ʼʼಚೆನ್ನಿ... ಲೇ ಚೆನ್ನಿ..ಮಳೆಬರೊ ಹಾಗಿದೆ. ಹಸುನೆಲ್ಲ ತಂದು ಕಟ್ ಹಾಕ್ ಬಾರ್ದೇನೆ? ಹಂಗೆ ಮನೆ ತಾವ ಸ್ವಲ್ಪ ಕಾಳ್ಜಿ ಮಾಡ್ಕ್ಯ. ಮೋಡ ನೋಡದ್ರೆ ಜಬರ್ದಸ್ತ್ ಮಳೆ ಬರಂಗದೆ. ಮನೆ ಮಾಡು ಸೋರ್ತದೆ ಅಂತ ರಾಗ ತೆಗಿಬೇಡ. ಬಕೇಟೊ, ಹಂಡೆನೊ ಏನಾದ್ರೂ ರೆಡಿ ಮಾಡಿಟ್ಕ. ನಾನ್ ಒಸಿ ರಾಮಣ್ಣನ್ ಟೀ ಅಂಗಡಿ ಕಡೆಹೋಗ್ ಬತ್ತೀನಿ ಕಣೆʼʼ ಅಂತ ಹೆಂಡ್ತಿಗ್ ಹೇಳಿದ ಸಿದ್ಧ ಯಾವ್ದಕ್ಕೂ ಇರಲಿ ಅಂತ ಕಂಬಳಿಕೊಪ್ಪೆ ತಗೊಂಡು ಹೊರಟ.
ಅವ್ನ್ ಬೆನ್ ಹಿಂದೆ ನಿಂತಿದ್ದ ಚೆನ್ನಿ ಅಸಹನೇಲಿ, ʼʼಸಿದ್ಧ, ಈಗ್ ಎಲ್ ಹೊಂಟ್ಯೊ? ಮಳೆ ಬರಂಗದೆ ಅಂತ ಹೇಳಿ ನನ್ ಒಂಟಿಯಾಗ್ ಬಿಟ್ ಹೊಂಟ್ಯನಾ? ಎಷ್ಟೊಂದ್ ಕೆಲ್ಸಗಳ್ ಬಾಕಿ ಉಳ್ಕೊಂಡಾವೆ. ನೀನ್ ಯಾಕ್ ಹಿಂಗ್ ಆಡ್ತೀಯೊ. ಆ ರಾಮಣ್ಣನ್ ಹೋಟೆಲ್ನಾಗಅಂತದ್ ಏನೈತಿ? ಕಿಸೆಲಿ ಒಂದ್ ಕಾಸು ಇಲ್ದಿದ್ರು ರಾಮಣ್ಣನ್ ಹೋಟೆಲ್ಗ್ ಹೋಗ್ತಿ. ಬೀಡಿ ಸೇದಕಾ? ಅಥ್ವ ಅಲ್ ಬರೊ ಹೆಂಗಸ್ರನ ನೋಡಾಕ?ʼʼ ಅಂತ ಕೇಳಿದಳು.
ಸಿದ್ಧ ಒಂದ್ ಮಾರ್ ಮುಂದೆ ಹೋಗಿದ್ದವ್ನು, ʼʼಇಲ್ಲ ಚೆನ್ನಿ.. ನಿನ್ನಂಥ ಸುಂದರ್ವಾದ್ ಹೆಂಡ್ತಿ ಇರಾವಾಗ ನಾನ್ಯಾಕ್ ಹೆಂಗಸ್ರನ ನೋಡಾಕ್ ಹೋಗ್ಲೇ? ಪ್ಯಾಟೆ ಇಂದ ಬರೊ ಕೆಂಪ್ ಬಸ್ ನೋಡಾಕ್ ಹೊಂಟಿನಿ. ಮಳೆ ಬರೊದ್ರೊಳ್ಗೆ ಕೊಟ್ಟಿಗೆ ಕೆಲ್ಸ ಮುಗಿಸ್ಕ. ಬೇಗ ಬತ್ತೀನಿ. ಸಿಟಿಯಿಂದ ಒಂದ್ ಕಾಗದ ಬರೋದದೆ ನಂಗ..ʼʼ ಅಂದ.
ಚೆನ್ನಿ ನಿಟ್ಟುಸಿರ್ಬಿಟ್ಲು. ಸಿದ್ಧ ಯಾಕ್ ಹಿಂಗ್ ಆಡ್ತಾನೊ. ಸಂಜೆ ಆಗ್ತಾ ಬಂತು. ಗಾಳಿ ಮಳೆ ಬರೊಹಂಗ್ ಆಗದ. ಈ ಟೈಮಾಗ್ ಕೆಂಪ್‌ಬಸ್ ನೋಡಕ್ ಹೋಗ್ಬೇಕಾ? ಇವ್ನಿಗ್ ಯಾಕಾದ್ರೂ ಅರ್ಥ ಆಗಕಿಲ್ವೊ ಅಂತ ಬೈಕೊಳ್ತ ಚೆನ್ನಿ ಆಚೆ ಕಡೆ ಗುಡ್ಡದಲ್ಲಿ ಮೇಯಕ್ ಬಿಟ್ಟಿದ್ದ ಗೌರಿ ಹಸು ಮತ್ತವ್ಳ್ ಕರುನ ಹುಡ್ಕೊಂಡ್ ಹೋದ್ಲು.
ಸಂಜೆ ಆಗ್ತಾ ಬಂದಿತ್ತು. ಆಕಾಶದ್ ತುಂಬೆಲ್ಲ ಕ್ಪಪ್ಪು ಮೋಡ ತುಂಬಿತ್ತು. ಸೂರ್ಯ ಎಲ್ಲೂ ಕಾಣ್ಸತಿರ್ಲಿಲ್ಲ. ಮೆಲೆನಾಡ ತಪ್ಪಲಿನಲ್ಲಿರೊ ಸೂನಾಪುರ ಅನ್ನೊ ಚಿಕ್ ಹಳ್ಳಿ ಅದು. ಊರಿನ ಹೆಸರು ಸೂರ್ಯ ನಾರಯಣ ಪುರ ಅಂತ. ತುಂಬಾ ಉದ್ದ ಇರೊ ಹೆಸರನ್ನ ತೀರ ಇತ್ತೀಚೆಗೆ ಹಳ್ಳಿ ಜನರು ಸೂನಾಪುರ ಅಂತ ಮಾಡ್ಕೊಂಡಿದ್ರು. ಮೊಬೈಲ್, ಟಿವಿ ಹಾವಳಿ ಕಾಲದಲ್ಲೂ ನೆಟ್‌ವರ್ಕ್ ಬರದೆ ಇನ್ನೂ ಅದೇ ಹಳೆತನ ಉಳ್ಸ್ಕೊಂಡಿರೊ ಊರು ಸೂನಾಪುರ. ತಂಪು ಗಾಳಿ, ಹಕ್ಕಿಗಳ ಇಂಪು, ಕಣ್ಮನ ಸೆಳೆವ ಹಸಿರು ಕಾಡು ಅಲ್ಲಲ್ಲಿ ಹರಿವ ಝರಿ. ಅಪರೂಪದ ಚೆಂದದ ಊರಲ್ಲಿ ಹೊರ ಜಗತ್ತಿನ ಸಂಪರ್ಕವಿಲ್ಲ ಅನ್ನೋದ್ ಬಿಟ್ರೆ ಮತ್ತೆಲ್ಲಾನೂ ತುಂಬಾ ಚೆಂದ ಅನ್ನಬಹುದಿತ್ತು.
ಸ್ವಾತಂತ್ರ್ಯ ಬಂದು ಇಷ್ಟ್ ವರ್ಷ ಆದ್ರೂ ಆ ಪುಟ್ ಹಳ್ಳಿಗೆವಿದ್ಯುತ್ ಸಂಪರ್ಕ ಇಲ್ಲ. ಮೂವತ್ತು ವರ್ಷಗಳ ಹಿಂದಿನ ಜನರು ಹೇಗೆ ಕೆಲಸ ಮಾಡ್ಕೊಂಡು ಜೀವನ ಮಾಡ್ತಿದ್ರೊ ಅದೇ ರೀತಿ ಈ ಜನರು ತಮ್ಮಪಾಡಿಗೆ ತಾವು ಕೆಲಸ ಮಾಡ್ತಿದ್ರು. ಚುನಾವಣೆ ಬಂದಾಗ ವೋಟ್ ಕೇಳಕೆ ಬರ್ತಿದ್ದ ರಾಜಕೀಯ ಧುರೀಣರು ವೋಟಿಂಗ್ ನಂತರ ಆ ಕಡೆ ಮುಖನೇಹಾಕ್ತಿರ್ಲಿಲ್ಲ. ಆದ್ರೆ ಅಲ್ಲಿನ ಜನರು ವೋಟಿನ ಬಗ್ಗೆ ಆಗ್ಲಿ ರಾಜಕೀಯದವರ ಬಗ್ಗೆ ಆಗ್ಲಿ ತಲೆ ಕೆಡ್ಸ್ಕೊತಿರ್ಲಿಲ್ಲ. ರಾಮಣ್ಣನ್ ಟೀ ಅಂಗಡಿಗೆ ಬೆಳಗಿನಬಸ್ ಅಲ್ಲಿ ನ್ಯೂಸ್ ಪೇಪರ್ ಬರ್ತಿತ್ತು. ಓದು ಬರಹ ಬರೋವ್ರು ದುಡ್ ಕೊಟ್ಟು ತಗೊಂಡು ಓದ್ತಿದ್ರು. ಅನಕ್ಷರಸ್ತರು ಪೇಪರ್ ಮೇಲಿನ ಚಿತ್ರ ನೋಡ್ತಿದ್ರು.
ಹಳ್ಳಿಗೊಂದು ಶಾಲೆ ಇದ್ದೇ ಇತ್ತು. ನಮ್ಮೂರ ಶಾಲೆ, ಚೆಂದದ ಶಾಲೆ ಅನ್ನೊ ಚಿಕ್ಕ ಬಿಲ್ಡಿಂಗಿಗೆ ಹಂಚು ಹೊದಿಸಿ ಹೊಸದಾಗಿ ಕಟ್ಟಿದ್ದರು. ಊರಿನ ಮಕ್ಕಳು ನೆಮ್ಮದಿಯಾಗಿ ಶಾಲೆ ಸೇರ್ತಿದ್ರು.
ಬೆರಳೆಣಿಕೆಯಷ್ಟು ಜನ ಸಿಟಿ ಕಡೆಮುಖ ಮಾಡಿದ್ರು. ಕೆಲವರು ಕೆಲಸಕ್ಕೆ ಅಂತ ಓಡದ್ರೆ, ಇನ್ನೂ ಕೆಲವರು ಓದ್ತೀವಿ ಅಂತ ಪೇಟೆ ಸೇರಿದ್ರು. ಕೆಲವು ವರ್ಷಗಳ ಹಿಂದೆ ಸೂನಾಪುರಕ್ಕೆ ಒಂದು ರೋಡಿನ ಸಂಪರ್ಕ ಮಾಡಿಕೊಟ್ಟಿದ್ರು. ಬೆಳಿಗ್ಗೆ ಒಂದು, ಸಂಜೆ ಒಂದು ಕೆಂಪು ಬಸ್ಸು ಹೊಂಡ, ಗುಂಡಿಗಳನ್ನ ದಾಟಿ ಬರ್ತಾ ಇತ್ತು. ಅದನ್ನ ನೋಡಕೆ ಊರಿನ ಮಕ್ಕಳಿಂದ ಹಿಡಿದು, ಮುದುಕರೆ ವರೆಗೂ ಜನ ಜಂಗುಳಿ. ಅಲ್ಲಿಅಂಥದ್ದೇನಿರತ್ತಪ್ಪ ಅಂದ್ರೆ ಬಹುಷ್ಯ ಅವ್ರಿಗೂ ಗೊತ್ತಿಲ್ಲ. ಪೇಟೆಯಿಂದ ಬರೊ ಲೆಟರ್ಸ್, ಬಂಧಗುಳಿಂದ ಕಳ್ಸೊ ಪಾರ್ಸೆಲ್ ಹೀಗೆ ಚಿಕ್ಕ ಪುಟ್ಟ ವಿಷ್ಯಗಳು ಆ ಬಸ್ಸಿನೊಂದಿಗೆ ಜನರನ್ನುಬೆಸೆದಿತ್ತು.
ಸೂನಾ ಹಳ್ಳಿಯ ಮಧ್ಯ ಈಗ್ಲೂ ಪಂಚಾಯ್ತಿ ಕಟ್ಟೆ ಇತ್ತು. ಅಲ್ಲಿ ಯಾವ್ದೇ ನ್ಯಾಯ ಪಂಚಾಯ್ತಿ ಆಗ್ಬೇಕಿದ್ರು ಜಮೀನ್ದಾರ್ ಹತ್ರನೇ ಹೋಗ್ಬೇಕಿತ್ತು. ಯಾವ್ದೇ ಕೋರ್ಟು ಕಛೇರಿ, ಪೋಲೀಸ್ರು ಆ ಹಳ್ಳಿಗ್ ಬಂದಿದ್ದೆಇಲ್ಲ. ತುಂಬಾ ಪ್ರೀತಿಯಿಂದ, ಹೊಂದಾಣಿಕೆಯಿಂದ ಒಂದೇ ಕಟುಂಬದವ್ರ್ ಹಾಗೆ ಬದ್ಕ್‌ತಿದ್ದ ಆ ಹಳ್ಳಿಲಿ ಸುಮಾರುಇಪ್ಪತೈದ್ ಮನೆ ಇತ್ತು. ಬ್ರಾಹ್ಮಣರು ಐದಾರು ಮನೆ ಒಟ್ಟಿಗೆ ಕಟ್ಟಿಕೊಂಡು ಒಂದು ಬ್ರಾಹ್ಮಣ ಕೇರಿ ಅಂತ ಮಾಡ್ಕೊಂಡಿದ್ರು. ಪಟೇಲ್ರು, ಗೌಡ್ರು ಮತ್ತೆ ಕುರುಬ್ರು ಅಂತ ಅಲ್ಲಿ ಇಲ್ಲಿ ಒಂದಿಷ್ಟು ಮನೆಗಳಿದ್ವು. ಪಟೇಲ್ರ್ ಮನೆಗಳು ಒಂದ್ಕಡೆ ಆದ್ರೆ, ಗೌಡ್ರ್ ಮನೆ ಕೇರಿನೇ ಮತ್ತೊಂದ್ ಕಡೆ ಇತ್ತು. ಹೀಗೆ ಇನ್ನೂ ಬೇರೆ ಬೇರೆ ಜಾತಿಯವ್ರು ಆ ಊರಲ್ಲಿದ್ರೂ ಬೇರೆಧರ್ಮದವ್ರು ಅಲ್ಲಿರ್ಲಿಲ್ಲ. ಹಾಗಾಗಿ ಎಲ್ರೂ ಒಟ್ಗೆ ಊರಿನ ಹಬ್ಬ, ಜಾತ್ರೆಗಳಲ್ಲಿ ತಪ್ಪದೆ ಪಾಲ್ಗೊಳ್ತಿದ್ರು.
ಇಂಥ ಸುಂದರ್ವಾದ ಹಳ್ಳಿಲಿ ಚೆನ್ನಿ ಮತ್ತು ಸಿದ್ಧ ಜೋಡಿ ಹಕ್ಕಿಗಳು. ಈಗೊಂದ್ ನಾಲ್ಕ್ ವರ್ಷದ್ ಹಿಂದೆ ಮದ್ವೆ ಆಗಿದ್ರು. ಸಿದ್ಧನ್ ಮನೆ ಊರಿನ ಯಾವ್ ಕೇರಿನಲ್ಲೂ ಇರ್ಲಿಲ್ಲ. ಬದ್ಲಾಗಿ ಊರಿನ ಒಂದ್ ಕಡೆ ಮೂಲೇಲ್ ಇರೊ ಗುಡ್ಡದ್ ತಪ್ಪಲಲ್ಲಿ ಚಿಕ್ ಗುಡ್ಸಿಲ್ ಮಾಡ್ಕೊಂಡಿದ್ದ. ಅವ್ನ್ ಗುಡ್ಸಿಲಿಂದ ದೂರ್ದಲ್ಲಿ ಬಾಳನ್ ಗುಡ್ಸಲು. ಅದ್ರ್ ಆಚೆ ತಾತಿ ಗುಡ್ಸಲು. ಇವ್ರೆಲ್ಲ ಊರಿನಲ್ಲಿ ಬಡವರು ಅನ್ನೊ ಸಾಲಿಗೆ ಸೇರಿದವ್ರು. ಸೋಗೆ ಹೊದಿಸಿದ ಮನೆಯ ಪಕ್ಕದಲ್ಲಿ ಕಟ್ಟಿ ಹಾಕೊಂಡಿದ್ದ ಒಂದು ಹಸುಗೆ ಇರಕೆ ಚಿಕ್ ಜಾಗ ಇತ್ತು. ಅಂದ್ರೆ ಸೋಗೆ ಹಾದಿಸಿರೊ ಕೊಟ್ಟಿಗೆ. ಮನೆಗೂ ಕೊಟ್ಟಿಗೆಗೂ ಜಾಸ್ತಿ ಡಿಫರೆನ್ಸ್ ಇರ್ಲಿಲ್ಲ.
ಹೊಟ್ಟೆ ತುಂಬ ಊಟ, ಮೈಗ್ ಬಟ್ಟೆ ಇದ್ರೆ ಸಾಕು ಅನ್ನೊ ಜೀವನ ಅವ್ರದ್ದು. ಚೆನ್ನಿ ನೋಡಕೆ ಗುಂಡ್ ಗುಂಡಾಗಿ ಮುದ್ದಾಗಿರೊ ಹುಡ್ಗಿ. ಸಿದ್ಧ ಸ್ವಲ್ಪ ಕಪ್ಪಗಿದ್ರೂ ಲಕ್ಷಣವಾಗಿದ್ದ. ಆ ಊರಲ್ಲಿ ಸಿದ್ಧನ್‌ಬಲ ನೋಡಿ ಆನೆ ಬಲ ಅಂತ ಹೊಗಳದವ್ರುಇದ್ರು. ಅವ್ನ್ ಉಣ್ಣೊ ರಾಗಿ ಮುದ್ದೆ, ಖಾರ ಸಾಂಬಾರ್ ಇಂದನೊ ಏನೊ, ಅಷ್ಟೊಂದ್ ಶಕ್ತಿ ಅವ್ನ್ ತೋಳಲ್ಲಿದ್ವು. ಕಟ್ಟುಮಸ್ತಾಗಿದ್ದ ಸಿದ್ಧನ್ನ ಊರಿನ ಜಮೀನ್ದಾರರು ಬಲಗೈ ಬಂಟನಾಗಿ ಮಾಡ್ಕೊಂಡಿದ್ರು.
ಸಿದ್ಧ ಬಡವ ಅಗಿದ್ರೂ ಸ್ವಾಭಿಮಾನಿ. ಜಮೀನ್ದಾರರ ಕೈಕೆಳಗೆ ನಿಯತ್ತಾಗಿ ದುಡಿತಿದ್ದ. ಜಮೀನ್ದಾರನೂ ಅವ್ನಿಗೆ ಸಮಯಕ್ ಸರಿಯಾಗಿ ಹಣ ಕೊಡ್ತಿದ್ದ. ಒಳ್ಳೇಊಟದ್ ಜೊತೆಗೆ ಕುಡ್ಯಕೆ ಹೆಂಡನೂ ಕೊಡ್ತಿದ್ದ. ಸಿದ್ಧಂಗಂತೂ ಜಮೀನ್ದಾರರು ಅಂದ್ರೆ ದೇವ್ರ್ ಇದ್ ಹಾಗೆ.
ಎಷ್ಟೇ ಹೊಂದಾಣಿಕೆ ಇದ್ರೂ ಹಳ್ಳಿಲಿ ಜಗಳ, ಗದ್ದಲ, ಗಲಾಟೆ ಇಲ್ದೇ ಇರ್ಲಿಲ್ಲ. ಎಲ್ಲ ಕಡೆ ಇರೊ ಹಾಗೆ, ಅಣ್ಣ ತಮ್ಮಂದಿರ ಜಗಳ, ಅಕ್ಕ ಪಕ್ಕದವ್ರ್ ಜಗಳ, ಹೊಲಕ್ಕಾಗಿ, ಹಣಕ್ಕಾಗಿ, ಹೆಣ್ಣಿಗಾಗಿ ಆಗಾಗ ಜೋರಾದ ಹೊಡೆದಾಟ, ಬಡಿದಾಟ ನೆಡಿತಿತ್ತು. ಹಾಗಂತ ಯಾವತ್ತೂ ಪೋಲೀಸ್ ಆ ಊರಿಗೆ ಕಾಲಿಟ್ಟಿರ್ಲಿಲ್ಲ.
ತುಂಬಾ ಶಾಂತವಾಗಿ, ಸಮೃದ್ಧವಾಗಿದ್ದ ಆ ಊರಿಗೆ ಇದ್ದಕ್ಕಿದ್ದಂಗೆಒಂದು ಬರ ಸಿಡಿಲು ಅಪ್ಪಳಿಸಿತ್ತು.
ಸಿದ್ಧ ಕೆಂಪು ಬಸ್ ನೋಡಕೆ ಹೋಗಿದ್ದೇನೊ ನಿಜ. ಆದ್ರೆ ಅವ್ನಲ್ಲಿ ಕಂಡಿದ್ದೇ ಬೇರೆ. ಭಯದಿಂದ ಅವನ ಕಾಲು ನಡುಗೋಕೆ ಶುರುವಾಯ್ತು. ಅವನು ಗಾಬ್ರಿಯಲ್ಲಿ ಜಮೀನ್ದಾರರ್ ಮನೆ ಕಡೆ ಓಡಿದ್ದ. ಅದೇನು ಅಂತ ಹೇಳ್ತೀನಿ. ಆದರೆ ಮುಂದಿನ ಭಾಗದಲ್ಲಿ.....
0 Followers
0 Following