ಬಹಳಷ್ಟು ವರ್ಷ ನನಗೆ ಜೀವದ ಗೆಳತಿಯಂತಿದ್ದವಳು ನನ್ನ ಬಿಲ್ಲು. ಬಿಲ್ಲು ನನಗೆ ಪರಿಚಯವಾದಾಗ ನಾನು ಎಂಟು ಅಥವಾ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಅಂದಿನಿಂದ ಸತತವಾಗಿ ಹನ್ನೆರಡರಿಂದ ಹದಿಮೂರು ವರ್ಷಗಳ ಕಾಲ ನನ್ನ ಜೊತೆಗಾತಿಯಾಗಿದ್ದು, ನಮ್ಮ ಮನೆಯ 'ಜೀವಂತ ಆಭರಣದಂತೆ' ಇದ್ದಳು ನನ್ನ ಬಿಲ್ಲು..!!
ಬಿಲ್ಲು ಬರಿ ಬೆಕ್ಕು ಮಾತ್ರವಲ್ಲದೆ, ಅವಳಲ್ಲಿದ್ದ ತಾಯಿ ಪ್ರೀತಿ ಎಲ್ಲಾ ತಾಯಿಯರಿಗೂ ಮಾದರಿ ಎನ್ನಬಹುದು. ಆ ಮಟ್ಟಿಗೆ ಅವಳು ಮರಿಗಳನ್ನು ಸಾಕಿ ಸಲಹುತ್ತಿದ್ದಳು. ಎಷ್ಟೇ ಮರಿಗಳನ್ನು ಹಾಕಿ ವಯಸ್ಸು ಮುಂದೆ ಓಡುತ್ತಿದ್ದರೂ 'ಸಂತೂರ್ ಮಮ್ಮಿಯ' ರೀತಿ ಬಳುಕುತ್ತಲೇ ತನ್ನ ದೇಹವನ್ನು ಚೆನ್ನಾಗಿ ಮೇಂಟೇನ್ ಮಾಡುತ್ತಿದ್ದಳು...!! ಅಂತಹ ಸುಂದರಿ ಮತ್ತು ಬುದ್ಧಿವಂತಳು ಆಕೆ..!
ಮಿಯಾಂವ್ ಮಿಯಾಂವ್ ಎನ್ನುತ್ತಾ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬಿಲ್ಲು, ನಮ್ಮ ಮನೆ ಮನಗಳನ್ನು ತುಂಬಿಕೊಂಡ ರೀತಿ ನಿಜಕ್ಕೂ ಸುಂದರ. ಎಂಟು ಅಥವಾ ಒಂಬತ್ತನೇ ಕ್ಲಾಸಿನಲ್ಲಿ ನಾನಿದ್ದಾಗ ಅದೊಂದು ದಿನ ನಮ್ಮ ಮನೆಯ ಮುಂದೆಯೇ ಓಡಾಡುತ್ತಿದ್ದ ಬೆಕ್ಕಿಗೆ ನನ್ನ ಅಮ್ಮ "ಒಂದು ಸ್ವಲ್ಪ ಹಾಲು ಹಾಕು" ಎಂದರು. ನಾನೂ ಸಹ ಒಂದು ಬಟ್ಟಲಿನಲ್ಲಿ ಹೋಗಿ ಹಾಲನ್ನು ಇಟ್ಟು ಬಂದೆ. ಮೊದಮೊದಲು ಅವಳನ್ನು ಮುಟ್ಟುವುದಕ್ಕೆ ಭಯವಾಗುತ್ತಿತ್ತು. ಎಲ್ಲಿ ಪರಚಿ ಅಥವಾ ಕಚ್ಚಿ ಬಿಡುತ್ತಾಳೆ ಎಂದು.
ನಂತರ ಅಭ್ಯಾಸವಾದಾಗ ಅವಳ ತಲೆಯನ್ನು ನೇವರಿಸುತ್ತಾ, ಗಲ್ಲದ ಕೆಳಗೆ ನೀವುತ್ತಿದ್ದರೆ ಅವಳು ತುಂಬಾ ಚೆನ್ನಾಗಿದೆ ಎಂದು ಆನಂದಿಸುತ್ತಿದ್ದಳು. ಒಂದೊಂದೇ ಹೆಜ್ಜೆ ನಮ್ಮ ಮನೆಯೊಳಗೆ ಮತ್ತು ನಮ್ಮೆಲ್ಲರ ಮನಸ್ಸಿನೊಳಗೆ ಇಡುತ್ತಾ ಪೂರ್ತಿ ನಮ್ಮ ಮನೆಯ ಸದಸ್ಯಳೇ ಆಗಿಬಿಟ್ಟಳು..! ಎಷ್ಟೋ ಸಲ ನಾನು ಅಂದುಕೊಳ್ಳುವುದಿದೆ. ಬಿಲ್ಲುವಿನಂತೆ ಒಂದೊಂದೇ ಪ್ರೀತಿಯ ಹೆಜ್ಜೆಯನ್ನು ಇಡುತ್ತಾ ಸೊಸೆಯಾದವಳು, ಎಲ್ಲರ ಮನೆ ತುಂಬಿದರೆ ಎಷ್ಟು ಚೆನ್ನ ಅಲ್ಲವೇ..?! ಎಂದು.
ಬಿಲ್ಲು ಬಹಳ ಬುದ್ಧಿವಂತೆ ಎನ್ನಲು ಕಾರಣ, ಅವಳು ಮರಿಗಳನ್ನು ರಕ್ಷಿಸಲು ಒಳ್ಳೆ ಸೈಟ್ ಹುಡುಕುವಂತೆ ಎಲ್ಲಾ ಜಾಗಗಳನ್ನು ಶೋಧಿಸಿ, ಈ ಜಾಗ ತನ್ನ ಮರಿಗಳಿಗೆ ಸೂಕ್ತವೇ ಎಂದು ಯೋಚಿಸಿ ನಂತರ ಮರಿಗಳನ್ನು ಇಡುತ್ತಿದ್ದಳು. ನೋಡಲು ಸುಂದರಿ ಮಾತ್ರವಲ್ಲದೆ ಭಾರೀ ಜಾಣೆಯೂ ಆಗಿದ್ದಳು.
ಬಿಲ್ಲುವಿನ ತಾಯ್ತನದ ಕಥೆ ಬಲು ಸೊಗಸಾಗಿದೆ. ಬಿಲ್ಲು ನಮ್ಮ ಮನೆಗೆ ಕಾಲಿಟ್ಟ ಮೇಲೆ ಒಟ್ಟು ಮೂರು ಬಾರಿ ಮರಿಗಳನ್ನು ಹಾಕಿದಳು. ಮೊದಲನೆಯ ಸಲ ಎರಡು ಮರಿಗಳನ್ನು ಹಾಕಿದಾಗ ನಮಗೆಲ್ಲರಿಗೂ ಬಹಳ ಖುಷಿ ಮತ್ತು ಕುತೂಹಲ. ನೋಡಲು ಮುದ್ದು ಮುದ್ದಾಗಿ ಬಲು ಸುಂದರವಾಗಿದ್ದವು ಆ ಮರಿಗಳು. ಅವಕ್ಕೆ 'ಶೌರ್ಯ-ಮೌರ್ಯರೆಂದು' ನಾಮಕರಣ ಮಾಡಿದೆವು. ನಂತರ 3-4 ತಿಂಗಳಿಗೆ ಇನ್ನೊಮ್ಮೆ ಗರ್ಭಿಣಿಯಾಗಿ, ಮೂರು ಮರಿಗಳಿಗೆ ಜನ್ಮ ನೀಡಿದಳು. ಅವುಗಳಿಗೆ 'ಅಮರ್ -ಅಕ್ಬರ್- ಆಂಟೋನಿ' ಎಂದು ಹೆಸರಿಟ್ಟೆವು. ನಂತರ ಇನ್ನೆರಡು ಮರಿಗಳಿಗೆ ಮತ್ತೆ ನಾಲ್ಕು ತಿಂಗಳ ನಂತರ ಜನ್ಮ ನೀಡಿದಳು. ಅವುಗಳಿಗೆ 'ಕಿಚ್ಚು-ರಿಚ್ಚು' ಎಂದು ಹೆಸರಿಟ್ಟೆವು. ಎಲ್ಲಾ ಹೆಸರುಗಳನ್ನು ಇಟ್ಟು ನಾಮಕರಣ ಮಾಡಿದ್ದು ನನ್ನ ತಾಯಿಯೇ...!
ಮರಿಗಳಿಗೆ ಜನ್ಮ ನೀಡಿದ ತಕ್ಷಣ, ಬಿಲ್ಲುವಿಗೆ "ತಾಯಿಯ ಕಳೆ" ಬಂದುಬಿಡುತ್ತಿತ್ತು. ನನ್ನನ್ನು ಸಹ ಅವಳು ಹೆಚ್ಚು ಮಾತನಾಡಿಸುತ್ತಿರಲಿಲ್ಲ. ಎಲ್ಲಿ ತನ್ನ ಮರಿಗಳಿಗೆ ಹಾನಿ ಮಾಡುತ್ತಾಳೋ ಎಂದು, ಹತ್ತಿರ ಹೋದರೆ ಗುರ್ ಎಂದು ಬಯ್ಯುತ್ತಿದ್ದಳು! ಅವುಗಳಿಗೆ ಪ್ರೀತಿಯಿಂದ ಹಾಲು ಕುಡಿಸುವುದು, ಬೇಕೆಂದಾಗ ನಾನ್ವೆಜ್ ಊಟವನ್ನು ತಂದು ಕೊಡುವುದು..! (ಅಂದರೆ ತಾನು ಬೇಟೆಯಲ್ಲಿ ಹಿಡಿದ ಪ್ರಾಣಿ, ಹುಳುಗಳನ್ನು ಅವಕ್ಕೂ ತಂದು ಕೊಡುತ್ತಿದ್ದಳು), ಮರಿಗಳಿಗೆ ಮೈಕೈ ನೆಕ್ಕುತ್ತಾ ಸ್ನಾನ ಮಾಡಿಸುವುದು, ಒಂದೇ ಜಾಗದಲ್ಲಿ ಇದ್ದ ಮರಿಗಳಿಗೆ ಬೇಸರವಾಗಿರಬಹುದು ಎಂದು ಬಾಯಲ್ಲಿ ಕಚ್ಚಿ ಹಿಡಿದು ಇನ್ನೊಂದು ಜಾಗಕ್ಕೆ ಎತ್ತಿಕೊಂಡು ಹೋಗುವುದು..! ಒಂದೇ ಎರಡೇ ಅವಳ ತಾಯ್ತನದ ಪ್ರೀತಿಗೆ ಕೊನೆ ಮೊದಲಿರಲಿಲ್ಲ.
ಆದರೆ ಮರಿಗಳ ಆಟ ತುಂಟಾಟಗಳನ್ನು ನೋಡುವಾಗ ಬಲು ಸಂತಸವಾದರೂ, ಎಷ್ಟು ದಿನಗಳೆಂದು ಅವುಗಳನ್ನು ಮನೆಯಲ್ಲೇ ಇಟ್ಟುಕೊಳ್ಳುವುದು? ಯಾರಾದರೂ ಬೆಕ್ಕು ಮರಿಗಳನ್ನು ಸಾಕಲು ಆಸಕ್ತರಿದ್ದಾರೆಯೇ ಎಂದು ಹುಡುಕಿ, ಅವರಿಗೆ ಕೊಟ್ಟು ಕಳುಹಿಸುವ ವೇಳೆಗೆ ಸಾಕಾಗುತ್ತಿತ್ತು...!
ಮರಿಗಳು ಹುಟ್ಟಿ ಎರಡು ಮೂರು ತಿಂಗಳ ನಂತರ ಈ 'ಮರಿ ಸಾಗಿಸುವಿಕೆ' ಪ್ರಕ್ರಿಯೆಯನ್ನು ಶುರುಮಾಡುತ್ತಿದ್ದೆವು. ಮರಿಗಳನ್ನು ಬೇರೆಯವರಿಗೆ ಕೊಟ್ಟು ಕಳುಹಿಸಿದಾಗ, ಬಿಲ್ಲು ಬೇಸರಗೊಂಡು ವಿಚಿತ್ರವಾಗಿ ಕಿರುಚುತ್ತಾ ತನ್ನ ಮರಿಗಳನ್ನು ಹುಡುಕುವುದನ್ನು ನೋಡಲು ಬಲು ಹಿಂಸೆಯಾಗುತ್ತಿತ್ತು. ಪ್ರತಿ ಬಾರಿಯೂ ಹೀಗಾದಾಗ ಬಹಳ ಕಷ್ಟವಾಗುತ್ತಿತ್ತು. ಅದರ ಜೊತೆಗೆ ಅವಳ ಆರೋಗ್ಯವು ಮುಖ್ಯವಲ್ಲವೇ...? ಹೀಗೆಯೇ ಹಡೆಯುತ್ತಲೇ ಇದ್ದರೆ ಅವಳ ಗತಿ ಏನು..? ನಾವೂ ಸಹ ಎಷ್ಟು ಬಾಣಂತನಗಳನ್ನು ಮಾಡುವುದು ಎಂದು ಎಲ್ಲರೂ ತೀರ್ಮಾನಿಸಿ ಅವಳಿಗೆ 'ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್' ಮಾಡಿಸೋಣ ಎಂದುಕೊಂಡೆವು....!
ಒಂದು ದಿನ ಈ ಆಪರೇಷನ್ ಮಾಡಿಸಲು ಅಪಾಯಿಂಟ್ಮೆಂಟ್ ತೆಗೆದುಕೊಂಡು ಡಾಕ್ಟರ್ ಬಳಿ ಹೋಗೋಣ ಎಂದುಕೊಂಡೆವು. ನಮ್ಮ ಮನೆಯ ಹತ್ತಿರವಿದ್ದ ಅಣ್ಣನ ಸಹಾಯದಿಂದ ಅವಳನ್ನು ರಟ್ಟಿನ ಬಾಕ್ಸ್ ನಲ್ಲಿ ಕೂರಿಸಿ ಕಾರ್ ನಲ್ಲಿ ಕರೆದುಕೊಂಡು ಹೋಗುವುದು ಎಂದು ತೀರ್ಮಾನವಾಯಿತು. ಆದರೆ ಬಿಲ್ಲು ಬಹಳ ಹಠಮಾರಿ. ಸ್ವಲ್ಪವೇ ತೆಗೆದಿದ್ದ ಕಾರಿನ ಕಿಟಕಿಯಿಂದ ಛಂಗನೆ ಹಾರಿ ಓಡಿಹೋದಳು. ಮತ್ತೆ ಅವಳನ್ನು ಹಿಡಿಯಲು ಕೆಲವು ಗಂಟೆಗಳು ಬೇಕಾಯಿತು. ನಂತರ ಆ ಬಾಕ್ಸ್ ನಲ್ಲಿ ಅವಳ ಮರಿಗಳನ್ನು ಇಟ್ಟು, ಆ ಮರಿಗಳು ತನ್ನ ತಾಯಿಯ ಬರುವಿಕೆಗಾಗಿ ಕಿರುಚಿದಾಗ ಅಂತೂ ನಮ್ಮ ಕೈಗೆ ಸಿಕ್ಕಳು. ಅವಳನ್ನು ಹಿಡಿದು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸುವ ಹೊತ್ತಿಗೆ ನಮಗೆಲ್ಲರಿಗೂ ಸಾಕುಸಾಕಾಗಿತ್ತು.
ಇನ್ಫೆಕ್ಷನ್ ಆಗದೇ ಇರುವ ಹಾಗೆ ನೋಡಿಕೊಳ್ಳಿ ಎಂದು ಡಾಕ್ಟರ್ ಹೇಳಿದ್ದರಿಂದ, ಕೂತಲ್ಲಿ ಕೂರದ ನಿಂತಲ್ಲಿ ನಿಲ್ಲದ ಅವಳನ್ನು ಹೇಗೆ ಕಾಪಾಡುವುದು ಎಂಬ ಪ್ರಶ್ನೆ ಎದ್ದಿತ್ತು. ನಂತರ ಡೈನಿಂಗ್ ರೂಮಿನಲ್ಲಿ ಇಟ್ಟು ಒಂದಷ್ಟು ದಿನಗಳ ಕಾಲ ಅವಳನ್ನು ನೋಡಿಕೊಳ್ಳೋಣ ಎಂದುಕೊಂಡೆವು. ಮನೆಗೆ ಅವಳನ್ನು ಕರೆತಂದಾಗ ಫ್ರಾಕ್ ನಂತೆ, ಗಾಯ ಮುಚ್ಚುವ ಹಾಗೆ ಒಂದು ಪುಟ್ಟ ಬಟ್ಟೆಯನ್ನು ತೊಡಿಸಿದ್ದರು ಡಾಕ್ಟರ್.
ಎರಡು ವಾರಗಳ ಕಾಲ ಡೈನಿಂಗ್ ರೂಮ್ನಲ್ಲಿ ಅವಳ ಮರಿಗಳೊಂದಿಗೆ ರೆಸ್ಟ್ ಮಾಡಲಿ, ಇನ್ಫೆಕ್ಷನ್ ಸಹ ಆಗುವುದಿಲ್ಲ ಎಂದು ಅಲ್ಲಿ ಮಲಗಿಸಿದೆವು. ಆದರೆ ಬೆಳಕು ಹರಿಯುವ ಮೊದಲೇ ಬಿಲ್ಲು ನಾಪತ್ತೆ..!! ಎಲ್ಲಾ ಕಿಟಕಿಗಳು ಹಾಕಿದ್ದರೂ ಒಂದು ಕಿಟಕಿಯನ್ನು ಮಾತ್ರ ಲಾಕ್ ಮಾಡಲು ಆಗುತ್ತಿರಲಿಲ್ಲ. ಅದೆಲ್ಲಿಂದ ಇದನ್ನು ಪತ್ತೆ ಹಚ್ಚಿದಳೋ ಗೊತ್ತಿಲ್ಲ, ಅದರಿಂದ ಬೆಳಗ್ಗಿನ ಜಾವದಲ್ಲೇ ಬಿಲ್ಲು ವಾಯುವಿಹಾರಕ್ಕೆಂದು ಜಾಗ ಖಾಲಿ ಮಾಡಿದ್ದಳು..!!
ಗಾಯ ಮಾಗುವವರೆಗೂ ಸರಿಯಾಗಿ ನೋಡಿಕೊಳ್ಳಿ. ಇಲ್ಲದಿದ್ದರೆ ಇನ್ಫೆಕ್ಷನ್ ಆಗಬಹುದು ಎಂದು ಡಾಕ್ಟರ್ ಹೇಳಿದ್ದರಿಂದ ನಮಗಂತೂ ತುಂಬಾ ಭಯವಾಗಿತ್ತು. ಬೇರೆ ದಾರಿ ಕಾಣದೇ, ಬೀದಿ ಸುತ್ತುವುದಕ್ಕೆ ಹೋಗಿದ್ದ ಬಿಲ್ಲುವಿನ ಹಾದಿಯನ್ನೇ ಕಾಯುತ್ತಾ ಕುಳಿತೆವು.
ಒಂದಷ್ಟು ಹೊತ್ತು ಕಳೆದ ಮೇಲೆ ಅವಳೇ ಸುಸ್ತಾಗಿ ಬಂದಳು. ಡಾಕ್ಟರ್ ಹಾಕಿದ್ದ ಬ್ಯಾಂಡೇಜ್ ಅಥವಾ ಬಟ್ಟೆ ಯಾವುದೂ ಅವಳ ಮೈಮೇಲೆ ಇರಲಿಲ್ಲ. ಈ ವಿಷಯವನ್ನು ಡಾಕ್ಟರ್ ಗೆ ತಿಳಿಸಿದಾಗ ಸರಿಯಾಗಿ ನೋಡಿಕೊಳ್ಳಬೇಕಲ್ಲವೇ ಎಂದು ನಮ್ಮನ್ನು ಬೈದರು. ಸಂಜೆ ಮತ್ತೆ ಬಂದು ಡ್ರೆಸ್ಸಿಂಗ್ ಮಾಡಿಕೊಡುತ್ತೇನೆ ಎಂದರು.
ಈ ಮಧ್ಯೆ ಅಂದು ಮಧ್ಯಾಹ್ನ, ಫ್ರಿಡ್ಜ್ ನಲ್ಲಿ ತರಕಾರಿಯನ್ನು ವಾಪಸ್ಸು ಇಡಬೇಕೆಂದು ನಮ್ಮ ಅಡುಗೆಯವರು ಬೇಡವೆಂದರೂ ಚೂರೇ ಬಾಗಿಲು ತೆರೆದಿದ್ದರಿಂದ, ಮತ್ತೊಮ್ಮೆ ಚಾನ್ಸ್ ಸಿಕ್ಕಿತೆಂದು ಅರೆತೆರೆದ ಬಾಗಿಲಿನ ಸಂದಿಯಿಂದ ನುಸುಳಿಕೊಂಡು ಹೊರಗೆ ಓಡಿಹೋದಳು. ಮತ್ತೊಮ್ಮೆ ಅವಳನ್ನು ರೂಮ್ ನೊಳಗೆ ಕರೆತರಲು ಸಹಾಯ ಮಾಡಿದ್ದು ನಾವೆಲ್ಲರೂ ತಿನ್ನಲು ಇಷ್ಟಪಡುವ ಚಿಪ್ಸ್.
ಬಿಲ್ಲುವಿಗೆ ನಮ್ಮಂತೆ ಕುರುಕಲು ತಿಂಡಿ ಎಂದರೆ ಬಹಳ ಇಷ್ಟವಿತ್ತು. ಸ್ವೀಟು, ಚಿಪ್ಸ್, ಚೌ ಚೌ ಪ್ರಿಯೆ..! ಹಾಗಾಗಿ ಒಂದೊಂದೇ ಚಿಪ್ಸ್ ಅನ್ನು ಇಡುತ್ತಾ ಮತ್ತೆ ಅವಳನ್ನು ಡೈನಿಂಗ್ ರೂಮಿನೊಳಗೆ ಸೇರಿಸಲು ಯಶಸ್ವಿಯಾದೆ. ಸಂಜೆ ಡಾಕ್ಟರ್ ಬಂದು ಬುಟ್ಟಿಯೊಳಗೆ ಅವಳನ್ನು ಕೂರಿಸಿ, ಇಂಜೆಕ್ಷನ್ ಕೊಟ್ಟು, ಪ್ರಜ್ಞೆ ತಪ್ಪಿಸಿ, ಮತ್ತೊಮ್ಮೆ ಡ್ರೆಸ್ಸಿಂಗ್ ಮಾಡಿ ಹೋದರು.
ಅಂದಿನಿಂದ ಅವಳು ಹುಷಾರಾಗುವ ತನಕ ಬಿಲ್ಲು ಮರಿಗಳೊಟ್ಟಿಗೆ ಡೈನಿಂಗ್ ರೂಮಿನಲ್ಲೇ ಇರುವುದು, ಆ ರೂಮಿಗೆ ನಾನೊಬ್ಬಳೇ ಹೋಗಿ ಬರುವುದು, ಬೇರೆಯವರು ಅಪ್ಪಿತಪ್ಪಿಯೂ ಆ ರೂಮಿಗೆ ಹೋಗಬಾರದೆಂದು ದೊಡ್ಡ ಬೀಗ ಹಾಕೋಣ ಎಂದು ತೀರ್ಮಾನಿಸಲಾಯ್ತು.
ಆ ದಿನದಿಂದ ಎಂಟು ಹತ್ತು ದಿನಗಳವರೆಗೆ ಡೈನಿಂಗ್ ರೂಮೊಳಗೆ ಹೋಗಿ ಅವುಗಳಿಗೆ ಊಟ ಹಾಕಿ ಬರುತ್ತಿದ್ದದ್ದು ನಾನೇ. ಅವುಗಳ ನಿತ್ಯ ಕರ್ಮಾದಿಗಳಿಗೆಂದು ಅಲ್ಲೇ ಮರಳನ್ನು ಸಹ ಇಟ್ಟಿದ್ದೆ. ಫ್ರಿಜ್ ಅಲ್ಲೇ ಇದ್ದುದ್ದರಿಂದ ಅದರಿಂದ ಯಾವುದೇ ಪದಾರ್ಥ ತೆಗೆದುಕೊಳ್ಳಬೇಕು ಅಥವಾ ಇಡಬೇಕೆಂದರೆ ನಾನೇ ಹುಷಾರಾಗಿ ಚೂರೇ ಬಾಗಿಲನ್ನು ತೆಗೆದು, ಒಳಗೆ ಹೋಗಿ ಇಡುತ್ತಿದ್ದೆ. ಒಂಚೂರು ಜಾಸ್ತಿ ರೂಮಿನ ಬಾಗಿಲನ್ನು ತೆಗೆದರೂ, ಬಿಲ್ಲು ಊರು ಸುತ್ತಲು ಹೊರಟು ಬಿಡುತ್ತಿದ್ದಳಲ್ಲ..! ಹಾಗಾಗಿ ಇಷ್ಟೆಲ್ಲ ಕಾಳಜಿ ಮುತುವರ್ಜಿವಹಿಸಲೇ ಬೇಕಾಗಿತ್ತು.
ಅಂತೂ ಬಿಲ್ಲು ತನ್ನ ಮರಿಗಳೊಂದಿಗೆ ಚೆನ್ನಾಗಿ ಒಂದಷ್ಟು ದಿನಗಳು ರೆಸ್ಟ್ ಮಾಡಿ, ಸಂಪೂರ್ಣ ಗುಣಮುಖವಾಗಿ, ಆ ಬಂಧನದಿಂದ ಬಿಡುಗಡೆಗೊಂಡಳು. ಸ್ವಲ್ಪ ದಿನಗಳಲ್ಲಿಯೇ ಆ ಮರಿಗಳು ನಮ್ಮ ಮನೆಯಿಂದ ಖಾಲಿಯಾದವು. ಅಂದರೆ ಸಾಕುತ್ತೇವೆ ಎಂದು ಇಷ್ಟಪಟ್ಟು ಬಂದವರಿಗೆ ಕೊಟ್ಟು ಕಳಿಸಿದೆವು.
ಈಗ ಮತ್ತೆ ಬಿಲ್ಲು ತನ್ನ ಯೌವನದ ದಿನಗಳಿಗೆ ಮರಳಲು ಸಜ್ಜಾಗಿದ್ದಳು..!! ಹೇಳಬೇಕೆಂದರೆ 'ಫ್ರೀ ಬರ್ಡ್' (ಸ್ವತಂತ್ರ ಪಕ್ಷಿ) ಥರ ಆಗಿಬಿಟ್ಟಳು. ಯಾವುದೇ ಯೋಚನೆ ಅಥವಾ ಜವಾಬ್ದಾರಿ ಇಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ಉಣ್ಣುತ್ತಾ, ಹಾಯಾಗಿ ಮಲಗುತ್ತಾ, ಆಟವಾಡುತ್ತಾ, ನಮ್ಮೆಲ್ಲರ ಜೊತೆ ಹರಟುತ್ತಾ, ಬೇಸರವಾದಾಗ ನಮ್ಮ ಮನೆಯ ಸುತ್ತಮುತ್ತ ವಾಕಿಂಗ್ ಮಾಡುತ್ತಾ, ಬೇಟೆಯನ್ನು ಹುಡುಕುತ್ತಾ ಆರಾಮಾಗಿ ಕಾಲ ಕಳೆಯುತ್ತಿದ್ದಳು...!
ಬಿಲ್ಲು ಮಲಗುತ್ತಿದ್ದದ್ದು ನನ್ನೊಂದಿಗೇನೇ. ಸೊಳ್ಳೆಯ ಪರದೆಯ ಮೇಲೆ ಅವಳು ಮಲಗಿದರೆ, ಪರದೆಯ ಒಳಗಡೆ ನಾನು. ಜಾಕಿ (ಸಾಕುನಾಯಿ) ಇದ್ದಾಗ ಅವನು ನನ್ನ ರೂಮಿನಲ್ಲೇ ಚಾಪೆಯ ಮೇಲೆ ಮಲಗುತ್ತಿದ್ದ. ಬಿಲ್ಲು ರಾತ್ರಿಯ ಸಮಯದಲ್ಲಿ, ಬೇಕೆಂದಾಗ ಹೊರಗೆ ಒಳಗೆ ಹೋಗಿ ಬರುವುದನ್ನು ಚಿಕ್ಕ ಕಿಟಕಿಯ ಮೂಲಕ ಮಾಡುತ್ತಿದ್ದಳು. ನನ್ನ ರೂಮಿನ ಕಿಟಕಿ ಅಥವಾ ಬಾಗಿಲ ಹತ್ತಿರ ನಿಂತು 'ಮಿಯಾಂವ್ ಮಿಯಾಂವ್' ಎನ್ನುತ್ತಾ, ತನ್ನ ಪುಟ್ಟ ಕೈಯಿಂದ ಬಾಗಿಲು ಕುಟ್ಟಿದರೆ, ತನ್ನಕ್ಕ ತನ್ನನ್ನು ಒಳಗೆ ಕರೆದುಕೊಳ್ಳುತ್ತಾಳೆ ಎಂಬ ಖಾತರಿ ಅವಳಿಗಿತ್ತು..!!
ಹಲವು ಬಾರಿ ತಾನು ಹಿಡಿದ ಬೇಟೆಯನ್ನು ತಂದು ಮಂಚದ ಕೆಳಗೆ ಇಟ್ಟು ಅರ್ಧ ತಿಂದು ಗಲೀಜು ಮಾಡಿದರೆ, ನಮ್ಮಿಂದ ಬಯ್ಯಿಸಿಕೊಳ್ಳು ತ್ತಿದ್ದಳು.
ಆಗ ನಮ್ಮ ತಂದೆ "ಬೆಕ್ಕಿನ ಧರ್ಮವೇ ಬೇಟೆಯಾಡುವುದು, ಅವಳಿಗೇಕೆ ಬಯ್ಯುತ್ತೀರಿ..?!" ಎಂದು ಸ್ವಲ್ಪವೂ ಬೇಸರಿಸದೇ ಕ್ಲೀನ್ ಮಾಡುತ್ತಿದ್ದರು.
ದಿನಕಳೆದಂತೆ ಅವಳ ವಯಸ್ಸು ಜಾಸ್ತಿಯಾಗುತ್ತಿದ್ದರೂ, ತನ್ನ ಬೆಕ್ಕಿನ ನಡಿಗೆ ಮತ್ತು ಮುದ್ದಾದ ಚಟುವಟಿಕೆಗಳಿಂದಲೇ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದಳು. ಎರಡು ವರ್ಷಗಳ ಕಾಲ ನಮ್ಮ ಜಾಕಿ (ಸಾಕುನಾಯಿಯ) ಸ್ನೇಹಿತೆಯೂ ಆಗಿ, ಅವನನ್ನು ಸರಿಯಾಗಿ ಬೈಯ್ಯುತ್ತಾ ಕಟ್ಟುನಿಟ್ಟಾಗಿಯೇ ಹಿರಿಯಕ್ಕನಂತೆ ಅವನೊಂದಿಗೆ ವ್ಯವಹರಿಸುತ್ತಿದ್ದಳು...!!
ನಾನು ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ, ಬಿಲ್ಲು ನನ್ನ ತವರು ಮನೆಯಲ್ಲಿಯೇ ಮನೆ ಸದಸ್ಯಳಂತೆಯೇ ಇದ್ದಳು. ಆದರೆ ವಯಸ್ಸು ಎಲ್ಲಿ ತಡೆಯುತ್ತದೆ..? ವಯೋಸಹಜ ಕಾಯಿಲೆ ಅವಳಿಗೆ ಕಾಡಿತ್ತೋ ಏನೋ ಗೊತ್ತಿಲ್ಲ. ಕೆಲವೊಮ್ಮೆ ಹುಷಾರು ತಪ್ಪುವುದು, ಔಷಧಿ ತೆಗೆದುಕೊಳ್ಳುವುದು ಇತ್ತು. ಆದರೆ ತೀರಾ ಎಂದಲ್ಲ. ಮೊದಲಿನಿಂದಲೂ ಅವಳಿಗೆ ಶಕ್ತಿ ಜಾಸ್ತಿಯೇ. ತನ್ನ ಆರೋಗ್ಯವನ್ನು ಚೆನ್ನಾಗಿಯೇ ಕಾಪಿಟ್ಟುಕೊಂಡಿದ್ದಳು.
ಅದೊಂದು ದಿನ ನನ್ನಮ್ಮ ಫೋನ್ ಮಾಡಿ "ಬಿಲ್ಲು ಎರಡ್ಮೂರು ದಿನಗಳಿಂದ ಮನೆಗೆ ಬಂದಿಲ್ಲ" ಎಂದರು. ಎಂದೂ ಅವಳು ಈ ರೀತಿ ದಿನಗಟ್ಟಲೇ ಮನೆ ಬಿಟ್ಟವಳಲ್ಲ. ಅದೇಕೆ ಹೀಗೆ ಏಕಾಏಕಿ ಮನೆಬಿಟ್ಟು ಹೋದಳು ಎಂದು ಎಲ್ಲರೂ ಚಿಂತಿತರಾದೆವು. ದುರಾದೃಷ್ಟವಶಾತ್ ಬಿಲ್ಲು ಮತ್ತೆ ನಮ್ಮ ಮನೆಗೆ ಹಿಂತಿರುಗಲಿಲ್ಲ. ಅಂದಿನಿಂದ ಅವಳು ನಮ್ಮೆಲ್ಲರಿಗೂ ಸಿಗುವುದು ಸಿಹಿಯಾದ ನೆನಪುಗಳು ಮತ್ತು ಫೋಟೋಗಳ ಮೆಲುಕುಗಳಿಂದಷ್ಟೇ...!!
ಸತತ ಹನ್ನೆರಡರಿಂದ ಹದಿಮೂರು ವರ್ಷಗಳ ಕಾಲ ನಮಗೆಲ್ಲಾ ಜೊತೆಗಾರ್ತಿಯಾಗಿದ್ದ ಬಿಲ್ಲು, ಏಕೆ ತನ್ನ ಕೊನೆಗಾಲದಲ್ಲಿ ಅಂತಹ ನಿರ್ಧಾರವನ್ನು ತೆಗೆದುಕೊಂಡಳೋ ಗೊತ್ತಿಲ್ಲ...!! ಬಹುಷಃ ಯಾರಿಗೂ ತೊಂದರೆ ಕೊಡದೇ ಹೋಗಿಬಿಡಬೇಕೆಂದು ಅವಳ ಮನಸ್ಸಿನಲ್ಲಿತ್ತೇ ಗೊತ್ತಿಲ್ಲ..! ಆದರೆ ಪ್ರತಿದಿನವೂ ನಮ್ಮೊಂದಿಗೆ ಬೆರೆತು, ಎಲ್ಲರಿಗೂ ಪ್ರೀತಿಯ ಗೆಳತಿಯಾಗಿ, ಮುದ್ದು ಮಗಳಾಗಿ, ತನ್ನ ಮಕ್ಕಳಿಗೆ ಅಕ್ಕರೆ ಉಣಿಸುವ ತಾಯಿಯಾಗಿ ಇದ್ದವಳು ನಮ್ಮೆಲ್ಲರಿಂದ ಮರೆಯಾಗಿಬಿಟ್ಟಳು ಎಂಬುದೇ ಅಸಹನೀಯ.
ನಾಯಿಗಳಂತೆ ಬೆಕ್ಕುಗಳು ಯಾರ ಮೇಲೂ ಹೆಚ್ಚು ಅವಲಂಬಿಸುವುದಿಲ್ಲ. ತನ್ನ ಊಟ, ಸ್ನಾನ, ನಿತ್ಯ ಕರ್ಮಾದಿಗಳು ಎಲ್ಲವೂ ಅವುಗಳೇ ಯಾರ ಸಹಾಯವನ್ನು ಪಡೆಯದೇ ಮಾಡುತ್ತವೆ. ಸ್ವತಂತ್ರ ಜೀವಿಗಳಿಗೆ ಒಳ್ಳೆಯ ಉದಾಹರಣೆ ಎಂದರೆ ಬೆಕ್ಕು ಎನ್ನಬಹುದು. ಪ್ರಾಯಶಃ ತನ್ನ ಕೊನೆ ದಿನಗಳಲ್ಲೂ ಯಾರ ಮೇಲೂ ಅವಲಂಬಿಸದೇ ತನ್ನಷ್ಟಕ್ಕೆ ಇದ್ದು ಹೋಗೋಣ ಎಂದು ನಮ್ಮ ಮನೆಯನ್ನು ಬಿಟ್ಟಳು ಎನಿಸುತ್ತೆ...!
ಏನಾದರಾಗಲಿ ನಮ್ಮೆಲ್ಲರ ನೆನಪಲ್ಲಿ ಈಗಲೂ ಬಿಲ್ಲು ಇದ್ದಾಳೆ. ಮುಂದೆಯೂ ಇರುತ್ತಾಳೆ. ಅವಳನ್ನು ಮುಟ್ಟಿದಾಗ ಸಿಗುತ್ತಿದ್ದ ಸ್ಪರ್ಶಸುಖ, ಅವಳ ಆಟ ತುಂಟಾಟಗಳು, ಅವಳು ಕಲಿಸಿಕೊಟ್ಟ ಜೀವನ ಪಾಠಗಳು ತನ್ನ ಪುಟ್ಟ ಕೈಗಳಿಂದಲೇ ಪ್ರೀತಿಪಾತ್ರರನ್ನು ಹಿಡಿದುಕೊಳ್ಳುತ್ತಿದ್ದ ಮುದ್ದಾದ ರೀತಿಯನ್ನು, ಹೀಗೆ ಅನೇಕಾನೇಕ ನೆನಪುಗಳು ಸ್ಮೃತಿಪಟಲದಲ್ಲಿ ಉಳಿದುಬಿಟ್ಟಿವೆ. ಆ ಸಿಹಿ ನೆನಪುಗಳು ಎಂದಿಗೂ ನಮ್ಮೊಂದಿಗೆ ಇರುತ್ತವೆ. ಆ ನೆನಪುಗಳಿಂದಲೇ ಅವಳು ನಮ್ಮೊಂದಿಗೆ ಶಾಶ್ವತವಾಗಿ ನೆಲೆಸಿದ್ದಾಳೆ..!!
✍️ ಅಚಲ ಬಿ ಹೆನ್ಲಿ
ನಿಶ್ಚಲವಾಗಿರದೇ ಜೀವನದಿಯಂತೆ ಸಂಚರಿಸುತ್ತಲೇ ಇರಬೇಕು..!!