ರಾತ್ರಿ ಅರಳುವ ವಿಸ್ಮಯಕಾರಿ ‘ಬ್ರಹ್ಮಕಮಲ’!

ಇರುಳಲ್ಲಿ ಮಾತ್ರ ಅರಳುವ ಬ್ರಹ್ಮಕಮಲವನ್ನು ‘ರಾತ್ರಿ ರಾಣಿ’ ಎಂದೂ ಕರೆಯಲಾಗುತ್ತದೆ.

ProfileImg
26 Jun '24
2 min read


image

ಈ ಬಾರಿ ಮೇ ತಿಂಗಳಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಪೂರ್ವ ಮಳೆ ಬೀಳಲಿಲ್ಲ. ಭೂಮಿ ಎಲ್ಲೆಡೆ ಕಾಯಿತು. ಹಗಲಲ್ಲಿ ಹೊರಗಡೆ ಓಡಾಡಿದರೆ ಮೈಯಿಡೀ ಧಾರಾಕಾರ ಬೆವರು. ಇಂಥ ಶುಷ್ಕ ದಿನದಲ್ಲೂ ರಾತ್ರಿಯ ವೇಳೆ ‘ಬ್ರಹ್ಮಕಮಲ’ ಹೂ ಅರಳಿ ಸುವಾಸನೆಯನ್ನು ಬೀರಿತು. ಬೆಳಗ್ಗೆ ಹೂ ಮುದುಡಿ ಹೋದರೂ ರಾತ್ರಿ ಅದು ಬೀರಿದ ಸುವಾಸನೆ ದಿನವಿಡೀ ಆಹ್ಲಾದತೆಯನ್ನು ಉಂಟು ಮಾಡಿತು.

ದಕ್ಷಿಣ ಕನ್ನಡದ ಬೆಳ್ತಂಗಡಿಯ ನಮ್ಮ ಮನೆಯಲ್ಲಿ ಬಿರುಬಿಸಿಲಿನ ದಿನದಲ್ಲಿ ಅರಳಿದ ಹೂ ಮುಂಗಾರಿಗೆ ಸ್ವಾಗತ ಕೋರಿದಂತಿತ್ತು. ಬಹುತೇಕ ಎಲ್ಲ ಕಡೆ ಮೇ ತಿಂಗಳ ಕೊನೆಯ ಸಮಯದಲ್ಲಿ ಬ್ರಹ್ಮಕಮಲ ಅರಳುವ ಮೂಲಕ ನೋಡುಗರಿಗೆ ವಿಸ್ಮಯ ಉಂಟು ಮಾಡಿತು.

ಇರುಳಲ್ಲಿ ಮಾತ್ರ ಅರಳುವ ಬ್ರಹ್ಮಕಮಲವನ್ನು ‘ರಾತ್ರಿ ರಾಣಿ’ ಎಂದೂ ಕರೆಯಲಾಗುತ್ತದೆ. ಕೇವಲ ಒಂದು ರಾತ್ರಿಯ ಅಲ್ಪಾಯುಷ್ಯದಲ್ಲಿ ಅರಳಿ ತನ್ನ ಸುತ್ತಮುತ್ತಲ ಪರಿಸರದಲ್ಲಿ ಅಪರಿಮಿತ ಸುವಾಸನೆ ಹರಡಿ ಆಕರ್ಷಣೆಯ ಕೇಂದ್ರಬಿ0ದುವಾಗುವ ಬ್ರಹ್ಮಕಮಲ ಅನೇಕ ಸ್ವಾರಸ್ಯ ಅಂಶಗಳನ್ನು ಒಡಲಲ್ಲಿ ಹುದುಗಿಸಿಕೊಂಡಿದೆ.

ಹಿಮಾಲಯದ ಹೂ: ಬಿಳಿ ವರ್ಣದ ಬ್ರಹ್ಮಕಮಲ ಮೂಲತಃ ಹಿಮಾಲಯ, ಉತ್ತರಾಖಂಡ ಭಾಗದ ಹೂ ಎಂದು ಪುಷ್ಪತಜ್ಞರು ಹೇಳುತ್ತಾರೆ. ಇದಲ್ಲದೆ ಉತ್ತರ ಬರ್ಮಾ, ನೈರುತ್ಯ ಚೀನಾದಲ್ಲೂ ಇದು ಕಂಡು ಬರುತ್ತದೆ. ಉಭಯ ಲಿಂಗಿಯಾಗಿರುವ ಈ ಹೂವಿನ ಪರಾಗಸ್ಪರ್ಶ ಕ್ರಿಯೆ ಕೀಟಗಳ ಮೂಲಕ ನಡೆಯುತ್ತದೆ.  ಬ್ರಹ್ಮಕಮಲ ಹೂ ರಾತ್ರಿ ವೇಳೆ ಹೊರಸೂಸುವ ಅಪರಿಮಿತ ಸುವಾಸನೆ ಕೀಟಗಳನ್ನು ಆಕರ್ಷಿಸುವ ಮೂಲಕ ಸಂತಾನಾಭಿವೃದ್ಧಿ ಮಾಡುವ ತಂತ್ರಗಾರಿಕೆಯೂ ಆಗಿದೆ!

ರಾತ್ರಿ ವೇಳೆ ಮಾತ್ರ ಅರಳುವ ಬ್ರಹ್ಮಕಮಲವನ್ನು ಇಂಗ್ಲೀಷ್‌ನಲ್ಲಿ ಸೌಸರೋಬ್ವಲ್ಲಟ ಎನ್ನಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಇಪಿಪಿಲುಂ ಆಕ್ಸಿಪೆಟಲಂ. ಕಳ್ಳಿ ಜಾತಿಗೆ ಸೇರಿದೆ ಎನ್ನಲಾಗುವ ಈ ಹೂವನ್ನು ‘ಹಿಮಾಲಯ ಪುಷ್ಟಗಳ ರಾಜ’, ‘ರಾತ್ರಿ ರಾಣಿ’ ಎಂದೂ ಬಣ್ಣಿಸಲಾಗುತ್ತದೆ.

ರಾತ್ರಿ ಮಾತ್ರ ಅರಳಿ ಮುಂಜಾವಿನ ವೇಳೆಗೆ ಮುದುಡಿ ಹೋಗುವ ಬ್ರಹ್ಮಕಮಲ ಸೃಷ್ಟಿಯ ಒಂದು ವಿಚಿತ್ರವೇ ಸರಿ. ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೆ ಮುನ್ನ ಹೂ ಬಿಡುವ ಬ್ರಹ್ಮಕಮಲದ ಪುಷ್ಪ ದರ್ಶನದ ಅವಧಿ ಬಗ್ಗೆ ಏಕಾತಾನತೆ ಇಲ್ಲ. ಕೆಲವೊಮ್ಮೆ ವರ್ಷಕ್ಕೊಮ್ಮೆ ಹೂ ಬಿಟ್ಟರೆ ಇನ್ನು ಹಲವು ಬಾರಿ ಕೆಲ ವರ್ಷಗಳ ಬಳಿಕವಷ್ಟೇ ಶ್ವೇತ ಸುಂದರಿ ಪುಷ್ಪಗಳ ದರ್ಶನ ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಬ್ರಹ್ಮಕಮಲ ಹೂ ಬಿಡುವ ಮುನ್ನ ಎಲೆ ಭಾಗದಿಂದ ಸುಮಾರು 15 ಸೆಂಟಿ ಮೀಟರ್‌ನಷ್ಟು ಉದ್ದದ ಟಿಸಿಲುಗಳು ಒಡೆದು ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಸೂರ್ಯಾಸ್ತವಾದ ಬಳಿಕ ಕತ್ತಲು ಆವರಿಸುತ್ತಿದ್ದಂತೆ ಮೊಗ್ಗುಗಳು ನಿಧಾನವಾಗಿ ಬಿರಿಯಲು ಆರಂಭಿಸುತ್ತವೆ. ರಾತ್ರಿ 9ರಿಂದ 10 ಗಂಟೆ ಸುಮಾರಿಗೆ ಅಂಗೈ ಅಂಗಲದಷ್ಟು ಗಾತ್ರದ ಬಿಳಿ ವರ್ಣದ ಹೂ ಸಂಪೂರ್ಣವಾಗಿ ಅರಳುತ್ತದೆ. ಈ ವೇಳೆ ನಿಧಾನವಾಗಿ ಬೀಸುವ ತಂಗಾಳಿಗೆ ಸುವಾಸನೆಯನ್ನು ಪಸರಿಸುವ ಹೂ ತನ್ನ ಆಸ್ತಿತ್ವವನ್ನು ಪ್ರಕಟಿಸುತ್ತದೆ!

ಸುಮಾರು ಮೂರು ಪದರಗಳಲ್ಲಿ ಶ್ವೇತವರ್ಣದಲ್ಲಿ ಕಂಗೊಳಿಸುವ ಹೂವಿನ ಒಳಭಾಗದಲ್ಲಿ ಮಾನವನ ನಾಲಗೆಯನ್ನು ಹೋಲುವ ಆಕಾರದ ರಚನೆಯಲ್ಲಿ ಪರಾಗರೇಣು ಇರುತ್ತದೆ. ಮುಂಭಾಗದಲ್ಲಿ ತೆರೆದ ಛತ್ರಿ ಆಕಾರದ ರಚನೆ ಪುಷ್ಪಕ್ಕೆ ಕಲಶವಿಟ್ಟಂತೆ ಕಂಗೊಳಿಸುತ್ತಿರುತ್ತದೆ.

ಇರುಳಿಡೀ ಕಂಗೊಳಿಸುವ ಬ್ರಹ್ಮಕಮಲ ಸೂರ್ಯೋದಯದ ಕ್ಷಣ ಸನ್ನಿಹಿತವಾದಂತೆ ಮುದುಡಲು ಆರಂಭಿಸುತ್ತದೆ. ಇಡೀ ಜಗತ್ತು ಬೆಳಕಿಗೆ ತೆರೆದುಕೊಳ್ಳುತ್ತಿದ್ದಂತೆ ‘ರಾತ್ರಿ ರಾಣಿ’ ಬಾಡುವ ಮೂಲಕ ಕತ್ತಲ ಲೋಕಕ್ಕೆ ಕಾಲಿಡುತ್ತದೆ!

ಬ್ರಹ್ಮಕಮಲದ ಹೂ ಬಿಡುವ ಪ್ರಕ್ರಿಯೆ ಎರಡು-ಮೂರು ದಿನಗಳವರೆಗೂ ನಡೆಯುತ್ತದೆ. ಒಂದು ಬಾರಿ ಅರಳಿದ ಹೂ ಮತ್ತೆಂದೂ ಅರಳುವುದಿಲ್ಲ. ಏಳು-ಎಂಟು ಅಡಿಯಷ್ಟು ಬೆಳೆಯಬಲ್ಲ ಈ ಗಿಡದ ಗಾತ್ರಕ್ಕೆ ಅನುಗುಣವಾಗಿ ಹೂವುಗಳ ಸಂಖ್ಯೆ ಇರುತ್ತದೆ. ಕೆಲವೊಂದು ಗಿಡ ನಿಗದಿತ ಋತುವಿನಲ್ಲಿ ಐವತ್ತಕ್ಕೂ ಹೆಚ್ಚು ಹೂ ಬಿಟ್ಟ ದಾಖಲೆಗಳಿವೆ.

ಔಷಧೀಯ ಗುಣಗಳನ್ನೂ ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಬ್ರಹ್ಮಕಮಲ ರಾತ್ರಿ ವೇಳೆ ಮಾತ್ರ ಯಾಕೆ ಅರಳುತ್ತದೆ ಎನ್ನುವುದು ರಹಸ್ಯವೇ ಆಗಿದೆ.

-ಅರುಣ್ ಕಿಲ್ಲೂರು

----

Category:NatureProfileImg

Written by Arun Killuru

Author,Journalist,Photographer