ಭಾಷೆ - ಅರ್ಥ, ವ್ಯಾಖ್ಯೆ, ಸ್ವರೂಪ, ಪ್ರಯೋಜನ

ಕನ್ನಡ ಭಾಷೆ ವಿಜ್ಞಾನ

ProfileImg
01 Feb '24
7 min read


image

1. ಭಾಷೆ - ಅರ್ಥ, ವ್ಯಾಖ್ಯೆ, ಸ್ವರೂಪ, ಪ್ರಯೋಜನ.

ಮಾನವನಿಗೆ ತನ್ನ ಅಂತ:ಸತ್ವವನ್ನು ತೋರಿಸದೆ ಗೌಪ್ಯವಾಗಿಟ್ಟುಕೊಂಡ ಪ್ರಪಂಚದ ಅನೇಕ ಸತ್ವಗಳಲ್ಲಿ ಬಹುಶಃ ಭಾಷೆ ಮೊದಲನೆಯದೆನ್ನಬೇಕು. ಭಾಷೆ ಎಂದರೇನು?ಎಂಬ ಪ್ರಶ್ನೆಗೆ ಸೂತ್ರರೂಪದಲ್ಲಿ  ಒಂದು ಖಚಿತವಾದ ಉತ್ತರವನ್ನು ಹೇಳುವುದು ಕಷ್ಟ ಸಾಧ್ಯ. ಭಾಷೆಯ ಸ್ವರೂಪ ಕುರಿತ ವ್ಯಾಖ್ಯೆಯನ್ನು  ಒಂದು ಸೂತ್ರರೂಪದಲ್ಲಿ ಹಿಡಿದಿಡುವ ಅನೇಕ ಪ್ರಯತ್ನಗಳು ಬಹುಕಾಲದಿಂದ ನಡೆದಿದ್ದರೂ, ಈ ತನಕ ಯಾವೊಂದು  ಪ್ರಯತ್ನವೂ ಭಾಷೆಯ ನಿಜವಾದ ಅರ್ಥವನ್ನು ವಿವರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಕಾಲದಿಂದಲೂ ನಡೆದಿವೆ. ಆದರೂ ಈ ತನಕ ಯಾವೊಂದು ಪ್ರಯತ್ನವೂ ಭಾಷೆಯ ಅರ್ಥವನ್ನು ವಿವರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ,

ಯಾವ ಭಾಷಾ ವಿಜ್ಞಾನಿಗೂ ಭಾಷೆಯ ಅಂತರಂಗವನ್ನು ಭೇದಿಸಿ ಒಳಹೊಕ್ಕು ಅದರ ಅಂತಸತ್ವವನ್ನು ಹೊರಗೆಡಹಲಾಗಿಲ್ಲ. ಚಿರಪರಿಚಿತವಾದ ಒಂದು ಮೂರ್ತ ವಸ್ತುವಿನ ಅಥವಾ ಪದದ ಅರ್ಥವನ್ನು ಹೇಳುವುದೇ ಬಹು ಪ್ರಯಾಸದ ಕೆಲಸವಾಗಿರುವಾಗ, ಇನ್ನು  ಇನ್ನು ಭಾಷೆಯಂತಹ ಮೂರ್ತ ಪದದ ಸ್ವರೂಪವನ್ನು ಒಂದು ಸೂತ್ರ ರೂಪದಲ್ಲಿ ಕೊಡುವುದಂತೂ ದೂರದ ಮಾತೇ ಸರಿ. ಭಾಷೆ ದಿನನಿತ್ಯ ನಮ್ಮ ಒಡನಾಡಿಯಾಗಿಯೇ ವ್ಯವಹರಿಸುತ್ತದೆ. ಮಾತೆತ್ತಿದರೆ ಸಾಕು, ಅದು ನಮ್ಮ ಬಾಯಿಂದ ಹೊರ ಬೀಳುತ್ತದೆ. ನಾವು ಆಡುವ ಮಾತೇ ಭಾಷೆ, ಹೀಗೆ, ಭಾಷೆ ನಮಗೆ ಅತ್ಯಂತ ಚಿರಪರಿಚಿತವಾಗಿದ್ದರೂ ಅದರ ಕೋಪವನ್ನು ನಮಗೆ ಹೇಳಲಾಗಿಲ್ಲವೆಂದ ಮೇಲೆ  ಗೌಪ್ಯತೆ ನಮಗೆ ಆಶ್ಚರ್ಯ ಮೂಡಿಸದಿರಲಾರದು. ಭಾಷೆಯ ಸಂಪೂರ್ಣ ಸ್ವರೂಪವನ್ನು ಬಿಚ್ಚಿಡುವ ಒಂದು ಸೂತ್ರರೂಪದ ವ್ಯಾಖ್ಯೆಯನ್ನು ಬಹುಶಃ ಯಾವ ಕಾಲಕ್ಕೂ ಕೊಡಲು  ಸಾಧ್ಯವಿಲ್ಲವೆಂಬಷ್ಟು ದಿಗ್ರಮೆ ಮೂಡಿಸುವ ರೀತಿಯಲ್ಲಿ ಇಂದು ಭಾಷೆ ತನ್ನ ಅಂತಃಸತ್ವವನ್ನು 

ಗೌಪ್ಯವಾಗಿಟ್ಟುಕೊಂಡು ಬಂದಿದೆ. ಅಂತೆಯೇ, 

ಭಾಷಾ ವಿಜ್ಞಾನಿಯೊಬ್ಬ "ಭಾಷೆಯ ಬಗೆಗೆ ಮಾತನಾಡುವುದೆಂದರೆ ಮರದ ಒಲೆಯಲ್ಲಿ 

ಅಡುಗೆ ಮಾಡಿದಂತೆ !' ಎನ್ನುತ್ತಾನೆ. ಇದರರ್ಥ ಭಾಷೆಯನ್ನು ಕುರಿತು ಮಾಡುವ ಪ್ರಯತ್ನಗಳೆಲ್ಲವೂ ಸಂಪೂರ್ಣ

ಫಲಕಾರಿಯಲ್ಲ ಒಂದರ್ಥದಲ್ಲಿ ಅದೊಂದು ನಿರರ್ಥಕ ಕಾರವೇ ಸರಿ ಎಂಬುದು. ಭಾಷೆಯೊಂದಿಗೆ ಗುದುಮುರಿಗೆ ಹಾಕುವುದೆಂದರೆ ಗಾಳಿಯೊಡನೆ ಸೆಣಸಾಡಿದಂತೆಯೇ.

ಆದ್ದರಿಂದಲೇ, "ಭಾಷೆಯ ಹುಟ್ಟನ್ನು ತಿಳಿಯಲು ಇದುತನಕ ಮಾಡಿರುವ ಎಲ್ಲ ಪ್ರಯತ್ನಗಳೂ ನಿಷ್ಪಲ"ಎನ್ನುತ್ತಾನೆ ಭಾಷಾವಿಜ್ಞಾನಿ ಸವೇರ್‌.

  ಆದರೂ ಇದುತನಕ ಭಾಷೆಯ ಸ್ವರೂಪ ಕುರಿತು ಮಾಡಿದ ಭಾಷಾವಿಜ್ಞಾನಿಗಳ ಪ್ರಯತ್ನವನ್ನು ಮರೆಯುವಂತಿಲ್ಲ. ಭಾಷೆಯ ನಿಜವಾದ ಅರ್ಥವನ್ನು ತಿಳಿಯುವಲ್ಲಿ ಇದುತನಕ ಅವರು ಮಾಡಿದ ಶೋಧನೆ, ಚಿಂತನ-ಮಂಥನಗಳ ಫಲವಾಗಿ ಭಾಷೆಯ ಹೊರಮೈಯ ದರ್ಶನವನ್ನಾದರೂ ಸೂತ್ರರೂಪದಲ್ಲಿ ಹಿಡಿದಿಡಲು ಸಾಧ್ಯವಾಗಿದೆ. ಆದ್ದರಿಂದ,ಭಾಷೆಯ ಸ್ವರೂಪವನ್ನು ಕುರಿತ ಭಾಷಾವಿಜ್ಞಾನಿಗಳ ಮಹತ್ವದ ವ್ಯಾಖ್ಯೆಗಳನ್ನು ಈಗ ನೋಡಬಹುದು

ವ್ಯಾಖೆಗಳು:

1. ''ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಧನವೇ ಭಾಷೆ'' - ಪ್ಲೇಟೋ

2. " ಪದಗಳ ಮೂಲಕ ವಿಚಾರಗಳನ್ನು ಅಭಿವ್ಯಕ್ತಗೊಳಿಸುವುದೇ ಭಾಷೆ" -  ಹೆನ್ರಿಸ್ವೀಚ್

3. "ಆತ್ಮವಿರುವ (ಮನಸ್ಸಿರುವ) ಯಾವುದೇ ಪ್ರಾಣಿಯ ಅನುಭವಗಳ ಅಭಿವ್ಯಕ್ತಿಯೇ ಭಾಷೆ" - ಎಯ್ ಸ್ಲರ್

4. "ಒಂದು ಚಿತ್ರ ಸ್ಥಿತಿಯನ್ನು ವ್ಯಕ್ತಪಡಿಸಲು ಮಾಡುವ ಉದ್ದೇಶ ಪೂರ್ವಕ ಧ್ವನಿಗಳ ಉಚ್ಛಾರಣೆಯೇ ಭಾಷೆ" - ಮಾರ್ಟಿ

5. "ಭಾಷೆಯೆನ್ನುವುದು ಅಭಿಪ್ರಾಯಗಳ ಅಭಿವ್ಯಕ್ತಿಯ ಒಂದು

ವಿಧಾನವಲ್ಲ, ಅದೊಂದು ರೀತಿಯ ಆಲೋಚನೆ; ಭಾಷೆಯೆನ್ನುವುದು ಒಂದು ಸಾಧನ; ಮನುಷ್ಯರಿಗೆ ವಿಶಿಷ್ಟವಾಗಿರುವ ಆಲೋಚನೆಗಳಿಗೆ ಸಹಾಯಕವಾಗುವ ಒಂದು ಸಾಧನ ಅಥವಾ ಅಂಗ" -ಎರ್ಡಮಾನ್

6.: "ಯಾವಾಗ ಬೇಕಾದರೂ ಸ್ವಪ್ರೇರಿತವಾಗಿ ಉಚ್ಚರಿಸಬಹುದಾದ

ಸಾಂಪ್ರದಾಯಿಕ ಸಂಕೇತಗಳ ವ್ಯವಸ್ಥೆಯೇ ಭಾಷೆ'' -ಎಬ್ಬಿಂಗ್ ಹಾಸ್

7.  “ಭಾಷೆಯೆಂಬುದು ಅಭಿಪ್ರಾಯಗಳನ್ನು ವ್ಯಕ್ತಗೊಳಿಸುವ ಸಂಕೇತಗಳ ಒಂದು ವ್ಯವಸ್ಥೆಯೇ ಭಾಷೆ" - ಡೇ. ಸಸೂರ್

8. “ಸ್ವಪ್ರೇರಿತವಾಗಿ ಉಚ್ಚರಿಸಿದ ಸಂಕೇತಗಳ ಒಂದು ವ್ಯವಸ್ಥೆಯ ಮೂಲಕ ಅಭಿಪ್ರಾಯಗಳನ್ನು , ಭಾವಗಳನ್ನು , ಇಷ್ಟಗಳನ್ನು, ಪ್ರಧಾನ ಮಾಡಲು ಇರುವ,   ಮನುಷ್ಯನಿಗೆ ವಿಶಿಷ್ಟವಾದ,ಅವನ ಸ್ವಭಾವಸಿದ್ದವಲ್ಲದ ರೀತಿಯೇ ಭಾಷೆ" -ಸಪೀರ್.

9. "ವ್ಯವಹಾರಕ್ಕಾಗಿ ಸಂಕೇತಗಳಿಂದ ಕೂಡಿದ ಪದ ಸಮೂಹವೇ ಭಾಷೆ'' - ವೈಯಾಕರಣಿ ಭಟ್ಟಾಕಳಂಕ.

  ಭಾಷೆಯ ಸ್ವರೂಪವನ್ನು ವಿವರಿಸುವ ಈ ವಿವಿಧ ವ್ಯಾಖ್ಯೆಗಳಲ್ಲಿ ಯಾವೊಂದು ವ್ಯಾಖ್ಯೆಗೂ ಭಾಷೆಯಸಂಪೂರ್ಣ ಅಂತಃ ಸತ್ವವನ್ನು ಹೊರತೆಗೆದು ತೋರಿಸಲಾಗಿಲ್ಲ. ಒಂದು ರೀತಿಯಲ್ಲಿ ಇವು ಸಮರ್ಪಕವಾಗಿದ್ದರೂ ಇನ್ನೊಂದು

ರೀತಿಯಲ್ಲಿ ಅಸಮಂಜಸವಾಗಿವೆ. ಭಾಷೆಯ  ಸ್ವರೂಪ ಕುರಿತಂತೆ ಈ ಎಲ್ಲ ವ್ಯಾಖ್ಯೆಗಳ ಮಧ್ಯ ಎದ್ದು

ಕಾಣುವ ವ್ಯಾಖ್ಯೆಗಳೆಂದರೆ ಸ್ಟುರ್ಟೆ ವಾಂಟ್, ಬ್ಲಾಕ್ ಮತ್ತು ಟ್ರೇಗರ್ ಅವರ ವ್ಯಾಖ್ಯೆಗಳು. ಹಳೆಯ ಸೂತ್ರಗಳ ಸಾರವನ್ನು ಹೀರಿಕೊಂಡು  ಹೆಚ್ಚು ಸಮರ್ಪಕವಾದ ಸೂತ್ರವೊಂದನ್ನು ಸ್ಟುರ್ಟ್‌ಮೆಂಟ್, ಬ್ಲಾಕ್ ಮತ್ತು ಟ್ರೇಗರ್ ಹೇಳಿದ್ದಾರೆ.

 ಈ ಮೂವರು ವಿದ್ವಾಂಸರ ಸೂತ್ರಗಳು ಬಹುಜನರ ಮೆಚ್ಚುಗೆಯನ್ನು ಪಡೆದಿರುವುದಲ್ಲದೆ, ಉಳಿದ ಸುತ್ತಗಳಿಗಿಂತ ಹೆಚ್ಚು ಸಮರ್ಪಕವಾಗಿವೆ. ಆ ಸೂತ್ರಗಳನ್ನಿಲ್ಲಿ ನೋಡಬಹುದು:

  "ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕ (ಇಷ್ಟಾನುಸಾರವಾದ) ಧ್ವನಿ ಸಂಕೇತಗಳ ವ್ಯವಸ್ಥೆಯೇ ಭಾಷೆ'' - -ಸ್ಟುರ್ಟೆ ವಾಂಟ್

  "ಸಾಮಾಜಿಕ ಸಮೂಹದ ಸಹಕಾರಕ್ಕಾಗಿ ಬಳಸುವ ಯಾದೃಚ್ಛಿಕ ಮೌಖಿಕ ಧ್ವನಿ ಸಂಕೇತಗಳ ಒಂದು ವ್ಯವಸ್ಥೆಯೇ ಭಾಷೆ'' - ಬ್ಲಾಕ್ ಮತ್ತು ಟ್ರೇಗರ್

  

  ಈ ಮೂವರ ಈ ಎರಡು ಸೂತ್ರಗಳಲ್ಲಿನ ಒಂದೊಂದು ಪದವೂ ವಿಚಾರಾರ್ಹವಾದುದು, ಈ ಎರಡು ವ್ಯಾಖ್ಯೆಗಳಿಂದ ಹೊರಡುವ ಅರ್ಥ ಇಷ್ಟು :

  “ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ಸಹಕಾರಕ್ಕಾಗಿ, ವ್ಯವಹಾರಕ್ಕಾಗಿ ಬಳಸುವ ಯಾದೃಚ್ಛಿಕ ಸ್ವತಂತ್ರ ಧ್ವನಿ ಸಂಕೇತಗಳ ವ್ಯವಸ್ಥೆಯೇ ಭಾಷೆ”.

ಸ್ಟುರ್ಟ್‌ಮೆಂಟ್‌, ಬ್ಲಾಕ್ ಮತ್ತು ಟ್ರೇಗರ್ ಈ ಮೂವರ ಈ ಎರಡು ಪ್ರಮುಖ ವ್ಯಾಖ್ಯೆಗಳ ವಿವರಣೆಯಿಂದ ನಾಲ್ಕು ಪ್ರಧಾನ ಅಂಶಗಳು ಗೋಚರಿತವಾಗುತ್ತವೆ. ಅವೆಂದರೆ-

1. ಭಾಷೆ ಒಂದು ವ್ಯವಸ್ಥೆ.

2. ಭಾಷೆ ಉಚ್ಚರಿತ ಧ್ವನಿ ಸಂಕೇತಗಳ ಒಂದು ವ್ಯವಸ್ಥೆ. 

3. ಭಾಷೆ ಯಾದೃಚ್ಛಿಕ ಉಚ್ಚರಿತ ಧ್ವನಿ ಸಂಕೇತಗಳ ಒಂದು ವ್ಯವಸ್ಥೆ.

4. ಭಾಷೆ ಒಂದು ಸಾಮಾಜಿಕ ಸಹಕಾರ.

  ಈ ನಾಲ್ಕು ಪ್ರಮುಖ ಅಂಶಗಳನ್ನು ಈಗ ಒಂದೊಂದಾಗಿ ಹೀಗೆ ವಿವರಿಸಬಹುದು.

1. ಭಾಷೆ ಒಂದು ವ್ಯವಸ್ಥೆ:

   ಭಾಷೆ ಒಂದು ವ್ಯವಸ್ಥೆಗೆ ಒಳಪಟ್ಟಿರುತ್ತದೆ. ಒಂದು ವೇಳೆ ಭಾಷೆ ಸುವ್ಯವಸ್ಥಿತವಾಗಿರದಿದ್ದರೆ ನಮ್ಮ ವಿಚಾರಗಳನ್ನು ಬೇರೊಬ್ಬರಿಗೆ ತಿಳಿಸುವುದು ತುಂಬಾ ಕಷ್ಟ . ಆದ್ದರಿಂದ ಭಾಷೆ ಒಂದು ವ್ಯವಸ್ಥೆಗೆ ಒಳಪಟ್ಟು ರಚಿತವಾಗಿರುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಪರಸ್ಪರ ವಿಚಾರ ವಿನಿಮಯ ಸುಲಭವಾಗಬೇಕಾದರೆ ಭಾಷೆ ವ್ಯವಸ್ಥಿತವಾಗಿದ್ದರೇನೇ ಸಾಧ್ಯ. ಭಾಷೆಯ ವ್ಯವಸ್ಥೆ ಸಮರ್ಪಕವಾಗಿದ್ದಷ್ಟೂ ವಿಚಾರ ವಿನಿಮಯ  ಸುಲಭವಾಗುತ್ತದೆ. ಭಾಷೆಯನ್ನು ನಾವು ಒಂದು ಮನೆ ನಿರ್ಮಾಣಕ್ಕೆ ಹೋಲಿಸಬಹುದು. ಮನೆಯನ್ನು ಕಟ್ಟಲು ಒಂದು ವ್ಯವಸ್ಥಿತವಾದ ಯೋಜನೆಯಿರುವಂತೆ ಭಾಷೆಯನ್ನು ರಚಿಸಲು ಒಂದು ವ್ಯವಸ್ಥಿತವಾದ ಕ್ರಮವಿರುತ್ತದೆ. ಮನೆಯನ್ನು  ಕಟ್ಟಲು  ಮಣ್ಣು ಸಿಮೆಂಟು, ಕಲ್ಲು, ಇಟ್ಟಿಗೆ, ಕಟ್ಟಿಗೆ, ಕಬ್ಬಿಣ ಮತ್ತು ನೀರು - ಈ ಮೂಲಸಾಮಾಗ್ರಿಗಳು ಅತ್ಯವಶ್ಯ. ಹಾಗೆಯೇ ಭಾಷೆಯೆಂಬ ಮನೆಯನ್ನು ಕಟ್ಟಬೇಕಾದರೆ ಅದಕ್ಕೆ ವಾದ ಮೂಲ ಸಾಮಗ್ರಿಗಳು ಅತ್ಯಗತ್ಯ. ಆ ಮೂಲ ಸಾಮಗ್ರಿಗಳೆಂದರೆ- ಧ್ವನಿ, ಸಂಕೇತ, ಅರ್ಥ ಹಾಗೂ ವಾಕ್ಯ - ಈ ಮೂಲ ಸಾಮಾಗ್ರಿಗಳು ಅತ್ಯಗತ್ಯ. ಅಲ್ಲದೆ ಮನೆಗೆ ಬೇಕಾಗುವ ಮೂಲ ಸಾಮಗ್ರಿಗಳನ್ನು ಒಂದು ಸುವ್ಯವಸ್ಥಿತವಾದ ಕ್ರಮಕ್ಕೆ ಅಳವಡಿಸುವಂತೆ, ಭಾಷೆಯ ಮೂಲ ಸಾಮಗ್ರಿಗಳನ್ನೂ ಕೂಡ ಒಂದು ಕ್ರಮಬದ್ಧವಾದ ವ್ಯವಸ್ಥೆಗೆ ಅಳವಡಿಸಬೇಕಾಗುತ್ತದೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಒಂದು ಸುವ್ಯವಸ್ಥಿತವಾದ ಕ್ರಮವಿರುತ್ತದೆ. ಈ ಕ್ರಮವಿಲ್ಲದಿದ್ದರೆ ಭಾಷಾ ಸೌಧವೂ ಸಮರ್ಪಕ ಮತ್ತು ಅರ್ಥಪೂರ್ಣವಾಗಲಾರದು. ಧ್ವನಿ, ಸಂಕೇತ,ಶಬ್ದ,ಅರ್ಥ ಹಾಗೂ ವಾಕ್ಯ-  ಈ ಮುಂತಾದ ಸಾಮಗ್ರಿಗಳು ವ್ಯವಸ್ಥಿತವಾಗಿ ಬಳಕೆಗೊಂಡಾಗ ಮಾತ್ರ ಭಾಷೆ ಅರ್ಥಪೂರ್ಣವಾಗುತ್ತದೆ.

2. ಭಾಷೆ ಉಚ್ಚರಿತ ಧ್ವನಿ ಸಂಕೇತಗಳ ಒಂದು ವ್ಯವಸ್ಥೆ :

 ಮನುಷ್ಯ ತನ್ನ ವಿಚಾರಗಳನ್ನು ಭಾಷೆಯ ಮೂಲಕ ಇತರರಿಗೆ ತಿಳಿಸಲು ಸಂಕೇತಗಳನ್ನು ಬಳಸುತ್ತಾನೆ. ಅವುಗಳಲ್ಲಿ ದೃಶ್ಯ, ಶ್ರವ್ಯ ಮತ್ತು ಧ್ವನಿ ಸಂಕೇತಗಳ ಮುಖ್ಯವಾದವು. ಈ ಮೂರು ಸಂಕೇತಗಳಲ್ಲಿ ಧ್ವನಿ ಸಂಕೇತ ಅತ್ಯಂತ ಮಹತ್ವಪೂರ್ಣವಾದುದು. ನಮ್ಮ ಅಂತರಂಗದಲ್ಲಿ ಮೂಡಿದ ಭಾವನೆಗಳನ್ನು ಅಭಿವ್ಯಕ್ತಪಡಿಸಲು ನಾವು ಕೆಲವು  ವಸ್ತುಗಳನ್ನು ಸಂಕೇತಗಳನ್ನಾಗಿ ಬಳಸುತ್ತೇವೆ. ಇಂಥ ವಸ್ತುಗಳೇ ಸಂಕೇತಗಳು. ಆಂಗಿಕ ಚೇಷ್ಟೆಗಳಾದ ಕೈಸನ್ನೆ, ಕಣ್ಣನ್ನೆ, ಚಪ್ಪಾಳೆ, ತಲೆ ಅಲುಗಾಡಿಸುವಿಕೆಗಳು, ಸಂಚಾರಿ ವ್ಯವಸ್ಥೆಯ ದೀಪಗಳು, ಮಿಲ್ಟಿ ಸಂಕೇತಗಳು, ರೈಲ್ವೆ ಸೀಟಿಗಳು ಈ ಮುಂತಾದ ದೃಶ್ಯ ಸಂಕೇತಗಳು ಅಥವಾ ಕಣ್ಣಿಗೆ ಕಾಣುವ ಸಂಕೇತಗಳು ನಮ್ಮ ಅಬಿವ್ಯಕ್ತಿಗೆ ಸಹಾಯಕಾರಿಯಾಗಿವೆ. ನಮ್ಮ ಕಣ್ಣಿಗೆ ಕಾಣುವ ದೂರದ ವ್ಯಕ್ತಿಯೊಬ್ಬನನ್ನು ನಾವು ಕರೆಯಬೇಕಾದರೆ ಕೈ ಬೀಸಬಹುದು, ಇಲ್ಲವೆ ತಲೆ ಅಲುಗಾಡಿಸಬಹುದು, ಇಲ್ಲವೇ ಚಪ್ಪಾಳೆ ತಟ್ಟಬಹುದು. ಕೈ ಬೀಸುವಿಕೆ, ತಲೆ ಅಲುಗಾಡಿಸುವಿಕೆ, ಚಪ್ಪಾಳೆ ತಟ್ಟುವಿಕೆ ಇವೆಲ್ಲ ದೂರದ ವ್ಯಕ್ತಿಯೊಬ್ಬನನ್ನು ಕರೆಯಬೇಕೆನ್ನುವ ಮನದಿಂಗಿತಕ್ಕೆ ಸಂಕೇತಗಳು,

ಇನ್ನು ಸಂಚಾರಿ ವ್ಯವಸ್ಥೆಯಲ್ಲಿ ಅನೇಕ ದೃಶ್ಯ ಸಂಕೇತಗಳನ್ನು ಬಳಸಲಾಗುತ್ತದೆ. ಕೆಂಪು ದೀಪವನ್ನು ತೋರಿಸಿದರೆ ವಾಹನಗಳು ನಿಲ್ಲುವುದರ ಸೂಚನೆ. ಹಸಿರು ದೀಪವನ್ನು ತೋರಿಸಿದರೆ ಚಲಿಸುವ ಸೂಚನೆ, ರೈಲು ನಿಲ್ದಾಣದಲ್ಲಿ ಕೈ ಬಿದ್ದರೆ (ಸಿಗ್ನಲ್) ಬಿದ್ದರೆ ರೈಲು  ಸ್ಟೇಷನ್ ಒಳಗೆ ಪ್ರವೇಶಿಸಬೇಕೆಂದರ್ಥ. ಇತ್ತೀಚೆಗೆ ಕೈ ಸಿಗ್ನಲ್ ಬದಲು ವಿದ್ಯುತ್ ದೀಪಗಳನ್ನು ಸಿಗ್ನಲ್ಲಾಗಿ ಬಳಸಲಾಗುತ್ತದೆ. ಕೆಂಪು ಬಣ್ಣ ಅಪಾಯದ ಸಂಕೇತವಾದರೆ, ಕಪ್ಪು ಬಣ್ಣ ಪ್ರತಿಭಟನೆಯ ಸಂಕೇತವಾಗಿದೆ.  ಇಂಥ ಹಲವಾರು ದೃಶ್ಯಸಂಕೇತಗಳು ನಮ್ಮ ಅಭಿವ್ಯಕ್ತಿಗೆ ಸಹಾಯಕಾರಿಯಾಗಿವೆ. 

  ಇನ್ನು ನಮ್ಮ ಮನದಿಂಗತವನ್ನು ಇತರರಿಗೆ ತಿಳಿಸಲು ಕಿವಿಗೆ ಕೇಳಿಸುವ  ಅನೇಕ ಶ್ರವ್ಯ ಸಂಕೇತಗಳನ್ನು ಬಳಸುತ್ತೇವೆ.  ಬಸ್ಸಿನ ಗಂಟೆ, ಹಾರ್ನ್, ಕರೆಗಂಟೆ, ಸೈಕಲ್ ಗಂಟೆ, ರೈಲಿನ ಸಿಳ್ಳು, 

ಮುಂತಾದವು ಶ್ರವ್ಯ ಸಂಕೇತಗಳು ಅಥವಾ ಕಿವಿಗೆ ಕೇಳಿಸುವ ಸಂಕೇತಗಳು. ಇ ಶ್ರವ್ಯಸಂಕೇತಗಳ ಮೂಲಕವಾಗಿಯೂ ನಮ್ಮ ಮನದ ಅಭಿಪ್ರಾಯಗಳನ್ನು ಇತರರಿಗೆ ತಿಳಿಸಲು ಸಾಧ್ಯವಿದೆ. 

  ಆದರೆ ಈ ದೃಶ್ಯ ಹಾಗೂ  ಶ್ರವ್ಯಸಂಕೇತಗಳ ಭಾಷೆ  ಧ್ವನಿ ಸಂಕೇತಗಳಿಂದ ಕೂಡಿದ ಭಾಷೆಯಷ್ಟು ಪರಿಣಾಮಕಾರಿಯಾಗಲಾರವು. ಇವುಗಳಿಗೆ ಭಾಷೆಯ ಧ್ವನಿ ಸಂಕೇತಗಳಷ್ಟು ಸಂಕೀರ್ಣ ಹಾಗೂ ಸುಸ್ಪಷ್ಟ ಅಭಿಪ್ರಾಯಗಳನ್ನು ಹೇಳಲು ಸಾಧ್ಯವಿಲ್ಲ. ಇ ಸಂಕೇತಗಳು ಕೇವಲ ಕೆಲ ಅಭಿಪ್ರಾಯಗಳನ್ನು ಮಾತ್ರ ಅಭಿವ್ಯಕ್ತಿಸಬಲ್ಲವು.

3. ಧ್ವನಿಸಂಕೇತಗಳು :

  ಭಾಷೆಯಲ್ಲಿ ಇನ್ನುಳಿದ ಸಂಕೇತಗಳಿಗಿಂತ ಧ್ವನಿ ಸಂಕೇತಗಳದೇ ಅತ್ಯಂತ ಪ್ರಮುಖ ಸ್ಥಾನ, ಏಕೆಂದರೆ, ಭಾಷೆಯೆಂಬುದು  ನಿರ್ಧರಿತವಾಗುವುದೇ ಧ್ವನಿಸಂಕೇತಗಳಿಂದ.  ಇತರ ಸಂಕೇತಗಳಿಗಿಲ್ಲದ ಸಂಕೀರ್ಣತ ಮತ್ತು ಸ್ಪಷ್ಟಾಭಿವ್ಯಕ್ತಿ ಧ್ವನಿ ಸಂಕೇತಗಳಿಗಿದೆ. ಧ್ವನಿಸಂಕೇತಗಳ ಭಾಷೆಯಿಂದ ಸಮರ್ಥವಾಗಿ, ಸಂಕೀರ್ಣವಾಗಿ  ಹಾಗೂ ಬಹುಸ್ಪಷ್ಟವಾಗಿ ಅಭಿಪ್ರಾಯಗಳನ್ನು ಅಭಿವ್ಯಕ್ತಿಪಡಿಸುವಂತೆ ಇತರ ಶ್ರವ್ಯ ಹಾಗೂ ದೃಶ್ಯ ಸಂಕೇತಗಳಿಂದ ಸಾಧ್ಯವಿಲ್ಲ. ಅಂತೆಯೇ ಭಾಷೆಯಲ್ಲಿ ಧ್ವನಿ ಸಂಕೇತಗಳಿಗೆ ಅತ್ಯಂತ ಮಹತ್ತರವಾದ ಸ್ಥಾನವಿದೆ, ಪ್ರಪಂಚದ ಎಲ್ಲ ಭಾಷೆಗಳೂ ಧ್ವನಿಸಂಕೇತ ವ್ಯವಸ್ಥೆಯನ್ನು ಹೊಂದಿವೆ.  ನಮ್ಮ ಮನದಿಂಗಿತವನ್ನು ಇತರರಿಗೆ ತಿಳಿಸಲು ಬಳಸಲಾಗುವ ಧ್ವನಿಗಳೇ ಧ್ವನಿಸಂಕೇತಗಳು. ಇಂಥ ಧ್ವನಿಸಂಕೇತಗಳೇ  ನಮ್ಮ ಮನ್ನಸ್ಸಿನ ಭಾವನೆಗಳಿಗೆ ಒಂದು ಅರ್ಥವನ್ನು ತಂದು ಕೊಡುತ್ತವೆ. ಅಷ್ಟೇ ಅಲ್ಲ ಅವು ನಮ್ಮ ಮನಸ್ಸಿನ ಭಾವನೆಗಳನ್ನು ಇತರರಿಗೆ ತಿಳಿಸಲು ಇತರ ಭಾಷಾಸಂಕೇತಗಳಿಗಿಂತ ತುಂಬಾ ಸಹಾಯಕಾರಿಯಾಗಿವೆ. ಹಾಗೂ ಬಹು ಸಮರ್ಥವಾಗಿವೆ. 

ಇಂಥ ಧ್ವನಿಸಂಕೇತಗಳ ಅರ್ಥಪೂರ್ಣ ಅಭಿವ್ಯಕ್ತಿಯೇ ಭಾಷೆ. ಭ

  ಭಾಷೆಯಲ್ಲಿ ಕೇವಲ ಧ್ವನಿ ಸಂಕೇತಗಳಿಗೆ ಮಾತ್ರ ಸ್ಥಾನವಿದೆಯೆಂದ ಮಾತ್ರಕ್ಕೆ ಸಿಕ್ಕ ಸಿಕ್ಕ ಧ್ವನಿ ಸಂಕೇತಗಳನ್ನು ಸಿಕ್ಕ ಸಿಕ್ಕಂತೆ ಬಳಸುವುದೆಂದು ಅರ್ಥವಲ್ಲ. ಭಾಷೆಯಲ್ಲಿ ಸಿಕ್ಕ ಸಿಕ್ಕ ಧ್ವನಿಸಂಕೇತಗಳಿಗೆ ಸ್ಥಾನವಿಲ್ಲ. ನಮ್ಮ ಸಂವಹನಕ್ಕೆ ಯೋಗ್ಯವಾಗಬಲ್ಲ ಧ್ವನಿಸಂಕೇತಗಳಿಗೆ  ಭಾಷೆಯಲ್ಲಿ ಸ್ಥಾನವಿದೆ.ಮನುಷ್ಯ  ಹೊರಡಿಸಬಹುದಾದ ಮೌಖಿಕಧ್ವನಿಗಳು ವ್ಯವಹಾರಕ್ಕೆ ಯೋಗ್ಯವಾಗಿರಬೇಕು ಮತ್ತು ಇವುಗಳನ್ನು ಕ್ರಮಬದ್ಧವಾಗಿ ಬಳಸಬೇಕು. ಅಂದಾಗ ಮಾತ್ರ ಅವುಗಳಿಗೆ ಭಾಷೆಯಲ್ಲಿ ಸ್ಥಾನವುಂಟು.  ಎಂದರೆ ವ್ಯವಹಾರಕ್ಕೆ ಯೋಗ್ಯವಾದ ಮತ್ತು ಕ್ರಮಬದ್ಧವಾದ ಕೇವಲ ಮೌಖಿಕ ಧ್ವನಿಸಂಕೇತಗಳು ಮಾತ್ರ ಭಾಷೆಗೆ ಪ್ರಸ್ತುತ. 

3. ಭಾಷೆ ಯಾದೃಚ್ಛಿಕ ಉಚ್ಚರಿತ ಧ್ವನಿ ಸಂಕೇತಗಳ ಒಂದು ವ್ಯವಸ್ಥೆ :

 

  ಭಾಷೆಯಲ್ಲಿ ಧ್ವನಿ ಸಂಕೇತಗಳು ಯಾವಾಗಲೂ ಯಾದೃಚ್ಛಿಕವಾಗಿರುತ್ತವೆ. ಯಾದೃಚ್ಛಿಕವೆಂದರೆ ಇಚ್ಛೆಗೆ ಅನುಗುಣವಾದದ್ದು ಎಂದರ್ಥ, ಪದಕ್ಕೂ ಅರ್ಥಕ್ಕೂ ಯಾವ ಮೂಲಭೂತವಾದ ಸಂಬಂಧವಿಲ್ಲದಿದ್ದರೂ ಕೆಲವು ಅನುಕರಣ ಶಬ್ದಗಳಲ್ಲಿ ಮಾತ್ರ ಪದಕ್ಕೂ ಅರ್ಥಕ್ಕೂ ಸಂಬಂಧವಿರುವಂತೆ ಕಂಡು ಬರುತ್ತದೆ. ಆದರೂ ಇಂಥ ಪದಗಳು ಒಂದು ಭಾಷೆಯಲ್ಲಿ ತೀರಾ ಸ್ವಲ್ಪ ಎಂದು ಹೇಳಬೇಕು. ಉದಾ: ಕಾಗೆಯ ಕಾಕಾ'' ಕೂಗನ್ನು ಅನುಸರಿಸಿ ಅದಕ್ಕೆ 'ಕಾಗೆ'' ಎಂಬ ಹೆಸರು ಬಂದಿರಬೇಕು. ಇಲ್ಲಿ ಕಾಗೆ ಎಂಬ ಪದಕ್ಕೂ ಅರ್ಥಕ್ಕೂ ಸಂಬಂಧವಿರುವಂತೆ ಕಂಡು ಬರುತ್ತದೆ. ಕೋಳಿಯ ಕೊಕ್ಕೊಕ್ಕೊ” ಎಂಬ ಕೂಗನ್ನು ಅನುಸರಿಸಿ 'ಕೋಳಿ' ಎಂಬ ಹೆಸರು ಬಂದಿರಬೇಕು. ಗೂಗೆಯ “ಗೂಗು'' ಎಂಬ ಧ್ವನಿಯನ್ನು ಅನುಸರಿಸಿ ಗೂಗೆಗೆ 'ಗೂಗೆ'' ಎಂಬ ಹೆಸರು ಬಂದಿರಬೇಕು. ಆದರೆ ಇಂತಹ ಅನುಕರಣ ಪದಗಳು ಒಂದು ಭಾಷೆಯಲ್ಲಿ ಅತ್ಯಲ್ಪವಾಗಿರುತ್ತವೆ. ಅದೂ ಅಲ್ಲದೆ ಒಂದು ಪ್ರಾಣಿಯ ಕೂಗನ್ನು ಅನುಸರಿಸುವ ಪದಗಳೇ ಭಾಷೆಯಿಂದ ಭಾಷೆಗೆ ವ್ಯತ್ಯಾಸವಾಗಬಹುದು. ಉದಾ : ಕನ್ನಡಿಗರು ನಾಯಿಯ ಬೊಗಳುವಿಕೆಯನ್ನು 'ಬೌಬೌ' ಎಂದು ಅನುಕರಿಸಿದರೆ, ಫ್ರೆಂಚಿಗರು 'ಗಪ್ಪಗಪ್ಪ' ಎಂದು ಅನುಕರಿಸಬಹುದು. 

ಹೀಗೆ ಭಾಷೆ ಯಾದೃಚ್ಛಿಕವಾದುದರಿಂದ ಒಂದು ವಸ್ತು ಅಥವಾ ಒಂದು ಪ್ರಾಣಿ ಇಲ್ಲವೆ ಒಂದು ಭಾವಕ್ಕೆ ಇದೇ ಧ್ವನಿ ಸಂಕೇತಗಳನ್ನು ನೀಡಬೇಕೆಂಬ ಯಾವ ನಿಯಮವೂ ಇಲ್ಲ. 'ಕಲ್ಲು' ಎನ್ನುವ ಬದಲು'ಆನೆ' ಎಂದು ಕರೆದಿದ್ದರೆ ಆ ವಸ್ತುವಿಗೆ  ಇಂದು ಆನೆ ಎಂಬ ಹೆಸರೇ ಸ್ಥಿರವಾಗಿರುತ್ತಿತ್ತು. ಹೀಗೆ ಒಂದೊಂದು ಧ್ವನಿ ಮೊತ್ತಕ್ಕೆ ಒಂದೊಂದು ಅರ್ಥವಿರುತ್ತದೆ. ಈ ಅರ್ಥ ಆ ವಸ್ತುವಿಗೆ ರೂಢಿಗತವಾಗಿ ಬಂದಿರುತ್ತದೆ. ಕುದುರೆಗೆ ಕುದುರೆಯೆಂದೂ, ಕತ್ತೆಗೆ ಕತ್ತೆಯೆಂದೂ ಕರೆದುದು ಕೇವಲ ಆಕಸ್ಮಿಕವೇ ಹೊರತು, ಅವುಗಳಲ್ಲಿನ ಆಂತರಿಕ ಲಕ್ಷಣದ ಮೂಲಕವಲ್ಲ. ಮೊದಲು ಹೆಸರು ಕೊಡುವಾಗ ಕುದುರೆಗೆ ಕತ್ತೆಯೆಂದೂ, ಕತ್ತೆಗೆ ಕುದುರೆಯೆಂದೂ ಕರೆದಿದ್ದರೆ ನಾವಿಂದು ಅದೇ ರೀತಿ ಕರೆಯುತ್ತಿದ್ದೆವು. ಪ್ರತಿ ಭಾಷೆಯಲ್ಲೂ ಇದೇ ರೀತಿ ಒಂದು ಅನುಕೂಲ ವ್ಯವಸ್ಥೆಯಿರುತ್ತದೆ.ಹೀಗೆ ಭಾಷೆ ಎನ್ನುವುದು ಯಾದೃಚ್ಚಿಕ ಧ್ವನಿಸಂಕೇತಗಳ ಒಂದು ವ್ಯವಸ್ಥೆಯಾಗಿದೆ.

4. ಭಾಷೆ ಒಂದು ಸಾಮಾಜಿಕ ಸಹಕಾರ:

  ಭಾಷೆ ಒಂದು ಸಾಮಾಜಿಕ ಸಹಕಾರವಾಗಿದೆ. ಅದೊಂದು ಸಾಮಾಜಿಕ ಕ್ರಿಯೆ, ಭಾಷೆಯೊಂದಿಲ್ಲದಿದ್ದರೆ ಸಮಾಜ ಜೀವನವೆಂಬ ಯಂತ್ರವೇ ನಡೆಯುತ್ತಿರಲಿಲ್ಲ. ಭಾಷೆಯೆಂಬ ಜ್ಯೋತಿ  ಜೀವನದುದಕ್ಕೂ ಬೆಳಗದಿದ್ದರೆ ಇಡೀ ಭುವನತ್ರಯವೇ ಕತ್ತಲಾಗಿ ಬಿಡುತ್ತಿತ್ತು' ಎಂದು ದಂಡಿ ಹೇಳಿದ್ದು ತುಂಬಾ ಔಚಿತ್ಯಪೂರ್ಣವಾಗಿದೆ. ಮನುಷ್ಯ ಜೀವನದಲ್ಲಿ ಅಥವಾ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಭಾಷೆಯಿಲ್ಲದೆ ಹೋಗಿದ್ದರೆ, ಮನುಷ್ಯ ಪ್ರಗತಿಯನ್ನು ಹೊಂದುವುದು ಸಾಧ್ಯವೇ ಇರುತ್ತಿರಲಿಲ್ಲ. ಇಂದು ಮನುಷ್ಯ ಸರ್ವ ರಂಗಗಳಲ್ಲಿ ಅತ್ಯುನ್ನತವಾದ ಪ್ರಗತಿಯನ್ನು ಸಾಧಿಸಿದ್ದು ಭಾಷೆಯಿಂದಲೇ. ಸಾಮಾಜಿಕ ಜೀವನದಲ್ಲಿಯಂತೂ ಅದರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಭಾಷೆ ಒಂದು ಸಂಪರ್ಕ ಸಾಧನ. ಮನುಷ್ಯ-ಮನುಷ್ಯರ ನಡುವೆ, ಮನುಷ್ಯ-ಸಮಾಜಗಳ ನಡುವೆ ಭಾಷೆ ಒಂದು ಸಂಪರ್ಕ ವಾಹಕದಂತೆ ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ಜೀವನದಲ್ಲಿ ಭಾಷೆಯಿಲ್ಲದೆ ಹೋಗಿದ್ದರೆ ಸಮಾಜ ಯಂತ್ರವೇ ಅಸ್ತವ್ಯಸ್ತವಾಗುತ್ತಿತ್ತು ಸಮಾಜ ಸದಾಕಾಲವೂ ಭಾಷೆಯೊಂದಿಗೆ ಸಹಕರಿಸುತ್ತದೆ; ಸಂಪರ್ಕವನ್ನಿಟ್ಟುಕೊಂಡಿರುತ್ತದೆ. ಸಮಾಜದೊಂದಿಗೆ ನಿರಂತರ ಸಹಕಾರವನ್ನಿಟ್ಟುಕೊಳ್ಳುವುದು ಭಾಷೆಯ ಒಂದು ಪ್ರಮುಖ ಲಕ್ಷಣ. . ಸಮಾಜ ನಿರ್ಮಾಣವಾಗಿದ್ದು ಕೂಡ ಬಹುಶಃ ಭಾಷೆಯಿಂದಲೇ, ಯಾವ ಸಾಮಾಜಿಕ ಸಂಸ್ಥೆಯೇ ಆಗಲಿ, ಭಾಷೆ ಹುಟ್ಟಿದ ನಂತರವೇ ಹುಟ್ಟಿರಬೇಕು. ಭಾಷೆಯ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತ ಮನುಷ್ಯ ಮುಂದೆ ತನ್ನ ಪ್ರಗತಿಗೆ ಕಾರಣವಾದ ಸಂಸ್ಥೆಗಳ ನಿರ್ಮಾಣಕ್ಕೆ ಭಾಷೆಯನ್ನೇ ಸಾಧನವನ್ನಾಗಿ ಮಾಡಿಕೊಂಡ ಎಂದು ಅಭಿಪ್ರಾಯ ಪಡುತ್ತಾರೆ ಡಾ|| ಜಿ. ಎಸ್. ಕುಳ್ಳಿಯವರು.

ಮೂಲತಃ ಮಾನವ ಸಮಾಜ ಜೀವಿ; ಸಂಘ ಜೀವಿ, ಸಮಾಜವನ್ನಾಗಲಿ ಅಥವಾ ಸಂಘ ಸಂಸ್ಥೆಗಳನ್ನಾಗಲಿ ಬಿಟ್ಟು ಆತ ಜೀವಿಸಲಾರ. ಮಾನವನನ್ನು ಸಮಾಜ ಜೀವಿಯನ್ನಾಗಿ ಮಾಡಿದ್ದು ಈ ಭಾಷೆಯೇ, ಮಾನವ ಮೂಲತಃ ಒಂದು ಮಾತನಾಡುವ ಪ್ರಾಣಿ. ಈ ಮಾತಿನ ಸಹಾಯದಿಂದ ಆತ ತನ್ನ ದಿನ ನಿತ್ಯದ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ವಶಕ್ತವಾಗಿದ್ದಾನೆ. ಆದ್ದರಿಂದ ಭಾಷೆ ಒಂದು ಸಾಮಾಜಿಕ ಸಹಕಾರದ ವ್ಯವಸ್ಥೆಯಾಗಿದೆ.

                      •                     *                     *

 

Category:Literature



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.