ಬೌವ್ವಾಜೀ !

ಉತ್ತರ ಕರ್ನಾಟಕ ಭಾಷೆಯಲ್ಲಿ ಸಂಸಾರಿಕ ಹರಟೆ

ProfileImg
28 May '24
2 min read


image

ಯಾಕ್ರಿ ಮಾಮಿ ? ಹಿಂದ ಕೈ ಕಟ್ಗೊಂಡು ಹೀಂಗ್ಯಾಕ್ ಶತಪಥ ಅಡ್ಯಾಡ್ಲಿಕತ್ತೀರಿ? ಇವತ್ತ ಯಾಕೋ ಸಿಟ್ನ್ಯಾಗ ಇದ್ದೀರಲಾ? ನನ್ನ ಅರಿವಿನ್ ಪ್ರಕಾರ ಎಷ್ಟ ಶಾಂತ ಸ್ವಭಾವದ ನಿಮ್ದು !.

ಬಾರವಾ ಪದ್ದು ಬಾ.. ಇದೇನ್ ನಮ್ಮವ್ವಾ ..ಮುಂಜ್ ಮುಂಜಾನೆನ ಉಗಾ ಆಡೋ ದೊಡ್ಡ ಪಾತೇಲಿ ಹೊತ್ಗೊಂಡ್ ಬಂದಿ? ಬಿಸಿಲ ಬ್ಯಾರೆ ಭಾಳದ ..

ಅಂದಂಗ ಮಾಮಿ ರೀss ನಿಮ್ಮ ಮನ್ಯಾಗ ದೊಡ್ಡ ಸೈಜ್ ಪ್ಲಾಸ್ಟಿಕ್ ಚೀಲ ಅವ ಏನು?

ಯಾಕವಾ? ಮೊಮ್ಮಗನ್ ಬುಡುಕ ಹಾಸ್ಲಿಕ್ಕೆ ಬೇಕಾಗಿತ್ತನು?

ಇಲ್ರಿ ಮಾಮಿ... ಗುಬ್ಬಿ ಸಂಡ್ಗಿ ಇಡ್ಲಿಕ್ಕೆ ಹಿಟ್ಟು ಕುದಿಸ್ಗೊಂಡ್ ಬಂದಿದ್ದೆ.. ಪ್ಲಾಸ್ಟಿಕ್ ಬೇಕಾಗಿತ್ತು. ಹೆಂಗಿದ್ರೂ ನಿಮ್ ಅಟ್ಟದ ಮ್ಯಾಲೆ ಬಿಸಿಲ ಭಾಳ. ನಮ್ಮ ಅಪಾರ್ಟ್ಮೆಂಟ್ ಒಳಗ ಸೂರ್ಯಾನ ಕಿರಣಾ ಹೋಲಿ(ಹೋಗಲಿ) ಚಂದಪ್ಪನ ಒಂದ್ ಬೆಳ್ಳಿ ಗೆರಿ ಸುದ್ಧಾ ಹಾಯಂಗಿಲ್ಲಾ! ಉಬ್ಗುಚ್ಚಿದಂಗ ಆಗ್ತದ.

ಮನ್ನೆರೆ ನಿನ್ನ ಮಾಮಾ ಈ ಮನಿದು ಫ್ರಿಡ್ಜ್, ಟಿವಿ  ಬದಲಿಸ್ಯಾರ. ಎ ಸಿ ತಂದಾರ. ಗುಳ್ಳಿ ಪ್ಲಾಸ್ಟಿಕ್ ಭಾಳವ.
ಹೊರಗ ಚೆಲ್ಲಲಿಕ್ಕೆ ಮಡಚಿ ಇಟ್ಟಿದ್ರು...ಇಕಾ ಅಲ್ಲೇ ಮೂಲ್ಯಾಗವ ನೋಡು.. ಅದರಾಗ ನಿನ್ನ ಗುಬ್ಬಿ ಇಟ್ಟು ಬಿಡು.

ಆತ್ರಿ ಮಾಮಿ.. ಅವಸ್ರಕ್ಕ ಇಷ್ಟರ ಸಿಕ್ವಲ್ಲಾ. ಅಷ್ಟ ಸಾಕು.
ನಿಮ್ಮ ಕೆಲಸಾ ನೀವ್ ಮಾಡ್ಕೋರಿ. ನಾ ಅಟ್ಟಾ ಹತ್ತತೇನಿ..!

ಅಂದಂಗ ಅದ್ಯಾಕೋ ಅಗಳೇ ಸಿಟ್ಟಿನ್ಯಾಗ ಇದ್ರಿ?

ಏನ್ ಕೇಳ್ತಿ ಬಿಡು. ಅಬ್ರಮ್ ಸುಬ್ರಮ್ ಆ ಮೂಳ ಬೌವ್ವಾ ಕನಸಿನ್ಯಾಗ ಬಂದಿದ್ನವಾ ..!

ಮೆಣಸಿನ್ ಹಪ್ಳಾ ಬೇಕಂತ. ನನಗರ ಲಟ್ಟ್ಸೋ ಅಷ್ಟ ತ್ರಾಣ ಉಳದಿಲ್ಲಾ . ಕನಸ ಬ್ಯಾರೆ ೩ರಿಂದ ೫ ರ ವೇಳ್ಯಾಕ ಬಿದ್ದದ. ಖರೇ ಆಗ್ತಾವಂತ ನೋಡು.

ಆತಗ ಒಂದಿಷ್ಟ ಇದ್ಲಿ , ಬಿಳಿ ಹಾಳಿ ಕೊಟ್ಟ ಕಳಸ್ರಿ ಮಾಮಿ .. ಸುಡ್ಲಿ‌ ಚಿತ್ರಾ ಪತ್ರಾ ತಕ್ಕೋತ ಕೂಡ್ಲಿ. ನೀವ್ಯಾಕ್ ಎಲ್ಲಾ ಮೈಮ್ಯಾಲೆ ಹಾಕ್ಕೋತೀರಿ?

ಹೂನವಾ .. ನಾನೂ ಅಷ್ಟ ಮಾಡ್ಬೇಕ ಅಂದಿದ್ದೆ‌. ಬರವಣಿಗಿ ಹುಚ್ಚು ಭಾಳದ ಅವಗ. ಅದೇನೋ ಅಂತಾರಲ್ಲಾ ... "ಅರ್ಧಾ ಓದಿ ಗಿರ್ಧಾ ಬರದು ಗರ್ಬಾ ನೃತ್ಯ ಮಾಡಿದ್ರಂತ" ! ತಲಿ ಹೊರಗ ಹೋಗಲಿ ಒಳಗೂ ಖಾಲಿ ಹೊಡೀತದ ಅವಂದು!

ಫೇಕ್ ಲೇಖನಾ ಬರದ ಬರದ "ದೇಖ್ ಭಾಯ್ ದೇಖ್" ಅಂತದ ಅದೊಂದ್ ಹುಚ್ಪ್ಯಾಲಿ‌ .

ಹೆಂಗಿದ್ರೂ ನೀ ಗುಬ್ಬಿ ಸಂಡಗಿ ಇಡ್ಲಿಕತ್ತಿ. ಒಣಗಿದ್ ಮ್ಯಾಲೆ ಒಂದ್ ಮುಷ್ಟಿ  ಅವಗ ಕೊಟ್ಟು ಬಿಡು..

ಅಲಾ ಮಾಮಿ..! ಹವುರಕ ಬಾರಸ್ಲಿಕತ್ರ್ಯಾ?!  ಸೂರ್ಯಾನ ನಾಕ್ ಎಳಿ ಕಿರಣಾ ಕೊಟ್ಟಂಗ್ ಮಾಡಿ ...ಮುಷ್ಟಿಗಟ್ಲೆ ಗುಬ್ಬಿ ಸಂಡಗಿ ಕೊಡಬಕಂತ! (ಸ್ವಗತ)

ಆತ್ರಿ ..ಅಷ್ಟ ಹೌದಿಲ್ಲೋ? ಬಣ್ಣಾ ಹಾಕಿದ್ ಬ್ಯಾರೆ ಮಾಡ್ತೇನಿ ನಾಳೆ‌ . ಅವುನ್ನ ಕೊಡ್ತೇನಿ.  (ನಾಳೆ ಅಟ್ಟಾ ಹತ್ತಿದ್ರ ಕೇಳ್ರಿ !)

ಆತು..‌ಅಷ್ಟ ಮಾಡು.

ಯಾರಿದ್ದೀರಿ ಒಳಗ ?

ಅರೇ... ಶುಭಾ ಬಾರವಾ ಬಾ. ಭಾಳ ಖುಷಿ ಆತು.. ಇದೇನs ಫಳಿ ಹೊತ್ಗೊಂಡ್ ಬಂದಿ?

ಮಾಮಿರೀ ನಿಮ್ಜೋತಿ ಮಾತಾಡಿದಂಗೂ ಆತು.. ಶ್ಯಾವಿಗಿ ಹೊಸದಂಗೂ ಆತಂತ.. ಹಿಟ್ಟ ಸಮೇತ ಬಂದೇನಿ. ಕೋಲು ಕೊಡ್ರಿ ..ಹಾ ...ಜೋತ್ ಬಿಡ್ಲಿಕ್ಕೆ ಹೆಲ್ಪ ಮಾಡ್ರಿ ಪ್ಲೀಸ್‌‌ . ನೀವು ನನ್ನ ಮುದ್ದು ಮಾಮಿ ಹೌದಿಲ್ಲೋ?

ಹವಾ ಹೊಡಿಯೂದು ಸಾಕ ಮಾಡು...ಪೋನಿ ಕಟ್ಟೊ ಅಷ್ಟ ಪುರಸೊತ್ತ ಇಲ್ಲ ನನಗ. ಇನ್ ನಿನ್ನ ಶ್ಯಾವಿಗಿ ಎಳಕೋತ ಕೂಡ್ಲ್ಯಾ? ಎಳೀತೇನಿ ಆದ್ರ ಒಂದ್ ಕಂಡೀಶನ್ .. ಎರಡ ಕಿಲೋ ಶ್ಯಾವಿಗಿ ಇಲ್ಲೇ ಇಡಬಕು ನೋಡು. ಲವಂಗ ಹಾಕಿದ್ ಡಬ್ಯಾಗ !

ಮಾಡಿದ್ದs ಐದ್ಕಿಲೋ..ತಾತ್ಪೂರ್ತಿಕ ಮಾಡೇನಿ. ಮುಂದಿನ ಸಲಾ ಎರಡ್ಯಾಕ ಇನ್ನೂ ಒಂದ್ ಗ್ರಾಂ ಜಾಸ್ತಿನ ಕೊಡ್ತೇನಿ. ಕೋಲ ಕೊಡಬರ್ರಿ .

ಆತಾತು.. ಸಂಜೀಮುಂದ BC ಚೀಟಿ ಎತ್ತೋದದ. 
ತುಂಗಾಬಾಯಿ , ಗಂಗಾ ಮೌಂಶಿ, ಯಮುನಾ ವೈನಿ , ಕೃಷ್ಣಾಬಾಯಿ. ಗೋದಾವರೀ ಅತ್ಯಾ, ಸರಸ್ವತೀ ಕಾಕು, ನರ್ಮದಾ ಅಂಟಿ, ಸಿಂಧೂ ಮಾಮಿ, ಕಾವೇರಿ ಕಾಕು ಎಲ್ಲಾರೂ ಬರ್ಲಿಕತ್ತಾರ. ನೀವಿಬ್ರೂ ಬರ್ರಿ.. ೨೦೦೦/- ಪ್ರತೀ ತಿಂಗ್ಳ ಹಾಕ್ರಿ. ಚಿಟಿ ಎತ್ತೋಣು. ಆತಾ? 
ಒಟ್ಟಿಗೆ ರೊಕ್ಕಾ ಭಾಳ ಬರ್ತದ. ಮನಿಯವ್ರಿಗೆ ಕೇಳಿ ಪಾಟ್ಲಿ ಬಿಲ್ವಾರ ಮಾಡಿಸ್ಗೋಳಿಕ್ಕೆ ಆಗ್ತದ. ಐಡಿಯಾ ಛೊಲೋ ಅದ ಹೌದಿಲ್ಲೋ?


ಭಾಳ ಶ್ಯಾಣೆ ಇದ್ದಿ ನಡೀವಾ.. ವಾಟೆ ಛಾ‌ನರ ಮಾಡಿ ಕೊಡು. ಶ್ಯಾವಿಗಿ ಎಳೀಲಿಕ್ಕೆ ಶಕ್ತಿ ಬ್ಯಾಡನು?


(ಅಟ್ಟದ ಕಡೆ ಮಾರಿ ಮಾಡಿ)
ಆತೇನ್ವಾ ಗುಬ್ಬಿ ಇಟ್ಟಿದ್ದು. ಬಾ ಛಾ ಕುಡಿಯೋಣು.

*ಶ್ರೀವಲ್ಲಭ ಕುಲಕರ್ಣಿ*
ಹುಬ್ಬಳ್ಳಿ

Category:Prose



ProfileImg

Written by Shreevallabha Kulkarni

ನಾನೊಬ್ಬ ಕವಿ, ಹಾಸ್ಯ ಬರಹಗಾರ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವನು.