ಲೇಖಕರು: ಕೌಂಡಿನ್ಯ
ಪ್ರಕಾಶಕರು: ಚರಿತ್ರೆ ಪಬ್ಲಿಕೇಷನ್ಸ್, ಸೋಮೇಶ್ವರ.
ಪುಟಗಳ ಸಂಖ್ಯೆ: 230
ಬೆಲೆ: ₹ 250
"ಗಂಗ ಕದಂಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ"
~ ಎಂಬಿತ್ಯಾದಿ ರೀತಿಯಲ್ಲಿ ಕರುನಾಡ ಸರಸ್ವತಿಗೆ ಅಪ್ರತಿಮ ಕೊಡುಗೆ ನೀಡಿದ ವೀರವಂಶದವರ ಸಾಹಸ ಚರಿತ್ರೆಗಳನ್ನು ಇತಿಹಾಸದ ಪುಟಗಳಲ್ಲಿ ಕಥೆಗಳಾಗಿ, ಹಾಡುಗಳಾಗಿ ನಾವೆಲ್ಲ ಓದಿದ್ದೇವೆ, ಕೇಳಿದ್ದೇವೆ. ಇವರಲ್ಲಿ ಬಾದಾಮಿಯ ಚಾಲುಕ್ಯರು, ಮುಖ್ಯವಾಗಿ ಇಮ್ಮಡಿ ಪುಲಕೇಶಿಯು ತನ್ನ ಅಪೂರ್ವ ಸಾಧನೆಯಿಂದ ಕರ್ನಾಟಕವನ್ನು ಆಳಿ ಅಪಾರ ಕೀರ್ತಿ ಗಳಿಸಿದ ಚರಿತ್ರೆಯುಳ್ಳ ಪುಸ್ತಕವಿದು.
ಕನ್ನಡದಲ್ಲಿ ವೀರಯೋಧರ, ರಾಜರುಗಳ, ಸ್ವಾತಂತ್ರ್ಯ ಹೋರಾಟಗಾರರ ಸಾಹಸ ಚರಿತ್ರೆಗಳನ್ನು ಓದುವುದೆಂದರೆ ನನಗೆ ಕಾದಂಬರಿ ಓದುವುದಕ್ಕಿಂತಲೂ ಸ್ವಲ್ಪ ಜಾಸ್ತಿಯೇ ಇಷ್ಟವೆಂದು ಹೇಳಬಹುದು. ಇದಕ್ಕೆ ಪೂರಕವಾಗಿ, ಆತ್ಮೀಯರಾದ ಶಶಾಂಕಣ್ಣ ಜನವರಿ ತಿಂಗಳಿನಲ್ಲಿ ನನ್ನಿಷ್ಟಕ್ಕೆ ಹೊಂದುವಂತಹ ಎರಡು ಪುಸ್ತಕಗಳನ್ನು ಅನಿರೀಕ್ಷಿತವಾಗಿ ಉಡುಗೊರೆ ನೀಡಿದರು. ಅವುಗಳಲ್ಲಿ ಒಂದು ಅಯೋಧ್ಯಾ ಪ್ರಕಾಶನದಿಂದ ಬಿಡುಗಡೆಯಾದ, ನಾರಾಯಣ ಶೇವಿರೆ ಇವರು ಬರೆದ "ಅವಿಖ್ಯಾತ ಸ್ವರಾಜ್ಯ ಕಲಿಗಳು" ಮತ್ತು ಇನ್ನೊಂದು "ಚಾಲುಕ್ಯ ಪರಮೇಶ್ವರ". ಅದರಲ್ಲಿಯೂ, ಎರಡನೇ ಪುಸ್ತಕದ ಹೆಸರನ್ನೋದುತ್ತಿದ್ದಂತೆ ಕುತೂಹಲ! ಚಾಲುಕ್ಯ ಪರಮೇಶ್ವರ! ಯಾರಿದು? ಶಾಲೆಯಲ್ಲಿ ಓದಿದ ಬಗ್ಗೆಯೂ ಈಗ ನೆನಪಿಗೆ ಬರುತ್ತಿಲ್ಲ. ಏನಿದರ ಕಥೆ? ಎಂದು!
ಪುಸ್ತಕ ತೆರೆದು ಓದಲು ಶುರುಮಾಡಿದಂತೆಯೇ ತಿಳಿಯಿತು, ಇದು ಕನ್ನಡಿಗರೆಲ್ಲರನ್ನೂ ಒಂದೇ ರೇಖೆಯಲ್ಲಿ ಒಗ್ಗೂಡಿಸಲೋಸುಗ ಹಲವು ವಿಜಯಯಾತ್ರೆಗಳನ್ನು ಕೈಗೊಂಡು ಇಮ್ಮಡಿ ಪುಲಕೇಶಿಯು ಕನ್ನಡನಾಡನ್ನು ಆಳಿದ ರೋಚಕ ಕಥೆಯೆಂದು. ಬಾದಾಮಿ ಚಾಲುಕ್ಯರ ವಂಶದ ಪುನರ್~ಸಂಸ್ಥಾಪನೆಯು ರಾಷ್ಟ್ರಕೂಟರ ದಂಡನಾಯಕನಾಗಿದ್ದ ಚತುರ ಜಯಸಿಂಹ ವಲ್ಲಭನ ಸೂಕ್ಷ್ಮಮತಿಯ ಮೂಲಕ ಹೇಗಾಯಿತು ಎಂಬಲ್ಲಿಂದ ಪ್ರಾರಂಭಿಸಿ ಇಮ್ಮಡಿ ಪುಲಕೇಶಿಯ ಸುದೀರ್ಘ ಸಾಧನೆಯವರೆಗೆ ಚಾಲುಕ್ಯರ ವಂಶದಿಂದ ಕನ್ನಡನಾಡಿಗೆ ಸಂದ ಅಪಾರ ಕೊಡುಗೆಯ ಕುರಿತಾಗಿ ತಿಳಿಸುವ ಕೃತಿಯಿದು.
ಜಯಸಿಂಹ ವಲ್ಲಭ: ರಾಷ್ಟ್ರಕೂಟರಡಿಯಲ್ಲಿ ದಂಡನಾಯಕನಾಗಿ ಅನುಭವ ಪಡೆದು ತನ್ನ ವಂಶದವರು ಹಿಂದೆ ಕನ್ನಡನಾಡನ್ನು ಆಳಿದ್ದ ಚರಿತ್ರೆ ಸೈನ್ಯ ಸಂಘಟಿಸಿ ತನ್ನ ವಂಶವನ್ನು ಮತ್ತೆ ರಾಜ್ಯಾಡಳಿತ ಮಾಡುವಂತೆ ಪುನರ್ಸ್ಥಾಪಿಸಿದ ಸಾಹಸಿ. ಆದರೆ ಅನಿವಾರ್ಯವಾಗಿ ಕದಂಬರ ಸಾಮಂತನಾಗಿರಬೇಕಾಯಿತು.
ರಣರಾಗ: ಜಯಸಿಂಹನ ಮಗ ರಣರಾಗನು ಸ್ವತಂತ್ರನಾಗುವ ಕನಸು ಕಂಡರೂ ಪ್ರಯತ್ನಗಳು ವಿಫಲವಾದವು.
ಪುಲಕೇಶಿ I: ನಂತರ ರಾಜ್ಯವಾಳಿದವನೇ ರಣರಾಗನ ಸುಪುತ್ರ ಒಂದನೇ ಪುಲಕೇಶಿ. ಕನ್ನಡ ಭಾಷೆಯನ್ನು ಬೆಳೆಸಬೇಕು, ಕನ್ನಡನಾಡಿನ ಕೀರ್ತಿಪತಾಕೆಯನ್ನು ದೇಶದುದ್ದಕ್ಕೂ ಹರಡುವ ಕನಸಿನಿಂದ ಕಣಕ್ಕಿಳಿದ ಪುಲಕೇಶಿ ಪ್ರಥಮವಾಗಿ ಕದಂಬರೊಡನೆ ಹೋರಾಡಿ ಸ್ವತಂತ್ರನಾಗಿ ತಂದೆ, ತಾತನ ಕನಸನ್ನು ನನಸು ಮಾಡಿದನು. ಮುಂದೆ ಗಂಗ, ಕೊಂಕಣ, ಅಂಗ, ವಂಗ,ಮಗಧ, ಕಳಿಂಗ-ಮೌರ್ಯ ಸಾಮ್ರಾಜ್ಯಗಳನ್ನು ಗೆದ್ದು ವಿಜಯಪತಾಕೆ ಹಾರಿಸಿ ಬಾದಾಮಿಗೆ ಸಾಮಂತರನ್ನಾಗಿಸಿದನು. ಯಜ್ಞ-ಯಾಗಾದಿಗಳನ್ನು, ದೈವಿಕ ಕಾರ್ಯಗಳನ್ನು ಕೈಗೊಂಡನು. ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿದನು. ಈತನಿಗೆ ಇಬ್ಬರು ಪುತ್ರರು.
ಕೀರ್ತಿವರ್ಮ: ಒಂದನೇ ಪುಲಕೇಶಿಯ ಹಿರಿಯ ಪುತ್ರ.
ಮಂಗಳೇಶ: ಒಂದನೇ ಪುಲಕೇಶಿಯ ಇನ್ನೋರ್ವ ಪುತ್ರ. ಕೀರ್ತಿವರ್ಮನ ಮಲಸಹೋದರ.
ಈ ಇಬ್ಬರೂ ಅಣ್ಣ ತಮ್ಮಂದಿರು ಸೇರಿ ದಂಗೆಯೆದ್ದು ಸ್ವತಂತ್ರರಾಗಲು ಹೊರಟ ಸಾಮಂತರನ್ನು ಹೆಡೆಮುರಿ ಕಟ್ಟಿಸಿದರು. ಪಲ್ಲವ, ಚೋಳ, ಪಾಂಡ್ಯ, ಕೇರಳ, ಅಳುಕದ ರಾಜರುಗಳನ್ನು ಮತ್ತೊಮ್ಮೆ ಪರಾಭವಗೊಳಿಸಿದರು. ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ನಾಡಕ್ರೀಡೆ, ದೇವಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ ರಾಜ ಕೀರ್ತಿವರ್ಮ.
ಕೀರ್ತಿವರ್ಮನ ಪಟ್ಟದರಸಿ ಸಿರಿಯಬ್ಬೆ. ಎರೆಯ (ಎರಡನೇ ಪುಲಕೇಶಿ) ಇವರ ಪ್ರಥಮ ಸುಪುತ್ರ. ವಿಷ್ಣುವರ್ಧನ, ಧರಾಶ್ರಯ ಜಯಸಿಂಹ, ಬುದ್ಧವರಸ ಈತನ ಇತರ ಪುತ್ರರು.
ಕೀರ್ತಿವರ್ಮನ ಅನಿರೀಕ್ಷಿತ ಸಾವಿನ ನಂತರ ಪುತ್ರ ಎರೆಯನಿಗೆ ಇನ್ನೂ ಅಪ್ರಾಪ್ತ ವಯಸ್ಸಾಗಿದ್ದರಿಂದ ಆತನು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಒಪ್ಪಂದದಂತೆ ಮಂಗಳೇಶ ರಾಜ್ಯಾಡಳಿತ ಮಾಡಿದನು. ಚಾಲುಕ್ಯ ವಂಶಕ್ಕಾಗಿ ದಿಗ್ವಿಜಯ ಯಾತ್ರೆಗಳನ್ನು ಕೈಗೊಂಡು ವಿಜಯಶಾಲಿಯಾದನು. ವಿಜಯದ ಮಾಲೆಗಳು ಹೆಚ್ಚಿದಂತೆ ಅಧಿಕಾರದ ಲಾಲಸೆಯೂ ಹೆಚ್ಚಿ ತನಗೆ ಅಧಿಕಾರ ಶಾಶ್ವತವಾಗಬೇಕು, ತನ್ನ ನಂತರ ತನ್ನ ಮಗ ಸುಂದರವರ್ಮನಿಗೆ ಲಭಿಸಬೇಕೆಂಬ ದುರಾಸೆಯುಂಟಾಗಿ ಎರೆಯನು ಪ್ರಾಪ್ತ ವಯಸ್ಸಿಗೆ ಬಂದು ವರ್ಷಗಳಾದರೂ ಆತನಿಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ರಾಜಪದವಿಗೆ ನಿಯುಕ್ತಿಗೊಳಿಸಲಿಲ್ಲ, ಬದಲಾಗಿ ಅವನನ್ನೇ ನಿರ್ನಾಮ ಮಾಡುವ ಹಂತಕ್ಕೆ ತಲುಪಿದನು. ಇದನ್ನು ತನ್ನ ಗುರು ಮತ್ತು ತಾಯಿಯಿಂದ ತಿಳಿದ ಎರೆಯನು ನ್ಯಾಯಕ್ಕಾಗಿ ಹೋರಾಡುವ ಸಾಹಸಕ್ಕೆ ಕೈಹಾಕಿದನು.
ಇಮ್ಮಡಿ ಪುಲಕೇಶಿ: ಎರೆಯನೆಂಬ ಜನ್ಮನಾಮವನ್ನು ಹೊಂದಿದ್ದ ಈತನು ಚಿಕ್ಕಪ್ಪನಿಂದ ಅಧಿಕಾರ ವಂಚಿತನಾಗಿ ಮೋಸ ಹೋದ ಬಳಿಕ ತಾಯಿಯ ಆಸೆಯಂತೆ ತನಗೆ, ತಂದೆಗೆ ನಿಷ್ಠರಾಗಿದ್ದ ಕೆಲವರನ್ನು ಕೂಡಿಸಿ, ಸೈನ್ಯ ಸಂಘಟಿಸಿ ಬುದ್ಧಿವಂತಿಕೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಹೋರಾಡಿ ತನ್ನದಾಗಿದ್ದ ರಾಜಪದವಿಯನ್ನು ಪಡೆದು ದಕ್ಷತೆಯಿಂದ ಆಡಳಿತ ಕಾರ್ಯವನ್ನಾರಂಭಿಸಿದನು. ಅಖಂಡ ಕರ್ನಾಟಕವನ್ನೇ ಕನಸು ಕಂಡಿದ್ದ ಈತನು ತಾಯಿ ಸಿರಿಯಬ್ಬೆ, ಪತ್ನಿ ಕದಂಬದೇವಿ, ದಂಡನಾಯಕ ರವಿಕೀರ್ತಿಯರ ಬೆಂಬಲದೊಂದಿಗೆ ದೇಶಾದ್ಯಂತ ವಿಭಜಿತರಾಗಿದ್ದ ಎಲ್ಲಾ ಕನ್ನಡಿಗರನ್ನೂ ಒಂದೇ ರೇಖೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ತನ್ನ ಗುರಿಯಾಗಿಸಿಕೊಂಡು ನಂತರದ ದಿನಗಳಲ್ಲಿ ಒಂದೊಂದೇ ರಾಜ್ಯವನ್ನು ಗೆಲ್ಲುತ್ತಾ ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಪಡೆದುಕೊಂಡನು. ನಂತರ ಉತ್ತರಾ ಪಥೇಶ್ವರ ಬಿರುದಾಂಕಿತ ಹರ್ಷವರ್ಧನ ರಾಜನನ್ನೂ ಪರಾಭವಗೊಳಿಸಿ ಚಾಲುಕ್ಯ ಪರಮೇಶ್ವರನಾಗಿ ದೇಶದಲ್ಲಿಯೇ ಮೆರೆದು ತನ್ನ ಕನಸನ್ನು ನನಸಾಗಿಸಿದನು. ಕೌಟುಂಬಿಕ ಜೀವನದಲ್ಲಿದ್ದುಕೊಂಡು ಮೈಮರೆಯದೇ ಪತ್ನಿಯ, ತಮ್ಮಂದಿರ ಸಹಕಾರದಿಂದ ಸಾಧನೆಯನ್ನು ಮಾಡಿ ತನ್ನ ಗುರಿ ತಲುಪಿದುದಲ್ಲದೇ ನಾಲ್ಕು ಪುತ್ರರೂ, ಏಕೈಕ ಸುಪುತ್ರಿಯನ್ನೂ ಪಡೆದನು. ನಂತರವೂ ವಿಶ್ರಮಿಸದೇ ಕನ್ನಡ ಭಾಷೆ, ಸಾಹಿತ್ಯ, ಕಲೆ, ದೇವಾಲಯ ನಿರ್ಮಾಣಗಳಲ್ಲಿಯೇ ತಲ್ಲೀನನಾದನು.
ಹೀಗಿದ್ದಾಗ ಹಿಂದಿನ ದ್ವೇಷವನ್ನು ಕಾರಿದ ಸಾಮಂತ ರಾಜನೊಡನೆ ಯುದ್ಧ ಮಾಡುವ ಸಂದರ್ಭ ಅನಾರೋಗ್ಯದಿಂದ ಬಳಲಿ ಅಸ್ತಂಗತನಾದನು.
ಈತನ ನಂತರ ಪುತ್ರರ ಪ್ರಯತ್ನಗಳು ಫಲ ನೀಡಲಿಲ್ಲ. ಬಾದಾಮಿ ಚಾಲುಕ್ಯರ ವಂಶವೂ ಪ್ರಜ್ವಲಿಸಲಿಲ್ಲ.
ಕರ್ನಾಟಕದ ಚರಿತ್ರೆಯಲ್ಲಿ ಚಾಲುಕ್ಯರ ಆಡಳಿತ ಕನ್ನಡ ನಾಡು, ಭಾಷೆ, ಕಲೆ, ದೇವಾಲಯಗಳ ಅಭಿವೃದ್ಧಿಗೆ ಅಪಾರವಾದ ಕೊಡುಗೆಗಳನ್ನು ನೀಡಿರುವುದು ಅತಿಶಯೋಕ್ತಿಯಲ್ಲ.
ಕೌಂಡಿನ್ಯ ಕಾವ್ಯನಾಮದಿಂದ ಶ್ರೀಯುತ ವೈ ಎನ್ ನಾಗೇಶರು ಬರೆದಿರುವ ಚಾಲುಕ್ಯ ಪರಮೇಶ್ವರ ಕೃತಿಯು ಕನ್ನಡ ನಾಡಿಗೆ ಮುಕುಟಪ್ರಾಯವಾಗಿರುವ ಚಾಲುಕ್ಯರ ವಂಶದ ಇತಿಹಾಸವನ್ನು ಚೆನ್ನಾಗಿ ತೆರೆದಿಟ್ಟಿದೆ.
ಆದರೆ ಒಂದೇ ನಕಾರಾತ್ಮಕ ಅಂಶವೆಂದರೆ, ಓದುವಾಗ ಅಲ್ಲಲ್ಲಿ ಎದ್ದು ಕಾಣುವ ಅಕ್ಷರತಪ್ಪುಗಳು, ವ್ಯಾಕರಣದೋಷಗಳನ್ನು ಕಂಡು ಕರಡುಪ್ರತಿಯನ್ನು ಇನ್ನೊಮ್ಮೆ ಯಾರಾದರೂ ಓದಿ ತಿದ್ದಬೇಕಿತ್ತೆಂದು ಅನಿಸಿದ್ದು ಸುಳ್ಳಲ್ಲ!
0 Followers
0 Following