ಒಂದಾನೊಂದು ಕಾಲದಲ್ಲಿ ಭಾರತ ದೇಶದ ಒಂದು ಮೂಲೆಯ ಹಳ್ಳಿಯಲ್ಲಿ ಪುರಾತನವಾದ ದೇವಾಲಯ ಇತ್ತು. ಅಲ್ಲಿ ಅನೇಕ ಸನ್ಯಾಸಿಗಳು ಆಧ್ಯಾತ್ಮಿಕ ಸಾಧನೆಗಾಗಿ ಹಾಗೂ ಜ್ಞಾನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅನೇಕ ತರಹದ ಧಾರ್ಮಿಕ ಅನುಷ್ಠಾನಗಳಿಂದ ಜೀವನ ಸಾಗಿಸುತ್ತಿದ್ದರು.
ಅವರಲ್ಲಿ ಒಬ್ಬ ಯುವ ಸನ್ಯಾಸಿಗೆ ಶ್ರದ್ಧೆಯಿಂದ ಧಾರ್ಮಿಕ ಜೀವನ ನಡೆಸಿದರೂ ಏನೋ ಒಂದು ತರಹದ ನಕಾರಾತ್ಮಕ ಚಿಂತನೆಗಳು ಹಾಗೂ ತನ್ನ ಸುತ್ತಲೂ ಒಂದು ತರಹದ ಗೊಂದಲಕರ ವಾತಾವರಣ ಇದೆಯೆಂದು ಕಲ್ಪಿಸಿಕೊಂಡು ಸದಾ ಸೋತ ಮನಸ್ಸಿನಿಂದ ಇರುತ್ತಾ ಯಾವಾಗಲೂ ಏನೋ ಭಾರ ಹೊತ್ತವನಂತೆ ಇರುತ್ತಿದ್ದನು.
ಅವನು ಒಂದು ದಿನ ಬಹಳ ಹತಾಶೆಯಿಂದ ತನ್ನ ಹೃದಯವನ್ನು ಭಾರವಾಗಿಸಿಕೊಂಡು, ತನಗೆ ಆಗುತ್ತಿರುವ ಗೊಂದಲಗಳ ಅನುಭವವನ್ನು ತನ್ನ ಗುರುಗಳ ಬಳಿ ಹೇಳಿಕೊಂಡನು. ನನಗೆ ಇಂತಹ ಶಾಂತವಾದ ಸ್ಥಳದಲ್ಲಿ ಸಹ ಆರಾಮವನ್ನು ಬಯಸಲು ಆಗುತ್ತಿಲ್ಲ , ನನ್ನ ಸಹ ಯುವ ಸನ್ಯಾಸಿಗಳಲ್ಲಿ ಸ್ನೇಹದಿಂದ ಇರಲಾರದೆ ಒಂದು ತರಹದ ಉಸಿರುಗಟ್ಟುವ ವಾತವಾರಣದಂತೆ ಆಗಿದೆ. ನನಗೆ ಇಲ್ಲಿ ಉಳಿಯಲು ಹೆಚ್ಚು ಕಷ್ಟಕರವಾಗಿದೆ ಎಂದು ತೋರುತ್ತಿದೆ. ಈ ವಾತಾವರಣವು ನನ್ನಲ್ಲಿ ವಿಷಕಾರಿ ಅಂಶಗಳು ಮತ್ತು ನಕಾರಾತ್ಮಕ ಭಾವನಗೆಳನ್ನು ತುಂಬಿಸುತ್ತಿದೆ. ಈ ಗೊಂದಲಗಳು ನನ್ನ ಆಧ್ಯಾತ್ಮಿಕ ಪ್ರಯಾಣವನ್ನು ಹಾಳು ಮಾಡುತ್ತಿವೆ ಎಂದು ಭಾಸವಾಗುತ್ತಿದೆ. ನಾನು ಈ ಆಶ್ರಮವನ್ನು ಬಿಟ್ಟು ಹೋಗುತ್ತೇನೆ ಎಂದು ಗುರುಗಳ ಬಳಿ ಹೇಳಿಕೊಂಡನು.
ಅಗಾಧ ಬುದ್ಧಿವಂತಿಕೆ ಮತ್ತು ಅಪರಿಮಿತ ತಾಳ್ಮೆಯ ಗುರುವು ಯುವ ಸನ್ಯಾಸಿಯ ಕುಂದುಕೊರತೆಗಳನ್ನು ಶಾಂತವಾಗಿ ತಲೆದೂಗಿ ಕೇಳಿ, ಹೀಗೆ ಉತ್ತರಿಸಿದನು ನನ್ನ ಮಗು ನಿನ್ನ ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಇದರಿಂದ ನೀನು ಕಳಿಯಬೇಕಾದ ಪಾಠ ಬಹಳ ಇದೆ, ನನ್ನ ಮಾತನ್ನು ಕೇಳು ನೀನು ಈ ದೇವಾಲಯವನ್ನು ಬಿಡುವ ಯೋಚನೆಯನ್ನು ಬಿಟ್ಟುಬಿಡು, ನಿನಗೆ ಆಗಿರುವ ಎಲ್ಲಾ ಗೊಂದಲಗಳ ನಡುವೆ ನಿನಗೆ ಒಂದು ಪರೀಕ್ಷೆಯನ್ನು ನೀಡುತ್ತೇನೆ, ಆ ಪರೀಕ್ಷೆಯ ಅನುಭವದಿಂದ ನಿನಗೆ ಇರುವ ಗೊಂದಲಗಳು ದೂರ ಆಗಬಹುದು ಎಂದು ಹೇಳಿ, ಯುವ ಸನ್ಯಾಸಿಗೆ ಒಂದು ದೊಡ್ಡ ಚಮಚ ನೀರು ಕೊಟ್ಟು ಈ ಚಮಚದಿಂದ ಒಂದು ಹನಿ ನೀರೂ ಹೊರಗೆ ಚೆಲ್ಲದೆ ಇಡೀ ದೇವಾಲಯದ ಪ್ರಾಂಗಣವನ್ನು ಸುತ್ತಿ ಬಾ ಎಂದು ತಿಳಿಸಿದನು. ಯುವ ಸನ್ಯಾಸಿಯು ಅಚಲವಾದ ಸಂಕಲ್ಪದಿಂದ ಸವಾಲನ್ನು ಸ್ವೀಕರಿಸಿದನು.
ಯುವ ಸನ್ಯಾಸಿಯು ಕೈಯಲ್ಲಿ ಹಿಡಿದಿರುವ ಚಮಚ ನೀರಿನಿಂದ ಮಠದ ಸುತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು. ಯಾವುದೇ ಬೇರೆಯವರು ಆಡಿಕೊಂಡ ಪಿಸುಮಾತುಗಳು, ಗಲಾಟೆಗಳು ಅವನ ಗಮನಕ್ಕೆ ಬರಲೇ ಇಲ್ಲ . ಏಕಾಗ್ರ ಚಿತ್ತದಿಂದ ಇಡೀ ದೇವಾಲಯದ ಪ್ರಾಂಗಣವನ್ನು ಗುರುಗಳು ಹೇಳಿದ್ದಕ್ಕಿಂತ ಹೆಚ್ಚು ಬಾರಿ ಸುತ್ತಿದನು ಹಾಗೂ ಒಂದು ಹನಿಯ ನೀರನ್ನೂ ಸಹ ಚಮಚ ದಿಂದ ಹೊರಗೆ ಹೋಗಲು ಬಿಡಲಿಲ್ಲ.
ಗುರುಗಳು ಹೇಳಿದ ಪರೀಕ್ಷೆಯಲ್ಲಿ ಗೆದ್ದೆ ಎಂಬ ವಿಜಯೋತ್ಸಾಹದಲ್ಲಿ ಗುರುಗಳ ಮುಂದೆ ಹಾಜರಾಗಿ ತನ್ನ ಗೆಲುವನ್ನು ತೋರಿಸಿದನು. ಗುರುಗಳು ತಮ್ಮ ಧ್ವನಿಯಲ್ಲಿ ಸ್ಪಷ್ಟವಾದ ಸಾರ್ಥಕತೆಯ ಭಾವವನ್ನು ತೋರಿಸುತ್ತಾ ಮಂದಹಾಸದಿಂದ , ತಾನು ಕೊಟ್ಟ ಪರೀಕ್ಷೆಯ ಪಾಠದ ಆಳವನ್ನು ಬಿಚ್ಚಿಡುವ ಪ್ರಶ್ನೆಯನ್ನು ಕೇಳಿದರು.
ನೀನು ದೇವಾಲಯದ ಸುತ್ತಲೂ ನಡೆಯುತಿದ್ದಾಗ ನಿನಗೆ ನಿನ್ನ ಬಗ್ಗೆ ಮತನಾಡಿಕೊಳ್ಳುವ ಅಥವಾ ಪಿಸುಮಾತುಗಳು ಏನಾದರೂ ಕೇಳಿದಿಯಾ, ಹಾಗೆ ನಿನಗೆ ನಿನ್ನ ಮನಸ್ಸಿನಲ್ಲಿ ಏನಾದರೂ ಗೊಂದಲಗಳು ಇದ್ದವೇ ? ನಿನಗೆ ನಿನ್ನ ದಾರಿಯಿಂದ ಜಾರಿಸುವ ಯಾವುದೇ ಪ್ರಯತ್ನಗಳನ್ನು ಕಂಡೆಯಾ ಎಂದು ಕೇಳಿದರು.
ಅದಕ್ಕೆ ಯುವ ಸನ್ಯಾಸಿಯು ನನಗೆ ಯಾವುದೇ ತರಹದ ಗೊಂದಲಗಳು ನಡೆಯುವಾಗ ಇರಲಿಲ್ಲವೆಂದು ತಿಳಿಸಿದನು. ಇದು ನಿನಗೆ ಹೇಗೆ ಸಾಧ್ಯವಾಯಿತು ಎಂದು ಗುರುಗಳು ಮರು ಪ್ರಶ್ನೆ ಮಾಡಿದಾಗ ಯುವ ಸನ್ಯಾಸಿಯು ಬಹಳವಾಗಿ ಯೋಚಿಸಿ ಹೀಗೆ ಉತ್ತರಿಸಿದನು. ನಾನು ನಡೆಯುವಾಗ ನನ್ನ ಮನಸ್ಸು ನೀರನ್ನು ಚೆಲ್ಲದೆ ಹೇಗೆ ನಡೆಯಬೇಕು ಎಂಬುದೇ ಆಗಿತ್ತು, ನನ್ನ ಗಮನವೆಲ್ಲ ನೀರಿನ ಮೇಲೆ ಇದ್ದುದರಿಂದ ನನಗೆ ಯಾವುದೇ ಪಿಸುಮಾತುಗಳು ಆಗಲಿ ಅಥವಾ ಇನ್ಯಾವುದೇ ಗೊಂದಲಗಳಿಗೂ ಅವಕಾಶ ಇರಲಿಲ್ಲ ಎಂದು ತಿಳಿಸಿದನು.
ಈ ಪಾಠದಿಂದ ನಿನಗೆ ಏನು ಅರ್ಥವಾಯಿತು ಎಂದು ಗುರುವು ಕೇಳಲು,ನಮ್ಮ ಸಾಧನೆಯಲ್ಲಿ ನಾವು ಆಚಲವಾಗಿ ಶ್ರದ್ಧೆ ಇಟ್ಟು ನಡೆದಾಗ ಹೊರಗೆ ನಡೆಯುವ ಯಾವುದೇ ತರಹದ ಬೇರೆ ವಿಚಾರಗಳು ನಮ್ಮನ್ನು ಬಾಧಿಸಲಾರವು ಎಂದು ತಿಳಿಸಿದನು.
ಈ ಉತ್ತರವನ್ನು ಕೇಳಿದ ಗುರುವು ಸಂತೋಷದಿಂದ ನನ್ನ ಮಗು ನಿನ್ನ ದಾರಿಯಲ್ಲಿ ನಿನ್ನ ಕಣ್ಣುಗಳನ್ನು ದೃಢವಾಗಿ ಇರಿಸಿದಾಗ ಮತ್ತು ನಿನ್ನ ಹೃದಯವನ್ನು ನಿನ್ನ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಮೀಸಲಿಟ್ಟಾಗ ನಿನ್ನ ಸುತ್ತಲಿನ ನಕಾರಾತ್ಮಕತೆಯಿಂದ ಪ್ರಭಾವಿತನಾಗಲು ನಿನಗೆ ಸಮಯ ಇರುವುದಿಲ್ಲ. ನಿನ್ನ ಸ್ವಂತ ಪ್ರಯಾಣ ಮತ್ತು ಕನಸುಗಳತ್ತ ಗಮನ ಹರಿಸುವುದು ಮುಖ್ಯ. ನಕರಾತ್ಮಕತೆಯ ಭಾವನೆಗಳು ನಮ್ಮ ಮನನಸ್ಸಿನ ಮೂಲೆ ಮೂಲೆಯಲ್ಲಿಯೂ ನುಗ್ಗಿ ನಮ್ಮ ದಾರಿಯನ್ನು ಮರೆಯುವಂತೆ ಮಾಡುತ್ತವೆ. ಆದುದರಿಂದ ನಮ್ಮ ಜೀವನದ ನಿಜವಾದ ಗುರಿಗೆ ನಮ್ಮ ಮನಸ್ಸನು ನೆಟ್ಟು ಸಾಧನೆಯ ಹಾದಿಯಲ್ಲಿ ಬರುವ ತೊಂದರೆಗಳು ಎಂಬ ಮುಳ್ಳುಗಳನ್ನು ಕಿತ್ತೆಸೇದು ಗುರಿಯ ಕಡೆಗೆ ಬಲವಾಗಿ ಎಳೆದು ಬಿಟ್ಟ ಬಾಣದಂತೆ ಹೊರಡಬೇಕು. ಆಗಲೇ ಆದರ್ಶ ಜೀವನಕ್ಕೆ ಒಂದು ಅರ್ಥ ಬರುವುದು ಎಂಬ ಸತ್ಯವನ್ನು ತನ್ನ ಶಿಷ್ಯನಿಗೆ ಧೃಡವಾದ ದನಿಯಲ್ಲಿ ಮನದಟ್ಟು ಮಾಡಿಕೊಟ್ಟರು.
ಕಲಿತ ಪಾಠದಿಂದ, ಇರುವ ಎಲ್ಲಾ ನಕಾರಾತ್ಮಕ ಹಾಗೂ ಗೊಂದಲಗಳಿಂದ ದೂರವಾಗಿ ಯುವ ಸನ್ಯಾಸಿಯು ಇದ್ದ ಪರಿಸರವನ್ನು ಜರೆಯದೆ, ಆ ಪರಿಸರದ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ಸಾಧನೆಯ ಪಯಣವನ್ನು ಮುಂದುವರಿಸಿದನು.
ಮನಸ್ಸು ಎಂಬ ಸರೋವರದಲ್ಲಿ ಶಾಂತತೆ ಹಾಗೂ ಅಚಲತೆ ಕಾಪಾಡಿಕೊಂಡಾಗ, ಹೊರಗಿನ ವಿಚಾರಗಳಾದ ನಕಾರಾತ್ಮಕ ಭಾವನೆಗಳೆಂಬ ಚಂಡ ಮಾರುತಗಳು ನಮ್ಮ ಮನಸ್ಸಿನ ಶಾಂತಿಯನ್ನು ಹಾಗೂ ನಮ್ಮ ಅಚಲ ವಿಶ್ವಾಸವನ್ನು ಕೇಡಿಸಲಾರವು .