Do you have a passion for writing?Join Ayra as a Writertoday and start earning.

ಬ್ಯಾಟಿ ಊಟ..

ಯಲ್ಲಪ್ಪ ಹೋಗಿಬಿಟ್ನಾ? ಇದು ಟಗರು ಪಲ್ಯ ಕತೆಯಲ್ಲ. ಕುರಿ ಪಲ್ಯದ ಕತೆ. ಕುರಿ ಬ್ಯಾಟಿ ಹೊಡೆದವನೇ ಕಾಣೆಯಾದ ಉತ್ತರ ಕರ್ನಾಟಕದ ಕತೆ

ProfileImg
20 Feb '24
11 min read


image

ಮಂಗಳಾರ್ ಕರೆಮ್ಮಗ ಬ್ಯಾಟಿ ಮಾಡೇವ್ರಿ ಬಂದ್ ಹೋಗ್ರಿ.
ಶನಿವಾರ ಪಾರಿಶ್ವಾಡ ಸಂತ್ಯಾಗ ಬೀಗರ ಹಿಂಗ ಹೇಳಿದ ಮ್ಯಾಲ್ ಮಾರುತಿ ಸಂತಿ ಮುಗಿಸಿ  ಮನೆಗೆ ಬಂದಾಗಿನಿಂದ ಮಂಗಳವಾರ ಯಾವಾಗ ಬರುತ್ತೇ ಅಂತಾ ಕಾಯುತ್ತಲೇ ಇದ್ದ. ರವಿವಾರ ಮುಗಿದು, ಸೋಮವಾರವೂ ಬಂತು. ಅವತ್ತು ಸಂಜೆ ತನ್ನ ಅವ್ವನಿಗೆ-  ‘ಬೀಗರ ನಾಳೆ ಕರೆವ್ವಗ ಬ್ಯಾಟಿ ಮಾಡಾತೇವ ಬಂದ್ ಹೋಗ್ರಿ, ಅಂದಾರ ಬೇ’ ಅಂದ.
‘ಕರದ್ದಾರಂದ್ರ ಹೋಗಿ ಬಾರ್ಲಾ’- ಅಂದ್ಳು ಅವ್ವ.
ಆ ನೀರೂ (ನೆಹರೂ) ಸೇಟ್ ಅಂಗಿ ಒಗದ ನೀಲ್ಯಾಗ ಹಾಕಿ ಒಣಗಿಸಿಬೇ. ಅದನ್ನ ಹಾಕೊಂಡ ಹೋಗ್ತೇನಿ. ಮತ್ ಬ್ಯಾಟಿ ಅಂದ್ರ ಅವರ ಕಡೆ ಸಂಜೀ ಮ್ಯಾಲ್ ಮಾಡ್ತಾರು. ಹೊಸಾ ಬೀಗರ ಬ್ಯಾರೆ. ಅಲ್ಲೆ ವಸ್ತಿ ಇದ್ರ ಮಂದಿ ಏನಾರ ತಿಳದಾರ್, ಅದ್ಕ ಸಂಜೀಕ್ ಹೋಗಿ ಉಂಡ ಹೊಳ್ಳಿ ಬರಬೇಕ ಮಾಡೇನಿ. ನೀ ಅಪ್ಪಾಗ್ ಹೇಳಿ ಅವಂದ ಎಮ್ಮೇಟಿ(ಎಂ80) ಕೊಡಿಸ; ಒಂದೇ ಉಸಿರಿನಲ್ಲೆ ಬಡ ಬಡನೆ ಹೇಳಿದನು.
ನಿಮ್ಮಪ್ಪನ ಎಮ್ಮೇಟಿ ತಗೊಂಡ ಹೋಗಾವೇನೋ ನೀ ಶೂರಾ... ಅಂತಾ ಅಂದ್ಳು ಅವ್ವ. 
ಇವನು-ಹುಂ
ಹಂಗಾರ ಒಂದ ಕೆಲಸಾ ಮಾಡ. ರಾತ್ರಿ ಭಾಳ ಹೊತ್ತ ಆದ್ರ ಒಬ್ಬನ ಬರಬೇಕಾಗತೈತಿ ನಿನ್ನ ಹಿಂಬಾಟ ಆ ಯಲ್ಲಪ್ಪನ ಕರಕೊಂಡ ಹೋಗ, ಗಟ್ಟುಳ ಗಂಡಸ ಅದಾನ್ ಅಂವಾ. ಆಯ್ತ ಬಿಡಬೇ ಎಂದವನೇ ಹೊಲದತ್ತ ಹೊರಟ.
ಮಾತು ಕೊಟ್ಟಂತೆ ತಾಯಿ, ಅವರಪ್ಪಗೆ ಹೇಳಿ ಎಂ 80 ಸಿಗುವಂತೆ ಮಾಡಿದ್ದಳು. ಯಲ್ಲಪ್ಪನಿಗೆ ಇಂತಹುದೇ ಡ್ರೆಸ್ ಅಂತಾ ಇರಲಿಲ್ಲ. ಯಾವತ್ತಿಗೂ ಅವನು ಲುಂಗಿಯಲ್ಲೇ ಇರುತ್ತಿದ್ದವನು. ಅದು ಮಾರುತಿಗೆ ಹೆಣ್ಣು ಕೊಟ್ಟಿದ್ದ ಬೀಗರ ಊರು. ಮುಂದಿನ ವರ್ಷ ಮದುವೆ ಆಗುವುದಿತ್ತು. ಹೀಗಾಗಿ ಹೊಸ ಬೀಗರ ಮನೆ ಅಂತಾ ಮಾರುತಿ ನೀರೂಸೇಟ್ ಅಂಗಿ, ಪಾಯಿಜಾಮ್ ಹಾಕೊಂಡು ಕಿಕ್ ಹೊಡೆಯುತ್ತಿದ್ದಂತೆ ಎಡ ಭುಜದ ಮೇಲೆ ಟಾವೆಲ್‌ದಂತೆ ಅಂಗಿಯೊಂದನ್ನು ಹಾಕಿಕೊಂಡು ಯಲ್ಲಪ್ಪ ಹಿಂಬದಿ ಕುಳಿತುಕೊಂಡನು. ಅದನ್ನು ನೋಡಿದ ಮಾರುತಿಯ ಅವ್ವ-ಲೇ ಯಲ್ಲ್ಯಾ, ಅಂಗಿ ಹಾಕೋಲೆ ಅಂದ್ಳು
ಅದಕ್ಕೆ ಯಲ್ಲಪ್ಪ-ಗಾಡಿ ಮ್ಯಾಲ್ ಧೂಳ್ ಆಗತೇತಿ ಬೀಡಬೇ ಮುಂದ ಹೋಗಿ ಹಾಕೊತೇನ್ ಅಂದ.
ಅದರೆ ಹಕೀಕತ್ತು  ಬೇರೆಯೇ ಇತ್ತು. ಅದು ಮಾರುತಿಗೆ ಗೊತ್ತಿತ್ತು. ಹೀಗಾಗಿ ಆತ ಏನೂ ಹೇಳದೆ ಎಂ80 ಶುರು ಮಾಡಿ ಹೊರಟ.
ಇಬ್ಬರು ಮೊದಲೇ ನಿಶ್ಚಯ ಮಾಡಿದಂತೆ ದಾರಿ ಮಧ್ಯೆ ಇರೋ ಗುಡಿಸಲಿನೊಳಗಿನ ದಾರೂ (ಸಾರಾಯಿ) ದುಖಾನಿ(ಅಂಗಡಿ)ಗೆ ಬಂದು ನಿಂತರು. ಮಾರುತಿ ಕುಡಿಯುವುದರಲ್ಲಿ ನಿಸ್ಸಿಮ. ಆದರೆ ಹೊಸ ಬೀಗರ ಊರು. ಏನಾದ್ರೂ ಘಾತ್ ಆದೀತು ಅಂತಾ ಅವನು ಗುಡಿಸಲಿನೊಳಗೆ ಹೋಗಲಿಲ್ಲ. ಒಳಗೆ ಹೋದ ಯಲ್ಲಪ್ಪ, ವಾಪಸ್ ಬರೊವಾಗ ಅಂಗಿ ಹಾಕಿಕೊಂಡಿದ್ದನು. ಅದರರ್ಥ ಸ್ವಲ್ಪ ಕುಡಿದಿದ್ದ, ಒಂದಷ್ಟು ದಾರೂ ಪಾಕೇಟ್‌ಗಳನ್ನು ಒಳಂಗಿ ಜೇಬಿನೊಳಗೆ ಹಾಕಿಕೊಂಡು ಮೇಲೆ ಅಂಗಿ ಹಾಕಿಕೊಂಡಿದ್ದನು.
ನೇರವಾಗಿ ಮನೆಗೂ ಹೋಗದೇ ಬೀಗರ ಹೊಲದತ್ತ ಮಾರುತಿ ಎಂ-80 ತಿರುಗಿಸಿದ. ಯಾಕಂದ್ರೆ ಬ್ಯಾಟಿ ಇರೋ ಕಾರಣಕ್ಕೆ ಬೀಗರೆಲ್ಲ ಅದಾಗಲೇ ಹೊಲ ಸೇರಿದ್ದರು. ಹೊಲದಲ್ಲಿನ ಎಲ್ಲ ದೇವರುಗಳಿಗೆ ಹೋಳಿಗೆ, ಬಾಳೆ ಹಣ್ಣು, ಬದನೆಕಾಯಿ ಪಲ್ಯ, ಅನ್ನದ ನೈವೇದ್ಯ ಇಟ್ಟು, ತೆಂಗಿನಕಾಯಿ ಒಡೆದು ನೈವೇದ್ಯ ಹಿಡಿದು, 11 ಮುತ್ತೈದೆಯರ ಆರತಿ ಸಮೇತ ಓಡಾಡಿ ಒಂದೇ ಒಂದು ದೇವರನ್ನೂ ಬಿಡದೇ ಪೂಜೆ ಮಾಡಿದರು. 
ಪ್ರಮುಖವಾಗಿ ಈ ಕಡೆಯ ರೈತರ ಪ್ರತಿ ಹೊಲದ ಪ್ರಮುಖ ಗದ್ದೆಯ ಬದುವಿನ ಮೇಲೆ ಮಲಪ್ರಭಾ ನದಿಯಿಂದ ತರಲಾಗುವ ಪುಟ್ಟ ಕಲ್ಲಿನಿಂದ ಮಾಡಿರೋ ಐದು ಪಾಂಡವರು ಇರಲೇಬೇಕು. ಅದರ ಪಕ್ಕದಲ್ಲೇ ಸ್ವಲ್ಪ ಅಂತರದಲ್ಲಿ ಇನ್ನೊಂದು ಕಲ್ಲು ಇಟ್ಟಿರುತ್ತಾರೆ. ಆತನೇ ಕರ್ಣ. ಪಂಚ ಪಾಂಡವರು ಎನ್ನುವುದು ಮೊದಲಿನಿಂದಲೂ ಬಂದಿದ್ದರೂ, ಅದರ ಪಕ್ಕ ಕರ್ಣನನ್ನು ಸಹ ಪಾಂಡವರ ಸಾಲಿನಲ್ಲಿ ಪೂಜಿಸುತ್ತ ಬರುವ ಸಂಪ್ರದಾಯ ರೈತರಿಗಿದೆ. ಇನ್ನು ಹೊಲದಲ್ಲಿರುವುದು ಬಹುತೇಕ ಎಲ್ಲವೂ ಕಲ್ಲಿನ ದೇವರುಗಳೇ. ಅವಕ್ಕೆ ಇಂತಹುದೇ ಮೂರ್ತ ಸ್ವರೂಪ ಇಲ್ಲ. ಇನ್ನು ಈ ಬ್ಯಾಟಿಯ ಕೇಂದ್ರ ಬಿಂದು ಕರೆಮ್ಮ ದೇವಿ.ಈ ದೇವಿಗೆ ಯಾವುದೇ ಸ್ವರೂಪ ಇಲ್ಲ. ಕಲ್ಲಿನ ದೇವರಷ್ಟೆ. ಆ ಎಲ್ಲ ದೇವರುಗಳನ್ನು ನೀರಿನಿಂದ ತೊಳೆದು, ದೀಪದ ಎಣ್ಣೆಯಿಂದ ಮಜ್ಜನ ಮಾಡಿಸಿದ್ದರು. ಪಾಂಡವರು ಸೇರಿದಂತೆ ಹೊಲದ ಸೀಮೆಯ ಸುತ್ತಲಿನ ಎಲ್ಲ ದೇವರುಗಳು ಸಸ್ಯಹಾರಿಗಳೇ ಹೀಗಾಗಿ ಎಲ್ಲ ದೇವರಿಗೂ ಹೋಳಿಗೆ ನೈವೈದ್ಯ ಮಾಡಿದ್ದರು. ಎಲ್ಲ ಮುಗಿದ ಮೇಲೆ ಮುತ್ತೈದೆಯರ ಸಮೇತ ಕರೆಮ್ಮ ದೇವಿಯ ಕಡೆಗೆ ಬಂದರು. ಕರೆಮ್ಮಗೆ  ದೇವಿಯ ಪೂಜಾರಿ, ಪೂಜೆ ಮುಗಿದ ಬಳಿಕ ಬ್ಯಾಟಿ ತಗೊಂಡ ಬರ್ರಿ ಅಂದಾ. ಕುರಿ ಬಂದು ದೇವರ ಮುಂದೆ ನಿಂತಿತ್ತು. ಕುರಿಯ ಹಿಂದಿನ ಎರಡು ಕಾಲು ಹಿಡಿಯೋದಕ್ಕೆ ಒಬ್ಬರು, ಮುಂದೆ ಗಿಡವೊಂದರ ಸೊಪ್ಪು ಹಿಡಿದುಕೊಂಡು ಕುಳಿತುಕೊಳ್ಳಲು ಒಬ್ಬರು ಸನ್ನದ್ಧರಾದರು. ಕುರಿಯ ಬ್ಯಾಟಿ ಬೀಳಿಸಬೇಕಿದ್ದ ಪಾಂಡುನೂ ಮುಂದೆ ಬಂದ. ಕೈಯಲ್ಲಿ ಕುಡಗೋಲು ತಗೊಂಡಿದ್ದಾಗ, ಕುರಿ ಒಂದೇರಡು ಸಲ ಆಚೆ ಈಜೆ ಹೊರಳಾಡೋದಕ್ಕೆ ಶುರುವಾಯ್ತು. ಆಗ ಬ್ಯಾಟಿ ಕಡೆಯುವ ಪಾಂಡುಗೆ ಅದೆಲ್ಲಿಯ ಸಿಟ್ಟು ಬಂತೋ ಗೊತ್ತಿಲ್ಲ  ಬಾಡ್ಯಾನ್ ಮಗನ ಕುರಿ ಚಂಡ ಹೊಳ್ಳ್ಯಾಡದಾಂಗ ತಪ್ಪಲಾ(ಸೊಪ್ಪು) ಹಿಡಿಲೇ ಅಂದಾ, ಎಷ್ಟೆ ಮಾಡಿದ್ರೂ ಆಗಲೇ ಇಲ್ಲ. ಆಗ ಪಾಂಡುನ ಕೈಯ ಯಾಕೋ ಬೆವರೊಕೆ ಶುರುವಾಯ್ತು. ಆಗ ಪೂಜಾರಿ ಬ್ಯಾಟಿ ಅರ್ಧ ಆದ್ರ ಘಾತ್ ಆಗತೇತಿ ಅಂದಾಗ. ಪಾಂಡು ಹಿಂದೆ ಸರಿದು ಬಿಟ್ಟ. ಇನ್ನು ಕುರಿ ಕಡಿಯೋದು ಯಾರೆನ್ನುವ ಚಿಂತೆ ಶುರುವಾಯ್ತು. ಆಗ ಮಾರುತಿಯ ಮಾವ. ಮಾರುತಿಯನ್ನು ಒಂದು ಸಲ ಕೆಳಗಿಂದ ಮೇಲೆ ನೋಡಿದ. ನೋಡೋಕೆ ಆರು ಅಡಿ ಎತ್ತರ ಇದ್ದರು ಸಣಕಲು ದೇಹಿ ಮಾರುತಿಗೆ ಆಗೊಲ್ಲ ಬಿಡು ಎಂದು ನೋಟದಲ್ಲಿಯೇ ಮಾವ ನಿರ್ಧರಿಸಿ ಬಿಟ್ಟ. ಆ ಕಡೆ ಪೂಜಾರಿ, ಸಂಜೀ 6 ಆಗಾಕ್ ಬಂದೇತಿ. 6 ಗಂಟೆಯೊಳಗೆ ಕುರಿ ಚಂಡ ಬೀಳಬೇಕು. ಸೂರ್ಯಾ ಮುಳಗೋದ್ರೋಳಗ ದೇವಿ ರಕ್ತ ನೋಡಬೇಕು. ಆ ಮ್ಯಾಲ್ ಬೇಕಾದ್ರೆ ಸರವತ್ತಿನ್ಯಾಗೂ ನೀವ ಊಟ ಮಾಡಕೋರಿ ಅಂದಾ. 
ಆಗ ಮಾರುತಿ ಬೀಗರಿಗೆ ಚಿಂತೆ ಕಾಡೋಕೆ ಶುರುವಾಯ್ತು. ಇದನ್ನು ಗಮನಿಸಿದ ಮಾರುತಿ ‘ಯಾಕ್ರಿ ಮಾವಾರ, ನಿಮ್ಮ ಕಡೆ ಬ್ಯಾಟಿ ಕೆಡವವರು ಮತ್ತ್ಯಾರು ಇಲ್ಲೇನು?, ಇಲ್ಲ ಎನ್ನುವಂತೆ ಬೀಗರು ಕತ್ತು ಅಲ್ಲಾಡಿಸಿದರು. ಆಗ ಮಾರುತಿ ಮುಂದೆ ಬಂದು ಪೂಜಾರಿಗೆ ಕೇಳಿದ ಬ್ಯಾರೇ ಊರಿನವರು, ಕಡದ್ರ ನಡಿತೇತಿ ಏನ್ರಿ. ಪೂಜಾರಿ, ಒಂದು ಸಲ ಕಣ್ಣು ಮುಚ್ಚಿ ಕುಳಿತುಕೊಂಡು ದೇವಿಯನ್ನು ಕೇಳಿದಂತೆ ಮಾಡಿದ  ನೋಡವಾ ಯವ್ವಾ.. ಬ್ಯಾಟಿ ತಯಾರ ಐತಿ. ಆದ್ರ ಕೆಡವರು ಇಲ್ಲ. ನೀ ಹುಂ ಅಂದ್ರ ಬ್ಯಾರೇ ಊರಾವರು ಚಂಡ ಹಾರಿಸ್ತಾರ" ಉಸ್ಸ... ಉಸ್ಸ... ಉಸ್ಸ.. ಎನ್ನುತ್ತ.. ತನ್ನ ಎರಡೂ ಕೈಗಳನ್ನು ಮುಂಗೈನಿಂದ ಬಿಗಿದುಕೊಂಡು, ಫ್ಯಾನಿನಂತೆ ತಿರುಗಾಡಿಸಿ,  ಕಣ್ಣು ತೆಗೆದು.. ಅವ್ವ ಅಪ್ಪಣಿ ಕೊಟ್ಟಾಳ ಅಂದ. ಆಗ ಮಾರುತಿ, ಇಂವಾ ನನ್ನ ಹಿಂಬಾಲೇ ಬಂದಾನಲ್ರಿ  ಯಲ್ಲಪ್ಪ. ನಮ್ಮೂರಾಗ ಹೆಂತಾ ದೊಡ್ಡ ಕುರಿ, ಇದ್ರು ಇವನ ಕಡಿತಾನ್ರಿ.. ಆದ್ರ ಈಗ ಅಂವಾ ಕುಡದ್ದಾನ, ನಡಿತೇತಿ ಇಲೋರಿ.
ಆಗ ಪೂಜಾರಿ-ಏ ಕುರಿ ಕಡಿಯೋದು ಅಂದ್ರ ಹಗರಾಣಿ ಅಂತಾ ತಿಳಿದ್ದೇ ಏನ ತಮ್ಮಾಅದೆಲ್ಲ ನಡಿತೇತಿ ತಗೋ ಅಂದಾ
ಹಾಗೇ ಹೇಳುತ್ತಿದ್ದಂತೆಯೇ ಮಾರುತಿ, ಯಲ್ಲಪ್ಪನ ಕಡೆ ಹೊರಳಿ ನೋಡಿದ್ರೆ. ಅಲ್ಲೆಲ್ಲಿ ಇರತಾನೆ ಯಲ್ಲಪ್ಪ. ಆಗಲೇ ಅಲ್ಲಿಟ್ಟದ್ದ ಸ್ಟಿಲ್ ಚೆಂಬು ತಗೊಂಡು, ಅದಕ್ಕೆ ತನ್ನ ಒಳಂಗಿಯೊಳಗಿನ ಒಂದು ಪಾಕೇಟ್ ತೆಗೆದು, ಅದಕ್ಕೆ ಸೇರಿಸಿ, ಅಲ್ಲೇ ಇದ್ದ ಪ್ಲ್ಯಾಸ್ಟಿಕ್ ಕೊಡವನ್ನು ಬಗ್ಗಿಸಿಕೊಂಡು, ನೀರು ಹಾಕಿಕೊಂಡು, ಗಟ.. ಗಟನೆ. ನೀರು ಕುಡಿದಂತೆ ಏರಿಸಿಕೊಂಡು ಬಂದೇ ಬಿಟ್ಟ. ಪಾಂಡುನ ಕೈಯಲ್ಲಿ ಕುಡುಗೋಲು ಹಾಗೆಯೇ ಇತ್ತು. ಅದನ್ನು ಇಸಿದುಕೊಂಡವನೇ ಹಿಂದೆ ಮುಂದೇ ನೋಡಲೇ ಇಲ್ಲ. ಕುರಿ ಪಕಕ್ಕೆ ಬಂದು ನಿಂತ, ಮುಂದೆ ಸೊಪ್ಪು ಹಿಡಿದುಕೊಂಡವನಿಗೂ ಏನೂ ಹೇಳಲೇ ಇಲ್ಲ. ಒಂದು ಸಲ ಕುರಿಯ ಕತ್ತು ನೋಡಿದವನೇ ಕುಡುಗೋಲು ಇಳಿಸಿ ಬಿಟ್ಟ. ಛಟ್ಟ ಅಂತಾ ಕುರಿಯ ಚೆಂಡು(ಕತ್ತು) ಹಾರಿ ಹೋಗಿ ದೇವಿ ಮುಂದೆ ಬಿತ್ತು. ಕುರಿ ಚೆಂಡು ಬೀಳುತ್ತಿದ್ದಂತೆಯೇ ಅದಕ್ಕೆ ಪೂಜಾರಿ,  ನೀರು ಚಿಮುಕಿಸ್ತಾ ಇದ್ರೆ, ಇತ್ತ ಕುರಿಯ ಅನ್ನನಾಳ ಒಳ ಹೋಗದಂತೆ ಜಾಗರೂಕತೆ ವಹಿಸೋದು ಮುಖ್ಯವಾಗಿತ್ತು. ಹೀಗಾಗಿ ಆ ಅನ್ನನಾಳದ ನರವನ್ನು ಹಿಡಿದವನೇ  ಗಂಟು ಕಟ್ಟಿದ ಯಲ್ಲಪ್ಪ, ಕುರಿಯ ಬಲ ಮುಂಗಾಲನ್ನು ಕತ್ತರಿಸಿ ಕುರಿಯ ರುಂಡದ ಬಾಯಲ್ಲಿಟ್ಟ. ಬಳಿಕ ಹಿಂಭಾಗದ ತೊಡೆ ಮತ್ತು ಕಾಲು ಸಮೇತದ ಒಂದು ಛಪ್ಪೆಯನ್ನು ಕರೆವ್ವನ ಪೂಜಾರಿಗೆ ಕೊಡುವುದು ಸಂಪ್ರದಾಯ ಹೀಗಾಗಿ ಅದನ್ನೂ ಸಹ ಆ ಕೂಡಲೇ ಬೇರ್ಪಡಿಸಿ ಪೂಜಾರಿ ಪಾಲು ಪೂಜಾರಿಗೆ ಅಂತಾ ಹೇಳಿ ಬಿಟ್ಟ. ರುಂಡದ ಬಾಯಲ್ಲಿ ಕುರಿಯ ಮುಂಗಾಲು ಇಡುತ್ತಿದ್ದಂತೆಯೇ ಅದನ್ನು ದೇವರ ಮುಂದೆ ಜನರ ಕಡೆ ಮುಖ ಮಾಡಿಟ್ಟ ಪೂಜಾರಿ, ಅದರ ಹಣೆಗೆ ಕುಂಕುಮ, ಹಚ್ಚಿ, ಅದನ್ನು ಕಡಿದ ಯಲ್ಲಪ್ಪನ ಹಣೆಗೂ ಕುಂಕುಮ ಹಚ್ಚಿ ಭಲೆ.. ಭಲೆ. ಅಂದಾ.
ಅದಾದ ಬಳಿಕ ಇನ್ನೆನ್ನಿದ್ದರೂ ಕುರಿ ಬಿಡಿಸುವ ಕಾಯಕ ಇತ್ತು. ದೌಡ್ ನೈವೇದ್ಯ ಮಾಡ್ರಿ ಅನ್ನುತ್ತಿದ್ದಂತೆಯೇ ಅಲ್ಲಿ ಬಿದ್ದಿದ್ದ ಕುರಿಯನ್ನು ಪಕ್ಕದ ಗದ್ದೆಯಲ್ಲಿ ಅಡುಗೆಗೆ ತಯಾರಿ ಮಾಡಿದ ಸ್ಥಳಕ್ಕೆ ತಂದಿಟ್ಟರು.  ಚರ್ಮವನ್ನು ಹಿಂಗಾಲಿನಿಂದ ಬಿಡಿಸೋದಕ್ಕೆ ಶುರು ಮಾಡಿದರು. ಅತ್ತ ಒಲೆಯ ಮೇಲೆ ಮಣ್ಣಿನ ಹಂಡೆಯಲ್ಲಿ ನೀರು ಕಾಯಿಸಲು ಇಟ್ಟಿದ್ದರು. ಅದರಲ್ಲೇ ಕುರಿ ಪಲ್ಯ ಕುದಿಯಬೇಕಿತ್ತು. ಇತ್ತ ಮಾರುತಿ ಮಾವ ತನ್ನ ಮಗನನ್ನು ಕರೆದು ಏನೋ ತರಲು ಕಳುಹಿಸಿದ. ಕೆಲವೇ ನಿಮಿಷಗಳಲ್ಲಿ ಮರಳಿ ಬಂದ ಮಾರುತಿಯ ಅಳಿಯನ ಕೈಯಲ್ಲಿ ನಾಲ್ಕು ಓಟಿ ಪಾಕೇಟ್ ಇತ್ತು. ಯಲ್ಲಪ್ಪನಿಗೆ ಭರ್ಜರಿ ಆತಿಥ್ಯ. ಏಕೆಂದರೆ ಅವನಿಲ್ಲದೇ ಹೋಗಿದ್ದರೇ ಕುರಿ ಬ್ಯಾಟಿಯೂ ಬೀಳುತ್ತಿರಲಿಲ್ಲ. ಮಟನ್ ಊಟವೂ ಆಗುತ್ತಿರಲಿಲ್ಲ. ಹೀಗಾಗಿ ಆ ಪಾಕೇಟ್‌ಗಳನ್ನು ತೆಗೆದುಕೊಂಡು ಪಕ್ಕಕೆ ಹೋದ  ಯಲ್ಲಪ್ಪ ಎಣ್ಣೆ ಏರಿಸಿದ್ದೇ ಏರಿಸಿದ್ದು. ಇನ್ನೆನ್ನು ಊಟವೂ ತಯಾರಾಯ್ತು. ಕತ್ತಲಿನಲ್ಲೇ ಭರ್ಜರಿ ಊಟವಾಗಿ ಎಲ್ಲವೂ ಮುಗಿಯೋ ಹೊತ್ತಿಗೆ ರಾತ್ರಿ ೧೧ ಗಂಟೆ.

ಊಟ ಮುಗಿದು ಮೇಲೆ  ಹೊರಡಲು ತಯಾರಾದಾಗ, ಥಂಡಿ ಭಾಳ ಐತಿ, ತಗೋರಿ ಅಂತಾ ಬೀಗರು ಕಂಬಳಿಯೊಂದನು ಕೊಟ್ಟರು. ಆ ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡ ಯಲ್ಲಪ್ಪ ಎಂ-80 ಏರಿ ಕುಳಿತು ಬಿಟ್ಟ.
ಮಾರುತಿಗೆ ಖುಷಿಯೋ ಖುಷಿ. ಏಕೆಂದರೆ ತನ್ನ ಭಾವಿಪತ್ನಿ ತನ್ನ ಎದುರಿನಲ್ಲೇ ಕುಳಿತು ಊಟ ಮಾಡೋವಾಗ ಕಳ್ಳ ನೋಟದಿಂದ ನೋಡುತ್ತ ಕುಳಿತಿದ್ದ. ಅದೇ ಮೂಡ್‌ನಲ್ಲಿ ಬೈಕ್ ಏರಿದ್ದರಿಂದ ಏನೇನೋ ಕನಸು ಕಾಣುತ್ತಲೇ ಬೈಕ್ ಓಡಿಸುತ್ತಿದ್ದ, ಹಾಗೂ ಹೀಗೂ ಮಧ್ಯರಾತ್ರಿ ೧೨.೩೦ರ ಸುಮಾರಿಗೆ ತಮ್ಮೂರು ತಲುಪಿದ್ದರು. ಯಲ್ಲಪ್ಪನ ಮನೆಯೇ ಮೊದಲು ಬರುತ್ತಿತ್ತು. ಹೀಗಾಗಿ ಆತನ ಮನೆ ಮುಂದೆ ಹೋಗಿ ಬೈಕ್ ನಿಲ್ಲಿಸಿ, ಯಲ್ಲ್ಯಾ ಇಳಿಲೇ ಅಂದ್ರೆ . ಹಿಂದೆ ಇಲ್ಲವೇ ಇಲ್ಲ. ಎರಡ್ಮೂರು ಸಲ ಕರೆದು ಹಿಂದೆ ತಿರುಗಿ ನೋಡಿದ್ರೆ, ಯಲ್ಲಪ್ಪ ನಾಪತ್ತೆ. ಅಲಾ ಇವನ ಅಂತಾ ಮಾರುತಿ ಗಾಬರಿಗೆ ಬಿದ್ದ. ಏನ ಮಾಡಬೇಕೋ ತಿಳಿಯದಾಯ್ತು. ಆ ಕ್ಷಣವೇ ಯಲ್ಲಪ್ಪನ ಮನೆ ಪಕ್ಕದಲ್ಲೇ ಇದ್ದ, ಯುವಕ ಸಂಘದ ಆಪೀಸ್‌ನಲ್ಲಿ ಮಲಗಿದ್ದ ಪಿಯುಸಿ ಹುಡುಗರನ್ನು ಬಾಗಿಲು ಬಡಿದು ಎಬ್ಬಿಸಿದ. ಅದು ಕಬ್ಬು ಕಟಾವಿನ ಸೀಜನ್ ಆಗಿರಲಿಲ್ಲ. ಏಕೆಂದರೆ ಆ ಸೀಜನ್‌ದಲ್ಲಿ ಕಬ್ಬು ಸಾಗಿಸುವ ಸರ್ಕಲ್ ಆಫೀಸ್ ಕೂಡ ಇದೇ ಆಗಿತ್ತು. ಅದೇ ಕಚೇರಿಯನ್ನು ಪಿಯುಸಿ ವಿದ್ಯಾರ್ಥಿಗಳು ಓದಿ, ಮಲಗಲು ಬಳಸುತ್ತಿದ್ದರು. ಅಲ್ಲಿಯೇ ರೈತರ ಕಬ್ಬಿನ ಗಾಡಿ ಬಂದಾಗ ಸ್ಲಿಪ್ ಕೊಡುವ ಕೆಲಸ ಇವರೇ ಮಾಡುತ್ತಿದ್ದರು. ಆಗೆಲ್ಲ ಮಧ್ಯರಾತ್ರಿಯೂ ಯಾರ ಯಾರೋ ಬಾಗಿಲು ಬಡಿಯುತ್ತಲೇ ಇದ್ರು. ಆದ್ರೆ ಇನ್ನ ಕಬ್ಬಿನ ಸೀಜನ್ ಆರಂಭವೇ ಆಗಿಲ್ಲ. ಹೀಗಾಗಿ ಈಗ ಬಾಗಿಲು ಬಡಿಯೋರು ಯಾರೂ ಅಂತಾ ಚಿಂತೆಗೆ ಬಿದ್ದ ಹುಡುಗರ ಪೈಕಿ ರಾಜ್ಯಾ ಬಾಗಿಲು ತೆಗೆದ್ರೆ ಬೆವರುತ್ತ ಮಾರುತಿ ನಿಂತಿದ್ದ.
ಯಾಕೋ ಏನಾತೋ ಅಂತಾ ಕೇಳಿದಾಗ, ತಮ್ಮ ಬೀಗರ ಊರಿಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿದ್ದು, ಆದರ ಮನೆ ಮುಂದೆ ಬಂದು ಬೈಕ್ ನಿಲ್ಲಿಸಿದ್ರೆ ಯಲ್ಲಪ್ಪ ಇಲ್ಲವೇ ಇಲ್ಲ ಅಂತಾ ಹೇಳಿದವನೇ ವಿಪರೀತ ಬೆವರೋಕೆ ಶುರು ಮಾಡಿದ. ವಿಷಯ ತಿಳಿದ ಅಲ್ಲಿದ್ದ ಪಿಯುಸಿ ಗ್ಯಾಂಗಿನ್ ರಾಜ್ಯಾ ಎಲ್ಲರನ್ನೂ ಎಬ್ಬಿಸಿ ಬಿಟ್ಟ. ಹಾಗೆಯೇ ದ್ಯಾಮವನ್ನ ಗುಡಿಗೆ ಹೋದ್ರು. ಅಲ್ಲಿ ಐದಾರು ಜನ ಮಲಗಿಕೊಂಡಿದ್ರು ಅವರನ್ನು ಎಬ್ಬಿಸಿದ್ರು, ಮಾರುತಿಯ ಬೀಗರ ಊರು ಇದ್ದಿದ್ದು, ೧೩ ಕಿಮೀ. ದೂರದಲ್ಲಿ. ಆಗ ಮಾರುತಿಯ ಎಂ 80 ಬಿಟ್ರೆ ಬೇರೆ ಯಾರದೂ ಗಾಡಿ ಇಲ್ಲ. ಆ ಕೂಡಲೇ ಎಲ್ಲ ಹುಡುಗರು ತಮ್ಮ ತಮ್ಮ ಸೈಕಲ್ ಹತ್ತಿದರು, ಕೆಲವರ ಬಳಿ ಬ್ಯಾಟರಿ ಇದ್ರೆ, ಇನ್ನು ಕೆಲವರು ತಮ್ಮ ಲೋಕಲ್ ಬ್ಯಾಟರಿ ಪ್ಲ್ಯಾನ್ (ಸೈಕಲ್‌ನ ಟೈಯರ್‌ನ್ನು ಒಂದು ಕೋಲಿಗೆ ಕಟ್ಟಿ, ಅದಕ್ಕೆ ಬೆಂಕಿ ಹಚ್ಚಿಕೊಂಡು, ಹಿಂದೆ ಕುಳಿತವರು ತಮ್ಮ ಮೇಲೆ ಟೈಯರ್ ಸುಟ್ಟಿದ್ದು ಬೀಳದಂತೆ ಸೈಡ್‌ಗೆ ಹಿಡಿದುಕೊಂಡು ಕುಳಿತುಕೊಳ್ಳುವುದು) ಮಾಡಿಕೊಂಡು ನಿಧಾನಕ್ಕೆ ಅದೇ ರಸ್ತೆಯಲ್ಲಿ ಮರಳಿ ಹೋಗುತ್ತ ಅಲ್ಲಲ್ಲಿ ಇರೋ ತೆಗ್ಗು ಗುಂಡಿಗಳಲ್ಲಿ ಹುಡುಕುತ್ತ ಹುಡುಕುತ್ತ ಹೇಗೋ ಮಾರುತಿಯ ಬೀಗರ ಊರನ್ನೂ ಸಹ ತಲುಪಿದರು. 

ಅಲ್ಲಿ ಬೀಗರಿಗೂ ಹೀಗೆಗೆ ಅಂತಾ ವಿಷಯ ತಿಳಿಸಿದರು. ಅತ್ತ ಮಾರುತಿಯ ಮಾವನಿಗೆ ಇದೆಲ್ಲವೂ ತಮ್ಮಿಂದಲೇ ಆಯಿತು ಅನ್ನೋ ಚಿಂತೆ ಕಾಡೋಕೆ ಶುರುವಾಯ್ತು. ಏಕೆಂದರೆ ತಮ್ಮ ಹೊಲದಲ್ಲಿನ ಕರಿಯಮ್ಮನಿಗೆ ಬೇರೆ ಊರಿನ ವ್ಯಕ್ತಿಯ ಕೈಯಿಂದ  ಬ್ಯಾಟಿ ಹೊಡೆಸಿದ್ದರು .ಅದಾದ ಬಳಿಕ ಸರಾಯಿ ತರಿಸಿ ಕೊಟ್ಟಿದ್ದು? ಎರಡರಡಲ್ಲಿ ಯಾವುದೇ ಕಾರಣದಿಂದಲೂ ಯಲ್ಲಪ್ಪ ನಾಪತ್ತೆಯಾಗಿದ್ದರೂ ಅದಕ್ಕೆ ಮೂಲ ಇವರೇ ಅನ್ನುವ ಹಾಗಿತ್ತು. ಇನ್ನು ಬೀಗರ ಊರಿನವರೆಗೂ ಬಂದದ್ದಾಗಿತ್ತು. ಮುಂದೆ ಅವರ ಹೊಲದಲ್ಲಿರೋ ಕರಿಯಮ್ಮನವರೆಗೂ ಹೋಗಬೇಕಿತ್ತು. ಆದರೆ ಒಂದು ಸಲ ಬ್ಯಾಟಿ ಮುಗಿದು, ಎಲ್ಲರೂ ಊಟ ಮಾಡಿದ ಬಳಿಕ, ದೇವರ ಮುಂದೆ ಒಂದು ನೀರು ತುಂಬಿದ ಕೊಡ ಇಟ್ಟು ಬಂದರೆ ಮುಗಿಯಿತು. ಮರುದಿನ ಸೂರ್ಯೋದಯ ಆಗುವವರೆಗೂ ಆ ಕಡೆ ಹೋಗುವುದಿರಲಿ. ಅಲ್ಲಿಂದ ಬರೋವಾಗ ಹಿಂದೆ ತಿರುಗಿಯೂ ನೋಡದಂತೆ ಬರಬೇಕು. ಆದರೆ ಈಗ ಯಲ್ಲಪ್ಪ ಕಾಣೆಯಾಗಿ ದೊಡ್ಡ ಘಾತ್ ಆಗಿತ್ತು. ಹೀಗಾಗಿ ಹೋಗುವುದು ಅನಿವಾರ್ಯ.  ಏನು ಮಾಡುವುದು ತಿಳಿಯದೇ ಇದ್ದಾಗ, ತೀರಾ ತೋಳಲಾಟದಲ್ಲಿದ್ದ ತನ್ನ ಅಳಿಯ ಮಾರುತಿಯ ಮುಖ ನೋಡಿದ ಅವರ ಮಾವ, ಅರ್ಧ ದಾರಿಯವರೆಗಾದ್ರೂ ಹೋಗಬಹುದಲ್ಲವೇ ಅಂತಾ ಅಲ್ಲೇ ಇದ್ದ ಹಿರಿಯ ಮುದುಕನೊಬ್ಬನ್ನು ಕೇಳಿದ್ರು, ಅವನು ನಿದ್ದೆ ಮಂಪರಿನಲ್ಲಿಯೇ ಹೂ ಅಂದಾ, ತಡ ಮಾಡದೇ ಮಾರುತಿಯ ಮಾವ, ತನ್ನ ಬಳಿಯಿದ್ದ ಲಾಟಿನ್ ಹೊರತೆಗೆದು, ಸುತ್ತಮುತ್ತಲಿನ ಮನೆಯವರ ಬಾಗಿಲುಗಳನ್ನು ಸಹ ಬಡಿದು ಲಾಟಿನ್ ಇಸಿದುಕೊಂಡು ಯಲ್ಲಪ್ಪನನ್ನು ಹುಡುಕುತ್ತ ಹೊರಟರು. 
ಎಲ್ಲರೂ ಊರು ದಾಟಿದ ತಕ್ಷಣವೇ ಮೊದಲಗಿರೋ ಹೊಲ ಕಲ್ಲಪ್ಪನದು. ಕಲ್ಲಪ್ಪ ಬೊರವೆಲ್ ಹಾಕಿಸಿ ಕೃಷಿ ಮಾಡುತ್ತಿದ್ದವನು. ರಾತ್ರಿ ಹೊತ್ತು ಬೆಳೆಗೆ ನೀರು ಬಿಡಲು ಬಂದಿದ್ದನು. ಏಕಕಾಲಕ್ಕೆ ಹತ್ತಾರು ಲಾಟಿನ್​ಗಳ ಸಾಲು ದೀಪಗಳನ್ನು ನೋಡಿ ಹೌಹಾರಿದ ಆತ, ಯಾವುದೋ ದೆವ್ವ ಬಂತು ಅಂದುಕೊಂಡವನೇ ಅಲ್ಲೇ ಇದ್ದ ಸೈಕಲ್ ಚಕ್ರದ ನಾಲ್ಕೂ ಟೈರ್‌ಗಳನ್ನು ಒಮ್ಮೆಯೇ ಉರಿಸಿ, ಏ... ಏ... ಯಾರಲೇ ಅವರು, ಹಿಂಗ ಬರಾತೇರಿ ಅಂತಾ ಚೀರಿದ. ಅದಕ್ಕೆ ಪ್ರತಿಧ್ವನಿಯಾದ ಮಾರುತಿಯ ಮಾವಾ.. ನಾವೋರಪಾ.. ಅಂತಾ ಹೆಸರು ಹೇಳಿ ಅವನ ಹತ್ತಿರಕ್ಕೆ ಹೋಗಿ, ನಡೆದ ವಿಷಯ ತಿಳಿಸಿದ. ಆಗ ಓ.. ಆಗ ಪಟಪಟಿ ಮ್ಯಾಲ್ ಹೋದವರು ಇವರೇನಾ.. ನಾ ಆಗ ನೀರ ಹಾಯಿಸಾಕ ಅಂತಾ ಹೊಲಕ್ಕ ಬರಾತಿದ್ದೆ, ದ್ಯಾಮವ್ವನ ಗುಡಿ ಓಣ್ಯಾಗ ಇವನ ಆ ಪಟಪಟಿ ಮ್ಯಾಲ್ ಹಿಂದ ಒಬ್ರು ಕುಂತಿದ್ರು. ನಾ ನೋಡೇನಿ ಅಂದಾ. 
ಹಾಗಾದ್ರೆ ಮುಂದೆ ಹೋಗುವುದು ಸರಿಯಲ್ಲ. ಎಲ್ಲೋ ಮುಂದಿನ ದಾರಿಯಲ್ಲೇ ಯಲ್ಲಪ್ಪ ಬಿದ್ದಿದ್ದಾನೆ ಎಂದು ತಿಳಿದ ಎಲ್ಲರೂ ಮರಳಿ ಬಂದರು. ಮಾರುತಿಯ ಊರಿನಿಂದ ಬಂದಿದ್ದ 13 ಜನರ ಜೊತೆಗೆ ಅವನ ಬೀಗರ ಊರಿನ ಜನರೂ ಸೇರಿ ಒಟ್ಟು 30 ಜನ ಆದ್ರೂ, ಊರಲ್ಲಿರೋ ಎಲ್ಲರ ಮನೆಗಳಲ್ಲಿನ ಸೈಕಲ್ ಟೈರ್‌ಗಳನ್ನು ಒಟ್ಟು ಮಾಡಿದ್ರು, ಹರಕಲು ಬಟ್ಟೆ ತೆಗೆದುಕೊಂಡು ಕೋಲುಗಳಿಗೆ ಸುತ್ತಿ, ಸೀಮೆ ಎಣ್ಣೆಯಲ್ಲಿ ಅದ್ದಿ ಹಿಲಾಲ್ ಸಹ (ಪಂಜು) ತಯಾರ ಮಾಡಿದ್ರು ಎಲ್ಲ ಕಡೆ ಹುಡುಕುತ್ತ ಹೋಗುವುದು ಅಂತಾ ನಿಶ್ಚಯ ಆಯ್ತು. ತಂಡ ಮಾಡಿಕೊಂಡು ನಿಧಾನಕ್ಕೆ ನಡೆದುಕೊಂಡು, ರಸ್ತೆ ಆಚೀಚೆಯ ಗಿಡಗಂಟಿಗಳನ್ನು ಸಹ ಬಿಡದಂತೆ. ಹುಡುಕಾಡುತ್ತ ಬೀಗರಾದಿಯಾಗಿ ಎಲ್ಲರೂ ಮಾರುತಿಯ ಊರು ಬಂದು ತಲುಪುವವರೆಗೂ ಹುಡುಕುತ್ತ ಹೋದರೂ ಯಲ್ಲಪ್ಪ ಸಿಗಲೇ ಇಲ್ಲ.

ಮಾರುತಿ ಊರಿನ ಅದೇ ಯುವಕ ಸಂಘದ ಆಫೀಸ್​ಗೆ ಬರೋ ಹೊತ್ತಿಗೆ ಬೆಳಗಿನ 6.20 ಆ ಕಡೆಯಿಂದ ಬೀಡಿ ವಸತಿ  ಬಸ್ಸು ಬರುವ ಹೊತ್ತು. ಎಲ್ಲರೂ ಬಸ್ ನಿಲ್ದಾಣದ ಬಳಿಯ ಯುವಕ ಸಂಘದ ಆಫೀಸ್‌ ಕಟ್ಟೆಯ ಮೇಲೆ ಕುಳಿತರು. ಮಾರುತಿ ಬೀಗರನ್ನು ಉದ್ದೇಶಿಸಿ ಮಾವಾರ್. ನಮ್ಮ ಯಲ್ಲ್ಯಾಂದು ಏನೋ ಘಾತ್ ಆತು ಅನಸತೇತಿ.. ಹೆಂಗ್ ಮಾಡೋದ್ರಿ ಇನ್ನ. ಏನಾರ ಇರವತ್ತ ಯಾಕ ನೀವು ಭಾಳ್ ದಣದ್ದೇರಿ. ಮನೀಗೆ ಹೋಗಿ ಚಹಾಕ್ಕ ವ್ಯವಸ್ಥಾ ಮಾಡಿ ಬರತೇನಿ ಅಷ್ಟೋಮಟ ಇಲ್ಲೇ ಸಂಘದ ಆಫೀಸ್ ಕಟ್ಟಿಮ್ಯಾಲ್ ಕುಂಡರೀ ಅಂತಾ ಹೇಳಿ ಇನ್ನೆನ್ನು ಎಂ 80 ಕಿಕ್ ಹೊಡಿತಾ ಇದ್ದ, ಸರಿಯಾಗಿ 6.30, ಆ ಕಡೆಯಿಂದ ಬೀಡಿ ಬಸ್ಸು ಬಂದು ನಿಂತಿತ್ತು. ಆಗ ಹುಡುಗರು ನಾವ ಬರೊದಿಲ್ರಿ ಅಂತಾ ಚೀರಿದ್ರು. ಏಕೆಂದರೆ ನಿತ್ಯ ಈ ಪಿಯುಸಿ ಹುಡುಗರು ಕಾಲೇಜ್‌ಗೆ ಅದೇ ಬಸ್​ಗೆ ಹೋಗುತ್ತಿದ್ದರು. ಆದರೆ ಎಲ್ಲರೂ ರಾತ್ರಿ ಯಲ್ಲಪ್ಪನನ್ನು ಹುಡುಕಲು ಓಡಾಡಿ, ಸುಸ್ತಾಗಿದ್ದರು. ಜೊತೆಗೆ ತಯಾರ ಸಹ ಆಗಿರಲಿಲ್ಲ. ಆದರೆ ಬರೋದಿಲ್ಲ ಅಂತಾ ಹೇಳಿದ್ರು ಬಸ್ ನಿಂತಿದ್ದು, ಇವರು ಬಂದು ಹತ್ತುತ್ತಾರಂತಲ್ಲ, ಯಾರೋ ಇಳಿಯುವರಿದ್ದರು. ಅರೇ.. ಇಷ್ಟು ಬೇಗ ಬೀಡಿ ಕಡೆಯಿಂದ ಯಾರದು ನಮ್ಮೂರಿಗೆ ಬರೋರು ಅಂತಾ ಬಸ್​ ನತ್ತ ನೋಡಿದ್ರೆ ಅಲ್ಲಿ ಯಾರನ್ನು ಇವರೆಲ್ಲ ರಾತ್ರಿಯಿಡೀ ಹುಡುಕಾಡಿದ್ದರೋ ಅದೇ ಯಲ್ಲಪ್ಪ ಇಳಿಯುತ್ತಿದ್ದನು. ಎಲ್ಲರೂ ಆಶ್ಚಯದಿಂದ ನೋಡುತ್ತ ನಿಂತರು. ಬಸ್ಸು ಮುಂದೆ ಹೋಯ್ತು. ಇವರನ್ನೆಲ್ಲ ನೋಡುತ್ತ ನಿಂತ ಯಲ್ಲಪ್ಪನೂ ಗಾಬರಿಯಾಗಿ ಹೋಗಿದ್ದನು. ಏಕೆಂದರೆ ನಿನ್ನೆ ರಾತ್ರಿಯಷ್ಟೇ ಬ್ಯಾಟಿ ಊಟ ಮಾಡಿಸಿದ್ದ ಬೀಗರು ಬೆಳಕು ಹರೆಯೋದ್ರೊಳಗೆ ನಮ್ಮೂರಲ್ಲಿ? ಯಾಕೆ? ಎನ್ನುವುದು ಒಂದಾಗಿದ್ರೆ, ಮಾರುತಿ ತಾನು ಹಾಕಿದ್ದ ನೀರೂಸೇಟ್ ಅಂಗಿ ತೆಗೆದಿರಲಿಲ್ಲ. ಅದಕ್ಕಿಂತ ಮುಖ್ಯ ಮಾರುತಿಯ ಮಾವ ಒಳಂಗಿ ಮತ್ತು ಪಟಾಪಟಿ ಚಡ್ಡಿಯಲ್ಲೇ ಹೊಸ ಅಳಿಯನ ಊರಿಗೆ ಬಂದಿದ್ದನು. ಇದನ್ನೆಲ್ಲ ನೋಡಿ ಯಲ್ಲಪ್ಪನಿಗೂ ಆಶ್ಚರ್ಯವೋ ಆಶ್ಚರ್ಯ! ಅವನು ಇವರನ್ನು ನೋಡುತ್ತಿದ್ದರೇ, ಇವರೆಲ್ಲರೂ ಅವನನ್ನು  ಅದೇ ಆಶ್ಚರ್ಯದಿಂದ ನೋಡುತ್ತಿದ್ದರು.  ಕೊನೆಗೆ ಇವರ ಹತ್ತಿರ ಬಂದವನೇ ಲೇ ಮಾರುತ್ಯಾ ಮಗನ. ಮದುವೆಯಾಗೋ ಹುಡುಗಿನ ನೋಡಿದ ಖುಷ್ಯಾಗ, ಕನಸ ಕಾಣಕೊಂತ ನನ್ನ ಅಲ್ಲಿ ಕತ್ರ್ಯಾಗ್(ಕ್ರಾಸ್) ದಾಗ ಒಗದ ಬಂದಿಯಲ್ಲಲೇ ಅಂತಾ ಬಯ್ಯೋಕೆ ಶುರು ಮಾಡಿದ. ಆಗ ಮಾರುತಿಗೆ ರಾತ್ರಿ ಏನ ನಡೆದಿರಬಹುದು ಎನ್ನುವುದು ಅರ್ಥವಾಯಿತು. ಕ್ರಾಸ್ ಗಿಂತ ಮೊದಲೇ ಕಚ್ಚಾ ರಸ್ತೆ ಮುಗಿದು ಡಾಂಬರು ರಸ್ತೆ ಬರುತ್ತೆ. ಕ್ರಾಸ್‌ನಿಂದ ಎರಡು ಕಿಮೀ ಮಾತ್ರವೇ ಡಾಂಬರು ರಸ್ತೆ, ಆ ಬಳಿಕ ಬೀಗರ ಊರಿನವರೆಗೆ ಇರೋದು ಕಚ್ಚಾ ರಸ್ತೆ, ಆ ಕಚ್ಚಾ ರಸ್ತೆಯಿಂದ ಡಾಂಬರು ರಸ್ತೆಗೆ ಸೇರುವ ಸ್ಥಳದಲ್ಲಿ ಏಕಾಏಕಿ ಉಬ್ಬರ ಬರುತ್ತದೆ. ಆ ಉಬ್ಬರಕ್ಕೆ ಬೈಕ್ ಮೇಲಿಂದ ಯಲ್ಲಪ್ಪ ಬಿದ್ದು ಬಿಟ್ಟಿದ್ದಾನೆ. ಆದರೆ ಮಾರುತಿಗೆ ಅದು ಯಾವುದರ ಪರಿವೆಯೇ ಇರಲಿಲ್ಲ. ಆತ ತನ್ನ ಹುಡುಗಿಯ ಕನಸಿನಲ್ಲಿದ್ದನು.

ಅದು ಸರೀಪಾ.. ನೀ ಎಲ್ಲಿ ಹೋದಿ ಆ ಮ್ಯಾಲ್? ಅಂತಾ ಮಾರುತಿ ಕೇಳಿದ. 
ನಾ ಎಲ್ಲಿ ಹೋಗಲೀಪಾ.. ನೀ ನನ್ನ ಒಗದ ಹೋದಿ. ಆದ್ರ ಬೀಗರ ಕೊಟ್ಟ ಕಂಬಳಿ ಇತ್ತಲ್ಲ ಅದನ್ನು ಹೊಚಕೊಂಡ ಅಲ್ಲೇ ಬಾಜು ಗದ್ದಿ ಬದು  ಮ್ಯಾಲ್ ಮಲಗಿದ್ದೆ. ಆದ್ರ ಮಲಗಿದ ಒಂದೇರಡ ತಾಸಿನ್ಯಾಗ್ ಯಾವೋ ಬೇಬರ್ಸಿಗೋಳ ಸೈಕಲ್ ಸಪ್ಫಳ ಮಾಡಕೊಂತ ಬಂದು ಬಿಟ್ಟಿದ್ದವು. ನಂಗೆ ಗಬಕ್ಕನ್ ಎಚ್ಚರ ಆತು. ಆಗ ನೋಡಿದ್ರ ನಶೆನೂ ಇಳಿದಿತ್ತು. ನೀ ನನ್ನ ಒಗದ ಹೋಗಿದ್ದು ನೆನಪ ಆಯ್ತು. ಇನ್ನೆನ್ ಮಾಡೋದು ಎಲ್ಲಿ ತನಕಾ ಆಗತೇತಿ ಅಲ್ಲಿ ಮಟಾ ನಡಕೊಂತ ಹೋಗೋಣ ನಡೀ ಅಂತಾ ಹೊರಟಿದ್ದೇ. ಆದ್ರೆ ನಾ ಕ್ರಾಸ್​ ದಾಗ ಬಲಕ್ಕೆ ಹೊರಳುವುದು ಬಿಟ್ಟು, ನಿದ್ದೆಗಣ್ಣಲ್ಲಿ, ಎಡಕ್ಕಕೆ ಹೊರಳಿಟಿದ್ಡೆ. ಆ ಮೈಲಿಕೂಲಿ ಮೈಲಾರಪ್ಪ, ಹೊಲದಾಗ ನೀರು ಹಾಯಿಸೋದು ನೋಡಿದಾಗಲೇ ಗೊತ್ತಾತ್ತು. ನಾ ನಮ್ಮೂರ ಬಿಟ್ಟ ಬೀಡಿ  ಊರಿನ ಕಡೆ ಹೊಂಟೇನಿ ಅಂತಾ.  ಇನ್ನೆನ್ನ ಮಾಡೋದು ಅಂತಾ ಅಲ್ಲೇ ಬೋರ್ ನೀರಿಗೆ ಬೀಗರ್ ಕೊಟ್ಟಿದ್ದು ಇನ್ನೊಂದು ಒಟಿ ಉಳಿದಿತ್ತು. ಅದನ್ನು ಏರಿಸಿ. ಅಲ್ಲೇ ಮೈಲಾರಪ್ಪನ  ಜೊತೆ ಮಾತಾಡಕೊಂತ ಮಲಕೊಂಡ ಬಿಟ್ಟೀನಿ. ಬೆಳಗ್ಗೆ ಬೀಡಿ ಬಸ್ಸಿಗೆ ಅವನ ಕಡೆ ಕಡೆ ೧ ರೂಪಾಯಿ ಇಸ ಕೊಂಡು ಹತ್ತಿ ಬಂದೇನಿ. ಏನಲೇ ಮಾರುತ್ಯಾ ನೀ ಹಿಂಗ್ ನಡು ದಾರಿಯಾಗ ಬಿಟ್ಟು ಬರೋದಾ ಅಂತಾ ಒಂದೇ ಸಮನೇ ಬಡಬಡಿಸೋಕೆ ಶುರು ಮಾಡಿದ. 
ಇದನ್ನು ಕೇಳುತ್ತ ಎಲ್ಲರೂ ಸಹ ಬೆಪ್ಪನಂತೆ ನಿಂತು ಬಿಟ್ರು.
ಕೊನೆಗೂ ಏನು ಆಗಿರಬಹುದು. ಯಲ್ಲಪ್ಪ ಅಲ್ಲೇ ಇದ್ದರೂ ಮೊದಲ ಸಲ ಹುಡುಕಾಟದಲ್ಲೇ ಯಾಕೆ ಸಿಗಲಿಲ್ಲ ಅನ್ನೋದರ ಬಗ್ಗೆ ಎಲ್ಲರೂು ವಿಚಾರ ಮಾಡಿದರು. 

ಅದು ಆಗಿದ್ದು ಇಷ್ಟೆ- ಅಲ್ಲಿ ಕಚ್ಚಾ ರಸ್ತೆ ಮುಗಿದು ಡಾಂಬರ್ ರಸ್ತೆ ಶುರುವಾಗುವ ಸ್ಥಳದಲ್ಲೇ ಬೈಕ್ ಮೇಲಕ್ಕೆ ಎದ್ದಿದೆ ಆಗ ಯಲ್ಲಪ್ಪ ಕೆಳಗೆ ಬಿದ್ದಿದ್ದಾನೆ. ಆದರೆ ತನ್ನ ಭಾವಿ ಪತ್ನಿಯ ಕನಸು ಕಾಣುತ್ತಲೇ ನಿಧಾನಕ್ಕೆ ಬರುತ್ತಿದ್ದ ಮಾರುತಿಗೆ ಇದಾವುದರ ಪರಿವೂ ಇರಲಿಲ್ಲ. ಅತ್ತ ಬೈಕ್ ನಿಧಾನಕ್ಕೆ ಹೋಗುತ್ತಿದ್ದ ಕಾರಣಕ್ಕೆ ಯಲ್ಲಪ್ಪನಿಗೆ ಪೆಟ್ಟು ಆಗಿರಲಿಲ್ಲ. ಆ ಕೂಡಲೇ ಆತ ಅಲ್ಲೇ ಪಕ್ಕಕ್ಕೆ ಹೋಗಿ ನಶೆ ಇದ್ದ ಕಾರಣ ಮಲಗಿ ಬಿಟ್ಟಿದ್ದಾನೆ. ಆದರೆ ಯಾವಾಗ ಮಾರುತಿ ತನ್ನೂರಿಗೆ ಬಂದು ಹುಡುಗರನ್ನು ಕರೆದುಕೊಂಡು ಸೈಕಲ್‌ನಲ್ಲಿ ಹುಡುಕಾಡುತ್ತಿದ್ದನೋ ಆಗ ಆತ ಅಲ್ಲೇ ಇದ್ದ, ಆದರೆ ಇವರು ರಸ್ತೆ ಅಕ್ಕಪಕ್ಕ ಮಾತ್ರ ನೋಡುತ್ತ ಹೋಗಿದ್ದಾರೆ ಹೊರತು ಆಚೀಚೆ ಇರೊ ಗದ್ದೆಗಳಲ್ಲಿ ನೋಡಿರಲಿಲ್ಲ. ಆದರೆ ಈ ತಂಡದ ಶಬ್ದಕ್ಕೆ ಎಚ್ಚರಗೊಂಡ ಯಲ್ಲಪ್ಪ, ಡಾಂಬರು ರಸ್ತೆಯ ಕಡೆಯೇ ನಮ್ಮೂರ ದಾರಿ ಎಂದು ಅರಿತುಕೊಂಡು ಸರಿಯಾದ ದಾರಿಯಲ್ಲೇ ಕತ್ತಲಿನಲ್ಲಿ ನಡೆಯುತ್ತ ಬಂದಿದ್ದಾನೆ. ಆದ್ರೆ ಮುಖ್ಯ ರಸ್ತೆಯ ಕ್ರಾಸ್​ಗೆ ಬಂದಾಗ, ಬಲಗಡೆ ಹೊರಳಿದ್ರೆ ತನ್ನೂರ ದಾರಿ ಹಿಡಿಯುತ್ತಿದ್ದ. ಕತ್ತಲಿನಲ್ಲಿ ಗೊತ್ತಾಗದೇ ಎಡಕ್ಕೆ ತಿರುಗಿ ಬೀಡಿ ಕಡೆಯ ದಾರಿ ಹಿಡಿದಿದ್ದಾನೆ. ಅಲ್ಲಿ ಒಂದೇ ಕಿಮೀ ಅಷ್ಟೇ ನಡೆದಿದ್ದ ಆಗ ನೀರು ಹಾಯಿಸುತ್ತಿದ್ದ ಮೈಲಾರಪ್ಪ ಕಂಡಿದ್ದಾನೆ. ಹೋಗಿ ಮಾತನಾಡಿಸಿದಾಗಲೇ ಈತನಿಗೆ ದಾರಿ ತಪ್ಪಿದ ಅರಿವಾಗಿದೆ. ಆದರೆ ಅತ್ತ ಮಾರುತಿ ಮತ್ತು ಆತನ ಬೀಗರೆಲ್ಲ,  ವಾಪಸ್ ಬರೋವಾಗ ರಸ್ತೆಯ ಇಕ್ಕೆಲಗಳಲ್ಲಿನ ಗದ್ದೆಗಳನ್ನೂ ಸಹ ಬಿಡದೇ ತಡಕಾಡಿದ್ದರು. ಆದರೆ ಯಾರೂ ಸಹ ಬೀಡಿಯ ಮಾರ್ಗದ ಕಡೆ ಹೋಗಲೇ ಇಲ್ಲ. ಯಾಕಂದ್ರೆ ಮಾರುತಿಯ ಊರು ಮತ್ತು ಆತನ ಬೀಗರ ಊರಿನ ದಾರಿ ಮಾತ್ರ ಹುಡುಕಿದ್ದರು. ಯಾರಿಗೂ ಈತ ಬೀಡಿ ಕಡೆ ಹೋಗಿರುತ್ತಾನೆ ಎನ್ನುವ ಕಲ್ಪನೆ ಇರಲಿಲ್ಲ.
ಕೊನೆಗೂ ರಾತ್ರಿ ಕಳೆದು ಹೋಗಿದ್ದ ಯಲ್ಲಪ್ಪ ಸಿಕ್ಕಿದ್ದನು. ಮಾರುತಿ, ದೊಡ್ಡ ಪಾತ್ರೆಯಲ್ಲಿ ಉಪ್ಪಿಟ್ಟು ಮಾಡಿಸಿ, ಉಪಹಾರ ಕೊಟ್ಟು ಬೀಗರನ್ನು ಊರಿಗೆ ಕಳುಹಿಸಿ ಕೊಟ್ಟನು. ಮಾರುತಿ ಹೊಸ ಬೀಗರ ಊರಿನ ಬ್ಯಾಟಿಗೆ ನೀರೂಸೇಟ್ ಅಂಗಿ ಹಾಕಿಕೊಂಡು ಹೋಗಿದ್ದರೇ. ಯಲ್ಲಪ್ಪನ ಕಾರಣದಿಂದ ಅವರ ಮಾವ ಹೊಸ ಬೀಗರ ಊರಿಗೆ ಪಟಾಪಟಿ ಚೆಡ್ಡಿಯಲ್ಲಿಯೇ ಬರುವಂತಾಗಿತ್ತು. ಇವತ್ತಿಗೂ ಮಾರುತಿಯ ಮಾವ ಬೀಗರ ಊರಿಗೆ ಪಂಚೆ ಉಟ್ಟುಕೊಂಡು ಬಂದಾಗೆಲ್ಲ ಊರಿನವರೂ ಇದೆಲ್ಲ ಏನ ಬಿಡ್ರಿ ಮೊದಲ ಸಲ ನೀವ ಚಡ್ಡಿ ಮ್ಯಾಲ್ ಬಂದವರು. ಈಗ ಹೆಂಗ ಬಂದ್ರು ನಡಿತೇತಿ ಅಂತಾ ಕಿಚಾಯಿಸುತ್ತಲೇ ಇರುತ್ತಾರೆ.

ಈ ಘಟನೆ ನಡೆದ ಬಳಿಕ ಎಲ್ಲಿಯಾದರೂ ಬ್ಯಾಟಿ ಇದ್ದಾಗ, ಊಟಕ್ಕೆ ಬರ್ತಿ ಏನು ಅಂತಾ ಯಾರಾದ್ರೂ ಕೇಳಿದ್ರೆ ಸಾಕು ಯಲ್ಲಪ್ಪ ಓಡಿ ಹೋಗಿ ಬಿಡುತ್ತಾನೆ. 

-ಡಿ.ವಿ. ಕಮ್ಮಾರ್, ಧಾರವಾಡ

Category : Literature


ProfileImg

Written by D.V. Kammar

News Reporter