ಹೆಣ್ಣಿನ ಬದುಕಿನ 40ರ ಹಿಂದೆ- ಮುಂದೆ!

ಕಾಲದ ಮಧ್ಯೆ ಹೆಣ್ಣಿನ ಬದುಕಿನ ಪಯಣ!

ProfileImg
18 Apr '24
7 min read


image

ವಯಸ್ಸು…

ಕಾಲ ವೇಗವಾಗಿ ನಡೆದಂತೆ ವಯಸ್ಸು ಕೂಡ ಬೇಗ ಮಾಗುತ್ತದೆ. ನೋಡ ನೋಡುತ್ತಿದ್ದಂತೆ ಬಾಲ್ಯ, ಯೌವ್ವನ, ಉದ್ಯೋಗ, ವಿವಾಹ, ಮಕ್ಕಳು ಹೀಗೆ ಜೀವನದ ಒಂದೊಂದೇ ಹಂತವನ್ನು ದಾಟಿಕೊಂಡು, ಒಂದು ದಿನ ಹಾಯಾಗಿ ಕೂತು ನಡೆದು ಬಂದ ದಾರಿಯನ್ನು ಅವಲೋಕಿಸಲು ಮುಂದಾದರೆ, ಮೊದಲು ಮನಸ್ಸು ನಿಧಾನವಾಗಿ ಹಿಂದಕ್ಕೆ ಚಲಿಸುತ್ತದೆ, ಜೀವನ ಅದೆಷ್ಟು ಬದಲಾಗಿದೆ ಅನ್ನುವ ಸಖೇದಾಶ್ಚರ್ಯ, ಆ ಕ್ಷಣಕ್ಕೆ, ಅಲ್ಲಿ ಉಂಟಾಗುತ್ತದೆ!

ಕಳೆದು ಹೋದ ಕಾಲ, ಅದು ಮರಳಿ ಬರದೇ ಇರಬಹುದು. ಆದರೆ ಅದು ಬಿಟ್ಟು ಹೋಗಿರುವ ನೆನಪುಗಳು ಮಾತ್ರ ನೆನಪಿಸಿಕೊಂಡಾಗಲೆಲ್ಲ, ಎಲ್ಲೋ ಒಂದೆಡೆ ಅದು ಬದುಕಿನ ಭಾರವನ್ನು ಹಗುರವಾಗಿಸುತ್ತದೆ. ‘ಅರೇ! ಇಷ್ಟು ಬೇಗ ಇಷ್ಟೆಲ್ಲ ಜೀವನದಲ್ಲಿ ನಡೆದೋಯ್ತಾ’ ಅಂತ ಯೋಚಿಸುತ್ತಿರುವಾಗಲೇ ಎದುರಿಗೆ ಭವಿಷ್ಯದ ಭಯವೂ ಕೂಡ ಎದುರಾಗಿ ನಿಂತಿರುತ್ತದೆ. ಜೀವನ ಅಂದರೇನೇ ಹಾಗೆ, ನಿನ್ನೆಯ ನೆನಪುಗಳು- ನಾಳೆಯ ಭಯಗಳ ಮಧ್ಯೆ ಇಂದಿನ ಜೀವನದ ಯಾನ. ಅದರಲ್ಲೂ ಮಹಿಳೆಯರ ಬದುಕಿನಲ್ಲಿ ಕಾಲ ಅದೆಷ್ಟು ವೇಗವಾಗಿ ಚಲಿಸಿರುತ್ತದೆಂದರೆ 40ರ ಹೊತ್ತಿಗೆ ಆಕೆ ಪುರುಷನಿಗಿಂತ ಹೆಚ್ಚು ಬದುಕನ್ನು ಕಂಡಿರುತ್ತಾಳೆ, ಅನುಭವಿಸಿರುತ್ತಾಳೆ ಮತ್ತು ಹೆಚ್ಚು ಪ್ರಬುದ್ಧಳಾಗಿರುತ್ತಾಳೆ. 

ಮಹಿಳೆ ಪುರುಷನಿಗಿಂತ ಭಿನ್ನ! 

ಒಬ್ಬ ಪುರುಷನ ಜೀವನದಲ್ಲಿ 40 ದಾಟಿದಾಗಲೂ ಅದರಲ್ಲಿವನಿಗೆ ಅಂತಹ ವಿಶೇಷತೆಯನ್ನು ಕಂಡು ಬರುವುದಿಲ್ಲ. ಅವನ ಮನಸ್ಸು, ದೇಹ, ಆಲೋಚನೆ ಇದೆಲ್ಲವೂ ಕೂಡ ಅವನದೇ ಆದ ಭ್ರಮಾಲೋಕದಲ್ಲಿಯೇ ವಿಹರಿಸುತ್ತಿರುತ್ತದೆ. ಆದರೆ ಹೆಣ್ಣು ಈ ವಿಷಯದಲ್ಲಿ ಅವನಿಂದ ಪೂರ್ವಭಿಮುಖವಾಗಿರುತ್ತಾಳೆ.  40ರ ಕಾಲಕ್ಕೆ ಆಕೆ ಬದುಕನ್ನು ಬಹಳಷ್ಟು ಅನುಭವಿಸಿರುತ್ತಾಳೆ. 12 ,13 ವರ್ಷಕ್ಕೆಲ್ಲ ಋತುಮತಿಯಾಗುವ ಅವಳು, ಸಣ್ಣ ವಯಸ್ಸಿಗೆ ಪ್ರತಿ ತಿಂಗಳು ಎದುರಾಗುವ ಋತುಚಕ್ರ, ಮುಟ್ಟು (menstruation) ಆ ಮಾನಸಿಕ ಖಿನ್ನತೆಯನ್ನು ಅನುಭವಿಸಿ, ಅನುಭವಿಸಿಕೊಂಡೆ ಬೆಳೆದಿರುತ್ತಾಳೆ. ಸಹಜವಾಗಿ ನಲವತ್ತಕ್ಕೆ ಪ್ರವೇಶಿಸಿದಾಗ ಅವಳಿಗೆ ಮುಟ್ಟು ನಿಲ್ಲುವ ಕಾಲ ಕೂಡ ಸಮೀಪಿಸಿರುತ್ತದೆ. 

ಸಾಧಾರಣವಾಗಿ ಹೆಣ್ಣು ಮಗಳು, ಕಾಲೇಜು ಹಂತಕ್ಕೆ ಬರೋದೆ ತಡ, ಆಸಕ್ತಿಯಿಂದಲೇ ಹೊಸ ಅಡುಗೆ ಕಲಿಯಲು ಮುಂದಾಗುತ್ತಾಳೆ. ಅಡುಗೆ ಮಾತ್ರವಲ್ಲ ಪಾತ್ರೆ, ಬಟ್ಟೆಯಲ್ಲೂ ಆಕೆ ತಾಯಿಗೆ ಜೊತೆಯಾಗುತ್ತಾಳೆ. ಹೆಣ್ಣು ಮಕ್ಕಳ ಒಂದು ವಿಶೇಷ ಗುಣವೆಂದರೆ, ಅವರ ಕಲಿಕಾಸಕ್ತಿ. ಕಲೀಬೇಕು ಅಂದರೆ ಮುಗಿದೋಯ್ತು, ಏನಾದರೂ ಸರಿಯೇ ಕಲಿತೆ ತೀರುತ್ತಾಳೆ. ಏನಾದರೂ ಮಾಡಬೇಕು ಅಂದರೆ ಮಾಡಿ ಮುಗಿಸುತ್ತಾಳೆ.

ಇನ್ನೂ, ಆಕೆ ಕಾಲೇಜು ಅಂತ ಹೊರಗೆ ಹೊರಟಾಗ, ಅದೆಷ್ಟೋ ಟೀನೇಜ್ ಕಾಮುಕರ ಕಣ್ಣು ಅವಳ ಮೇಲೆ ಬೀಳುತ್ತದೆ. ಅದು ರಸ್ತೆಯಲ್ಲಾಗಬಹುದು, ಅಂಗಡಿಯ ಮುಂದೆ ಆಗಬಹುದು, ಬಸ್ ಸ್ಟಾಪ್ ನಲ್ಲಿ ಆಗಿರಬಹುದು ಅವಳಡೆಗೆ ನೋಡುವ ಆ ಕಣ್ಣುಗಳು ಕೊಡುವ ಹಿಂಸೆ ಅನುಭವಿಸುವ ಆ ಹೆಣ್ಣು ಮಗುವಿಗೆ ಮಾತ್ರ ಗೊತ್ತಾಗುತ್ತದೆ. ಆಗಲೂ ಅವಳು ಸಂಯಮವನ್ನು ಕಳೆದುಕೊಳ್ಳುವುದಿಲ್ಲ. ಅದರಿಂದ ಅದೆಷ್ಟೇ ನೋವು, ಯಾತನೆಯಾದರು ಮನೆಯಲ್ಲಿ ಅದನ್ನು ಹೇಳಿಕೊಳ್ಳುವುದಿಲ್ಲ. ಪ್ರೀತಿ-ಪ್ರೇಮ ಅಂತ ಅನೇಕರು ಅವಳ ಹಿಂದೆ ಬೀಳುತ್ತಾರೆ, ಆಗಲೂ ಅವಳು ನಯವಾಗಿಯೇ ಅದನ್ನು ತಿರಸ್ಕರಿಸುತ್ತಾಳೆ.  ಇಲ್ಲಿ, ಇದರಲ್ಲಿ ಕೆಲವು ಹುಡುಗಿಯರು ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿ ಕೈ ಕೊಟ್ಟಾಗ ಜೀವ ಚೆಲ್ಲುತ್ತಾರೆ. ಮತ್ತೆ ಕೆಲವರದು ಅಪ್ಪ ಅಮ್ಮನಿಗಿಂತ ಪ್ರೀತಿಯೇ ದೊಡ್ಡದು ಅಂತ ಮನೆ ಬಿಟ್ಟು ಹೋಗುವ ಸಾಹಸವನ್ನು ಮಾಡುತ್ತಾರೆ. ಇರಲಿ ಈಗ ನಾವು ಅವರ ವಿಷಯದ ಕಡೆಗೆ ನೋಡುತ್ತಿಲ್ಲ, 40ತ್ತನ್ನು ಪ್ರವೇಶಿಸಿದ ಮಹಿಳೆಯ ಕಳೆದು ಹೋದ ಬದುಕಿನ ಒಂದಷ್ಟು ಸಂಗತಿಗಳನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ.

ಕಾಲೇಜ್ ಮುಗಿಯುವುದೇ ತಡ, ಅವಳಿಗೂ ಸಂಪಾದನೆಯ ಬಯಕೆ ಸಹಜ ಮತ್ತು ಈಗಿನ ಕಾಲದಲ್ಲಿ ಅದು ಅನಿವಾರ್ಯವೂ ಕೂಡ. ಒಂದು ಹೆಣ್ಣು ಮಗಳು ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿದಾಗ ಅಪ್ಪನ ಕಣ್ಣಲ್ಲಿ ಆನಂದಕ್ಕಿಂತ ಹೆಚ್ಚಿನ ಭಯ ಎದ್ದು ಕಾಣುತ್ತದೆ. 'ಅಯ್ಯೋ! ನನ್ಮಗಳು, ನಾನು ಮುದ್ದಾಗಿ ಬೆಳೆಸಿದ ಮಗಳು ಕೆಲ್ಸಕ್ಕೆ ಹೋಗಬೇಕಾ!?. ಮಗಳು ಮದುವೆಗೆ ಯಾವಾಗ ಮನಸ್ಸು ಮಾಡ್ತಾಳೋ, ಏನೋ? ಈಗಷ್ಟೇ ಕೆಲ್ಸಕ್ಕೆ ಸೇರಿದ್ದೀನಿ ಒಂದೆರಡು ವರ್ಷ ಬೇಡಪ್ಪ ಅಂತಾಳೆ. ನನ್ನ ಕೈ-ಕಾಲು ಗಟ್ಟಿಯಾಗಿರುವಾಗಲೇ ಇವಳಿಗೊಂದು ಮದುವೆ ಮಾಡಿ ಮುಗಿಸಿಬಿಡಬೇಕು' ಅನ್ನುತ್ತಿರುತ್ತದೆ ಅಪ್ಪನ ಅಂತರಾಳದ ಧ್ವನಿ. 

ಅಮ್ಮನ ಆಲೋಚನೆ ಇದಕ್ಕಿಂತ ಭಿನ್ನ. 'ಸಂಪಾದಿಸಿದ ದುಡ್ಡೆಲ್ಲ ಸುಮ್ನೆ ಖರ್ಚು ಮಾಡ್ಬಿಡಬೇಡ. ಆ ನೆಕ್ಲೆಸ್ ತಗೋ... ಈ ರಿಂಗ್ ತಗೋ...ಮದುವೆ ಕಾಲಕ್ಕೆ ಅವೆಲ್ಲ ಮತ್ತೆ ಮಾಡ್ಸೋ ಅಗತ್ಯ ಬೀಳಲ್ಲ' ಅನ್ನುತ್ತಾಳೆ. ಇನ್ನು ಮೊದಲನೇ ಸಂಬಳ ಕೈಗೆ ಬಿದ್ದ ಕ್ಷಣ ಹೆಣ್ಣು ಮಗಳ ಮನಸ್ಸು ಮೊದಲು ಆಲೋಚಿಸೋದು 'ಅಪ್ಪಂಗೆ ಯಾವ ತರದ ಶರ್ಟ್ ತಗೊಳ್ಳಿ' ಅಂತಲೇ! ಅದರ ಮರುಕ್ಷಣವೇ ಅಮ್ಮನ ಬಗ್ಗೆ ಅವಳ ಮನಸ್ಸು ಯೋಚಿಸುವುದು.  ಹೆಣ್ಣು ಮಕ್ಕಳೇ ಹಾಗೆ... ಮೊದಲು ಅವರಿಗೆ ಅಪ್ಪ, ನಂತರವೇ ಅಮ್ಮ! 

ಸಾಧಾರಣವಾಗಿ ಅಪ್ಪನ ಕಣ್ಣಲ್ಲಿ ಎರಡು ಸಂದರ್ಭಗಳಲ್ಲಿ ಬದುಕಿನ ಬಹುದೊಡ್ಡ ಆನಂದಗಳು ವ್ಯಕ್ತಗೊಳ್ಳುತ್ತದೆ.ಬೆಳೆದು ನಿಂತ ಮಗ, ಮೊದಲ ದಿನ ಕೆಲಸಕ್ಕೆ ಅಂತ ಹೊರಟಾಗ ಅದನ್ನು ನೋಡುವ ತಂದೆಯ ಕಣ್ಣಲ್ಲಿ ತನ್ನ ಮಗನ ಬಗ್ಗೆ ತಾನೆಲ್ಲಿಯೂ ಹೇಳಿಕೊಳ್ಳದೆ, ಮನಸ್ಸಿನಲ್ಲಿಯೇ ಅಡಗಿಟ್ಟಿಸಿಕೊಂಡ ಅಭಿಮಾನ  ಕಣ್ಣಂಚಿನಲ್ಲಿ ಆನಂದದ ಹನಿಗಳಾಗುತ್ತವೆ. ಅದೇ ತಂದೆಗೆ ಮಗಳ ವಿಷಯದಲ್ಲಿ  'ಮದುವೆ ಮಾಡಿ, ಸೂಕ್ತ ವರನ ಕೈಗೆ ಆಕೆಯನ್ನ ಒಪ್ಪಿಸಿ ಗೆದ್ದುಕೊಂಡೆ...' ಅನ್ನುವ ಕ್ಷಣಗಳು ಮನಸ್ಸಿಗೆ ಹೆಚ್ಚು ಆನಂದವನ್ನು ತರುತ್ತದೆ. ಆ ಆನಂದವನ್ನು ತಂದೆ ಯಾರೊಂದಿಗೂ ಹಂಚಿಕೊಳ್ಳಲು ಇಚ್ಚಿಸುವುದಿಲ್ಲ. ಎಲ್ಲಿಯೂ ಏನನ್ನು ಹೇಳದೆ, ಯಾರಿಗೂ ಕಾಣದಂತೆ ಒಂದೆಡೆ ಕೂತು 'ತನ್ನ ಅರ್ಧ ಜೀವವನ್ನು ಇನ್ನೊಬ್ಬರ ಬದುಕಿನ ಅರ್ಧ ಜೀವವಾಗಿಸಿದ' ಆನಂದದಿಂದ ಒಳಗೊಳಗೆ ಅಪ್ಪನು ಆನಂದಿಸುತ್ತಲೇ ಏಕಾಂಗಿಯಾಗಿ ಅಳುತ್ತಾನೆ.

ಇನ್ನು ಆ ಹೆಣ್ಣು, ಮದುವೆಯ ನಂತರ ಮತ್ತೊಂದು ಪ್ರಪಂಚಕ್ಕೆ ಕಾಲಿಡುತ್ತಾಳೆ. ಈಗ ಅವಳ ಬದುಕಿನಲ್ಲೊಬ್ಬ ಪುರುಷನ ಪ್ರವೇಶವಾಗಿದೆ. ಅವನೊಂದಿಗೆ ಅವನ ಕುಟುಂಬವೂ ಕೂಡ ಇವಳದಾಗಿದೆ. ತವರು ಮನೆ, ಅತ್ತೆ ಮನೆಯ ಮಧ್ಯೆ ಈಗವಳು ತನ್ನನ್ನು ತಾನು ಕಂಡುಕೊಳ್ಳುವ, ಹುಡುಕಿಕೊಳ್ಳುವ ಕಾಲ. ಈಗವಳು ಕೇವಲ  ಹೆಣ್ಣಲ್ಲ, ಮಹಿಳೆ! ವಿವಾಹಿತ ಮಹಿಳೆ. ಅವಳ ಮೇಲೆ ಜವಾಬ್ದಾರಿಗಳ ಹೊರೆ ತಾನಾಗೆ ಬಂದು ಬಿದ್ದುಕೊಂಡಿರುತ್ತದೆ. ಬೆಳಗೆದ್ದು ಮನೆ ಕೆಲಸ ಕಾರ್ಯಗಳು ಮುಗಿಸಬೇಕು, ತಿಂಡಿ ಅಡುಗೆ ಮಾಡಬೇಕು, ಏನೋ ಒಂದಷ್ಟು ಉಂಡು ಅದನ್ನೇ ಬಾಕ್ಸಿಗೆ ಹಾಕಿಕೊಂಡು ಆಫೀಸ್ ಗೆ ಹೊರಡಬೇಕು. ಆಫೀಸಿನಲ್ಲೊಂದು ವರ್ಕ್ ಪ್ರೆಶರ್, ಮತ್ತೆ ಮನೆಗೆ ಬರುವುದೇ ತಡ ಮತ್ತದೇ ಅಡುಗೆ ಮನೆಯೇ ಮತ್ತವಳ ಪ್ರಪಂಚವಾಗುತ್ತದೆ.

ಏತನ್ಮಧ್ಯೆ ಅವಳೊಂದು ಮಗುವಿಗೆ ತಾಯಿಯಾಗುತ್ತಾಳೆ. ತಾಯಿಯಾದ ಸಂಭ್ರಮದ ಜೊತೆಗೆ ಆಕೆಯ ಜವಾಬ್ದಾರಿಗಳು ಮತ್ತಷ್ಟು ಹಿಗ್ಗುತ್ತದೆ. ಭವಿಷ್ಯ ಅವಳಿಗೆ ಮೊದಲ ಬಾಣಂತನದ ಐದು ತಿಂಗಳು ಮಾತ್ರವೇ, ಅದೇನು ಸಂಭ್ರಮ, ಸಡಗರ. ತಿರುಗಿ ತನ್ನ ಕಾಲೇಜು ದಿನಗಳಷ್ಟು ಸಂತೋಷ ಅವಳಲ್ಲಿ. ಮೊದಲ ಬಾಣಂತನಕ್ಕೆ ತವರು ಮನೆಗೆ ಹೋಗುತ್ತಾಳೆ. ಅಮ್ಮ ಅಂತೂ ಒಂದೇ ಒಂದು ಕೆಲಸ ಮಾಡಕ್ಕೂ ಬಿಡಲ್ಲ. ಕಡೆಗೆ ಮಗು ಅತ್ತರೂ ಅಮ್ಮನೇ ಕೈಗೆತ್ತಿಕೊಂಡು ಅಕ್ಕರೆಯಿಂದ ಸುಧಾರಿಸುತ್ತಾಳೆ. ಅಪ್ಪನಿಗಂತೂ ಮಗಳು ಮನೆಗೆ ಬಂದು ಒಂದಷ್ಟು ಕಾಲ ತನ್ನೊಂದಿಗೆ ಇರುವ ಆನಂದ. ಅಪ್ಪನಂತೂ ಅಷ್ಟು ದಿನ ಮಗಳ ಜೊತೆಯಲ್ಲಿ ಆತ್ಮೀಯವಾಗಿ ಕಾಲ ಕಳೆಯುತ್ತಾನೆ. 

ಐದು ತಿಂಗಳು ಕಳೆಯುವುದೇ ತಡ, ಗಂಡ ಓಡೋಡಿ ಬರುತ್ತಾನೆ. 'ಮೊದಲು ಕಳಿಸಿಕೊಡಿ' ಎನ್ನುವಂತಿರುತ್ತದೆ ಅವನ ಮುಖಾಕೃತಿ. 'ಹೆಂಡ್ತಿ ಇಲ್ದೆ ಬದುಕಲಾರೆ ಅನ್ನೋದಕ್ಕಿಂತ ಅಡುಗೆ ಮಾಡಿಕೊಳ್ಳಲಾರೆ' ಅನ್ನೋದೇ ಅವನ ಸಂಕಟ. ಹೆಂಡತಿ-ಮಗುವನ್ನು ಮನೆಗೆ ಕರೆದುಕೊಂಡ ಬಂದ ಮೇಲೂ ಅವನ ಬದುಕು ಹಾಗೆಯೇ ಮುಂದುವರೆಯುತ್ತದೆ. ಅದೇ ಐಪಿಎಲ್ ಮ್ಯಾಚ್, ಅದೇ ಸ್ನೇಹಿತರು, ಅದೇ ಶೇರ್ ಮಾರ್ಕೆಟ್ ಇದ್ಯಾವುದನ್ನು ಅವನು ಕಡೆಗಣಿಸುವುದಿಲ್ಲ. ಅವನಿಗೆ ಮೂಡು ಇದ್ದಾಗ ಮಗುವನ್ನು ಎತ್ತಿ ಆಡಿಸುತ್ತಾನೆ. ಆಗವಳು ಅಡುಗೆ ಮಾಡ್ತಾ ಇರ್ತಾಳೆ. ಮಗು ಇವನ ಕೈಗೆ ಕೊಟ್ಟಿರ್ತಾಳೆ. ಒಂದು ಕಡೆ ಐಪಿಎಲ್ ಮ್ಯಾಚ್,  ಇನ್ನೊಂದು ಕಡೆ ಜೋರಾಗಿ ಅಳುತ್ತಾ ಇರೋ ಮಗು.'ಆಯ್ತಾ... ಮಗು ಅಳ್ತಾ ಇದೆ' ಒಂದು ಓವರ್ ನಲ್ಲಿ ಹತ್ತು ಬಾರಿ ಅಡುಗೆ ಮನೆ ಕಡೆಗೆ ಇವನ ಧ್ವನಿ ಹೊರಟಿರುತ್ತದೆ.

ಜೋರಾಗಿ ಅಳುವ ಮಗುವನ್ನು ಸಮಾಧಾನಿಸಲಾಗದ ಗಂಡು 'ಏನಾದ್ರೂ ಮಾಡ್ಕೋ' ಅಂತೇಳಿಕೋಪದಿಂದ ಅವಳ ಕೈಗೆ ಮಗುವನ್ನು ಕೊಡುತ್ತಾನೆ. ಮಗುವನ್ನು ಸುಧಾರಿಸಬೇಕು, ಅಡುಗೆ ಮಾಡಬೇಕು, ಮತ್ತೆ, ಅತ್ತೆ ಕಡೆಯಿಂದ ಒಂದು ಕರೆ ಬರುತ್ತೆ 'ಮಗುನಾ ಡೇ ಕೇರ್ ಸೆಂಟರ್ ಲ್ಲಿ ಬಿಟ್ಟು ನೀನ್ ಕೆಲ್ಸಕ್ಕೆ ಹೋಗಮ್ಮ...' ಅಲ್ಲಿಗೆ ತನ್ನ ಕರುಳಕುಡಿಯನ್ನು ‘ಡೇ ಕೇರ್’ ನಲ್ಲಿ ಬಿಟ್ಟು ಆಫೀಸಿಗೂ ಕೂಡ ಹೊರಡಬೇಕು.

ಈಗ ಇನ್ನೆರಡು ಹೆಚ್ಚುವರಿ ಕೆಲಸಗಳು ಅವಳ ಪಾಲಿಗೆ ವರ್ಗಾವಣೆಯಾಗುತ್ತದೆ. ಆಫೀಸಿಗೆ ಹೋಗುವ ಮೊದಲು ಮಗುವನ್ನು ಡೇ ಕೇರ್ನಲ್ಲಿ ಬಿಡಬೇಕು, ಸಂಜೆ ಆಫೀಸಿಂದ ಬರುವಾಗ ಮತ್ತೆ ಕರೆದುಕೊಂಡು ಬರಬೇಕು. ಸಂಜೆ ಗಂಡ ಬೇಗ ಬಂದರೂ ಮಗುವನ್ನು ಕರೆದುಕೊಂಡು ಬರುವುದಿಲ್ಲ. ಅದಕ್ಕವನದು 'ಮಗುನ ಕರ್ಕೊಂಡು ಬಂದ್ರೆ, ಅಮ್ಮ ಅಂತ ಅಳುತ್ತೆ' ಅನ್ನುವ ಬೇಜವಾಬ್ದಾರಿ ಉತ್ತರವಿರುತ್ತದೆ. ಮಕ್ಕಳ ಆರೈಕೆಯ ವಿಷಯದಲ್ಲಿ ಬಹುತೇಕ ಪುರುಷರದೊಂದು ಪಲಾಯನವಾದ. 'ತಾಯಿಯಾದವಳು ಹಾಗೆ ಯೋಚಿಸಲು ಸಾಧ್ಯವೇ?' ಎಷ್ಟೇ ಕಷ್ಟವಾದರೂ ಸರಿಯೇ ತನ್ನೆಲ್ಲ ಕಷ್ಟಗಳನ್ನು, ಕಾರ್ಯಗಳನ್ನು ಬದಿಗಿರಿಸಿ ಮಗುವಿನ ಆರೈಕೆಗೆ ಮೊದಲ ಆದ್ಯತೆ ನೀಡುತ್ತಾಳೆ.

ಮಗು ಬೆಳೆದು ಮೂರು, ನಾಲ್ಕು ವರ್ಷ ಆಗೋದೇ ತಡ, ಅತ್ತೆ ಕಡೆಯಿಂದ 'ಒಂದೇ ಮಗುವಾದ್ರೆ ಹೇಗೆ? ನಮ್ ಕೈ ಕಾಲು ಗಟ್ಟಿಯಾಗಿರುವಾಗಲೇ ಇನ್ನೊಂದ್ ಆಗ್ಬಿಡ್ಲಿ'.  ಕೈ ಕಾಲು ಗಟ್ಟಿಯಾಗಿದ್ದರೂ ಇವರು ಮಾಡೋದೇನು ಇಲ್ಲ. ಆದರೂ ಇನ್ನೊಂದು ಮಗುವಾಗಲಿ ಅಂತ ಒತ್ತಡ. ಇದಕ್ಕೆ ಗಂಡನದು ಒತ್ತಾಸೆ ಬೇರೆ. ಹಾಗೂ ,ಹೀಗೂ ಇನ್ನೊಂದು ಮಗು ಮಾಡಿಕೊಂಡರೆ, ಅಮ್ಮನಿಗೂ ವಯಸ್ಸು ಮೇಲೆ ಬಿದ್ದಿರುತ್ತದೆ ಆಕೆಗೂ ಕೂಡ ಈಗ ಆ ಹಿಂದಿನ ಲವಲವಿಕೆ ಇಲ್ಲ. ಕೈಕೊಡುತ್ತಿರುವ ಅಪ್ಪನ ಆರೋಗ್ಯ ಅವರ ಆರೈಕೆಗೆ ಅವಳ ಬಹುಪಾಲು ಸಮಯ ಮೀಸಲು. 

ಈಗ ಇವಳಿಗೂ ಕೂಡ ತವರು ಮನೆಗೆ ಹೋಗಲಾಗದ ಸಂಕಷ್ಟ. ದೊಡ್ಡ ಮಗು ಈಗಾಗಲೇ ಎಲ್ ಕೆ ಜಿ /ಯು ಕೆ ಜಿ ಹೋಗ್ತಾ ಇದೆ. ಒಂದು ವೇಳೆ ತವರಿಗೆ ಹೊರಡುವುದೆಂದರೆ ಅದನ್ನು ಒಂಟಿ ಮಾಡಿ ಹೋಗಬೇಕಾಗುತ್ತೆ. ಈ ವಿಷಯದಲ್ಲಿ ಗಂಡನದು ಸಸೆಮಿರಾ. 'ತವರು ಬೇಡ ಏನು ಬೇಡ...' ಅಂತಾನೆ. ಅದರಲ್ಲೂ ಅವನ ಸ್ವಾರ್ಥ ಎಂದು ಕಾಣುತ್ತದೆ. ಹೆಂಡತಿ ಮತ್ತೆ ತವರಿಗೆ ಹೋದರೆ ಅಡುಗೆ, ಪಾತ್ರೆ, ಬಟ್ಟೆ ಅಂತ ಎಲ್ಲಾ ತಾನೆ ಮಾಡ್ಕೋಬೇಕು. ಇನ್ನು ಮಗುನ ಬೇರೆ ಇಲ್ಲೇ ಬಿಟ್ಟು ಹೋದರೆ ಅದನ್ನು ನೋಡ್ಕೋಬೇಕು. 'ಡೆಲಿವರಿ ಟೈಮಿಗೆ, ಅತ್ತೇನ  ಮೂರು ತಿಂಗಳು, ನಂತರದಲ್ಲಿ ಅಮ್ಮನನ್ನ ಮೂರು ತಿಂಗಳು ಕರೆಸಿಕೊಂಡರೆ ಆಯ್ತು' ಅನ್ನೋದು ಅವನ ನೇರ ಮಾತುಗುಳು. ಹೆಚ್ಚು ಕಮ್ಮಿ ಡೆಲಿವರಿ ಟೈಮ್ ವರೆಗೂ ಅವಳು ಮನೆ , ಆಫೀಸು, ಮಗು, ಗಂಡ ಇವುಗಳ ಮಧ್ಯೆ ತಾನೊಂದು ಪ್ರೆಗ್ನೆಂಟ್ ಅನ್ನೋದನ್ನ ಕೂಡ ಮರೆತು ಹೋಗುತ್ತಾಳೆ.

ಇಷ್ಟರ ಮಧ್ಯೆ ಕೂಡ ಅವಳ ಗಂಡ ಹೇಗೆ ಅಂದರೆ? ಅವನು ಒಳ್ಳೆಯವನೇ, ಆದರೆ ನೆಟ್ಟಗೆ ಅಡುಗೆ ಮಾಡಲಾರ, ಮಕ್ಕಳನ್ನು ಹೆಚ್ಚು ಸುಧಾರಿಸಲಾರ, ಅಷ್ಟೇ! ಹಾಗೂ ಹೀಗೂ ಮಕ್ಕಳು ಕೂಡ ಬೆಳೆಯುತ್ತಾ ಹೋದಂತೆ ಇವಳ ಪ್ರಪಂಚ ಕೂಡ ಅದೇ ಆಗಿ ಹೋಗುತ್ತದೆ. ಮಕ್ಕಳಿಗೆ ಬೇಕಾದದ್ದನ್ನು ಮಾಡುವುದು, ಶಾಲೆಗೆ ರೆಡಿ ಮಾಡುವುದು, ಮನೆಗೆ ಬಂದ ಮೇಲೆ ಮತ್ತೊಮ್ಮೆಅವರುಗಳಿಗೆ ಸ್ನಾಕ್ಸು, ಓದ್ಸೊದು, ಅಡುಗೆ ಮಾಡೋದು ಮತ್ತೆ ಅವಕ್ಕೆ ಊಟ ಮಾಡ್ಸೋದು, ಗಂಡನೊಂದಿಗೆ ಅವಳು ಉಂಡು ಮತ್ತೆ ರಾತ್ರಿ ಪಾತ್ರೆಪಗಡೆ ತೊಳೆದಿಟ್ಟು, ಮತ್ತೆ ಯೋಚನೆ ಮಾಡುವುದು 'ಬೆಳಿಗ್ಗೆ ಏನು ತಿಂಡಿ ಮಾಡೋದು?' ಇಷ್ಟರಲ್ಲೇ ಅವಳ ಆ ಕಾಲವೆಲ್ಲ ಕಳೆದು ಹೋಗುತ್ತದೆ. ಹೌಸ್ ವೈಫ್ ಆದರೆ ದಿನದಲ್ಲೊಂದು ಚೂರು ಬಿಡುವು ಸಿಗುತ್ತೆ. ಅದೇ ಉದ್ಯೋಗಸ್ಥ ಮಹಿಳೆಗಾದರೆ ಅದರ ಹೊರೆ ಇನ್ನಷ್ಟು ಹಿಗ್ಗುತ್ತದೆ. 

ಹೀಗೊಂದು ಬದುಕನ್ನು ಮುನ್ನಡೆಸಿಕೊಂಡು ನಲವತ್ತರ ಗಡಿಗೆ ತಲುಪುವುದೇ ತಡ ಹೆಣ್ಣು ಅದೆಷ್ಟೋ ಜೀವನಾಭವಕ್ಕೆ ಒಳಗಾಗಿರುತ್ತಾಳೆ. ಈಗ ಮಕ್ಕಳು ಕೂಡ ಬೆಳೆದಿದ್ದಾರೆ, ಸ್ವತಂತ್ರವಾಗಿ ಊಟ ಮಾಡುವುದು, ಶಾಲೆ ಇಲ್ಲ ಕಾಲೇಜ್ ಹೋಗಿ ಬರುವುದು, ಓದಿಕೊಳ್ಳುವುದು ನಡೆದಿರುತ್ತದೆ. ಈಗೇನಿದ್ದರೂ ಹೇಗ್ ಓದ್ತಾ ಇದ್ದಾರೆ ಅಂತ ಗಮನಿಸಿದರೆ ಆಯ್ತು. ಅವರನ್ನು ಮುಂದೆ ಕೂಡಿಸಿಕೊಂಡು ಹೇಳಿಕೊಡುವ ಕಾಲವು ಅಲ್ಲ, ಅವರು ಕೂಡ ಅಮ್ಮನ ಮುಂದೆ ಕೂತು ಓದೋದಿಲ್ಲ.

ಈಗ ಅವಳಿಗೆ 40+. ವಯಸ್ಸು ಮೇಲೆ ಬಿದ್ದಂತೆ ಮಾಗಿ ಪರಿಪೂರ್ಣವಾದ ಬದುಕಿನ ಈ ಹಂತದಲ್ಲಿ ಅವಳಿಗೂ ಒಂದಷ್ಟು ಆರೋಗ್ಯದ ಸಮಸ್ಯೆಗಳು ಬೆನ್ನತ್ತಿರುತ್ತವೆ. ಬಹುಮುಖ್ಯವಾಗಿ calcium deficiency, thyroid, ಮೂಳೆ ಸೆಳೆತ, ಲೋ ಬಿಪಿ ಇವುಗಳು ಹೆಚ್ಚಾಗಿ ಈ ವಯಸ್ಸಿನಲ್ಲಿ ಮಹಿಳೆಯರನ್ನು ಹೆಚ್ಚಾಗಿ ಬಾಧಿಸುತ್ತವೆ. 40ರ ನಂತರ ಅವಳಿಗೊಂದು ಮಾನಸಿಕ ನೆಮ್ಮದಿ ಬಹಳ ಮುಖ್ಯ. ಹೀಗಾಗಿ ಆಕೆ ಆದಷ್ಟು ಈ ಸಮಯದಲ್ಲಿ ದೇವರು, ದೇವಸ್ಥಾನ, ಪೂಜೆ, ಆಧ್ಯಾತ್ಮ ಅಂತ ತನ್ನನ್ನು ತಾನು ಗಟ್ಟಿಗೊಳಿಸಿಕೊಳ್ಳುತ್ತಾಳೆ.

40 ಆಗಲಿ 50 ಆಗಲಿ ಪುರುಷರ ಬದುಕಿನಲ್ಲಿ ಹೆಣ್ಣಿನ ಜೀವನದಲ್ಲಾಗುವಷ್ಟು ಬದಲಾವಣೆಗಳೇನು ಆಗುವುದಿಲ್ಲ. ಏಕೆಂದರೆ ಅವನು ಮಹಿಳೆಯಂತೆ ಎಲ್ಲವನ್ನು ಸಂಭಾಳಿಸಲಾರ. ಎಸ್ …ಉದ್ಯೋಗ ಮಾಡ್ತಾನೆ, ಸಂಬಳ ತರ್ತಾನೆ, ಮನೆಗಂತಲೆ ಖರ್ಚು ಮಾಡ್ತಾನೆ, ಭವಿಷ್ಯಕ್ಕಾಗಿ ಒಂದಷ್ಟು ಹಣ ಉಳಿಸುತ್ತಾನೆ. ಆದರೆ ಸಮಸ್ಯೆಗಳು ಅಂತ ಎದುರಾದಾಗ ಅವನು ಎಲ್ಲಿಯೂ ಅದರ ಮುಂದೆ ನಿಲ್ಲುವುದಿಲ್ಲ. ಬದಲಾಗಿ ಹೆಂಡತಿಯನ್ನೇ ಮುಂದೆ ಮಾಡುತ್ತಾನೆ. ಅದು ಎಷ್ಟರಮಟ್ಟಿಗೆ ಎಂದರೆ ಮಕ್ಕಳಿಗೆ ಆಗಲಿ, ತನಗೆ ಆಗಲಿ ಸಣ್ಣ ಜ್ವರ ಬಂದರೂ ಆಕೆಯೇ ಡಾಕ್ಟರ ಬಳಿ ಎಲ್ಲವೂ ಹೇಳಬೇಕು, ಬಟ್ಟೆ ಶಾಪಿಂಗ್ ಅವಳೇ ಮಾಡಬೇಕು, ಎಲ್ಲದಕ್ಕೂ ಅವನದೊಂದೇ ಉತ್ತರ ‘ಅದೆಲ್ಲ ನಂಗ್ ಗೊತ್ತಾಗಲ್ಲ...’

ನಿಜ ಹೆಂಡತಿ ಎಲ್ಲವನ್ನು ಮಾಡಿಕೊಂಡು ಹೋಗುತ್ತಿರುವಾಗ ಗಂಡನಿಗೆ ಹೇಗೆ ತಾನೆ ಗೊತ್ತಾಗುತ್ತದೆ? ಬಹುತೇಕ ಗಂಡಸರುಗಳ ಅದೃಷ್ಟವೇನೆಂದರೆ, ''ಅದೆಲ್ಲ ನಂಗ್ ಗೊತ್ತಾಗಲ್ಲ...' ಅಂತ ಹೇಳುತ್ತಲೇ ಪರಮಪದಿಸುತ್ತಾರೆ. ಆಗಲೂ ಕೂಡ ಗಟ್ಟಿಗಿತ್ತಿಯಾದ ಹೆಣ್ಣು ಎಲ್ಲವನ್ನು ಸಂಭಾಳಿಸಿಕೊಂಡು, ಮಕ್ಕಳು, ಕುಟುಂಬವನ್ನು ಜೊತೆಗೆ ತೆಗೆದುಕೊಂಡು  ಬದುಕಿನ ಕೊನೆಯ ಕ್ಷಣದವರೆಗೂ ತನ್ನವರಿಗಾಗಿಯೇ ಬದುಕುತ್ತಾಳೆ! 

Photo courtesy: Google

Disclaimer: This post has been published by Ravindra Kotaki from Ayra and has not been created, edited or verified by Ayra
Category:Parenting and Family



ProfileImg

Written by Ravindra Kotaki

Verified

ಲೇಖಕ/ಅಂಕಣಕಾರ