ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ

ಆತ್ಮ ಕಥೆಯ ಬಿಡಿ ಭಾಗಗಳು- 9

ProfileImg
18 May '24
5 min read


image

ಹೆಣ್ಣು ಮಕ್ಕಳು ಸದಾ ಜಾಗ್ರತೆಯಿಂದ ಇರಬೇಕು. ನಾನು ಕೂಡಾ ಆ ಕ್ಷಣದಲ್ಲಿ ಎಚ್ಚತ್ತು ಕೊಂಡಿದ್ದೆ.ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ..ಮೋಸದ ಹಲವು ಜಾಲಗಳಿವೆ.ನಮ್ಮನ್ನು ಕೆಡವಲು ಕಾಯುತ್ತಿರುತ್ತವೆ.ಸಾಮಾನ್ಯವಾಗಿ ಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲೇ ಮೋಸ ಮಾಡುದು ಎಲ್ಲೆಡೆ ಕಾಣಿಸ್ತಿದೆ.

 

ಆ ವ್ಯಕ್ತಿ ಕೆಟ್ಟವನೆಂದು ನನಗೆ ಅನಿಸಿಲ್ಲ ಆದರೂ ಆತನ ನಡೆ ಇಂದಿಗೂ ನನ್ನ ಪಾಲಿಗೆ ನಿಗೂಢವೇಆತನಾರು? ಆತನ ಉದ್ದೇಶ ಏನಿದ್ದಿರಬಹುದು?

ನನಗೆ ಇಂದಿಗೂ ಗೊತ್ತಾಗದ ವಿಚಾರ ಇದು.

 

2012 ಅಕ್ಟೋಬರ್ ನಲ್ಲಿ‌ ಪ್ರಸಾದರಿಗೆ  ಹೃದಯದ ಸಮಸ್ಯೆ ಉಂಟಾಗಿ ಅಸ್ಪತ್ರೆಗೆ ದಾಖಲಾಗಬೇಕಾಯಿತು.ಈ ಸಮಯದಲ್ಲಿ ಬೆಂಗಳೂರಿನಲ್ಲಿ‌ ಪ್ರಸಾದರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ.ನಾನು ಬೆಳ್ಳಾರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ.

ಅ ಸಮಯದಲ್ಲಿ ಬಹಳ ಸಹೃದಯಿಗಳಾದ ಚಕ್ರವರ್ತಿ ಮೋಹನ್ ಎಂಬ ಐ ಎ ಎಸ್ ಅಧಿಕಾರಿಗಳು ನಮ್ಮ ಇಲಾಖೆಯ ನಿರ್ದೇಶಕರಾಗಿದ್ದರು.ಅವರಿಗೆ ನಾನು ವಿಷಯ ತಿಳಿಸಿದೆ.ಸಹೃದಯಿಯಾದ ಅವರು ನನಗೆ ಬೆಂಗಳೂರಿನ ಚಾಮರಾಜ ಪೇಟೆಯ ಸರ್ಕಾರಿ ಪಿಯು ಕಾಲೇಜು ಹೊಸಕೋಟೆಗೆ ನಿಯೋಜನೆ ನೀಡಿದರು.

 

ಶೈಕ್ಷಣಿಕ ವರ್ಷದ ಕೊನೆಗೆ ನಿಯೋಜನೆಯ ಅವದಿ ಮುಗಿದು ಮತ್ತೆ ಬೆಳ್ಳಾರೆ ಕಾಲೇಜಗೆ ಕರ್ತವ್ಯಕ್ಕೆ ಹಾಜರಾದೆ.ನಂತರ ಪುನಃ ಜೂನ್ ನಿಂದ ಸರ್ಕಾರಿ‌ ಪಿಯು ಕಾಲೇಜು ಕೊನಗಟ್ಟಕ್ಕೆ ನಿಯೋಜನೆ ದೊರೆಯಿತು.

ಅಲ್ಲಿಗೆ ಜುಲೈ ತಿಂಗಳ ಕೊನೆಗೆ ಉಪನ್ಯಾಸಕರೊಬ್ಬರು ವರ್ಗಾವಣೆಯಾಗಿ ಬಂದರು

 

ಆಗ ಮತ್ತೆ ನಾನು ಮಾಗಡಿ ಹ್ಯಾಂಡ್ ಪೋಸ್ಟ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡಹುದ್ದೆ ಖಾಲಿ ಇರುವುದು ತಿಳಿದು  ಅಲ್ಲಿಗೆ ನಿಯೋಜನೆ ಪಡೆಯಲು ಅರ್ಜಿ ಸಲ್ಲಿಸಿದೆ.

 

ಈ ಕಾಲಕ್ಕಾಗುವಾಗ ನಮ್ಮ ಇಲಾಖೆಯ ನಿರ್ದೇಶಕರು ಬದಲಾಗಿದ್ದರು.ಬದಲಾಗಿ ಬಂದ ನಿರ್ದೇಶಕರು ಮತ್ತು ನನಗೆ ಬೆಳ್ಳಾರೆಯಲ್ಲಿ ಕಿರುಕುಳ ಕೊಟ್ಟ ಪ್ರಿನ್ಸಿಪಾಲ್ ಸುಬ್ರಾಯ ಗೌಡ ಬಹಳ ಪರಿಚಿತರಾಗಿದ್ದರು .ಅದರಿಂದಾಗಿ ನನಗೆ ನಿಯೋಜನೆ ಸಿಗಲಿಲ್ಲ( ಹಾಗೆಂದು ಸುಬ್ರಾಯ ಗೌಡರೇ  ಹೇಳಿಕೊಂಡಿದ್ದರು.) ಯಾರಿಗೂ ನಿಯೋಜನೆ ಕೊಡುವುದಿಲ್ಲ ಈ ವರ್ಷ ಎಂದಿದ್ದರು.ಆ ಸಮಯದಲ್ಲಿ ಬೆಳ್ಳಾರೆಯ ಇಂಗ್ಲಿಷ್ ಉಪನ್ಯಾಸಕಿ ಸುಮಾ ಅವರು ನಿಯೋಜನೆ ಪಡೆದು ಮೈಸೂರಿನಲ್ಲಿ ಕೆಲಸಮಾಡುತ್ತಿದ್ದರು.ಅವರಿಗೆ ನಿಯೋಜನೆ ಸಿಕ್ಕ ಬಗ್ಗೆ ಹೇಳಿದಾಗ ಆದೇಶದ ಪ್ರತಿ ತರಲು ಹೇಳಿದರು.

 

ಮತ್ತೆ ನಾನು ನಿರ್ದೆಶಕರಿಗೆ ಅವರಿಗೆ ನಿಯೋಜನೆ ಸಿಕ್ಕ ಆದೇಶದ ಪ್ರತಿ ನೀಡಲಿಲ್ಲ ‌ನಾನು ಜಿದ್ದಿಗೆ ನಿಂತು ನಮ್ಮ ಇಲಾಖೆಯ ವೆಬ್ ನಿಂದ ಅವರಿಗೆ ಸಿಕ್ಕ ನಿಯೋಜನೆಯ ಪ್ರತಿಯನ್ನು ಡೌನ್ ಲೋಡ್ ಮಾಡಿನೀಡಿದರೆ ಅವರ ನಿಯೋಜನೆ ರದ್ದಾಗುತ್ತಿತ್ತೇ ಹೊರತು ನನಗೆ ಸಿಗುತ್ತಿರಲಿಲ್ಲ..

 

ಹಾಗಾಗಿ ನನಗೆ ಇಲಾಖೆಯಲ್ಲಿ ನನ್ನ ಆತ್ಮೀಯರಾಗಿದ್ದ ಸಹಾಯಕ ನಿರ್ದೇಶಕರೊಬ್ಬರು ಶಿಕ್ಷಣ ಇಲಾಖೆಯ ಕಾರ್ಯ ದರ್ಶಿಗಳಲ್ಲಿ ಮನವಿ ಮಾಡಲು ತಿಳಿಸಿದರು.

ಹಾಗೆ ನಾನು ಬಹುಮಹಡಿ ಕಟ್ಟಡದಲ್ಲಿ ಇರುವ ಕಾರ್ಯ ದರ್ಶಿಗಳ ಕಛೇರಿಗೆ ಬಂದು ಕಾರ್ಯದರ್ಶಿಗಳಾಗಿದ್ದ ಐ ಎ ಎಸ್ ಆಫೀಸರ್  ರಾಜಕುಮಾರ್ ಕತ್ತಿ ಯವರಿಗೆ ವಿಷಯತಿಳಿಸಿ ನಿಯೋಜನೆ ನೀಡಲು ವಿನಂತಿಸಿದೆ.ಅವರು ಆಯಿತೆಂದು ಒಪ್ಪಿದರು.ಎರಡು ದಿನ ಬಿಟ್ಟು ಬರಲು ಹೇಳಿದರು.

 

ದುರದೃಷ್ಟವಶಾತ್ ಎರಡುದಿನಗಳಲ್ಲಿ ಅವರಿಗೆ ಬೇರೆ ಇಲಾಖೆಗೆ ವರ್ಗವಾಯಿತು.

ಹಾಗಾಗಿ ನನ್ನ ನಿಯೋಜನೆಯ ವಿಚಾರ ಅಲ್ಲೇ ನೆನೆಗುದಿಗೆ ಬಿದ್ದಿತು.ಅಗ ಅಲ್ಲಿ  ಇದ್ದ ಸಹಾಯಕ ಕಾರ್ಯ ದರ್ಶಿ ಅಗಿದ್ದ ವ್ಯಕ್ತಿಯಲ್ಲಿ ವಿಚಾರಿಸಲು ಹೋದರೆ ಖಾಲಿ ಕೈಯಲ್ಲಿ ಹೋದ ನನ್ನನ್ನು  ತಲೆ ಎತ್ತಿ ನೋಡಲಿಲ್ಲ..ನಾನು ಇದಾಗುವ ಕೆಲಸವಲ್ಲ ಎಂದು ಹೊರಗೆ ಬಂದೆ.

 

ಆ ಸಮಯದಲ್ಲಿ ನನಗೆ ಅಲ್ಲಿಗೆ ಬಂದಿದ್ದ ವ್ಯಕ್ತಿ ಒಬ್ಬರ ಪರಿಚಯ ಆಯಿತು.ಅತ ಸುಮಾರು ಮೂವತ್ತು ಮೂವತ್ತೈದರ ತರುಣ.ನಾನು ಹೊರಗಡೆ ಬಂದಾಗ ಅವರು ಕೂಡಾ ಹೊರಗಡೆ ಬಂದು ನನ್ನ ಸಮಸ್ಯೆಯನ್ನು ಅವರಾಗಿ ಕೇಳಿ ತಿಳಿದರು.ನಾನು ಹೇಳಿದೆ.ಆಗ ಅವರು ನನಗೆ ಕಾರ್ಯದರ್ಶಿಗಳ ಕಛೇರಿಯಲ್ಲಿ ಪರಿಚಯದವರು ಇದ್ದಾರೆ .ನಾನು ಮಾತನಾಡಿ ನಿಯೋಜನೆ ಕೊಡಿಸುತ್ತೇನೆ.ನಾಳೆ ಬನ್ನಿ ಎಂದು ಅವರ ಮೊಬೈಲ್ ನಂಬರ್ ಕೊಟ್ಟರು.

 

ಮರುದಿನ ಪೋನ್ ಮಾಡಿ ಅವರ ಸಮಯಕೇಳಿಕೊಂಡು ಹೋದೆ.ಅವರು ಕಾಯುತ್ತಿದ್ದರು.

ಅವರಿಗೆ ಅಲ್ಲಿನವರ ಪರಿಚಯ ಇದ್ದದ್ದು ಹೌದು.ಕೆಲವರು ಇವರಿಗೆ ವಿಶ್ ಮಾಡಿದ್ದನ್ನು ಗಮನಿಸಿದೆ.

 

ಅಲ್ಲಿ ಓರ್ವ ಕ್ಲರ್ಕ್ ನನಗೆ ನಿಯೋಜನೆ ನೀಡುವಂತೆ ಕಾರ್ಯದರ್ಶಿಗಳು ಇಲಾಖೆಗೆ ಬರೆದಿರುವ ಬಗ್ಗೆ ಮಾಹಿತಿ ನೀಡಿದರು.

ನಂತರ ಎರಡು ದಿನ ಕಳೆದು ಬರಲು ಹೇಳಿದರು.

ಮತ್ತೆ ಎರಡು ದಿನ ಬಿಟ್ಟು ಅ ವ್ಯಕ್ತಿಗೆ ಕರೆ ಮಾಡಿ ಹೋದೆ.

ಸಂಜೆ ಹೊತ್ತು ನಾಲ್ಕುಗಂಟೆಗೆ ಬರಲು ಹೇಳಿದ್ದರು.

ಅ ದಿನವೂ ಹೊರಗೆ ಕಾದಿದ್ದರು.ಅವರಲ್ಲಿ  ಕಚೇರಿಗೆ ಹೋಗುವ ಎಂದೆ.

 

ಆಗ ಅವರು ಬೇಡ..ಈಗ ತಡ ಅಯಿತು‌.ಈಗ ಯಾರೂ ಸಿಗುವುದಿಲ್ಲ‌‌ .ಬನ್ನಿ ಹೋಟೆಲಿಗೆ ಹೋಗೋಣ ಎಂದರು. 

ತಕ್ಷಣ ನನಗೇಕೋ ಅಪಾಯದ ವಾಸನೆ  ಬಡಿಯಿತು‌.ಯಾವ ಹೋಟೆಲ್ ಎಂದು ಕೇಳಿದೆ.ಅಲ್ಲೇ ರಸ್ತೆ ಬದಿಯಲ್ಲಿ ಇರುವ ಉಪಾಹಾರ ದರ್ಶಿನಿಗಾದರೆ ಹೋಗುದರಲ್ಲಿ ತಪ್ಪೇನೂ ಇರಲಿಲ್ಲ.

 

ಆದರೆ ಅವರು ಅಲ್ಲಿಗೆ ಸಮೀಪದಲ್ಲಿ ಅವರ ಸ್ನೆಹಿತರ  ಲಾಡ್ಜ್ ಕಮ್ ಹೋಟೆಲಿದೆ ಅಲ್ಲಿ  ತಾನು ಉಳಿದುಕೊಂಡಿದ್ದೇನೆ .ಅಲ್ಲಿಗೆ ಹೋಗೋಣ" ಎಂದರು.

ಇಲ್ಲ..ನಾನು ಹಾಗೆಲ್ಲ ಅಪರಿಚಿತರ ಜೊತೆಗೆಹೋಟೆಲಿಗೆ ಹೋಗುವುದಿಲ್ಲ ಎಂದು ನೇರವಾಗಿ ಹೇಳಿದೆ.ನಿಯೋಜನೆ ಸಿಗದಿದ್ದರೆ ಸಾಯಲಿ..ಅಪರಿಚಿತರ ಜೊತೆಗಿನ ಒಡನಾಟ ಅಪಾಯಕಾರಿಯದು ಎನಿಸಿತು.

ವೇತನ ರಹಿತ ರಜೆ ಹಾಕುದು ಎಂದು ನಿರ್ಧರಿಸಿದೆ.

ಹಾಗೆಯೇ ಮಾಡಿದೆ.

 

ನಂತರ ಪ್ರಸಾದರಿಗೆ  ಚಿಕಿತ್ಸೆ ಫಲಿಸಿ ಗುಣಮುಖರಾದರು.ಅಷ್ಟಾಗುವಾಗ ಬಿ ಎಡ್ ಓದಲು ನಮಗೆ ಒಂದು ವರ್ಷದ ವೇತನ ಸಹಿತ ರಜೆ ಸಿಕ್ತು.ಬಿಎಡ್ ಮುಗಿಯುವಷ್ಟರಲ್ಲಿ ನಮಗೆ ನಿರ್ದೇಶಕರಾಗಿ ಬಹಳ ಸಹೃದಯಿಗಳಾಗಿದ್ದ ಸುಷ್ಮಾ ಗೋಡಬೋಲೆಯವರಿದ್ದರು.ಅವರು ನನಗೆ  ಸರ್ಕಾರಿ ಪಿಯು ಕಾಲೇಜು ಸೂಲಿಬೆಲೆಗೆ ನಿಯೋಜನೆ ನೀಡಿದರು.

ಮತ್ತೆ ಶೈಕ್ಷಣಿಕ ವರ್ಷಾಂತ್ಯಕ್ಕೆ ನಿಯಮಾವಳಿಯಂತೆ ಬೆಳ್ಳಾರೆ ಕಾಲೇಜಿಗೆ ಹೋದೆ.

 

ನಂತರ ಬೇಸಗೆ ರಜೆ..ಜೂನ್- ಜುಲೈ  ನಲ್ಲಿ  ಜೆನರಲ್ ಟ್ರಾನ್ಫರ್ ಇತ್ತು.ಈ ಬಾರಿ ಬಿಎಡ್ ಪದವಿ ಪಡೆದು ನನ್ನ ಕೆಲಸ ಖಾಯಂ ಪೂರ್ವ ಪರೀಕ್ಷಾವಧಿ ತೃಪ್ತಿಕರ ಎಂದು ಘೋಷಣೆ ಅಗಿ ಟ್ರಾನ್ಸ್ಫರ್  ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದ್ದೆ.

 

ಬೆಂಗಳೂರು ಸುತ್ತಮುತ್ತಲಿನ ಕಾಲೇಜಿಗೆ ಟ್ರಾನ್ಸಪರ್ ಸಿಗಬಹುದು.ಒಂದೊಮ್ಮೆ ಸಿಗದಿದ್ದರೆ ಮತ್ತೆ ನಿಯೋಜನೆ ಕೇಳಿದರಾಯಿತು.ಒಂದೆರಡು ತಿಂಗಳು ತಾಯಿ ಮನೆಯಿಂದ ಬೆಳ್ಳಾರೆ ಕಾಲೇಜಿಗೆ ದಿನಾಲು ಹೋಗಿ ಬರುವುದೆಂದು ನಿರ್ಧರಿಸಿ ಹಾಗೆಯೇ ಮಾಡಿದೆ.

 

ನನ್ನ ದುರದೃಷ್ಟವೋ ಅಥವಾ ಪ್ರಿನ್ಸಿಪಾಲ್ ಮತ್ತವರ ಬೆಂಬಲಿಗರ ದುರದೃಷ್ಟವೋ ಗೊತ್ತಿಲ್ಲ‌

 

ಜೂನ್ ಜುಲೈ ತಿಂಗಳಿನಲ್ಲಿ ಆಗುತ್ತಿದ್ದ ವರ್ಗಾವಣೆ ಮುಂದೆ ಹೋಗಿ ಸೆಪ್ಟಂಬರ್ ಬಂದರೂ ಆಗಲಿಲ್ಲ.

ಈ ಸಮಯದಲ್ಲಿ ಹಿಂದಿನ ದ್ವೇಷ ಇಟ್ಟುಕೊಂಡು ಆ ಪ್ರಿನ್ಸಿಪಾಲ್ ಮತ್ತು ಕೆಲವು ಸಹೋದ್ಯೋಗಿಗಳು ನನಗೆ ಕಿರುಕುಳ ನೀಡಿದ್ದರು ಅಗ ಅವರುಗಳ ಮೇಲೆ ಸುಳ್ಯ ಪೋಲೀಸರಿಗೆ ದೂರು ನೀಡಿದ್ದೆ.

ಅದಾಗಿ ಕೆಲವೇ ದಿನಗಳಲ್ಲಿ ವರ್ಗಾವಣೆ ಕೌನ್ಸಿಲಿಂಗ್ ನಡೆಯಿತು‌.

 

ನನ್ನ ಸರದಿ ಬರುವಾಗ ನೆಲಮಂಗಲ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿ ತೋರಿಸುತ್ತಿತ್ತು.ಬದುಕಿದೆಯಾ ಬಡಜೀವ..ಎಂದು ಅದನ್ನೇ ಅಯ್ಕೆ ಮಾಡಿಕೊಂಡು ,ನನ್ನವರಾರೂ ಇಲ್ಲದ ಬೆಳ್ಳಾರೆಯ ವಿಷ ವರ್ತುಲದಿಂದ ಪಾರಾಗಿ ಬಂದೆ.

 

ಮತ್ತೆಂದೂ ನನಗೆ ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಲಿಲ್ಲ.

ಬೆಳ್ಲಾರೆಯಲ್ಲಿ ಕೂಡಾ ಸುಬ್ರಾಯ ಗೌಡ ಪ್ರಿನ್ಸಿಪಾಲ್ ಆಗಿ ಬರುವ ತನಕ ಯಾವುದೇಸಮಸ್ಯೆ ಅಗಿರಲಿಲ್ಲ ನನಗೆ..ಕೆಲವು ಹೈಸ್ಕೂಲಿನ ಸ್ಟಾಪ್ ( ಅಲ್ಲಿ ಹೈಸ್ಕೂಲ್ ಮತ್ತು ಪಿಯು ಕಾಲೇಜು ಒಟ್ಟಿಗೆ ಇತ್ತು) ಮತ್ಸರದಿಂದ ಏನೇನೋ ಕಿತಾಪತಿ ಮಾಡಲು ಹೊರಟಿದ್ದರೂ ನನ್ನನ್ನು ಏನೂ ಮಾಡಲಾಗಿರಲಿಲ್ಲ..

 

ಸುಬ್ರಾಯ ಗೌಡ ಪ್ರಿನ್ಸಿಪಾಲ್ ಆಗಿ ಬಂದಾಗ ಕಿರುಕುಳ ಕೊಡಲು ಶುರುಮಾಡಿದರು.ಹೈಸ್ಕೂಲಿನಲ್ಲಿ ಡ್ರಾಯಿಂಗ್ ಮಾಸ್ಟ್ರಾಗಿದ್ದ ಮಾಬಲ ಕುಳ ಎಂಬವರಿಗೆ ನನ್ನಲ್ಲಿ ವಿಪರೀತ ಮತ್ಸರ ಇತ್ತು.ಆತ   ಮತ್ತು ಈ ಸುಬ್ರಾಯ ಗೌಡ ಬಹಳ ಸ್ನೇಹಿತರು‌( ಇಬ್ಬರೂ ಅಕಾಲದಲ್ಲಿ ಮರಣವನ್ನಪ್ಪಿದ್ದಾರೆ ) ಇವರಿಬ್ಬರ ಜೊತೆಗೆ ಇನ್ನೂ ಕೆಲವು ಸೇರಿಕೊಂಡು ಕಿರುಕುಳ ನೀಡಿದ್ದರು.ಅವರುಗಳ ಮೇಲೆ ಎಪ್ ಐ ಅರ್ ಆಗಿ ಸುಳ್ಯ ಕೋರ್ಟ್ ನಲ್ಲಿ ಕೇಸ್  ನಡೆಯುತ್ತಿದೆ..

 

ಅದಿರಲಿ..ನನಗೆ ಆಗಾಗ ನೆನಪಾಗುದು ನನಗೆ ನಿಯೋಜನೆ ಕೊಡಿಸುತ್ತೇನೆ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯ ವಿಚಿತ್ರ ನಡೆ‌.

 

ಆತನೇಕೆ ಸಂಜೆ ಹೊತ್ತು ಬರಲು ಹೇಳಿದ ? ನಂತರ ಈಗ ಅಧಿಕಾರಿಗಳು ಯಾರೂ ಸಿಗುವುದಿಲ್ಲ..ಹೋಟೆಲ್ ಗೆ ಹೋಗೋಣ ಎಂದ..ಆತನದು ಬೇರೇನಾದರೂ ವ್ಯವಹಾರ ಇದ್ದಿರಬಹುದಾ ? ಅಥವಾ ನಾನು ವಿನಾ ಕಾರಣ ಆತನನ್ನು ಸಂಶಯಿಸಿದೆನೇ ? ಮತ್ತೆಂದೂ ನಾನವರನ್ನು ನೋಡಲಿಲ್ಲ.ಅವರ ಮೊಬೈಲ್ ನಂಬರ್ ಕೂಡ ಅಸ್ತಿತ್ವದಲ್ಲಿ ಇರಲಿಲ್ಲ

ನಾನೇನಾದರೂ ಆತನನ್ನು ನಂಬಿ ಹೋಟೆಲ್ ಗೆ ಹೋಗಿದ್ದರೆ ಅಪಾಯ ಆಗ್ತಿತ್ತಾ.? ಆತನದೇನಾದರೂ ಹುನ್ನಾರ ಇದ್ದಿರಬಹುದಾ ? ಆತ ಬಹಳ ಸಾತ್ವಿಕ ವ್ಯಕ್ತಿ ಅಗಿದ್ದರೆ ನಾನು ಹೋಟೆಲಿಗೆ ಬರುವುದಿಲ್ಲ ಎಂದ ಬಗ್ಗೆ ತಪ್ಪೆಣಿಸಬೇಕಿರಲಿಲ್ಲ..

 

ನಾನು ಬರುವುದಿಲ್ಲ ಎಂದಾಗ  ತಕ್ಷಣವೇ  ದುರ್ದಾನ ತಗೊಂಡವರಂತೆ ಒಂದೂ ಮಾತನಾಡದೆ ಅಲ್ಲೇ ಕಾದಿದ್ದ ಅಟೋ ಎಂಬಂತೆ ನಿಂತಿದ್ದ ಅಟೋ ಹತ್ತಿ ಹೋಗಬೇಕಿರಲಿಲ್ಲ

ಅಥವಾ ಸಹಾಯ ಮಾಡಲು ಬಂದ ಅವರನ್ನು ಸಂಶಯಿಸಿದ್ದು ಅವರಿಗೆ ನೋವಾಗಿ ದಡಕ್ಕನೇ ಎದ್ದು ಹೋದರಾ ? ಹಾಗಿದ್ದರೆ ಅದೇ ದಿನ ಅವರ ಮೊಬೈಲ್ ಗೆ ಕರೆ ಮಾಡಿದಾಗ ಆ ಸಂಖ್ಯೆ ಇಲ್ಲ ಎಂದು ಹೇಗೆ ಬಂತು ?

 

 ಇಂದಿಗೂ ಆ ವ್ಯಕ್ತಿಯ ನಡೆಯ ಬಗ್ಗೆ ಏನೆಂದೂ ನಿರ್ಣಯಿಸಲು ನನಗೆ ಸಾಧ್ಯವಾಗಿಲ್ಲ..ಆದರೂ ಅಪರಿಚಿತರ ಜೊತೆಗೆ ಹೋಟೆಲ್ ಕಮ್ ಲಾಡ್ಜ್ ಗೆ ಹೋಗದಿರುವ  ನನ್ನ ನಿರ್ಧಾರ ತಪ್ಪೆನಿಸಿಲ್ಲ ನನಗೆ..ಮಾಮೂಲಿ  ರಸ್ತೆ ಬದಿಯ ಒಂದು ಹೋಟೆಲಿಗೆ ಹೋಗುದು ಬೇರೆ ..ಲಾಡ್ಜ್ ಕಮ್ ಹೋಟೆಲಿನೊಳಗೆ ಹೋಗುವುದು ಬೇರೆ..ಆ ವ್ಯಕ್ತಿಯ ಹೆಸರು ನನಗೆ ನೆನಪಿದೆ.ಅದರೆ ಅತ ಒಂದೊಮ್ಮೆ ನಿಜಕ್ಕೂ ಸಹೃದಯಿ ಆಗಿದ್ದು ನನಗೆ ಸಹಾಯ ಮಾಡಲು ಯತ್ನ ಮಾಡಿದವರೇ ಅಗಿದ್ದರೆ ನಾನವರ ಹೆಸರು ಹಾಕುದು ತಪ್ಪಾಗುತ್ತದೆ ಹಾಗಾಗಿ ಅವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲ.

 

ಸ್ತ್ರೀಯಾಗಿ ನನ್ನೆಚ್ಚರಿಕೆಯನ್ನು ನಾನು ವಹಿಸಿದ್ದು ತಪ್ಪೆಂದು ನನಗೆ ಇಂದಿಗೂ ಅನಿಸುತ್ತಿಲ್ಲ..

ಒಂದು ಮಾತ್ರ ನಾನು ಹೇಳಬಲ್ಲೆ..ಯಾರನ್ನೂ ಸುಲಭಕ್ಕೆ ನೂರಕ್ಕೆ ನೂರು  ನಂಬಬಾರದು .ಮಹಿಳೆಯರು ತಮ್ಮ ರಕ್ಷಣೆಯ ಬಗ್ಗೆ ಸದಾ ಜಾಗೃತರಾಗಿರಬೇಕು.ಹಾಗೆಂದು ಪುರುಷರ ಜೊತೆಗೆ ಸ್ನೇಹವೇ ಮಾಡಬಾರದೆಂದಲ್ಲ..ಅದರೆ ಅದು ಎಲ್ಲೆಯನ್ನು ದಾಟಿ ಹೋಗಬಾರದು.

 

ನನಗೆ ತುಂಬಾ ಜನ ಹಿರಿ ಕಿರಿಯ ಸ್ನೇಹಿತರಿದ್ದಾರೆ.ಆದರೆ ಅನಗತ್ಯವಾದ ಮಾತು ಕಥೆಯನ್ನು ಮಾಡುವುದಿಲ್ಲ..ಅಗತ್ಯವಾದ ವಿಚಾರಗಳಲ್ಲಿ ಮಾತ್ರ ಮಾತನಾಡುತ್ತೇನೆ.ಸ್ನೇಹಿತರಲ್ಲಿ ಮಾತ್ರವಲ್ಲ..ಸ್ನೇಹಿತೆಯರಲ್ಲೂ ಕೂಡಾ ಅಷ್ಟೇ ಅತಿಯಾದ ಮಾತುಕಥೆ ಇಲ್ಲ..ಸಮಯವೂ ಇಲ್ಲ‌.ಕಾಲೆಜು,ಮನೆ  ಕೆಲಸ ,ಒಂದಿನಿತು ಬರವಣಿಗೆಗೆ ಸಾಕಷ್ಟು  ಸಮಯ ಬೇಕಾಗುತ್ತದೆ.

 

ನಾನು ಗಂಟೆಗಟ್ಟಲೆ ಪಟ್ಟಾಂಗ ಹೊಡೆಯುದು ಅಮ್ಮನಲ್ಲಿ ಮಾತ್ರ..ಆದರೂ ಸಾಮಾಜಿಕ ಅಂತರ್ಜಾಲದಲ್ಲಿ ಕ್ರಿಯಾಶೀಲವಾಗಿರುವುದನ್ನೇ ತಪ್ಪಾಗಿ ಭಾವಿಸಿ ಏನೆನೋ ಮೆಸೇಜ್ ಮಾಡಿದವರಿದ್ದಾರೆ..ಅಂತಹವರಿಗೆ  ಯಾವುದೇ ಉತ್ತರ ಕೊಡುವುದಿಲ್ಲ  ಮುಲಾಜಿಲ್ಲದೆ ತಕ್ಷಣವೇ ರಿಪೋರ್ಟ್  ಮಾಡಿ  ಬ್ಲಾಕ್ ಮಾಡುತ್ತೇನೆ ನಾನು..ಹಾಗಾಗಿ ತೀರಾ ಉಪಟಳ ಇಲ್ಲ.ನಾನು ಜೋರಿರುವುದೂ ಒಂದು ಪ್ಲಸ್ ಪಾಯಿಂಟ್ ನನಗೆ‌.

ಆದರೂ ನಾನು ಸದಾ ಎಚ್ಚರಿಕೆ ವಹಿಸುತ್ತೇನೆ

ಡಾ.ಲಕ್ಷ್ಮೀ ಜಿ ಪ್ರಸಾದ 

 

.

Category:Stories



ProfileImg

Written by Dr Lakshmi G Prasad

Verified

0 Followers

0 Following