ಶೂನ್ಯ ಹೃದಯಿಗಳಾಗದಿರಿ.......
ಇತ್ತೀಚಿನ ದಿನಗಳಲ್ಲಿ ಸಮಾಜಿಕ ಮಾಧ್ಯಮಗಳಲ್ಲಿ ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿಕಟ್ಟಿ ---- ಸಮಾಜದಲ್ಲಿ ಒಡಕನ್ನು ಸೃಷ್ಟಿಸಿ ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುತ್ತಿರುವವರ ಸಂಖ್ಯೆಯು ದಿನೇ-ದಿನೇ ಅಧಿಕವಾಗುತ್ತಿದೆ, ಫೇಸ್ ಬುಕ್, ವಾಟ್ಸ ಅಪ್ ಗಳ ಗುಂಪುಗಳನ್ನು ಸೃಷ್ಟಿಸಿ ವಿಷವನ್ನು ಉಣಬಡಿಸುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ, ತಿಳಿದೋ ತಿಳಿಯದೋ ಆ ವಿಷ ವರ್ತುಲದ ಸೃಷ್ಟಿಗೆ ನಮ್ಮ ಪಾಲು ಇದೆ ಎಂಬುದೇ ಅದಕ್ಕಿಂತಲೂ ಅತ್ಯಂತ ಆಘಾತಕರ ಸಂಗತಿಯಾಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ.
ತಲೆ ತಿರುಕನೋರ್ವನ ಸುಳ್ಳು ಸುದ್ದಿ, ಅರ್ಧ ಸತ್ಯ, ತಪ್ಪು ಸಂದೇಶ, ಮಿಥ್ಯ ಚರಿತ್ರೆ, ಅನಗತ್ಯ ಚರ್ಚೆಗಳು, ಬೇಜವಾಬ್ದಾರಿಯುತ ಹೇಳಿಕೆಗಳು, ಸಮಾಜಘಾತುಕ ನಡವಳಿಕೆಗಳು, ಸಭ್ಯ ಜನರ ಧ್ವನಿಯಡಿಗಿಸುವ ಕೆಟ್ಟ-ಕೆಟ್ಟ ಕಮೆಟ್ಸಗಳನ್ನು ನಾವುಗಳು ಲೈಕ್ ಮಾಡುವ ಮೂಲಕ, ಶೇರ್ ಮಾಡುವ ಮೂಲಕ ಫಾರ್ವರ್ಡ ಮಾಡುವ ಮೂಲಕ ಆ ತಲೆತಿರುಕರಿಗೆ ಪ್ರತೇಕ್ಷವಾಗಿ ಹಾಗೂ ಪರೋಕ್ಷವಾಗಿ ಹುರಿದುಂಬಿಸುತ್ತಿದ್ದೇವೆ.
ನನಗೆ ಸ್ವಾತಂತ್ರ್ಯ ಇದೆ ಎಂದು ಮತ್ತೊಬ್ಬನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುವುದು ಎಷ್ಟು ಸಮಂಜಸ ?. ಬಾಬಾ ಸಾಹೇಬರ ಆಶಯ ಸಂವಿಧಾನದ ಒಳಿತು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆಂಬುದಾಗಿತ್ತು ಒಂದು ವೇಳೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಯಾರಾದರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರೆ ಅವರಿಗಿಂತ ದೊಡ್ಡ ದೇಶದ್ರೋಹಿಗಳು ಉಂಟೇ ? ಸಮಾಜದಲ್ಲಿ ಕ್ರೌರ್ಯಮೆರೆದು ಭಯದ ವಾತವರಣ ನಿರ್ಮಾಣಮಾಡುತ್ತಿದ್ದಾರೆ ಅವರೊಂದಿಗೆ ನಾವೂ
ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಭಾರತೀಯ ಸಮಾಜದಲ್ಲಿ ಒಡಕನ್ನು ಸೃಷ್ಟಿಸಿ ಹೊತ್ತಿ ಉರಿಯಲು ನಮ್ಮ ಕಾಣಿಕೆಯನ್ನು ನೀಡುತ್ತಿದ್ದೇವೆ. ಎಂದು ಹೇಳಲು ನಿಜವಾಗಿ ಖೇದಕರವೆನಿಸುತ್ತದೆ.
ಈ ಸಂದರ್ಭದಲ್ಲಿ ನನಗೊಂದು ಕಥೆ ನೆನಪಿಗೆ ಬರುತ್ತಿದೆ ಅದೇನೆಂದರೆ, ಒಂದು ಕಾಡು ಹೊತ್ತಿ ಉರಿಯುತ್ತಿತ್ತು ಕಾಡಿನ ಎಲ್ಲಾ ಪ್ರಾಣಿಗಳು ಉರಿಯುತ್ತಿರುವ ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದವು, ಒಂದು ಪಕ್ಷಿ ಮಾತ್ರ ಪಕ್ಕದ ಹೊಳೆಯಿಂದ ತನ್ನ ಕೊಕ್ಕಿನಲ್ಲಿ ಹೊತ್ತುತಂದ ನೀರನ್ನ ಉರಿಯುತ್ತಿರುವ ಕಾಡಿಗೆ ಚಿಮ್ಮಿಸುತ್ತಿತ್ತು, ಇದನ್ನು ನೋಡಿದ ನರಿಯೋಂದು ನಗುತ್ತಾ ಕೇಳಿತು ಗೆಳೆಯ, ನೀನು ಚಿಮ್ಮಿಸುವ ನೀರಿನಿಂದ ಹೊತ್ತಿ ಉರಿಯುತ್ತಿರುವ ಈ ಕಾಡಿನ ಬೆಂಕಿಯು ನಂದಿಸಲು ಸಾಧ್ಯವಿಲ್ಲ ಎಂದು, ಅದಕ್ಕೆ ಪಕ್ಷಿಯು ಮರು ನುಡಿಯಿತು, ಗೆಳೆಯ ನನಗೂ ಚೆನ್ನಾಗಿ ಗೊತ್ತು ನಾ ಚಿಮ್ಮಿಸುತ್ತಿರುವ ನೀರಿಗೆ ಕಾಡಿನ ಬೆಂಕಿ ಆರಿಸುವ ಶಕ್ತಿಯಂತೂ ಖಂಡಿತವಿಲ್ಲವೆಂದು , ಆದರೆ ಸೃಷ್ಟಿಕರ್ತನ ಬಳಿ ಕಾಡಿಗೆ ಬೆಂಕಿಯಿಟ್ಟವರ, ಹಾಗೂ ನಂದಿಸಲು ಪ್ರಯತ್ನಿಸುತ್ತಿರುವವರ ಎರಡೂ ಪಟ್ಟಿಗಳಿವೆ. At list ನನ್ನ ಹೆಸರು ನಂದಿಸುತ್ತಿರುವವರ ಪಟ್ಟಿಯಲ್ಲಾದರೂ ಸೇರಲಿ, ಬೆಂಕಿಯಿಟ್ಟವರ ಅಥವಾ ಹೆದರಿ ಓಡುತ್ತಿರುವವರ ಪಟ್ಟಿಯನ್ನು ಹೊರತುಪಡಿಸಿ ಎಂದಿತು.
ಕಾಡಿಗೆ ಬೆಂಕಿ ಹತ್ತಿ , ಹೊತ್ತಿ ಉರಿಯುತ್ತಿರುವಂತೆ ಇಂದು ನಮ್ಮ ಸಮಾಜದಲ್ಲಿಯೂ ಬೆಂಕಿ ಹತ್ತಿ ಉರಿಯುತ್ತಿದೆ. ನಮ್ಮ ಭಾರತೀಯ ಸಮಾಜ ಹೊತ್ತಿ-ಹೊತ್ತಿ ಉರಿಯಲು ಫೇಸ್ಬುಕ್, ವಾಟ್ಸಪ್ ನ, ನೂರಾರು ಗುಂಪುಗಳು ಅದರ ಬೇಜವಾಬ್ದಾರಿಯುತ ಪೊಸ್ಟಗಳು ಇಂಧನವಾಗಿ ಪರಿಣಮಿಸುತ್ತಿವೆ. ಆದ್ದರಿಂದ ಯಾರೊ ತಲೆ ತಿರುಕರು A/C Room ನಲ್ಲಿ ಕುಳಿತು ಸೃಷ್ಟಿಸಿ upload ಮಾಡಿದ ಸಮಾಜವನ್ನು ಒಡೆಯುವ ಸುಳ್ಳು ಸುದ್ದಿಯ ಪೊಸ್ಟಗಳನ್ನು ದಯವಿಟ್ಟು ಲೈಕ್ ಮಾಡುವುದಾಗಲಿ, ಶೇರ್ ಮಾಡುವುದಾಗಲಿ ಖಂಡಿತವಾಗಿ ಮಾಡದೇ ಸಭ್ಯ ಸಂಕೃತೀಯ ಸಭ್ಯ ಜನರಾಗಿ ಪರಸ್ಪರ ಪ್ರೀತಿ ಪ್ರೇಮ ದಿಂದ ಬಾಳಿ ಬದುಕೊಣ ಬದುಕಲು ಬಿಡೋಣ. ಸುಳ್ಳು ಸಂದೇಶಗಳನ್ನು ನಾವು ಹರಡುವುದು ಬೇಡ. ಸುಳ್ಳು post ಗಳಿಗೆ ನಮ್ಮ ಒಂದು ಲೈಕು ಶೇರ್, ಕಮೆಂಟು ಬೆಂಕಿಗೆ ತುಪ್ಪವನ್ನು ಸುರಿದಂತೆ ಅದರಿಂದಾಗುವ ಪಾಪಕ್ಕೆ ಹಾಗೂ ಕೇಡಿಗೆ ನಮ್ಮ ಪಾಲು ಸೇರದಿರಲಿ ಎಂಬುದನ್ನು ಅರಿತು ಹಾಗೆ ಮಾಡದಿರಲು ಪಣತೊಡೊಣ ಬೆಂಕಿ ಹಚ್ಚುವವರ ಪಟ್ಟಿಯಲ್ಲಿ ನಾವು ಸೇರದಿರೊಣ ಬದಲಿಗೆ ನಂದಿಸುವವರ ಪಟ್ಟಿಗೆ ಸೇರೊಣ.
ಕೊನೆಯದಾಗಿ ಏಸು ಕ್ರಿಸ್ತ ಹೇಳಿದಂತೆ - " ನಿಮ್ಮ ನೆರೆ ಹೊರೆಯವರನ್ನು ಪ್ರೀತಿಸಿ " ಅಷ್ಟು ಸಾಕು ಭವ್ಯ ಭಾರತ ಕಟ್ಟಲು, ಉಳಿಸಲು, ಬೆಳೆಸಲು. ನಮ್ಮ ಕೆಟ್ಟ ಗಳಿಗೆಯಲ್ಲಿ , ಸಂತೋಷದಲ್ಲಿ , ಅವಶ್ಯಕತೆವಿದ್ದಾಗ ಸಹಾಯಕ್ಕೆ ಬರುವವರು ನಮ್ಮ ನೆರೆಹೊರೆಯವರು ಮಾತ್ರ ಅವರು ಯಾವ ಜಾತಿ, ಧರ್ಮ, ಸಮಾಜದವರಾದರೂ ಸರಿ. ಅವರ ಹೊರತು ಯಾವ ತಲೆ ತಿರುಕನೂ ನಮ್ಮ ಸಹಾಯಕ್ಕೆ ಬರುವುದಿಲ್ಲ ಎಂಬುದನ್ನು ಅರಿತುಕೊಂಡು ಸಹೋದರರಾಗಿ ಬಾಳೋಣ.
* * * * *
ಶಕೀಲ್ ಉಸ್ತಾದ್ , ಹಟ್ಟಿ ಚಿನ್ನದ ಗಣಿ
0 Followers
0 Following