ಪಕ್ಕದ ಬೀದಿಯಲ್ಲಿ ಬಿದ್ದಿದ್ದ ಬೆಕ್ಕಿನ ಮರಿಯದು. ತಂಗಿ ಅದನ್ನು ಮನೆಗೆ ತಂದಿದ್ದಳು. ಹಾಗೇ ಮನೆಗೆ ಮೊದಲ ಬೆಕ್ಕಿನ ಮರಿಯ ಆಗಮನವಾಗಿತ್ತು. ಆಮೇಲಿನಿಂದ ಮನೆ ಸೇರಿದ, ಮನೆಯಲ್ಲೇ ಹುಟ್ಟಿದ ಬೆಕ್ಕುಗಳಿಗೆ ಲೆಕ್ಕವಿಲ್ಲ. ಆ ಮೊದಲ ಮರಿಗೆ 'ಮಿನಿ' ಅಂತ ಹೆಸರಿಟ್ಟಿದ್ದೆವು. ಆವತ್ತಿಗೆ ಕೇರಳದಲ್ಲೆಲ್ಲಾ ಬಹು ಯಶಸ್ವಿ ಕಂಡ 'ಅನಿಯತ್ತಿ ಪ್ರಾವ್' ಚಿತ್ರದ ನಾಯಕಿ ಪಾತ್ರದ ಹೆಸರಾಗಿತ್ತದು. ಗಂಡು ಬೆಕ್ಕಿಗೆ ಮನುಷ್ಯ ಸಮಾಜ ಹೆಣ್ಣಿಗೆಂದು ಅಚ್ಚೊತ್ತಿದ್ದ ಹೆಸರಿಡಲಾಗಿತ್ತು. ಮಿನಿ ತನ್ನ ದಿನದ ಬಹುಪಾಲನ್ನು ಒಲೆಯ ಪಕ್ಕದಲ್ಲಿ ಸವೆಸುತ್ತಿತ್ತು(ಆ ದಿನಗಳಲ್ಲಿ ಮನೆಯೊಳಗೆ ಒಲೆಯಿತ್ತು). ಒಲೆಯ ಮೇಲೆ ಟಂಗೀಸಿನ ಚೀಲದಲ್ಲಿ ಒಣಗಿಲು ಮೀನು ನೇತು ಹಾಕಿರುತ್ತಿದ್ದರು. ನಮ್ಮ ಪುಟ್ಟ ಮನೆಯ ಚಾವಡಿಯಲ್ಲಿ ನಮಗೆ ಬಂದ ಪತ್ರಗಳನ್ನು ಒಂದು ತಂತಿಯಲ್ಲಿ ಸಿಕ್ಕಿಸಿ ನೇತು ಹಾಕಲಾಗಿರುತ್ತಿತ್ತು. "ಆ ಚೀಲದಲ್ಲಿ ನೇತು ಹಾಕಿದ್ದ ಸತ್ತ ಮೀನುಗಳು ಮತ್ತು ಚಾವಡಿಯ ಮೂಲೆಯ ತಂತಿಯಲ್ಲಿ ಸಿಕ್ಕಿಸಿದ್ದ ಸಾಯದ ನೆನಪುಗಳ ಪತ್ರಗಳು” ಇಂದಿಗೂ ನೇತಾಡುತ್ತಿವೆ ಮನದಲ್ಲಿ.
ಮಿನಿ ಯಾವತ್ತೂ ಆ ಮೀನಿನ ಚೀಲಕ್ಕೆ ಕನ್ನ ಹಾಕಿಲ್ಲ. ಆ ಬೆಕ್ಕಿನ ಇಷ್ಟವೇ ಬೇರೆಯದಾಗಿತ್ತು. ಮಿನಿ ಕದ್ದು ತಿನ್ನುತ್ತಿದ್ದುದು ಟೊಮ್ಯಾಟೋಗಳನ್ನು. ಅದು ಟೊಮ್ಯಾಟೋ ತಿನ್ನುವುದನ್ನು ನೋಡುವುದೇ ಸೊಗಸಾದ ದೃಶ್ಯವಾಗಿತ್ತು. ಮಿನಿಗೆ ವಯಸ್ಸಾಗಿ ಮಣ್ಣು ಸೇರಿತು. ಮಿನಿ ಹೋಗುವುದಕ್ಕಿಂತ ಮುಂಚೆಯೇ ಬೇರೆ ಬೆಕ್ಕುಗಳು ಮನೆ ಸೇರಿದ್ದವು. ಆವತ್ತಿಗೆ ಬಲು ಇಕ್ಕಟ್ಟಾದ ಮನೆಯಲ್ಲಿ ಎಲ್ಲೆಂದರಲ್ಲಿ 'ಕಕ್ಕ' ಮಾಡುವ ಬೆಕ್ಕಿನ ಮರಿಗಳ ಮೇಲೆ ತುಂಬಾ ಸಿಟ್ಟು ಬರುತ್ತಿತ್ತಾದರೂ, ಬೆಕ್ಕುಗಳನ್ನು ಮನೆಯಿಂದ ಹೊರ ಹಾಕುವ ಮನಸ್ಸಂತು ಯಾರಿಗೂ ಇರಲಿಲ್ಲ. ಬೆಕ್ಕೆಂದರೆ ಇಷ್ಟ ಪಡದ ಅಪ್ಪ ಕೂಡಾ ಬೆಕ್ಕುಗಳ ಜೊತೆ ಎಮೋಷನಲಿ ಅಟ್ಯಾಚ್ ಆಗುವಷ್ಟು ಬೆಕ್ಕಿನ ಮನೆಯಾಗಿಬಿಟ್ಟಿತ್ತು ಮನೆ. ನಮ್ಮ ಮನೆಯಲ್ಲಿ ಹುಟ್ಟಿದ ಮರಿಗಳಿಗೂ ಲೆಕ್ಕವಿಲ್ಲ. ನಾನು ಊರು ಬಿಟ್ಟ ನಂತರ ಮನೆಯಲ್ಲಿದ್ದ, ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದ ಹೆಸರು 'ಸೇಲೆ'. ಸೇಲೆ ಅಂದರೆ ತುಳು ಭಾಷೆಯಲ್ಲಿ ವೈಯಾರ ಎಂದು ಅರ್ಥ. ಹಲವು ಮರಿಗಳನ್ನು ಹೆತ್ತ ಸೇಲೆಯೂ ಕೊನೆಗೆ ಮಣ್ಣು ಸೇರಿತು. ಸೇಲೆಯ ಮರಿಯಾದ ‘ಟಿಂಕು’ ಮಾತ್ರ ಬಹುಕಾಲ ಬಾಳಿತು.
ಮನುಷ್ಯರ ಮರಿಗಳನ್ನು ಇಷ್ಟ ಪಡುವಂತೆಯೇ, ಪ್ರಾಣಿಗಳನ್ನೂ ಇಷ್ಟ ಪಡುತ್ತೇನಾದರೂ, ಮನುಷ್ಯರ ನೆನಪುಗಳು ಕಾಡುವಷ್ಟೇನು ಪ್ರಾಣಿಗಳ ನೆನಪುಗಳು ನನ್ನನ್ನು ಕಾಡುವುದಿಲ್ಲ. ಆದರೆ, ಕೆಲವೊಂದು ರಾತ್ರಿಗಳಲ್ಲಿ, ಬೆಕ್ಕಾಗಿ ಬದಲಾಗುವ ತಲೆದಿಂಬು ನನ್ನನ್ನು ನಿದಿರೆಯಿಂದ ಎಬ್ಬಿಸುತ್ತದೆ. ಮನುಷ್ಯರ ಮೈಗೆ ಮೈ ಒರೆಸುವಷ್ಟೇ ಸಾರಾಸಗಟಾಗಿ ತಿರಸ್ಕಾರ ಭಾವದಿಂದ ನೋಡಿ, ಕುಂಡೆ ತಿರುಗಿಸುತ್ತಾ ನಡೆಯುವ ಬೆಕ್ಕಿನ ರೋಮಗಳು, ಉಗುರಿನ ಅಚ್ಚುಗಳು ತಲೆ ತುಂಬುತ್ತವೆ.
ಅಗತ್ಯ ಬಿದ್ದಾಗ ತನ್ನ ಪಾದಗಳನ್ನು ಅಗಲಿಸಿ, ಉಗುರುಗಳನ್ನು ಹೊರಬಿಡುವಾಗ, ಬೆಕ್ಕಿನ ತಕ್ಷಣದ ಆಕ್ರಮಣಕಾರಿ ಸ್ವಭಾವ ಅನಾವರಣಗೊಳ್ಳುತ್ತದೆ. ಬೆಕ್ಕಿನ ಪ್ರತಿಕ್ರಿಯೆಗಳು ಅತೀವ ವೇಗದಿಂದ ಕೂಡಿರುತ್ತವೆ. ಬೆಕ್ಕು ಹಾವಿನ ಜೊತೆಗೆ ಸೆಣಸಾಡುವಾಗಲೋ ಅಥವಾ ಇಲಿಯನ್ನು ಹಿಡಿಯುವಾಗಲೋ ಇದನ್ನು ಗಮನಿಸಬಹುದು. ಈ ಕೆಲಸಗಳನ್ನು ಬೆಕ್ಕು ಆಟವಾಡುವ ರೀತಿಯಲ್ಲಿ ಮಾಡುತ್ತದೆ. ಬೆಕ್ಕಿನ ಕೈಗಳು ಚುರುಕಾಗಿ ಚಲಿಸುತ್ತವೆ ಮತ್ತು ತನ್ನ ದೇಹವನ್ನು ಬ್ಯಾಲನ್ಸ್ ಮಾಡುವಲ್ಲಿಯೂ ಬೆಕ್ಕು ಅತಿ ನಿಷ್ಣಾತ ಪ್ರಾಣಿ. ಊರಲ್ಲಿದ್ದ ದಿನಗಳಲ್ಲಿ ಒಂದೆರಡು ಸಲ ಪ್ರೀತಿಯಿಂದ ಕಚ್ಚಿದ, ಪರಚಿದ ಬೆಕ್ಕುಗಳಿಂದಾಗಿ ನನ್ನ ಮುಂಗೈಯಲ್ಲಿ ಕೆಂಪು ಚುಕ್ಕಿಗಳೂ, ಗೆರೆಗಳು ಮೂಡಿ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದೆ. ಬೆಕ್ಕುಗಳ ಜೊತೆ ಹೆಚ್ಚಿನ ಸಲಿಗೆಯಿರುವ, ಅವುಗಳು ಖಾಯಿಲೆ ಬಿದ್ದಾಗ ಅವುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ನನ್ನ ತಂಗಿಯ ಮೈ-ಮನಸ್ಸುಗಳಿಗೆ ಗೀಚು ಬಿದ್ದಿರುವ ಉಗುರುಗಳ ಗುರುತುಗಳು ಅದೆಷ್ಟೋ!
ಮನುಷ್ಯರ ಸಾಮಿಪ್ಯಕ್ಕಿಂತ ಅದರ ಜಾಗ ಅಥವಾ ಮನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಬೆಕ್ಕು, ಎಷ್ಟು ದೂರ ಬಿಟ್ಟರು ಮರಳಿ ಮನೆ ಸೇರುತ್ತದೆ ಎಂಬ ನಂಬಿಕೆಯಿದೆ. ತನಗೆ ಬೇಡವೆಂದರೆ, ಇದ್ದ ಮನೆಯನ್ನು ಬಿಟ್ಟು ಹೋಗುವ ಸಿಡುಕು ಸ್ವಭಾವವನ್ನೂ ಬೆಕ್ಕು ತೋರಿಸುತ್ತದೆ. ನಾವಿದ್ದ ಹಳೇ ಮನೆ ತೆಗೆದು, ಅದೇ ಜಾಗದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೆವು. ಆವಾಗ ಹತ್ತಿರದಲ್ಲೇ ಒಂದು ಬಾಡಿಗೆ ಮನೆಯಲ್ಲಿ ಸ್ವಲ್ಪಕಾಲ ವಾಸವಿದ್ದೆವು. ನಾವು ಬಾಡಿಗೆ ಮನೆಯಲ್ಲಿದ್ದ ಅಷ್ಟೂ ಕಾಲ ನಮ್ಮ ಮನೆಯ ಬೆಕ್ಕುಗಳು ಹೊಸ ಮನೆ ಕಟ್ಟುತ್ತಿದ್ದ ಜಾಗದಲ್ಲೇ ಸುತ್ತಾಡಿಕೊಂಡಿದ್ದವು. ನಾವು ಅದನ್ನು ಎತ್ತಿಕೊಂಡು ಬಂದರೂ, ಮತ್ತೆ ಅಲ್ಲಿಗೇ ಹೋಗುತ್ತಿದ್ದವೇ ಹೊರತು ನಮ್ಮ ಬಾಡಿಗೆ ಮನೆಗೆ ಬರಲೇ ಇಲ್ಲ.
ನಾಯಿಗಳು ಅವುಗಳ ಗುಂಪಿನ ನಾಯಕನ ಆಜ್ಞೆಯನ್ನು ಪಾಲಿಸುತ್ತಾ ಗುಂಪಾಗಿ ಜೀವಿಸುತ್ತಿದ್ದಂತಹ ಪ್ರಾಣಿಗಳು. ಮನುಷ್ಯರ ಆಜ್ಞೆಗಳನ್ನು ಪಾಲಿಸಿ ಮನುಷ್ಯರೊಡಗೂಡಿ ಜೀವಿಸಲು ನಾಯಿಗಳಿಗೆ ಕಷ್ಟವೇನು ಆಗಿರಲಿಲ್ಲ. ಸಾಕುಪ್ರಾಣಿಗಳಾಗಿ ಪಳಗಿದ ನಾಯಿಗಳ ದೇಹ, ದೇಹದ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿತಿ ತುಂಬಾ ವೇಗವಾಗಿ ಬದಲಾವಣೆಗೊಂಡು, ಮನುಷ್ಯರ ಬದುಕಿನ ಜೊತೆ ಹೊಂದಿಕೊಂಡಿತು. ಆದರೆ, ಬೆಕ್ಕುಗಳು ಹಾಗಲ್ಲ. ಅವುಗಳು ಸ್ವತಂತ್ರ ಜೀವಿಗಳು. ಬೆಕ್ಕುಗಳು ತಮ್ಮ ಬೇಟೆಗಾರ ಮನೋಧರ್ಮವನ್ನು ಇಂದಿಗೂ ಉಳಿಸಿಕೊಂಡಿವೆ. ಬೆಕ್ಕುಗಳು ಮನುಷ್ಯರೊಂದಿಗೆ ಬೆರೆತು ಜೀವಿಸುವುದರಲ್ಲಿ ಪಳಗಿವೆ. ಆದರೆ, ಇವತ್ತಿಗೂ ಬೆಕ್ಕುಗಳನ್ನು ಪೂರ್ತಿಯಾಗಿ ಪಳಗಿಸಲು ಮನುಷ್ಯರಿಗೆ ಸಾಧ್ಯವಾಗಿಲ್ಲ. ಹತ್ತರಿಂದ ಹದಿನೈದು ಸಾವಿರ ವರ್ಷಗಳ ಹಿಂದೆ ಬೆಕ್ಕುಗಳು ಮತ್ತು ಮನುಷ್ಯರ ನಡುವೆ ಸಂಪರ್ಕವೇರ್ಪಟ್ಟಿತು ಎನ್ನಲಾಗುತ್ತದೆ. ಎಲ್ಲಾ ಪ್ರಾಣಿಗಳಂತೆ ಬೆಕ್ಕುಗಳನ್ನು ಕೂಡಾ ಆಹಾರ ಮತ್ತು ಚರ್ಮಕ್ಕಾಗಿಯೇ ಮನುಷ್ಯರು ಮೊದಲು ಬಳಸುತ್ತಿದ್ದುದು. ಮನುಷ್ಯರು ಬೇಟೆಯಾಡಿ ತಿನ್ನುವುದು ಕಡಿಮೆಯಾಗಿ, ಹೆಚ್ಚು ಕೃಷಿ ಆಧಾರಿತ ಬದುಕಿಗೆ ಒಗ್ಗಿಕೊಂಡ ಮೇಲೆ ಇದು ಬದಲಾಯಿತು. ಮೊದ ಮೊದಲಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮನುಷ್ಯರಿಗೆ ಬೆಕ್ಕುಗಳು ಹತ್ತಿರವಾಗೋಕೆ ಶುರುವಾಯ್ತು. ಕೃಷಿ ಧಾನ್ಯಗಳಿಗೆ ಮುತ್ತಿಗೆ ಹಾಕುವ ಸಣ್ಣ ಪ್ರಾಣಿ, ಕೀಟಗಳನ್ನು ಬೇಟೆಯಾಡಿ ತಿನ್ನೋ ಬೆಕ್ಕು ಮನುಷ್ಯರಿಗೆ ಉಪಕಾರಿಯಾಗಿ ಪರಿಣಮಿಸಿತು. ಬೆಕ್ಕಿಗು ಆಹಾರ ಸಿಕ್ತು.
ಧಾನ್ಯಗಳನ್ನು ಇಲಿ-ಹೆಗ್ಗಣಗಳಿಂದ ರಕ್ಷಿಸುವ ಬೆಕ್ಕು ಪುರಾತನ ಈಜಿಪ್ಟಿನಲ್ಲಿ ದೈವತ್ವದ ಸಂಕೇತಗಳಾಗಿ, ವಿಶೇಷ ಸ್ಥಾನಮಾನಗಳನ್ನು ಪಡೆದ ಸಾಕು ಪ್ರಾಣಿಯಾಗಿತ್ತು. ಅಲ್ಲಿ ಬೆಕ್ಕು ಅದೃಷ್ಟದ ಪ್ರಾಣಿಯಾಗಿ ಆರಾಧಿಸಲ್ಪಟ್ಟಿತ್ತು. ರಾಜಮನೆತನದವರು ಬೆಕ್ಕುಗಳನ್ನು ಚಿನ್ನದಲ್ಲಿ ಅಲಂಕರಿಸುತ್ತಿದ್ದರು. ಕೆಳವರ್ಗದವರು ಬೆಕ್ಕುಗಳ ಚಿತ್ರಗಳಿರುವ ಆಭರಣಗಳನ್ನು ಧರಿಸುವುದು, ತಯಾರಿಸುವುದು ಮಾಡುತ್ತಿದ್ದರು. ಆರಾಧನೆ ಮಾತ್ರವಲ್ಲದೇ, ಬೆಕ್ಕುಗಳನ್ನು ಬಲಿಕೊಟ್ಟು ಮಮ್ಮಿಗಳಾಗಿಸುವ ಪದ್ಧತಿಯೂ ಈಜಿಪ್ಟಿನಲ್ಲಿತ್ತು. ಬಲಿ ಕೊಡುವುದಕ್ಕಾಗಿಯೇ ಬೆಕ್ಕುಗಳನ್ನು ಸಾಕುತ್ತಿದ್ದರೂ ಕೂಡಾ. ಚಿತ್ರಕಲೆಗಳಲ್ಲಿ ಬೆಕ್ಕಿನ ಚಿತ್ರಗಳು ಸಾಮಾನ್ಯವಾಗಿದ್ದವು. 'ಮಮ್ಮಿ' ಎಂದು ಕರೆಯಲ್ಪಡುವ ಈಜಿಪ್ಟಿನ ಪಿರಮಿಡ್ಡುಗಳು ವಿಶ್ವವಿಖ್ಯಾತವಾದವುಗಳು. ಅಲ್ಲಿ ಕೇವಲ ಮನುಷ್ಯರ ಮಮ್ಮಿಗಳು ಮಾತ್ರವಲ್ಲದೇ ಬೆಕ್ಕುಗಳ ಮಮ್ಮಿಗಳೂ ಇದ್ದುವು. ಸಾವಿರಾರು ಬೆಕ್ಕು ಮತ್ತು ಅವುಗಳ ಜೊತೆಗಿರುವ ಇಲಿಗಳ ಮಮ್ಮಿಗಳನ್ನು ಕಂಡುಹಿಡಿಯಲಾಗಿದೆ. ಮರಣಾನಂತರದ ಬದುಕಿನಲ್ಲಿ ವಿಶ್ವಾಸವಿದ್ದ ಈಜಿಪ್ಶಿಯನ್ನರು ಇಲಿಗಳನ್ನು ಬೆಕ್ಕಿಗೆ ಆಹಾರವಾಗಿ ಇಟ್ಟಿರುವುದನ್ನು ಇಲ್ಲಿ ಊಹಿಸಬಹುದು.
ಈಜಿಪ್ಟಿನ ಉತ್ತರ ಭಾಗದಲ್ಲಿರುವ 'ಸೈಪ್ರಸ್' ದೇಶದಲ್ಲಿ, ಸುಮಾರು 9,500 ವರ್ಷಗಳ ಹಿಂದಿನ ಮಾನವ ಮತ್ತು ಬೆಕ್ಕಿನ ಅವಶೇಷಗಳನ್ನು ಹೊಂದಿರುವ ಸಮಾಧಿಯನ್ನು ಕಂಡುಹಿಡಿಯಲಾಗಿತ್ತು. ಸೈಪ್ರಸ್ ಒಂದು ದ್ವೀಪ ಪ್ರದೇಶವಾಗಿದ್ದು, ಬೆಕ್ಕುಗಳು ಆ ದ್ವೀಪದ ಸ್ಥಳೀಯ ಪ್ರಾಣಿಗಳಲ್ಲ. ಅಲ್ಲಿಗೆ ಬೆಕ್ಕುಗಳನ್ನು ದೋಣಿಯ ಮೂಲಕ ಸಾಗಿಸಿರಬಹುದಾದ ಸಾಧ್ಯತೆಗಳೇ ಅಧಿಕ. ಇದು ಆ ಕಾಲಕ್ಕೇ ಬೆಕ್ಕುಗಳು ಮನುಷ್ಯರ ಸಹಚರರಾಗಿರುವುದನ್ನು ಸೂಚಿಸುತ್ತದೆ. ಮಾನವರ ವ್ಯಾಪಾರ ವಹಿವಾಟಿನ ದಾರಿಯಲ್ಲಿ ಬೆಕ್ಕುಗಳು ಕೂಡ ಸಾಗಿರುವುದು ಸ್ಪಷ್ಟ. ತಾನು ಸ್ವತಂತ್ರವಾಗಿದ್ದುಕೊಂಡು ಮನುಷ್ಯರೊಂದಿಗೆ ಹೊಂದಿಕೊಂಡಿರುವ ಬೆಕ್ಕುಗಳ ಗತ್ತು, ಗೈರತ್ತುಗಳು ಇಂದಿಗೂ ಕಡಿಮೆಯಾಗಿಲ್ಲ.
ಟರ್ಕಿಯ ‘ಒಟ್ಟೊಮಾನ್ ಎಂಪೈರ್’ ಒಂದು ಕಾಲದಲ್ಲಿ ಜಗತ್ತಿನ ಬಹುಭಾಗವನ್ನು ಆಳಿದ ರಾಜ ಮನೆತನ. ಒಟ್ಟೊಮಾನ್ ಕಾಲದಿಂದಲೂ ಟರ್ಕಿಯಲ್ಲು ಬೆಕ್ಕುಗಳಿಗೆ ರಾಜಾತಿಥ್ಯವೇ ದೊರೆಯುತ್ತಿತ್ತು. ಟರ್ಕಿಯ ರಾಜಧಾನಿಯಾದ ‘ಇಸ್ತಾಂಬುಲ್’ನ ಬೀದಿಯಲ್ಲಿ ಇಂದು ಸಾವಿರಾರು ಬೆಕ್ಕುಗಳು ಓಡಾಡುತ್ತವೆ. ಬೆಕ್ಕುಗಳ ಕುರಿತಾದ ಡಾಕ್ಯಮೆಂಟರಿಗಳನ್ನು ನೋಡುತ್ತಿದ್ದೆ. ಅದರಲ್ಲಿ ಇಸ್ತಾಂಬುಲಿನ ಪ್ರಜೆಯೊಬ್ಬ ಬೆಕ್ಕುಗಳ ಕುರಿತು ಮಾತನಾಡುತ್ತಾ “ನಾಯಿಗಳು ಮನುಷ್ಯರನ್ನು ದೇವರು ಅಂದುಕೊಂಡು ಸೇವೆ ಮಾಡುತ್ತವೆ, ಬೆಕ್ಕಿಗೆ ಮಾತ್ರ ದೇವರ ಬಗ್ಗೆ ಸರಿಯಾಗಿ ಗೊತ್ತಿದೆ ಎಂಬ ಮಾತಿದೆ. ಆದರೆ ವಿಷಯ ಹಾಗಿಲ್ಲ. ಬೆಕ್ಕಿಗೆ ಹೆಚ್ಚಿನ ತಿಳುವಳಿಕೆಯಿದೆ” ಎಂದು ಹೇಳುತ್ತಿದ್ದ. “ಬೆಕ್ಕುಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವುದು, ನನ್ನಲ್ಲಿನ ಮನುಷ್ಯತ್ವದ ಪ್ರಜ್ಞೆಯನ್ನು ಉಳಿಸುತ್ತದೆ ಅನ್ನುತ್ತಾನೆ ಅಲ್ಲಿನದೇ ಇನ್ನೊಬ್ಬ ಪ್ರಜೆ”. ಹಾಗಂತ ಇಸ್ತಾಂಬುಲ್'ನಲ್ಲಿರುವ ಎಲ್ಲರೂ ಬೆಕ್ಕನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ ಎಂದೇನಲ್ಲ. ತಮ್ಮ ಚರೀಷ್ಮ, ಚುರುಕುತನ, ಸ್ವಚ್ಛಂದವಾಗಿ ಬದುಕುವ ಹುಕಿಯನ್ನು ಇಟ್ಟುಕೊಂಡೇ ಬೆಕ್ಕು ಮನುಷ್ಯರ ನಡುವೆ ಬದುಕುತ್ತದೆ. ಅದರ ದೇಹ ಮತ್ತು ಆರೋಗ್ಯಕ್ಕಾಗಿ ಮನುಷ್ಯರನ್ನು ಇಂಪ್ರೆಸ್ ಮಾಡುವ ಬೆಕ್ಕು ಮನುಷ್ಯರನ್ನು ಇಡಬೇಕಾದಲ್ಲೇ ಇಟ್ಟಿರುತ್ತದೆ. ಅದರ ಪ್ರೀತಿ ಮೆದುಳಿನಲ್ಲಿ ಹುಟ್ಟಿ, ರೋಮದ ಮೂಲಕ ಹಾರುತ್ತದೆ. ಬೆಕ್ಕಿಗೆ ವಿರಮಿಸುವ ರಹಸ್ಯ ಗೊತ್ತಿದೆ ಅಂತಾರೆ ‘ಓಶೋ’. ನಿಮ್ಮ ಮನೆಯಲ್ಲಿರುವ ಬೆಕ್ಕು ಕೆಲವೊಮ್ಮೆ ಧ್ಯಾನಸ್ಥ ಸಂತನಂತೆ ಕಾಣುತ್ತದೆ ನೋಡಿ. ಬೇಕಾದಷ್ಟು ರೆಸ್ಟ್ ತಗೊಂಡು, ಮೈಯನ್ನೆಲ್ಲಾ ನೆಕ್ಕಿ ನೀಟಾಗಿ ಇಟ್ಕೊಳ್ಳೊ ಬೆಕ್ಕು ನಿದ್ದೆಯಲ್ಲು ಜಾಗೃತವಾಗಿರುತ್ತದೆ. ಅದರ ಕಿವಿಯಲ್ಲಿ ಒಂದು ಡಜನ್'ಗಿಂತಲೂ ಹೆಚ್ಚಿನ ಮಸಲ್'ಗಳಿವೆ. ಎಲ್ಲವನ್ನೂ ಕೇಳಿಸಿಕೊಳ್ಳುವ ಬೆಕ್ಕು, ತನಗೆ ಬೇಡದ ಮನುಷ್ಯರ ಅಧಿಕಪ್ರಸಂಗತನಗಳನ್ನು ನಿರ್ಲಕ್ಷಿಸಿ ತನ್ನ ಪಾಡಿಗೆ ತಾನಿರುತ್ತದೆ.
ಗೆಳತಿಯ ಮನೆಯಲ್ಲಿ ಪರ್ಷಿಯನ್ ಬೆಕ್ಕೊಂದಿದೆ. ರೋಮ ತುಂಬಿ ತುಳಕುತ್ತಿರುವ ಕರಡಿ ಬೆಕ್ಕದು. ಅದಕ್ಕೆ 'ಕೀಕಿ' ಅಂತ ಹೆಸರಿಟ್ಟಿದ್ದಾರೆ. “ಬಹುಶಃ ರಾತ್ರಿ ನಾವು ಮನೆಯವರೆಲ್ಲ ಮಲಗಿರುವಾಗ, ಕೀಕಿ ನಾವೆಲ್ಲಾ ಸತ್ತಿದ್ದೇವೆ ಅಂತಂದುಕೊಂಡು ಓಡಾಡುತ್ತಿರುತ್ತದೆ ಅಂತಾಳೆ ಗೆಳತಿ”. ಬಹುತೇಕ ಬೆಕ್ಕುಗಳಂತೆ ನೀರು ಕಂಡರೆ ಮಾರು ದೂರ ಓಡುತ್ತದೆ ಕೀಕಿ. ಬೆಕ್ಕುಗಳು ನಿಧಾನವಾಗಿ ನೀರಿಗೆ ಒಗ್ಗಿಕೊಂಡು ಈಜಬಲ್ಲವಾದರೂ, ಅದಕ್ಕದು ಇಷ್ಟದ ಕ್ರಿಯೆಯಂತು ಅಲ್ಲ. ಅದಕ್ಕೆ ಹಲವು ವೈಜ್ಞಾನಿಕ ಕಾರಣಗಳಿರಬಹುದು. ಬೆಕ್ಕಿಗೆ ಸಹಜವಾದ ನೀರು ಮತ್ತು ರಾಸಾಯನಿಕವಾಗಿ ಶುದ್ಧೀಕರಿಸಿದ ನೀರಿನ ನಡುವಿನ ವ್ಯತ್ಯಾಸ ಗೊತ್ತಾಗಿ, ಅದರ ವಾಸನೆ ಗ್ರಹಿಸುವ ಗ್ರಂಥಿಗಳಿಗೆ ತೊಂದರೆ ಅನಿಸುವುದು ಅಂತಾರೆ. ಬೆಕ್ಕುಗಳು ಮೂಲತಃ ಡೆಸರ್ಟ್ ಪ್ರದೇಶಗಳಿಂದ ಬಂದ ಜೀವಿಗಳಾಗಿರುವುದು ಮತ್ತು ಸ್ವಾತಂತ್ರ್ಯವನ್ನು ಇಷ್ಟಪಡುವ ಬೆಕ್ಕಿಗೆ ಒದ್ದೆಯಾದ ಶರೀರ ಯಾವುದೋ ಬಂಧನದಲ್ಲಿ ಇದ್ದಂತೆ ಅನಿಸುವುದು ಇದಕ್ಕೆ ಕಾರಣವಿರಬಹುದು. ತನ್ನ ನಾಲಗೆಯಿಂದ ಮೈಯನ್ನೆಲ್ಲಾ ನೆಕ್ಕಿ ನೆಕ್ಕಿ, ರೋಮವನ್ನು ಅಚ್ಚುಕಟ್ಟಾಗಿ ಬಾಚಿ ಸ್ವಚ್ಛವಾಗಿಟ್ಟುಕೊಳ್ಳುವ ಬೆಕ್ಕಿಗೆ ನೀರಿನಲ್ಲಿ ಒದ್ದೆಯಾಗಿಸಿ ಸ್ನಾನ ಮಾಡಿಸುವ ಮನುಷ್ಯರ ಸ್ವಭಾವ ಕಿರಿಕಿರಿಯೆನಿಸುತ್ತಿರಬಹುದು. ಇದಕ್ಕೆ ಹೊರತಾಗಿ ನೀರನ್ನು ಇಷ್ಟಪಡುವ ಕೆಲವು ಜಾತಿಯ ಬೆಕ್ಕುಗಳೂ ಇದ್ದಾವೆ ಎಂಬುದು ನಿಜ.
ಈ ಬರಹದ ಮಧ್ಯೆ,'Street cat named Bob’ ಎಂಬ ಸತ್ಯ ಘಟನೆಯಾಧಾರಿತ ಚಂದದ ಚಿತ್ರವೊಂದನ್ನು ನೋಡುತ್ತಿದ್ದೆ. ತನ್ನ ಬದುಕಿಗೊಂದು ಅರ್ಥ ಕೊಟ್ಟ ಬಾಬ್ ಚಿತ್ರದ ನಾಯಕನ ಮಗುವಾಗಿ, ಆತನ ಜೀವಾಳವೇ ಆಗಿಹೋಗಿರುತ್ತದೆ. ಈ ಸಿನಿಮಾ ನೋಡುತ್ತಲೇ, ತಾನು ಹೋಗುವಲ್ಲಿಗೆಲ್ಲಾ ತನ್ನ ಬೆಕ್ಕು 'ಚೆರ್ರಿ'ಯನ್ನು ಬೈಕಿನಲ್ಲಿ ಕೂರಿಸಿಕೊಂಡು ಕರೆದೊಯ್ಯುವ ಗೆಳೆಯ ನೆನಪಾದ. ಬೆಕ್ಕುಗಳ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ಬೀಗುವ ಚೆರ್ರಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಾನವನು. ನಮ್ಮ ಮಕ್ಕಳ ಕಲರವ, ಕಿರುಚಾಟ ಮತ್ತು ಬೆಕ್ಕಿನ ಮಿಯಾಂವ್'ಗಳಲ್ಲಿ ಸಾಮ್ಯತೆ ಕಾಣುವ ಹಲವರಾದರು ನಮ್ಮ ನಡುವೆ ಇರಬಹುದು.
ಬೆಕ್ಕಿನ ಕುರಿತಾಗಿ ಹಲವು ತರಹದ ಮೂಡನಂಭಿಕೆಗಳು ಚಾಲ್ತಿಯಲ್ಲಿದ್ದವು. ಅದರಲ್ಲಿ ಕೆಲವು ಇಂದಿಗೂ ಪ್ರಚಲಿತದಲ್ಲಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಪ್ಪು ಬೆಕ್ಕು ದುರಾದೃಷ್ಟದ ಪ್ರತೀಕವಾದರೆ, ಜಪಾನಿನಲ್ಲಿ ಅದು ಅದೃಷ್ಟದ ಸಂಕೇತವಾಗಿದೆ. ಹದಿಮೂರನೇ ಶತಮಾನದ ಯುರೋಪಿನಲ್ಲಿ, ಅಲ್ಲಿನ ಆಡಳಿತಧಿಕಾರಿಗಳ ಆಜ್ಞೆಯಂತೆ ಬೆಕ್ಕುಗಳನ್ನು ಕೊಲ್ಲಲಾಗುತ್ತಿತ್ತು. ದೇವರಿಗೆ ವಿರುದ್ಧವಾದ ಪಿಶಾಚಿಗಳೆಂಬ ಮೂಢನಂಬಿಕೆಯೇ ಇದಕ್ಕೆ ಕಾರಣವಾಗಿತ್ತು. ಹೋಗೋ ದಾರಿಗೆ ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ನಂಬಲಾಗುತ್ತಿದ್ದು, ನಾವು ಸಣ್ಣವರಿರುವಾಗ ಹಿರಿಯರ ಬಾಯಿಂದ ಈ ಮಾತುಗಳನ್ನು ಕೇಳಿಯೂ ಇದ್ದೇವೆ. ಯಾರು ಏನೇ ಹೇಳಿದರೂ ಬೆಕ್ಕನ್ನು ಮುದ್ದು ಮಾಡದಿರಲು ಸಾಧ್ಯವೇ? ಅದರ ರೋಮವನ್ನು ಸವರದೇ ಇರುವುದಾದರು ಹೇಗೆ, ಅಲ್ವೇ? ನಮ್ಮ ಕಥೆಗಳಲ್ಲಿ, ಆ್ಯನಿಮೇಷನುಗಳಲ್ಲಿ ಬೆಕ್ಕಿಗೆ ಇರುವ ಪ್ರಾಮುಖ್ಯತೆ ನಮಗೆಲ್ಲಾ ಗೊತ್ತೇ ಇದೆ. ಜನಪ್ರಿಯತೆಯ ಉತ್ತುಂಗಕ್ಕೇರಿದ 'ಟಾಮ್ & ಜೆರ್ರಿ' ನಮ್ಮ ಮುಖದಲ್ಲಿ ಚಿಮ್ಮಿಸಿದ ನಗುವಿಗೆ ಲೆಕ್ಕವಿಲ್ಲ.
ನಾಜೂಕಾಗಿ ವರ್ತಿಸುತ್ತಾ, ನಮ್ಮಿಂದ ಅತಿ ಹೆಚ್ಚು ಮುದ್ದು ಮಾಡಿಸಿಕೊಳ್ಳುತ್ತಿದ್ದ ಬೆಕ್ಕು ಮುಂಗುಸಿ ಬಣ್ಣದ 'ರೂಮಿ'. ಗರ್ಭಿಣಿಯಾಗಿದ್ದ ರೂಮಿಗೆ abortion ಆಗಿ ಹೊರ ಬಂದ ಮೂರೂ ಮರಿಗಳು ಸತ್ತೋಗಿದ್ವು. ರಕ್ತ ಸ್ರವಿಸುತ್ತಾ, ಎರಡು ದಿನ ನರಳಿದ ರೂಮಿಯೂ ತನ್ನ ಮೊದಲ ಹೆರಿಗೆಯಲ್ಲೆ ಹೊರಟು ಹೋಯ್ತು. ಪಕ್ಕದ ಮನೆಯಿಂದ ಬಂದು ನಮ್ಮ ಮನೆ ಸೇರಿದ ಹೆಣ್ಣು ಬೆಕ್ಕು 'ಚುಮ್ಮಿ' ತಿಂಗಳ ಹಿಂದಷ್ಟೇ ಮರಿ ಹಾಕಿದೆ. ನಮ್ಮ ಮನೆಯಲ್ಲೇ ಹುಟ್ಟಿ ಬೆಳೆದ ಆರೇಳು ವರ್ಷ ಪ್ರಾಯದ ಅಜ್ಜ ಬೆಕ್ಕು 'ಟಿಂಕು' ಚುಮ್ಮಿಯ ಪ್ರಮುಖ ಪಾರ್ಟನರ್ ಆಗಿತ್ತು. ಟಿಂಕು ಮತ್ತು ಚುಮ್ಮಿಸೇರಿಕೊಂಡು ಟೀನೇಜ್ ತಲುಪಿದ್ದ ಉಳಿದೆರಡು ಗಂಡು ಬೆಕ್ಕುಗಳನ್ನು ಮನೆಯಿಂದ ಓಡಿಸಿತ್ತು. ಮೊನ್ನೆ ಟಿಂಕು ಕೂಡಾ ಸತ್ತು ಹೋಯಿತು. ಇನ್ನೀಗ ಓಡಿ ಹೋದ ಬೆಕ್ಕುಗಳು ಮತ್ತೆ ಬರುತ್ತವಾ ಕಾದು ನೋಡಬೇಕಿದೆ..
Writer, Poet & Automobile enthusiast
0 Followers
0 Following