ದುಡ್ಡಿಗಾಗಿನ ದುಡಿಮೆ ನಮ್ಮ ಸಂತಸವನ್ನು ಕಿತ್ತುಕೊಂಡು ದುಡ್ಡಿದ್ದವರ ಕಾಲಾಳಾಗಿಸಿರುವ ಈ ಹೊತ್ತು, ಬಂಡವಾಳಶಾಹಿ ನಮ್ಮ ಭಾವನೆಗಳನ್ನು ದೋಚಿ ಮಾರಾಟಕ್ಕಿಟ್ಟಿದೆ. ಭಾವನೆಗಳನ್ನು ದುಡ್ಡು ಕೊಟ್ಟು ಪಡೆಯುವ ಸಲುವಾಗಿ ಮಾರಾಟಗಾರರ ಗುಲಾಮರಾಗಿರುವೆವು ನಾವು. ಕೂಡಿಡುವ ಕೂಟದಲ್ಲಿ ಒಂದಾಗಲಾಗದಿರುವಾಗ, ಈ ನಗರದ ಜನದಟ್ಟಣೆಯ ನಡುವೆಯು ಒಂಟಿತನ ಆವರಿಸುತ್ತದೆ. ಹೇಗೆ ಹುಟ್ಟಿದವು ಈ ನಗರಗಳು? ಯಾವ ಊರನ್ನು ನನ್ನ ಊರೆನ್ನೆಲಿ ? ನನ್ನ ಕೈಯಲ್ಲಿ ಉಳಿಯದಿದ್ದರೂ, ಕೃತಕತೆಯ ಜೀವಂತ ಉದಾಹರಣೆಯಾದ 'ನೋಟು' ನನ್ನದು ಮಾತ್ರ ಹೇಗಾದೀತು ? ನನ್ನದೆಂದು ನಾನು ಭಾವಿಸುವ ದುಡ್ಡು ಕೊಟ್ಟ ಮಾತ್ರಕ್ಕೆ, ಎಷ್ಟೋ ಮನುಷ್ಯರು ಸೇರಿ ಕಟ್ಟಿದ ಮನೆ, ನನ್ನ ಮನೆ ಹೇಗಾದೀತು ? ಆಫ್ರಿಕಾದಿಂದ ಸುಳ್ಯದ ವರೆಗು, ನಾ ನಡೆದ ದಾರಿ ತುಂಬ ಚೆಲ್ಲಿದೆ ನನ್ನ ಮನೆಯ ಕುರುಹುಗಳು. ಆ ಕುರುಹುಗಳಲ್ಲಿನ ಚುಕ್ಕಿಗಳನ್ನು ಸೇರಿಸಿದಾಗ ಬೆಂಗಳೂರಿನ ಬೆರಗು-ಬೇಗುದಿಗಳ ಚಿತ್ರವೊಂದು ಮನದಲ್ಲಿ ಮೂಡುತ್ತದೆ
ತಲಕಾಡಿನಲ್ಲಿರುವ ಗಂಗರಸರ ಕಾಲದ ಬೇಗೂರು ಶಾಸನದಲ್ಲಿ ‘ಬೆಂಗವಲ್ಲೂರು’ ಅನ್ನೋ ಹೆಸರು ಒಂಬತ್ತನೇ ಶತಮಾನದಲ್ಲೇ ನಮೂದಿಸಲ್ಪಟ್ಟಿದೆ. ಅದರಿಂದ ಆಚೀಚೆಗೆ ಕೆಂಪೇಗೌಡರ ಬೆಂದಕಾಳೂರು ವರೆಗೆ ಬೆಂಗಳೂರಿನ ಹಳೇ ಇತಿಹಾಸವಿದೆ. ಇದಲ್ಲದೇ, ಕಲಿಕಾ ಕಾಮಾಟೇಶ್ವರ ದೇವಳದ ಮುಂದೆ ಅನ್ನ(ಕೂಳು)ಬೇಯಿಸುತ್ತಿದ್ದ ಊರು ಬೆಂದಕೂಳೂರು ಅಂತೆ; ಗಂಗರು ಮತ್ತು ಹೊಯ್ಸಳರ ಕಾಲದ ಕಾವಲುಗಾರರ ಊರು ಬೆಂಗಾವಲೂರು ಅಂತೆ; ಗ್ರಾನೈಟ್ ಕಲ್ಲುಗಳಿಂದ ಸುತ್ತುವರಿದಿರುವ ಊರು ಬೆನಚು ಕಲ್ಲೂರು ಅಂತೆ; ಕೆಂಪೇಗೌಡರು ಕಾಡನ್ನು ಸುಟ್ಟಿದ್ದಕ್ಕಾಗಿ ಬೆಂದ ಕಾಡೂರು ಅಂತೆ; ಬೆಂಗ ಮರಗಳಿದ್ದ ಊರು ಬೆಂಗಳೂರು ಅಂತೆ; ಜೈನ ಮುನಿಗಳು ಬಿಸಿ ಬಿಸಿ ಕಲ್ಲುಗಳ ಮೇಲೆ ತಪಸ್ಸು ಮಾಡಿದ್ದಕ್ಜೆ ಬೆಂದ ಕಲ್ಲೂರು ಅಂತೆ - ಹೀಗೆ ಬೆಂಗಳೂರೆಂಬ ಹೆಸರಿನ ಸುತ್ತ ಹಬ್ಬಿಕೊಂಡಿರುವ ಕಥೆಗಳು ಹಲವು. ಒಡೆಯರು, ಸುಲ್ತಾನರು, ವಿಜಯನಗರ ಅರಸರು, ಮರಾಠರ ಆದಿಯಾಗಿ ಬೆಂಗಳೂರನ್ನು ಹಲವರು ಆಳಿದ್ದಾರೆ. ಚಿಕ್ಕದೇವರಾಜ ಒಡೆಯರ್ ಬೆಂಗಳೂರಿನ ಬದಲಾವಣೆಗೆ ಪ್ರಧಾನವಾಗಿ ಕಾರಣರಾದವರು. ಹೈದರ್-ಟಿಪ್ಪುಸುಲ್ತಾನರು ಆಧುನಿಕ ಬೆಂಗಳೂರಿಗೆ ಅಡಿಪಾಯ ಹಾಕಿದರು. ಬ್ರಿಟೀಷರು ಬೆಂಗಳೂರಿನ ವಾತಾವರಣದ ವೈಶಿಷ್ಟ್ಯತೆಯನ್ನು ಗುರುತಿಸಿ, ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಗಾರವಾಗಿಸಿಕೊಂಡರು. ‘ಲಾರ್ಡ್ ಕಬ್ಬನ್’ ಬೆಂಗಳೂರನ್ನು ಮೈಸೂರು ಸಂಸ್ಥಾನದ ರಾಜಧಾನಿಯಾಗಿಸಿದಾಗ ಬೆಂಗಳೂರು ಮತ್ತಷ್ಟು ಆಧುನಿಕತೆಗೆ ತೆರೆದುಕೊಂಡಿತು. ಅಲ್ಲಿಂದೀಚೆಗೆ ಬೆಂಗಳೂರಿನ ಬೆಳವಣಿಗೆ ಕಾಲದಿಂದ ಕಾಲಕ್ಕೆ ವೇಗ ಪಡೆದುಕೊಂಡಿತು. 1905 ಆಗಸ್ಟ್ ತಿಂಗಳಲ್ಲಿ ದೇಶದಲ್ಲೇ ಪ್ರಥಮ ಭಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡ ನಗರವೆಂಬ ಹೆಗ್ಗಳಿಕೆಯು ಬೆಂಗಳೂರಿನದಾಯಿತು. ಬೆಂಗಳೂರಿನ ಇತಿಹಾಸವನ್ನು ಬರೆಯಲು ಸಾವಿರಾರು ಪುಟಗಳ ಪುಸ್ತಕವೇ ಬೇಕು. ಇತಿಹಾಸವನ್ನು ದಾಖಲಿಸುವುದು ಈ ಲೇಖನದ ಉದ್ದೇಶವಲ್ಲ. ನನಗಿನ್ನೂ ಸ್ಪಷ್ಟವಾಗಿ ದಕ್ಕದ ಬೆಂಗಳೂರನ್ನು ಬರೆಯುವುದರ ನಡುವೆ, ಒಂಚೂರು ಇತಿಹಾಸವನ್ನು ಮೆಲುಕು ಹಾಕಿದ್ದೇನಷ್ಟೆ.
ಎಳೆದಷ್ಟೂ ಉದ್ದವಾಗುವ ಬೆಂಗಳೂರು..
ಯಾವು ಯಾವುದೋ ಊರಿನಿಂದ ಬಂದ ಜನರನ್ನು ತಬ್ಬಿಕೊಂಡು ಲಾಲಿ ಹಾಡುತ್ತದೆ ಬೆಂಗಳೂರು. ಮನುಷ್ಯರೊಂದಿಗೆ ಗಾಢವಾದ ಸಂಬಂಧವನ್ನು ಬೆಳೆಸಿ, ಮನುಷ್ಯರಂತೆಯೇ ಉಸಿರಾಡುತ್ತದೆ ಈ ಊರು. ನಿಂತು ನಿಂತು ಸಾಗುವ ಇಲ್ಲಿನ ಟ್ರಾಫಿಕ್, ರಸ್ತೆಗಳನ್ನು ಮರೆಯಿಸಿ, ಚಲನೆಯನ್ನು ಅರ್ಧಂಬರ್ಧವಾಗಿಸುತ್ತದೆ. ಕೊಳೆತಂತಿರುವ ಇಲ್ಲಿನ ಮಾರುಕಟ್ಟೆಗಳಲ್ಲಿ ಹಲವರ ಬದುಕಿನ ಹೂವರಳುತ್ತದೆ. ಸಿಗ್ನಲುಗಳ ಮಧ್ಯೆ ಪ್ರೇಮದ ಸನ್ನೆಗಳು ಕುಡಿಯೊಡೆಯುತ್ತವೆ. ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ಮನಸ್ಸುಗಳನ್ನು ಬೆಸೆಯುವ ಮೈದಾನಗಳು ಇಲ್ಲದಿರುವ ಈ ಊರು ವಿಸ್ತರಿಸುತ್ತಿರುವ ವೇಗಕ್ಕೇನು ಕಮ್ಮಿಯಿಲ್ಲ. ಕೆಂಪೇಗೌಡರು ಬೆಂದಕಾಳೂರು ಅನ್ನುವ ನಗರ ನಿರ್ಮಾಣದ ಭಾಗವಾಗಿ ನಾಲ್ಕು ವಾಚ್ ಟವರ್'ಗಳನ್ನು ನಿರ್ಮಿಸಿದ್ದರು. ಗವಿಪುರಂನ ಕೆಂಪಾಂಬುದಿ, ಹಲಸೂರು, ಲಾಲ್ ಬಾಗ್ ಮತ್ತು ಮೇಕ್ರಿ ಸರ್ಕಲ್'ಗಳಲ್ಲಿ ಈ ವಾಚ್ ಟವರುಗಳನ್ನು ಕಾಣಬಹುದು. ಆವತ್ತಿಗೆ ಬೆಂದಕಾಳೂರೆಂಬ ನಗರದ ಸರಹದ್ದುಗಳಾಗಿದ್ದ ಈ ವಾಚ್ ಟವರುಗಳನ್ನು ಮೀರಿ ಬಹುದೂರ ಬೆಳೆದಿದೆ ಬೆಂಗಳೂರು; ಇನ್ನೂ ಬೆಳೆಯುತ್ತಲೇ ಇದೆ.
“ಮೊನ್ನೆ ಗೆಳತಿಯ ಜೊತೆ ಎಳೆದಷ್ಟೂ ಉದ್ದವಾಗುವ ಬೆಂಗಳೂರಿನ ಬಗ್ಗೆ ಮಾತನಾಡುತ್ತಿದ್ದೆ. ಮಾತಾಡ್ತಾ ಆಡ್ತಾ ಇನ್ನು ಸ್ವಲ್ಪ ವರ್ಷ ಕಳೆದರೆ ಬೆಂಗಳೂರಲ್ಲಿ ಸಮುದ್ರ ಇರ್ತದೆ ಅಂತದ್ಲು. ಅದೆಲ್ಲಿಂದ ಬೆಂಗ್ಳೂರಿಗೆ ಸಮುದ್ರ ಬರುತ್ತೆ ಅಂತ ಅವಳ ಮುಖ ನೋಡಿ ನಕ್ಕೆ. ಜಾಗತಿಕ ತಾಪಮಾನ ಏರುತ್ತಾ ಸಮುದ್ರದ ಮಟ್ಟ ಏರಿ ಕೆಲವು ಊರುಗಳು ಮುಳುಗುತ್ತೆ ಮತ್ತು ವೇಗವಾಗಿ ವಿಸ್ತರಿಸುತ್ತಿರೋ ಬೆಂಗ್ಳೂರು ಮಂಗ್ಳೂರಿನ ವರೆಗು ತಲುಪುತ್ತೆ. ಹಾಗೇ, ಬೆಂಗ್ಳೂರಲ್ಲಿ ಸಮುದ್ರ ಇರುತ್ತೆ ಅಂತಂದು ಗೊಳ್ಳೆಂದಳು”
ಮೇಲಿನ ಸಂಭಾಷಣೆ ಉತ್ಪ್ರೇಕ್ಷೆಯೇ ಇರಬಹುದು. ಆದರೆ, ಹಿಂದೆ ಹಳ್ಳಿಗಳೆನಿಸಿದ್ದ ಬೆಂಗಳೂರಿನ ಸುತ್ತಮುತ್ತಲಿನ ಊರುಗಳೆಲ್ಲಾ, ಇವತ್ತು ಟ್ರಾಫಿಕ್, ಮನುಷ್ಯರು ಮತ್ತು ಬಿಲ್ಡಿಂಗುಗಳಿಂದ ತುಂಬಿರುವುದು ಕಾಣಿಸುತ್ತದೆ. ಬೆಂಗಳೂರು ವಿಸ್ತರಿಸುತ್ತಿರುವ ವೇಗ ಅರಿವಿಗೆ ಬರುತ್ತದೆ. ಇಷ್ಟೆಲ್ಲಾ ಹಬ್ಬುತ್ತಿರುವಾಗಲೂ ಇಲ್ಲಿನ ಸಂದುಗೊಂದುಗಳಲ್ಲಿ ಇಲಿಗಳಂತೆ ಬದುಕುತ್ತಿರುವವರ ಬದುಕುಗಳು ಕುಬ್ಜಗೊಳ್ಳುತ್ತಲೇ ಇದೆ. ರಾಜ ಪ್ರಭುತ್ವ ಇದೆಯೇನೋ ಅಂತನಿಸುವಂತೆ ಅರಮನೆಗಳಲ್ಲಿ ಬದುಕುವವರದು ಒಂದು ಲೋಕ. ಪ್ರಜಾಪ್ರಭುತ್ವವಿದ್ದರೂ ಮನೆಗಳೇ ಇಲ್ಲದೆ ಪರದಾಡುವವರದು ಇನ್ನೊಂದು ಲೋಕ. ಸ್ಲಮ್ಮುಗಳ ಪಕ್ಕದಲ್ಲೇ ಬಾನೆತ್ತರಕ್ಕೆ ಎದ್ದು ನಿಂತಿರುವ ಹೌಸಿಂಗ್ ಮ್ಯಾನ್ಶನುಗಳು ಈ ನಗರ ಬೆಳೆದ ಪರಿಯನ್ನು ವಿವರಿಸುತ್ತವೆ. ಬೇರೆ ನಗರಗಳಿಗೆ ಹೋಲಿಸಿದಾಗ ಬೆಂಗಳೂರು ಸ್ವರ್ಗವೆನಿಸಿದರೆ ತಪ್ಪೇನಿಲ್ಲ. ಎಷ್ಟೊಂದು ಮರಗಳನ್ನು ಕಡಿದು ಹಾಕಿದರೂ, ಇದ್ದ ಕೆರೆಗಳನ್ನು ಮುಳುಗಿಸಿದರೂ ಇನ್ನೂ ಒಂದಿಷ್ಟು ಹಸಿರು ಉಸಿರಾಡುತ್ತಿದೆ ಇಲ್ಲಿ. ಸದಾಕಾಲ ಹಿತವಾದ ತಾಪಮಾನವಿರುವ ಕಾರಣಕ್ಕೆ, ‘ಎಸಿ’ ಸಿಟಿಯೆಂಬ ಹೆಗ್ಗಳಿಕೆಯು ಇದೆ ಬೆಂಗಳೂರಿಗೆ. ಈ ವಾತಾವರಣದಿಂದಾಗಿಯೇ ಇಲ್ಲಿಗೆ ಬಂದು ವಾಸಿಸುವ ಮಂದಿಗೇನು ಕಡಿಮೆಯಿಲ್ಲ. ದೂಳು ಮತ್ತು ಏರುತ್ತಿರುವ ತಾಪಮಾನ ಇದಕ್ಕೊಂದಿಷ್ಟು ಭಂಗ ತಂದಿದೆಯಾದರೂ, ಉಳಿದ ನಗರಗಳಷ್ಟು ಕೆಟ್ಟು ಹೋಗಿಲ್ಲ.
ಬೆಂಗಳೂರು ಕೆಂಪೇಗೌಡರ ನಗರವಾಗಿ ಉಳಿದಿಲ್ಲ. ತರ ತರಹದ ಮನುಷ್ಯರಿರುವಂತೆ, ಬೆಂಗಳೂರಿನೊಳಗೆ ಹಲವಾರು ಬೆಂಗಳೂರುಗಳು ಹುಟ್ಟಿವೆ; ಇನ್ನೂ ಹುಟ್ಟುತ್ತಲೇ ಇವೆ. ಜಗಮಗಿಸುವ ಎಮ್ ಜಿ ರೋಡಿನ ಪಕ್ಕದಲ್ಲೇ, ಗಿಜಿಗುಡುವ ಕೆ ಆರ್ ಮಾರ್ಕೇಟಿದೆ. ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ರಾಜಬೀದಿಯಲ್ಲಿ ಗತ್ತಿನಿಂದ ನಡೆಯುತ್ತಾ, ಶಿವಾಜಿನಗರ ತಲುಪಿ ಶರಬತ್ತು ಕುಡಿಯಬಹುದು. ಗಾಂಧಿಬಜಾರಿನ ಹೂವಿನ ಬೀದಿಯಲ್ಲಿ ಮುಂದೆ ಸಾಗಿದರೆ, ಜಯನಗರದ ಜನಕೂಟವ ಸೇರಿಕೊಳ್ಳಬಹುದು. ಸಾಧಾರಣ ಮನಷ್ಯರೊಳಗಿನ ತೊಳಲಾಟ, ಕೊಸರಾಟ, ಅನುರಾಗ ಮತ್ತು ಫ್ಯಾಂಟಸಿಗಳ ಪ್ರತಿನಿಧಿಗಳಾಗಿವೆ ಕೆಂಪೇಗೌಡನೂರಿನ ಮೆಜೆಸ್ಟಿಕ್, ಕಲಾಸಿಪಾಳ್ಯದಂತಹ ಏರಿಯಾಗಳು. ತೀವ್ರ ಹಸಿವು ಮತ್ತು ಆಳದ ಪ್ರೀತಿ ಹಸಿ ಹಸಿಯಾಗಿ ಕಾಣಿಸುತ್ತದೆ ಇಲ್ಲಿ. ಇಂಥ ನಗರದೊಳಗಣ ಕೇರಿಗಳಿಗೆ ಮತ್ತೆ ಮತ್ತೆ ಬಂದು ಹೋಗುವಾಗ ಉಂಟಾಗುವ ಅನುಭವಗಳನ್ನು ಹಂಚಿಕೊಳ್ಳುವುದೆ ಒಂದು ರೋಚಕ ಅನುಭವ.
ನಶೆಯ ನಗರದಲಿ ಹೂವಿನ ರಂಗು
ಕನಸು, ದುಃಖ, ಮೋಸ, ದುಡ್ಡು ಮತ್ತು ಪ್ರೇಮವನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ನಗರವಿದು. ತನ್ನೊಳಗಿನ ಕಿಕ್ಕಿರಿದ ಕಕ್ಕುಲತೆಗಳ ದೇಹದಿಂದ ಹೊರಗೆಡಹುವ ಆಸೆಯಲ್ಲಿ ತನ್ನ ಗಂಡ, ಪ್ರಿಯಕರ ಮತ್ತು ಮಿಕ್ಕೆಲ್ಲವರ ನಡುವೆ ರೆಕ್ಕೆ ಕತ್ತರಿಸಿಕೊಂಡಂತಾಗಿರುವ ಶ್ರೀಮಂತಿಕೆಯ ಹೊದಿಕೆಯೊಳಗಿರುವ ಬೀದಿ ಹೆಣ್ಣಂತೆಯೂ, ಕಾಮುಕ ಮನಸ್ಥಿತಿಯ ಸಭ್ಯ ಗೃಹಸ್ಥನಂತೆಯೂ ಏಕ ಕಾಲಕ್ಕೆ ಕಾಣಿಸುವುದೀ ಊರು. ಗಂಡು- ಹೆಣ್ಣು ಎಂದು ನಾವು ಮಾತನಾಡುತ್ತಿರುವಾಗಲೇ, ಲಿಂಗದ ಹಂಗಿಲ್ಲದೆ ಬದುಕುವ ಎಲ್ಲಾ ಮನುಷ್ಯರ ಮೈ ಮನಗಳ ಆವರಿಸಿ ಹಾರ ಬಿಡುವ ಹಾರು ಹಾದಿಯಿದು. ಕನ್ನಡ ಬಾರದವರ ಭಾಷೆಗಳನ್ನು ಕೇಳಿಸಿಕೊಳ್ಳತ್ತದೆ. ಬಡವ-ಬಲ್ಲಿದರೆನ್ನದೇ ಎಲ್ಲರ ಎದೆ ತೋಯಿಸುತ್ತದೆ. ಎಲ್ಲಾ ನಗರಗಳು ಹೀಗೆಯೆ ಏನೋ.? ಕನಸು ಹೊತ್ತು ಮೊದಲಬಾರಿ ಬರುವವರಿಗೆ, ಮೊದಲೇಟಿಗೆ ಸಿಡಿಮಿಡಿ ಹುಟ್ಟಿಸಿ ಕಾಲೆಳೆಯುತ್ತದೆ. ತದನಂತರ ತನ್ನಲ್ಲೇ ಲೀನವಾಗುವ ಕಲೆಯನ್ನು ತಾನೇ ತಾನಾಗಿ ಕಲಿಸಿಕೊಡುತ್ತದೆ. ಹೆರದೆ, ಹೊತ್ತು ಬೆಳೆಸಿದ ಬೇಗುದಿಯಿರುವ ಈ ನಗರ ಬಿಟ್ಟು ಹೋದವರನ್ನು ಮತ್ತೆ ತನ್ನೆಡೆಗೆ ಸೆಳೆಯುತ್ತದೆ. ತನ್ನ ತೋಳುಗಳ ಮೇಲೆ ನೆನಪುಗಳ ತೊಟ್ಟಿಲು ತೂಗುತ್ತ ನಡೆಸುವ ಪುಟ್ಪಾತುಗಳು, ರಸ್ತೆ ಬದಿಯ ತಿಂಡಿಗಳ ಸ್ವರ್ಗರುಚಿ, ಮೂಗಿಗಡರುವ ವಾಸನೆ-ಸುವಾಸನೆಗಳ ಘಮ, ಥಿಯೇಟುರುಗಳ ಮುಂದೆ ಕಾವಲುಭಟರಾಗಿ ಕಿರುಚಿದಂತೆ ತೋರುವ ಕಟೌಟುಗಳು, ಮನುಷ್ಯರ ಭ್ರಮೆಗಳ ವಾರಸುದಾರರಂತೆ ಅಲ್ಲಲ್ಲಿ ಕಾಣವ ಗುಡಿ-ಚರ್ಚು-ಮಸೀದಿಗಳು, ನೈಟ್ ಲೈಫಿನ ರೋಮಾಂಚನಗಳು, ಶಾಪಿಂಗ್ ಮಾಲಿನ ಒಡ್ಡೋಲಗಗಳು, ಅಮರಪ್ರೇಮಿ ಕುಚೇಲರು, ದುಡ್ಡಾಟವಾಡೊ ಅರ್ಧಂಬರ್ಧ ಕೃಷ್ಣಂದಿರು, ಜನಗಳೆಡೆಯಲ್ಲಿ ಓಡಾಡೋ ಬಸ್ಸುಗಳು, ಪೋಲೀಸರೊಂದಿಗೆ ಕಳ್ಳಾಟವಾಡೋ ನಿರ್ಬಿಡ, ನಿಸ್ಸಾಹಯಕ ಹೆಣ್ಣುಗಳು.. ಇವೆಲ್ಲವನ್ನೂ ಕುಡಿದು ಮಧ್ಯರಾತ್ರಿಯವರೆಗೂ ನಶೆಯಲ್ಲಿದ್ದೂ ಸೃಜನಶೀಲವಾಗಿರೋದೆ ನಗರದ ಸೌಂದರ್ಯ.
ಈ ಸೌಂದರ್ಯದ ಅರಳುವಿಕೆಯಲ್ಲಿ ತರಹೇವಾರಿ ಹೂಗಳ ರಂಗು ಕೂಡಾ ಚೆಲ್ಲಿದೆ. ಇತಿಹಾಸದ ಹೂರಣದಲ್ಲಿ ಹಲವಾರು ಹೂಗಿಡಗಳು ಬೆಂಗಳೂರಿಗೆ ಆಗಮಿಸಿದ ಕಥೆಗಳೂ ಇವೆ. ಲಾಲ್ ಬಾಗಿನ ಗುಲಾಬಿ ತೋಟ ನಮ್ಮ ಕೆನ್ನೆಗಳನ್ನು ರಂಗಾಗಿಸುತ್ತಲೇ ಬಂದಿದೆ. ಗಾಜಿನ ಮನೆಯಲ್ಲಿ ನಡೆಯುವ ಪುಷ್ಪ ಪ್ರದರ್ಶನವಂತು ನೋಡುಗರ ಕಣ್ಣಿನೊಳಗೆ ಹೂವರಳಿಸುವಂತದ್ದು. ಈ ಭಾರಿಯ ಫ್ಲವರ್ ಷೋದಲ್ಲಿ ಹೂಗಳಿಂದ ಭಿತ್ತರಿಸಿದ ವಚನ ಪರಂಪರೆಯ ಘಮ ಲಾಲಬಾಗ್ ಅನ್ನು ಪಾವನವಾಗಿಸಿತ್ತು. ಅಲ್ಲಮ, ಬಸವಣ್ಣ, ಅಕ್ಕಮಹಾದೇವಿಯರು ಹೂಗಳಾಗಿ ಮನದುಂಬಿದ್ದರು. ಅದೇ ರೀತಿ, ಉದ್ಯಾನ ನಗರಿಯಲ್ಲಿ ಅರಳಿ ನಿಲ್ಲುವ ‘ಪಿಂಕ್ ಟ್ರಂಪೆಟ್ಸ್’ ಬೆಂಗಳೂರನ್ನು ಸಿಂಗರಿಸುವ ಪರಿಗೆ ಮನಸ್ಸೂ ಅರಳುತ್ತದೆ. ಪಿಂಕ್ ಪಿಂಕ್ ಹೂವಿನ ಹಾದಿಯಲ್ಲಿ ಸಿಂಗಾರಗೊಳ್ಳುವುದು ಇಲ್ಲಿನ ಹರೆಯದ ಹೃದಯಗಳು. ಗುಲಾಲಿ ಬಣ್ಣದಲ್ಲಿ ಮಿಂದೇಳುವ ರಸ್ತೆ, ಮೈ ಮನಸ್ಸುಗಳನ್ನು ಮುದಗೊಳಿಸುತ್ತದೆ. ಹೊರಗಿನಿಂದ ಬಂದವರಿಗಂತು, ಪಿಂಕ್ ಬೆಂಗಳೂರನ್ನು ಬೆರಗಿನಿಂದ ಕಣ್ತುಂಬಿಕೊಳ್ಳುತ್ತಾರೆ. ಹೂವರಳುವ ರೀತಿಯಲ್ಲಿ ಮನಸ್ಸನ್ನು ಅರಳಿಸಿಕೊಂಡು ಖುಷಿ ಪಡುತ್ತಾರೆ.
ಅವರವರ ಭಾವಕ್ಕೆ ತಕ್ಕಂತೆ..
ಇವೆಲ್ಲದರ ನಡುವೆ ಸಮಾಜದಲ್ಲಿ ಬಂದಿಯಾಗಿ ಬದುಕುವ ಮನುಷ್ಯರ ಆರ್ಥಿಕ, ಸಾಮಾಜಿಕ ಕೊನೆಗೆ ವೈವಾಹಿಕ ಜೀವನದ ಏಳುಬೀಳುಗಳು ಕೂಡ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಂತಹ ನಗರಗಳಲ್ಲೇ ಒದ್ದಾಡುವ ರಾಜಕೀಯ ವ್ಯವಸ್ಥೆಯೇ ನಿರ್ಧರಿಸುವಂತಾಗಿರುವುದು ವಿಪರ್ಯಾಸ. ಒಂದೆಡೆ ಅಂತಾರಾಷ್ಟ್ರೀಯ ಚರ್ಚೆಗಳು, ಕ್ರೀಡೆಗಳು, ಫ್ಯಾಷನ್ ಜಗತ್ತಿನ ಆಗುಹೋಗುಗಳು, ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುತ್ತವೆ. ಇವ್ಯಾವುದರ ಅರಿವಿಲ್ಲದೆ ನಿತ್ಯ ಬದುಕಿನ ಹಪಹಪಿಯಿಂದ ಚಡಪಡಿಸುತ್ತಾ ಒಂದಕ್ಕೊಂದು ಬೆಸೆದುಕೊಂಡಿರುವ ಜೀವ, ಜೀವನ ಮತ್ತು ಬೀದಿಗಳು ತಮ್ಮಷ್ಟಕ್ಕೇ ತಮ್ಮ ಕಾರ್ಯದಲ್ಲಿ ತಲ್ಲೀನವಾಗಿರುತ್ತವೆ. ಸ್ವರ್ಗಸದೃಶ ಏರ್ಪೋರ್ಟು ಮತ್ತು ಕೊಳೆಯತ್ತಲೇ ಇರುವ ಸ್ಲಮ್ಮುಗಳು; ಟ್ರಾಫಿಕ್ಕುಗಳಲ್ಲೇ ದಿನದೂಡುವ ಆಫೀಸರ್ ಮತ್ತು ತನ್ನ ಹೆಣ ತಾನೇ ಹೊತ್ತು ನಡೆವ ದಿನಗೂಲಿಯವ; ಪ್ರೇಮದಲ್ಲಿ ತೇಲುವ ಹುಡುಗ-ಹುಡುಗಿಯರು ಮತ್ತು ದೇಹ ಮಾರುವುದರ ನಡುವೆ ತೊಳಲಾಡುವ ವಿಟ-ವೇಶ್ಯೆಯರು ಎಲ್ಲರೂ ಇಲ್ಲಿ ಸಲ್ಲುವವರೆ. ಕೊರೆದಷ್ಟು ಆಳವಾಗುವ, ತೆರೆದಷ್ಟು ಮುಗ್ಧತೆಯ ನುಂಗುವ, ತುಳಿದಷ್ಟು ತುಳಿಸಿಕೊಳ್ಳುವ, ಮುಗುಮ್ಮಾಗಿದ್ದವರನ್ನು ಒಮ್ಮೆಗೆ ಮೇಲೆತ್ತಿ ಆಗಸದಲ್ಲಿ ತೇಲಿಸುವ ನಗರವಿದು.
ಭಾವುಕವಾಗಿ ವಿಧವಿಧವಾದ ಹೊಗಳಿಕೆ, ತೆಗಳಿಕೆಗಳಿಗೆ ಈಡಾಗುವ ನಗರ ಮನುಷ್ಯರ ನರಳಿಕೆಯ ಆಚೆಗೂ ಸುಸ್ಥಿತಿಯಲ್ಲಿರುತ್ತದೆ. ನಗರದೆದೆಯಲ್ಲಿ, ಮೂಲೆಗಳಲ್ಲಿ ಸ್ಥಿರವಾಗಿ ಹುಟ್ಟಿ ಬೆಳೆಯುತ್ತಿರುವ ಪ್ರಾಯೋಗಿಕ ಮನಸ್ಥಿತಿಯ ಮನುಷ್ಯರಿಂದ ಕಟ್ಟಲ್ಪಡುತ್ತದೆ. ತುಳಿಯುವ, ಬೆಳೆಯುವ, ಅಲ್ಪ ಮನುಷ್ಯತ್ವದ ಯೋಚನೆಗಳು ನಗರಗಳಲ್ಲೇ ಹುಟ್ಟುತ್ತವೆಯೇನೋ ಎಂದೆನಿಸುತ್ತದೆ. ವ್ಯಾಪಾರ ವಹಿವಾಟು, ಮನೋರಂಜನೆ, ನಿತ್ಯ ನಿರಂತರ ವಿಕಸನದೊಂದಿಗೆ ಹೊಳೆಯುವ ಸಿಟಿಗಳು ಧ್ಯಾನಸ್ಥ ಸಂತನಂತೆ, ಮಗುವಿನ ಮುಗ್ದತೆಯಂತೆ, ಪ್ರಾಣಿ ಸಂಗ್ರಹಾಲಯಗಳಂತೆ ಅವರವರ ಬಾವಕ್ಕೆ ತಕ್ಕಂತೆ ಹಲವರಿಗೆ ಹಲವು ವಿಧಗಳಲ್ಲಿ ಒಳಗಿಳಿದಿರಬಹುದು…
Writer, Poet & Automobile enthusiast
0 Followers
0 Following