ನ್ಯಾಯದೇವತೆಯ ರಥ ಎಳೆದ ಬಿ.ಎನ್.ರಾವ್

Knight hood, ಬನ್ನಾವೀರ

ProfileImg
20 May '24
3 min read


image

ಸಂವಿಧಾನದ ಮೂಲ ಕರಡು ಸಿದ್ದಪಡಿಸಿದ್ದು ಯಾರು ? ಎಂಬುದು ಬಹುಮಂದಿಗೆ ತಿಳಿದಿಲ್ಲ. ಕರ್ನಾಟಕದ ಕುಂದಾಪುರ ಬಳಿಯ ಬೆನಗಲ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಬೆನಗಲ್ ನರಸಿಂಗ ರಾವ್ ಅವರೇ ಸಂವಿಧಾನ ಮೂಲ ಕರಡು ಸಿದ್ದಪಡಿಸಿದ್ದ ಮಹನೀಯರು. ಇತಿಹಾಸದ ಪುಟದಲ್ಲಿ ಗರ್ಭದಲ್ಲಿ ಯಾರ ಅರಿವಿಗೂ ಬಾರದೇ ಹೊತು ಹೋಗಿರುವ ಈ ಸತ್ಯ ಇನ್ನಾದರೂ ಎಲ್ಲರಿಗೂ ತಿಳಿಯುವಂತಾಗಲಿ...

ನಮಗೆ ಬಿ.ಆರ್.ಅಂಬೇಡ್ಕರ್ ಗೊತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ವ್ಯಕ್ತಿ ಬಿ.ಎನ್.ರಾವ್ ರವರ ಬಗ್ಗೆ ಗೊತ್ತೆ ? ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ ಅನ್ಸುತ್ತೆ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರುಕಟ್ಟೆಯಲ್ಲಿ, ಹೋಟೆಲುಗಳಲ್ಲಿ ಅಥವಾ ಇನ್ನಾವುದೇ ಸ್ಥಳಗಳಲ್ಲಿ ಯಾರನ್ನು ಬೇಕಾದರೂ ಕೇಳಿ; ಯಾರಿಗೂ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ, ಇವರ ಬಗ್ಗೆ ಅವರೆಲ್ಲೂ ಓದಿಲ್ಲವೆಂದು ಧೈರ್ಯದಿಂದ ಷರತ್ತನ್ನು ಕಟ್ಟಬಹುದು ! ಈಗ ಅವರ ಬಗ್ಗೆ ಕೇಳಿ..

ಬೆನಗಲ್ ನರಸಿಂಗ ರಾವ್ ಈ ಹೆಸರನ್ನು ಎಂದಾದರೂ ನೀವು ಕೇಳಿದ್ದೀರಾ...? ಇತಿಹಾಸದ ಪುಟದಲ್ಲಿ ಈ ಹೆಸರು ಹೂತು ಹೋಗಿ ಅದೆಷ್ಟೋ ವರ್ಷಗಳಾಗಿವೆ. ಅವರ್ಯಾರು, ಅವರೇನು ಮಾಡಿದ್ದರು ? ಎಂಬುದು ನಮಗೆ ಗೊತ್ತಿಲ್ಲ. ಹೀಗಿರುವಾಗ ನಮ್ಮ ಮುಂದಿನ ಪೀಳಿಗೆ ಅದನ್ನು ಅರಿಯುವುದು ನೆನಪಿಟ್ಟುಕೊಳ್ಳುವುದು ಕನಸಿನ ಮಾತು.

ಹೌದು, ಭಾರತದ ಹೆಮ್ಮೆಯ ಪುತ್ರರಾದ ಸರ್ ಬೆನಗಲ್ ನರಸಿಂಗ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನಗಲ್ ಮನೆತನದಲ್ಲಿ 1887ರ ಫೆಬ್ರವರಿ 26 ರಂದು ಜನಿಸಿದರು. ನರಸಿಂಗ ರಾವ್ ಅವರ ತಂದೆ ಬಿ.ರಾಘವೇಂದ್ರರಾವ್ ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರು. ತಾಯಿ ರಾಧಾಬಾಯಿ. ಅದೆಷ್ಟೋ ಮಹಾಪುರುಷರನ್ನು ಈ ನಾಡಿಗೆ ಮತ್ತು ದೇಶಕ್ಕೆ ಕೊಡುಗೆ ನೀಡಿದೆ.  ಏರಿದ ಎತ್ತರ ಎಣೆಯಿಲ್ಲದ್ದು ಆದರೆ ಅವರು ಎಲೆಮರೆಯ ಕಾಯಂತೆ ಜನಮಾನಸಕ್ಕೆ ಅಪರಿಚಿತವಾಗಿ ಉಳಿದದ್ದು ಮಾತ್ರ ವಿಪರ್ಯಾಸ.

ಅವರು ದೇಶ ಕಂಡ ಮಹಾನ್ ನ್ಯಾಯವೇತ್ತರಲ್ಲಿ ಒಬ್ಬರು. 1901ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲ್ನಿಂದ ಉತ್ತೀರ್ಣರಾದರು. 1905ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಬಿ.ಎ. ಪದವಿ ಪಡೆದ ರಾಯರು. ಭಾರತ ಸರ್ಕಾರದ ಶಿಷ್ಯವೇತನದಿಂದ ಇಂಗ್ಲೆಂಡಿನಲ್ಲಿ ಐಸಿಎಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. 1909ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿದ ರಾಯರಿಗೆ ನ್ಯಾಯಾಂಗದಲ್ಲಿ ವಿಶೇಷ ಒಲವಿತ್ತು. ಮುಂದೆ ಭಾರತಕ್ಕೆ ಹಿಂದಿರುಗಿ ಭಾರತಕ್ಕೆ 14 ವರ್ಷಗಳ ಕಾಲ ಜಿಲ್ಲಾಧಿಕಾರಿ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು, 1919-20ರಲ್ಲಿ ಮುರ್ಷಿದಾಬಾದಿನಲ್ಲಿ ಸೆಷನ್ ಜಡ್ಜ್; 1920-25ರಲ್ಲಿ ಸಿಲ್ಹೆಟ್ ಹಾಗೂ ಕಾತಾರಿನಲ್ಲಿ ಡಿಸ್ಟ್ರಕ್ಟ್ ಹಾಗೂ ಸೆಷನ್ ಜಡ್ಜ್; 1925ರಲ್ಲಿ ಅಸ್ಸಾಂ ಪ್ರಾಂತ್ಯದ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೀಗೆ ಉನ್ನತ ಹುದ್ದೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಅವರನ್ನು ಬ್ರಿಟಿಷ್ ಸರಕಾರ Knight hood ನೀಡಿ ಗೌರವಿಸಿತ್ತು. ಲಂಡನ್ನಿನ ದುಂಡುಮೇಜಿನ ಪರಿಷತ್ತಿನಲ್ಲಿ ಅಸ್ಸಾಂ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 1934-35ರಲ್ಲಿ ಭಾರತ ಸರಕಾರದ ಲೆಜಿಸ್ಲೆಟಿವ್ ವಿಭಾಗದ ಕಾರ್ಯದರ್ಶಿಗಳಾಗಿ, 1935ರಲ್ಲಿ ಬೆಂಗಾಲ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ರಾವ್ 1938ರಲ್ಲಿ ಸುಧಾರಣಾ ಆಯೋಗದ ಕೆಲಸ ನಿರ್ವಹಿಸಿದರು. 1941ರಲ್ಲಿ ಹಿಂದೂ ನ್ಯಾಯ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 1939ರಲ್ಲಿ ಕೇಂದ್ರ ಸಂಶೋಧನ ಸಂಸ್ಥೆಗಾಗಿ ವೈದ್ಯ ವಿಜ್ಞಾನ, ಶಸ್ತ್ರ ಚಿಕಿತ್ಸೆ ವಿಭಾಗಗಳ ಯೋಜನೆಯನ್ನು ಸಿದ್ದಪಡಿಸಿದರು. 

ಸಿಂದೂ ಆಯೋಗದ ಕಾರ್ಯಕಾರಿಣಿಯಲ್ಲೂ ಭಾಗಿಯಾಗಿದ್ದರು. 1944ರಲ್ಲಿ ಭಾರತ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರವೂ ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದ ನರಸಿಂಗ ರಾವ್ ಅವರು 1944ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಗಳಾಗಿ ಸಂದಿಗ್ಧ ಕಾಲದಲ್ಲಿ 18 ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. 1946ರಲ್ಲಿ ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ  ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಗೆ ಸಲಹೆಗಾರರನ್ನಾಗಿ ನೇಮಿಸಲಾಯಿತು.

1949 ರಿಂದ 1952 ರವರೆಗೆ ಅವರು ಅಮೆರಿಕಾದಲ್ಲಿ ಭಾರತದ ಅಧಿಕೃತ ರಾಯಭಾರಿಯಾಗಿದ್ದವರು. ಅನಂತರದಲ್ಲಿ ಅವರು ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ಮುಖ್ಯ ನ್ಯಾಯಾಧೀಶರಾಗಿದ್ದರು. ಸ್ವಾತಂತ್ರ್ಯ ನಂತರದಲ್ಲಿ ಭಾರತದ ಸಂವಿಧಾನದ ಕರಡು ರಚನೆ ಮಾಡುವ ಸಲುವಾಗಿ ಭಾರತ ಸರಕಾರ ಡಾ|| ಬಿ.ಆರ್.ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಆ ಸಮಿತಿಯಲ್ಲಿದ್ದ ಪ್ರಮುಖರು ಈ ಬೆನಗಲ್ ನರಸಿಂಗ ರಾವ್ ಅವರು ಆ ಸಮಿತಿಯಲ್ಲಿದ್ದ ಕರಡು ರಚನಾ ಸಲಹಗಾರರು. ಭಾರತದ ಸಂವಿಧಾನದ ಮೂಲ ಕರಡು ಸಿದ್ದಪಡಿಸಿದ ಮಹನೀಯರಿವರು. ಸಂವಿಧಾನ ಕರಡು ಸಿದ್ದಪಡಿಸಿದ ಆರಂಭದಲ್ಲಿ ಒಟ್ಟು 243 ವಿಧಿಗಳು 13 ಅನುಚ್ಛೇದಗಳು ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡರು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳು 5 ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನಲ್ಲಿ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳು ಸಂಖ್ಯೆ 395ಕ್ಕೆ ಏರಿತು. ರಾಯರು ಈ ಕೆಲಸಕ್ಕಾಗಿ ಒಂದೇ ಒಂದು ರೂಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮುಖ್ಯ ಅಂಶ. 

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರಚನಾ ಕಾರ್ಯವನ್ನು ಪೂರ್ತಿಗೊಳಿಸಿ ಸಂಸತ್ತಿಗೆ ಸಲ್ಲಿಸಿದ ಸಂದರ್ಭದಲ್ಲಿ ಭಾರತ ರತ್ನ ಬಿ.ಆರ್.ಅಂಬೇಡ್ಕರ್ ಅವರು ಮಾಡಿದ ಭಾಷಣ ಅವಿಸ್ಮರಣೀಯವಾಗಿತ್ತು. ಸಂವಿಧಾನದ ಮೂಲ ಕರಡನ್ನು ರಚಿಸಿದ ವ್ಯಕ್ತಿ ಸರ್ ಬಿ.ಎನ್.ರಾವ್ ಅವರು ಸಂವಿಧಾನ ಅಂಗೀಕೃತವಾದ 74 ವರ್ಷದ ಸಂದರ್ಭದಲ್ಲೂ ಅದರ ಮೂಲ ಕರಡನ್ನು ತಯಾರಿಸಿಕೊಟ್ಟ ಮೇಧಾವಿ ಯಾರಿಗೂ ನೆನಪಾಗಿಲ್ಲವೆಂದರೆ ಅದು ಈ ಗಣರಾಜ್ಯದ ದುರಂತ..! 

ನರಸಿಂಗ ರಾವ್ ಅವರು ಭಾರತ ಮಾತ್ರವಲ್ಲದೆ ಬರ್ಮಾ ದೇಶಕ್ಕೂ ಸಂವಿಧಾನ ರಚನೆ ಮಾಡಿಕೊಟ್ಟಿದ್ದರು. ಇವರ ಸೋದರ ಬೆನಗಲ್ ರಾಮ ರಾವ್ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಎಂಬುದು ಕೂಡ ಇಲ್ಲಿ ಸ್ಮರಣಾರ್ಹ.

ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಹಳ್ಳಿಯಿಂದ ವಿಶ್ವಸಂಸ್ಥೆ, ಅಂತರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂತ ಅವಕಾಶ ಪಡೆದ ಕನ್ನಡಿಗನಿಗೆ ಸಿಕ್ಕಿದ್ದು, ಕನ್ನಡಿಗರು ಹೆಮ್ಮೆಪಡುವ ವಿಷಯ.

ನಮ್ಮ ಕರ್ನಾಟಕದ ಈ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರು-ನೆನಪಿಸುವ ಕೆಲಸವನ್ನು ಯಾವ ಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನವನ್ನು ಎತ್ತಿ ತೋರಿಸುವಂತಿದೆ. ಕೊನೆಯ ಪಕ್ಷ ನಮ್ಮ ಶಾಸಕರು ಹಾಗೂ ಮುಂದಾಳುಗಳು ಈ ಕಾರ್ಯವನ್ನು ಮಾಡಿ ಒಬ್ಬ ಮಹಾನ್ ಮೇಧಾವಿ, ಮಹಾಪುರುಷನನ್ನು ಹೊಸಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿ ಎಂದು ಆಶಿಸೋಣವೇ...?! 1935ರ ನವೆಂಬರ್ 30 ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ನಲ್ಲಿ ತನ್ನ 66ನೇ ವಯಸ್ಸಿನಲ್ಲಿ ನಿಧನರಾದರು.

ಬೆನಗಲ್ ನರಸಿಂಗ ರಾವ್
Category:HistoryProfileImg

Written by santhosh m

ಹವ್ಯಾಸಿ ಬರಹಗಾರ