"ನನ್ನವಳು"

ನಾನೊಬ್ಬ  ಕವಿ, ಅವಳೊಂದು ಕವಿತೆ.

ProfileImg
11 May '24
3 min read


image

ಇಷ್ಟೇನಾ ಅನ್ಸತ್ತೆ ನನಗೆ, ಬದುಕು ಅಂದ್ರೆ ಹೀಗಿರಬೇಕು ಅಂದುಕೊಳ್ಳುವ ಸುಳ್ಳನ್ನ ಸಾಬೀತು ಪಡಿಸಲು ಒದ್ದಾಡಿ ದಡ ಸೇರೋಕೆ ಆಗ್ದೆ ಇರೋ ಅಲೆಗಳ ಆಟ ಅಂತ. ನಿಯಂತ್ರಣ ತಪ್ಪಿದ ಗಾಳಿಪಟಕ್ಕೆ ಸೂತ್ರ ಎಷ್ಟು ಮುಖ್ಯಾನೋ ಹಾಗೆ ಬದುಕನ್ನ ನಿಯಂತ್ರಿಸೋ ಕೆಲವು ವಿಷಯಗಳು ಅಷ್ಟೇ ಮುಖ್ಯ ಆದರೆ ಆ ವಿಷಯಗಳು ಕೇವಲ ಆಗಬಾರದು.
ಪ್ರಕೃತಿ, ಸಾಹಿತ್ಯ, ಹಾಡು, ಸಿನೆಮಾ, ಕಡಲ ತೀರ, ಮಲೆನಾಡು ಬೆಟ್ಟ ಗುಡ್ಡಗಳು ನನ್ನ ಪ್ರವೃತ್ತಿ, ಇವುಗಳ ಜೊತೆಗೆ ಜೀವನಕ್ಕೆ ಒಂದು ಪುಟ್ಟ ವೃತ್ತಿ.  ನನ್ನ ಖುಷಿಯನ್ನು ಹಂಚಿಕೊಳ್ಳಲು ಮತ್ತು ನನಗೆ ದುಃಖವಾದಾಗ ಸಮಾಧಾನ ಮಾಡಲು ನನ್ನ ತಂಗಿಯರು ಇಷ್ಟೇ ನನ್ನ ಪ್ರಪಂಚ. ನನ್ನ ಈ ಪುಟ್ಟ ಪ್ರಪಂಚಕ್ಕೆ  ನನಗೆ ತಿಳಿಯದೆ ಕಾಲಿಟ್ಳವಳು, ಅವಳು.


ಆ ದಿನ ಅವಳನ್ನು ನೋಡಿದ ಮೊದಲ ಕ್ಷಣ ನನ್ನೊಳಗೆ ಒಂದು ರೀತಿಯ ಎಂದೂ ಭಾಸವಾಗದ ಭಾವನೆ. ನನ್ನ ಜೀವಕ್ಕೊಂದು ಸಂಗಾತಿ ಬೇಕು ಅವಳು ಹೀಗೆ ಇರಬೇಕು ಅಂದುಕೊಂಡ ನನಗೆ ಆ ದಿನ ಕಾಣಿಸಿದ್ದು ನಾ ಕಂಡ ಕನಸಿನ ಪ್ರತಿರೂಪ.ಅಂದುಕೊಂಡಂತೆ ಆಗುವುದಕ್ಕೂ, ಅಂದುಕೊಳ್ಳದಂತೆ ಆಗುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಆ ದಿನ ನನ್ನ ಬದುಕಲ್ಲಿ ನಡೆದದ್ದು ಅಂದುಕೊಳ್ಳದಂತೆ ಆಗಿದ್ದು. 
ಕನಸು ನನಸಾದರೆ ಆ ಕ್ಷಣದ ಖುಷಿ, ಕನಸು ನನಸಾಗದೆ ಇದ್ದರೆ ಆ ಕ್ಷಣದ ದುಃಖ ಆದ್ರೆ ಅವಳು ನನ್ನ ಕನಸಿನ ಪ್ರತಿರೂಪ ಆಗಿ ಕಣ್ಣ ಮುಂದೆ ನಿಂತಿದ್ದಳು. ನಂತರದಲ್ಲಿ ಅವಳು ನನ್ನೊಳಗೆ ನನ್ನ ನೆಮ್ಮದಿಯಾಗಿ ಕೂತು ಬಿಟ್ಟಳು. ನನ್ನ ದೇಹದ ಎತ್ತರ ನೋಡಿದವಳಲ್ಲ ಅವಳು ಬದಲಾಗಿ ನನ್ನೊಳಗಿನ ಮುಗ್ಧತೆಯ ಗುಣ, ನನ್ನ ಬರೆಹದ ಆಳ, ನನ್ನ ಒಳ್ಳೆಯತನದ ಎತ್ತರ ನೋಡಿದವಳು, ಇದು ಅವಳ ಶಬ್ದಕೋಶದಲ್ಲಿ ಪ್ರೀತಿಗೆ ಇದ್ದ ಅರ್ಥವಾಗಿತ್ತು. ನನ್ನ ಮೌನ , ನನ್ನ ತುಂಟತನ, ನನ್ನ ಬರವಣಿಗೆ ಮತ್ತು ನನ್ನನ್ನು ಅತೀಯಾಗಿ ಹಚ್ಚಿಕೊಂಡಿದ್ದಳು  ಹಾಗಾಗಿಯೇ ಏನೋ ಅವಳೆಂದರೆ ನನಗೆ ಅವಳೇ ಎಲ್ಲವೂ ಅನ್ನುವಷ್ಟು  ನಾನು ಅವಳ ಪ್ರೀತಿಯಲ್ಲಿ ಬೆರೆತು ಹೋಗಿ ಬಿಟ್ಟೆ. ನನ್ನ ಈ ನಂಬಿಕೆಯ ಪ್ರೀತಿಯ ನಿರೀಕ್ಷೆಯನ್ನು ಎಂದಿಗೂ ಅವಳು ನಿರಾಸೆ ಮಾಡಲೇ ಇಲ್ಲ.

ಆದರೆ ಒಂದಿನ ಇದ್ದಕ್ಕಿದ್ದಂತೆ ಯಾವುದೋ ಕಾರಣಕ್ಕೆ ಏನೂ ಹೇಳದೆ ನನ್ನನ್ನು ಬಿಟ್ಟು ಹೋಗಿಬಿಟ್ಟಳು. 
ಎಂತಹ ಪರಿಸ್ಥಿತಿ ಬಂದ್ರೂ ಬಿಟ್ಟು ಹೋಗಲ್ಲ ಅಂತ ಇದ್ದವಳು ಯಾಕಾಗಿ ದೂರ ಮಾಡಿದ್ಲು, ಯಾಕೆ ನನ್ನ ಬಗ್ಗೆ ಯೋಚನೆ ಇಲ್ಲ ಹಾಗಾದ್ರೆ ನಾನು ಅಂದ್ರೆ ಏನು ಎಂಬ ಉತ್ತರ ಸಿಗದ ಅದೇಷ್ಟೋ ಪ್ರಶ್ನೆಗಳು ನನ್ನನ್ನು ಅವಳಿಗಿಂತ ಹೆಚ್ಚಾಗಿ ಕಾಡತೊಡಗಿದವು. ಪ್ರತಿಕ್ಷಣ ಅವಳ ಜೊತೆಗೆ ಮಾತಾಡ್ಬೇಕು, ಅವಳ ಜೊತೆಗೆ ಇರ್ಬೇಕು ಅವಳು ಕಂಡ ಕನಸುಗಳಿಗೆ ಕೈ ಜೋಡಿಸಿ ಅವಳ ಧೈರ್ಯವಾಗಿ ನಾನು ನಿಲ್ಬೇಕು ಅಂತ ಏನೇನೋ ಅಂದುಕೊಳ್ಳುತ್ತಿದ್ದೆ. ಆದ್ರೆ ಇವ್ಳು.....? ಇಂದಿಗೂ ಉತ್ತರ ಸಿಕ್ಕಿಲ್ಲ.
ಇದು ನನ್ನ ಹೋರಾಟ , ನನ್ನ ಒಬ್ಬನದ್ದು ಮಾತ್ರ.
ಅವಳ ಜೊತೆ ಮಾತಾಡದೆ ಇರುವಂತ ದಿನಗಳು ನನ್ನ ಬದುಕಲ್ಲಿ ಇರುತ್ತವೆ ಅಂತ ಗೊತ್ತಿರ್ಲಿಲ್ಲ. ಅವಳ ಜೊತೆ ಮಾತಾಡದೆ ಹೇಗಿರೋದು..? ಸಾಧ್ಯನಾ...? ಗೊತ್ತಿರ್ಲಿಲ್ಲ.
ಒಂಟಿತನದ ಪರಿಚಯ ನಂಗೆ ಆಗ್ಲೇ ಆಗಿದ್ದು , ಆವಾಗ್ಲೇ ಗೊತ್ತಾಗಿದ್ದು ಅವಳು ನನ್ನೊಳಗೆ ಎಷ್ಟು ಆವರಿಸಿಕೊಂಡು ಬಿಟ್ಟಿದ್ದಳು ಅಂತ. ಕಳಿಯೋ ಪ್ರತಿದಿನ , ಪ್ರತಿಕ್ಷಣ , ನನ್ನ ಪ್ರತಿ ಉಸಿರಿಗೂ ಅವಳು ಬೇಕು ಅಂತ ಅನಿಸ್ತಾ ಇತ್ತು. ಒಂದೇ ಒಂದು ಕಾಲ್ ಮಾಡ್ಬೇಕು , ಮಾತಾಡ್ಬೇಕು ಅಂತ ಅವಳಿಗೆ ಅನಿಸಲೇ ಇಲ್ವಾ..? ನನ್ನ ನೆನಪು ಕೂಡ ಆಗಲೇ ಇಲ್ವಾ...?
ಆಗ್ಲೇ ಗೊತ್ತಾಗಿದ್ದು  ನಮ್ಮ ಭಾವನೆಗಳು ಮಾತ್ರ ನಮ್ಮ ಅನುಭವಕ್ಕೆ ಬರ್ತವೆ, ಅದಷ್ಟೇ ಸತ್ಯ ನಮ್ಮ ಪಾಲಿಗೆ.
ಬೇರೆಯವರ ಭಾವನೆಗಳನ್ನು ಮತ್ತು ಯೋಚನೆಗಳನ್ನು  ಅರ್ಥ ಮಾಡ್ಕೋಬಹುದೇ ಹೊರತು ಅವುಗಳನ್ನು ಅನುಭವಿಸಲು ಆಗಲ್ಲ ಅಂತ.


ನಿನ್ನ ಪ್ರೀತಿಸ್ತೀನಿ ಅಂತ ಹೇಳಿದ್ಲು ಆದ್ರೆ ಪ್ರೀತಿ ಇದ್ದಿದ್ರೆ ನನ್ನ ಬಿಟ್ಟು ಹೋಗ್ತಿದ್ಲಾ…? ಅವಳ ಪ್ರಕಾರ ಪ್ರೀತಿ ಅಂದ್ರೆ ಇದೇನಾ? ನನ್ನ ಜೊತೆ ಮಾತಾಡದೆ ಇರ್ತಿದ್ಲಾ?.


ಒಬ್ಬನೇ ಕುತ್ಕೊಂಡು ಜೋರಾಗಿ ಅಳಬೇಕು ಅಂತ ಅನ್ಸೋದು ಆದ್ರೆ ಅತ್ತುಬಿಟ್ರೆ ಕಣ್ಣೀರಿನ ಜೊತೆ ಅವಳ ನೆನಪುಗಳು ಎಲ್ಲಿ ಕರಗಿ ಹೋಗ್ತಾವೆ ಏನೋ ಅನ್ನೋ ಭಯ. ಅವಳು ಬೇಕು ನನಗೆ ಹೀಗೆ ನನ್ನೊಳಗೆ ಭದ್ರವಾಗಿ. ಎಷ್ಟೋ ಸಲ ಸಾಯಬೇಕು ಅಂತ ಆಗಾಗ ಅನ್ಸೋದು.
ಯಾರೋ ನನ್ನ ವೈಯಕ್ತಿಕ ಬದುಕಿಗೆ ಸಮಸ್ಯೆಗಳನ್ನು ತಂದಿಡೋಕೆ ಪ್ರಯತ್ನ ಮಾಡಿದ್ರೂ ಅದು ನನ್ನ ಸಾಯಿಸಲಿಲ್ಲ, ಇನ್ಯಾರೋ ನನ್ನ ಗೌರವಕ್ಕೆ ದಕ್ಕೆ ತರೋಕೆ ಪ್ರಯತ್ನ ಮಾಡಿದ್ರು ಅದೂ ಕೂಡ ನನ್ನ ಸಾಯಿಸಲಿಲ್ಲ ಆದ್ರೆ ಇವಳು ನನ್ನ ಆತ್ಮಕ್ಕೆ ಕೈ ಹಾಕಿ ನನ್ನೊಳಗಿನ ನನ್ನನ್ನೇ ನಾ ಗುರುತಿಸಿಕೊಳ್ಳಲು ಆಗದಷ್ಟು ಬದಲಾಯಿಸಿ ಬಿಟ್ಟಳು. ಇದು ಕೂಡ ನನ್ನನ್ನ ಸಾಯಿಸಲ್ಲ ಅನಿಸುತ್ತೆ.
ಹೀಗೆ ಪ್ರತಿಕ್ಷಣ ನನ್ನನ್ನು ನಾ ಹುಡುಕಾಡುವಾಗ ಅವಳು ನನ್ನೆದುರಿಗೆ ಸಿಕ್ಕು ನನ್ನನ್ನು ಅಪ್ಕೊಬೇಕು, ನಾ ಅವಳ ಮಡಿಲಲ್ಲಿ ಮಲಗಿದಾಗ ಖುಷಿಯ ಕಂಬನಿ ಜಾರಬೇಕು, ಇನ್ನೆಂದೂ ಅವಳು ಒಂದು ಕ್ಷಣ ಕೂಡ ನನ್ನ ಬಿಟ್ಟು ಹೋಗಬಾರದು. ಹೀಗೆಲ್ಲ ಆದ್ರೆ ಎಷ್ಟು ಚೆಂದ ಇರೋದು ಅಲ್ವಾ.
ನೀನು ನನ್ನ ಉಸಿರಿನ ಗಂಟುಮೂಟೆ ಕಣೇ, ನಿನ್ನ ಹೊತ್ತು ತಿರುಗುವುದು ಒಂದೇ ನನ್ನ ಕೆಲಸ.
ಅವಳು ಬರೀ ಅರ್ಥ ಕೊಡುವ ಅಕ್ಷರವಲ್ಲ, ನಿತ್ಯವೂ  ಕಾಡುವ ನನ್ನ ಅಂತರಂಗದ ಸಾಹಿತ್ಯ.
 

Category:Personal Experience



ProfileImg

Written by Param Sahitya

Writer, Poet