ಬಾಳೆಲೆ ಊಟ

ProfileImg
09 Jul '24
2 min read


image

 

      ಬಾಳೆಲೆಯಲ್ಲಿ ಊಟ ಮಾಡುವುದೆಂದರೆ  ಖುಷಿ. ಆದರೆ ಮನೆಯಲ್ಲಿ ನಿತ್ಯಕೆ ಈ ಅವಕಾಶ ಇರುವುದು ಕಡಿಮೆ. ಬಟ್ಟಲಲ್ಲೇ ಊಟ.. ಅದೇನೋ ಸಿಕ್ಕಿದರೆ ಬಾಳೆಲೆಯಲ್ಲಿ ಕಡುಬು, ಉಬ್ಬು ರೊಟ್ಟಿ ಮಾಡಿದರೆ, ಮನೆಯ ಶುಭ ಸಮಾರಂಭಕ್ಕೆ ಮಾತ್ರ. ಅದರಲ್ಲೂ ಬಾಡಿಸಿದ ಎಲೆ ತುಂಬಾ ಖುಷಿ ಕೊಡುತ್ತದೆ. 

     ಇಂದಿನ ಮಂಗಲ ಕಾರ್ಯದಲ್ಲಿ ಮೊದಲಿನಂತೆ ಬಾಳೆಲೆಯಲ್ಲಿ ಊಟ ಮಾಡುವುದು ಕಾಣಲು ಸಿಗುವುದೇ ಅಪರೂಪವಾಗಿ ಬಿಟ್ಟಿದೆ. ಇಂದು ಎಲ್ಲಿಯಾದರೂ ಉಳಿದಿದ್ದರೆ ದೇವಸ್ಥಾನದಲ್ಲಿ ಮಾತ್ರ ಎಂಬಂತಾಗಿದೆ. ಕಾರ್ಯಕ್ರಮ ಮುಗಿದಾಗ ಆ ಜಾಗಕ್ಕೆ ನೀರು ಹಾಕಿ, ಕಸವನ್ನು ಗುಡಿಸಿ ಚಾಪೆಯನ್ನು ಹಾಕಬೇಕು. ನಂತರವಷ್ಟೇ ಜನರು ಊಟಕ್ಕೆ ಕೂರಬಹುದು. ಬಾಳೆಲೆಯನ್ನು ಹಾಕಿ, ನೀರು ಬಂದು ತೊಳೆದ ಮೇಲಷ್ಟೇ ಪಾಯಸ, ಅನ್ನ, ಪಲ್ಯಗಳನ್ನು ಬಡಿಸುತ್ತಾರೆ.  ವೈದಿಕರನ್ನು ಕೂರಿಸಿ, ಗೋಗ್ರಾಸವಿಟ್ಟು, ಹಸ್ತೋದಕವಾಗಿ, ಮನೆಯವರು ನಮಸ್ಕಾರ ಮಾಡಿದ ನಂತರವಷ್ಟೇ ಊಟ ಪ್ರಾರಂಭ.. ನಾವು ಕೂತಲ್ಲಿಂದ ಎದ್ದು ಹೋಗುವ ಪ್ರಮೇಯ ಇರುವುದಿಲ್ಲ. ಎಲ್ಲವನ್ನೂ ನಮ್ಮ ಬಳಿಗೇ ಒಂದರ ಹಿಂದೆ ಒಂದರಂತೆ ಬಡಿಸಿಕೊಂಡು ಬರುತ್ತಾರೆ.  ಇಷ್ಟೆಲ್ಲಾ ತಾಳ್ಮೆ ಯಾರಿಗಿದೆ ಹೇಳಿ... ಸುಧರಿಕೆಯವರು ಇದ್ದರೆ ಕೇಳುವುದೇ ಬೇಡ. ಎಲ್ಲ ಒಟ್ಟಿಗೇ ವಿಚಾರಣೆ ಮಾಡಿಕೊಂಡು ಬರುತ್ತಾರೆ. ಬೇಡವೆಂದು ನಾವು ಕೊನೆಯ ತನಕ ಕೈ ಅಡ್ಡ ಹಿಡಿದರಾಯಿತು. ಆದಷ್ಟು ಬ್ರಾಹ್ಮಣರೇ ಈ ರೀತಿ ಕುಳಿತು ಊಟ ಮಾಡುತ್ತಾರೆ.  

      ಪಾಯಸ, ಸ್ವೀಟ್ ಬಂದಾಗ ಹಾಡು, ಸ್ತೋತ್ರಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಹೇಳುತ್ತಾ, "ಭೋಜನ ಕಾಲೇ.." ಹಾಕುತ್ತಾ ಊಟ ಮಾಡುತ್ತಾರೆ. ಅನ್ನವೇ ದೇವರು. ದೇವರನ್ನು ಭಜಿಸುತ್ತಾ ಭೋಜನ ಮಾಡಬೇಕು ಅಂತ  ಹೇಳುತ್ತಾರೆ. ಪ್ರಾರಂಭವಾದ ಹಾಡನ್ನು ಮಜ್ಜಿಗೆಯವರೆಗೂ ಮುಂದುವರಿಸುತ್ತಾರೆ. ಈ ಕ್ರಮವಿರುವುದು ಬ್ರಾಹ್ಮಣರಲ್ಲಿ ಮಾತ್ರ.. 

      ಯಾರಿಗೂ ಅಷ್ಟು ಹೊತ್ತು ಕೂತು ಉಣ್ಣಲು ತಾಳ್ಮೆ, ಪುರುಸೊತ್ತು ಇಲ್ಲ. ಅಷ್ಟೇ ಅಲ್ಲ, ಮನೆಯಲ್ಲಿ ಬೇಕಾದಷ್ಟು ಕೆಲಸಗಳು ಇರುತ್ತವೆ. ಸಂಜೆ ಹಾಲು ಕರೆಯಬೇಕು, ಪೇಟೆಯ ಡೈರಿಗೋ, ಇನ್ಯಾರಿಗೋ ಮಾರಾಟ ಮಾಡಬೇಕಿರುತ್ತದೆ. ಇನ್ನೇನೋ ಕೆಲಸಗಳು...  ಹೀಗೆಲ್ಲ ಇರುವಾಗ ಸಮಾರಂಭಕ್ಕೆ ಹೋಗದೇ ಇದ್ದರೆ ಮನೆಯ ಯಜಮಾನನಿಗೂ ಬೇಸರವಾದೀತು. ಎರಡು ದೋಣಿಯಲ್ಲಿ ಕಾಲಿಟ್ಟ ಪರಿಸ್ಥಿತಿ. ಹಾಗಾಗಿ ಊಟದ ಸಮಯಕ್ಕೆ ಹೋಗಿ ಮನೆಯವರನ್ನು ಮಾತಾಡಿಸಿ, ಊಟ ಮಾಡಿ ಬರುವ ಕ್ರಮವನ್ನು ಜನ ಅನುಸರಿಸಿಕೊಂಡು ಬಂದಿದ್ದಾರೆ. ಇದರಿಂದ ಮನಸ್ಸಿಗೂ ಒಂದು ಸಮಾಧಾನ. 

    ಆದರೆ ಯಾರಿಗೂ ಯಾವುದಕ್ಕೂ ಸಮಯವಿಲ್ಲ.. ಹಾಗಾಗಿ "ಬಫೆ" ಎಂಬ ಬಟ್ಟಲು ಊಟಕ್ಕೆ ಜನ ಮೊರೆ ಹೋಗಿದ್ದಾರೆ. ಎಲೆಯ ಜಾಗಕ್ಕೆ ಬಟ್ಟಲು ಬಂದಿದೆ. ಎಲ್ಲರೂ ಈಗ ಇದನ್ನೇ ಆಶ್ರಯಿಸಿದ್ದಾರೆ. ನಿಂತೋ, ಕೂತೋ ಊಟ.  ಯಾರನ್ನೂ ಕಾಯಬೇಕಿಲ್ಲ. ಕೂತು ಉಣ್ಣುವಂತೆ ಯಾವುದೇ ರೀತಿಯ ಗೋಜಿಗಳು ಇಲ್ಲಿಲ್ಲ. ಎಲ್ಲರೂ ಹತ್ತಿರ ಕೂತು  ಒಬ್ಬರನ್ನೊಬ್ಬರು ನೋಡಿಕೊಂಡು ಊರಿನ ಸುದ್ದಿಗಳನ್ನು ಮಾತಾಡಿಕೊಂಡು, ನಮಗೆ ಬೇಕಾದ್ದನ್ನು ಮಾತ್ರ ಹಾಕಿಸಿಕೊಂಡು ಊಟ ಮಾಡುವ ಕ್ರಮವಿದು.  ಊಟವೂ ಬೇಗವೇ ಆಗುತ್ತದೆ. ನೆಂಟರು, ಪರಿಚಿತರು ಯಾರೆಲ್ಲ ಬಂದಿದ್ದಾರೆ ಎನ್ನುವುದೂ ತಿಳಿಯುತ್ತದೆ. ಹೊಟ್ಟೆಗೆ ಹೆಚ್ಚು ಆಹಾರವೂ ಹೋಗದು. ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ, ಊಟಕ್ಕೆ ಏನೆಲ್ಲ ಇತ್ತು ಎಂದು ಮನೆಯವರು ಕೇಳಿದರೆ ಹೇಳುವುದು ಮಾತ್ರ ಕಷ್ಟ. 

       ಆದರೆ ಕಾಲುನೋವಿನ ಸಮಸ್ಯೆ ಇರುವವರಿಗೆ ನೆಲದಲ್ಲಿ ಕೂರಲಾಗದು. ಅದನ್ನು ಅರಿತವರು ಟೇಬಲ್ ಊಟವನ್ನು ಜಾರಿಗೆ ತಂದರು. ಬಾಳೆಲೆಯಲ್ಲೇ ಊಟ... ಇದನ್ನು ಹಿರಿಯರು ಸದುಪಯೋಗ ಪಡಿಸಿಕೊಳ್ಳುತ್ತಾರೆ.  ಬಾಳೆಲೆಯಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. 

     ಹೀಗೆ ಮೂರು ವಿಧದಲ್ಲಿ ಊಟವನ್ನು ಏರ್ಪಾಡಿಸಲಾಗುತ್ತದೆ.  ನಮಗೆ ಬೇಕಾದ್ದನ್ನು ಆಯ್ಕೆ ಮಾಡಬಹುದು.  ಶಿಸ್ತಾಗಿ ಸಾಲಿನಲ್ಲಿ ಕೂತು ಊಟ ಮಾಡುವುದು ಎಲ್ಲಕ್ಕಿಂತ ತುಂಬ ಚೆಂದ.  ಎದುರು ಬದುರಾಗಿ ಅದೆಷ್ಟೋ ಉದ್ದದ ಪಂಕ್ತಿಗಳು. ಭಾರದ ಪಾತ್ರೆಯನ್ನು ಹಿಡಿದು ಎರಡೂ ಸಾಲಿಗೆ ಬಡಿಸುವವರು ಹರಸಾಹಸವೇ ಪಡಬೇಕಾಗುತ್ತದೆ. ಅದೂ ಬಗ್ಗಿ ಬಡಿಸಬೇಕಾಗುತ್ತದೆ. ಅವನು ಆ ದಿವಸ ಬೇರೆ ವಾಕಿಂಗು ಮಾಡಬೇಕಾಗಿಲ್ಲ. ಅವನಿಗೆ ಇದೇ ಸಾಕಾಗುತ್ತದೆ. ಬಾಳೆಲೆಯ ಊಟ ನಮ್ಮ ಆರೋಗ್ಯವನ್ನು ವರ್ಧಿಸುತ್ತದೆ. 

     ವರ್ಷಗಳು ಉರುಳಿದಂತೆ ನಮ್ಮ ಹಳೆಯ ಶಾಸ್ತ್ರಗಳೆಲ್ಲ ಅಳಿಯುವ ಅಂಚನ್ನು ತಲಪುತ್ತಿದೆ. ಏನೇನೋ ಹೊಸತುಗಳು ಬರುತ್ತಿವೆ.  ನಾವು ಇದನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಬೇಕಾಗಿದೆ. ಅಂದು ಹೀಗೊಂದು ಇತ್ತು ಎನ್ನುವಂತಾಗಿದೆ. 

✍ ಮುರಳಿಕೃಷ್ಣ ಕಜೆಹಿತ್ತಿಲು
 

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Murali Krishna

DTP Worker, Vittal, Mangalore

0 Followers

0 Following