಚೆನ್ನಾಗಿದ್ಯಾ ಅನ್ನೋದು ನಮ್ಮ ಮನಸಿಗೆ ಬಂತು ಅಂದ್ರೆ ನನ್ ಪ್ರಕಾರ ಕಾಲ ಎರಡು ಚೆನ್ನಾಗಿದೆ. ನಮ್ಮ ಜೀವನ ಶೈಲಿ ಆಹಾರ ವಿಹಾರ ಎಲ್ಲದ್ರಲ್ಲೂ ಬದಲಾವಣೆ ಆಗಿದೆ ಅಷ್ಟೇ.
ಮೊದಲು ರಾಸಾಯನಿಕ ರಹಿತವಾದ ಮನೆಯಲ್ಲೇ ಬೆಳೆದ ಆಹಾರ ಪದಾರ್ಥಗಳನ್ನು ಉಪಯೋಗಿಸುತಿದ್ದೆವು. ಮಾರಾಟದ ಆಲೋಚನೆ ಇರ್ಲಿಲ್ಲ. ಮಾರಾಟ ಮಾಡಿದ್ರು ತಗೋಳೋರಿಗೆ ಕೂಡ ಅರೋಗ್ಯವನ್ನೇ ಕೊಡ್ತಾ ಇತ್ತು. ಆದ್ರೆ ಈಗ ವ್ಯಾಪಾರ ಆಲೋಚನೆಯಿಂದ ಹೆಚ್ಚು ಹೆಚ್ಚು ಲಾಭದ ಆಸೆಯಿಂದ ಮಣ್ಣಿಗೆ ರಾಸಾಯನಿಕ ಬೆರೆಸಿ ಆಹಾರ ಪದಾರ್ಥಗಳೆಲ್ಲ ವಿಷಯುಕ್ತವಾಗಿದೆ. ಮತ್ತೆ ಮುಂದಿನ ಪೀಳಿಗೆಯ ಅರೋಗ್ಯವನ್ನು ಹೇಗೆ ಉಳಿಸೋದು?
ನಮ್ಮ ಕಾಲದಲ್ಲಿ ಕುಚುಲಕ್ಕಿ ಅನ್ನನೇ ಅಮೃತವಾಗಿತ್ತು. ಏನೂ ಇಲ್ಲದ ಕಾಲದಲ್ಲಿ ಉಪ್ಪು ಹಾಕಿ ಉಂಡ ನೆನಪು ಇನ್ನೂ ಹಸಿರು. ಅರೋಗ್ಯವನ್ನು ಕೊಟ್ಟಿತ್ತು. ಈಗ ಅಕ್ಕಿ ತೊಳೆಯುವಾಗಲೇ ರಾಸಾಯನಿಕ ಎಣ್ಣೆ ಕೈಗಂಟುತ್ತೆ. ಕೀಟ ಹುಳಗಳಿಂದ ಅಕ್ಕಿಯನ್ನು ರಕ್ಷಣೆ ಮಾಡ್ಬೇಕಾದ್ರೆ ರಾಸಾಯನಿಕ ಬಳಸಲೇ ಬೇಕಾದಂತ ಅನಿವಾರ್ಯತೆ.
ಹಾಗಾದ್ರೆ ಹಟ್ಟಿ ಗೊಬ್ಬರ ಅಂದ್ರೆ ದನದ ಸೆಗಣಿ ಹಾಕಿ ನಾವು ಬೆಳೆಯುವ ತರಕಾರಿ ಸಾವಯವವೇ? ಅರೋಗ್ಯಕರವೇ?ಹಸುವಿನ ಹಾಲು ಅರೋಗ್ಯಕರವೇ?
ನಿಟ್ಟುಸಿರೇ ಇದರ ಉತ್ತರ. ಯಾಕಂದ್ರೆ ಹೆಚ್ಚು ಹಾಲಿನ ಉತ್ಪದನೆಗಾಗಿ ಹೊರಗಡೆ ತಯಾರಾಗುವ ಹಿಂಡಿಯನ್ನು ಬಳಸುತ್ತೇವೆ, ಅದ್ರಲ್ಲಿ ಯೂರಿಯಾದ ಅಂಶ ಇರುತ್ತೆ ಅಂತ ನಮಗೆಲ್ಲರಿಗೂ ಗೊತಿರುವಂಥದ್ದೆ. ಹಾಗಾದ್ರೆ ಪ್ಯಾಕೆಟ್ ಹಾಲು ಬಿಡಿ ಮನೆಯಲ್ಲಿ ಕರೆದ ಹಾಲು ಆರೋಗ್ಯವನ್ನು ಉಳಿಸ ಬಹುದೇ? ಆ ಗೊಬ್ಬರದಿಂದ ಬೆಳೆಸಿದ ಆಹಾರ ಪದಾರ್ಥಗಳು ಅರೋಗ್ಯ ಕೊಡಬಲ್ಲೆದೇ?
ಈಗೀಗ ಕೃಷಿಗಾಗಿ ಕೋಳಿ ಗೊಬ್ಬರವನ್ನು ಬಳಸಲ್ಪಡುತ್ತದೆ. ಅದಕ್ಕೆ ಹಾಕೋ ಆಹಾರ ಯಾವುದು? ಎಲ್ಲವೂ ರಾಸಾಯನಿಕ!
ಮಕ್ಕಳು ಹೊರಗಿನ ಆಹಾರದಿಂದ ಅನಾರೋಗ್ಯ ಪೀಡಿತಾರಾಗುತ್ತಾರೆ ಅನ್ನುವ ಮಾತಾಪಿತರು ಮನೆಯಲ್ಲೇ ಅರೋಗ್ಯವಂತ ಆಹಾರ ತಯಾರಿಸಿ ಕೊಡಲು ಸಾಧ್ಯವೇ?
ಆದರೆ ಮಕ್ಕಳಿಗೆ ಇಷ್ಟವಾಗಬೇಕಲ್ಲವೇ? ಅರೋಗ್ಯಕರವಾದ ಆಹಾರ ಅಷ್ಟಾಗಿ ರುಚಿಯೆನಿಸುವುದಿಲ್ಲ, ಹೆಚ್ಚು ಎಣ್ಣೆಯಲ್ಲಿ ಕಾಯಿಸಿದ ಆಹಾರ ರುಚಿಕರ ಅನಿಸುವುದರಿಂದ ಅದನ್ನೇ ಬಯಸುತ್ತಾರೆ.ಇಂಥ ಕರಿದ ಆಹಾರಗಳನ್ನು ನಾಲಗೆಯನ್ನು ಖುಷಿಪಡಿಸುವುದಕ್ಕೋಸ್ಕರ ಸ್ವಲ್ಪವೇ ತಿನ್ನಬೇಕು ಅದನ್ನೇ ಹೊಟ್ಟೆ ತುಂಬಾ ತಿಂದರೆ ಆರೋಗ್ಯಕ್ಕೆ ಹಾನಿಕಾರಕ.
ಅಲ್ಲದೆ ಈಗ ಕೂಡಲೇ ನೇರವಾಗಿ ಬೇಯಿಸಬಹುದಾದಂಥ ಆಹಾರದ ಪೊಟ್ಟಣಗಳು ಕೂಡ ಸಿಗುತ್ತವೆ. ಈಗಿನ ಅವಸರದ ಬದುಕಿಗೆ ವರದಾನದಂತೆ ಭಾಸವಾದರೂ ಆರೋಗ್ಯಕ್ಕೆ ಮಹಾ ಮಾರಿ. ಯಾಕೆಂದರೆ ಅಂತಹ ಆಹಾರ ಕೆಲವು ದಿನಗಳ ಶೇಖರಣೆ ಮಾಡಬೇಕಾದ್ರೆ ಸಂರಕ್ಷಕಗಳನ್ನು ಬಳಸಲೇ ಬೇಕಾಗುತ್ತದೆ.ಹಾಗಾದರೆ ಅದು ಅರೋಗ್ಯಕರವೇ?
ಮೊದಲು ಮಣ್ಣಿನಲ್ಲೇ ಬಿದ್ದುಕೊಂಡು ಹೊರಳಾಡಿ, ಒಂದು ಹಿಡಿ ಊಟ ಮಾಡಿದರೂ ಅರೋಗ್ಯಕ್ಕೇನು ಕಡಿಮೆ ಇರಲಿಲ್ಲ. ಈಗ ಮಣ್ಣಿಗೆ ಕಾಲಿಟ್ಟರೆ ಅಲರ್ಜಿ. ಕಾಡ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡ ಕಾಲವಿತ್ತು. ಈಗ ಫುಡ್ ಸಪ್ಲಿಮೆಂಟ್ಸ್, ಅಲರ್ಜಿ ಮೆಡಿಸಿನ್ಸ್ ತಗೊಂಡ್ರೆ ಮಾತ್ರ ಸ್ವಸ್ಥತೆ ಅನ್ನುವ ಪರಿಸ್ಥಿತಿ ಬಂದಿದೆ.
ಬಡತನದಲ್ಲಿ ಸ್ವಲ್ಪವೇ ದೊರಕಿದ ಆಹಾರ ತಿನ್ನುವಾಗ ಆರೋಗ್ಯವಿತ್ತು. ಈಗ ಹೊಟ್ಟೆ ತುಂಬಾ ತಿನ್ನಲು ಆಹಾರವಿದ್ದರೂ ತಿನ್ನಲು ಅನಾರೋಗ್ಯ. ಕಡಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡಲೆಯಿಲ್ಲ ಅನ್ನೋ ಪರಿಸ್ಥಿತಿ.
ಹವ್ಯಾಸಿ ಬರಹಗಾರ್ತಿ
0 Followers
0 Following