Do you have a passion for writing?Join Ayra as a Writertoday and start earning.

ಬನ್ನಿ ಒಮ್ಮೆ ಸೋಲೋಣimage

ಬನ್ನಿ ಒಮ್ಮೆ ಸೋಲೋಣ...
.......................................

ಮಗುವಿನ ವಾರ್ಷಿಕ ಪರೀಕ್ಷಾ ಫಲಿತಾಂಶವನ್ನು ನೋಡಲು ತಂದೆ ಕಾತರದಿಂದ ಶಾಲೆಗೆ ಬಂದನು. ಶಿಕ್ಷಕಿ ಈತನ ಮುಖ ನೋಡಿದೊಡನೆ ಆ ಮಗು ಫೇಲ್ ಆಗಿರುವ ವಿಷಯವನ್ನು ತಿಳಿಸಿದರು. ತಂದೆಯ ಮುಖ ಪೆಚ್ಚಾಯಿತು. ದುಃಖ ಉಮ್ಮಳಿಸಿ ಬಂದರೂ ತಡೆದುಕೊಂಡು, ಬಲವಂತದ ನಗುವನ್ನು ತಂದುಕೊಂಡು ಅಲ್ಲಿಂದ ಮನೆಯತ್ತ ಭಾರದ ಹೆಜ್ಜೆ ಹಾಕಿ ಹೊರಟನು. ಮನೆಗೆ ಬಂದವರೇ ಮಗುವಿನ ಮುಖವನ್ನು ನೋಡಿದನು . ಅವನಿಗೆ ತಾನು ಫೇಲಾಗುವ ಬಗ್ಗೆ ಖಚಿತವಿತ್ತು. ಅಪ್ಪನೆಲ್ಲಿ ಹೊಡೆಯುವನೋ ಎಂದು ಹೆದರಿಕೊಂಡು ಅಮ್ಮನ ಸೆರಗಿನ ಹಿಂದೆ ಅಡಗಿಕೊಂಡಿದ್ದ . ತಂದೆ ಮೆಲ್ಲನೆ ಮಗುವಿನ ತಲೆಯನ್ನು ನೇವರಿಸಿ ಕೋಣೆಯ ಕಡೆ ಮುಖ ಮಾಡಿದ. ಎಲ್ಲವನ್ನೂ ಗ್ರಹಿಸಿದ ಅಮ್ಮ ಮಗುವನ್ನು ಆಟಕ್ಕೆ ಕಳುಹಿಸಿ ಗಂಡನ ಬಳಿ ಬಂದಳು. ಆಕೆಯಲ್ಲಿಯೂ ದುಗುಡ ಮನೆಮಾಡಿತ್ತು. ಆತನೇ ಬಾಯ್ತೆರೆದ " ಮಗು ಫೇಲ್ ಆಗಿದ್ದಾನೆ. ಅವನ ತರಗತಿಯ ಎಲ್ಲರಿಗಿಂತ ಇವನೇ ದಡ್ಡನೆಂಬಂತೆ ಆ ಶಿಕ್ಷಕಿ ವರ್ತಿಸಿದರು. ನನಗೆ ಆ ಕ್ಷಣ ಮಗನ ಮೇಲೆ ಕಡುಕೋಪ ಬಂದಿತ್ತು. ಆದರೆ ಯಾವುದನ್ನು ತೋರಿಸಿಕೊಳ್ಳದೆ ಬಂದೆ.ಅಲ್ಲಿಂದ ಇಲ್ಲಿಗೆ ಬಂದು ತಲುಪುವುದರೊಳಗೆ ನನ್ನಲ್ಲಿ ಅದೆಷ್ಟೋ ಬದಲಾವಣೆ ತಂದುಕೊಂಡೆ. ಇರುವನೊಬ್ಬ ಮಗನೆಂದು ದೊಡ್ಡ ಶಾಲೆಗೆ ಸೇರಿಸಿದ್ದೇವೆ. ನಾವು ಹೊರಗಿನಿಂದ ಸೌಕರ್ಯವನ್ನು ಕಲ್ಪಿಸಬಹುದೇ ಹೊರತು ಅಕ್ಷರಗಳನ್ನು ತಲೆಗೆ ತುಂಬಲು ಸಾಧ್ಯವಿಲ್ಲ. ನಮ್ಮೆಲ್ಲಾ ಶಕ್ತಿ ಮೀರಿ ಅವನ ಭವಿಷ್ಯಕ್ಕೆ ದುಡಿಯುತ್ತಿದ್ದೇವೆ. ಅವನಿಗೆ ವಿದ್ಯೆ ಕಡಿಮೆಯಿದೆ. ಆದರೆ ಬುದ್ಧಿವಂತಿಕೆಯಿದೆ. ಮತ್ತೆ ಅದೇ ತರಗತಿಯಲ್ಲಿ ಓದಲಿ. ಸಾಧ್ಯವಾದಷ್ಟು ಕಲಿಯಲಿ. ಆಗದೇ ಇದ್ದ ಪಕ್ಷದಲ್ಲಿ ನಮ್ಮದೇ ಅಂಗಡಿಯಿದೆ, ನೋಡಿಕೊಳ್ಳಲಿ. ಇಲ್ಲಾ ಅವನಿಚ್ಚೆಯಿದ್ದ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲಿ. ಏನಾಗದಿದ್ದರೂ ಒಬ್ಬ ಸುಸಂಸ್ಕೃತ ಮನುಷ್ಯನಾಗಲಿ.ಸುಮ್ಮನೆ ಅವನಿಗೂ ನೋಯಿಸಿ ನಾವೂ ನೊಂದುಕೊಳ್ಳುವುದರಲ್ಲಿ ಅರ್ಥವಿಲ್ಲ. "
     ಇದೇ ಧನಾತ್ಮಕ ಮನೋಭಾವ ಬೇಕಿರುವುದು ನಮಗೆ. ಇತ್ತೀಚೆಗೆ ನೀಟ್ ಪರೀಕ್ಷೆ ಪಾಸ್ ಆಗಲಿಲ್ಲವೆಂದು ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜಿಗಿದು ಸತ್ತಿದ್ದು. ಮತ್ತೊಬ್ಬಾಕೆ ಪರೀಕ್ಷೆಯಲ್ಲಿ ಫೇಲ್ ಆದೆನೆಂದು ಕೆರೆಗೆ ಹಾರಿದ್ದು.ಪ್ರತಿನಿತ್ಯ ನೋಡುತ್ತಿದ್ದೇವೆ ಇಂತಹುದೆ ಅನಾಹುತಗಳನ್ನು. ಕೆಲವು ಪೋಷಕರು ತಮ್ಮ ಕೈಯಲ್ಲಿ ಆಗದ್ದನ್ನು ಮಕ್ಕಳಿಂದ ಮಾಡಿಸಬೇಕೆಂಬ ಹಠದಲ್ಲಿ, ಇನ್ನೂ ಹಲವರು ತಮ್ಮ ಮಕ್ಕಳು ಡಾಕ್ಟರೋ, ಇಂಜಿನೀಯರೋ ಅಥವಾ ದೊಡ್ಡ ಅಧಿಕಾರಿಯೇ ಆಗಬೇಕೆಂಬ ಆಸೆಯಲ್ಲಿ, ಮತ್ತೊಬ್ಬರ ಮೇಲಿನ ಛಲದಲ್ಲಿ,ವಿಪರೀತ ಒತ್ತಡವನ್ನು ಹಾಕುತ್ತಿದ್ದೇವೆ. ಜೊತೆಗೆ ನಾವು ಆ ಒತ್ತಡದ ಬೆಂಕಿಯಲ್ಲಿ ಬೇಯುತ್ತಿದ್ದೇವೆ. ಪರೋಕ್ಷವಾಗಿ ಇದು ನಕಾರಾತ್ಮಕ ಪರಿಣಾಮವನ್ನು ಬೀರಿ ಮಕ್ಕಳ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಹುಟ್ಟು ಸಾವಿನಂತೆ ಪರೀಕ್ಷೆಯಲ್ಲಿ ಪಾಸು ನಪಾಸುಗಳು ಸಹಜ. ಪೋಷಕರು ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು.ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅಗಾಧ ಕನಸುಗಳನ್ನು ಕಂಡಿದ್ದಾಗ ಎದುರಾಗುವ ವೈಫಲ್ಯಗಳು ನಮ್ಮನ್ನು ಕಂಗೆಡಿಸುವುದು ಸಹಜ. ಹಾಗೆಂದು ಮಕ್ಕಳನ್ನು ನಿಂದಿಸಿದರೆ ಅವರು ಕೈತಪ್ಪುವ ಆತಂಕವಿರುತ್ತದೆ. ಮಕ್ಕಳು ಬಿದ್ದಾಗ ನಾವೊಮ್ಮೆ ತಬ್ಬಿಕೊಂಡರೆ ನೂರಾನೆಗಳ ಬಲ ಅವರಲ್ಲಿ ಮೂಡುತ್ತದೆ. ಅದೇ ಜರಿದಾಗ ಇದ್ದ ವಿಶ್ವಾಸವೆಲ್ಲವೂ ಮಾಯವಾಗಿಬಿಡುತ್ತದೆ.
     ಇಷ್ಟಕ್ಕೂ ಯಾವುದೋ ಒಂದು ಪರೀಕ್ಷೆ ಒಬ್ಬನ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದು ಕೇವಲ ಒಂದು ಸಾಧನವಷ್ಟೇ.ಸುಂದರ ಬದುಕಿಗೆ ಸಾವಿರಾರು ದಾರಿಗಳಿವೆ. ಆ ದಾರಿಗಳಿಗೆ ಮಕ್ಕಳನ್ನು ಒಯ್ಯುವ ಹಣತೆಗಳಂತೆ ನಾವು ವರ್ತಿಸಬೇಕು. ಪ್ರಾಥಮಿಕದಲ್ಲಿ ಪಂಟರ್ ಆಗಿದ್ದವರೆಲ್ಲ ಹತ್ತು ಹನ್ನೆರಡನೇ ತರಗತಿಯಲ್ಲಿ ಪಂಕ್ಚರ್ ಆಗಿದ್ದನ್ನು ನೋಡಿದ್ದೇವೆ. ಚಿಕ್ಕ ತರಗತಿಯಲ್ಲಿ ಲೆಕ್ಕಕ್ಕಿಲ್ಲದವರು ಬೆಳೆಯುತ್ತಾ ಹೋದಂತೆ ದೊಡ್ಡ ದೊಡ್ಡ ಸಾಧಕರಾಗಿದ್ದನ್ನು ಕಂಡಿದ್ದೇವೆ. ಯಾವ ಮಕ್ಕಳಿಗೋ ನಮ್ಮ ಮಕ್ಕಳನ್ನು ಹೋಲಿಸುವುದು ಅರೋಗ್ಯಕರವಲ್ಲ. ಮೊಲ ನೆಗೆವುದರಲ್ಲಿ, ಮೀನು ಈಜುವುದರಲ್ಲಿ, ಪಾರಿವಾಳ ಹಾರುವುದರಲ್ಲಿ ಪರಿಣಿತರಾಗಿರುತ್ತವೆ. ಅವರವರ ಸಾಧನೆಯ ಶೈಲಿ ಅವರದ್ದೇ ಮಾರ್ಗದಲ್ಲಿ ಸಾಗುತ್ತದೆ. ಆ ಚಕ್ರ ಕೆಲವರಲ್ಲಿ ಬೇಗ ತಿರುಗಿದರೆ, ಕೆಲವರಿಗೆ ನಿಧಾನವಾಗಬಹುದು.ಹಾಗಾಗಿ ಎಂದೂ ಮಕ್ಕಳ ಬಗ್ಗೆ ಅತೀ ಉತ್ಸಾಹವಾಗಲಿ, ಹತಾಶೆಯಾಗಲಿ ಒಳ್ಳೆಯದಲ್ಲ. 
          ಸುಮ್ಮನೆ ಮಕ್ಕಳ ಕಡಿಮೆ ಅಂಕಗಳನ್ನು ನೋಡಿ ಕೂಗಾಡುವ ಪೋಷಕರು, ತಾವು ಶಾಲೆಯಲ್ಲಿ ಕಡಿದು ಗುಡ್ಡೆ ಹಾಕಿದ್ದನ್ನು ನೆನಪಿಸಿಕೊಳ್ಳಬೇಕು. ಅವರ ಸಹಪಾಠಿಗಳಲ್ಲಿ ಕೆಲವರು ಉನ್ನತ ಅಧಿಕಾರಿಗಳಾಗಿ, ಉದ್ಯಮಿಗಳಾಗಿ,
ಸಿರಿವಂತರಾಗಿ ಬದುಕುತ್ತಿರುವಾಗ ತಾವು ಹಾಗೇ ಉಳಿದದ್ದು ಹೇಗೆಂದು ಆಲೋಚಿಸಿದ್ದಾರೆಯೇ?.ತಮ್ಮ ಅಕಾಂಕ್ಷೆಗಳ ಹೊರೆಯನ್ನೇಕೆ ಪಾಪದ ಮಕ್ಕಳ ಮೇಲೆ ಹೇರುವುದು.ಮಕ್ಕಳ ಭವಿಷ್ಯವನ್ನು ರೂಪಿಸುವ ಭರದಲ್ಲಿ ಅವರ ಕನಸನ್ನು ಕೊಲ್ಲುವ ಪ್ರಯತ್ನವನ್ನು ಮಾಡುವುದು ತರವೇ?.ಮಕ್ಕಳೇನು ತಮ್ಮನ್ನು ಇಂತಹುದೆ ಶಾಲೆಗೆ ಸೇರಿಸಿರೆಂದು ಹೇಳಿರುವುದಿಲ್ಲ. ನಮ್ಮ ದೊಡ್ಡಸ್ತಿಕೆಗೆ ನಾವು ಅವರನ್ನು ಎಲ್ಲೆಲ್ಲಿಗೋ ತಳ್ಳಿರುತ್ತೇವೆ.ಕೆಲವು ಮಕ್ಕಳಿಗೆ ಕಲಿಕೆ ಬೆಣ್ಣೆ ಮೇಲಿನ ನಡಿಗೆಯಾದರೆ ಹಲವರಿಗದು ಕೆಂಡವನ್ನೇ ಹಾಯ್ದಂತ ಅನುಭವ.ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ತರವಲ್ಲ. ಹುಲಿ ಮಾಂಸ ತಿಂದರೆ, ಜಿಂಕೆ ಹುಲ್ಲು ತಿನ್ನುತ್ತದೆ. ಜಿಂಕೆಯ ಮುಂದೆ ಮಾಂಸವನ್ನಿಟ್ಟು ತಿನ್ನುವಂತೆ ಬಲವಂತ ಮಾಡುವ ನಮ್ಮ ಪ್ರವೃತ್ತಿ ಒಳ್ಳೆಯದಲ್ಲ. ಅವರಿಷ್ಟವನ್ನು ಗೌರವಿಸೋಣ. ನಡೆವ ಹಾದಿಯಲ್ಲಿ ಎಡವಿದಾಗ ಹೆಗಲಾಗಿ ಕೊಂಡೊಯ್ಯೋಣ.ಸೋತ ಮಕ್ಕಳನ್ನು ಮತ್ತೆ ಗೆಲ್ಲುವಂತೆ ಪ್ರೆರೇಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೆಚ್ಚು ಅಂಕಗಳು ಬಂದಾಗ ಬೀಗುವ ಹಕ್ಕಿದ್ದ ಮೇಲೆ ಕಡಿಮೆಯಾದಾಗ ಸಾಂತ್ವನ ಹೇಳುವ ಜವಾಬ್ದಾರಿಯೂ ನಮ್ಮದೇ. ಜೀವನದಲ್ಲಿ ಸೋತವನನ್ನು ಸಾಯಿಸಬಾರದು ಸಂತೈಸಬೇಕು.ದಡ್ಡ ವಿದ್ಯಾರ್ಥಿ ಎಡಿಸನ್ ಜಗದ್ವಿಖ್ಯಾತ ವಿಜ್ಞಾನಿಯಾಗಿಸಿದ್ದು, ಆತನ ತಾಯಿಯ ಸ್ಫೂರ್ತಿ ಮತ್ತು ಸಹಕಾರ. ಆದ್ದರಿಂದ ಮಕ್ಕಳು ಕಡಿಮೆ ಅಂಕ ತೆಗೆದರೆಂದು, ಫೇಲಾದರೆಂದು ಬೇಸರಬೇಡ. ನಾವು ಅವರೊಡನಿದ್ದೇವೆಂದು ಬೆಂಬಲಿಸೋಣ. ಬಿಸಿಲಿಗೆ ಬಾಡಿದ ಗಿಡವನ್ನು ನೀರು ಹಾಕಿ ಜೋಪಾನ ಮಾಡಿದಂತೆ, ಮಕ್ಕಳೆಂಬ ಸಸಿಗಳನ್ನು ಜಾಗೃತಿಯಿಂದ ಕಾಪಾಡೋಣ." ಮಗು ಕುಟುಂಬದ ನಗು" ಎಂಬುದನ್ನು ಮರೆಯದಿರೋಣ. ಅವರ ಗೆಲುವಿನ ಜೊತೆಗೆ ಸೋಲನ್ನು ಸ್ವೀಕರಿಸೋಣ. ಗೆಲುವಿಗಿಂತ ಸೋಲು ಕಲಿಸಿದ ಪಾಠಗಳೇ ವ್ಯಕ್ತಿಯನ್ನು ಎತ್ತರಕ್ಕೊಯ್ದಿವೆ. ಸಾಧ್ಯವಾದರೆ ಬನ್ನಿ ಒಮ್ಮೆ ಸೋಲೋಣ...

                 ✍️ ಸತ್ಯರಂಗಸುತ ✍️

Category:Personal Development


ProfileImg

Written by ಗಿರೀಶ್ ಕುಮಾರ್ ಎಚ್ ಆರ್