"ಮುತ್ತೈದೆ ಭಾಗ್ಯ"

ProfileImg
14 Jun '24
4 min read


image

            ಮುತ್ತೈದೆ ಭಾಗ್ಯವೆನ್ನುವದು ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬಹಳ ಮಹತ್ವದ ಸ್ಥಾನಪಡೆದಿದೆ. ಮದುವೆ , ಮುಂಜಿವೆ ಮತ್ತು ಯಾವುದೇ ಶುಭ ಕಾರ್ಯಗಳಲ್ಲಿ ಮುತ್ತೈದೆ ಯರನ್ನೇ ಮುಂದೆ ಮಾಡುತ್ತಾರೆ. ಎಲ್ಲದರಲ್ಲೂ ಅವರಿಗೆ ಪ್ರಾಶಸ್ತ್ಯ ಕೊಡುತ್ತಾರೆ. ಇದು ಒಂದು ನಮ್ಮ ಸಂಪ್ರದಾಯ.

           ಆದರೆ ಹಲವಾರು ಹೆಣ್ಣುಮಕ್ಕಳ ಪತಿಯಾದವನು ಯಾವುದೇ ಒಂದು ಕಾರಣದಿಂದ ಅಸುನೀಗುತ್ತಾನೆ. ಇದರಿಂದ ಪತ್ನಿ ಯಾದವಳು ವೈಧವ್ಯವನ್ನು ಅನುಭವಿಸುವ ಪ್ರಸಂಗ ಬಂದೊದಗುತ್ತದೆ. ಅದರಲ್ಲಿ ಅವಳ ತಪ್ಪೇನಿಲ್ಲದಿದ್ದರೂ ಮುತ್ತೈದೆ ತನದಿಂದ ವಂಚಿತಳಾಗುತ್ತಾಳೆ. ವೈಧವ್ಯದ ಪಟ್ಟ ಕಟ್ಟಿ ಬಿಡುತ್ತಾರೆ. 
ನಮ್ಮ ಸಂಸ್ಕೃತಿ ಬಹಳ ಶ್ರೀಮಂತವಾಗಿದೆ ಎಂಬ ಹೆಗ್ಗಳಿಕೆ ನಮಗೆಲ್ಲ ಗೊತ್ತಿದೆ .ಆದರೆ ವಿಧವೆಯರ ವಿಷಯದಲ್ಲಿ ಮಾತ್ರ ಇಂತಹ ಆಚರಣೆಗಳು ಬಹಳ ಹೀನಾಯಕರ ಅನ್ನುವಷ್ಟರ ಮಟ್ಟಿಗೆ ಇರುತ್ತದೆ.                                                          
           "ವಿಧವೆ ಅನ್ನುವದಕ್ಕಿಂತ ಮೊದಲು ಅವಳೊಬ್ಬ ಮನುಷ್ಯಳು" ಎಂಬ ಅರಿವಿರಬೇಕು. ಪತಿ ಸತ್ತ ನಂತರ ಅವಳಿಗೆ ಮಾಡುವ ಆಚರಣೆಯಿಂದ ಅವಳ ಮನಸ್ಸಿಗೆ ಎಷ್ಟೊಂದು ಆಘಾತ ವಾಗುತ್ತದೆ, ಎನ್ನುವದು ಯಾರೂ ಯಾಕೆ ಅರ್ಥಮಾಡಿಕೊಳ್ಳದೇ ಇರು ವರು!! ಒಂದು ವೇಳೆ ಅರ್ಥವಾದರೂ ಇವೆಲ್ಲ ಸಂಪ್ರದಾಯಗಳನ್ನು ತೆಗೆದು ಹಾಕಲು ಧೈರ್ಯವಿಲ್ಲದೆ ಮೂಕ ಪ್ರೇಕ್ಷಕರಾಗಿ ನಿಂತುಬಿಟ್ಟಿರುವರೋ ಎನಿಸಿ ದುಃಖವಾಗುತ್ತದೆ. ಇದನ್ನೆಲ್ಲ ನೋಡಿದರೆ , ಹಿಂದಿನದನ್ನು ಬಿಡಲು ಆಗದೆ , ಮುಂದಿನದನ್ನು ಹಿಡಿಯಲು ಆಗದೇ , " ಅಪ್ಪ ನೆಟ್ಟ ಆಲದಮರಕ್ಕೆ ಜೋತು ಬಿದ್ದಂತಾಗಿದೆ " ನಮ್ಮ ಪರಿಸ್ಥಿತಿ. ಪತಿಯನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಈ ತರಹದ ಗೊಡ್ಡು ಸಂಪ್ರದಾಯಕ್ಕೆ ತನ್ನನ್ನು ಒಪ್ಪಿಸಿಕೊಂಡು , ಒಳಗೊಳಗೆಯೇ ಮಾನಸಿಕ ಹಿಂಸೆ ಅನುಭವಿಸುವುದು. ಸ್ಮಶಾನದಲ್ಲಿಯೇ ಅಂತ್ಯ ಕ್ರಿಯೆಯ ಸಮಯದಲ್ಲಿ ಆ ಹೆಣ್ಣುಮಗಳ ಕುಂಕುಮ , ತಾಳಿ , ಕಾಲುಂಗುರ ತೆಗೆಸುವದು, ಮತ್ತು ಬಳೆಗಳನ್ನು ಒಡೆಯುವದು, ಅದೂ ಯಾರಾದರೂ ಒಬ್ಬ ವಿಧವೆ ಕಡೆಯಿಂದ ಇದನ್ನೆಲ್ಲ ಮಾಡಿಸುವದು. ಅಬ್ಬಾ!! ಎಂತಹ ಅಮಾನವೀಯತೆ ಕೃತ್ಯ ಎನಿಸುವದಿಲ್ಲವೇ!!
ಅಷ್ಟು ಮಾಡಿ ಮದುವೆಯಲ್ಲಿ ಯಾಕೆ ಇವೆಲ್ಲಾ ಹಾಕಿಸುತ್ತಾರೋ ಗಂಡನ ಕೈಯಿಂದ...ಅವನು ಸತ್ತ ನಂತರ ಹೆಣ್ಣಿಗೆ ಏನೂ ಅಸ್ತಿತ್ವವೇ ಇಲ್ಲದಂತೆ ಮಾಡಿಬಿಡುತ್ತಾರೆ. 

          ಈ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಮುತ್ತೈದೆ  ಸಾವು ಬರಲೆಂದು ಬೇಡಿಕೊಳ್ಳುತ್ತಾರೆ, ಎನಿಸುತ್ತದೆ. 
ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ನಂತರ ಎಷ್ಟೋ ಹೆಣ್ಣುಮಕ್ಕಳು ಮನೆ ನಡೆಸಿಕೊಂಡು , ಮಕ್ಕಳೆಲ್ಲರ ಪಾಲನೆ ಪೋಷಣೆ ಮಾಡಿ, ದೊಡ್ಡವರನ್ನಾಗಿ ಮಾಡಿ ಅವರನ್ನು ಒಂದು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅವಳು ಇಂತಹವುಗಳನ್ನು ಸಲೀಸಾಗಿ ನಿರ್ವಹಿಸಬಲ್ಲಳು. ತಾನೊಬ್ಬಳೇ ಎಲ್ಲವನ್ನೂ ನಿಭಾಯಿಸಬಲ್ಲಳು. 
ಆದರೇ ಈ ತರಹದ ಆಚರಣೆಗಳನ್ನು ತಡೆದುಕೊಳ್ಳುವ ಶಕ್ತಿ ಮಾತ್ರ ಅವಳಿಗಿಲ್ಲ.
ನಾವಾಗಿಯೇ ವಿಧವೆಯರನ್ನು ಸಮಾಜದಲ್ಲಿ ಎತ್ತಿ ತೋರಿಸುತ್ತಿದ್ದೇವೆ . ಕೊರಳಲ್ಲಿ ತಾಳಿ ಇಲ್ಲದ್ದು ನೋಡಿ ಸಮಾಜದಲ್ಲಿ ಹಲವು ಗಂಡಸರು ಕೆಟ್ಟದೃಷ್ಟಿಯಿಂದ ನೋಡುತ್ತಾರೆ. 
ಇಂತಹವರ ಸಲುವಾಗಿಯೇ ಇಂದಿನ ಹೆಣ್ಣುಮಕ್ಕಳು ಪತಿ ಸತ್ತ ನಂತರ ಮಂಗಳಸೂತ್ರ ತೆಗೆಯುತ್ತಿಲ್ಲ .. ಹೆಣ್ಣುಮಕ್ಕಳಿಗೆ ಕುಂಕುಮ ,ಹೂವುಗಳು ಬಾಲ್ಯದಿಂದಲೇ ಇರುತ್ತದೆ. ಯಾಕೆ ಅವುಗಳನ್ನು ಬಿಡಬೇಕು ,ಎನ್ನುವ ಧೋರಣೆ ತಪ್ಪೇನಿಲ್ಲ .ಇಂದಿನ ಯುವ ಜನತೆದ ಇಂತಹ ಬದಲಾವಣೆಗಳು ಆಗುತ್ತಲಿವೆ . ಇನ್ನೂ ಆಗಬೇಕಿದೆ. 

            ಮುಪ್ಪಾದ ಮೇಲೆ ಪತಿಯನ್ನು ಕಳೆದುಕೊಂಡರೆ , ಇಂತಹ ಆಚರಣೆಗಳು ಅಷ್ಟಾಗಿ ಮನಸ್ಸಿಗೆ ತಾಕುವದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಇದರಿಂದಾಗಿ ಬಹಳ ಮಾನಸಿಕವಾಗಿ ಹಿಂಸೆ ಮತ್ತು ಕೀಳಿರಿಮೆ ಅನುಭವಿಸುತ್ತಾರೆ .. ಯಾವುದೇ ಶುಭ ಕಾರ್ಯಗಳಿಗೆ ಹೋಗಲು ಹಿಂಜರಿಯುತ್ತಾರೆ. ಯಾಕೆಂದರೆ ಅಲ್ಲಿ ಇವರನ್ನು ಏನೋ ಬೇರೆ ತರಹವೇ ನೋಡುವದಲ್ಲದೇ, ಇವರನ್ನೆಲ್ಲ ಬಿಟ್ಟು ಉಳಿದ ಮುತ್ತೈದೆಯರಿಗೆ ಕುಂಕುಮ , ಉಡಿ,ಮತ್ತು ಹೂವು ಇತ್ಯಾದಿ ಕೊಡುತ್ತಾರೆ.

         ಆದರೂ ಹೆಣ್ಣು ಮಕ್ಕಳು ಇದನ್ನೆಲ್ಲವನ್ನು ಮರೆತು ಅವಮಾನಗಳನ್ನು ಸಹಿಸಿಕೊಂಡು ತಮ್ಮ ಮನೆಯ ಮತ್ತುಮಕ್ಕಳ ಏಳಿಗೆಗೆ ಜೀವವನ್ನೆ ತೇಯುತ್ತಾರೆ. 
ಮಕ್ಕಳಿಗೆ ತಂದೆ ಇಲ್ಲವೆಂಬ ಕೊರಗನ್ನು ನೀಗಿಸಲು ಸಾಕಷ್ಟು ಶ್ರಮ ಪಡುತ್ತಾರೆ ..ಇಂತಹದರಲ್ಲಿ ಗಂಡಸರಿಗಿಂತ ಹೆಂಗಸರೆ ಸಮರ್ಥನೀಯರು ಎಂದೆನಿಸದಿರಲಾರದು. 
ಅದೇ ಪತ್ನಿ ಸತ್ತರೆ ಗಂಡಸರಿಗೆ ಇಂತಹ ಆಚರಣೆ ಇಲ್ಲ ..ಏನೂ ಇಲ್ಲ.. ಆದರೆ ಪತ್ನಿಯನ್ನು ಕಳೆದುಕೊಂಡ ಪತಿ ಮಾನಸಿಕ ವಾಗಿ ಸಾಕಷ್ಟು ಕುಗ್ಗುತ್ತಾರೆ . ಇದರಲ್ಲಿ ಎರಡು ಮಾತಿಲ್ಲ .. ಹೆಣ್ಣುಮಕ್ಕಳಷ್ಟು ಗಟ್ಟಿತನ ಅವರಲ್ಲಿರುವದಿಲ್ಲ. “ತಾಯಿ ಸತ್ತರೆ ಮಕ್ಕಳು ಪರದೇಶಿ ಯಾಗುತ್ತಾರೆ”, ಎಂಬ ಗಾದೆ ಮಾತೆೇ ಇದೆ . ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರೂ ಬೇಕು. ಇಬ್ಬರಲ್ಲಿ ಒಬ್ಬರು ಇಲ್ಲವಾದರೆ ಸ್ವಲ್ಪ ಕಷ್ಟವೇ. ಆದರೂ ತಾಯಿ ತಂದೆಯ ಸ್ಥಾನವನ್ನು ತುಂಬ ಬಲ್ಲಳು ಎಂದರೆ ತಪ್ಪಾಗಲಾರದು.

           ಇಷ್ಟೇಲ್ಲ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿ,  ಮಕ್ಕಳ ಮದುವೆ ಸಮಯದಲ್ಲಿ ಮತ್ತಿತರ ಶುಭ ಕಾರ್ಯಗಳಲ್ಲಿ, ಪತಿಯನ್ನು ಕಳೆದುಕೊಂಡ ಪತ್ನಿಗೆ, ಪತ್ನಿಯನ್ನು ಕಳೆದುಕೊಂಡ ಪತಿಗೆ, ಭಾಗವಹಿಸಲು ಅವಕಾಶವಿಲ್ಲ. ಎಲ್ಲ ಶಾಸ್ತ್ರ ಗಳನ್ನು ಬೇರೆ ಯವರ ಕಡೆಯಿಂದ ಮಾಡಿಸುವರು. ಎಂತಹ ಶೋಚನೀಯ ಸ್ಥಿತಿ ಎನಿಸುವದಿಲ್ಲವೆ ..!!
ಇದರಿಂದ ಮಕ್ಕಳ ಮನಸ್ಸಿಗೂ ನೋವು, ತಂದೆ ತಾಯಿಯರಿಗಂತೂ ಕರುಳು ಕಿವಿಚಿದಂತಹ ಅನುಭವ. 

           ಹಿಂದಿನ ಕಾಲದಲ್ಲಿ ಸತಿಯೊಡನೆ ಸಹಗಮನ ಪದ್ದತಿ ಇತ್ತು . ಪತಿ ಸತ್ತ ನಂತರ ಅವನೊಡನೆ ಸತಿಯೂ ಸಾಯಬೇಕು. ಪತಿಯನ್ನು ಸುಡುತ್ತಿದ್ದ ಬೆಂಕಿಯಲ್ಲಿ ಸತಿಯನ್ನು ಜೀವಂತವಾಗಿ ಸುಡುತ್ತಿದ್ದರು. ಅದು ಮೋಕ್ಷ ಅಂತ ಭಾವಿಸುತ್ತಿದ್ದರು. 
ಕೆಲವರಲ್ಲಿಯಂತೂ ಗಂಡ ಸತ್ತ ನಂತರ ಹೆಂಡತಿಯ ತಲೆ ಬೋಳಿಸುವದು. ಬಿಳಿಸೀರೆ, ಇಲ್ಲವೇ ಕೆಂಪು ಸೀರೆ ಉಡಬೇಕು. ಆಗಿನ ಕಾಲದಲ್ಲಿ ಬಾಲ್ಯ ವಿವಾಹ ಮಾಡುವ ಪದ್ದತಿ ಇತ್ತು .ಅಂತಹದರಲ್ಲಿ ಪತಿ ಸತ್ತು ಹೋದರೆ ಜೀವನ ಪೂರ್ತಿ ಆ ಹೆಣ್ಣುಮಗು ವಿಧವೆಯಾಗಿ ಸಮಾಜ ವಿಧಿಸಿದ ಕೆಟ್ಟ ಆಚರಣೆಗಳಿಗೆ ತಲೆ ಯೊಡ್ಡಿ ಜೀವನ ಸವೆಸುವದಷ್ಟೇ, ಅವರ ಜೀವನ ಎಂಬಂತಿತ್ತು. 
1828 ರಲ್ಲಿ ಭಾರತದ ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆಂಟಿಂಕ್ ಇವರು "ಸತಿ" ಪದ್ಧತಿ ಮತ್ತು ಬಾಲ್ಯ ವಿವಾಹ ದಂತಹ ಕೆಟ್ಟ ಆಚರಣೆಗಳನ್ನು ತೆಗೆದು ಹಾಕಬೇಕೇಂದು ಕಾನೂನು ಜಾರಿಗೊಳಿಸಿದ್ದರು. ಇವರ ಸಹಾಯದಿಂದ ಸಮಾಜ ಸುಧಾರಕ ರಾಜಾರಾಮ್ ಮೋಹನರಾಯ್ ರವರು ಇಂತಹ ಕೆಟ್ಟ ಆಚರಣೆಗಳನ್ನು ನಿರ್ಮೂಲನೆ ಮಾಡಿದರು. ಇಂದಿನ ಕಾಲದಲ್ಲಿಯೂ ಇಂತಹ ಸುಧಾರಣೆ ಇನ್ನೂ ಆಗಬೇಕಿದೆ.

            ಪರರಾಷ್ಟ್ರಗಳಲ್ಲಿ ಇಂತಹ ಆಚರಣೆಗಳು ಇಲ್ಲ. ಆ ದೇಶಗಳಲ್ಲಿಯ ವ್ಯವಸ್ಥೆ ಇಂತಹ ಗೊಡ್ಡು ಸಂಪ್ರದಾಯಗಳನ್ನು ಬಿಟ್ಟು , ವಿಧವೆಯರು ಸ್ವತಂತ್ರರಾಗಿ ಬದುಕಲು ಏನೇನು ಸಾಧ್ಯತೆಗಳಿವೆ ಅವನ್ನೆಲ್ಲ ಅವರಿಗೆ ಒದಗಿಸುವ ಪ್ರಯತ್ನ ಮಾಡುತ್ತದೆ. ಅವರ ಹಕ್ಕುಗಳನ್ನು ಗೌರವಿಸುತ್ತದೆ. ಅವರೂ ಎಲ್ಲರಂತೆ ಸಮಾನತೆಯಿಂದ ಬದುಕುವ ಅವಕಾಶ ಮಾಡಿಕೊಡುತ್ತದೆ. 
ಹೀಗಾಗಿ ಅವರಿಗೆ ಕೀಳೀರಿಮೆ ಬರುವ ತರಹ ಯಾವುದೇ ಪರಿಸ್ಥಿತಿ ಬರುವದಿಲ್ಲ.

          ನಮ್ಮದೇಶದಲ್ಲಿ ವಿದ್ಯಾವಂತರು, ಸಮಾಜ ಸುಧಾರಕರು , ಸಮಾಜದಲ್ಲಿ ಇಂತಹವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು.

Category:Parenting and Family



ProfileImg

Written by Shobha Siddannavar

0 Followers

0 Following