ತುಳುನಾಡಿನ ದೈವಗಳಾಗಿ ನೆಲೆ ನಿಂತ ಬ್ರಾಹ್ಮಣರು
ತುಳುನಾಡಿನಲ್ಲಿ ಆರಾಧನೆ ಪಡೆವ ಬ್ರಾಹ್ಮಣರು
ತುಳುವರ ಭೂತ ಕನ್ನಡದ ಭೂತವಲ್ಲ.ತುಳುವಿನ ಭೂತ ಪದಕ್ಕೆ ಕನ್ನಡದ ಭೂತ ಎಂಬ ಪದಕೆ ಇರುವಂತೆ ಭೂತ ಪ್ರೇತ ಪಿಶಾಚಿ ಎಂಬ ಕೆಟ್ಟ ಅರ್ಥವಿಲ್ಲ.ತುಳುವರ ಭೂತಗಳು ಜನರನ್ನು ಹೆದರಿಸಿ ಬೆದರಿಸಿ ಕಾಡುವ ಕೆಟ್ಟ ,ಕ್ಷುದ್ರ ಶಕ್ತಿಗಳಲ್ಲ .ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
The Tulu word bhuta may be orginated from Sanskrit word ‘putam’, which means purified. In Hindu mythology, Lord Vishnu is also referred as ‘putam’. So, one interpretation could be that over centuries the word ‘putam’ changed into ‘puto’, then to ‘buto’, and finally become ‘bhuta’.
In Tulu tradition, there is no fixed path to become a bhuta or daiva. Most of the bhutas are basically humans who — blessed with extraordinary powers or having done remarkable work, like questioning social evils — transform into bhutas after death. Ordinary people can also become a bhuta, if they happen to be blessed by their bhuta.
Bhuta kola is a devine spirit worship is an ancient ritual form of worship of Tuluvas in Tulunadu (undivided dakshina kannada district including udupi and kasaragodu ) which having singing paddana and a special devine dance .Theyyam in kerala and Bhuta kola in Tulunadu are the same type of purified spirit worship /devine worship
ಸಂಸ್ಕೃತ ಮೂಲದ ಪೂತಮ್ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ವರ್ಣ ವ್ಯತ್ಯಯ ಗೊಂಡು ಸಂಸ್ಕೃತೀಕರಣಕ್ಕೊಳಗಾಗಿ ಬೂತೊ>ಭೂತೋ>ಭೂತ ಆಗಿರಬಹುದು .ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ.ತುಳುವಿನಲ್ಲಿ ಪೂ >ಭೂ ಆದರೆ ಕೊಡವರಲ್ಲಿ ತ>ದ ಆಗಿ ವರ್ಣ ಬದಲಾವಣೆ ಆಗಿದೆ ಇದೆ.ಅಥವ ತುಳು ಭೂತಗಳಲ್ಲಿ ಹೆಚ್ಚಿನವರು ಅಸಾಮಾನ್ಯ ಸಾಹಸ ಮರೆದು ದುರಂತವನ್ನಪ್ಪಿ ಮಾಯವಾಗಿ ದೈವತ್ವ ಪಡೆದ ಸಾಂಸ್ಕೃತಿಕ ನಾಯಕರೇ ಆಗಿದ್ದಾರೆ.ಆದ್ದರಿಂದ ಹಿಂದೆ ಇದ್ದವರು ಎಂಬ ಅರ್ಥದಲ್ಲಿಯೂ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ
ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ.
.ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಯಾವುದೇ ಜಾತಿ ಭೇದ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೊಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ
ರಾಮ ಶೆಟ್ಟಿ ಎಂಬ ವೀರ ಶೈವ ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .
ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.
ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ.
ಹಾಗೆಯೇ
ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು .
ನೆಲ್ಲಿತ್ತಾಯ
ಬ್ರಾಹ್ಮಣರು
ತುಳುನಾಡಿನ ಮೂಲ ನಿವಾಸಿಗಳಲ್ಲ ಆದರೂ ಇಲ್ಲಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ತುಳುನಾಡಿನಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಸಿದ್ದ ಸೂತ್ರವಿಲ್ಲ.ಇಲ್ಲಿ ಎಲ್ಲ ಜಾತಿ ಸಮುದಾಯಗಳ ಜನರು ಕಾರಣಾಂತರಗಳಿಂದ ದೈವತ್ವ ಪಡೆದು ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.ಅನೇಕ ಬ್ರಾಹ್ಮಣರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ನನಗೆ 68 ಬ್ರಾಹ್ಮಣ ಮೂಲದ ದೈವಗಳ ಮಾಹಿತಿ ಸಿಕ್ಕಿದ್ದು ನನ್ನ ಕರಾವಳಿಯ ಸಾವಿರದೊಂದು ದೈವಗಳು ಎಂಬ ಅಧ್ಯಯನ ಗ್ರಂಥದಲ್ಲಿ ಸಚಿತ್ರ ಮಾಹಿತಿ ನೀಡಿದ್ದೇನೆ
1 ಅಡ್ಕತ್ತಾಯ ದೈವ
2-3 ಅಯ್ಯೆರ್ ಬಂಟೆರ್
4-12 ಅಯ್ಯೆರ ಕೋಲ
13 ಇಲ್ಲತಮ್ಮ ಕುಮಾರಿ
14 ಏಳ್ನಾಡು ಗುತ್ತಿನ ದೇವಕಿಯಮ್ಮ
15ಒರಿ ಮಾಣಿ ಗುಳಿಗ
16 ಓಪೆತ್ತಿ ಮದಿಮಾಲ್
17 ಕಚ್ಚೆಭಟ್ಟ
18-19 ಕರೋಟ್ಟಿ -ಕುಮ್ಮಲುನ್ನಿ ತೆಯ್ಯಂಗಳು
20 ಕೆರೆ ಚಾಮುಂಡಿ/ ಮೂಲ ಚಾಮುಂಡಿ
21 ಕಾರಿಂಜೆತ್ತಾಯ
22 ಕಾವೂರಿನ ಬ್ರಾಂದಿ ದೈವ
23 ಗೋವಿಂದ ಧೂಮಾವತಿ ದೈವ
24 ಚೆಂಬರ್ಪುನ್ನಾಯ
25 ಚೆಂಬಿಲೋಟ್ ಭಗವತಿ ತೆಯ್ಯಂ
26 ಜಟ್ಟಿಗ ( ಚಿತ್ಪಾವನ ಮೂಲದ ದೈವ)
27 ಜತ್ತಿಂಗ
28;ನಾರಳತ್ತಾಯ
29;ನಾರಾಯಣ ಮಾಣಿಲು,ದೈಯಾರ್
30 ನೆಲ್ಲಿರಾಯ/ ಬವನ/ ಬವನೊ
31 -32 ನೆಲ್ಲೂರಾಯ- ಒರು ಬಾಣಿಯೆತ್ತಿ
33 ತಂತ್ರಿ ಗಣ
34ತೋಳಂಬಟ್ಟ
35ದೇವರ ಪೂಜಾರಿ ಪಂಜುರ್ಲಿ
36 ದೂಮ ದೈವ
37ಬಟ್ಟಿ ಭೂತ
38ಬ್ರಾಣ ಭೂತ
39ಬ್ರಾಣ್ತಿ ಭೂತ
40ಬ್ರಾಣ ತಂತ್ರಿ
41 ಬ್ರಾಹ್ಮಣತಿ ದೈವ
42 ಬ್ರಾಹ್ಮಣ ಜಕ್ಕಿಣಿ
43ಬ್ರಾಂದಿ ದೈವ
44 ಮುಚ್ಚಿಲೋಟ್ ಭಗವತಿ
45ಮುಂಡೆ ಬ್ರಾಂದಿ
46 ಮುಕಾಂಬಿ ಗುಳಿಗ/ ಅಗ್ನಿ ಚಾಮುಂಡಿ ಗುಳಿಗ
47 ಮುಂಡತ್ತಾಯ( ಕಮಲ ಶಿಲೆ)
48- 54 ಪೂಂಕಣಿ ಭಗವತಿ ಮತ್ತು ಸಹೋದರರು
55 ಬಾಲಮ್ಮ/ಬಾಲಜ್ಜಿ
56 ಬ್ರಾಣ್ತಿ ಭೂತ
57 ಬ್ರಾಣ್ತಿ ಮತ್ತು ಪೊಟ್ಟ
58 ಬೈಲಂಗಡಿಯ ಬ್ರಾಣ್ತಿ ದೈವ
59 ಮಣಿಕ್ಕಳದ ಬ್ರಾಣ ದೈವ
60-61ಬಿರಣ ಮತ್ತು ಮಾಣಿ
62 ಮಲೆಯಾಳ ಬ್ರಹ್ಮ
,63 ಮಲ್ಯಾಳ ಭಟ್ರು.
64 ಮುತ್ತಪ್ಪನ್
65 ಮೂಲಂಪೆತ್ತಮ್ಮ
66ಸತ್ಯ ಮಾಗಣ್ತಿ ದೈವ
67 ಸೀರಂಬಲತ್ತಾಯ
68 ಶಗ್ರಿತ್ತಾಯ ಪಂಜುರ್ಲಿ
69 ಬ್ರಹ್ಮಣಂದಾರ್
ಈ ಎಲ್ಲಾ ದೈವಗಳ ಸಚಿತ್ರ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿ ಇದೆ
ಡಾ.ಲಕ್ಷ್ಮೀ ಜಿ ಪ್ರಸಾದ್
ಆಧಾರ : ಕರಾವಳಿಯ ಸಾವಿರದೊಂದು ದೈವಗಳು-ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಮೊಬೈಲ್ 9480516684
ತುಳುವರ ಆರಾಧ್ಯ ದೈವವಾದ ಬ್ರಾಹ್ಮಣ ಕನ್ಯೆ: ಮುಕಾಂಬಿ ಗುಳಿಗ
ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ.ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ . ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ ಕಾರಣದಿಂದ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರಿಸುವ ಸಲುವಾಗಿಯೇ ಬೆಳ್ಳಾರೆಗೆ ಬಂದ ನನಗೆ ಬೆಳ್ಳಾರೆಯ ಸ್ಥಳ ದೈವ ಮಹಾಲಿಂಗೇಶ್ವರ ದೇವಾಲಯದ ಉತ್ಸವ ಸಂದರ್ಭದಲ್ಲಿ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತಕ್ಕೆ ಆರಾಧನೆ ಇರುವುದು ತಿಳಿಯಿತು.ಈ ಭೂತ ಬೆಂಕಿಯನ್ನು ತಿನ್ನುತ್ತದೆ ಇದಕ್ಕೆ ಬೆಂಕಿಯೇ ಆಹಾರ ಎಂಬ ನಂಬಿಕೆ ಅಲ್ಲಿ ಪ್ರಚಲಿತವಿತ್ತು .ಆ ತನಕ ನಾನು ಅಗ್ನಿ ಚಾಮುಂಡಿ ಗುಳಿಗನ ಹೆಸರನ್ನು ಕೂಡಾ ಕೇಳಿರಲಿಲ್ಲ. ಅದರ ಕುರಿತಾದ ಪ್ರತೀತಿ ಇನ್ನಷ್ಟು ಕುತೂಹಲ ಉಂಟು ಮಾಡಿತು .ಈ ಬಗ್ಗೆ ದೇವಳದ ಅರ್ಚಕರಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದೆ .ಆಗ "ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿದೆ" ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು .ಭೂತ ಕುರಿತು ಮಾಹಿತಿ ಭೂತ ಕಟ್ಟುವ ಕಲಾವಿದರಿಗೆ ತಿಳಿದಿರುತ್ತದೆ. ಅವರು ಹೇಳುವ ಪಾಡ್ದನದಲ್ಲಿ ಭೂತದ ಕಥೆ ಇರುತ್ತದೆ. ಆ ತನಕ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತದ ಹೆಸರನ್ನು ನಾನು ಕೇಳಿರಲಿಲ್ಲ.ಹಾಗಾಗಿ ಡಾ || ಚಿನ್ನಪ್ಪ ಗೌಡರ ,ಡಾ. ವಿವೇಕ ರೈಗಳ ಪುಸ್ತಕದಲ್ಲಿನ ಭೂತಗಳ ಪಟ್ಟಿಯನ್ನು ನೋಡಿದೆ, ಅಲ್ಲೂ ಈ ಭೂತದ ಹೆಸರು ಇರಲಿಲ್ಲ.
ತುಳುನಾಡಿನ ಭೂತಗಳು ಮಖ್ಯವಾಗಿ ಮೂರು ವಿಧ. ಒಂದು ಮಾನವ ಮೂಲದ ದೈವಗಳು. ಕೊರಗ ತನಿಯ, ಕೋಟೆದ ಬಬ್ಬು, ಮುಕಾಂಬಿ ಗುಳಿಗ, ಬಬ್ಬರ್ಯ ,ಕೋಟಿ ಚೆನ್ನಯ, ಮುದ್ದ ಕಳಲ ಮೊದಲಾದ ಭೂತಗಳು ಈ ವರ್ಗದಲ್ಲಿ ಬರುತ್ತವೆ. ಎರಡನೆಯ ವರ್ಗ ಪ್ರಾಣಿ ಮೂಲ ದೈವಗಳು ಪಂಜುರ್ಲಿ, ಪಿಲಿ ಭೂತ , ಮೊದಲಾದವು ಈ ವರ್ಗದಡಿಯಲ್ಲಿ ಸೇರುತ್ತವೆ. ಮೂರನೆಯ ವರ್ಗ ಪುರಾಣ ಮೂಲ ದೈವಗಳು ರಕ್ತೇಶ್ವರಿ ,ಗುಳಿಗ, ಧೂಮಾವತಿ(ಜುಮಾದಿ ), ಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ .ಅಗ್ನಿ ಚಾಮುಂಡಿ ಗುಳಿಗ ಕೂಡಾ ಒಂದು ಪುರಾಣ ಮೂಲ ದೈವ ಇರಬಹುದು ಎಂದು ನಾನು ಭಾವಿಸಿದೆ. ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ ‘ಚಾಮುಂಡಿ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿ.ಆದ್ದರಿಂದ ಅಗ್ನಿಚಾಮುಂಡಿ ಭೂತದ ಬಗ್ಗೆ ಅಧ್ಯಯನಮಾಡುವುದಕ್ಕಾಗಿ ಈ ಭೂತದ ನೇಮದಂದು ಕ್ಯಾಮೆರಾ ಮತ್ತು ರೆಕಾರ್ಡರ್ ಹಿಡಿದುಕೊಂಡು ಹೋದೆ .ರಾತ್ರಿ ಊಟದ ನಂತರ ಅಗ್ನಿ ಚಾಮುಂಡಿ ಭೂತದ ನೇಮ ಇತ್ತು .ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಂದ ಭೂತ ಕಟ್ಟುವ ಕಲಾವಿದ ಬಾಬು ಅರಂಬೂರು ಅವರು ಭೂತ ಕಟ್ಟಲು ಬೇಕಾದ ಪರಿಕರಗಳನ್ನು ಸಿದ್ಧಮಾದುತ್ತಿದ್ದರು .ಮೊದಲೇ ನನಗೆ ಅವರ ಪರಿಚಯ ಇತ್ತು.
ನಾನು ಹೋದಾಗ ನನಗೆ ಬೇಕಾದ ಮಾಹಿತಿಗಳನ್ನು ನೀಡಿದರು .ಭೂತ ಕಟ್ಟುವ ಕಲಾವಿದರು ಭೂತ ಕಟ್ಟಲು (ವೇಷ ಹಾಕಲು )ಸುರು ಮಾಡಿದ ಮೇಲೆ ಬೇರೆ ಯಾವುದೇ ವಿಚಾರಗಳನ್ನು ಮಾತಾಡುವುದಿಲ್ಲ .ಅವರಿಗೆ ಸಮಯವೂ ಇರುವುದಿಲ್ಲ. ಭೂತ ಕಟ್ಟಿ ಸಿದ್ಧವಾಗಲು ಸುಮಾರು ೩-೪ ಗಂಟೆ ಸಮಯ ಬೇಕಾಗುತ್ತದೆ .ಮೊದಲು ಒಡೆಯನಿಂದ ಭೂತ ಕಟ್ಟಲು ಆಣತಿ ಪಡೆದು ಎಣ್ಣೆ ಬೂಲ್ಯ ಪಡೆದು ಸ್ನಾನಮಾಡಿ ಬರುತ್ತಾರೆ .ಎಣ್ಣೆ ಬೂಲ್ಯ ಪಡೆಯುವಾಗ ದೈವಸ್ಥಾನದ ಎದುರು ನಿಂತು ದೈವದ ಎದುರು ನೇಮವನ್ನು ಯಾವುದೇ ಅಡ್ಡಿ ಆತಂಕ ಬಾರದಂತೆ ನೆರೆವೇರಿಸಿಕೊಡು ಎಂದು ಅರಿಕೆ ಮಾಡುತ್ತಾರೆ. ಆಗ ದೈವದ ಕಥಾನಕವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅಗ್ನಿ ಚಾಮುಂಡಿ ಗುಳಿಗ ಉಗ್ರ ಸ್ವಭಾವದ ದೈವ .ಈ ದೈವದ ಆವೇಶ ಪುರಿಥ ಅಟ್ಟಹಾಸ ಉಗ್ರ ನರ್ತನ ನೋಡುಗರ ಎದೆ ಕಂಪಿಸುವಂತೆ ಮಾಡುತ್ತದೆ .ಮಾನವ ಮೂಲದ ಈ ದೈವದ ಉಗ್ರ ಅಭಿನಯ ,ಆಕ್ರೋಶ ,ಅಟ್ಟಹಾಸಗಳು ದೈವತ್ವ ಪ್ರಾಪ್ತಿಗೆ ಮೊದಲು ನಡೆದ ಅನ್ಯಾಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ ಮುಖಕ್ಕೆ ಅರದಲ ಹಚ್ಚಿ ಮೇಲೆ ಇಟ್ಟ ಬಿಳಿಬಣ್ಣದ ಚುಕ್ಕಿ, ಹಳದಿ ಬಣ್ಣದ ಗೆರೆಗಳು. ತುಟಿಯ ಮೇಲಿನ ಗುಲಾಬಿವರ್ಣದ ಗೆರೆಗಳು ಈ ಭೂತದ ಮುಖವರ್ಣಿಕೆಯಲ್ಲಿದ್ದು ಭೂತಕ್ಕೆ ಒಂದು ವಿಶಿಷ್ಟ ಕಳೆಯಯನ್ನು ತಂದು ಚಾಮುಡಿ ಗುಳಿಗ ಬೆಂಕಿಯನ್ನು ಪ್ರವೇಶ ಮಾಡುವಾಗ ಮೈ ರೋಮಾಂಚನಗೊಳ್ಳುತ್ತದೆ .ಇತರ ಭೂತಗಳಂತೆ ಆಳೆತ್ತರದ ಅಣಿ ಇರುವುದಿಲ್ಲ ,ಅದರ ಬದಲಿಗೆ ಕಲಾತ್ಮಕವಾಗಿ ತಯಾರಿಸಿದ ತೆಂಗಿನ ತಿರಿಯ ತಲೆ ಪತ್ತವಿರುತ್ತದೆ. ಅಲ್ಲಿ ರೆಕಾರ್ಡಿಂಗ್ ಗೆ ಏನೂ ತೊಂದರೆ ಆಗಲಿಲ್ಲ. ಸ್ಥಳೀಯರು ಹಾಗೂ ಭೂತ ಕಟ್ಟಿದ ಕಲಾವಿದ ಬಾಬು ,ಕಾಂತು ಹಾಗೂ ಅವರ ಕುಟುಂಬದ ಸದಸ್ಯರು ಎಲ್ಲರು ಪೂರ್ಣ ಸಹಕಾರ ನೀಡಿದರು . ಇದರಿಂದಾಗಿ ಅವರು ಹೇಳುವ ಆ ಭೂತದ ಪಾಡ್ದನವನ್ನು ರೆಕಾರ್ಡ್ ಮಾಡಿದೆ .ಇದರಿಂದಾಗಿ ಮೂಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಗುಳಿಗ ಎಂದು ಕರೆದು ಅಲ್ಲಿ ಆರಾಧಿಸುತ್ತಿದ್ದಾರೆ. ಎಂದು ನನಗೆ ಅಲ್ಲಿ ತಿಳಿದು ಬಂತು ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು, ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ಗೊತ್ತಾಯಿತು ನನಗೆ.
ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ. ಕಷ್ಟ ಬಂದಾಗ ಗಂಡನ ಕೈ ಬಿಡಬಾರದೆಂದು, ನಾನು ಜೊತೆಗೆ ಬರುತ್ತೇನೆ ಎಂದು ಮೂಕಾಂಬಿ ಜೇವು ಹಠ ಹಿಡಿಯುತ್ತಾಳೆ.
ಓಹೋಯೆ ಮುಕಾಂಬಿ ಜೇವೆ ಈ ಕೇಂಡಾನ
ಯಾನಾಂಡ ಪೋಪೆ ತೆನ್ಕಾಯಿ ಸಾಂತಿ ಪೂಜೆಗ್
ಈಯಾಂಡ ನಿನ್ನಪ್ಪೆನಡೆ ಪೊವೊಡಿಯಾ
ಯಾನಾಂಡ ಪೋವಾಯೆ ಕೇಂಡಾರ
ಈರೆ ಕೈಪತ್ತಿ ದೋಸೊಗು ಬೆರಿ ಬುಡಯೆಂದಳ್
ಕನ್ನಡ ಅನುವಾದ:
ನಾನಾದರೂ ಹೋಗುವೆ ತೆಂಕು ಶಾಂತಿ ಪೂಜೆಗೆ
ನೀನಾದರು ನಿನ್ನ ತಾಯಿ ಮನೆಗೆ ಹೋಗಬೇಕು
ನಾನಾದರು ಹೋಗಲಾರೆ ಕೇಳಿದಿರಾ
ನಿಮ್ಮ ಕೈ ಹಿಡಿದ ದೋಷಕ್ಕೆ ಬೆನ್ನು ಬಿಡಲಾರೆ, ಎಂದಳು.
ಅದು ಹೆಂಗಸು ಹೋಗಬಾರದ ರಾಜ್ಯ. ಒಂದು ಬಳ್ಳ ಬತ್ತಕ್ಕೆ ತಲೆ ಕಡಿಯುವ ಜನರು ಅವರು. ನೀನು ಬರಬೇಡ, ನಿನ್ನ ತಂದೆ ಮನೆಯಲ್ಲಿ ಬಿಟ್ಟು ಹೋಗುತ್ತೇನೆ ಎಂದು ಗಂಡ ವಾಸುಭಟ್ಟರು ಹೇಳುತ್ತಾರೆ. ಆಗ ಮುಕಾಂಬಿ ಜೇವು ಮದುವೆಯ ನಂತರ ಬಡತನವಿದ್ದರೂ, ಸಿರಿತನವಿದ್ದರೂ ಹೆಣ್ಣಿಗೆ ಗಂಡನ ಮನೆಯೇ ಸರಿ ಎಂದು ವಾದಿಸುತ್ತಾಳೆ.
ಮದಿಮೆ ಆಪುನೆಕ್ ದುಂಬು ಮದಿಮಯ
ಅಪ್ಪೆ-ಅಮ್ಮೆ ಇಲ್ಲುದ ಪೇರುನುಪ್ಪು ಆವುಯೆ
ಮದಿಮೆ ಆಯಿಬೊಕ್ಕ ಕಂಡನಿ ಇಲ್ಲ್‌ದ
ಕಣನೀರ್‌ನುಪ್ಪು ಆವುಯೆ
ಈರೆನ ಒಟ್ಟುಗು ಬರ್ಪೆಂದಲ್ ಮುಕಾಂಬಿ
ಕನ್ನಡ ಅನುವಾದ :
ಮದುವೆ ಆಗುವುದಕ್ಕೆ ಮೊದಲು ಮದುಮಗ
ತಾಯ್ತಂದೆಗಳ ಮನೆಯ ಹಾಲನ್ನವಾದೀತು
ಮದುವೆಯಾದ ಮೇಲೆ ಗಂಡನ ಮನೆಯ
ಕಣ್ಣೀರು ಅನ್ನವೂ ಆದೀತು
ನಿಮ್ಮೊಂದಿಗೆ ಬರುವೆನೆಂದಳು ಮುಕಾಂಬಿ
ಆಗ ಗಂಡ ವಾಸುಭಟ್ಟರು
ಈಲ ಬರಡ ಮುಕಾಂಬಿಯೆ ನಿನನ್ ಬುಡಯೆ ಜೇವೆ
ಎಂಕ್‌ಲ ಒಂದು ಬೂಡು ಕೇಂಡಾನ
ಸೈತ್ಂಡ ನಿಕ್ಕ್‌ಲ ಎಂಕ್‌ಲ ಒಂಜಿ ಕಾಟಂದೆರ್
ಕನ್ನಡ ಅನುವಾದ:
ನೀನು ಬರಬೇಡ ಮುಕಾಂಬಿ ನಿನ್ನನ್ನು ಕೈ ಬಿಡುವುದಿಲ್ಲ ನಾನು
ಇದ್ದರೆ ನಿನಗೆ ನನಗೆ ಒಂದು ಬೀಡು
ಸತ್ತರೆ ನಿನಗೆ ನನಗೆ ಒಂದು ಚಿತೆ
ಇಲ್ಲಿ ಈ ದಂಪತಿಗಳ ಪ್ರೀತಿ-ಅಕ್ಕರೆಗಳು ವ್ಯಕ್ತವಾಗುತ್ತವೆ. ದಾರಿ ಮಧ್ಯದಲ್ಲಿ ಕಡಂಬಾರು ಮಯ್ಯರ ಬೀಡು ಸಿಗುತ್ತದೆ ಮುಂದೆ ವಾಸುಭಟ್ಟರು ಮತ್ತು ಮುಕಾಂಬಿ ಮಯ್ಯರ ಬೀಡಿನ ಸಮೀಪ ಬಂದಾಗ, ಕಡಂಬಾರ ಮಯ್ಯರು ಒತ್ತಾಯ ಮಾಡಿ ಇವರಿಬ್ಬರನ್ನು ತಮ್ಮ ಬೀಡಿಗೆ ಕರೆದೊಯ್ಯುತ್ತಾರೆ. ಕಡಂಬಾರ ಮಯ್ಯ ಇವರ ಸಮಾಚಾರವನ್ನು ವಿಚಾರಿಸಿ "ಕೇರಳ ಹೆಣ್ಣು ಮಕ್ಕಳು ಹೋಗುವ ರಾಜ್ಯ ಅಲ್ಲ. ಅಲ್ಲಿ ಒಂದು ಸೇರು ಭತ್ತಕ್ಕೆ ತಲೆಕಡಿಯುವ ಮಂದಿ ಇದ್ದಾರೆ. ನನಗೆ ಏಳು ಸೊಸೆಯಂದಿರು ಇದ್ದರೆ. ? ಕಲ್ಲಿನ ಗುಂಡಗಳಿವೆ. ? ಗುಂಡದಲ್ಲಿ ಮುಕಾಂಬಿ ಜೇವು ? ನೀವು ಹೋಗಿ ಬರುವ ತನಕ ಬಾರಿ ಜೋಕೆಯಿಂದ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಕಡಂಬಾರು ಮಯ್ಯರನ್ನು ನಂಬಿದ ವಾಸುಭಟ್ಟರು ಮುಕಾಂಬಿಗೆ ಸಮ್ಮತವಿಲ್ಲದಿದ್ದರೂ ಕಡಂಬಾರು ಮಯ್ಯರ ಬೀಡಿನಲ್ಲಿ ಬಿಟ್ಟು ಮುಂದೆ ಸಾಗುತ್ತಾರೆ.
ವಾಸು ಭಟ್ಟರು (ತಂತ್ರಿ ಪಡ್ವನರು) ಹೋದ ನಂತರ, ಮುಕಾಂಬಿಜೇವು ಇರುವ ಕೋಣೆಯ ಸಮೀಪ ಬಂದು ನಾನು ನಿನ್ನ ಗಂಡ, ಬಾಗಿಲು ತೆಗೆ ಎಂದು ಹೇಳುತ್ತಾರೆ. ಆಗ ಮುಕಾಂಬಿ ನೀನು ನನ್ನ ಗಂಡನ್ನಲ್ಲ ಎಂದು ಹೇಳುತ್ತಾಳೆ. ಆಗ ರಾತ್ರಿ ಇಬ್ಬನಿ ಬಿದ್ದು, ಹಗಲಿನ ಬಿಸಿಲು ಬಡಿದು ಸ್ವರ ಬದಲಿದೆ ಎಂದು ಮಯ್ಯರು ಸುಳ್ಳು ಹೇಳುತ್ತಾರೆ. ಆಗ ಮುಕಾಂಬಿ ಸುಳ್ಳು ಹೇಳಬೇಡಿ, ನನ್ನ ಗಂಡ ಬರುವಾಗ ಆರಿದ ನಂದಾದೀಪ ಉರಿದೀತು, ಮಲಗಿದ ಹಸುಳೆಗಳು ಎಚ್ಚೆತ್ತು ಕೂಗಿಯಾವು. ಕೊಟ್ಟಿಗೆ ಕರುಗಳು ಅರಚಿಯಾವು, ಬಂಗಾರದ ಬಾಚಣಿಗೆ, ಬೆಳ್ಳಿ ಸೀರಣಿಗೆ ತರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವ ಮಾತಿಗೂ ಬಾಗಿಲು ತೆಗೆಯುವುದಿಲ್ಲ, ಅಂದು ಸೊಸೆ ಎಂದು ಹೇಳಿದಿರಿ ಈಗ ಮೋಸ ಮಾಡುತ್ತಿದ್ದೀರಿ ಎಂದು ಹೇಳುತ್ತಾಳೆ. ಆಗ ಕೋಪಗೊಂಡ ಮಯ್ಯರು ಬಾಗಿಲನ್ನು ತುಳಿದು ಒಡೆದು ಒಳ ಬರುತ್ತಾರೆ. ಕಡಂಬಾರ ಮಯ್ಯರು ನಂಬಿಕೆಗೆ ದ್ರೋಹ ಮಾಡಿ ಬಲಾತ್ಕಾರದಿಂದ ಮುಕಾಂಬಿ ಜೇವಿನ ಸಂಗ ಮಾಡುತ್ತಾರೆ.ಅಸಹಾಯಕ ಹುಡುಗಿ ಮೂಕಾಂಬಿ ಜೇವು ಕಡಮ್ಬಾರ ಮಯ್ಯನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .ಅವಳನ್ನು ಬಲಾತ್ಕರಿಸಲು ಬಂದಾಗ ನನ್ನ ಮೈ ಮುಟ್ಟಿದರೆ ನಿಮ್ಮ ತಾಯಿಯನ್ನು ಮುಟ್ಟಿದ ದೋಷ ಇದೆ ಎಂದು ಹೇಳುತ್ತಾಳೆ ಆಗ ಅವನು ತಾಯಿ ಮುಟ್ಟಿದ ದೋಷ ತಾಯ ಎದೆ ಹಾಲು ಕುಡಿದಾಗ ಹೋಗುತ್ತದೆ ಎನ್ನುತ್ತಾನೆ .ನನ್ನ ಮೈ ಮುಟ್ಟಿದರೆ ಕಾಶಿಯಲ್ಲಿ ಕಪಿಲೆ ಹಸುವನ್ನು ಕೊಂದ ದೋಷ ಬರುವುದು ಎಂದು ಹೇಳಿದಾಗ ಆತ ಕಪಿಲೆ ಕೊಂದ ದೋಷವನ್ನು ಕಾಶಿಗೆ ಹೋಗಿ ಕಳೆದು ಕೊಳ್ಳುತ್ತೇನೆ ಎಂದು ಹೇಳಿ ಅವಳನ್ನು ಬಲಾತ್ಕಾರದಿಂದ ಭೋಗಿಸುತ್ತಾನೆ. ಅವಳ ಪ್ರತಿರೋಧವನ್ನು ಲೆಕ್ಕಿಸದೆ ಅವಳ ದೇಹ ಸಂಗವನ್ನು ಮಾಡುತ್ತಾರೆ.
ಸ್ವಲ್ಪ ಸಮಯ ಕಳೆದಾಗ ಅವಳು ಗರ್ಭಿಣಿಯಾಗುತ್ತಾಳೆ .ಒಂದು ದಿನ ಅವಳು ಕಟ್ಟಡ ನೀರಿಗೆ ನೀರು ತರಲೆಂದು ಹೋಗುವಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರು ಅವಳನ್ನು ನೋಡಿ ಕಡಮ್ಬಾರ ಮಯ್ಯನಿಂದಾಗಿ ಇವಳು ಹೊಟ್ಟೆ ಹೊತ್ತು ಕೊಂಡಿದ್ದಾಳೆ ಎಂದು ಅಪಹಾಸ್ಯ ಮಾಡಿ ನಗಾಡುತ್ತಾರೆ .ಲೋಕ ನಿಂದೆಯನ್ನು ತಾಳಲಾರದೆ ಮೂಕಾಂಬಿ ಜೇವು ಪ್ರಾಣ ತ್ಯಾಗ ಮಾಡಲು ನಿರ್ಧರಿಸುತ್ತಾಳೆ.
©ಡಾ.ಲಕ್ಷ್ಮೀ ಜಿ ಪ್ರಸಾದ.
ಮುಕಾಂಬಿ ಜೇವು ತನ್ನ ಗಂಡನ ಮನೆಯ ನಂಬಿಕೆಯ ದೈವ ಗುಳಿಗನನ್ನು ನೆನೆದು ಕಡಂಬಾರ ನೀರಿನ ಕಟ್ಟಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಮುಕಾಂಬಿಜೇವು ಕಡಂಬಾರ ಅಣೆಕಟ್ಟಿಗೆ ಹೋಗಿ ಮೂರು ಮುಳುಗು ಹಾಕಿ, ಮುಕಾಂಬಿ ಗುಳಿಗ ಇದ್ದಲ್ಲಿ ಗಿಳಿ ಚಾಮೆ ಬತ್ತದ ತೆನೆಯನ್ನು ತೆಗೆದುಕೊಂಡು ಹೋಗುವಂತೆ (ಗಿಣಿ ಚಾಮೆದ ಕುರಲುನು ಕೊಂಡೋಪಿ ಲೆಕ್ಕೋ ಎನ್ನನು ಕೊಂಡೋವೊಡು) ನನ್ನ ಪ್ರಾಣ ತೆಗೆಯಲಿ. ನನ್ನ ಗಂಡ ಬಂದ ಬಳಿಕ ಸತ್ಯವನ್ನು ಗಿಳಿ ನುಡಿದಂತೆ ನುಡಿಯಬೇಕು ಎಂದು ಹೇಳಿ ನೀರಿನಲ್ಲಿ ಮುಳುಗುತ್ತಾಳೆ.. ಮೂಕಾಂಬಿ ನೀರಿಗೆ ಹಾರಿ ಪ್ರಾಣ ತ್ಯಾಗ ಮಾಡಿದಾಗ ಕಡಂಬಾ ಮಯ್ಯ ಏನು ಅರಿಯದವನಂತೆ ಮುಕಾಂಬಿಜೇವಿನ ತಂದೆ ಮುದ್ದುಲ್ಲ ಭಟ್ಟರಿಗೆ ಹಾಗೂ ತಾಯಿ ಅರ ಕ್ಕೆ ಮದಿಮಾಳರಲ್ಲಿಗೆ ಆಳುಗಳನ್ನು ಕಳುಹಿಸಿ, "ಪಡ್ವನರು ಮುಕಾಂಬಿಯನ್ನು ಕಡಂಬಾರ ಬೀಡಿನಲ್ಲಿ ನಿಲ್ಲಿಸಿದ್ದು, ಅವಳು ಹುಡುಗಿ ಹೋಗಿ ಹೆಂಗಸಾಗಿದ್ದಾಳೆ. ನೀವು ಕರೆದುಕೊಂಡು ಹೋಗಿ "ಎಂದು ಹೇಳಿ, ಕಳುಹಿಸುತ್ತಾರೆ. ತಂದೆ-ತಾಯಿ ಸಂತೋಷದಿಂದ ಅವಲಕ್ಕಿಯ ಮುಡಿ, ತೆಂಗಿನಕಾಯಿ ತೆಗೆದುಕೊಂಡು ಹೊರಡುತ್ತಾರೆ.
ಇತ್ತ ತಂತ್ರಿ ಪಡ್ವನರಿಗೆ(? ) ಕನಸಿನಲ್ಲಿ ಗಳಿಗೆಯೊಳಗೆ ಬರಬೇಕೆಂದು ಗುಳಿಗ ದೈವ ತಿಳಿಸುತ್ತದೆ. ಪಡ್ವನರು ಕಡಂ ರ ಬೀಡಿಗೆ ಬಂದು ನೋಡುವಾಗ ಮುಕಾಂಬಿಜೇವಿನ ಜೀವ ಹೋಗಿದೆ. ತಲೆ ತಲೆ ಬಡಿದುಕೊಂಡು ಅಳುತ್ತಾರೆ. ಪಡ್ವನರು ಕಾಷ್ಠ ಸಿದ್ಧಪಡಿಸಿ, ಮೂರು ಸುತ್ತು ಬಂದು ಮುಕಾಂಬಿಯ ದೇಹವನ್ನು ಚಿತೆಯಲ್ಲಿ ಇರಿಸುತ್ತಾರೆ. ಯಾರು ಮುಕಾಂಬಿಯೇ ಕೇಳಿದೆಯಾ? ಇದ್ದರೆ ನನಗೂ ನಿನಗೂ ಒಂದೇ ಬೀಡು, ಸತ್ತರೆ ನನಗೂ ನಿನಗೂ ಒಂದೇ ಕಾಷ್ಠ. ಮೋಸ ಮಾಡಿ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ, ತಗಟೆ ಮೊಳೆಯಲಿ ಎಂದು ಶಾಪ ಕೊಟ್ಟ ಪಡ್ವನರು ಚಿತೆಗೆ ಹಾರುತ್ತಾರೆcopy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ.
ಏರ್‌ಯ ಮುಕಾಂಬಿಯೆ ಕೇನಿದನ
ಇತ್ತ್ಂಡ ನಿಕ್ಕೆಂಕ್ ಒಂಜಿ ಬೂಡು
ಸೈತ್ಂಡ್ ನಿಕ್ಕೆಂಕ್ ಒಂಜಿ ಕಾಟ
ಮೋಸಗಾತರ ಮಲ್ತಿ ಮಯ್ಯೆರೆ ಬೂಡುಗು ಕೊಟ್ಟು ಗುದ್ದೋಲಿ ಬೂರಡು
ತಜಂಕ್ ಕೊಡಿಪಡ್ ಪಂಡ್‌ದ್
ಕೊರನ ಪಾಪ ಕೊರಿಯೆರ್ ಜಂತಿರಿ ಪಡ್ವನಾರ್
ಕಾಟೊಗು ಮೂಜಿ ಸುತ್ತು ಬತ್ತೆರ್
ಕಾಟೊಗು ದಿಡ್‌ಕಪ್ಪಲಾಗಿಯೆರ್
ಕಾಟೊಡು ಪಡ್ವನಾಯೆರ್‌ಲ ಮುಕಾಂಬಿಲ ಪೊತ್ತೊವೆರ್
ಕನ್ನಡ ಅನುವಾದ:
ಓ ಮುಕಾಂಬಿಯೇ ಕೇಳಿದೆಯ
ಇದ್ದರೆ ನನಗೂ ನಿನಗೂ ಒಂದೇ ಬೀಡು
ಸತ್ತರೆ ನನಗೂ ನಿನಗೂ ಒಂದೇ ಕಾಷ್ಟ
ವಿಶ್ವಾಸಘಾತ ಮಾಡಿದ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳಲಿ
ತಗತೆ ಬೆಳೆಯಲಿ ಎಂದು
ಕೊಡಬಾರದ ಶಾಪ ಕೊಟ್ಟರು ತಂತ್ರಿ ಪಡ್ವನಾರ್
ಕಾಷ್ಠಕ್ಕೆ ಮೂರು ಸುತ್ತು ಬರುವರು
ಕಾಷ್ಠಕ್ಕೆ ದಡಕ್ಕನೆ ಹಾರುವರು
ಕಾಷ್ಠದಲ್ಲಿ ವಾಸುಭಟ್ಟರು ಮುಕಾಂಬಿಯು ಉರಿಯುವರು
ಹೆಂಡತಿಯ ಮೇಲಿನ ಪ್ರೀತಿಯಿಂದ ಗಂಡ ವಾಸುಭಟ್ಟರು ಹಾರಿ ಸಾಯುತ್ತಾರೆ. ದುಃಖ ತಡೆಯದ ಮುಕಾಂಬಿಯ ತಾಯಿ-ತಂದೆಯ ಚಿತೆಗೆ ಹಾರಿ ಸಾಯುತ್ತಾರೆ. ಮುಕಾಂಬಿ ತೀರಿಕೊಂಡ ಕ್ರಿಯೆ ಕಳೆದ ಮೂರನೆಯ ದಿನ ಕಡಂಬಾರ ಮಯ್ಯರ ಬೀಡಿಗೆ ಹಾರೆ ಗುದ್ದಲಿ ಬೀಳುತ್ತದೆ. ತಗಟೆ ಬೆಳೆಯುತ್ತದೆ. ಸತ್ತ ಮುಕಾಂಬಿಜೇವು ದೈವವಾಗಿ ದ್ವೇಷ ತೀರಿಸಿದರೆ ಎಂಬ ಭಯದಿಂದ ಅವಳ ಆರಾಧನೆ ಆರಂಭವಾಗಿರಬೇಕು. ಕಡಂಬಾರ ಮಯ್ಯರ ಬೀಡನ್ನು ಮುಕಾಂಬಿಯ ಬಂಧುಗಳು ಹಾಳು ಮಾಡಿರಬಹುದು ಅಥವಾ ಕಾಲಾಂತರದಲ್ಲಿ ಹಾಳು ಬಿದ್ದಿರಬಹುದು. ಮುಕಾಂಬಿ ಚಿತೆಯಲ್ಲಿ ಉರಿದುದರ ಪ್ರತೀಕವಾಗಿ ಮಾರಿಸೂಟೆಗೆ ಹಾರಿ ಬೆಂಕಿಯಲ್ಲಿ ಮಲಗುವ ಅಭಿನಯವನ್ನು ಮುಕಾಂಬಿ ಗುಳಿಗದ ಭೂತ ಮಾಧ್ಯಮರು ಮಾಡುತ್ತಾರೆ. ಇದರಿಂದ ಮುಕಾಂಬಿ ಗುಳಿಗನನ್ನು ಅಗ್ನಿ ಚಾಮುಂಡಿ ಗುಳಿಗ ಎಂದು ಕರೆಯುತ್ತಾರೆ.
ತುಳುನಾಡಿನಲ್ಲಿ ದುರಂತವನ್ನಪ್ಪಿದವರು ದೈವತ್ವವನ್ನು ಪಡೆಯುವುದು ತುಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾದ ವಿಚಾರ . ಇಲ್ಲಿ ಅಂತು ಮೂಕಾಂಬಿ ಕಡಮ್ಬಾರು ಮಯ್ಯನಿಂದ ದೌರ್ಜನ್ಯಕ್ಕೆ ಒಳಗಾದದ್ದು ಮಾತ್ರವಲ್ಲ ತನ್ನ ಗಂಡನ ಮನೆಯ ಗುಳಿಗನನ್ನು ನಂಬಿ ಕಟ್ಟದ ನೀರಿಗೆ ಹಾರಿದ್ದಾಳೆ ಆದ್ದರಿಂದ ಅವಳು ಗುಳಿಗ ದೈವದ ಸನ್ನಿಧಿಗೆ ಸೇರಿ ದೈವತ್ವವನ್ನು ಪಡೆದದ್ದು ಅಸಹಜ ವಿಚಾರವೇನು ಅಲ್ಲ. ಅವಳು ಕಟ್ಟದ ನೀರಿಗೆ ಹಾರುವುದು ಪುರುಷ ದೌರ್ಜನ್ಯಕ್ಕೆ ತೋರಿದ ಪ್ರತಿಭಟನೆಯಾಗಿದೆ. ಅದರೊಂದಿಗೆ ಗುಳಿಗ ದೈವದ ನಂಬಿಕೆ ತಳಕು ಹಾಕಿಕೊಂಡಿದೆ. ಇದರಿಂದಾಗಿ ಅವಳು ಗುಳಿಗನ ಸೇರಿಗೆಯ ದೈವವಾಗಿ ಮೂಕಾಂಬಿ ಗುಳಿಗನಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ .
ವೈದಿಕ ಪರಂಪರೆಯ ದೇವರುಗಳ ಪ್ರಭಾವದಿಂದಾಗಿ ಮೂಕಾಂಬಿ ಗುಳಿಗ ಅಗ್ನಿ ಚಾಮುಂಡಿ ಗುಳಿಗನಾಗಿ ಪರಿವರ್ತನೆ ಹೊಂದಿದೆ. ಮೂಕಾಂಬಿ ಎಂಬ ಹೆಸರನ್ನು ಅನುಲಕ್ಷಿಸಿ ಈ ದೈವದ ಆರಾಧನೆಯ ಸಂದರ್ಭದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಿಯ ಪುರಾಣದ ಕಥೆಯನ್ನು ಸೇರಿಸಿ ಹೇಳುತ್ತಾರೆ .ಆದರೆ ಮಾರಿ ಸೂಟೆಯ ಮೇಲೆ ನಡೆಯುವಾಗ ಮುಕಾಂಬಿ ಗುಳಿಗನ ಮೂಲ ಪಾಡ್ದನವನ್ನು ಹಾಡುತ್ತಾರೆ. ಚಾಮುಂಡಿಯೊಂದಿಗೆ ಸಮನ್ವಯಗೊಂಡಿರುವುದರಿಂದ ಮೂಕಾಂಬಿ ಗುಳಿಗನ ಸೇರಿಗೆಯ ದೈವವಾಗಿದ್ದರೂ ಕೂಡ ಕಾಲಾಂತರದಲ್ಲಿ ಗುಳಿಗನನ್ನು ಮೀರಿ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ . ವೈದಿಕ ಪ್ರಭಾವದಿಂದ ಮುಂದೊಂದು ದಿನ ಮುಕಾಂಬಿ ಗುಳಿಗ ದೈವದ ಮೂಲವಾಗಿರುವ ಮೂಕಾಂಬಿ ಜೇವಿನ ಕಥಾನಕ ಜನ ಮಾನಸದಿಂದ ದೂರವಾಗಿ ಬಿಡುವ ಸಾಧ್ಯತೆ ಇದೆ ಮುಕಾಂಬಿ ಗುಳಿಗ ಶುದ್ಧ ವೈದಿಕ ದೇವತೆಯಾಗಿ ಪರಿಗಣಿಸಲ್ಪಡುವ ದಿನಗಳು ಹೆಚ್ಚು ದೂರವಿಲ್ಲ.
ಡಾ.ಲಕ್ಷ್ಮೀ ಜಿ ಪ್ರಸಾದ
0 Followers
0 Following