ಮಂತ್ರಾಲಯ ರಾಯಚೂರು ಪ್ರವಾಸ

ಭಾಗ 1

ProfileImg
25 Apr '24
3 min read


image

ಬಹು ದಿನಗಳ ನಂತರ ನಮ್ಮ ರಾಯಚೂರು ಪ್ರವಾಸ ಕೈಗೂಡಿತು. ಉಡುಪಿಯಲ್ಲಿ ಇರುವಾಗ ಗುರು ರಾಘವೇಂದ್ರರ ಹೆಸರು ಹೇಳಿದ್ದರೂ, ಅವರ ಬೃಂದಾವನ ಇರುವುದು ಮಂತ್ರಾಲಯದಲ್ಲಿ ಎಂಬ ವಿಷಯ ಗೊತ್ತಿರಲಿಲ್ಲ. ಬೆಂಗಳೂರಿಗೆ ಬಂದ ನಂತರ ಮಂತ್ರಾಲಯದ ವಿಷಯ ತಿಳಿದಿದ್ದರೂ, ಅಲ್ಲಿಗೆ ಹೋಗುವ ಮನಸ್ಸು ಕಾಲ ಕೂಡಿ ಬಂದಿರಲಿಲ್ಲ. ಹಾಗೆ ಹೀಗೆ ಕೆಲವರು ಹೇಳಿದ್ದು ರಾಯರೇ ಮಂತ್ರಾಲಯಕ್ಕೆ ಕರೆಸಿಕೊಳ್ಳುತ್ತಾರೆ ಎಂದು. ಇತ್ತೀಚಿಗೆ ಮೂರು ದಿನ ರಜೆ ಒಟ್ಟಿಗೆ ಬಂದದ್ದರಿಂದ ನಮ್ಮ ಮಂತ್ರಾಲಯ ಪ್ರವಾಸಕ್ಕೆ ಕಾಲ ಕೂಡಿ ಬಂತು. ಹಾಗೆಯೇ ಮನೆಯಲ್ಲಿರುವವರ ಜೊತೆ ಕೇಳಿದಾಗ ಅವರು ಕೂಡ ಹೋಗೋಣ ಎಂದರು. ಬಹುಶಃ ಬೆಂಗಳೂರಿನಿಂದ ಎಲ್ಲರೂ ರೈಲಿನಲ್ಲಿ ಮಂತ್ರಾಲಯ ರೋಡ್ ಎಂಬಲ್ಲಿಗೆ ಹೋಗಿ ನಂತರ 16 ಕಿಲೋಮೀಟರ್ ದೂರದಲ್ಲಿರುವ ಮಂತ್ರಾಲಯಕ್ಕೆ ಹೋಗುವರು. ಆದರೆ ನಾವು ಕರ್ನಾಟಕ ರಾಜ್ಯದ ಬಸ್ ನಲ್ಲಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ 5:00 ಗಂಟೆಗೆ ಮಂತ್ರಾಲಯ  ತಲುಪಿದೆವು. ನಾವು ಮಂತ್ರಾಲಯದ ಮಠದ ಕೊಠಡಿಗಾಗಿ ಆನ್ಲೈನ್ ನೋಡಿದಾಗ ಯಾವುದೇ ರೂಮು ಸಿಕ್ಕಿರಲಿಲ್ಲ. ಹಾಗಾದ ಕಾರಣ ಬೆಂಗಳೂರಿನಿಂದಲೇ ಒಂದು ಲಾಡ್ಜ್ ಅನ್ನು ಕಾದಿರಿಸಿ ಹೋಗಿದ್ದೆವು. ಬಸ್ಸಿನಿಂದ ಇಳಿದ ಕೂಡಲೇ ಹಲವು ಮಂದಿ ಹೋಟೆಲ್ ಏಜೆಂಟರು ಕೊಠಡಿ ಬೇಕೇ ಎಂದು ವಿಚಾರಿಸುವರು. ನಾವು ಮುಂಚಿತವಾಗಿ ಕಾದಿರಿಸಿದ್ದರಿಂದ ಶ್ರೀ ಕೃಷ್ಣ ಲಾಡ್ಜ್ ಎಂಬ ಲಾಡ್ಜಿಗೆ ಹೋದೆವು. ಇದು ಮಂತ್ರಾಲಯದ ಮಠದ ದ್ವಾರದ ಬಳಿಯೇ ಇದೆ ಹಾಗೂ ಬಸ್ಸು ನಿಲ್ದಾಣದ ಪಕ್ಕದಲ್ಲಿಯೇ ಇದೆ. ತುಂಬಾ ಶುಚಿಯಾಗಿ ಇಟ್ಟಿದ್ದಾರೆ. ಕೊಠಡಿಗಳು ವಿಶಾಲವಾಗಿ ಇವೆ. ನಾವು ಕೊಂಚ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಂಡು ನಂತರ ಬೆಳಗಿನ ಉಪಹಾರಕ್ಕಾಗಿ ಹೋಟೆಲಿಗೆ ಹೋದೆವು. ಮಂತ್ರಾಲಯದ ಸುತ್ತಮುತ್ತ ತಿಂಡಿ ಹೋಟೆಲ್ ಗಾಗಿ ಬರ ಇಲ್ಲ. ಆದರೆ ತಿಂಡಿಯ ಗುಣಮಟ್ಟ ಸಾಮಾನ್ಯ. ಎಲ್ಲರೂ ಮಂತ್ರಾಲಯದಲ್ಲಿ ರಾಯರ ಬೃಂದಾವನದಿಂದ ವೀಕ್ಷಣೆ ಶುರು ಮಾಡಿದರೆ ನಾವು ಒಂದು ಟಂ ಟಂ ಅನ್ನು ಪಡೆದುಕೊಂಡು ಮಂತ್ರಾಲಯದ ಹೊರವಲಯದ ಜಾಗಗಳನ್ನು ನೋಡಲು ಹೋದೆವು. ಮಂತ್ರಾಲಯದ ಸರ್ಕಲ್ ಬಳಿ ಬೇಕಾದಷ್ಟು ಟಂ ಟಂಗಳು ದೊರೆಯುತ್ತದೆ ಹಾಗೆಯೇ ಟ್ಯಾಕ್ಸಿ ಸರ್ವಿಸ್ ಕೂಡ ಇದೆ. ಈ ಟಂಟಂಗಳಲ್ಲಿ ಒಬ್ಬರಿಗೆ 150 ರೂಪಾಯಿಗೆ ಚಾರ್ಜ್ ಮಾಡುತ್ತಾರೆ. ಆದರೆ ಇದರಲ್ಲಿ ಹತ್ತರಿಂದ ಹದಿನೈದು ಜನರನ್ನು ತುಂಬಿಸುತ್ತಾರೆ. ನಾವು 1200 ರೂಪಾಯಿಗೆ ಸ್ವಂತಕ್ಕೆ ಟಂ ಟಂ ಪಡೆದುಕೊಂಡು ಹೊರಟೆವು. ಮೊದಲಿಗೆ ಮಂತ್ರಾಲಯದ ಹೊರವಲಯದ ಅಭಯ ಆಂಜನೇಯ ದೇವಸ್ಥಾನವನ್ನು ನೋಡಿದೆವು. ಇಲ್ಲಿ ಕಲ್ಲಿನಲ್ಲಿ ಕೆತ್ತಿದ ದೊಡ್ಡ ಆಂಜನೇಯನ ವಿಗ್ರಹ ಇದೆ. ದೇವಸ್ಥಾನ ಬಹಳ ಚಿಕ್ಕದು ಆದರೆ ಆಂಜನೇಯನ ವಿಗ್ರಹ ತನ್ನ ಆಕಾರದಿಂದಾಗಿ ನಮ್ಮನ್ನು ಚಿಕ್ಕದಾಗಿ ಮಾಡುತ್ತದೆ. ಇಲ್ಲಿ 10 ರಿಂದ 15 ನಿಮಿಷ ಇದ್ದು ಮುಂದೆ ಪಂಚಮುಖಿ ಆಂಜನೇಯನ ನೋಡಲು ರಾಯಚೂರು ಮಾರ್ಗದಲ್ಲಿ ಮುಂದೆ ಹೋಗಬೇಕು. ಪಂಚಮುಖಿ ಆಂಜನೇಯನ ಗುಹೆ ಒಂದು ಪ್ರಸಿದ್ಧ ಸ್ಥಳ. ಇಲ್ಲಿ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿ ಆಂಜನೇಯನನ್ನು ಸಾಕ್ಷಾತ್ಕರಿಸಿಕೊಂಡರು. ಇಲ್ಲಿ 12 ವರ್ಷ ತಪಸ್ಸನ್ನು ಮಾಡಿ ಮುಂದೆ ಮಂತ್ರಾಲಯಕ್ಕೆ ಬಂದು ಸಶರೀರ ಬೃಂದಾವನ ಪ್ರವೇಶಿಸಿದರು ಎಂದು ನಮಗೆ ತಿಳಿದು ಬರುತ್ತದೆ. ಇಲ್ಲಿ ಪ್ರಾಕೃತಿಕವಾಗಿ ನಿರ್ಮಿತವಾಗಿರುವ ಪುಷ್ಪಕ ವಿಮಾನ ಹಾಗೂ ಒಂದು ಕಲ್ಲಿನ ಹಾಸಿಗೆ ಕಾಣಲು ಸಿಗುತ್ತದೆ. ಇದೊಂದು ಸೋಜಿಗವೇ ಸರಿ. ಹಾಗೆಯೇ ಇಲ್ಲಿ ಆಂಜನೇಯನ ಪಾದರಕ್ಷೆಗಳು ಕೂಡ ಇವೆ. ಪಂಚಮುಖಿ ಆಂಜನೇಯನ ಹಿಂದೆ ಲಕ್ಷ್ಮೀ ಗುಡಿ ಕೂಡ ಇದೆ. ಇಲ್ಲಿ ಹಲವು ಈ ಕಾಲದ ಆಂಜನೇಯಗಳು ಇವೆ ಮತ್ತು ನಿರ್ಭಯವಾಗಿ ಕುಳಿತರೆ ನಮ್ಮ ಹೆಗಲ ಮೇಲೆ ಹತ್ತಿ ಕುಳಿತುಕೊಳ್ಳುತ್ತವೆ. ಪಂಚಮುಖಿ ಆಂಜನೇಯನ ಗುಡಿ ಮತ್ತು ಲಕ್ಷ್ಮೀ ಗುಡಿಯ ನಡುವೆ ಇರುವ ಹೊಲದಲ್ಲಿ ಹೊಗೆಸೊಪ್ಪಿನ ಬೆಳೆ ಕಾಣಬಹುದು. ಪಂಚಮುಖಿ ಆಂಜನೇಯನ ದರ್ಶನ ಆದ ನಂತರ ಅಪ್ಪಣ್ಣ ಆಚಾರ್ಯರ ಮನೆ ಇರುವ ಬಿಚ್ಚಾಲೆಗೆ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಭಿಕ್ಷಾಲಯ ಅಂತ ಹೆಸರು. ಬಹುಶಃ ಅಲ್ಲಿಯ ಜನರ ಬಾಯಲ್ಲಿ ಬಿಚ್ಚಾಲೆ ಎಂದು ಆಗಿರಬಹುದು. ಈ ಸ್ಥಳ ತುಂಗಾ ನದಿಯ ದಡದಲ್ಲಿ ಇದೆ. ಇಲ್ಲಿ ಏಕಶಿಲಾ ಬೃಂದಾವನ ಕೂಡ ಕಾಣಬಹುದು. ರಾಯರಿಗೆ ಅಡಿಗೆ ಮಾಡುವಾಗ ಮಸಾಲೆ ಅರೆಯಲು ಬಳಸುತ್ತಿದ್ದ ಒರಳು ಕಲ್ಲು ಕೂಡ ಕಾಣಬಹುದು. ನದಿಯಲ್ಲಿ ಮೊಸಳೆಗಳಿವೆ ಎಂಬ ಒಂದು ಎಚ್ಚರಿಕೆಯ ಬರಹ ಕೂಡ ಕಾಣಬಹುದು. ಇಲ್ಲಿ ಕೆಲವು ಹೊತ್ತು ಕಳೆದು ಅಪ್ಪಣ್ಣಆಚಾರ್ಯರ ಮನೆಗೆ ಹೋಗಿ ರಾಘವೇಂದ್ರರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸ್ಥಳವನ್ನು ನೋಡಬಹುದು. ಇದೊಂದು ಚಿಕ್ಕ ಮನೆ. ಈಗ ಅದನ್ನು ಪುನರ್ ನಿರ್ಮಿಸಿದ್ದಾರೆ. ಇಲ್ಲಿಂದ ಮಂತ್ರಾಲಯಕ್ಕೆ ಪುನಃ ಬಂದು ನಾವು ಮಠದ ದಾಸೋಹದ ಸಾಲಿನಲ್ಲಿ ನಿಂತೆವು. ಇಲ್ಲಿ ಸಾಲು ಬಹಳ ಬೇಗ ಮುಂದುವರೆಯುತ್ತದೆ, ಏಕೆಂದರೆ ದಾಸೋಹ ಸ್ವಸಹಾಯ ಪದ್ಧತಿಯಲ್ಲಿ ನಡೆಯುತ್ತದೆ. ಉತ್ತಮ ಭೋಜನದ ನಂತರ ನಾವು ನಮ್ಮ ಕೊಠಡಿಗೆ ಹಿಂತಿರುಗಿ ವಿಶ್ರಾಂತಿ ಪಡೆದೆವು. ಮಧ್ಯಾಹ್ನ 2 ರಿಂದ 4 ಮಠಕ್ಕೆ ಪ್ರವೇಶವಿಲ್ಲ. ಹಾಗಾಗಿ ಮಧ್ಯಾಹ್ನದ ಗೊತ್ತು ಬಿಸಿಲಿನ ತಾಪ ತಪ್ಪಿಸಲು ವಿಶ್ರಾಂತಿ ಕೊಠಡಿಗೆ ಹೋಗುವುದು ಉತ್ತಮ. ನಾವು ಸಾಯಂಕಾಲ 4:30ಗೆ ರಾಯರ ಬೃಂದಾವನ ನೋಡಲು ಸರತಿಯಲ್ಲಿ ನಿಂತೆವು. ಭಾರತೀಯ ಉಡುಗೆ ತೊಟ್ಟಿದ್ದರೆ ಉತ್ತಮ. ಗಂಡಸರು ಅಂಗಿ ಬನಿಯನ್ ತೆಗೆದು ಪ್ರವೇಶಿಸಬೇಕು. ಇಲ್ಲಿಯೂ ಕೂಡ ನಮಗೆ ಬೇಗನೆ ದರ್ಶನವಾಯಿತು. ವಿಶೇಷ ದರ್ಶನದ ವ್ಯವಸ್ಥೆ ಕೂಡ ಇಲ್ಲಿ ಇದೆ. ಹಲವರು ವಿಧವಿಧ ಸೇವೆಗಳನ್ನು ಕೂಡ ಮಾಡಿಸುತ್ತಾರೆ. ಇಲ್ಲಿನ ಪ್ರಕಾರದಲ್ಲಿ ಭಕ್ತರು ಉರುಳು ಸೇವೆ, ಪಾದ ನಮಸ್ಕಾರ, ಸಾಷ್ಟಾಂಗ ನಮಸ್ಕಾರ ಇತ್ಯಾದಿ ಸೇವೆಯನ್ನು ಸಲ್ಲಿಸುತ್ತಾರೆ. ರಾಯರ ಮಂತ್ರಾಕ್ಷತೆಯನ್ನು ಪಡೆದುಕೊಂಡು ನಾವು ಹೊರಗೆ ಹೋಗುವ ದಾರಿಯಲ್ಲಿ ವಸ್ತು ಸಂಗ್ರಹಾಲಯವನ್ನು ನೋಡಲು ಹೋದೆವು. ಇಲ್ಲಿ ಯಾವುದೇ ಚೀಲ ಹಾಗೂ ಮೊಬೈಲ್ಗಳಿಗೆ ಅವಕಾಶವಿಲ್ಲ. ಅವುಗಳನ್ನು ಕೊಠಡಿಯಲ್ಲಿ ಬಿಟ್ಟು ಬರುವುದು ಉತ್ತಮ. ಈ ಸಂಗ್ರಹಾಲಯದಲ್ಲಿ ಹರಿದಾಸರ ಸಾಹಿತ್ಯದ ಸಚಿತ್ರವಿವರಗಳು ಕಾಣಸಿಗುತ್ತದೆ. ಬೃಂದಾವನದಲ್ಲಿ ಇರುವಷ್ಟು ಜನರ ಸಂದಣಿ ಇಲ್ಲಿ ಇಲ್ಲ. ಇದನ್ನು ಸರಿಯಾಗಿ ನೋಡಲು ಕನಿಷ್ಠಪಕ್ಷ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಒಂದನೇ ಮಹಡಿಯಲ್ಲಿ ಜಗನ್ನಾಥದಾಸರ ಉತ್ಕೃಷ್ಟ ಗ್ರಂಥ ಹರಿಕಥಾಮೃತಸಾರದ ಚಿತ್ರಣ ಕಾಣಸಿಗುತ್ತದೆ. ಹಾಗೆಯೇ ಅವರ ಜೀವನ ಚರಿತ್ರೆಯನ್ನು ಇಲ್ಲಿಯೇ ಓದಬಹುದು. 17ನೇ ಶತಮಾನದಲ್ಲಿ ಬದುಕಿದ್ದ ಇವರು ಒಂದು ಕಾಲದಲ್ಲಿ ಪ್ರಹಲ್ಲಾದರ ತಮ್ಮ ಸಹಲಾದರಾಗಿದ್ದರು ಎಂದು ತಿಳಿದು ಬರುತ್ತದೆ. ರಾಯರು ಪ್ರಹಲ್ಲಾದರ ಅಂಶ ಎಂದು ನಮಗೆಲ್ಲ ತಿಳಿದೇ ಇದೆ. ಕಲಿಯುಗದಲ್ಲಿ ಅಣ್ಣ ಮತ್ತು ತಮ್ಮನ ದರ್ಶನವನ್ನು ಮಂತ್ರಾಲಯದಲ್ಲಿ ಮಾಡಬಹುದು. ಪ್ರದರ್ಶನಾಲಯದ ವೀಕ್ಷಣೆಯ ನಂತರ ನಾವು ನಮ್ಮ ಕೊಠಡಿಗೆ ಮರಳಿದೆವು. ಮುಂದಿನ ಭಾಗದಲ್ಲಿ ನಮ್ಮ ಪ್ರವಾಸದ ಎರಡನೆಯ ದಿನದ ವಿವರಗಳನ್ನು ಬರೆಯುತ್ತೇನೆ. ಅಲ್ಲಿವರೆಗೆ ವಿರಾಮ.

Category:Travel



ProfileImg

Written by Sachin Mungila