ಮಾನವೀಯತೆಯ ಧರ್ಮ ಬೋಧಿಸಿದ ಬುದ್ಧ

ProfileImg
23 May '24
4 min read


image

ನಿರ್ಬೀತಿಯಿಂದ ನಿರ್ಮೋಹಿಯವರೆಗೂ 
ಪದತ್ಯಾಗದಿಂದ ಪರಿತ್ಯಾಗಿಯವರೆಗೂ 
ಗಮ್ಯದಿಂದ ಅಗಮ್ಯದವರೆಗೂ 
ಮಾತಿನಿಂದ ಮೌನದವರೆಗೂ
ಆಸೆಯಿಂದ ನಿರಾಸೆಯವರೆಗೂ
ಅಶಾಂತಿಯಿಂದ ಶಾಂತಿಯವರೆಗೂ 
ನಿರೀಕ್ಷೆಯಿಂದ ತ್ಯಾಗಿಯಾಗುವವರೆಗೂ 
ತಾಳ್ಮೆ ಮತ್ತು ಪ್ರೀತಿಯಿಂದ ಜಗವನ್ನೇ ಗೆದ್ದು 
ಮಾತಿಗೆ ಬದ್ಧನಾದ ... ಪ್ರಶಾಂತವದನನಾದ
ತ್ಯಾಗಿಯಾದ ... ಜ್ಞಾನಿಯಾದ ... ಶುದ್ಧನಾದ .
ಬದ್ಧನಾದ..ಪ್ರಬುದ್ಧನಾದ..ಮನದ ತಮಕ್ಕೆ ಬೆಳಕಾಗಿ ಬುದ್ದನಾದ ...ಜಗಕ್ಕೇ.... ಬೆಳಕಾದ.!

ಬೌದ್ಧಧರ್ಮ ಸಂಸ್ಥಾಪಕನಾದ ಗೌತಮ ಬುದ್ಧನ ಜಯಂತಿಯನ್ನು ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ! ಇತಿಹಾಸದ ಪುಟ ತಿರುವಿದಾಗ ಕ್ರಿ.ಪೂ. 563 ರಿಂದ ಕ್ರಿ..ಪೂ 483 ರ ನಡುವೆ ಹಿಮಾಲಯದ ತಪ್ಪಲಿನಲ್ಲಿರುವ ಲುಂಬಿನಿ ಗ್ರಾಮದಲ್ಲಿ ಬುದ್ಧನ ಜನನ ವಾಗಿತ್ತು ಎಂಬುದು ತಿಳಿಯುತ್ತದೆ. ಲುಂಬಿನಿ ಆಗ ಅಖಂಡ ಭಾರತಕ್ಕೆ ಸೇರಿತ್ತು ದೇಶ ವಿಭಜನೆಯ ನಂತರ ಈ ಲುಂಬಿನಿ ಗ್ರಾಮ ಇಂದಿನ ನೇಪಾಳಕ್ಕೆ ಸೇರಿದೆ. ಅಲ್ಲದೆ ಭಾರತದಲ್ಲಿನ ಹಿಂದೂಗಳಲ್ಲಿ ಬುದ್ಧ ವಿಷ್ಣುವಿನ 9ನೇಯ ಅವತಾರವೆಂಬ ನಂಬಿಕೆಯು ಕೂಡ ಇದೆ. ಬೌದ್ದರು "ವೆಸೆಕ" ಎಂದು ಆಚರಿಸಿದರೆ, ಭಾರತದಲ್ಲಿ ಬುದ್ಧಜಯಂತಿ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಬುದ್ಧನ ಮೂಲ ಹೆಸರು ಸಿದ್ದಾರ್ಥ. ಈ ಸಿದ್ದಾರ್ಥನು ಶಾಕ್ಯ ಕುಲದ ಉದಾತ್ತ ಕುಟುಂಬದಲ್ಲಿ; ಶಾಕ್ಯ ಕುಲದ ಮುಖ್ಯಸ್ಥ ರಾಜ ಶುದ್ಧೋದನ ಮತ್ತು ಮಾಯದೇವಿಯವರ ಮಗನಾಗಿ ರಾಜಕುಟುಂಬ ದಲ್ಲಿ ವ್ಯೆಶಾಖ ಪೂರ್ಣಿಮೆಯಂದು ಜನಿಸುತ್ತಾನೆ. ಅವನ ಜಾತಕದ ಪ್ರಕಾರ ಮಹಾ ಚಕ್ರವರ್ತಿ ಅಥವಾ ಮಹಾನ್ ಯೋಗಿ ಆಗಬಹುದೆಂದು ಇದ್ದಿದ್ದರಿಂದ ಅವನ ತಂದೆ ತನ್ನ ಮಗ ಮಹಾ ಚಕ್ರವರ್ತಿ ಆಗಬೇಕೆಂಬ ಹಂಬಲದಿಂದ 
ಅವನಿಗೆ ಲೌಕಿಕ ಕಷ್ಟಕಾರ್ಪಣ್ಯಗಳು ತಿಳಿಯದಂತೆ ಶ್ರೀಮಂತಿಕೆಯಿಂದ ಬೆಳೆಸುತ್ತಾನೆ. 

ಹೀಗೆ ಐಷಾರಾಮಿಯಾಗಿ ಅರಮನೆಯಲ್ಲಿ ಬಹು ಶ್ರೀಮಂತಿಕೆಯಿಂದ ಬದುಕುತ್ತಿದ್ದ ಸಿದ್ದಾರ್ಥ ಒಂದು ದಿನ ಸೇವಕನ ಜತೆಗೂಡಿ ಹೊರ ಸಂಚಾರಕ್ಕಾಗಿ ಹೋಗುತ್ತಾನೆ . ಆಗ ವಯಸ್ಸಾದ ವೃದ್ಧ,ಶವ ಹಾಗೂ ರೋಗಿಗಳನ್ನು,ಜನರ ಕಷ್ಟಕಾರ್ಪಣ್ಯ ಗಳನ್ನು  ಒಬ್ಬ ತಪಸ್ವಿಯನ್ನೂ ನೋಡುತ್ತಾನೆ.ಇವು ಯಾವುದರ ಪರಿವೆ ಇಲ್ಲದೆ ಬೆಳೆದ ಸಿದ್ದಾರ್ಥ ಈ ಎಲ್ಲಾ  ಸನ್ನಿವೇಶಗಳನ್ನು ನೋಡಿದ ಮೇಲೆ ತುಂಬಾ ದುಃಖದಿಂದ ಮರುಗುತ್ತಾನೆ. ಅಲ್ಲದೆ ಅವನು  ಸಾರಥಿ ಜಗತ್ತಿನಲ್ಲಿ ಹುಟ್ಟಿದ ಎಲ್ಲಾ ಜೀವಿಗಳಿಗೂ ವೃದ್ಧಾಪ್ಯ, ಅನಾರೋಗ್ಯ ಮತ್ತು ಮರಣ ಬಂದೇ ಬರುತ್ತದೆ ಎಂದು ಅವನಿಗೆ ವಿವರಿಸುತ್ತಾನೆ. ಇದನ್ನು ಕೇಳಿದ ಬುದ್ಧನಿಗೆ ಅವನ ಯೋಚನಾ ಪರಿಧಿಯೇ ಬದಲಾಗುತ್ತದೆ. ನಂತರ ಇದರಿಂದ ಪ್ರೇರಣೆಗೊಂಡ ಸಿದ್ದಾರ್ಥ ತಪಸ್ವಿಯಾಗುವ ಮೂಲಕ ಈ ಎಲ್ಲಾ ದುಃಖಗಳನ್ನು ಜಯಿಸಬಹುದೆಂದು ಗ್ರಹಿಸುತ್ತಾ; ದುಃಖದ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುತ್ತಾ ತನ್ನ ರಾಜ್ಯವನ್ನು ತೊರೆಯಲು ನಿರ್ಧರಿಸಿ ಅರಸೊತ್ತಿಗೆಯನ್ನು ತ್ಯಜಿಸಿ ನಡುರಾತ್ರಿಯಲ್ಲಿ ಹೆಂಡತಿ  ಮಗನನ್ನು ಬಿಟ್ಟು ಲೋಕ ಸಂಚಾರಕ್ಕೆ  ಹೊರಡುತ್ತಾನೆ.

ಇಲ್ಲಿಂದ ಶುರುವಾದ ಅವನ ಬದುಕಿನ ಪಯಣ ಅವನನ್ನು ಮಹಾನ್ ಜ್ಞಾನಿಯನ್ನಾಗಿ ಮಾಡುತ್ತದೆ. ಮೌನ ಮತ್ತು ಧ್ಯಾನದ ಮೊರೆಹೋದ ಸಿದ್ದಾರ್ಥನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಗಿ ಹುಟ್ಟು ಸಾವಿನ ನಡುವಿನ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ; ಅಮೂಲ್ಯ ಸಂದೇಶಗಳನ್ನು ಕೊಡುವ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡುತ್ತಾನೆ. ಬೌದ್ಧ ಧರ್ಮವನ್ನು ಸ್ಥಾಪಿಸಿ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡುತ್ತಾನೆ. ಬುದ್ಧ ಶುದ್ಧ ಚಾರಿತ್ರ್ಯದ ಸಾಕಾರಮೂರ್ತಿ ಮಂದಸ್ಮಿತಿ ವದನದಿಂದಲೇ ಎಲ್ಲರನ್ನೂ ಸೆಳೆಯುತ್ತಾನೆ ಸಾಮಾನ್ಯವಾಗಿ ಬುದ್ಧನನ್ನು ಇಷ್ಟಪಡದವರು ಕಡಿಮೆ ಎನ್ನಬಹುದು, ಬುದ್ಧನ ಮುಖ ಚಹರೆಯೇ ಹಾಗೆ ನೋಡಿದಾಕ್ಷಣ ಏನೋ ನೆಮ್ಮದಿ ಹಾಗೂ ಮನಸ್ಸಿಗೆ ಶಾಂತಿ ಸಿಕ್ಕ ಅನುಭವ ವಾಗುತ್ತದೆ.  ಎಂಥಹ ದುಃಖದಲ್ಲಿದ್ದರೂ ಅವನ ಸಂದೇಶಗಳನ್ನು ಕೇಳಿದಾಗ ಅಥವಾ ಓದಿದಾಗ ಮನಕ್ಕೆ ಏನೋ ಒಂದು ಸಮಾಧಾನ ಸಿಕ್ಕಂತಾಗುತ್ತದೆ. 

ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿಲ್ಲವೆಂದು ಹೇಳಬಹುದು. ಕಾರಣ  ಅವನು ಪ್ರತಿಯೊಬ್ಬ ಮನುಷ್ಯನು ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿ, ತಾನು ರಾಜ ಪದವಿಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದಕ್ಕೂ ಶಾಂತಿ,ಅಹಿಂಸಾ ಸಂದೇಶಗಳನ್ನು ಸಾರಿ ಜೀವನದ ಹಲವು ಜಂಜಾಟಗಳಿಗೆ ತಾಳ್ಮೆ ,ಮತ್ತು ಶಾಂತಿಯ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. ಧ್ಯಾನ, ದಾನ, ಪ್ರೀತಿ ತ್ಯಾಗ,ತಾಳ್ಮೆ, ಮೌನ ಅಹಿಂಸೆಗಳ ಸುಂದರತೆಯನ್ನು ಜಗತ್ತಿಗೆ ತಿಳಿಸುತ್ತ ಮಾನವ ಜೀವನದ ಮೌಲ್ಯ ಮತ್ತು ಉದ್ದೇಶಗಳನ್ನು ಸರಳ ಸಂದೇಶಗಳ ಮೂಲಕ ಸಾರಿದ ಕರುಣಾಮೂರ್ತಿ ಬುದ್ಧ. ತನ್ನ ಹಲವು ವರ್ಷಗಳ ಧ್ಯಾನ ಕಠಿಣತಪಸ್ಸು ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಧಾರ್ಮಿಕ,ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಧರ್ಮದ ಆಶಯಗಳನ್ನು ಜಗತ್ತಿಗೆ ಬಿತ್ತಿದವನು. 

"ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ"ಎಂಬ ಅದ್ಭುತ ಸಂದೇಶವನ್ನು ಮನುಕುಲಕ್ಕೆ ನೀಡಿ;ನಮ್ಮದು ಆ ಧರ್ಮ ಈ ಧರ್ಮವೆಂದು ನಿರಂತರವಾಗಿ ಕಚ್ಚಾಡುತ್ತಾ ಪ್ರತಿಯೊಬ್ಬರೂ ತಮ್ಮದೇ ಶ್ರೇಷ್ಠ ಧರ್ಮವೆಂದು ಅನಗತ್ಯವಾಗಿ ವಾದಮಾಡುತ್ತ ಕೋಪ ದ್ವೇಷಗಳನ್ನು ಸಾದಿಸುತ್ತ ಜೀವನದ ಮೌಲ್ಯಗಳನ್ನೇ ಮರೆತು ಬದುಕನ್ನು ನರಕ ಮಾಡಿಕೊಳ್ಳುತ್ತಾರೆ, ಆದರೆ "ನಿಜವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ" ಎನ್ನುವ ಅಮೂಲ್ಯ ಸಂದೇಶವನ್ನು ಕೊಟ್ಟ ಮಹಾನ್ ಮೇಧಾವಿ ಬುದ್ಧ. ಜೀವನ ಎಂಬುದು ನಶ್ವರ. ಜಗತ್ತು ದುಃಖ ದುಮ್ಮಾನಗಳಿಂದ ಕೂಡಿದೆ ಎನ್ನುತ್ತಾ ಯಶಸ್ವಿ ಹಾಗು ಸಂತೋಷದ ಜೀವನಕ್ಕೆ ಬೇಕಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಿಸಬೇಕೆಂದು ಹೇಳಿದ್ದಲ್ಲದೆ ಸ್ವತಃ ತಾನು ಕೂಡ ಅದನ್ನು ಪಾಲಿಸಿದನು ಹಾಗೆ ನೋಡುವುದಾದರೆ ಬುದ್ಧನ ಜೀವನವೇ ಒಂದು ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ ಆಶಯಗಳನ್ನು ದಿಕ್ಕರಿಸಿದವನಲ್ಲ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇದ್ದಾಗಲೂ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು,ತನ್ನ ಸನ್ಯಾಸತ್ವವನ್ನು ಬಿಟ್ಟವನಲ್ಲ ಬುದ್ಧ. ಜೀವನದುದ್ದಕ್ಕೂ ನೊಂದವರ ಕಣ್ಣೀರ ಒರೆಸಿ ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವನು. 

"ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದ ಪ್ರೀತಿಯೊಂದೇ" ಎಂದು ಜಗತ್ತಿಗೆ ಸಾರಿದ ಕರುಣಾಸಾಗರ. ಮನುಷ್ಯನ ಎಲ್ಲಾ ಕಷ್ಟಗಳಿಗೆ ಮನುಷ್ಯನೇ ಕಾರಣ 'ಮನುಷ್ಯನೇ ದುಃಖದ ಮೂಲ'. ಆತನ ಅತಿಯಾದ ಆಸೆಗಳೇ ದುಃಖಕ್ಕೆ ದಾರಿ ಎನ್ನುತ್ತಾ. ಬದುಕಿನಲ್ಲಿ ಬರುವ  ದುಃಖವನ್ನು ಸೃಷ್ಟಿಸಿಕೊಳ್ಳುವವನು ಮತ್ತು ದುಃಖವನ್ನು ಹೆಚ್ಚಿಸಿಕೊಳ್ಳುವವನೇ ಮನುಷ್ಯನೇ ಈ ಕಾರಣದಿಂದಾಗಿ ಅವರವರ ದುಃಖದಲ್ಲಿ ಅವರ ಪಾತ್ರವೇ ಸಾಕಷ್ಟಿದೆ ಎಂದು ತಿಳಿಸುತ್ತಾನೆ. ಅಲ್ಲದೆ ಯಾವುದೇ ರೀತಿಯ ತೊಂದರೆಯಲ್ಲಿ ಸಿಲುಕಿ ಕೊಂಡರೂ ಆ ಸಮಸ್ಯೆ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬಾರದು ಪರಿಸ್ಥಿತಿ ಎಷ್ಟೇ ಕಷ್ಟವಾಗಿದ್ದರೂ ತಾಳ್ಮೆಯಿಂದಿರಬೇಕು ಇದು ಖಂಡಿತವಾಗಿಯೂ ದುಃಖಕ್ಕೆ ಪರಿಹಾರವನ್ನು ನೀಡುತ್ತದೆ. ಜೀವನದಿಂದ ದುಃಖವನ್ನು ತೊಡೆದುಹಾಕಲು ತಾಳ್ಮೆ ತುಂಬಾನೇ ಅವಶ್ಯಕ ಎಂದು ಹೇಳುತ್ತಾ "ಆಸೆಯೇ ದುಃಖಕ್ಕೆ ಮೂಲ ಕಾರಣ "ಎಂಬ ಮಹಾನ್ ಸಂದೇಶವನ್ನು ಲೋಕಕ್ಕೆ ನೀಡುತ್ತಾನೆ.

ಬುದ್ಧನ ಪ್ರಕಾರ, ನಾವು ಮನಸ್ಸಿನಲ್ಲಿ ಏನನ್ನು ಯೋಚಿಸುತ್ತೇವೆಯೋ ಅದರಂತೆ ಆಗುತ್ತದೆ. ಹಾಗಾಗಿ, ಸದಾ ನಮ್ಮ ಆಲೋಚನೆಗಳು ಉತ್ತಮಚಿಂತನೆಗಳನ್ನು ಒಳಗೊಂಡಿರಬೇಕು  ಹಾಗೂ ಮನಸಸ್ಸು ಶುದ್ಧವಾಗಿದ್ದಲ್ಲಿ  ಉತ್ತಮ ಆಲೋಚನೆಗಳು ಮಾತ್ರವೇ ಬರುತ್ತವೆ, ಉತ್ತಮ ಅಲೋಚನೆ ಮತ್ತು ಚಿಂತನೆಗಳನ್ನು ಹೊಂದಿರುವ ವ್ಯಕ್ತಿಯನ್ನು ಸಂತೋಷವು ನೆರಳಿನಂತೆ ಹಿಂಬಾಲಿಸುತ್ತದೆ. ಜೀವನವು ಧನಾತ್ಮಕವಾಗಿ ಇರಬೇಕಾದರೆ ನಾವು ಧನಾತ್ಮಕ ಚಿಂತನೆಗಳನ್ನು ಹೆಚ್ಚಾಗಿ ಮಾಡಬೇಕು. 

ಓರ್ವ ವ್ಯಕ್ತಿಯ ಆಲೋಚನೆಗೆ ಆ ವ್ಯಕ್ತಿಯ ಜೀವನವನ್ನು ಉದ್ಧಾರ ಮಾಡುವ ಇಲ್ಲವೇ ನಾಶ ಮಾಡುವ ಈ ಎರಡೂ ಸಾಮರ್ಥ್ಯವಿರುತ್ತದೆ. ನಮ್ಮ ಆಲೋಚನೆಗಳು ಪಂಚೇಂದ್ರಿಯಗಳಿಂದ ರೂಪುಗೊಂಡಿರುತ್ತದೆ. ಅಂತಹ ಸನ್ನಿವೇಶದಲ್ಲಿ ಧನಾತ್ಮಕ ಚಿಂತನೆಯು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಹಾಗಾಗಿ ಧನಾತ್ಮಕ ಚಿಂತನೆಯಿಂದ ಮಾತ್ರ ನೆಮ್ಮದಿ ಹಾಗೂ ಶಾಂತಿಯುತ ಜೀವನ ಮಾಡಲು ಸಾಧ್ಯವೆಂದು ತನ್ನ ಸಂದೇಶಗಳ ಮೂಲಕವೇ ಜನರ ಮನಸ್ಸನ್ನು ಗೆಲ್ಲುತ್ತಾ ಶಾಂತಿದೂತನಾಗಿ ಭಗವಾನ್ ಬುದ್ದನಾಗಿ ಇಡೀ ಜಗತ್ತನ್ನೇ ಗೆಲ್ಲುತ್ತಾನೆ.

Category:Education



ProfileImg

Written by Geethanjali NM

Author ✍️