ನರಭಕ್ಷಕಗಳು: ಸತ್ಯವೆಷ್ಟು, ಮಿಥ್ಯವೆಷ್ಟು?

ನರಭಕ್ಷಕ ಪ್ರಾಣಿಗಳ ಬಗ್ಗೆ ಒಂದಿಷ್ಟು...

ProfileImg
14 Jul '24
7 min read


image

ಮಲೆನಾಡಿನಲ್ಲಿ ಈಗಲೂ ಯಾರಾದರೂ ಹಳೆಯ ತಲೆಗಳಿದ್ದರೆ, ಅಂದರೆ ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿದವರಿದ್ದರೆ ಅವರ ಬಳಿ ನರಭಕ್ಷಕ ಎಂದರೇನೆಂದು ಕೇಳಿನೋಡಿ. ಕೆಲವರಿಗಾದರೂ ಅವುಗಳ ಅನುಭವ ಇದ್ದೇ ಇರುತ್ತದೆ. ಹುಲಿ, ಚಿರತೆಗಳೆಲ್ಲ ಮಾನವನ ಕೃಪಾಕಟಾಕ್ಷದಡಿಯಲ್ಲೇ ಬದುಕಬೇಕಾದ ಇಂದಿನ ದಿನಗಳಲ್ಲಿ ನರಭಕ್ಷಕಗಳು ತೀರಾ ಅಪರೂಪವಾಗಿವೆ. ಎಲ್ಲೋ ವರ್ಷಕ್ಕೊಮ್ಮೆ ನರಭಕ್ಷಕ ಹುಲಿಯ ಸುದ್ದಿ ಕೇಳಿದರೂ ಅದು ಒಬ್ಬಿಬ್ಬರನ್ನು ಕೊಲ್ಲುವುದರೊಳಗೇ ಅದನ್ನು ಹಿಡಿದುಹಾಕುತ್ತಾರೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, ಅಷ್ಟೇ ಏಕೆ, ಸ್ವಾತಂತ್ರ್ಯೋತ್ತರದಲ್ಲೂ ಕೆಲವು ವರ್ಷಗಳ ತನಕ ನರಭಕ್ಷಕ ಹುಲಿ, ಚಿರತೆಗಳು ಅಲ್ಲಲ್ಲಿ ಹಾವಳಿ ಎಬ್ಬಿಸುತ್ತಿದ್ದುದೂ ಆ ಸಂದರ್ಭದಲ್ಲಿ ಅನೇಕ ದಿನಗಳ ಕಾಲ ಇಡೀ ಹಳ್ಳಿಗೆ ಹಳ್ಳಿಯೇ ನರಭಕ್ಷಕನ ಭಯದಲ್ಲಿ ಕಾಲಕಳೆಯುತ್ತಿದ್ದ ದಿನಗಳಿದ್ದವು. ಆ ದಿನಗಳೆಲ್ಲ ಈಗ ಇಲ್ಲವೇ ಇಲ್ಲವೆನ್ನಬೇಕು. ಹಾಗಾದರೆ ಪ್ರಾಣಿಗಳು ನರಭಕ್ಷಕಗಳಾಗಲು ಕಾರಣವೇನು? ಯಾವ ಯಾವ ಪ್ರಾಣಿಗಳು ನರಭಕ್ಷಕಗಳಾಗುತ್ತವೆ? ಭಾರತದ ಇತಿಹಾಸದಲ್ಲಿ ಕಂಡ ಪ್ರಸಿದ್ಧ ನರಭಕ್ಷಕಗಳು ಯಾವುವು? ಇತ್ಯಾದಿ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು. 

ಇನ್ನೊಂದು ಮುಖ್ಯವಾದ ವಿಷಯವನ್ನು ನಾವು ನೆನಪಿಡಬೇಕು. ಅದೇನೆಂದರೆ ಶೇಕಡಾ ತೊಂಬತ್ತರಷ್ಟು ಸಂದರ್ಭಗಳಲ್ಲಿ ಪ್ರಾಣಿಯೊಂದು ನರಭಕ್ಷಕವಾಗಲು ಮನುಷ್ಯನೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣನಾಗಿರುತ್ತಾನೆ. ನರಭಕ್ಷಕಗಳ ಹೆಚ್ಚಿನೆಲ್ಲ ಸಂದರ್ಭಗಳಲ್ಲಿ ಇದು ಸಾಬೀತಾಗಿದೆ. ಇದನ್ನು ನರಭಕ್ಷಕಗಳ ಬೇಟೆಗಾರರು ಸಹ ಮತ್ತೆಮತ್ತೆ ಪ್ರತಿಪಾದಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಬೇಟೆಗಾರರು ಹುಲಿ, ಚಿರತೆಗಳಿಗೆ ಗುಂಡು ಹೊಡೆದಾಗ ಅವು ಸಂಪೂರ್ಣ ಸಾಯದೆ ಅರೆಪೆಟ್ಟಾಗಿ ತಪ್ಪಿಸಿಕೊಳ್ಳುತ್ತವೆ. ಅಂಥ ಗಾಯಗೊಂಡ ಪ್ರಾಣಿಯನ್ನು ಬೆನ್ನಟ್ಟಿ ಹೊಡೆಯುವ ಧೈರ್ಯ ಹೆಚ್ಚಿನ ಬೇಟೆಗಾರರಿಗೆ ಇರುವುದಿಲ್ಲ. ಹಾಗಾಗಿ ಗಾಯಗೊಂಡ ಆ ಹುಲಿ, ಚಿರತೆಗಳು ಕಾಡುಪ್ರಾಣಿಗಳನ್ನು ಹಿಡಿಯಲಾಗದೆ ನರಭಕ್ಷಕಗಳಾಗಿ ಬದಲಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ನೇರವಾಗಿ ನರಭಕ್ಷಣೆಗೆ ಆರಂಭಿಸುವುದಿಲ್ಲ. ಮೊದಲು ಜಾನುವಾರುಗಳನ್ನು ಹಿಡಿಯಲಾರಂಭಿಸುತ್ತವೆ. ಆಮೇಲೆ ಸಹಜವಾಗಿ ಜಾನುವಾರುಗಳನ್ನು ಕಾಯುವವನು ಅವುಗಳ ರಕ್ಷಣೆಗೆ ಮುಂದಾದಾಗ ಅವು ಅವನ ಮೇಲೆರಗುತ್ತವೆ. ನರಭಕ್ಷಕಗಳು ಹುಟ್ಟಿಕೊಳ್ಳುವುದೇ ಹೀಗೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ನರಭಕ್ಷಕನ ಕಥೆಗಳು ಅತಿಹೆಚ್ಚಾಗಿ ಇರುವುದು ಹುಲಿ ಮತ್ತು ಚಿರತೆಗಳ ಬಗೆಗೆ ಮಾತ್ರ. ಆಫ್ರಿಕದಲ್ಲಿ ನರಭಕ್ಷಕ ಸಿಂಹಗಳ ಪ್ರಸ್ತಾಪವೂ ಇದೆ. ನಮ್ಮಲ್ಲಿ ಸಹ ಕೆಲವು ತೋಳಗಳು ನರಭಕ್ಷಕಗಳಾಗಿದ್ದ ಸುದ್ದಿಗಳು ಇವೆಯಾದರೂ ಅವು ಚಿಕ್ಕಮಕ್ಕಳನ್ನು ಹೊತ್ತೊಯ್ದಿರಬಹುದೇ ವಿನಃ ಪ್ರೌಢಮನುಷ್ಯನೊಬ್ಬನನ್ನು ತೋಳವೊಂದು ಕೊಂದು ತಿಂದ ಉದಾಹರಣೆ ಇಲ್ಲವೇ ಇಲ್ಲ. 

ನಮ್ಮ ದೇಶದಲ್ಲಿ ಅತ್ಯಂತ ಕುಪ್ರಸಿದ್ಧವಾದ ನರಭಕ್ಷಕವೆಂದರೆ ರುದ್ರಪ್ರಯಾಗದ ನರಭಕ್ಷಕ ಚಿರತೆ. ಕ್ರಿ.ಶ.1918ರಿಂದ 1926ರವರೆಗೆ ಎಂಟು ವರ್ಷಗಳ ಕಾಲ ಇಡೀ ಉತ್ತರಭಾರತವನ್ನು ಭಯದ ಕಡಲಲ್ಲಿ ಮುಳುಗಿಸಿದ್ದ ಈ ನರಭಕ್ಷಕನನ್ನು ಕಟ್ಟಕಡೆಗೆ ಜಿಮ್ ಕಾರ್ಬೆಟ್ ಕೊಂದುಹಾಕಿದ. ಅವನ ಮಾತುಗಳಲ್ಲೇ ಕೇಳುವುದಾದರೆ ಈ ನರಭಕ್ಷಕ ರುದ್ರಪ್ರಯಾಗದ ತುಂಬಾ ಎಂಟು ವರ್ಷಗಳಕಾಲ ಯಾವ ಸರ್ಕಾರವೂ ಹೇರದಿದ್ದಂಥ ಅಘೋಷಿತ ನಿಷೇಧಾಜ್ಞೆ ಹೇರಿತ್ತು. ಒಂದುವೇಳೆ ಸರ್ಕಾರವೇ ನಿಷೇಧಾಜ್ಞೆ ಹೇರಿದ್ದರೂ ಜನ ಅದನ್ನು ಅಷ್ಟೊಂದು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ ಎಂಬುದು ಖಂಡಿತ ಎಂದು ಕಾರ್ಬೆಟ್ ಹೇಳುತ್ತಾನೆ. ಜಿಮ್ ಕಾರ್ಬೆಟ್ ಬರೆದಿರುವ “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಕೃತಿಯ ಕನ್ನಡಾನುವಾದ “ ರುದ್ರಪ್ರಯಾಗದ ಭಯಾನಕ ನರಭಕ್ಷಕ” ಓದಿದರೆ ಆ ನರಭಕ್ಷಕನ ಹಾವಳಿಗೆ ಉತ್ತರಭಾರತ ಹೇಗೆ ತತ್ತರಿಸಿತ್ತು ಎಂದು ತಿಳಿಯುತ್ತದೆ. ಇಪ್ಪತ್ತು-ಮೂವತ್ತರ ದಶಕದಲ್ಲಿ ಉತ್ತರಭಾರತದಲ್ಲಿ ಪಿಡುಗಾಗಿ ಹಬ್ಬಿದ್ದ ಭೀಕರ ಇನ್ ಫ್ಲುಯೆನ್ಜಾ ರೋಗದ ಸಂದರ್ಭದಲ್ಲೇ ಈ ಭಯಾನಕ ನರಭಕ್ಷಕ ಹುಟ್ಟಿಕೊಂಡಿತ್ತು. 

ಯಾವುದೇ ಪಿಡುಗಿನ ರೋಗ ಹಬ್ಬಿದರೆ ಜನ ಮೊದಲು ಒಬ್ಬಿಬ್ಬರಂತೆ ಸಾಯುತ್ತಾರೆ. ಆಮೇಲೆ ಪರಿಸ್ಥಿತಿ ನಿಯಂತ್ರಣ ಮೀರಿದರೆ ಜನ ನೂರಾರು-ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಾರೆ. ಆಗ ಅಂತ್ಯಸಂಸ್ಕಾರ ಮಾಡುವುದೂ ಕಷ್ಟವಾಗುತ್ತದೆ. ಹಾಗಾಗಿ ಜನ ಸತ್ತವರನ್ನು ಸುಮ್ಮನೆ ಬೆಟ್ಟದ ಮೇಲಿನಿಂದ ಕೆಳಗೆ ತಳ್ಳುತ್ತಾರೆ ಅಥವಾ ನದಿಗೆ ಎಸೆಯುತ್ತಾರೆ. ರುದ್ರಪ್ರಯಾಗದಲ್ಲಿ ಆಗಿದ್ದೂ ಇದೇ. ಬೆಟ್ಟದ ತುದಿಯಿಂದ ತಳ್ಳಲ್ಪಟ್ಟ ಶವಗಳು ಕಣಿವೆಯಲ್ಲಿದ್ದ ಪ್ರಾಣಿಗಳಿಗೆ ಆಹಾರವಾಗುತ್ತಿತ್ತು. ಹಾಗೆ ನರಭಕ್ಷಣೆಯನ್ನು ಆರಂಭಿಸಿದ ಚಿರತೆಯೊಂದು ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾಗಿ ಶವಗಳು ಸಿಗದಂತಾದಾಗ ನರಹತ್ಯೆಗೆ ಆರಂಭಿಸಿತು ಎಂದು ಕಾರ್ಬೆಟ್ ಈ ನರಭಕ್ಷಕ ಹುಟ್ಟಿದ ಸಂದರ್ಭವನ್ನು ವಿವರಿಸುತ್ತಾರೆ.

ನರಭಕ್ಷಕಗಳು ಹುಟ್ಟಿಕೊಳ್ಳಲು ಈ ಮೊದಲೇ ಹೇಳಿದಂತೆ ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯರೇ ಕಾರಣರಾಗಿರುತ್ತಾರೆ. ಆದರೆ ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಒಮ್ಮೊಮ್ಮೆ ಹುಲಿ-ಚಿರತೆಗಳು ಪರಸ್ಪರ ಕಾದಾಟದಲ್ಲಿ ಗಾಯಗೊಂಡು ಬೇಟೆಯಾಡಲಾರದಷ್ಟು ನಿತ್ರಾಣ ಸ್ಥಿತಿಗೆ ತಲುಪಿ ನರಭಕ್ಷಣೆ ಆರಂಭಿಸುವುದೂ ಇದೆ. ಇನ್ನು ಕೆಲವೊಮ್ಮೆ ಮುಳ್ಳುಹಂದಿಗಳನ್ನು ಹಿಡಿಯಲು ಹೋಗಿ ಹುಲಿಗಳು ಕಣ್ಣು, ಕಿವಿ ಕಳೆದುಕೊಳ್ಳುವುದಿದೆ. ಜಿಮ್ ಕಾರ್ಬೆಟ್ ಅಂಥ ಅನೇಕ ಹುಲಿಗಳನ್ನು ಕೊಂದಿದ್ದಾರೆ. ಇನ್ನು ಕೆಲವೊಮ್ಮೆ ಕಾಟಿಗಳನ್ನು ಹಿಡಿಯಲು ಹೋದಾಗ ಅವುಗಳ ತಿವಿತದಿಂದ ಗಾಯಗೊಳ್ಳುವುದೂ ಇದೆ. ಇಂಥ ಸಂದರ್ಭಗಳಲ್ಲಿ ಹೊಟ್ಟೆ ಹೊರೆಯಲು ಅವುಗಳಿಗೆ ನರಭಕ್ಷಣೆ ಅನಿವಾರ್ಯವಾಗುತ್ತದೆ.

ಇಂಥ ಹುಲಿ-ಚಿರತೆಗಳು ನರಭಕ್ಷಕಗಳಾಗಲು ಮನುಷ್ಯನ ದೈಹಿಕ ದೌರ್ಬಲ್ಯವೂ ಒಂದು ಮುಖ್ಯ ಕಾರಣ. ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮಾನವ ದೈಹಿಕವಾಗಿ ತುಂಬಾ ದುರ್ಬಲ ಎಂಬುದರಲ್ಲಿ ಅನುಮಾನವೇ ಇಲ್ಲ. ಜಿಂಕೆಗಳಂತೆ ಮಿಂಚಿನ ವೇಗದ ಓಟವಾಗಲೀ ಆನೆ, ಕಾಟಿಗಳಂಥ ದೈತ್ಯಶಕ್ತಿಯಾಗಲೀ ಅಥವಾ ಮುಳ್ಳುಹಂದಿಗಳಂಥ ಅಭೇದ್ಯ ರಕ್ಷಾಕವಚವಾಗಲೀ ಮನುಷ್ಯನಿಗೆ ಇಲ್ಲ. ಆದ್ದರಿಂದ ಮನುಷ್ಯ ಯಾವುದೇ ಬೇಟೆಗಾರ ಪ್ರಾಣಿಗೂ ಸುಲಭದ ತುತ್ತು. ಆದ್ದರಿಂದಲೇ ಒಮ್ಮೆ ಮನುಷ್ಯನನ್ನು ಕೊಂದು ತಿನ್ನುವ ಪ್ರಾಣಿ ಖಾಯಂ ನರಭಕ್ಷಕನಾಗುವುದೇ ಹೊರತು ನರರಕ್ತದ ರುಚಿ ನೋಡಿದ ಮೇಲೆ ಮನುಷ್ಯರನ್ನೇ ಬಯಸುತ್ತದೆ ಎಂಬುದು ಸತ್ಯವಲ್ಲ. ವಾಸ್ತವವಾಗಿ ಮಾರ್ಜಾಲಗಳ ನಾಲಿಗೆಗೆ ರುಚಿಗ್ರಹಣ ಶಕ್ತಿಯೇನೂ ಇಲ್ಲ. ಅವು ಯಾವುದೇ ಒಂದು ಜೀವಿಯ ಮಾಂಸಕ್ಕಾಗಿ ಹಾತೊರೆಯುವುದೂ ಇಲ್ಲ. ಸುಲಭವಾಗಿ ಸಿಕ್ಕಿದ್ದನ್ನು ತಿನ್ನುತ್ತವೆ ಅಷ್ಟೆ. ಮನುಷ್ಯ ಬೇರಾವುದೇ ಜೀವಿಗಿಂತ ಸುಲಭದ ತತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಜಿಂಕೆಗಳ ಮಿಂಚಿನ ಓಟವಾಗಲೀ ಆನೆ, ಕಾಟಿಗಳ ದೈಹಿಕ ಬಲವಾಗಲೀ ಮುಳ್ಳುಹಂದಿ, ಚಿಪ್ಪುಹಂದಿಗಳಂತೆ ರಕ್ಷಾಕವಚವಾಗಲೀ ಇಲ್ಲದ ಕಾರಣ ಮನುಷ್ಯ ಯಾವುದೇ ಬೇಟೆಗಾರನಿಗೆ ಸುಲಭದ ತುತ್ತು. ಹಾಗಾಗಿ ಹುಲಿ, ಚಿರತೆಗಳು ಸಹ ಒಮ್ಮೆ ನರಭಕ್ಷಣೆಗೆ ಇಳಿದರೆ ಅದನ್ನೇ ಮುಂದುವರೆಸುತ್ತವೆ. ಆದರೆ ನರಭಕ್ಷಕ ಹುಲಿಗಳಾಗಲೀ ಚಿರತೆಗಳಾಗಲೀ ಭಯಾನಕ ಪಿಶಾಚಿಗಳೆಂಬಂತೆ ವರ್ಣಿಸುವುದನ್ನು ಜಿಮ್ ಕಾರ್ಬೆಟ್ ಮತ್ತು ಕೆನ್ನೆತ್ ಆ್ಯಂಡರ್ಸನ್ ಇಬ್ಬರೂ ಒಪ್ಪುವುದಿಲ್ಲ. ರುದ್ರಪ್ರಯಾಗದ ನರಭಕ್ಷಕನನ್ನು ಕೊಂದ ಮೇಲೆ ಕಾರ್ಬೆಟ್ ಹೇಳುತ್ತಾನೆ “ಸತ್ತ ಆ ಚಿರತೆಯ ಮುಖದಲ್ಲಿ ಯಾವ ಪೈಶಾಚಿಕತೆಯನ್ನೂ ನಾನು ಕಾಣಲಿಲ್ಲ. ಇತರೆಲ್ಲ ಚಿರತೆಗಳಂತೆ ಅದೂ ಒಂದು ಸರ್ವೇಸಾಧಾರಣವಾದ ಚಿರತೆಯಾಗಿತ್ತು ಅಷ್ಟೆ. ಅದು ಮಾಡಿದ ಒಂದೇ ತಪ್ಪೆಂದರೆ ಪ್ರಾಣಿಗಳಿಂದ ಮನುಷ್ಯರಿಗೆ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಂಡಿದ್ದು. ಅದೇನೂ ದೈವನಿಯಮಕ್ಕೆ ವಿರುದ್ಧವಾಗಿರಲಿಲ್ಲ, ಆದರೆ ಅದು ಮಾನವರಿಗೆ ಅಪಥ್ಯವಾಗಿತ್ತು ಅಷ್ಟೆ” ಎನ್ನುತ್ತಾನೆ.

ದೊಡ್ಡ ಬೆಕ್ಕುಗಳ ವಿಷಯಕ್ಕೆ ಬಂದರೆ ಹುಲಿ, ಚಿರತೆಗಳಷ್ಟೇ ಸುಪ್ರಸಿದ್ಧವಾದ ಇನ್ನೊಂದು ದೊಡ್ಡ ಬೆಕ್ಕೆಂದರೆ ಸಿಂಹ. ನಮ್ಮ ದೇಶದಲ್ಲೀಗ ಸಿಂಹಗಳು ಎಂಥ ದುಃಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ಗೊತ್ತು. ಗುಜರಾತಿನ ಗಿರ್ ಅರಣ್ಯವನ್ನು ಹೊರತುಪಡಿಸಿದರೆ ಬೇರೆಲ್ಲೂ ಸಿಂಹಗಳು ಕಾಡಿನಲ್ಲಿ ಅಸ್ತಿತ್ವದಲ್ಲಿಲ್ಲ. ಹಾಗಾಗಿ ನರಭಕ್ಷಕ ಸಿಂಹಗಳು ಎಂಬುದು ನಮ್ಮ ದೇಶದಲ್ಲಿ ಕಂಡುಕೇಳರಿಯದ ಸಂಗತಿ. ಆದರೆ ಆಫ್ರಿಕಾದಲ್ಲಿ ನರಭಕ್ಷಕ ಸಿಂಹಗಳು ಈಗಲೂ ಆಗೀಗ ಕಾಣಿಸಿಕೊಳ್ಳುವುದಿದೆ. ಇಂದಿನ ದಿನಗಳಲ್ಲಿ ನರಭಕ್ಷಕಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪವಾಗಿದ್ದರೂ 1898ರಲ್ಲಿ ಕೀನ್ಯಾ ಮತ್ತು ಉಗಾಂಡಾದ ರೈಲ್ವೇ ಹಳಿಗಳ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ದುಃಸ್ವಪ್ನವಾಗಿದ್ದ ಎರಡು ಬೃಹತ್ ನರಭಕ್ಷಕ ಸಿಂಹಗಳು ಕುಪ್ರಸಿದ್ಧವಾಗಿದ್ದವು. ಕೇಸರರಹಿತವಾಗಿದ್ದ ಈ ಎರಡೂ ಗಂಡುಸಿಂಹಗಳು 1898ರ ಮಾರ್ಚ್ ತಿಂಗಳಿನಿಂದ ಡಿಸೆಂಬರ್ ತಿಂಗಳ ತನಕ ನರಭಕ್ಷಣೆಯಿಂದಾಗಿ ಇಡೀ ಸಾವೋ ನದಿಯ ಬಳಿ ಕೆಲಸ ಮಾಡುತ್ತಿದ್ದ ರೈಲ್ವೆ ಹಳಿ ಕೆಲಸಗಾರರಿಗೆ ಸಿಂಹಸ್ವಪ್ನವಾಗಿದ್ದವು. ಈ ಎರಡು ಬೃಹತ್ ಮಾರ್ಜಾಲಗಳನ್ನು ಕೊಟ್ಟಕೊನೆಗೆ ಲೆಫ್ಟಿನೆಂಟ್ ಕರ್ನಲ್ ಜಾನ್ ಹೆನ್ರಿ ಪ್ಯಾಟರ್ಸನ್ ಎಂಬಾತ ಕೊಂದುಹಾಕಿದ. 1898ರ ಡಿಸೆಂಬರ್ 9ರಂದು ಮೊದಲ ಸಿಂಹವನ್ನು ಕೊಂದ. ಮೂಗಿನ ತುದಿಯಿಂದ ಬಾಲದ ತುದಿಯವರೆಗೆ ಒಂಬತ್ತು ಅಡಿ ಎಂಟು ಅಂಗುಲ ಉದ್ದವಿದ್ದ ಈ ಭಾರೀ ಸಿಂಹವನ್ನು ಹೊತ್ತೊಯ್ಯಲು ಎಂಟು ಜನ ಬೇಕಾಯಿತು. ಇಪ್ಪತ್ತು ದಿನಗಳ ತರುವಾಯ ಎರಡನೇ ಸಿಂಹವನ್ನು ಸಹ ಕೊಲ್ಲಲಾಯಿತು. ಕೆಲಸಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪ್ರತಿ ನರಭಕ್ಷಕನ ಜನನಕ್ಕೂ ಒಂದು ಕಾರಣವಿರುತ್ತದೆ. ಅದೇ ರೀತಿ ಈ ನರಭಕ್ಷಕಗಳ ಜನನಕ್ಕೂ ಏನಾದರೊಂದು ಕಾರಣವಿರಬೇಕೆಂದು ಅದರ ಬಗೆಗೆ ಸಂಶೋಧನೆ ನಡೆಸಲಾಯಿತು. ಅವುಗಳ ಪೈಕಿ ಒಂದರ ಹಲ್ಲೊಂದು ಮುರಿದಿದ್ದರಿಂದ ಮೊದಲಿಗೆ ಅದೇ ಕಾರಣವಿರಬೇಕೆಂದು ಊಹಿಸಲಾಗಿತ್ತಾದರೂ ನಂತರ ಪ್ಯಾಟರ್ಸನ್ ಅದನ್ನು ಕೊಲ್ಲುವಾಗ ಆ ಹಲ್ಲು ಮುರಿದದ್ದೆಂದು ತಿಳಿದುಬಂದಿತು. ಕೊನೆಗೂ ಅವು ಯಾಕೆ ನರಭಕ್ಷಕಗಳಾದವೆಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲಿಲ್ಲ. ಬಹುಶಃ ಎಲ್ಲೋ ಎಸೆದಿದ್ದ ಮನುಷ್ಯರ ಶವಗಳನ್ನು ತಿಂದಿರಬೇಕೆಂದು ಒಂದು ಊಹೆ ಅಷ್ಟೆ.

ಯಾವುದೇ ಪ್ರಾಣಿಯಾದರೂ ನರಭಕ್ಷಕವಾದ ಕೂಡಲೇ ಅದರ ಸ್ವಭಾವದಲ್ಲಿ ಅಸಾಧಾರಣ ಬದಲಾವಣೆಗಳನ್ನು ಕಾಣಬಹುದು. ಇದು ಯಾವ ಪ್ರಾಣಿಗೂ ಹೊರತಲ್ಲ. ಎಲ್ಲ ಪ್ರಾಣಿಗಳೂ ಸಹಜವಾಗಿಯೇ ಮನುಷ್ಯರ ಬಗೆಗೆ ಭಯ ಹೊಂದಿರುತ್ತವೆ. ಸಾಮಾನ್ಯವಾಗಿ ಚಿರತೆಗಳು ನರಭಕ್ಷಕಗಳಾದ ಮೇಲೂ ಈ ಭಯವನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ, ಆದರೆ ಹುಲಿಗಳು ಒಮ್ಮೆ ನರಭಕ್ಷಕಗಳಾದ ಕೂಡಲೇ ಮನುಷ್ಯರ ಬಗೆಗಿನ ಭಯವನ್ನು ಕಳೆದುಕೊಳ್ಳುತ್ತವೆ. ಆದರೆ ಇದನ್ನು ಇದಮಿತ್ಥಂ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯರಂತೆಯೇ ಹುಲಿ, ಚಿರತೆಗಳಲ್ಲಿ ಸಹ ವೈಯಕ್ತಿಕ ವ್ಯತ್ಯಾಸಗಳನ್ನು ಕಾಣಬಹುದು. ಹಾಗಾಗಿ ಕೆಲವು ಅಸಾಧಾರಣ ಧೈರ್ಯಶಾಲಿ ಚಿರತೆಗಳನ್ನೂ ಅಷ್ಟೇ ಪುಕ್ಕಲ ಹುಲಿಗಳನ್ನೂ ಕಾಣಬಹುದು.

ನರಭಕ್ಷಕ ಚಿರತೆಗಳು ನರಭಕ್ಷಕ ಹುಲಿಗಳಿಗಿಂತ ಅಪಾಯಕಾರಿ ಎಂಬ ಮಾತಿದೆ. ಇದಕ್ಕೆ ಕಾರಣವೆಂದರೆ ಚಿರತೆಗಳ ಅಪಾರವಾದ ಕುಶಾಗ್ರಮತಿ. ಹುಲಿಗಳಿಗಿಂತ ಗಾತ್ರದಲ್ಲಿ ಮತ್ತು ತೂಕದಲ್ಲಿ ಸಹ ಚಿಕ್ಕದಾದ ಕಾರಣ ಚಿರತೆ ಹುಲಿಗಿಂತ ನಿಶ್ಶಬ್ದವಾಗಿ ಮತ್ತು ಯಾರ ಗಮನಕ್ಕೂ ಬಾರದೆ ಸಂಚರಿಸಬಲ್ಲದು. ಹುಲಿಗಳು ನರಭಕ್ಷಕಗಳಾದ ಮೇಲೆ ಒಂದು ನಿಶ್ಚಿತವಾದ “ಬೀಟ್” ಅನ್ನು ಪಾಲಿಸುತ್ತವೆ. ಅಂದರೆ ಅವುಗಳ ಕಾರ್ಯಾಚರಣೆ ಒಂದು ಗೊತ್ತಾದ ವಲಯದಲ್ಲಿರುತ್ತದೆ. ಅಂದರೆ ಅದು ಒಂದು ಗೊತ್ತಾದ ವಲಯದಲ್ಲಿ ಸಂಚರಿಸುತ್ತದೆ. ಆ ವಲಯವನ್ನು ಅಭ್ಯಾಸ ಮಾಡುವುದರಿಂದ ಹುಲಿಯ ಚಲನವಲನಗಳ ಬಗೆಗೆ ಮಾಹಿತಿ ಸಂಗ್ರಹಿಸಬಹುದು. ಹಾಗಾಗಿ ಗೊತ್ತಾದ ಕಡೆಗಳಲ್ಲಿ ಕಾವಲು ಕಾಯುವ ಮೂಲಕ ಹುಲಿಗಳನ್ನು ಬೇಟೆಯಾಡುವುದು ಸುಲಭ. ಆದರೆ ಚಿರತೆಗಳು ಈ ರೀತಿ ಒಂದು ಗೊತ್ತಾದ ಮಾರ್ಗವನ್ನು ಅನುಸರಿಸುವುದಿಲ್ಲ. ಇವತ್ತು ಇಲ್ಲಿದ್ದರೆ ನಾಳೆ ಇನ್ನೊಂದೆಡೆ, ನಾಡಿದ್ದು ಮತ್ತೆಲ್ಲೋ ಇರುತ್ತದೆ. ಆದ್ದರಿಂದಲೇ ಚಿರತೆಯನ್ನು ಬೇಟೆಯಾಡುವುದು ಬಹಳ ಕಷ್ಟ. ಜೊತೆಗೆ ಹುಲಿಗಳು ಹಗಲಿನಲ್ಲೂ ನರಬೇಟೆ ಆಡುತ್ತವೆ, ಆದರೆ ಚಿರತೆಗಳ ಕಾರ್ಯಾಚರಣೆಯೇನಿದ್ದರೂ ರಾತ್ರಿವೇಳೆ ಮಾತ್ರ. 

ಭಾರತದಲ್ಲಿ ನರಭಕ್ಷಕಗಳ ಬೇಟೆಯಲ್ಲಿ ಪ್ರಸಿದ್ಧರಾದವರು ಇಬ್ಬರು ವ್ಯಕ್ತಿಗಳು. ಉತ್ತರಭಾರತದಲ್ಲಿ ಜಿಮ್ ಕಾರ್ಬೆಟ್ ಮತ್ತು ದಕ್ಷಿಣ ಭಾರತದಲ್ಲಿ ಕೆನ್ನೆತ್ ಆ್ಯಂಡರ್ಸನ್. ತಮ್ಮ ಅನುಭವಗಳನ್ನು ಇಬ್ಬರೂ ಕಥೆಗಳನ್ನಾಗಿ ದಾಖಲಿಸಿದ್ದಾರೆ. ಒಂದಕ್ಕಿಂತ ಒಂದು ರೋಚಕ ಕಥಾನಕಗಳು ಅವು. ದಕ್ಷಿಣ ಭಾರತದಲ್ಲಿ ಸಹ ಕೊಡಗಿನಲ್ಲಿ ಅನೇಕ ಜನ ಹುಲಿಯ ಬೇಟೆಯಾಡಿದ ಸಾಹಸಿಗಳಿದ್ದಾರೆ. ಸಾಮಾನ್ಯವಾಗಿ ಅವರು ಹುಲಿ, ಚಿರತೆಗಳನ್ನು ಕ್ರಮವಾಗಿ ಪಟ್ಟೆಹುಲಿ ಮತ್ತು ಚಿಟ್ಟೆಹುಲಿ ಎಂಬ ಹೆಸರುಗಳಿಂದ ಕರೆಯುತ್ತಾರೆ. 

ಹುಲಿ ಮತ್ತು ಚಿರತೆಗಳಲ್ಲದೆ ನರಭಕ್ಷಕಗಳೆನ್ನಿಸಿಕೊಂಡ ಇನ್ನೂ ಅನೇಕ ಪ್ರಾಣಿಗಳಿವೆಯಾದರೂ ಅವು ಅಷ್ಟೊಂದು ಪ್ರಸಿದ್ಧವಾಗಿಲ್ಲ. ವಾಸ್ತವವಾಗಿ ಯಾವುದೇ ಪ್ರಾಣಿಯಾದರೂ ಉದ್ದೇಶಪೂರ್ವಕವಾಗಿ ಮನುಷ್ಯರನ್ನು ಹಿಡಿದು ತಿನ್ನುವುದಿಲ್ಲ. ಆಕಸ್ಮಿಕವಾಗಿ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ನರಭಕ್ಷಕಗಳಾಗುತ್ತವೆ. ನಂತರ ಅದನ್ನು ಅಭ್ಯಾಸಮಾಡಿಕೊಳ್ಳುತ್ತವೆ. ಆದರೆ ಹೆಚ್ಚಿನ ಪ್ರಾಣಿಗಳು ಆಕಸ್ಮಿಕವಾಗಿ ನರಮಾಂಸ ಭಕ್ಷಿಸಿದರೂ ಖಾಯಂ ನರಭಕ್ಷಕಗಳಾಗುವುದೇ ಇಲ್ಲ. ಉದಾಹರಣೆಗೆ ಶಾರ್ಕ್ ಮೀನುಗಳ ಬಗೆಗೆ ಮನುಷ್ಯರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಶಾರ್ಕ್ ಗಳು ಭಯಾನಕ ನರಭಕ್ಷಕಗಳು ಎಂಬ ಕಲ್ಪನೆಯಿದೆ. ವಾಸ್ತವವಾಗಿ ಮನುಷ್ಯರಿಗೆ ಮಾರಣಾಂತಿಕವಾದ ಶಾರ್ಕ್ ಪ್ರಭೇದಗಳು ಕೇವಲ ನಾಲ್ಕು ಮಾತ್ರ. ನಾಲ್ಕುನೂರಕ್ಕೂ ಹೆಚ್ಚಿನ ಶಾರ್ಕ್ ಪ್ರಭೇದಗಳ ಪೈಕಿ ದಿ ಗ್ರೇಟ್ ವೈಟ್ ಶಾರ್ಕ್, ದಿ ಬುಲ್ ಶಾರ್ಕ್, ದಿ ಟೈಗರ್ ಶಾರ್ಕ್ ಮತ್ತು ದಿ ವೈಟ್ ಟಿಪ್ ಶಾರ್ಕ್ ಇವು ಮಾತ್ರ ಮನುಷ್ಯರಿಗೆ ಮಾರಕವಾಗಿವೆ. ಅದೂ ಸಾಮಾನ್ಯ ಸಂದರ್ಭಗಳಲ್ಲಿ ಅವು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಮನುಷ್ಯರನ್ನು ಗುರುತಿಸಿದರೆ ಅವು ಎಂದೂ ದಾಳಿ ನಡೆಸುವುದೇ ಇಲ್ಲ. ಒಮ್ಮೊಮ್ಮೆ ಮನುಷ್ಯರನ್ನು ಗುರುತಿಸದೆ ಯಾವುದೋ ಮೀನು ಅಥವಾ ಬೇರೆ ಜೀವಿಯಿರಬೇಕೆಂದುಕೊಂಡು ದಾಳಿ ಮಾಡುತ್ತದೆಯೇ ಹೊರತು ಮನುಷ್ಯರನ್ನು ಕೊಂದುತಿನ್ನುವ ಉದ್ದೇಶದಿಂದ ಯಾವತ್ತೂ ದಾಳಿ ಮಾಡುವುದಿಲ್ಲ. ಶಾರ್ಕ್ ಗಳ ದಾಳಿಯ ಕುರಿತಾದ ಅತಿರಂಜಿತ ಕಥೆಗಳೆಲ್ಲ ಕೇವಲ ಕಟ್ಟುಕಥೆಗಳಲ್ಲದೆ ವಾಸ್ತವವಂತೂ ಅಲ್ಲವೇ ಅಲ್ಲ.

ನರಭಕ್ಷಕಗಳಾಗಿ ಹೆಸರಾಗಿರುವ ಇನ್ನಿತರ ಜೀವಿಗಳೆಂದರೆ ಅಲಾಸ್ಕಾದ ಕಂದು ಕರಡಿ, ಉಪ್ಪುನೀರಿನ ಮೊಸಳೆ, ನೈಲ್ ನ       ದಿಯ ಮೊಸಳೆ, ಅಮೆರಿಕದ ಪ್ಯೂಮಾ ಆಫ್ರಿಕದ ಕತ್ತೆಕಿರುಬಗಳು, ತೋಳಗಳು ಇತ್ಯಾದಿಗಳೆಲ್ಲ ಆಗೀಗ ಮನುಷ್ಯರನ್ನು ಕೊಂದುತಿಂದ ಉದಾಹರಣೆಗಳಿವೆಯಾದರೂ ಅವುಗಳ ಪೈಕಿ ಮೊಸಳೆಗಳನ್ನು ಹೊರತುಪಡಿಸಿದರೆ ಇನ್ನೆಲ್ಲವೂ ಮನುಷ್ಯರನ್ನು ಕಂಡರೆ ದೂರವೇ ಇರಲು ಬಯಸುತ್ತವೆ. ಆದ್ದರಿಂದ ಅವು ನರಭಕ್ಷಕಗಳಾಗುವುದು ಆಕಸ್ಮಿಕ ಕಾರಣಗಳಿಂದ. ಆದರೆ ಮೊಸಳೆಗಳು ತುಂಬಾ ಅಪಾಯಕಾರಿಗಳಾದ ಜೀವಿಗಳೇ ಸರಿ. ಅವು ಮನುಷ್ಯರನ್ನು ಕಂಡೊಡನೆ ಹೆದರಿ ಓಡಿಹೋಗುವುದೂ ಇಲ್ಲ. ಆದರೆ ಎಲ್ಲ ಮೊಸಳೆಗಳೂ ಇದೇ ರೀತಿ ಅಪಾಯಕಾರಿಯಲ್ಲ. ನೈಲ್ ನದಿಯ ಮೊಸಳೆ ಮತ್ತು ಉಪ್ಪುನೀರಿನ ಮೊಸಳೆಗಳಷ್ಟೇ ಅಪಾಯಕಾರಿಗಳೆನ್ನಬಹುದು.

ಇಂದಿನ ದಿನಗಳಲ್ಲಿ ಸಹ ನಾವು ಆಗೀಗ ನರಭಕ್ಷಕ ಹುಲಿ, ಚಿರತೆಗಳ ಸುದ್ದಿಯನ್ನು ಕೇಳುತ್ತಿರುತ್ತೇವೆ. ಆದರೆ ಅದರಲ್ಲಿ ಮನುಷ್ಯನೇ ಅದಕ್ಕೆ ಹೊಣೆಯಾಗಿರುವುದು ಸುಸ್ಪಷ್ಟ. ಏಕೆಂದರೆ ಊರಿಗೆ ನುಗ್ಗಿದ ಹುಲಿ ಅಥವಾ ಚಿರತೆಯನ್ನು ಕಂಡು ಗಾಬರಿಯಿಂದ ಬೊಬ್ಬೆ ಹಾಕುತ್ತ ಅವುಗಳನ್ನು ಬೆನ್ನಟ್ಟುವುದು, ಕಲ್ಲು ಹೊಡೆಯುವುದು ಇತ್ಯಾದಿ ಮಾಡುತ್ತಾರೆ. ಆದ್ದರಿಂದ ಅವು ಗಾಬರಿಗೊಂಡು ಅಡ್ಡಾದಿಡ್ಡಿ ಓಡಾಡುತ್ತ ಸಿಕ್ಕಸಿಕ್ಕವರ ಮೇಲೆಲ್ಲ ದಾಳಿ ಮಾಡುತ್ತದೆ. ಆದರೆ ವಾಸ್ತವವಾಗಿ ಅವಕ್ಕೆ ಮನುಷ್ಯರ ಮೇಲೆ ಯಾವ ಕೋಪವೂ ಇಲ್ಲ. ಇನ್ನೊಂದು ವಿಷಯ, ಕ್ಷಣಾರ್ಧದಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮನುಷ್ಯರನ್ನು ಕೊಲ್ಲುವ ಪ್ರಾಣಿಗಳಾವುವೂ ನರಭಕ್ಷಕ ಆಗುವುದಿಲ್ಲ. ಆದರೆ ಒಮ್ಮೊಮ್ಮೆ ವಿನಾಕಾರಣ ಅವುಗಳ ಮೇಲೆ ನರಭಕ್ಷಕ ಎಂಬ ಹಣೆಪಟ್ಟಿ ಅಂಟಿಸುವ ಸಾಧ್ಯತೆಗಳೂ ಇಲ್ಲದಿಲ್ಲ.

ಮನುಷ್ಯ-ವನ್ಯಜೀವಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಮಿತಿಮೀರಿದ ಅರಣ್ಯನಾಶದಿಂದಾಗಿ ಕ್ಷೀಣಿಸುತ್ತಿರುವ ಆವಾಸಸ್ಥಾನ, ಕಳ್ಳಬೇಟೆಯಿಂದಾಗಿ ಬಲಿಪ್ರಾಣಿಗಳ ಕೊರತೆ ಇತ್ಯಾದಿ ಕಾರಣಗಳಿಂದಾಗಿ ಹುಲಿ, ಚಿರತೆಗಳು ನಗರಗಳಿಗೆ ನುಗ್ಗುತ್ತವೆ. ಅಂಥ ಸಂದರ್ಭದಲ್ಲಿ ಅವುಗಳಿಗೆ ಗಾಬರಿ ಉಂಟುಮಾಡದೆ ಅವುಗಳ ಪಾಡಿಗೆ ಬಿಡುವುದೇ ಅತ್ಯುತ್ತಮ ಉಪಾಯ. ಆದರೆ ಜನ ಅದನ್ನು ಮಾಡುತ್ತಿಲ್ಲ. ಸುಮ್ಮನೆ ಆತ್ಮರಕ್ಷಣೆಗಾಗಿ ತಮ್ಮ ಮೇಲೆ ದಾಳಿ ಮಾಡಿದ ಪ್ರಾಣೀಗಳಿಗೆಲ್ಲ ನರಭಕ್ಷಕ ಎಂಬ ಹಣೆಪಟ್ಟಿ ಹಚ್ಚುವುದು ಸರಿಯಲ್ಲ.

ಇನ್ನು ಹಾವು, ಹಲ್ಲಿಗಳ ವಿಷಯಕ್ಕೆ ಬಂದರೆ ಅಮೆಜಾನ್ ಕಾಡುಗಳ ನಿವಾಸಿ ಅನಕೊಂಡಾ ಸರ್ಪ ಮತ್ತು ಕೊಮೋಡೋ ದ್ವೀಪದ ನಿವಾಸಿ ಕೊಮೋಡೋ ಡ್ರ್ಯಾಗನ್ ಗಳಿಗೆ ನರಭಕ್ಷಕ ಎಂಬ ಕುಖ್ಯಾತಿ ಇದೆ. ಆದರೆ ಅನಕೊಂಡಾಗಳು ನರಭಕ್ಷಕಗಳು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಅವುಗಳನ್ನು ಆಧರಿಸಿ ಅನಕೊಂಡಾ ಎಂಬ ಮೂರು ಭಾಗಗಳ ಚಲನಚಿತ್ರವೇ ಬಂದಿತು. ಆದರೆ ಆ ಚಲನಚಿತ್ರದಲ್ಲಿ ತೋರಿಸಲಾದ ಭಾರೀ ಸರ್ಪವು ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲ. ಅನಕೊಂಡಾವು ಮೊಸಳೆಗಳನ್ನೂ ಸಹ ನುಂಗುವ ಭಾರೀ ಸರ್ಪವೆಂಬುದೇನೋ ನಿಜ, ಆದರೆ ಅವು ಮನುಷ್ಯರನ್ನೂ ನುಂಗುತ್ತವೆ ಎಂಬುದು ಮಾತ್ರ ಕಟ್ಟುಕಥೆಯೇ ಹೊರತು ನಿಜವಲ್ಲ. ಆದರೆ ಕೊಮೋಡೋ ಡ್ರ್ಯಾಗನ್ ಗಳು ಅಪರೂಪಕ್ಕೆ ಮಾನವನ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಉದಾಹರಣೆಯಿದೆ.

ಒಟ್ಟಾರೆ ಹೇಳಬೇಕೆಂದರೆ ನರಭಕ್ಷಕ ಪ್ರಾಣಿಗಳು ಯಾವತ್ತೂ ಮಾನವನ ಮೇಲೆ ದ್ವೇಷದಿಂದ ದಾಳಿಮಾಡುವುದಲ್ಲ, ಅದಕ್ಕೆ ಕಾರಣಗಳೇನೆಂದು ತಿಳಿದು ಅವುಗಳನ್ನು ಕೊಲ್ಲದೇ ಸಮಸ್ಯೆಯನ್ನು ನಿವಾರಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಬೇರೆ ದಾರಿಯೇ ಇಲ್ಲವೆಂದಾಗ ಮಾತ್ರ ಅದನ್ನು ಕೊಲ್ಲಬೇಕು. ಕನಿಷ್ಠ ಅವು ನರಭಕ್ಷಕಗಳಾಗಬಹುದಾದಂಥ ಸನ್ನಿವೇಶಗಳಲ್ಲಿ ಇರಬಹುದಾದ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು. ಅಲ್ಲವೇ?

Category:Nature



ProfileImg

Written by Srinivasa Murthy

Verified