‘ಚಾರ್ಲಿ’ ಎಂಬ ಅಂಡಲೆಯುವ ಆಧ್ಯಾತ್ಮ

ಏನು, ಯಾಕೆಂದು ತೋಚದೆ ಹುಡುಕುವ  ದಿವ್ಯಾತ್ಮದ ಒಳಗಣ್ಣುಗಳಿಗೆ ಅವನೊಂದು ಸೂಜಿಗಲ್ಲಿನಂತೆ ಸೆಳೆಯುವ, ಅಂಡಲೆಯುವ ಆಧ್ಯಾತ್ಮ

ProfileImg
20 Feb '24
5 min read


image

ಗೋಡೆ, ಬೀದಿ, ಅಲೆ, ಹೃದಯ ಎಲ್ಲೆಲ್ಲೂ ಶಿಲೆಯ ಕೊರೆಯುವವನವನು. ತನ್ನನ್ನೂ ಕೆತ್ತುತ್ತಾ ಸಾಗುವ ಉಳಿಯಂತವನು. ಕೋಣೆಯಲ್ಲೆಲ್ಲಾ ಶಾಯರಿಯಂತೆ ಬಣ್ಣದ ತುಣುಕುಗಳನ್ನು ಚೆಲ್ಲಾಡಿ, ಎಲ್ಲವನ್ನೂ ತೊರೆದಂತೆ ನಟಿಸಿ ತೊರೆಯಾಗುವವನು. ಅವನ ಬೆನ್ನ ಕದ ತೆರೆದು ಒಳಗಿಣುಕುವವಳು ತಣ್ಣಗಿನ ಬಂಡಾಯಗಾರ್ತಿ. ಸ್ವತಃ ದಿಕ್ಕು ತಪ್ಪಿಸಿಕೊಂಡು ಸೆಳೆದಲ್ಲಿಗೆ ಹಾರುವ ಗಾಳಿಯಂತವಳು. ಅವನಿದ್ದ ಕೋಣೆಯ ವಿಚಿತ್ರ ಗಂಧ ಅವಳನ್ನು ಸೆಳೆಯುತ್ತದೆ. ಅವನು ಬಿಟ್ಟು ಹೋದ ಕೋಣೆಯಲ್ಲಿ ಅವನದೊಂದು ಡೈರಿ ಸಿಗುತ್ತದೆ ಅವಳಿಗೆ. ತನ್ನ ಬದುಕಿನಲ್ಲಿ ಕಂಡ ಸಹಜ-ಸಾಮಾನ್ಯ-ಆಕರ್ಷಕ ವ್ಯಕ್ತಿಗಳ ಕಥೆಗಳನ್ನು ಚಿತ್ರಗಳಲ್ಲಿ ನಮೂದಿಸಿದ್ದ ಅರ್ಧಂಬರ್ಧ ಡೈರಿಯದು. ಜೀವನದಲ್ಲಿ ಯಾವುದೇ ಯೋಜನೆಗಳಿಲ್ಲದೇ ಬದುಕುವುದೇ ನನ್ನ ಯೋಜನೆ ಎನ್ನುವ ಅವಳು ಅವನನ್ನು ಹುಡುಕಲು ಹೊರಡುತ್ತಾಳೆ. ಕಲೆಯರಳಿದ ಅವನ ಬದುಕಿನ ಪುಸ್ತಕದಿಂದ ಕಂಡದ್ದು, ಕೇಳಿದ್ದು, ಅನುಭವಕ್ಕೆ ಬಂದಿದ್ದು ಎಲ್ಲವನ್ನೂ ಉಸಿರಾಡುತ್ತಾ, ಅಲೆಯುತ್ತಾಳೆ. ಏನು, ಯಾಕೆಂದು ತೋಚದೆ ಹುಡುಕುವ  ದಿವ್ಯಾತ್ಮದ ಒಳಗಣ್ಣುಗಳಿಗೆ ಅವನೊಂದು ಸೂಜಿಗಲ್ಲಿನಂತೆ ಸೆಳೆಯುವ, ಅಂಡಲೆಯುವ ಆಧ್ಯಾತ್ಮ. ಅವನು ನಡೆದ ದಾರಿಯನ್ನು ತನ್ನದೇ ಗತ್ತಿನಲ್ಲಿ ಹಿಂಬಾಲಿಸುವ ಅವಳ ಕಾಲಲ್ಲಿ ಅರ್ಧ ಚಪ್ಪಲಿ ಅವನು. 

ಇದು 'ಚಾರ್ಲಿ' ಅನ್ನೋ ಮಲಯಾಳಂ ಸಿನಿಮಾ, ಮತ್ತದರ ನಾಯಕ ಮತ್ತು ನಾಯಕಿಯ ಸಂಕ್ಷಿಪ್ತ ವರ್ಣನೆ‌. ವರ್ಷಗಳ ಹಿಂದೆ ಈ ಚಿತ್ರ ನೋಡಿದಾಗ ನನ್ನಲ್ಲೊಂದು ಸಂತೋಷದ ಸಂಚಲನವುಂಟಾಗಿತ್ತು. ಸಿನಿಮಾದ ಎರಡು ದೃಶ್ಯಗಳು ನನ್ನನ್ನು ಬಹುವಾಗಿ ಕಾಡಿದ್ದವು. ಆ ಎರಡೂ ದೃಶ್ಯಗಳೂ ಸಾವಿಗೆ ಸಂಬಂಧಪಟ್ಟವೇ ಆಗಿದ್ದರೂ, ಅದರ ತುಂಬೆಲ್ಲಾ ಬದುಕಿನ ಮಿಡಿತವೇ ತುಂಬಿತ್ತು. ಸಿನಿಮಾ ಪೂರ್ತಿ  ಎಲ್ಲರ ಬದುಕುಗಳನ್ನು ಸಹನೀಯವಾಗಿಸುವ ಮೌಲ್ಯಗಳೇ ಇವೆ. ಆದರೆ ಅದು  ವೈರುಧ್ಯಗಳನ್ನು ಮುದ್ದಾಡುವ ಅಲೆದಾಟದ ರೂಪದಲ್ಲಿದೆ ಅಷ್ಟೇ.

ದೃಶ್ಯ 1

ಸಾವಿನ ನಂತರದ ಸ್ಥಿತಿಯ ಬಗ್ಗೆ ಕುತೂಹಲವಿರುತ್ತದೆ ಎಲ್ಲರಿಗೂ. ಆದರೆ ಆತ ಬದುಕಿನ ಕಡು ವ್ಯಾಮೋಹಿ, ತಿರುಗಲು ತಿಪ್ಪ. ಅಂಥವನನ್ನು ಹುಡುಕಿಕೊಂಡು ಬಂದವಳೂ ಅವನಂತೆಯೇ ಇರಬೇಕು ಅಂದಕೊಳ್ಳುತ್ತಲೇ, ಅವನ ಅಪ್ಪ ಅವನು ತೀರಿಕೊಂಡ ಶ್ರದ್ಧಾಂಜಲಿ ಚಿತ್ರ ಪ್ರಕಟಿಸಿದ್ದ ಹಳೇ ದಿನಪತ್ರಿಕೆಯನ್ನು ಅವಳ ಮುಂದಿಡುತ್ತಾನೆ. ತಬ್ಬಿಬ್ಬಾಗುತ್ತಾಳೆ ಅವಳು. 

ಆವತ್ತು ಆ ವಾರ್ತೆ ಓದಿದ  ಅವರೆಲ್ಲರೂ ಹಾಗೇ ತಬ್ಬಿಬ್ಬಾಗಿದ್ದರು. ಆ ದಿನದ ಕಥೆಯನ್ನು ಅವಳಿಗೆ ವಿವರಿಸುತ್ತಾನೆ ಅವನ ಅಪ್ಪ.

ತನ್ನದೇ ಮರಣ ವಾರ್ತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಥ್ರಿಲ್ಲಾಗಿದ್ದ ಆ ಅಲೆಮಾರಿ ಮಗ. ದುಃಖ ಮಾಸಿ , ಬದುಕಿದ್ದಾನೆ ಎಂಬ ನಿರಾಳತೆಯಿಂದ ಮತ್ತು ಸಿಟ್ಟಿನಿಂದ ಹಿರಿಯನೊಬ್ಬ ಅವನಿಗೆ ಹೊಡೆಯುತ್ತಿದ್ದ. 

ಹೊಡೆತ ತಿನ್ನತ್ತಿದ್ದವ, ಗಹ ಗಹಿಸಿ ನಗುತ್ತಲೇ, ಬದುಕಿದ್ದಾಗಲೇ ಅನುಭವಿಸಿದ ಸಾವಿನ ಸಂವೇದನೆಗಳ ಬಗ್ಗೆ ಆ ಹಿರಿಯನಿಗೆ ವಿವರಿಸುತ್ತಿದ್ದ.

“ಸಾವಿನ ನಂತರ ನಮ್ಮನ್ನು ನೋಡಲು ಬರುವ ಜೀವಂತ ಬಾಡಿಗಳ ಬಗ್ಗೆ ನಿಖರವಾಗಿ ಸರ್ವೇ ಮಾಡಿ ಹೇಳ್ಬೋದು. ಸತ್ತವರ ಬಗ್ಗೆ ಒಳ್ಳೆಯ ಮಾತನಾಡುವ, ಅಳುವ, ಹೋದವರು ಹೋದ್ರು ಅನ್ನುವವರು ಅನೇಕರಾದರೂ, ಅವರಿಗೆ ನಮ್ಮನ್ನು ಜೀವಂತವಾಗಿದ್ದ ಹಾಗೇ ನೋಡಲಾಗುವುದಿಲ್ಲ.  ಆದ್ರೆ ಕೆಲವು ವಿಶೇಷ ಮನುಷ್ಯರಿರ್ತಾರೆ. ವಿಶೇಷವಾದ ಅನುಭವಗಳೂ ಇರುತ್ತವೆ. ಅದರ ಬಗ್ಗೆ ವಿಚಿತ್ರ ಕುತೂಹಲ ನನಗೆ. ಅದಕ್ಕೆ ಈ ಸಾವಿನ ಆಟ. ಈ ಆಟ ಕೊಟ್ಟ ರೋಮಾಂಚನ ಅಷ್ಟಿಷ್ಟಲ್ಲ. ನಿರೀಕ್ಷಿಸದೆ ಇದ್ದ ಕೆಲವು ಮನುಷ್ಯರು ಬಂದಿದ್ರು. ರೋಗವಶವಾಗಿದ್ದರೂ ಅವಳು ಬಂದಿದ್ದಳು ನೋಡು. ಅವಳು 'ಕತ್ರೀನಾ', ಆ ಪುಟ್ಟ, ಚಂದದ ಹುಡುಗಿ. ವಯಸ್ಸಿನ್ನೂ 83 ಅಷ್ಟೇ ಅವಳಿಗೆ. ಮತ್ತೆ ಆ ದಾಸ್, ರೈಲಿನ ಬೋಗಿಗಳಲ್ಲಿ ಹಾಡುವ ದಾಸ್; 'ಟ್ರೈನ್ ದಾಸ್'. ಅವನೊಳಗಿನ ಕಣ್ಣುಗಳು ತೆರೆದೇ ಇರುತ್ತವಾದರೂ, ಎಲ್ಲರೂ ಕಣ್ಣಿಲ್ಲ ಅಂತಾರೆ ಅವನಿಗೆ. ಮತ್ತೆ ನಶೆಯನ್ನು ಹೊತ್ತು ತಿರುಗುವ, ಕಳ್ಳು ಮಾರೋ ಚಂದ್ರ ಬಂದಿದ್ದ. ಹೀಗೆ ಕೆಲವು ಜನ ಬಂದು ಹೋದ್ರು. ಎಲ್ಲರೂ ಚೆನ್ನಾಗಿ ಹೊಡೆದ್ರು. ಎಲ್ಲರೂ ನಿನ್ನ ಹಾಗೆಯೇ ಇರುವವರು, ಪ್ರೀತಿಯ ಹುಚ್ಚರು..ಬದುಕಿದ್ದಾಗಲೂ ಪ್ರೀತಿಸುವವರು.”

"ಅಲ್ಲಿಗೆ ಸಾವಿನ ಸಂಜೆ ಉನ್ಮಾದದ ರಾತ್ರಿಯಾಗುತ್ತದೆ".ಸತ್ತು ಹುಟ್ಟಿದವ ಎಲ್ಲರಿಗೂ ಕುಡಿಸುತ್ತಾನೆ..ಸಾವು ಸಂಭ್ರಮವಾಗುತ್ತದೆ... ಸಂಭ್ರಮಾಚರಣೆ.."The Celebration of death". 

ಈ ಸಾವಿನ ಕಥೆ ಕೇಳಿದ ಅವಳ ಬದುಕಿನ  ಹುಡುಕಾಟ ಮುಂದುವರಿಯುತ್ತದೆ. ನಿತ್ಯ ಒಡೆಯುವ ಶರಾಬಿನ ಶೀಷೆಗಳಿಗೆ, ಒಡೆದ ಹೃದಯಗಳಿಗೆ, ತೇಲೋ ಜೀವಗಳಿಗೆ ಮರಣದಂತ್ಯಕ್ಕೂ ಮೃತಗಂಧವಾಗುವವನ ಘಮಲು ಅವಳ ಹೃದಯವನ್ನು ಮತ್ತಷ್ಟು ಆವರಿಸುತ್ತದೆ. ಬದುಕು - ಸಾವಿನ ನಡುವೆ ಗೊಂದಲಕ್ಕೊಳಗಾದವರ ಕಥೆಗಳ ಕರಡು ತಿದ್ದುತ್ತಾ, ಸತ್ತಂತೆ ನಟಿಸುವವನ ಹೆಜ್ಜೆ ಗುರುತುಗಳ ಆಳ ಅವಳಿಗಷ್ಟೇ ಕಾಣಿಸುತ್ತದೆ. ತನ್ನ ಕುತೂಹಲಭರಿತ ಕಣ್ಣುಗಳ ನೆಟ್ಟು, ತನ್ನನ್ನೇ  ಹಿಂಬಾಲಿಸುವಂತೆ ಅವನ ಹೆಜ್ಜೆಗಳ ಮೇಲೆ ನಡೆಯುತ್ತಾಳವಳು. 

ಅಲೆಯುವ ಹಾಡು

ಅಲೆಗಳಂತೆ ಅಲೆದಲೆದಾಡುವ ಪ್ರೇಮ ಕಾವ್ಯವು ಸಹ ಹೌದು ಈ ಚಾರ್ಲಿ ಚಲನಚಿತ್ರ. ಈ ಸಿನಿಮಾ ನೋಡಿದ ಆ ರಾತ್ರಿ ಮನಸ್ಸು ಜಲಪಾತದಂತಾಗಿತ್ತು. ಒಬ್ಬನೇ ಫುಟ್ಪಾತ್ ಮೇಲೆ ನಡೆಯುತ್ತಾ ಚಿಮ್ಮುವ ನೀರಿನ ಏರಿಳಿತಗಳನ್ನು ಅನುಭವಿಸುತ್ತಿದ್ದೆ. ಬದುಕಿನ ಸೂಕ್ಷತೆಗಳು ಪರದೆಯ ಮೇಲೆ ದೃಶ್ಯಕಾವ್ಯವಾದ ಬಗೆಗೆ ಯಾಂತ್ರಿಕ ಬದುಕಲ್ಲಿ ನಲುಗುತ್ತಿರುವ ಒಳಮರ್ಮರಗಳು ಅಲೆಯಂತೆ ಆವರಿಸಿತ್ತು. 

ಈ ಅಲೆಗಳ ಬಗ್ಗೆಯೇ ಹಾಡೊಂದಿದೆ ಚಿತ್ರದಲ್ಲಿ. ನನ್ನೊಳಗೆ, ನಿನ್ನೊಳಗೆ ಎಲ್ಲರೊಳಗೂ ಇರುವ ಅಲೆ. ಸುಃಖದಲ್ಲಿ ತೇಲಿಸುವ ಇಷ್ಟಿಷ್ಟೆ ಅಲೆಗಳು. ಸುಃಖ-ದುಃಖಗಳೆಲ್ಲವನ್ನೂ ಕರಗಿಸುವ ಕೊನೆಗಾಲದಲೆಗಳು. ಚಿತ್ತಾಗಿಸುವ, ಚಿತ್ತಾರ ಬರೆವ ಅಲೆಗಳು. ಅಲೆಮಾರಿಯಾಗಿ ಅಲೆಯುತ್ತಾ, ಮರಳುಗಾಡಿನಲ್ಲಿ ಪಾದವೂರಿ, ನಕ್ಷತ್ರಕ್ಕೆ ನಾಲಗೆ ಚಾಚುತ್ತಾ, ಭೂಮಿಯೊಳಗಿಳಿಯುವ ನೊರೆಯೊಂದಿಗೆ ಕೊನೆಯಾಗುವ ತೆರೆ. 

ಬದುಕಿನ ತೊಯ್ದಾಟ ಮತ್ತು ಅಸಂಗತತೆಯನ್ನು ಅಲೆಗಳ ಮೇಲೇರಿಸಿ ಹಾಡಾಗಿಸಲಾಗಿದೆ.

ಈ ಹಾಡು ಬರುವ ದೃಶ್ಯದಲ್ಲಿ ಮೂವರು ಪಾತ್ರಧಾರಿಗಳಿರುತ್ತಾರೆ. ಚಾರ್ಲಿ, ಅವನ ಅಲೆದಾಟದಲ್ಲಿ ಸಿಕ್ಕ ಒಬ್ಬ ತಂದೆ ಮತ್ತೊಬ್ಬಳು ವೇಶ್ಯೆ. ಇದೇ ಈ ಚಿತ್ರದಲ್ಲಿ ನನ್ನನ್ನು ಕಾಡಿದ ಇನ್ನೊಂದು ದೃಶ್ಯ.

ದೃಶ್ಯ 2

ಅದೊಂದು ನ್ಯೂ ಇಯರಿನ ಮೊದಲ ರಾತ್ರಿ. ಆಕೆ ಮಧ್ಯವಯಸ್ಕ ವೇಶ್ಯೆ. ಮತ್ಸ್ಯಕನ್ಯೆಯನ್ನು ನೋಡಬೇಕೆಂಬ ಆಕೆಯ ಬಹುಕಾಲದ ಆಸೆಯ ತೀರಿಸಲೋಸ್ಕರ ಆ ಅಲೆಮಾರಿ ಅವಳನ್ನು ಕರೆದುಕೊಂಡು ಆ ಇನ್ನೊಬ್ಬನ ಬೋಟು ಏರಿ ಹೊರಟಿರುತ್ತಾನೆ. ಬೋಟಿನೊಳಗೆ ತಾವು ಕುಡಿದು ಆಕೆಗು ಹೊಯ್ದು ಕೊಟ್ಟು ಖುಷಿಪಡುತ್ತಾರೆ. ದೂರದಲ್ಲಿ ದೀಪಾಲಂಕೃತವಾಗಿ ಸಾಗುತ್ತಿದ್ದ ದೋಣಿಯು, ಕುಡಿದ ನಶೆಯಲ್ಲಿ ಆಕೆಗೆ ಮನಸಲ್ಲಿದ್ದ ಮತ್ಸ್ಯಕನ್ಯೆಯಂತೆ ಕಂಡು, ಅವಳ ಆಸೆ ತೀರುತ್ತದೆ. ಅದಾಗಲೇ ದೊಡ್ಡ ಮೀನೊಂದನ್ನು ಹುರಿದು ಪ್ಲೇಟಿನಲ್ಲಿಟ್ಟಿರುತ್ತಾನೆ ಆ ಅಲೆಮಾರಿ. ಹೌದು ಅವತ್ತವಳ ಹುಟ್ಟಿದ ದಿನ. ದುಡ್ಡಿಗಾಗಿ ದೇಹ ಬಿಕರಿಗಿಟ್ಟು ಅದೆಷ್ಟು ವರ್ಷವಾಗಿತ್ತು..! ಹುಟ್ಟುಹಬ್ಬ ಬಂದು ಹೋದದ್ದೇ ಗೊತ್ತಿರುತ್ತಿರಲಿಲ್ಲ ಆಕೆಗೆ. ಅವತ್ತಿನ ರಾತ್ರಿ ಕಡಲ ನೀರಿನ ಮೇಲೆ, ಬೋಟಿನೊಳಗೆ ಮೀನು ಫ್ರೈಯನ್ನು ಕಟ್ ಮಾಡೋ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಸಂಬಂಧವೇ ಇಲ್ಲದವನೊಬ್ಬನ ಮನುಷ್ಯಪ್ರೀತಿಗೆ ಮರುಳಾಗಿದ್ದಳವಳು. ಇಷ್ಟು ಕಾಲ ಬದುಕಲೋಸ್ಕರ ಏನೇನೊ ಪಾಡು ಪಟ್ಟು, ಏನೇನೋ ಸಹಿಸಿಕೊಂಡ ಜೀವಕ್ಕೆ ಈ ಹೊತ್ತು ಸಿಕ್ಕ ವಿವರಿಸಲಾಗದ ಖುಷಿಗೆ ಕಣ್ಣು ತುಂಬಿ ಬರುತ್ತದೆ. ನಗು-ಅಳುವಿನ ಮಿಲನ ಮೊಗದಲ್ಲಿ ಅರಳಿ, ಆ ಆನಂದದಲ್ಲೆ ಅವಳು ಕಡಲಿಗೆ ಹಾರುತ್ತಾಳೆ. ಇಷ್ಟು ಕಾಲ ಕಷ್ಟಗಳ ಸರಮಾಲೆಯನ್ನು ಉಂಡು ಬದುಕುಳಿದ ಅವಳಿಗೆ, ಅವತ್ತಿನ ಆ ಕ್ಷಣ ಬದುಕು ಸಾರ್ಥಕ ಅನ್ನಿಸಿತ್ತು. ಬದುಕಿನ ನಿರರ್ಥಕತೆ ಅರ್ಥವಾಗಿತ್ತು. ಆನಂದದ ಆ ಘಳಿಗೆ ಆಕೆಗೆ ಬದುಕಿದ್ದು ಸಾಕೆನಿಸಿತ್ತು. ಈ ದೃಶ್ಯದಲ್ಲಿ ವೇಶ್ಯೆಯಾಗಿ ನಟಿಸಿದಾಕೆ, ನಟಿ ಊರ್ವಶಿಯ ಅಕ್ಕ ‘ಕಲ್ಪನಾ’. ಚಾರ್ಲಿ ಸಿನಿಮಾ ಬಿಡುಗಡೆಯಾದ ಮರು ವರ್ಷವೇ ‘ಕಲ್ಪನಾ’ ತೀರಿಕೊಂಡ್ರು.

ಪ್ರೇಮದ ಹುಚ್ಚು

ಚಾರ್ಲಿಯನ್ನು ಹುಡುಕುವ ಹುಡುಗಿಯ ಹುಡುಕಾಟದಲ್ಲಿ ಚಾರ್ಲಿಯನ್ನು ಭೇಟಿಯಾದ ಪಾತ್ರಗಳು ಬಂದು ಹೋಗುತ್ತವೆ. ಕಳ್ಳ, ಅಪ್ಪ-ಮಗಳು, ಅನಾಥಶ್ರಮ, ವಿರಹಿ, ವೇಶ್ಯೆ, ವಯಸ್ಸಾದ ಪ್ರೇಮಿಗಳು, ರೋಗಿಗಳು - ಇವರೆಲ್ಲಾ ಅವರವರು ಕಂಡ ಚಾರ್ಲಿಯನ್ನು ಅವಳೊಂದಿಗೆ ಹಂಚಿಕೊಳ್ಳುತ್ತಾರೆ. ಆ ಪಾತ್ರಗಳೆಲ್ಲವನ್ನು ಚಾರ್ಲಿ ಅನಿರೀಕ್ಷಿತವಾಗಿಯೇ ಭೇಟಿಯಾಗಿರುತ್ತಾನೆ. ಅವರನ್ನೆಲ್ಲಾ ಭೇಟಿಯಾಗುವ ಮೂಲಕ ಆಕೆಯ ಅನ್ವೇಷಣೆ ಮುಂದುವರಿಯುತ್ತದೆ. ನಾಯಕಿಯಾಗಿ ‘ಪಾರ್ವತಿ ತಿರುವೋತ್ತು’ ಅಭಿನಯಿಸಿದ್ದಾಳೆ. ಚಾರ್ಲಿಯಾಗಿ ‘ದುಲ್ಖರ್ ಸಲ್ಮಾನ್’ ಅಭಿನಯಿಸಿದ್ದಾನೆ.

ಜೀವಿಗಳ ಬದುಕು ಮತ್ತು ಸಾವು, ಪ್ರಕೃತಿ ತನ್ನನ್ನು ತಾನು ಸಮತೋಲನದಲ್ಲಿಡುವ ಸಂಯೋಜನೆಯಲ್ಲಿ ಸಹಜವಾಗಿ ನಡೆಯುತ್ತದೆ. ಆ ಸಹಜತೆಯನ್ನು ಮನುಷ್ಯರ ಪ್ರೀತಿ, ಅಸಹಾಯಕತೆ, ಸ್ವಾತಂತ್ರ್ಯ ಮತ್ತು ಬಂಧನಗಳ ತೀವ್ರತೆಯನ್ನು ಅನಾವರಣಗೊಳಿಸುವ ಮೂಲಕ ತೋರಿಸಲಾಗಿದೆ ಸಿನಿಮಾದಲ್ಲಿ.

ಕನ್ನ ಹಾಕಲು ಬಂದ ಕಳ್ಳನೆದೆಯಲ್ಲಿ ಬೆಳಕ ಚೆಲ್ಲುವ ಇರುಳುಗನ್ನಡಿಯವ. ಅಪ್ಪನೆದೆಯ ಧೃಡವಾಗಿಸಿತ್ತಲೇ ಪುಟ್ಟ ಹುಡುಗಿಯ ಭವಿಷ್ಯಕ್ಕೆ ದೀಪಹಚ್ಚುವ ದೇದೀಪ್ಯಮಾನ ಜಾದೂಗಾರ. ಸೂಳೆ, ರೋಗಿ, ವೃದ್ದರೆಂದು ಸಮಾಜವೆಂಬ ಗೋಜಲಿನ ಗೂಡಲ್ಲಿ ಬಂದಿಸಲ್ಪಟ್ಟವರನ್ನು, ತ್ಯಜಿಸಲ್ಪಟ್ಟವರನ್ನು ದೋಣಿ ಹತ್ತಿಸಿಕೊಂಡು ಹುಚ್ಚನಂತೆ ನಗುತ್ತಲೇ ಕರುಣೆಯ ಸಾಗರವಾಗುವವನಾತ; ಹುಚ್ಚಿನ ಪರಮಾವಧಿ ಪ್ರೇಮವೆಂಬುದ ಸಾಬೀತಪಡಿಸುವವ ಚಾರ್ಲಿ. ಈ ಸಿನಿಮಾ ನೋಡುವಾಗ ತೆಲುಗು ಬರಹಗಾರ 'ಚಲಂ' ನೆನಪಾಗಿದ್ದ. ಅವನೂ ತನ್ನ ಮಕ್ಕಳನ್ನು ದೋಣಿ ಹತ್ತಿಸಿಕೊಂಡು ಅವರನ್ನು ಪುಳಕಿತರನ್ನಾಗಿಸುತ್ತಿದ್ದ. ಗೋದಾವರಿ ನದಿಯಲ್ಲಿ ಮಕ್ಕಳೊಂದಿಗೆ ಈಜಾಡುತ್ತಾ ಹರಿಯುತ್ತಿದ್ದ. ದಿಕ್ಕಿಲ್ಲದವರನ್ನೆಲ್ಲಾ ತೆಕ್ಕೆಗೆಳೆದುಕೊಳ್ಳುತ್ತಿದ್ದ. ಚಾರ್ಲಿ ಸಿನಿಮಾವಾದರೆ, ಚಲಂ ನಿಜದ ಬದುಕಾಗಿದ್ದ.

ಒಂದಕ್ಕೊಂದು ಮ್ಯಾಚ್ ಆಗದ ಚಪ್ಪಲಿಗಳನ್ನು ಧರಿಸಿ, ಕೇರಳದ ಪಂಚೆ- ಕುಪ್ಪಸ ತೊಟ್ಟು, ಮೂಗಿಗೊಂದು ಓಲೆ ಧರಿಸಿ ಓಡಿ ಹೋಗುವ ‘ಟೆಸ್ಸಾ'ಳ ಕಾಡಿಗೆ ಕಣ್ಣಿನೊಳಗೊಂದು ಜಗತ್ತಿದೆ. ಪಾರ್ವತಿ ಅಭಿನಯಿಸಿರುವ ಟೆಸ್ಸಾ ಪಾತ್ರವೇ ಒಂದು ಸಿನಿಮಾವಾಗಬಲ್ಲದು. ಅವನ ಪ್ರೇಮಿಯೋ, ಗೆಳತಿಯೋ ಏನಾದರೂ ಆಗಬಲ್ಲವಳು. ಅವಳ ಹುಡುಕಾಟದಲ್ಲಿ, ಅವನಿಗಿಂತಲೂ ಆಳವಾದ ಒಳ ನೋಟವಿದೆ. ನಿರ್ದೇಶಕ ನಾಯಕನ ಔನ್ನತ್ಯವನ್ನು ಚಿತ್ರವಾಗಿಸಿದ. ಆದರೆ ನನ್ನೊಳಗೆ ಹಲವು ರೂಪಗಳಲ್ಲಿ ಹರಡಿ ಹನಿಯುವ ಮೋಡದಂತೆ ಟೆಸ್ಸಾ ಆವರಿಸಿದ್ದಳು. ಅವನು ಹಾರುವ ಹಕ್ಕಿಯಾದರೆ, ಅವಳು ಬೀಸುವ ಗಾಳಿ. ಅವನು ಮರಗಳನ್ನು ಮಾತನಾಡಿಸಿ ಬೀಜಗಳನ್ನು ಪಸರಿಸುವಾತ. ಅವಳು ಮರವ ಹಿಡಿದಿಡುವ ಮಣ್ಣು, ಮಣ್ಣನು ಕೊರೆಯುತ ಹರಿಯುವ ನೀರು..

ಅವಳು ಅವನನ್ನು ಹುಡುಕಲು ಆರಂಭಿಸುವುದಕ್ಕೇ ಮುಂಚೆಯೇ, ಅವನು ಅವಳನ್ನು ಹುಡುಕಿಯಾಗಿತ್ತು ಎಂಬುದು ಚಿತ್ರದ ಕೊನೆಗೆ ಗೊತ್ತಾಗುತ್ತದೆ. ಅವನ ಅಬ್ಬರದ ನಗುವಿನ ಮೋಡಿ, ಅವಳ ಕಿರು ನಗೆಯ ಜೊತೆ ಮಾತನಾಡುತ್ತಿದ್ದಂತೆ ಸಿನಿಮಾವೆಂಬ ಜಾದೂ ಮುಗಿಯುತ್ತದೆ.

ಇದೊಂದು ಅಸಾಧಾರಣ ಸಿನಿಮಾವೇನಲ್ಲ. ಈ ಸಿನಿಮಾವನ್ನು ಇನ್ನೊಮ್ಮೆ ನೋಡಿದರೆ, ಅದೇ ಫೀಲ್ ಕೊಡುತ್ತದೆ ಅನ್ನಲು ಸಾಧ್ಯವಿಲ್ಲ. ಆವತ್ತು ನನಗನಿಸಿದ್ದನ್ನು ಇಲ್ಲಿ ದಾಖಲಿಸಿದ್ದೇನೆ. ಕಾಲ-ದೇಶಗಳನ್ನು ಮೀರಿ ಸಿನಿಮಾವೊಂದು ಸಾರ್ವಕಾಲಿಕವಾಗಬಹುದು. ಅದನ್ನು ಕಾಲವೇ ನಿರ್ಧರಿಸುತ್ತದೆ..

Disclaimer: This post has been published by Guru Sullia from Ayra and has not been created, edited or verified by Ayra
Category:Movies and TV Shows



ProfileImg

Written by Guru Sullia

Writer, Poet & Automobile enthusiast