ನೆನೆವುದೆನ್ನ ಮನಂ ಬನವಾಸಿ ಯಾತ್ರೆಯಂ!

ಬನವಾಸಿಗೆ ಹೀಗೊಂದು ಅನಿರೀಕ್ಷಿತ ಭೇಟಿ...

ProfileImg
01 Jul '24
2 min read


image

ಅನಿರೀಕ್ಷಿತ ಪ್ರವಾಸಗಳು ಕೆಲವು ಬಾರಿ ಮನಕ್ಕೆ ಬಲು ಮುದ ನೀಡುತ್ತವೆ. ಅಂಥದ್ದೊಂದು ಪ್ರವಾಸದ ಅನುಭವ ಆಗಿದ್ದು ಇತ್ತೀಚೆಗೆ ಬನವಾಸಿಗೆ ಹೋದಾಗ!

ಸ್ವಕಾರ್ಯನಿಮಿತ್ತ ಸೊರಬದಿಂದ ಶಿರಸಿಗೆ ಹೋಗುವವರಿದ್ದೆವು. ಹಾದಿ ಮಧ್ಯೆ ಬನವಾಸಿಯಲ್ಲಿ ಇಳಿದು, ದೇವಸ್ಥಾನ ನೋಡಿ ಬರೋಣವೇ ಎಂದು ಪತಿರಾಯರ ಅಂಬೋಣವಾಗುತ್ತಿದ್ದಂತೆಯೇ ಹೋಗೋಣವಾಗಲಿ ಎಂಬ ಒಮ್ಮತದ ನಿರ್ಧಾರವಾಗಿಬಿಟ್ಟಿತು. ಸೊರಬದಲ್ಲಿಯೇ ಕಂಡಕ್ಟರನ ಬಳಿ ದೇವಸ್ಥಾನದ ಬಳಿ ಇಳಿಸುವಂತೆ ಮನವಿ ಮಾಡಿದೆವು. ಆ ಮಹಾತ್ಮನೋ, ನಮಗೆ ಬನವಾಸಿ ಬಸ್ ಸ್ಟ್ಯಾಂಡಿನಲ್ಲಿ ಇಳಿಯುವಂತೆ ಮಾರ್ಗದರ್ಶನ ನೀಡುವುದು ಬಿಟ್ಟು ಮಧುಕೇಶ್ವರ ದೇವಸ್ಥಾನದ ರಸ್ತೆ ಬರುತ್ತಿದ್ದಂತೆ ನಮ್ಮನ್ನು ಇಳಿಸಿಯೇ ಬಿಟ್ಟ. ನಾವು ಸರಿಯೆಂದು ತಲೆಯಾಡಿಸುತ್ತಲೇ ಇಳಿದೂ ಬಿಟ್ಟೆವು. ಗೂಗಲ್ ಮಾಮಾ ದೇವಸ್ಥಾನ ಇನ್ನೂ ೧ ಕಿ.ಮೀ. ದೂರದಲ್ಲಿ ಇದೆಯೆಂದು ತೋರಿಸುತ್ತಿದ್ದಾನೆ! ಸುಮ್ಮನೇ ನಡೆದುಕೊಂಡು ಹೋಗುವುದಾದರೆ ಕಷ್ಟವೇನಿಲ್ಲ, ನಮಗೂ ಇಷ್ಟವೇ. ಆದರೆ ಕೈಯಲ್ಲಿದೆಯಲ್ಲವೇ ಲಗ್ಗೇಜಿನ ಹೊರೆ!? ಇರಲಿ, ಇನ್ನೇನು ಮಾಡುವುದು ಎಂದು ಹೊತ್ತುಕೊಂಡೇ ನಡೆದೆವು. ಪ್ರವಾಸವೆಲ್ಲಿ ಪ್ರಯಾಸವಾಗಿಬಿಡುವುದೋ ಅಂತ ಒಳಗೊಳಗೇ ಸಣ್ಣ ಭಯವಿತ್ತು, ಆದರೆ ಹಾಗಾಗಲಿಲ್ಲ; ಸಮೀಪದ ಇನ್ನೆರಡು ಈಶ್ವರ ದೇವಸ್ಥಾನಗಳ ದರ್ಶನಭಾಗ್ಯ ದೊರಕಿತು! ದೇವರು ಒದಗಿಸುವ ಅನಿರೀಕ್ಷಿತ ಯೋಗ-ಭಾಗ್ಯಗಳ ಕುರಿತು ಅರಿತವರು!?

ಮಧುಕೇಶ್ವರ ದೇವಸ್ಥಾನಕ್ಕೆ ದಾರಿ ಎಂಬ ಬೋರ್ಡ್ ತೋರಿಸಿದ ಹಾದಿಯಲ್ಲಿಯೇ ಮುಂದೆ ಹೋದೆವು. ಹಳ್ಳಿಯ ಹಾದಿ, ಒಂದು ಮರದ ಕಟ್ಟೆ, ರಸ್ತೆಯ ಇಕ್ಕೆಲಗಳಲ್ಲಿ ಹಲವು ಮನೆಗಳು. ಸುಮಾರು ಒಂದು ಕಿ.ಮೀ. ಅದೇ ದಾರಿಯಲ್ಲಿ ನಡೆಯುವಷ್ಟರಲ್ಲಿ ಹಳೆಯದೊಂದು ಪುಟ್ಟ ದೇವಸ್ಥಾನ ಕಾಣ ಸಿಕ್ಕಿತು. ಅದರ ಸ್ಥಿತಿ ಹೀಗಿತ್ತು!

ಇದನ್ನು ನೋಡಿಕೊಳ್ಳುತ್ತಿರುವವರು ದೀಕ್ಷಿತ ಮನೆತನದ ಹಿರಿಯ ಅರ್ಚಕರು, ಅವರ ಪತ್ನಿ. ಅವರ ಮನೆಯ ಹಿತ್ತಿಲಿನಲ್ಲಿಯೇ ಈ ದೇವಸ್ಥಾನವಿದೆ. ಅವರು ನಮ್ಮನ್ನು ಮಾತನಾಡಿಸಿ, ಒಳಗೆ ಕರೆದು, ಅರಿಶಿನ-ಕುಂಕುಮ ಕೊಟ್ಟು ಇಬ್ಬರಿಗೂ ಎರಡೆರಡು ಉತ್ತತ್ತಿ ನೀಡಿ ಕಳುಹಿಸಿಕೊಟ್ಟರು. ಎದುರು ಮನೆಯಿಂದ ನಮ್ಮನ್ನು ನೋಡಿದ ಮಾತೆಯೊಬ್ಬರು, ಈ ದೇವಸ್ಥಾನವನ್ನೂ ನೋಡಿಕೊಂಡು ಹೋಗಿ ಎಂದರು..

ಇಲ್ಲಿಯೂ ದೊಡ್ಡದೊಂದು ಈಶ್ವರ ಲಿಂಗವಿದೆ, ನಿತ್ಯಪೂಜೆ ನಡೆಯುತ್ತದೆ. ಪಕ್ಕದಲ್ಲೇ ಬಾವಿಯೂ ಇದೆ. ಇಲ್ಲಿಯೂ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಮುಂದೆ ಬನವಾಸಿಯ ಪ್ರಸಿದ್ಧವಾದ ಪ್ರವಾಸೀ ತಾಣವೆನಿಸಿದ ಶ್ರೀಉಮಾಮಧುಕೇಶ್ವರ ದೇವಸ್ಥಾನಕ್ಕೆ ಬಂದೆವು. ಆಹಾ!

ಹೊರಗಿನಿಂದಲೇ ಆರಂಭ, ಸುಂದರ ಕೆತ್ತನೆಯ ಕಣ್ತುಂಬಿಕೊಳ್ಳುವ ಸಂಭ್ರಮ! ಸ್ವಾಗತಿಸುವ ಆನೆಗಳು(ಕೆತ್ತನೆ), ವಿಶಿಷ್ಟ ವಿನ್ಯಾಸದ ಬಾಗಿಲು, ಕಂಬಗಳು!

ಒಳಗೆ ಹೋಗಿ ನೋಡಿದರೆ!?

ಸುಂದರ ಪರಿಸರ, ಅದ್ಭುತ ವಿನ್ಯಾಸವುಳ್ಳ ಚೆಂದದ ಕೆತ್ತನೆಗಳನ್ನು ಹೊಂದಿದ ವಿಶೇಷ ದೇವಸ್ಥಾನ. ದೇವಸ್ಥಾನದೊಳಗೆ ಹಲವು ಪುಟ್ಟ ಗುಡಿಗಳು. ಇಲ್ಲಿ ಆರಾಧಿಸಲ್ಪಡದ ದೇವರು ಯಾರಿಲ್ಲ!? ಇಂದ್ರ, ಅಗ್ನಿ, ವರುಣರಿಗೂ ಇಲ್ಲಿ ಒಂದೊಂದು ಗುಡಿಗಳಿವೆ. ನಿರೃತಿ, ಕುಬೇರ ಇತ್ಯಾದಿ ಅಷ್ಟದಿಕ್ಪಾಲಕರೂ ಇಲ್ಲಿದ್ದಾರೆ! ಗಣಪತಿಯೇ ಇಲ್ಲಿ ವಿವಿಧ ಹೆಸರುಗಳಿಂದ ಆರಾಧಿಸಲ್ಪಡುತ್ತಾನೆ. ಅರ್ಧ ಗಣಪತಿಯೂ ಇದ್ದಾನೆ. ನರಸಿಂಹನ ವಿಗ್ರಹವಂತೂ ಅತಿ ಅಪರೂಪದ್ದು, ತುಂಬ ಚೆಂದ. 

ಮೂಲತಃ ಕದಂಬರು ಕಟ್ಟಿಸಿದ ದೇವಸ್ಥಾನ ಇದು. ಕನ್ನಡ ನಾಡಿನ ಪ್ರಮುಖ ರಾಜವಂಶದ ರಾಜಧಾನಿಯಾಗಿದ್ದ ವೈಭವದ ಬೀಡಿದು. ಪ್ರಥಮ ಕನ್ನಡ ಸಾಮ್ರಾಜ್ಯವೆಂದು ಹೆಸರುವಾಸಿ ಬನವಾಸಿ. ಅಂದು “ವೈಜಯಂತೀಪುರ”ವೆಂದು ಕರೆಯುತ್ತಿದ್ದರಂತೆ ಇಂದಿನ ಬನವಾಸಿಯನ್ನು! ಕದಂಬರ ನಂತರ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರವರೆಗೆ ಹಲವು ರಾಜಮನೆತನಗಳು ದೇವಸ್ಥಾನದ ಆಡಳಿತ ನಡೆಸಿದ್ದಲ್ಲದೆ ಕಾಲಕಾಲಕ್ಕೆ ತಕ್ಕಂತೆ ಸೇರ್ಪಡೆ, ಬದಲಾವಣೆ, ವಾಸ್ತುಶೈಲಿಗಳನ್ನೂ ಅಭಿವೃದ್ಧಿ ಪಡಿಸಿದರಂತೆ. 

ಒಳಗೆ ಹೊಕ್ಕರೆ ಕಾಣಸಿಗುವುದೇ ಏಕಶಿಲೆಯ ಬೃಹತ್ ನಂದಿ ವಿಗ್ರಹ. ಮಧುಕೇಶ್ವರ ಲಿಂಗದ ದರ್ಶನದ ನಂತರ ಬಲಬದಿಯಲ್ಲಿ ದೇವಿಯ ದರ್ಶನ. ಮಧುಕೇಶ್ವರ ಲಿಂಗದ ಪಾಣಿಪೀಠದ ಕೆತ್ತನೆಯೂ ಕಾಣಲು ಬಲು ಸೊಬಗು! ಅಲ್ಲೇ ಹೊರ ಬಂದರೆ ಸಣ್ಣ ವೇದಿಕೆಯಂತೆ ವೃತ್ತಾಕಾರದ ಕಲ್ಲಿನ ಹಾಸು. ನಾಜೂಕಿನ ವಿನ್ಯಾಸಯುಕ್ತ ಕಂಬಗಳು, ಸುತ್ತಲೂ ಕುಳಿತುಕೊಳ್ಳಲು ವಿಶಾಲವಾದ ಕಲ್ಲಿನ ಹಾಸು. ಆ ಕಲ್ಲಿನ ಹಾಸುಗಳಲ್ಲಿಯೇ ಹುಲಿ-ದನ, ಗೋಲಿ ಆಟಕ್ಕೆ ಬೇಕಾದ ಕೆತ್ತನೆಗಳನ್ನೂ ಮಾಡಲಾಗಿದೆ.

ನಮಸ್ಕಾರ ಮಾಡುವ ಚಿತ್ರದೊಂದಿಗೆ ಶೀರ್ಷಿಕೆಯನ್ನೂ ಬರೆಯಲಾಗಿದೆ. 

ಹೀಗೆ ವಿಶಿಷ್ಟ ಶಿಲ್ಪಕಲೆಯ ವಿಶೇಷ ದೇವಸ್ಥಾನವಿದು. ಇಲ್ಲಿ ಇದ್ದಷ್ಟೂ ಹೊತ್ತು ಕಡಿಮೆಯೇ ಎನಿಸೀತು! ಅದರಲ್ಲೂ ನಮಗೆ ಸಿಕ್ಕಿದ್ದು ಒಂದೇ ಗಂಟೆ. ಇದ್ದಷ್ಟು ಹೊತ್ತು ಇದ್ದುದೆಲ್ಲವನ್ನು ಕಂಡು ಖುಷಿಪಟ್ಟೆವು. ತೃಪ್ತಿಯಾಗಲಿಲ್ಲ, ಆದರೆ ಬಂದುದು ಸಾರ್ಥಕವೆನಿಸಿತು!

"ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್.."

"ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ.." 

ಪಂಪನ ಸಾಲುಗಳನ್ನು ನೆನೆಯುತ್ತಲೇ ಹತ್ತಿದೆವು ಶಿರಸಿಯ ಬಸ್ಸೊಂದನ್ನು….!

Category:Travel



ProfileImg

Written by Ankitha N