ಮೊದಲ ಸಲ ಸಿಕ್ಕಿದ ಮುತ್ತಿನ ನೆನಪಿದ್ದಿದ್ದರೇ…! ಅವಳ ತುಟಿಯಚ್ಚುಗಳಿಗಿಂತಲೂ ಮೊದಲೇ ಪುಳಕಿತಗೊಳಿಸಿದ ಆ ಗಳಿಗೆ ಯಾವುದೋ? ಡಾಕ್ಟರೋ, ನರ್ಸೋ, ಅಪ್ಪನೋ, ಅಮ್ಮನೋ ಯಾರು ಕೊಟ್ಟರೋ ಏನೋ ಆ ಮುತ್ತು? ಹಾಗೇನಾದರೂ ಆ ಮೊದಲ ಮುತ್ತಿನ ನೆನಪಿರುತ್ತಿದ್ದರೆ, ಒಳ್ಳೆಯದು-ಕೆಟ್ಟದೆಂಬ ಅರಿವಿಲ್ಲದ ಆ ತೊದಲು ತೊದಲು ಮಗುತನವನ್ನೆಲ್ಲಾ ಆವಾಹಿಸಿಕೊಂಡು ನಾನೂ ಬೆಚ್ಚಗೆ ದೇವರಾಗಿಯೇ ಇರುತ್ತಿದ್ದೆ ಈವಾಗಲೂ. ಮುಗ್ಧತೆಯ ಮೇಲೆ ತುಂಟ ಹೆಜ್ಜೆಯಿಟ್ಟು ಬರುವ ಬಾಲ್ಯ ನೆನಪಲ್ಲುಳಿಯುವ ಹಲವಾರು ಮೊದಲ ಅನುಭವಗಳ ಆಗರ. ಕಾಲದ ಅಗಣಿತ ಅಯೋಮಯ ಹಾದಿಗಳಲ್ಲಿ ಕೊನೆಯಿಲ್ಲದೆ ಸಾಗುತಿರುವ ರಾಶಿ ರಾಶಿ ಮೊದಲುಗಳಲ್ಲಿ, ಹಲವು ನೆನಪಿನಲ್ಲಿ ಉಳಿದಿಲ್ಲ. ಮೆದುಳಿನ ವಿಕಸನದೊಂದಿಗೆ, ನಿರಂತರ ಅನುಭವಗಳಷ್ಟೇ ಕೈಹಿಡಿದಿವೆ. ನಮ್ಮೊಂದಿಗೆ ನೆನಪುಗಳಿಗೂ ವಯಸ್ಸಾಗುತ್ತದೆ. ಕೆಲವು ಘಟನೆಗಳು, ವ್ಯಕ್ತಿಗಳು, ವಸ್ತುಗಳು, ಋತುಗಳು, ವಾಸನೆಗಳು ನಮ್ಮನ್ನು ಯಾವುದೋ ಕಾಲಕ್ಕೆ ಕರೆದೊಯ್ದು, ವಯಸ್ಸನ್ನು ಕೇವಲ ಸಂಖ್ಯೆಯಾಗಿಸಿ ಮರೆಮಾಚುವುದು ಇದೆ.
ಮೊದಲ ಸಲ ಪ್ರಕಟವಾದ ಕವಿತೆ ಹುಟ್ಟಿದ ಕತ್ತಲುಮಿಶ್ರಿತ ಮುಂಜಾವು, ಮೊದಲ ಬಾರಿಗೆ ಬೆಂಗಳೂರಿನ ಸಿಟಿ ಮಾರ್ಕೇಟಿಗೆ ಬಂದಿಳಿದ ಸಂಜೆಗತ್ತಲು, ಪ್ರೇಮಿಯನ್ನು ಮೊದಲ ಸಲ ಭೇಟಿಯಾದ ಇಳಿಸಂಜೆ - ಹೀಗೆ ಮನದಲ್ಲಿ ತಳವೂರಿರುವ, ಅನಿರೀಕ್ಷಿತವಾಗಿ ಸಿಗುವ ಮೊದಲ ಅನುಭವಗಳೊಂದಿಗೆ, ಕಾದು ಕಾದು ಮೊದಲ ಸಲ ಕೈಗೆ ಸಿಗೋ ಕೆಲವು ವಸ್ತುಗಳೂ ನೆಪಲ್ಲುಳಿದುಬಿಡುತ್ತವೆ. ಅಂತಹ ಒಂದು ವಸ್ತು “ಸೈಕಲ್”. ಮೊನ್ನೆ ತಾನೇ ಬಾಲ್ಯದಲ್ಲಿ ಜೊತೆಗೆ ಸೈಕಲ್ ತುಳಿಯುತ್ತಿದ್ದ ಆತ್ಮೀಯ ಗೆಳೆಯ ‘ಆರೀಸ್ ‘ಸಿಕ್ಕಿದ್ದಕ್ಕೋ ಏನೋ ಮನಸ್ಸು ಹಿಂದಕ್ಕೆ ಪೆಡಲು ತುಳಿಯುತ್ತಿದೆ.
'ಟ್ರಿಣ್ ಟ್ರಿಣ್'
ನನ್ನ ಮಾವನ ಹತ್ತಿರ ಒಂದು 'ಅಟ್ಲಾಸ್' ಸೈಕಲ್ ಇತ್ತು. ಸಣ್ಣ ಹುಡುಗನಾದ ನನ್ನನ್ನು ಅದರ ಮುಂದಿನ ರಾಡ್ ಮೇಲೆ ಕೂರಿಸಿಕೊಂಡು ಮಂಗಳೂರು ಸುತ್ತಿಸುತ್ತಿದ್ದ ಮಾವ. ಕಾಲು ಎಟುಕದ ಬಹುತೇಕ ಮಕ್ಕಳಂತೆ ಸೈಕಲಿನ ರಾಡುಗಳ ನಡುವೆ ಕಾಲು ತುರುಕುಸಿ ತುಳಿಯಲು ಪ್ರಯತ್ನಿಸುತ್ತಿದ್ದೆ ನಾನು. ನನ್ನ ಕಾಲು ಉದ್ದವಾಯಿತು, ಮಾವ ಮಣ್ಣು ಸೇರಿದ. ಆ ಸೈಕಲ್ ತುಕ್ಕು ಹಿಡಿದು ಮೂಲೆ ಸೇರಿತು. ಮಾವ ಮತ್ತು ಸೈಕಲ್, ಎರಡೂ ನೆನಪುಗಳಲ್ಲಿ ಮುಕ್ಕಾಗದೆ ಉಳಿದವು. ಸೈಕಲ್ ಬೆಲ್ಲ್ ನಮ್ಮ ಬಾಲ್ಯದ ಸಂಗೀತ ಪರಿಕರಗಳಲ್ಲಿ ಒಂದಾಗಿತ್ತು. ಅದರ 'ಟ್ರಿಣ್ ಟ್ರಿಣ್' ನಮ್ಮ ಕಣ್ಣರಳಿಸುವ ನಾದವಾಗಿತ್ತು. "ಸಿಹಿಗಾಳಿ ಸಿಹಿಗಾಳಿ' ಹಾಡಿನಂತೆ, ಐಸ್ ಕ್ಯಾಂಡಿ ಮಾರುವ 'ಬಾಬಣ್ಣ'ನ ಸೈಕಲಿನ ಬೆಲ್ಲಿನ ಸೌಂಡು ಐಸ್ ಕ್ಯಾಂಡಿಯಷ್ಟೇ ಸಿಹಿ ಸದ್ದಾಗಿತ್ತು. ಐಸ್ ಕ್ಯಾಂಡಿ ಕರಗಿದ ಹಾಗೇ, ಬಾಬಣ್ಣನೂ ಕರಗಿದ, ಆ ಸದ್ದು ಕೂಡಾ ಕರಗಿತು. ಅಟ್ಲಾಸ್ ಅನ್ನೋದು ಶ್ರಮಿಕರ ಬ್ರ್ಯಾಂಡ್ ಆಗಿ ಉಳಿದರೆ, ಯುವಜನತೆ 'ಹಿರೋ' 'ಲೇಡಿಬರ್ಡ್' ಸೈಕಲ್ ಗಳಿಗೆ ಮುಗಿ ಬೀಳುತ್ತಿದ್ದರು. ಪೋಸ್ಟ್ ಮೆನ್ ಗಳು ಹಾಗೂ ಪೇಪರ್ ಹಾಕುವ ಹುಡುಗರ ಜೊತೆಗಿನ ಕಾಗದದ ಗೆಳೆತನದ ಜೊತೆಗೆ ಸೈಕಲಿಗೊಂದು ಭಾವನಾತ್ಮಕವಾದ ಅಕ್ಷರ ಬಂಧವಿದೆ; ಅನುಬಂಧಕ್ಕಿಂತ ಕಡಿಮೆಯಿಲ್ಲದ ಸಂಬಂಧ.
ಐದನೇ ಕ್ಲಾಸಿನಲ್ಲಿದ್ದಾಗ ಸಹಪಾಠಿ ಗೆಳೆಯನೊಬ್ಬ ಸೈಕಲ್ ತುಳಿಯಲು ಕಲಿಸಿದ್ದ. ಪ್ರೈಮರಿ ಶಾಲೆಯ ಗ್ರೌಂಡಿನಲ್ಲಿ ಮೊದಲ ಬಾರಿಗೆ ಸೈಕಲ್ ಕಲಿಯುವಾಗ ಬಿದ್ದು-ಎದ್ದು ಕೈಯಿ, ಕಾಲಲ್ಲಾದ ತರಚಿದ ಗಾಯದ ಗುರುತುಗಳು ಮಾಸಿವೆ; ನೆನಪುಗಳು ಶಾಶ್ವತವಾಗಿವೆ. ಶಾಲಾ ಮೈದಾನದ ಕೊನೆಯಲ್ಲಿ, 'ಅಬ್ದುಲ್ಲಾ'ನ ಗುಜುರಿ ಅಂಗಡಿ ಮತ್ತು ಬಾಡಿಗೆ ಸೈಕಲ್ ಸಿಗುತ್ತಿದ್ದ 'ಚನಿಯ'ನ ಸೈಕಲ್ ಶಾಪ್ ಎರಡೂ ಒತ್ತೊತ್ತಾಗಿತ್ತು. ಅಪ್ಪನ ಕುಡಿತದ ಕುರುಹುಗಳಾಗಿದ್ದ ಕುಪ್ಪಿಗಳನ್ನು, ಅಪ್ಪನಿಗೆ ಗೊತ್ತಾಗದಂತೆ ಗುಜುರಿಗೆ ಮಾರುತ್ತಿದ್ದೆ. ಬಂದ ಹಣದಲ್ಲಿ, ಪಕ್ಕದಲ್ಲಿದ್ದ ಸೈಕಲ್ ಶಾಪಿಂದ ಸೈಕಲ್ ಬಾಡಿಗೆಗೆ ಕೊಂಡು, ಸೈಕಲ್ ಹತ್ತಿದರೆ ಜಗತ್ತೆಲ್ಲಾ ನನ್ನದೆ. ಆಗಾಗ ಚೈನು ಕಿತ್ತುಹೋಗಿ, ಟೈಂ ವೇಸ್ಟ್ ಆಗೋ ಕಿರಿಕಿರಿಯ ಮಧ್ಯೆಯೂ, ಊರ ಗಲ್ಲಿಗಳಲ್ಲಿ ಲೋಕ ಸುತ್ತಿದ ಅನುಭವವಾಗುತ್ತಿತ್ತು. ಬಾಡಿಗೆ ಸೈಕಲ್ ಹತ್ತಿ ಪೇಟೆಯಲ್ಲಿ ಸುತ್ತಾಡುತ್ತಿದ್ದವನನ್ನು ಕಂಡ ಅಪ್ಪ, “ಸ್ವಲ್ಪ ನಿಧಾನವಾಗಿ ಪೆಡಲ್ ತುಳಿ, ಅಕ್ಕಪಕ್ಕ ನೋಡಿ ಸರಿಯಾಗಿ ಹೋಗು. ನೀನು ಚೆನ್ನಾಗಿಯೇ ಸೈಕಲ್ ಓಡಿಸ್ತೀಯ ಬಿಡು. ಆದರೆ, ಎದುರಿಗೆ ಬರೋ ವಾಹನದ ಚಾಲಕರೆಲ್ಲರೂ ಡ್ರೈವಿಂಗ್ ಸರಿಯಾಗಿ ತಿಳಿದವರೆ ಇರೋಲ್ಲ ” ಎಂದಿದ್ದು ನಿನ್ನೆ-ಮೊನ್ನೆ ನಡೆದ ಘಟನೆಯೇನೋ ಅಂತನ್ನಿಸುತ್ತಿದೆ.
ಎಸ್ಸೆಸ್ಸೆಲ್ಸಿ ತಲುಪುವ ಹೊತ್ತಿಗೆ ಮೊದಲ ಸಲ ನಂಗೂ ನನ್ನದೇ ಆದ ಸ್ವಂತ ಸೈಕಲ್ ಸಿಕ್ಕಿತು. ಪಂಚರ್ ಆಗಿ ಉಪಯೋಗಿಸದೆ ಬಿದ್ದಿದ್ದ ಸೆಕೆಂಡ್ ಹ್ಯಾಂಡ್ ಸೈಕಲ್ ಒಂದನ್ನು ಕಡಿಮೆ ಬೆಲೆಗೆ ಖರೀದಿಸಿ, ರಿಪೇರಿ ಮಾಡಿಸಿ ಕೊಟ್ಟಿದ್ದರು ಅಪ್ಪ. ಹೊಸ ಸೈಕಲ್ ಬೇಕೆಂಬ ಆಸೆಯಿದ್ದರೂ, ಆ ಹಳೇ ಸೈಕಲ್ ಪಡೆದ ನಾನು ಆನಂದ ತುಂದಿಲನಾಗಿದ್ದೆ. ಆಗಸ್ಟ್ ೧೫ ಕ್ಕೆ ತ್ರಿವರ್ಣ ಧ್ವಜ , ಊರ ಜಾತ್ರೆಯ ಸಂದರ್ಭದಲ್ಲಿ ಬಣ್ಣಬಣ್ಣದ ಗಿರಿಗಿಟ್ಲೆ ಹ್ಯಾಂಡಲಿಗೆ ಸಿಕ್ಕಿಸಿಕೊಂಡು, ಚಕ್ರಗಳಿಗೆ ಬೆಲೂನು ಕಟ್ಟಿ 'ಪುರ್ರ್' ಎಂದು ಸದ್ದು ಮಾಡುತ್ತಾ ಸುತ್ತಿದ್ದೇ ಸುತ್ತಿದ್ದು. ಆ ದಿನಗಳಲ್ಲಿ ಸೈಕಲ್ ತುಳಿಯುವುದರಲ್ಲಿ ಸಿಗುತ್ತಿದ್ದ ಖುಷಿಗೆ ಸಾಟಿಯಿರಲಿಲ್ಲ.
ಹಳೇ ಮೋಹ, ಹೊಸ ಸೈಕಲ್
ಎಸ್ಸೆಸ್ಸೆಲ್ಸಿ ಮುಗಿದು ಕಾಲೇಜು ಸೇರಿದೆ. ಕಾಲೇಜಿಗೆ ಅಪ್ಲಿಕೇಷನ್ ಕೊಡೋಕು ಸೈಕಲಲ್ಲೇ ಹೋಗಿದ್ದೆ; ಹೈಸ್ಕೂಲಿಗೆ ಮೊದಲ ದಿನ ಚಡ್ಡಿಯಲ್ಲಿ ಹೋದಂತೆ. ಕಾಲೇಜು ಸೇರಿದ ಮೇಲೆ ಬೈಕುಗಳ ಭರಾಟೆಯಲ್ಲಿ ಸೈಕಲ್ ಎಂಬ ಬಹುಕಾಲದ ‘ಕ್ರಷ್’ ಹಿಂದಕ್ಕೆ ಸರಿದಿತ್ತು. ಆ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಬೈಕು ಖರೀದಿಸುವುದು ಕೂಡ ಕನಸಿನ ಮಾತಾಗಿತ್ತು. ಮುಂದೆ ಬದುಕಿನ ಜಂಜಾಟದಲ್ಲಿ ಲೆಕ್ಕವಿಲ್ಲದಷ್ಟು ಪೆಡಲು ತುಳಿದಿದ್ದಾಯಿತು. ಊರಿಂದ ಊರಿಗೆ ವರ್ಗಾವಣೆಯಾಗುವ ಬದುಕು ಅರಬರ ಮರಳುಗಾಡಿಗೆ ಬಂದಿಳಿದಿತ್ತು. ಒಂದಿಷ್ಟು ದುಡ್ಡಿನ ಮುಖ ನೋಡಿದ ಮೇಲೆ, ಸೆಕೆಂಡ್ ಹ್ಯಾಂಡ್ ಕಾರು ಕೂಡಾ ಖರೀದಿಸಿದ್ದಾಯಿತು. ಎಲ್ಲೋ ಅವಿತಿದ್ದ ಹೊಸ ಸೈಕಲ್ ಎಂಬ ಹಳೇ ಮೋಹ ಮತ್ತೆ ಉದಯಿಸಿತ್ತು. ಹೊಸ ಸೈಕಲ್ ಖರೀದಿಸಲು ನಿರ್ಧರಿಸಿದ್ದೆ. ಆ ನಿರ್ಧಾರದಲ್ಲೇ ಹಲವು ತಿಂಗಳುಗಳು ಕಳೆದವು. ಖರೀದಿಗು ಮುಂಚೆಯೇ, ಭೂತ ಮತ್ತು ವಾಸ್ತವದ ಕಲಸುಮೇಲೋಗರವಾಗಿ ಸೈಕಲ್ ಎಂಬುದು ಕಲ್ಪನೆಯ ಸಾಥಿಯಾಯಿತು. ಹಾಗಂತಲೇ ಹೊಸ ಸೈಕಲ್ ಕೊಂಡಾದ ಮೇಲೆ, " ಈ ಸೈಕಲ್ ಬರುವುದಕ್ಕಿಂತ ಮುಂಚೆಯೇ ನನ್ನ ಸಂಗಾತಿಯಾಗಿಯಾಗಿತ್ತು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದೆ. ಒಳಗಿನ್ನೂ ಜೀವಂತವಾಗಿರುವ ಬಾಲ್ಯವನ್ನು, ಅದರ ಕಲ್ಪನೆಯನ್ನು ಸೈಕಲಿಗೆ ನೇತು ಹಾಕಿ ಸವಾರಿ ಹೊರಟಿದ್ದೆ.
ಮಡಚಲು ಸಾಧ್ಯವಾಗುತ್ತಿದ್ದ ಹೊಸ ಸೈಕಲನ್ನು ದುಬೈನ ಫುಟ್ಪಾತುಗಳಲ್ಲಿ, ಅಲ್ಲಿನ ಕಡಲ ಕಿನಾರೆಯ ಪಾರ್ಕುಗಳಲ್ಲಿ ತುಳಿದು ಬಸವಳಿದೆ. ಸೈಕಲನ್ನು ಮಡಚಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಜನರ ನಡುವೆ ಸಿಲುಕಿದೆ. ಅಷ್ಟೊತ್ತಿಗೆ ಆ ಮರಳುಗಾಡಿನ ಪಟ್ಟಣವನ್ನು ಬಿಡುವ ಸಮಯ ಬಂದೇ ಬಿಟ್ಟಿತು. ಅದಾಗಲೇ ಸೈಕಲ್ ಮೇಲೆ ಕಣ್ಣಿಟ್ಟಿದ್ದ ಗೆಳತಿಯ ಮನೆಗೆ ರವಾನಿಸಲ್ಪಟ್ಟಿತು. ಇದೀಗ ಬೆಂಗಳೂರಿನ ಅವಳ ಮನೆಯಲ್ಲಿ ದೂಳು ತಿನ್ನತ್ತಾ ನಿಂತಿರುವ ಸೈಕಲಿನ ಸಾಂಗತ್ಯಕ್ಕೆ ಬ್ರೇಕ್ ಬಿದ್ದಿದೆ. ಬದುಕು ಬೆಂಗಳೂರಿನ ಟ್ರಾಫಿಕ್ಕಿನಂತೆ ನಿಂತು ನಿಂತು ಸಾಗುತ್ತಿದೆ.
ಬೈಸಿಕಲ್ ಬಂದ ದಾರಿ
ಸೈಕಲಿನ ಆವಿಷ್ಕಾರ ಯಾವಾಗ ಆಯಿತೆಂದು ಹೇಳುವುದು ಕಷ್ಟ. ಚಕ್ರಗಳ ಆವಿಷ್ಕಾರ ಮನುಷ್ಯರ ಬಹುಮುಖ್ಯ ಕಂಡುಹಿಡಿತಗಳಲ್ಲಿ ಒಂದು. ಮೊದ ಮೊದಲು ಸೈಕಲುಗಳ ನಿರ್ಮಿತಿಯು ಆ ಚಕ್ರಗಳ ಮೇಲಿನ ಕಸರತ್ತಾಗಿತ್ತು. ಹದಿನೆಂಟನೇ ಶತಮಾನದ ಸಂಶೋಧಕರ ಕೃಪೆಯಿಂದ ಸೈಕಲ್ ಹಲವಾರು ಅವತಾರಗಳಲ್ಲಿ ಪ್ರತ್ಯಕ್ಷವಾಯಿತು. ಜರ್ಮನಿಯ 'ಕಾರ್ಲ್ ಡ್ರಯೀಸ್'(Karl Drais)ನ ಹೆಸರು ಬೈಸಿಕಲ್ ಕಂಡುಹಿಡಿದವನು ಎಂಬುದಾಗಿ ಔದ್ಯೋಗಿಕವಾಗಿ ದಾಖಲಾಗಿದೆ. ಆ ಕಾಲದಲ್ಲಿ ಬೈಸಿಕಲ್ ಎಂಬ ಹೆಸರಿರಲಿಲ್ಲ. 'ವೆಲೋಸಿಪೆಡೆ' 'ಹೋಬಿ ಹಾರ್ಸ್' 'ಡ್ರಯಿಸೈನ್' ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. 1860 ರ ಕಾಲಘಟ್ಟದಲ್ಲಿ ಹಲವಾರು ಫ್ರೆಂಚ್ ಸಂಶೋದಕರು ಮುಂದಿನ ಚಕ್ರಕ್ಕೆ ಪೆಡಲುಗಳಿರುವ ಸೈಕಲುಗಳನ್ನು ತಯಾರಿಸಿದ್ದರು. ಆ ರೀತಿಯ ಯಂತ್ರಕ್ಕೇನೆ ಮೊದಲ ಬಾರಿಗೆ 'ಬೈಸಿಕಲ್' ಎಂಬ ಹೆಸರಿನಿಂದ ಕರೆದಿದ್ದು. ಅದರ ನಂತರ ದೊಡ್ಡದಾದ ಮುಂದಿನ ಚಕ್ರವಿದ್ದು, ಸಣ್ಣ ಹಿಂದಿನ ಚಕ್ರವಿರುವ 'ಪೆನ್ನಿ ಫಾರ್ತಿಂಗ್ಸ್' ಅಥವಾ 'ಆರ್ಡಿನರಿ'ಎಂದು ಕರೆಯಲ್ಪಡುವ ಸೈಕಲುಗಳು ತಯಾರಾದವು. ಆ ಸೈಕಲುಗಳಿಂದ 'ಸೈಕಲ್ ರೇಸ್' ಗಳು ಜನ್ಮ ತಾಳಿ, ಸ್ಪರ್ಧೆಗಳಿಗಾಗಿ ಬೈಸಿಕಲ್ ಕ್ಲಬ್ಬುಗಳು ಶುರುವಾದವು. 'ಥಾಮಸ್ ಸ್ಟೀವನ್ಸ್' ಎಂಬಾತ, ಈ ಫೆನ್ನಿ ಫಾರ್ತಿಂಗ್ ಸೈಕಲಿನ ಮೇಲೇರಿ ಜಗತ್ತು ಸುತ್ತಿದ ದಾಖಲೆಯು ಇದೆ. ಈ ಮೂಲಕ ಬೈಸಿಕಲ್ ಸಮಾಜದ ಮುಖ್ಯವಾಹಿನಿಯನ್ನು ಪ್ರವೇಶಿಸಿತು. ಆದರೆ 4ft ನಷ್ಟು ಎತ್ತರವಿದ್ದ ಇದರ ಮುಂದಿನ ಚಕ್ರಗಳಿಂದಾಗಿ ಇದರಲ್ಲಿ ಪ್ರಯಾಣಿಸುವುದು ಅಪಾಯಕಾರಿಯು ಆಗಿತ್ತು.
1885ರಲ್ಲಿ ಇವಾಗ ನಾವು ನೋಡುವಂತಹ ರೂಪದಲ್ಲಿ ಸೈಕಲ್ ಮಾರುಕಟ್ಟೆ ಪ್ರವೇಶಿಸಿತು. ಆವತ್ತು ಇದನ್ನು 'ಸೇಫ್ಟಿ ಬೈಸಿಕಲ್' ಎಂದು ಕರೆದರು. ಸಮತೋಲಿತವಾಗಿದ್ದ ಈ ಸೈಕಲ್ ಮುಂದಕ್ಕೆ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಸುಧಾರಣೆಗಳನ್ನು ಕಾಣುತ್ತಲೇ ಬಂತು. ಏಪ್ರಿಲ್ 2018 ರಲ್ಲಿ 'ಯುನೈಟೆಡ್ ನೇಷನ್ಸ್' ಜನರಲ್ ಅಸೆಂಬ್ಲಿಯಿಂದ ಜೂನ್ 3 ಅನ್ನು ಅಧಿಕೃತವಾಗಿ ವಿಶ್ವ ಬೈಸಿಕಲ್ ದಿನ ಎಂದು ಗೊತ್ತುಪಡಿಸಲಾಯಿತು. ಸೈಕಲಿನ ಉಪಯೋಗ ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ವಿಶೇಷ ಆಸ್ಥೆಯಿಂದ ಈ ದಿನವನ್ನು ನಿಗದಿಪಡಿಸಲಾಗಿದೆ; ಸೈಕಲ್ ಸವಾರಿಯನ್ನು ಸಂಭ್ರಮಿಸಲು ದಿನ-ದೇಶ-ಕಾಲ-ವಯಸ್ಸಿನ ಹಂಗಿಲ್ಲವಲ್ಲ !
ಸೈಕಲ್ ಬ್ಯಾಲೆನ್ಸ್
ಸರ್ಕಸ್ಸುಗಳಲ್ಲಿ ಒಂದೇ ಚಕ್ರದ ಮೇಲೆ ಕಸರತ್ತು ನಡೆಸುವ ಕಲಾವಿದರನ್ನು ಕಂಡು ಹುಬ್ಬು ಮೇಲೇರಿಸಿದ್ದೇವೆ. ಕೈ ಬಿಟ್ಟು ಸೈಕಲ್ ತುಳಿಯುವ ಪೋರ-ಪೋರಿಯರು ನಮಗೆ ಕಾಣ ಸಿಗುತ್ತಾರೆ. ಜಾತ್ರೆಗಳಲ್ಲಿ ಸೈಕಲನ್ನು ಕುದುರೆಯಂತೆ ಕುಣಿಸಿ ಮನರಂಜಿಸುತ್ತಾರೆ. ಕೆಲವು ರಾಜ್ಯ ಸರಕಾರಗಳು ಶಾಲಾ ಮಕ್ಕಳಿಗೆ ಕೊಡಿಸುವ ಸೈಕಲ್, ಹಳ್ಳಿಮಕ್ಕಳ ಸಂಗಾತಿಯೇ ಆಗಿ ಹೋಗಿವೆ. ಉತ್ತರ ಭಾರತದಲ್ಲಿ ಇಂದಿಗೂ ಸೈಕಲ್ ರಿಕ್ಷಾಗಳನ್ನು ತುಳಿದು ಬದುಕು ನಡೆಸುವವರಿದ್ದಾರೆ. ಬದುಕಿನ ಬಂಡಿ ಸಾಗಿಸುವುದು ಕೂಡ ಸೈಕಲ್ ಬ್ಯಾಲನ್ಸಿಂಗಿನಂತೆಯೇ ಆಗಿ ಬಿಟ್ಟಿದೆ.
ಯಾವುದೇ ದಾಖಲೆಗಳನ್ನು ಹೊತ್ತು ಸಾಗಬೇಕಾದ ಅಗತ್ಯವಿಲ್ಲದ, ಓಡಿಸಲು ಪರವಾನಿಗೆ ಬೇಡದ, ದೇಹಕ್ಕೆ ವ್ಯಾಯಾಮವನ್ನು ಒದಗಿಸುವ ಸೈಕಲ್ ನಿಜ ಅರ್ಥದಲ್ಲಿ ಮನುಷ್ಯರಿಗೆ ಉಪಕಾರಿ. ನೈತಿಕವಾಗಿ ನೋಡಿದರೂ, ಪರಿಸರಕ್ಕೆ ಹಾನಿಕರವಲ್ಲದ ಸೈಕಲ್ ಮನುಷ್ಯರು ಮಾಡಿದ ಅತ್ಯಂತ ಉದಾತ್ತವಾದ ಆವಿಷ್ಕಾರವಾಗಿದೆ. 'ಜಾನ್ ಎಫ್ ಕೆನಡಿ' ಹೇಳಿದಂತೆ "ಸೈಕಲ್ ತುಳಿಯುವಾಗ ಸಿಗುವ ಸರಳವಾದ ಆನಂದಕ್ಕೆ ಯಾವುದೂ ಸಾಟಿಯಲ್ಲ". ಬದುಕಿನ ಜಂಜಾಟದ ನಡುವೆಯೂ, ಆ ಆನಂದವನ್ನು ಸವಿಯಲು ನಮ್ಮ ಒಳಗಿನ ಮಗುವಿನ ಚೈತನ್ಯ ಮಂಕಾಗದೇ ಉಳಿದಿರಬೇಕು. ಮಕ್ಕಳಾಗಿದ್ದ ನಾವು, ಬೇಳೀತಾ ಬೆಳೀತಾ ಕಳ್ ನನ್ ಮಕ್ಳಾಗ್ತೀವಿ. ಹಾಗಾಗದೇ ನಮ್ಮೊಳಗಿನ ಚೇತನವನ್ನು ಕಳೆದುಕೊಳ್ಳದಿರೋಣ. ಮಹಾಕವಿ 'ಕುವೆಂಪು'ರವರು ಹೇಳಿದಂತೆ ಅಲ್ಪಮಾನವರಾಗದೆ, ವಿಶ್ವಮಾನವರಾಗಿ ಬಾಳೋಣ.
Writer, Poet & Automotive Enthusiast
0 Followers
0 Following