ಆಷಾಡ ಮಾಸದ ಶಯನೀ ಏಕಾದಶಿ



image

ಓಂ ನಮೋ ಭಗವತೇ ವಾಸುದೇವಾಯ
ಓಂ ನಾರಾಯಣಾಯ ವಿದ್ಮಹೇ|
ವಾಸುದೇವಾಯ ಧೀಮಹೀ ತನ್ನೋ ವಿಷ್ಣು ಪ್ರಚೋದಯಾತ್ ||

ನಮ್ಮ ಹಿಂದೂಧರ್ಮದಲ್ಲಿ ವೈಜ್ಞಾನಿಕ ಆಚರಣೆಗಳ ಹಿನ್ನೆಲೆಯ ಆಚರಣೆಗಳಿಗೆ ಧರ್ಮದ ಕಟ್ಟುಪಾಡು ವಿಧಿಸಿ ಹಬ್ಬ ಹರಿದಿನಗಳನ್ನು ಆಚರಿಸಲು ನಿಯಮ ರೂಪಿಸಿದ್ದಾರೆ. ಆಷಾಡಮಾಸದಲ್ಲಿ ಪ್ರಾಪ್ತಿಯಾಗುವ ವರ್ಷದ ಮೊದಲ ಏಕಾದಶಿ (ಪ್ರಥಮ) ಅತ್ಯಂತ ವಿಶಿಷ್ಟವಾದುದು. ಈ ಮಹೋನ್ನತ ಏಕಾದಶಿಯನ್ನು ಪ್ರಥಮ ಏಕಾದಶಿ ಅಥವಾ ಶಯನೀ ಏಕಾದಶಿ ಎಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ನಾಲ್ಕುತಿಂಗಳ ಚಾತುರ್ಮಾಸ ವೃತ ಏಕಾದಶಿಯಂದು ಆರಂಭಗೊಳ್ಳುವದರಿಂದ ಪ್ರಥಮ ಏಕಾದಶಿಯಂದೂ ಜಗತ್ಪತಿಯೂ ,ರಮಾರಮಣನೂ ಆದ ಶ್ರೀ ಮಹಾವಿಷ್ಣು ಇದೇ ದಿನ ಯೋಗನಿದ್ರೆಗೆ ಜಾರುವದರಿಂದ ಶ್ರೀ ವಿಷ್ಣುವಿನ ಶಯನೋತ್ಸವ ದಿನವೆಂದು ಎನ್ನಲಾಗುತ್ತದೆ. ಇಂದಿನಿಂದ ಲೋಕಪರಿಪಾಲಕ ಶ್ರೀಹರಿ( ಮಹಾವಿಷ್ಣು) ನಾಲ್ಕು ತಿಂಗಳಕಾಲ ಯೋಗನಿದ್ರೆಯಲ್ಲಿ ತೊಡಗಿಸುವದರಿಂದ ಆ ದಿವನ್ನು ಶಯನೀ ಏಕಾದಶಿಯಂದು ಕರೆಯಲಾಗುತ್ತದೆ.

ಈ ಪ್ರಥಮ ಏಕಾದಶಿ ವಿಶೇಷವೆಂದರೆ ಜೀವನದಲ್ಲಿ ಒಮ್ಮೆಯಾದರೂ ಈ ವೃತ ಆಚರಿಸಿ ಪುಣ್ಯಗಳಿಸಿಕೊಳ್ಳಬೇಕೆಂಬ ಚಾತುರ್ಮಾಸ ವೃತ ಆರಂಭಗೊಳ್ಳುವ ದಿನ. ವಿಷ್ಣುಭಕ್ತರು ಕಡ್ಡಾಯವಾಗಿ ಈ ದಿನ ತಮ್ಮ ಕುಲಗುರುಗಳಿಂದ ತಪ್ತ ಮುದ್ರಧಾರಣೆ ಮಾಡಿಸಿಕೊಂಡು ಚಾತುರ್ಮಾಸ ವೃತ ಆರಂಭಿಸುತ್ತಾರೆ.

ಏಕಾದಶಿಯ ಮಹತ್ವ ಹಿಂದೆ ಬಲಷ್ಟನಾಗಿದ್ದ ಮುರಾಸುರ ಎಂಬ ರಾಕ್ಷಸನು ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ ದರ್ಪದಿಂದ ಮೆರೆಯುತ್ತಿದ್ದ ಇವನ ಉಪಟಳ ತಾಳಲಾರದೇ ದೇವತೆಗಳು ಮುರನಿಂದ ರಕ್ಷಿಸುವಂತೆ ಶ್ರೀಹರಿಯನ್ನು ಪ್ರಾರ್ಥಿಸಿದರು. ದೇವತೆಗಳ ಪ್ರಾರ್ಥನೆಗೆ ಒಲಿದ ಮಹಾವಿಷ್ಣು ತನ್ನಲ್ಲಿದ್ದ ಅಸ್ತ್ರಶಸ್ತ್ರಗಳನ್ನು ಮುರನ ಮೇಲೆ ಪ್ರಯೋಗಿದನು. ಇದರಿಂದ ಮುರಾಸುರನ ಹೊರತು ಉಳಿದ ಸಾಕಷ್ಟು ರಾಕ್ಷಸರು ಹತರಾದರು. ವಿಷ್ಣುವಿನ ಹೊಡೆತಕ್ಕೆ ತತ್ತರಿಸಿ ಪರಾರಿಯಾದ ಮುರನು ಸಮಯಾವಕಾಶಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ. ಯುದ್ಧದ ನಂತರ ಶ್ರೀಹರಿ ಬದರೀ ಕ್ಷೇತ್ರಕ್ಕೆ ತೆರಳಿ ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಇದೇ ಸಮಯವೆಂದು ಮುರಾಸುರ ವಿಷ್ಣುವನ್ನು ಕೊಲ್ಲಲು ಯತ್ನಿಸಿದ. ಭಗವಂತ ತೇಜಸ್ಸಿನಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಬ್ಬ ಕನ್ಯೆಯಾಗಿ ಅವತರಿಸಿ ಮುರನನ್ನು ಸಂಹರಿಸಿದಳು‌. ಯೋಗ ನಿದ್ರೆಯಿಂದ ಜಾಗೃತಗೊಂಡು ಸುದ್ದಿ ತಿಳಿದು ಸಂತಸಗೊಂಡ ಶ್ರೀಪತಿ ಆಕೆಯನ್ನು ಅನುಗ್ರಹಿಸಿದ. 

ಆ ದಿನ ತಿಂಗಳ ೧೧ ನೇಯ ದಿನವಾಗಿತ್ತು. ವಿಷ್ಣುವು ಆ ದಿನ ಶ್ರದ್ಧಾ ಭಕ್ತಿಯಿಂದ ಯಾರು ಉಪವಾಸವಿದ್ದು ಸೇವಿಸುತ್ತಾರೋ ಅವರಿಗೆ ವಿಶೇಷಫಲ ನೀಡುತ್ತೇನೆ ಎಂದು ಹೇಳಿದನು. ಅಂದಿನಿಂದ ಏಕಾದಶಿ ಜಾರಿಗೆ ಬಂದಿತು. ಅಂದಿನ ದಿನ ಶ್ರದ್ಧಾಭಕ್ತಿಯಿಂದ ಏಕಾದಶಿ ಆಚರಿಸುವ ಭಕ್ತರು ಬೇಡುವ ಸಾತ್ವಿಕ ವರಗಳನ್ನು ಕರುಣಿಸಲಾರಂಭಿಸಿದನು.

ವೈಜ್ಞಾನಿಕವಾಗಿ ಏಕಾದಶಿ ವೃತ ಆರೋಗ್ಯಕ್ಕೆ ಸಹಕಾರಿ. ಹದಿನೈದು ದಿನಕೊಮ್ಮೆ ದೇಹಕ್ಕೆ ಬಿಡುವು ನೀಡಬೇಕೆಂದು ಆಯುರ್ವೇದ ಹೇಳುತ್ತದೆ. ಶ್ರೀಹರಿಯ ಸೇವೆಯ ಪುಣ್ಯದ ಜೊತೆ ನಮ್ಮ ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಈ ಆಚರಣೆಗಳನ್ನು ನಾವು ಪಾಲಿಸೋಣ.

Category:Spirituality



ProfileImg

Written by ಗಿರಿಜಾ ಎಸ್ ದೇಶಪಾಂಡೆ

Verified

0 Followers

0 Following