ಸುಗುಣ ಹೆಸರಿಗೆ ತಕ್ಕಂತೆ ಗುಣವಂತಳು. ಅವಳ ಅಕ್ಕ ಕನಕ. ಇಬ್ಬರೂ ಸಾಫ್ಟವೇರ್ ಇಂಜಿನಿಯರುಗಳು. ಕನಕಳ ಮದುವೆ ಉತ್ತಮ ವರ ಮಾಧವನೊಂದಿಗೆ ನಡೆಯಿತು.ಆತನಿಗೆ ಅಮೆರಿಕದಲ್ಲಿ ಕೆಲಸ. ಮೂರು ವರ್ಷಕ್ಕೆ ಅಂತ ಹೋದವನು.ಅಲ್ಲಿಯೇ ನೆಲೆಸುವುದಿಲ್ಲ ಅಂತ ಕನಕಳೂ ಜೊತೆಗೆ ಹೋದಳು.
ಸುಗುಣಳಿಗೆ ಹೆತ್ತವರ ಕಾಳಜಿ ಬಹಳ. ಸ್ಕೂಲ್ ಟೀಚರ್ ಆಗಿದ್ದ ಅಪ್ಪ. ಇಬ್ಬರು ಮಗಳಂದಿರಿಗೆ ಕಲಿಸಲು ಪಟ್ಟ ಕಷ್ಟದ ಅರಿವಾಗಿತ್ತು.ಹಾಗಾಗಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದು ಆಕೆಯ ಆಶಯವಾಗಿತ್ತು.
ಸುಗುಣ ಮತ್ತು ಕನಕರಿಗೆ ಅಪ್ಪ ರಾಘವ ಮತ್ತು ಅಮ್ಮ ಸುಮತಿ ಯಾವುದೇ ಕೊರತೆ ಇಲ್ಲದಂತೆ ಸಾಕಿದ್ದರು. ಹುಡುಗಿಯರು ಅಂತ ತಾತ್ಸಾರ ಮಾಡದೆ ಪ್ರೀತಿಯಿಂದ ನೋಡಿಕೊಂಡಿದ್ದರು.
ಇಬ್ಬರು ಹುಡುಗಿಯರೇ ಅಂತ ಅವರ ನೆಂಟರಲ್ಲೂ. ರಾಘುವ , ಸುಮತಿ ಎಂದರೆ ಅವಗಣನೆಯೇ. ಸುಮತಿಯ ಮುಂದೆ ತಮ್ಮ ಗಂಡು ಮಕ್ಕಳ ಗುಣಗಾನ ಮಾಡಿ ಅವಳಿಗೆ ಕೀಳರಿಮೆ ಬರುವಂತೆ ಮಾಡುತ್ತಿದ್ದರು ಇದನ್ನೆಲ್ಲಾ ನೋಡಿದ ಕನಕ, ಸುಗುಣರಿಗೆ ತಾವು ಯಾವ ಗಂಡು ಮಕ್ಕಳಿಗಿಂತಲೂ ಕಡಿಮೆಯಲ್ಲ ಎಂಬುದನ್ನು ತೋರಿಸಬೇಕಾಗಿತ್ತು. ಹಾಗಾಗಿ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡರು.
ಕನಕಳ ಮದುವೆಯ ನಂತರ ಅವಳಿಗಿಂತ ಎರಡು ವರ್ಷ ಚಿಕ್ಕವಳಾದ ಸುಗುಣಳ ಮದುವೆ ಬಗ್ಗೆ ಹೆತ್ತವರು ಯೋಚಿಸತೊಡಗಿದರು. ಒಳ್ಳೊಳ್ಳೆಯ ಸಂಬಂಧ ಬಂದರೂ ಸುಗುಣ ಒಪ್ಪುತ್ತಿರಲಿಲ್ಲ. ಅವಳಿಗೆ ವಿದೇಶಕ್ಕೆ ಹೋಗಲು ಮನಸಿರಲಿಲ್ಲ. ಯಾಕೆಂದರೆ ಅವಳಿಗೆ ಹೆತ್ತವರನ್ನು ಬಿಟ್ಟು ಹೋಗಲು ಮನಸಿಲ್ಲ. ಅವಳ ಅತ್ತೆಯ ಮಗ ವಿದೇಶದಲ್ಲಿದ್ದ. ಅತ್ತೆಗೆ ಸುಗುಣಳನ್ನು ಮಗನಿಗೆ ತಂದುಕೊಳ್ಳಲು ಆಸೆ.ಸುಗುಣ ಒಪ್ಪದುದಕ್ಕೆ ಅವಳನ್ನು ಅಹಂಕಾರಿ ಅಂತ ದೂರಿದಳು ಅವಳ ಅತ್ತೆ.
ಸುಗುಣ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. "ನಿನ್ನ ಭವಿಷ್ಯ ನೋಡಿಕೋ ಸುಗುಣ, ನಮಗಾಗಿ ನೀನು ತ್ಯಾಗ ಮಾಡಬೇಡ" ಅಂತ ಹೇಳಿದರೂ. ಸುಗುಣ ತನ್ನ ಪಟ್ಟು ಬಿಡಲಿಲ್ಲ.
ಕೊನೆಗೆ ಸುಗುಣ ಬಯಸಿದಂತೆ ಕಿಶನ್ ಎಂಬ ಹುಡುಗನ ಸಂಬಂಧ ಬಂತು. ತಂದೆ ,ತಾಯಿ ಮತ್ತು ಮಗ ಇರುವ ಸಣ್ಣ ಕುಟುಂಬ. ಒಂದೇ ನಗರದಲ್ಲಿ ಇರುವುದರಿಂದ ಸುಗುಣಳಿಗೆ ಹೆತ್ತವರು ಹತ್ತಿರ ಇರುತ್ತಾರೆಂದು ಸಮಾಧಾನವಾಯಿತು.
ವರನ ಕಡೆಯಿಂದ ಚಿನ್ನ, ಸೈಟಿನ ಬೇಡಿಕೆ ಕೇಳಿ ಸುಗುಣ ಈ ಸಂಬಂಧ ಬೇಡ ಅಂತ ಹೇಳಿದರೂ ಹೆತ್ತವರು ಚಿನ್ನ ಹೇಗೂ ಇದೆ. ಮುಂದೆ ಈ ಮನೆಯೂ ನಿಮ್ಮಿಬ್ಬರಿಗೆ ಅಂತ ಹೇಳಿದಾಗ ಆಕೆ ಒಪ್ಪಿದಳು. ಹಾಗೆ ಗಂಡನೂ ಒಪ್ಪಿದ.
ಮದುವೆಯ ದಿನವೇ ಸುಗುಣಳಿಗೆ ಅತ್ತೆ ಮಾವನ ಸ್ವಭಾವದ ಅರಿವಾಯಿತು. ಗಂಡನೋ ಅಮ್ಮ ಹೇಳಿದಂತೆ ಮಾಡುವವನು. ಮದುವೆಗೆ ಮೊದಲು ಚೆನ್ನಾಗಿ ಮಾತನಾಡುತಿದ್ದವನು ಮದುವೆಯಾದ ಮೇಲೆ ಸರಿಯಾಗಿ ಮಾತನಾಡುತ್ತಲೇ ಇರಲಿಲ್ಲ.ಅಲ್ಲದೆ ಅವರಿದ್ದ ಮನೆ ಲೀಸಿಗೆ ತೆಗೆದುಕೊಂಡ ಮನೆ. ಸ್ವಂತದ್ದಲ್ಲ.
ಸುಗುಣಳಿಗೆ ತಾಯಿ ಮನೆಯಲ್ಲಿ ಕೆಲಸ ಮಾಡಿ ತಿಳಿಯದು.ಅಡಿಗೆ ತಾಯಿಯೇ ಮಾಡುತ್ತಿದ್ದಳು. ಈಗ ಅವಳ ಅತ್ತೆ ಅಡಿಗೆಯ ಜವಾಬ್ದಾರಿಯನ್ನು ಸೊಸೆಗೆ ಒಪ್ಪಿಸಿದರು. ಅವಳಿಗೆ ಬೆಳಿಗ್ಗೆ ಬೇಗ ಎದ್ದು. ಕಾಫಿ ತಿಂಡಿ ಮಾಡುವುದಷ್ಟೇ ಅಲ್ಲ ಮಧ್ಯಾಹ್ನ ಕ್ಕೆ ಹುಳಿಯನ್ನೂ ಮಾಡಬೇಕಾಗಿತ್ತು. ಅತ್ತೆಯ ಕೆಲಸ ಕಡಿಮೆಯಾಗಿತ್ತು. ಮೊದ ಮೊದಲು ಅಡಿಗೆ ಮಾಡಲು ಬಾರದೆ ಕಷ್ಟ ಪಡುತ್ತಿದ್ದಳು ಸುಗುಣ. ಆದರೂ ಕಲಿತುಕೊಂಡಳು. ಅವಳಿಗೆ ಶನಿವಾರ ,ಭಾನುವಾರ ತಾಯಿಯ ಮನೆಗೆ ಹೋಗುವ ಆತುರ. ಆದರೆ ಅತ್ತೆ ಬಿಡಬೇಕಲ್ಲಾ.
ಸುಗುಣಗಳಿಗೆ ಗಂಡನೂ ಅತ್ತೆಯ ಪರವಾಗಿ ಮಾತಾಡುತ್ತಿದ್ದುದು ಬೇಸರವಾಗಿತ್ತು. ಒಂದು ಪ್ರೀತಿಯ ಮಾತಿಲ್ಲ, ಕಷ್ಟ ಸುಖವನ್ನೂ ಕೇಳುವುದಿಲ್ಲ. ಇದೆಂಥಾ ಮದುವೆ ಅಂತ ಸುಗುಣಳಿಗೆ ದುಃಖ. ಛೇ . ತಾನೇ ಬಯಸಿದ್ದು!.ಹತ್ತಿರವಿದ್ದರೂ ಹೆತ್ತವರ ಮನೆಗೆ ಹೋಗಲು ಅತ್ತೆ ಬಿಡಬೇಕಲ್ಲಾ. ಅಲ್ಲದೆ ಈಗ ಅವರ ಮನೆಯ ಲೀಸಿನ ಅವಧಿ ಮುಗಿಯುತ್ತಾ ಬಂದುದರಿಂದ ಸುಗುಣಳ ಹೆತ್ತವರ ಮನೆ ಬಿಟ್ಟು ಕೊಡಬೇಕು ಅಂತ ಆಗಾಗ್ಗೆ ಹೇಳತೊಡಗಿದರು.
ಒಂದು ದಿನ ತಾಯಿಗೆ ಸೌಖ್ಯವಿಲ್ಲ ಅಂತ ಸಂದೇಶ ಬಂದಾಗ ಸುಗುಣ ಅತ್ತೆಗೆ ಮತ್ತು ಗಂಡನಿಗೆ ತಾಯಿ ಮನೆಗೆ ಹೋಗುತ್ತೇನೆ ಅಂತ ಹೇಳಿ ಆಫೀಸಿನಿಂದಲೇ ತವರಿಗೆ ಹೋದಳು.
ತಾಯಿಗೆ ನಿತ್ರಾಣವಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು.
ಹಾಗಾಗಿ ಸುಗುಣ ಆ ದಿನ ಅಲ್ಲಿಯೇ ಇರಬೇಕಾಗಿತ್ತು. ಮರುದಿನ ಡಿಸ್ಚಾರ್ಜ್ ಆಗಿ ಬಂದಾಗ ಸುಗುಣ ಗಂಡನ ಮನೆಗೆ ಹಿಂದುರಿಗಿದಳು.
ಮನೆಗೆ ಬಂದಾಗ ಅವಳ ಅತ್ತೆ ,ಗಂಡ , ಮಾವ ಮೂವರೂ ಬಯ್ಯುವವರೇ. ಯಾಕೆ ಹೋದದ್ದು.. ನಾವು ಒಪ್ಪಿಗೆ ಕೊಟ್ಟಿಲ್ಲ. ವಾಪಾಸು ಹೋಗು ಅಂತ ದಬಾಯಿಸಿದರು. ಸುಗುಣಳಿಗೆ ದುಃಖ ಒತ್ತರಿಸಿಕೊಂಡು ಬಂತು. ಹಾಗೆಯೇ ಗಂಡನ ಬುದ್ಧಿ ನೋಡಿ ಸಿಟ್ಟು ಬಂತು. ಇಷ್ಟರ ವರೆಗೆ ಅವಳು ತನ್ನ ಕಷ್ಟವನ್ನು ಹೆತ್ತವರಿಗೆ ತಿಳಿಸಿರಲಿಲ್ಲ. ಈಗಲೂ ಹೇಳಲೋ ಬೇಡವೋ ಅಂತ ಗೊಂದಲದಲ್ಲಿದ್ದಳು. ಏನೇ ಆಗಲಿ ಇಲ್ಲಿಯೇ ಇರುತ್ತೇನೆ ಅಂತ ನಿರ್ಧರಿಸಿದಳು.
ಈ ನಡುವೆ ಕೆಲಸದ ಒತ್ತಡದಿಂದ ಅವಳ ಶರೀರವೂ ಕ್ಷೀಣಿಸಿತ್ತು. ಆದರೂ ಸೈರಿಸಿಕೊಂಡು ಕೆಲಸ ಮಾಡುತ್ತಿದ್ದಳು.ಒಂದು ದಿನ ಅವಳು ವಾಂತಿ ಮಾಡಿದಳು. ಗಂಡನಾಗಲೀ ಅತ್ತೆಯಾಗಲೀ ವಿಚಾರಿಸಲಿಲ್ಲ. ಕೊನೆಗೆ ತಾನೇ ಡಾಕ್ಟರರ ಹತ್ತಿರ ಹೋದಾಗ ತಾನು ಗರ್ಭಿಣಿ ಎಂದು ತಿಳಿಯಿತು. ಈ ವಿಷಯ ಖುಶಿಯ ವಿಚಾರ.ಹಾಗಾಗಿ ಗಂಡನಿಗೆ ತಿಳಿಸಿದಾಗಲೂ ಆತ ಯಾವುದೇ ಸಂತಸ ವ್ಯಕ್ತ ಪಡಿಸಲಿಲ್ಲ.
ಅವಳಿಗೆ ಕೆಲಸ ಮಾಡಲು ಸುಸ್ತು. ಹಾಗಾಗಿ ತಾಯಿ ಮನೆಗೆ ಹೋದಳು. ಗಂಡನಿಗೂ ,ಅತ್ತೆಗೂ ಸಿಟ್ಟು. ಇಬ್ಬರೂ ಕೆಲಸ ಬಿಡು ಅಂತ ಹೇಳಿದರು. ಆದರೆ ಸುಗುಣಳಿಗೆ ಕೆಲಸ ಬಿಡಲು ಇಷ್ಟವಿಲ್ಲ. ಕೆಲಸ ಬಿಟ್ಟರೆ ಹೆತ್ತವರಿಗೆ ಸಹಾಯ ಬೇಕಾದರೆ ಹಣ ಎಲ್ಲಿಂದ ತರುವುದು? ಅಲ್ಲದೆ ಕೆಲಸವಿಲ್ಲದಿದ್ದರೆ ಹತ್ತು ರುಪಾಯಿ ಬೇಕಾದರೂ ಗಂಡನಲ್ಲಿ ಕೇಳಬೇಕಾದೀತು ಅಂತ ಅವಳ ಆಲೋಚನೆ.
ಅವಳಿಗೆ ದಿನ ತುಂಬುತ್ತಿತ್ತು. ಸೀಮಂತ ಮಾಡಲೇ ಇಲ್ಲ.ಅವಳ ಹೆತ್ತವರಿಗೆ ಅವಳ ಕಷ್ಟ ನೋಡಿ ಆತಂಕವಾಗುತ್ತಿತ್ತು.
ಒಂದು ದಿನ ಅವಳಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಹೆತ್ತವರು ಆಸ್ಪತ್ರೆಗೆ ಹೋದರು. ಅವಳು ತುಂಬಾ ವೀಕ್ ಆಗಿದ್ದಳು. ಸಹಜ ಹೆರಿಗೆ ಆಗದಿದ್ದಾಗ ಸಿಸೇರಿಯನ್ ಮಾಡಿದರು. ಹೆಣ್ಣು ಮಗು!
ವಿಷಯ ಗಂಡನ ಮನೆಗೆ ತಿಳಿಸಿದಾಗ ಹೆಣ್ಣು ಮಗು ಅಂತ ಮೂಗು ಮುರಿದರು.ಮಗುವನ್ನು ನೋಡಲೂ ಯಾರೂ ಬರಲಿಲ್ಲ. ಸುಗುಣಳ ಹೆತ್ತವರಂತೂ ಗಿಣಿಯಂತೆ ಸಾಕಿ ಗಿಡುಗನ ಬಾಯಿಗೆ ಮಗಳನ್ನು ಕೊಟ್ಟೆವಲ್ಲಾ ಅಂತ ದುಃಖವಾಯಿತು.
ತಿಂಗಳಾದರೂ ಮಗುವನ್ನು ನೋಡಲು ಯಾರೂ ಬರಲಿಲ್ಲ. ಸುಗುಣಳಿಗಾಗಲೀ ಅವಳ ಹೆತ್ತವರಿಗಾಗಲೀ ಕಿಶನ್ ಮತ್ತು ಅವನ ಹೆತ್ತವರ ವರ್ತನೆಗಳಿಂದ ಆಶ್ಚರ್ಯವಾಯಿತು. ಕಾರಣವಿಲ್ಲದೇ ಸಿಟ್ಟು ಮಾಡಿಕೊಳ್ಳುವುದು ಯಾಕೆ ಅಂತ ಅರ್ಥವಾಗಲಿಲ್ಲ. ಅವರ ನೆರೆಹೊರೆಯವರಿಂದ ಸುಗುಣಳಿಗೆ ಗಂಡನ ಮನೆಯವರ ಗುಣವೇ ಹಾಗೆ ಅಂತ ತಿಳಿಯಿತು. ಅಕ್ಕಪಕ್ಕ ಯಾರೊಂದಿಗೂ ಅವರಿಗೆ ಒಳ್ಳೆಯ ಸಂಬಂಧ ಇರಲಿಲ್ಲ.
ಒಂದು ದಿನ ಅತ್ತೆ,ಮಾವ ,ಗಂಡ ಮೂವರೂ ಬಂದು ವಿಚ್ಛೇದನ ಕೊಡು ಅಂತ ಹೇಳಿದರು.ಆಗ ಸುಗುಣಳ ತಂದೆ
" ಅಲ್ಲಾ ನಿಮಗೆ ಏನು ಬೇಕಾದುದು? ಈಗಿನ ಕಾಲದಲ್ಲಿ ಇಂಥಾ ಗುಣವಿರುವ ಹುಡುಗಿ ಸಿಗುವುದೇ ಕಷ್ಟ.ಈ ರೀತಿ ಯಾಕೆ ತೊಂದರೆ ಕೊಡುತ್ತಿದ್ದೀರಿ ಅಂತ ದಬಾಯಿಸಿದರು. ಬಂದವರು ದುಮುಗುಟ್ಟುತ್ತಾ ಹೋದರು. ಸುಗುಣಳಿಗಂತೂ ಅವರೊಡನೆ ಬದುಕಲು ಕಷ್ಟ ಅಂತ ಅನಿಸಿತು." ಅವರು ಹುಚ್ಚರು ಅಮ್ಮ, ಆ ಹುಚ್ಚು ತನದಲ್ಲಿ ನನ್ನನ್ನು ಕೊಲ್ಲಲೂ ಬಹುದು." ಇನ್ನು ಅಲ್ಲಿಗೆ ಹೋಗಲಾರೆ.
ಅಂತ ಹೇಳಿದಳು ಸುಗುಣ.
ಅವಳ ಗಂಡ ಆಗಾಗ ಬಂದು ಮನೆ ಬಿಟ್ಟು ಕೊಡಿ ಅಂತ ಕಿರಿ ಕಿರಿ ಮಾಡುತ್ತಿದ್ದ. ಪಾಪ ಮಗು ತಂದೆಯ ಪ್ರೀತಿಯಿಲ್ಲದೆ ಬೆಳೆಯುತ್ತಿತ್ತು. ಮಗುವಿಗೆ ಮೂರು ತಿಂಗಳಾದರೂ. ಬಾ ಅಂತ ಗಂಡನ ಮನೆಯವರು ಕರೆಯಲಿಲ್ಲ. ಅವಳ ಹೆತ್ತವರಿಗಂತೂ ನಿತ್ಯವೂ ದುಃಖವೇ.
ಮತ್ತೆ ಒಂದು ದಿನ ಸುಗುಣಳಲ್ಲಿ ಸುಮತಿ , " ಇನ್ನು ಅವರೊಂದಿಗೆ ಬದುಕಲು ಸಾಧ್ಯವಾಗದು ಅಂತಾದರೆ ವಿಚ್ಛೇದನ ಕೊಟ್ಟು ಬಿಡು."
ಸುಗುಣಳಿಗೂ ಗಂಡನ ಮೇಲೆ ಯಾವ ಒಂದು ಭಾವನೆಯೂ ಇರಲಿಲ್ಲ. ಹಾಗಾಗಿ ಮತ್ತೊಮ್ಮೆ ಕಿಶನ್ ಬಂದಾಗ. ವಿಚ್ಛೇದನ ಕೊಡುವುದಾಗಿ ಹೇಳಿದಳು ಸುಗುಣ.
ನಂತರ ಪರಸ್ಪರ ಒಪ್ಪಿಗೆಯಿಂದ ಬೇರಾದರು.
ಮಗು ಅಜ್ಜ ಅಜ್ಜಿಯರ ಆರೈಕೆಯಲ್ಲಿ ಬೆಳೆಯುತ್ತಿತ್ತು.
ಸುಗುಣ ಹೆರಿಗೆ ರಜೆ ಮುಗಿದು ಕೆಲಸಕ್ಕೆ ಹೋಗಲು ಪ್ರಾರಂಭಿಸಿದಳು. ಅವಳಿಗೆ ಈಗ ಪ್ರೊಮೋಶನ್ ಸಿಕ್ಕಿತ್ತು.
ಅವಳ ಪ್ರೋಜೆಕ್ಟಿನ ಲೀಡರ್ ಉಮೇಶ ಒಬ್ಬ ಒಳ್ಳೆಯ ವ್ಯಕ್ತಿ. ಆತನ ಹೆಂಡತಿ ಅಪಘಾತದಲ್ಲಿ ತೀರಿಕೊಂಡಿದ್ದಳು. ಕ್ರಮೇಣ ಉಮೇಶ ಮತ್ತು ಸುಗುಣ ಒಬ್ಬರನ್ನೊಬ್ಬರು ಇಷ್ಟಪಟ್ಟರು. ಇಬ್ಬರ ಹೆತ್ತವರೂ ಒಪ್ಪಿ ಸರಳವಾಗಿ ಮದುವೆ ಮಾಡಿಕೊಂಡರು.ಮಗುವನ್ನು ಉಮೇಶ ಸ್ವೀಕರಿಸಿದ್ದನು. ಮೊದಲನೆಯ ಮದುವೆಯಲ್ಲಿ ಅವನಿಗೆ ಮಕ್ಕಳಿರಲಿಲ್ಲ.
ಸುಗುಣ ಕಿಶನ್ ನನ್ನು ಸಂಪೂರ್ಣ ಮರೆತಿದ್ದಳು. ಒಂದು ದಿನ ಆಫೀಸಿನಿಂದ ಹೊರಬರುವಾಗ ಗೇಟಿನಲ್ಲಿ ಕಿಶನ್ ಇದ್ದ. ಸುಗುಣಳ ಬಳಿಗೆ ಬಂದು 'ಸುಗುಣ ,ನನ್ನಿಂದ ತಪ್ಪಾಯಿತು. ದಯವಿಟ್ಟು ಮತ್ತೆ ಒಂದಾಗೋಣ. ಅಮ್ಮನಿಗೂ ಪಶ್ಚಾತ್ತಾಪ ಆಗಿದೆ. ಪ್ಲೀಸ್ " ಅಂತ ಗೋಗರೆದ.
ಸುಗುಣ ತನ್ನ ಕೊರಳಲ್ಲಿದ್ದ ತಾಳಿಯನ್ನು ತೋರಿಸಿ, ಇದರ ಮಾಲಿಕ ಈಗ ನೀನಲ್ಲ " ಅಂತ ಹೇಳಿ ಅಲ್ಲಿಗೆ ಬಂದ ಕಿಶನ್ನ ಜೊತೆ ಕಾರಿನಲ್ಲಿ ಹೊರಟು ಹೋದಳು. ಆಕೆಗೆ ಕಿಶನನ ನಾಟಕ ತಿಳಿದಿತ್ತು.ಯಾಕೆಂದರೆ ಆತ ಕೆಲಸ ಕಳೆದುಕೊಂಡಿದ್ದ.
✍️ ಪರಮೇಶ್ವರಿ ಭಟ್