ಮೊಗ್ಗೆ ಮಲ್ಲಿಗೆ ಬಿರಿಯುವಾ ಗಳಿಗೆ, ಹಸಿರು ಗಿಡದಲ್ಲಿ ಮಲ್ಲಿಗೆ ಬಿರಿಯುತ್ತಿದ್ದರೆ ಮನೆಯೆಲ್ಲಾ ಅದರದ್ದೇ ಘಮ, ಹೊಸತನದೊಂದಿಗೆ ಹಗುರಾದ ಭಾವ. ಅದರ ಜೀವನ ಒಂದೇ ದಿನವಾದರೂ ಆ ಶ್ವೇತ ಸುಂದರಿ ಅರಳಿ ಬಿರಿದಾಗಲೇ ಧನ್ಯತಾ ಭಾವ. ಭಾವ ಬಲಿಯಬೇಕೆಂದರೆ ಅರಳುವ ಪರಿಸರ ,ವಾತಾವರಣವೂ ಅಷ್ಟೇ ಮುಖ್ಯ. ಮಳೆ ಬಂದಾಗ ಮುದುಡಿ ಮುದ್ದೆಯಾಗುವ ಮಲ್ಲಿಗೆ ಹೂಬಿಸಿಲಿನ ಇಬ್ಬನಿಗೆ ಅರಳಿ ನಗುತ್ತದೆ. ಸಂಜೆ ಗಾಳಿಗೆ ಮನದ ಸುತ್ತ ಸುತ್ತುತ್ತದೆ.
ಹಸಿರು ಬಳೆ, ಮುಡಿ ತುಂಬಾ ಮಲ್ಲಿಗೆ, ಉಡಿ ತುಂಬಿದ ಸಂಭ್ರಮದ ದಿನಗಳು. ನವಮಾಸ ತುಂಬಿತ್ತು. ಮನೆಗೆ ಮಗು ಬರುವ ಕಾತರ.ಮೊದಲ ಮಳೆ ಧರೆ ಸೇರುವ ಸಂಭ್ರಮ. ಬರಡಾದ ನೆಲದ ಮೇಲೆ ಹಸಿರುಕ್ಕಿಸಿ , ಹೂವರಳಿಸಿ ,ಚಿಗುರುಟ್ಟಿಸಿ, ಕಾಯ್ಬಿಟ್ಟು ಹಣ್ಣಾಗುವ ವಸಂತ ಮಾಸ. ಹೆಣ್ತನದ ಕಳೆಬರುವ ಫಲ ಸಿಗುವ ಮುದ್ರೆಯೊತ್ತುವ ಕಾಲ,
ಅದಕ್ಕೆಂದೆ ಮನೆಯಲ್ಲಿ ಬಣ್ಣ ಬಣ್ಣದ ಆಟಿಕೆ, ತೊಟ್ಟಿಲು, ಉಲ್ಲನ್ ಸಾಕ್ಸ್ ಗಳು, ಗುಲಾಬಿ ಬಣ್ಣದ ಬಟ್ಟೆಗಳು, ಮನೆಯನ್ನು ಎಷ್ಟು ಶುಚಿಯಾಗಿಟ್ಟರೂ ಸಾಲದು. ಕೆಲಸದವಳಿಗೆ ಬೈಗುಳದ ಸುರಿಮಳೆ. ಬರುವ ಮನೆ ಬೆಳಕನ್ನು ಸ್ವಾಗತಿಸಲು ದೇವರ ಮುಂದೆ ದೀಪಗಳ ಸಾಲು. ಹೂ - ಹಣ್ಣಿನ ಹರಕೆ. ಹೊಸ ಮಳೆಯ ಸ್ಪರ್ಶಕ್ಕೆ ಮಣ್ಣು ಸಡಿಲಗೊಂಡು ಭೂಮಿ ತಾಯಿ ಬಸಿರ ತೊಟ್ಟಂತೆ ನನ್ನ ಕನಸು ಮಡಿಲು ತುಂಬುವ ತವಕ, ನವ ಮಾಸಗಳಲ್ಲಿ ಹಣ್ಣು-ಹಂಪಲು ತಿಂದು ಆರೋಗ್ಯವಾಗಿದ್ದೆ. ನೀರು-ಗಾಳಿ,ಬಿಸಿಲಿನಿಂದ ದೂರವೇ ಇದ್ದೆ,
ದಿನ ಅಲ್ಪ ನಡಿಗೆ, ಅಲ್ಪ ಕೆಲಸ ಒಟ್ಟಿನಲಿ ಆರೋಗ್ಯವೇ ಮುಖ್ಯವಾಗಿತ್ತು.
ಒಂದು ರಾತ್ರಿ, ಹೊರಗಡೆ ತುಂಬಾ ಮಳೆ, ಸುಂಯ್ಯೆನ್ನುವ ಗಾಳಿ, ತರಗೆಲೆಗಳ ಶಬ್ಧ, ನಾಯಿ ಒಂದೇ ಸಮನೆ ಬೊಗಳುವ ಸದ್ದು, ಇದ್ದಕ್ಕಿದ್ದಂತೆ ಅಮ್ಮಾ ಎಂದು ಕರೆವ ಸದ್ದು. ಯಾರು ? ಯಾರು? ಎಂದು ಎರೆದೆರಡು ಬಾರಿ ಕೇಳಿದೆ. ಅಮ್ಮಾ ಈ ಭೂಮಿಗೆ ನಾನು ಬರಲೇ ಬೇಕೇನಮ್ಮಾ? ನನ್ನ ಬಸಿರಿನ ಧ್ವನಿ. ನಾನು ಏಕೆ ಕಂದಾ ..ಹೀಗೇಕೆ ಕೇಳುತ್ತಿರುವೆ ಎಂದೆ. ಪ್ರಪಂಚವನ್ನು ನೋಡುವ ಆಸೆಯೇನೋ ಇದೆ ನನಗೆ. ಆದರೇ...ಆದರೆ ಏನು ಕಂದಾ ಎಂದೆ. ನಿನ್ನ ಮಡಿಲಲ್ಲಿ ಎಷ್ಟು ದಿನ ಆಟವಾಡಿಕೊಂಡಿರಲಿ? ಒಂದು ದಿನ ದೊಡ್ಡವಳಾಗಲೇ ಬೇಕಲ್ಲಾ.. ಈ ಕೆಟ್ಟ ಸಮಾಜದಲ್ಲಿ ನಾನು ಬೆಳೆಯುವುದಾದರೂ ಹೇಗೆ? ಕಾಲು ತುಂಬಾ ಗೆಜ್ಜೆ ತೊಟ್ಟು ಅಂಗಳದಲ್ಲಿ ಓಡಾಡುವಂತೆಯೂ ಇಲ್ಲ, ಪಕ್ಕದಮನೆಯವರು ಚಾಕ್ಲೇಟ್ ಕೊಟ್ಟರೆಂದು ತಿನ್ನುವಂತೆಯೂ ಇಲ್ಲ. ದೊಡ್ಡವರಾದರಂತು ಮುಗಿದೇ ಹೋಯಿತು. ಯಾರ ಹತ್ತಿರವೂ ಮಾತನಾಡುವಂತೆಯೂ ಇಲ್ಲ. ಬೆರೆಯುವಂತೆಯೂ ಇಲ್ಲ. ಯಾರನ್ನು ನಂಬುವುದು, ಬಿಡುವುದು. ನಮ್ಮವರಾರು? ಹೊರಗಿನವರಾರು? ಎಂದು ಅಂದಾಜು ಮಾಡುವುದೇ ಕಷ್ಡವಾಗಿದೆ. ಶಾಲೆಯಲ್ಲಿ ಮಿತಿಮೀರಿದ ಪುಸ್ತಕದ ಹೊರೆ, ಹೋಂವರ್ಕ್, ಪರೀಕ್ಷೆಯ ಒತ್ತಡ, ಗಡಿಬಿಡಿಯ ಜೀವನ, ನೆಮ್ಮದಿಯೇ ಹೇಳ ಹೆಸರಿಲ್ಲದಂತಾಗಿದೆ,
ಮುಗ್ಧ ಮನಸು ಮಗುವಾಗಿರಲು ಬಿಡುವುದೇ ಇಲ್ಲ. ಅಮ್ಮನ ಮಡಿಲಲ್ಲಿ ನೆಮ್ಮದಿಯ ನಿದ್ದೆ, ಅಂಗಳದಲ್ಲಿ ಮಣ್ಣಾಟ, ಪಾರ್ಕ್ ನಲ್ಲಿ ಲಗುಬಗೆಯ ಓಡಾಟ. ಎಲ್ಲವನ್ನು ಶಾಲೆಯೆಂಬ ದುಡ್ಡಿನ ಕಾರ್ಖಾನೆ ಸುಟ್ಟುಹಾಕುತ್ತಿದೆ. ವಿಷಪೂರಿತ ಆಹಾರ ,ಹೊಗೆಯುಗುಳುವ ಕಾರ್ಖಾನೆ, ಮಲಿನವಾದ ನೀರು-ಗಾಳಿ, ಮರಗಳ ಮಾರಣ ಹೋಮ, ಪರಿಣಾಮ ಅತಿವೃಷ್ಠಿ-ಅನಾವೃಷ್ಠಿ. ಬರಿದಾದ ನೆಲದೊಡಲು. ಕೆಟ್ಟ ಪರಿಸರ,ಕೊಳಕು ಮನಸಿನ ಜನರು, ದುಡ್ಡಿಗಾಗಿ ಭವಿಷ್ಯ ತಿದ್ದುವ ಜ್ಯೋತಿ಼ಷಿಗಳ ಸಾಲು. ಭೂಮಿಗೆ ನಾ ಬಂದಾಗ ನೀನೇ ಸ್ವಾಗತಿಸುತ್ತೀಯ ಎಂಬ ಭರವಸೆಯೂ ನನಗಿಲ್ಲ. ಸೂಲಗಿತ್ತಿಯೇ ನನ್ನ ಮುಗಿಸಬಹುದು. ಕಳ್ಳ-ಕಾಕರೂ ಹೊತ್ತೊಯ್ಯಬಹುದು. ನನಗಾಗಿ ಯಾವ ರಕ್ಷಣೆಯೂ ಇಲ್ಲ. ಮಡಿಲಲ್ಲಿ ಮಗುವಾಗುವ ಅವಕಾಶ ಎಷ್ಟು ಜನರಿಗೆ ಉಂಟಮ್ಮಾ? ಒಂದು ಗಿಡವಾಗಿ ಹುಟ್ಟಿದರೂ ಸರಿಯೆ. ನೂರಾರು ಜನರಿಗೆ ನೆರಳ ಕೊಡಬಲ್ಲೆ. ಹೆಣ್ಣಾಗಿ ಹುಟ್ಟಿ ನಿನ್ನ ಕಣ್ಣೀರ ನೋಡಲಾರೆ. ಅದಕ್ಕಿಂತಾ ಮಣ್ಣಾಗುವುದೇ ಮೇಲು. ಈ ಕೆಟ್ಟ ಪ್ರಪಂಚಕ್ಕೆ ನಾನು ಬರಲೇಬೇಕೆನಮ್ಮಾ? ನಿನ್ನ ಮಡಿಲಲ್ಲಿ ಚಿರನಿದ್ದೆಗೆ ಜಾರಬಾರದೇಕೆ?ಇಲ್ಲಿ ಯಾವ ಭಯವೂ ಇಲ್ಲ. ನೆಮ್ಮದಿಯ ನೆಲೆ ಈ ನಿನ್ನ ಬಸಿರು. ಇದ್ದಕ್ಕಿದ್ದಂತೇ ಧ್ವನಿ ಸಣ್ಣದಾಗುತ್ತಾ ಹೋಯಿತು. ನನ್ನ ಮೈ ಬೆವರತೊಡಗಿತು. ಅಲ್ಲೇ ಕುಸಿದು ಕುಳಿತೆ. ಅಂಬುಲೆನ್ಸ್ ಹೊಡೆದುಕೊಳ್ಳುವ ಶಬ್ಧ ಕೇಳಿ ಬರುತ್ತಿತ್ತು. ದೇಹ ತಣ್ಣಗಾದ ಅನುಭವ !
0 Followers
0 Following