Do you have a passion for writing?Join Ayra as a Writertoday and start earning.

ಕಣ್ಣಾ ಮುಚ್ಚಾಲೆ

ProfileImg
09 May '24
6 min read


image

ನಾವು ಚಿಕ್ಕವರಿದ್ದಾಗ ಆಡುತ್ತಿದ್ದ ಆಟ “ ಕಣ್ಣಾ ಮುಚ್ಚೆ ಕಾಡೆ ಗೂಡೆ...” ಇದರಲ್ಲಿ ಒಬ್ಬರು ಕಣ್ಣು ಮುಚ್ಚಿಕೊಳ್ಳಬೇಕು ಉಳಿದವರು ಬಚ್ಚಿಟ್ಟುಕೊಳ್ಳ ಬೇಕು. ಆಮೇಲೆ ಕಣ್ಣುಬಿಟ್ಟು ಎಲ್ಲರನ್ನೂ ಹುಡುಕಬೇಕು. ಇದು ಮಕ್ಕಳಿಗೆ ತುಂಬಾ ಖುಷಿ ಕೊಡುವ ಆಟ. ಇದರಿಂದ ವ್ಯಾಯಾಮ ಆಗುವುದರೊಂದಿಗೆ ಮಕ್ಕಳಿಗೆ ಚುರುಕುತನ, ತಾಳ್ಮೆ ಗಳನ್ನೂ ಕಲಿಸುತ್ತದೆ. ಈಗ ಈ ಪದ್ಯದ ಮೇಲೆ ಹೆಚ್ಚು ವಿಚಾರ ಮಂಥನ ಮಾಡಿ ಇದು ಜೀವನ ತತ್ವವನ್ನು ಹೇಳುತ್ತಿದೆ ಎನ್ನುವವರು ಇದ್ದಾರೆ.

ಹಿರಿಯರೊಬ್ಬರು ಮಕ್ಕಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ ಒಂದು ಮಗುವನ್ನು ಹತ್ತಿರ ಕೂಡಿಸಿಕೊಂಡು ಅದರ ಕಣ್ಣು ಮುಚ್ಚಿ ಪದ್ಯವನ್ನು ರಾಗವಾಗಿ ಹಾಡುತ್ತಾರೆ. ಎಲ್ಲಾ ಮಕ್ಕಳು ಬಚ್ಚಿಟ್ಟು ಕೊಂಡದ್ದನ್ನು ನೋಡಿ “ನಿಮ್ಮ ಹಕ್ಕಿ ಮುಚ್ಚಿ ಕೊಳ್ಳಿ ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ “ ಎನ್ನುತ್ತಾ ಕಣ್ಣು ಬಿಡುತ್ತಾರೆ. ಸ್ವಲ್ಪ ದೊಡ್ಡ ಮಕ್ಕಳಾದರೆ 50 ಅಥವಾ 100 ತನಕ ಎಣಿಸಿ ಕಣ್ಣು ಬಿಡುತ್ತಾರೆ. ಅಲ್ಲಿಗೂ ತುಂಟ ಮಕ್ಕಳು ಅಡಗಿಕೊಳ್ಳಲು ಜಾಗ ಸಿಗದೆ ಇನ್ನೂ ಓಡಾಡುತ್ತಿರುತ್ತಾರೆ. ಎಳೆಯ ಮಕ್ಕಳಿಗೆ ಆಟವಾಡಿಸಲು ದೊಡ್ಡವರು ತಲೆಯ ಮೇಲೆ ಬಟ್ಟೆ ಹಾಕಿಕೊಂಡು “ ಇಲ್ಲಾ ಇಲ್ಲಾ “ ಎನ್ನುತ್ತಾ ಗಾಬರಿ ಪಡಿಸಿ “ ಬಂತು” ಎಂದು ನಗಿಸುವುದು ಒಂದು ಸುಂದರ ಅನುಭವ. ಮಕ್ಕಳಿಗೆ ಕಾಣದಿದ್ದ ತನ್ನ ಆತ್ಮೀಯರನ್ನು ಕಂಡಾಗ ಸಂತೋಷವಾಗಿ ಕೇಕೆ ಹಾಕಿ ನಗುತ್ತದೆ.

ಕಣ್ಣಾಮುಚ್ಚಾಲೆ ಆಟ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪುರಾಣದಲ್ಲಿ ನೋಡುವುದಾದರೆ ತ್ರೇತಾಯುಗದಲ್ಲಿ ರಾಮನು ತನ್ನ ತಂದೆಯು ಕೊಟ್ಟು ವಚನವನ್ನು ನಡೆಸಲು ವನವಾಸಕ್ಕೆ ಸೀತಾ ಲಕ್ಷ್ಮಣರ ಜೊತೆ ಹೋಗುತ್ತಾನೆ. ಅಲ್ಲಿ ರಾವಣನು ಮಾಯೆಯಿಂದ ಸೀತೆಯನ್ನು ಅಪಹರಿಸುತ್ತಾನೆ. ಸೀತೆಯನ್ನು ಹುಡುಕಿಕೊಂಡು ಹೊರಟ ರಾಮನು ಹನುಮಂತ ಮತ್ತು ಸುಗ್ರೀವನನ್ನು ಭೇಟಿಯಾಗಿ ಸ್ನೇಹಿತರಾಗುತ್ತಾರೆ. ಅವರಿಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡುವ ಭರವಸೆಯನ್ನು ನೀಡುತ್ತಾರೆ. ಸುಗ್ರೀವನ ಅಣ್ಣ ವಾಲಿ ಅವನನ್ನು ರಾಜ್ಯದಿಂದ ಹೊರ ಹಾಕಿರುತ್ತಾನೆ. ವಾಲಿಯು ಬಹಳ ಪರಾಕ್ರಮಶಾಲಿ ಆದ್ದರಿಂದ ಅಣ್ಣ ತಮ್ಮಂದಿರ ಮಧ್ಯೆ ಯುದ್ಧ ಆಯೋಜಿಸಿ ಅದು ನಡೆಯುವಾಗ ರಾಮನು ಮರೆಯಲ್ಲಿ ನಿಂತು ಬಾಣ ಬಿಟ್ಟು ವಾಲಿಯನ್ನು ಸಂಹರಿಸುತ್ತಾನೆ. ಇದು ತಪ್ಪು ಎನ್ನುವ ವಾದಗಳೂ ಹಲವಾರು ಕೇಳಿಬರುತ್ತಿದೆ.

ಮುಂದೆ ದ್ವಾರದ ಯುಗದಲ್ಲಿ ಮಹಾಭಾರತ ಕಥೆಯಲ್ಲಿಯೂ ಕಣ್ಣಾಮುಚ್ಚಾಲೆಯ ಕಥೆಗಳನ್ನು ಕಾಣಬಹುದು. ಪಾಂಡು ಮತ್ತು ಮಾದ್ರಿಯ ಮರಣದ ನಂತರ ಕುಂತಿಯು ಪಾಂಡವರನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬರುತ್ತಾಳೆ. ಅವರ ಶಸ್ತ್ರಾಭ್ಯಾಸದ ಸಲುವಾಗಿ ತಾತಾ ಭೀಷ್ಮರು ದ್ರೋಣಾಚಾರ್ಯರನ್ನು ನೇಮಿಸುತ್ತಾರೆ. ಆ ಸಮಯದಲ್ಲಿ ಕಾಡಿನ ರಾಜನ ಮಗನಾದ ಏಕಲವ್ಯನೂ ದ್ರೋಣರ ಬಳಿ ಶಬ್ಧವೇದಿ ಬಿಲ್ವಿದ್ಯೆ ಕಲಿಯಲು ಬಯಸಿ ಬಂದು ಕೇಳುತ್ತಾನೆ. ಆದರೆ ದ್ರೋಣರು ನಾನು ರಾಜಪುತ್ರರಿಗೆ ಮಾತ್ರ ಕಲಿಸುವುದಾಗಿ ಹೇಳುತ್ತಾರೆ. ಏಕಲವ್ಯ ಛಲಬಿಡದೆ ದ್ರೋಣರು ವಿದ್ಯೆಯನ್ನು ಕಲಿಸುವಾಗ ಬಚ್ಚಿಟ್ಟುಕೊಂಡು ನೋಡುತ್ತಾನೆ. ನಂತರ ಕಾಡಿನಲ್ಲಿ ಅವರ ಒಂದು ಮೂರ್ತಿಯನ್ನು ಮಾಡಿ ಅದರ ಮುಂದೆ ಅಭ್ಯಾಸ ಮಾಡುತ್ತಾನೆ.ಆದರೆ ಮುಚ್ಚಿಕೊಂಡು ಕಲಿತ ಫಲವಾಗಿ ಏಕಲವ್ಯನು ದ್ರೋಣಾಚಾರ್ಯರಿಗೆ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆ ಆಗಿ ನೀಡಬೇಕಾಗುತ್ತದೆ.

ಮುಂದೆ ದೊಡ್ಡವರಾದ ಮೇಲೆ ಪಾಂಡವರು ಕೌರವರು ಪಗಡೆಯಾಟವನ್ನು ಆಡುತ್ತಾರೆ. ಅದರಲ್ಲಿ ಸೋತ ಪಾಂಡವರು ಆಟದ ನಿಯಮದಂತೆ 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮಾಡಬೇಕಾಗುತ್ತದೆ. ಅಜ್ಞಾತವಾಸ ಎಂದರೆ ತಮ್ಮ ಗುರುತು ತಿಳಿಯದಂತೆ ಮಾರುವೇಷದಲ್ಲಿ ಜೀವನ ನಡೆಸುವುದು. ಅವರು ವಿರಾಟರಾಜನ ರಾಜ್ಯಕ್ಕೆ ಹೋಗಿ ಮರೆ ಮಾಡಿಕೊಂಡು ಒಂದು ವರ್ಷ ಇರುತ್ತಾರೆ. ಆಗ ಧರ್ಮರಾಯನು ಪಂಡಿತನಾಗಿ ಭೀಮನು ಅಡಿಗೆಯವನಾಗಿ ಅರ್ಜುನ ಹೆಂಗಸಿನ ವೇಷ ಧರಿಸಿ ನಾಟ್ಯ ಕಲಿಸುವ ಗುರುವಾಗಿ ದ್ರೌಪದಿ ರಾಣಿಯ ಸೇವಕಿಯಾಗಿ ನಕುಲ ಸಹದೇವರು ಕುದುರೆ ಪಾಲಿಸುವವರಾಗಿ ಅಲ್ಲಿ ಇರುತ್ತಾರೆ. ಇದು ಒಂದು ರೀತಿಯ ಕಣ್ಣ ಮುಚ್ಚಾಲೆ ಆಟದಂತೆಯೇ ಅಲ್ಲವೇ?

ಮಹಾಭಾರತದ ಕೊನೆಯ ಭಾಗದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಕೌರವರ ಕಡೆಯ ವೀರರನ್ನೆಲ್ಲ ಕೊಲ್ಲುತ್ತಾರೆ.‌ ದುರ್ಯೋಧನ ಒಬ್ಬ ಮಾತ್ರ ಉಳಿದಿರುತ್ತಾನೆ. ಆ ಸಮಯದಲ್ಲಿ ಶರಶೈಯೆಯ ಮೇಲೆ ಮಲಗಿರುವ ಭೀಷ್ಮನ್ನು ದುರ್ಯೋಧನನಿಗೆ ಅಶ್ವತ್ಥಾಮ ಮತ್ತು   ಕೃಪ  ಬರುವವರೆಗೆ ವೈಶಂಪಾಯನ ಸರೋವರದಲ್ಲಿ ಅಡಗಿರುವಂತೆ ಸಲಹೆ ಕೊಡುತ್ತಾರೆ. ಅದರಂತೆ ಅಲ್ಲಿಗೆ ಹೋದ ದುರ್ಯೋಧನನು ಸರೋವರದೊಳಗೆ ಹಿಮ್ಮುಖವಾಗಿ ನಡೆದು ಸರೋವರದ ಕೆಳಭಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಪಾಂಡವರು ಅವನನ್ನು ಎಲ್ಲಾ ಕಡೆಗಳಲ್ಲೂ ಹುಡುಕಿ ಕೊನೆಗೆ ವೈಶಂಪಾಯನ ಸರೋವರಕ್ಕೆ ಬರುತ್ತಾರೆ. ಅಲ್ಲಿ ಅವನು ಇರುವುದನ್ನು ತಿಳಿದು ದುರ್ಯೋಧನನಿಗೆ ಕೋಪ ರೋಷ ಬರುವಂತೆ “ಹೇಡಿಯಂತೆ ಏಕೆ ಬಿಚ್ಚಿಟ್ಟಕೊಂಡಿದ್ದೇಯೆ ಯೋಧನೆ ಆದರೆ ಹೊರಗೆ ಬಂದು ಯುದ್ಧ ಮಾಡು” ಎಂದು ಅವನನ್ನು ಕೆಣಕಿ ಹೊರಕ್ಕೆ ಕರೆಯುತ್ತಾರೆ.‌ ಭೀಮನ ರಣೋತ್ಸಾಹದ ಮಾತುಗಳನ್ನು ಕೇಳಿ ದುರ್ಯೋಧನನು ತಣ್ಣನೆಯ ನೀರಿನಲ್ಲೂ ಬೆವರಿದನು ಎನ್ನುವ ರನ್ನ ಕವಿಯ ಮಾತನ್ನು ಇಲ್ಲಿ ಸ್ಮರಿಸಬಹುದು. ಅವನು ಹೆದರಿಕೆಯಿಂದ ಬೆವರಿದನೆ ಅಥವಾ ಕೋಪದಿಂದ ಬೆವರಿದನೆ ಇದು ಒಂದು ಒಳ್ಳೆಯ ಚರ್ಚೆಯ ವಿಷಯ.‌ ನಂತರ ಭೀಮ ದುರ್ಯೋಧನರ ಗಧಾಯುದ್ದವಾಗಿ ಭೀಮನು ಎದುರಾಳಿಯ ತೊಡೆಯನ್ನು ಮುರಿದು ತನ್ನ ಶಪಥವನ್ನು ಪೂರೈಸಿಕೊಂಡನು.

ಮಹಾರಾಜರ ಕಾಲವನ್ನು ಗಮನಿಸಿದರೆ ಶತ್ರುವನ್ನು ಗೆಲ್ಲಲು ರಾಜರು ವಿವಿಧ ರೀತಿಯ ಯುದ್ಧಗಳನ್ನು ಮಾಡುತ್ತಿದ್ದರು. ಎದುರಾಳಿಯನ್ನು ಯುದ್ಧ ಭೂಮಿಯಲ್ಲಿ ಎದುರಿಸಿ ಹೋರಾಡುವುದು ಒಂದು ರೀತಿಯಾದರೆ ರಾತ್ರಿಯ ಕತ್ತಲೆಯ ಮರೆಯಲ್ಲಿ ಶತ್ರುಪಾಳ್ಯವನ್ನು ಹೊಕ್ಕು ಮಲಗಿದ್ದ ಸೈನಿಕರನ್ನು ಕೊಲ್ಲುವುದು ಒಂದು ವಿಧವಾಗಿತ್ತು. ಇದಕ್ಕಾಗಿಯೇ ಬೇಡರ ಪಡೆ ಎನ್ನುವ ಒಂದು ಸೈನ್ಯದ ತುಕಡಿಗೆ ತರಬೇತಿಗೆ ನೀಡಲಾಗುತ್ತಿತ್ತು. ಇವರು ಕತ್ತಲಲ್ಲಿ ಬಂಡೆ , ಕೋಟೆಗಳನ್ನು ಹತ್ತುವುದು , ಕಾಡಿನಲ್ಲಿ, ಹಳ್ಳ ಕೊಳ್ಳ ಗಳಲ್ಲಿ ಹೊಗುವದು ಎಲ್ಲಾ ಮಾಡುತ್ತಿದ್ದರು. ಈ ಯೋಧರು ಬಹಳ ಧೈರ್ಯಶಾಲಿಗಳು. ಶತ್ರು ಸೈನ್ಯ ಬರುವ ದಾರಿಯ ಬೆಟ್ಟ ಗುಡ್ಡಗಳೊಂದಿಗೆ ಕಾಡುಗಳಲ್ಲಿ ಬಚ್ಚಿಟ್ಟುಕೊಂಡು ಅವರು ಬಂದಾಗ ಮರೆಯಿಂದ ಬಾಣ ಭರ್ಜಿಗಳನ್ನು ಎಸೆದು ಅವರ ಮೇಲೆ ಆಕ್ರಮಣ ಮಾಡುವುದು ಇನ್ನೊಂದು ರೀತಿಯ ಯುದ್ಧದ ವಿಧಾನ. ಗುಡ್ಡ ಗಾಡಿನಲ್ಲಿ ವಾಸಿಸುವವರು ಈ ರೀತಿಯ ಯುದ್ದದಲ್ಲಿ ಪರಿಣತಿ ಪಡೆದಿರುತ್ತಾರೆ. ಶತ್ರುಗಳಿಗೆ ಇವರ ರಾಜ್ಯದ ಭೂಗೋಳದ ಪರಿಚಯ ಇಲ್ಲದಾಗ ಈ ರೀತಿಯ ಯುದ್ಧ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದು ಅನ್ಯಾಯದ ರೀತಿ ಎನಿಸಿದರೂ ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯೋಚಿತವಾದದ್ದು ಎನ್ನುವ ಮಾತು ಸಹ ಇದೆ. ಹಾಗೆಯೇ ಎದುರಿಗೆ ನಿಂತು ಎದುರಾಳಿಯನ್ನು ಎದುರಿಸುವ ಯೋಧನನ್ನು ಶೂರ ಪರಾಕ್ರಮಿ ಎಂದು ಕರೆದರೆ ಮರೆಯಲ್ಲಿ ನಿಂತು ಆಕ್ರಮಣ ಮಾಡುವವರನ್ನು, ಹಿಂದಿನಿಂದ ಹೊಡೆದು ಸಾಯಿಸುವವರನ್ನು ಹೇಡಿ ಎಂದು ಕರೆಯಲಾಗುತ್ತದೆ. ಮುಂದೆ ನಿಂತು ಎದುರಿಸಲು ಧೈರ್ಯ ಇಲ್ಲದವನು ಎಂದು ದುಃಖ ಅವರನ್ನು ಅವ ಹೇಳನ ಮಾಡುತ್ತಾರೆ.

ಇನ್ನು ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಹೋರಾಟಗಾರರು ಬ್ರಿಟಿಷರಿಂದ ಕದ್ದು ಮುಚ್ಚಿ ಕೆಲಸ ಮಾಡಬೇಕಾಗಿತ್ತು. ಸಿಕ್ಕಿಬಿದ್ದರೆ ಅವರನ್ನು ಸೆರೆಮನೆಗೆ ಕಳಿಸುತ್ತಿದ್ದರು ಅಥವಾ ಗಲ್ಲಿಗೆ ಹಾಕುಲಾಗುತ್ತಿತ್ತು. ಆದರೂ ದೇಶಭಕ್ತರು ಮುಚ್ಚು ಮರೆಯಲ್ಲಿಯೇ ಆಯುಧ ಬಾಂಬ್ ಮುಂತಾದವುಗಳನ್ನು ಸಂಗ್ರಹಿಸಿ ಬ್ರಿಟಿಷರಿಗೆ ತಿಳಿಯದಂತೆ ಜನರನ್ನು ಸೇರಿಸಿ ಅವರಿಗೆ ತರಬೇತಿ ನೀಡಿ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಅಂತಹ ಮಹಾನ್ ದೇಶಭಕ್ತರು ಸಿಕ್ಕಿ ಬಿದ್ದಾಗ ಸ್ವಲ್ಪವೂ ಹೆದರದೆ ಬ್ರಿಟಿಷರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು, ನೇಣುಗಂಬವನ್ನು ಏರುತ್ತಿದ್ದರು. ಇದು ಬೇರೆ ಜನರಿಗೆ ಸ್ಪೂರ್ತಿಯನ್ನು ನೀಡುತ್ತಿತ್ತು.

ವರ್ತಮಾನ ಕಾಲದಲ್ಲಿ ಹೇಳುವುದಾದರೆ ಕಣ್ಣ ಮುಚ್ಚಾಲೆ ಆಟ ಏನೂ ಕಡಿಮೆ ಆಗಿಲ್ಲ. ಕಳ್ಳರು ಪೊಲೀಸರಿಂದ ಬಚ್ಚಿಟ್ಟುಕೊಂಡು ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಾರೆ. ಡಾನ್ ಗಳು ಸಿಐಡಿ ಗಳಿಂದ ತಪ್ಪಿಸಿಕೊಂಡು ಬೇರೆ ದೇಶಕ್ಕೆ ಓಡಿ ಹೋಗುತ್ತಾರೆ. ಇವರ ಮಧ್ಯೆ ಈ ರೀತಿ ಆಟ ನಡೆಯುತ್ತಲೇ ಇದೆ. ಹಾಗೆಯೇ ಭಯೋತ್ಪಾದಕರು ಸಾಮಾನ್ಯ ಜನರ ನಡುವೆ ಅವರಂತೆಯೇ ಸೇರಿ ಯಾರಿಗೂ ತಿಳಿಯದಂತೆ ಬಾಂಬ್ ದಾಳಿಗಳಿಗೆ ಪ್ರಯತ್ನ ಪಡುತ್ತಾರೆ. ಇವರನ್ನು ಕಂಡುಹಿಡಿಯುವುದು ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹಿಡಿಯುವುದು ಪೊಲೀಸರಿಗೆ ಸವಾಲೇ ಆಗಿದೆ. ಇವರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗುವುದು ಅಥವಾ ನಿರಪರಾಧಿಗಳಿಗೆ ಶಿಕ್ಷೆ ಆಗುವ ಸಂಭವಗಳೂ ಇರುತ್ತದೆ. ನಿರ್ಜನ ಪ್ರದೇಶಗಳಲ್ಲಿ ಇಂದಿಗೂ ಕಳ್ಳಕಾಕರು ಬಚ್ಚಿಟ್ಟುಕೊಂಡು ಜನರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾರೆ.

ಮನುಷ್ಯರಂತೆ ಪ್ರಾಣಿಗಳಲ್ಲಿ ಸಹ ಕಣ್ಣಾ ಮುಚ್ಚಾಲೆ ನಡೆಯುತ್ತದೆ. ಮಾಂಸಹಾರಿ ಪ್ರಾಣಿಗಳು ಬೇಟೆಯಾಡಲು ಹುಲ್ಲಿನ ಅಥವಾ ಮರಗಳ ಮರೆಯಲ್ಲಿ ಸದ್ದು ಮಾಡದೆ ನಿಂತು ಕಾಯುತ್ತವೆ. ಸರಿಯಾದ ಸಮಯಕ್ಕೆ ಒಂದೇ ಕ್ಷಣದಲ್ಲಿ ಎರಗಿ ತಮ್ಮ ಬೇಟೆಯನ್ನು ಹಿಡಿಯಲು ಪ್ರಯತ್ನಿಸುತ್ತವೆ. ದೇವರು ಎಲ್ಲಾ ಪ್ರಾಣಿಗಳಿಗೂ ಅತೀಂದ್ರಿಯ ಶಕ್ತಿಯನ್ನು ಕೊಟ್ಟಿರುತ್ತಾನೆ. ಸಸ್ಯಹಾರಿ ಪ್ರಾಣಿಗಳು ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಇರುತ್ತವೆ. ಒಂದು ಸಣ್ಣ ಶಬ್ದ ಚಲನೆಯನ್ನು ಗುರುತಿಸಿ ತಮ್ಮ ಶತ್ರುಗಳನ್ನು ಕಂಡು ಓಡಲು ಸಿದ್ಧವಾಗುತ್ತವೆ. ಕೆಲವು ಪ್ರಾಣಿಗಳಿಗೆ ನೈಸರ್ಗಿಕವಾಗಿ ಮರೆಯಾಗುವ ಗುಣವನ್ನು ಪ್ರಕೃತಿಯು ನೀಡಿದೆ. ಮೊಸಳೆಯೊಂದು ನೀರಿನಲ್ಲಿ ಇದ್ದರೆ ಅದು ಕಲ್ಲೋ ಮೊಸಳೆಯೋ ಗುರುತಿಸುವುದು ಸುಲಭವಲ್ಲ. ಹಕ್ಕಿಗಳು ಸಹ ಎಲೆ ಮರಿಯಲ್ಲಿ ಅಡಗಿ ಕುಳಿತಿದ್ದರೆ ಕಾಣುವುದು ಕಷ್ಟ ಸಾಧ್ಯ. ಗೋಸುಂಬೆ ತಾನಿರುವ ವಸ್ತುವಿನ ಬಣ್ಣವನ್ನು ತನ್ನ ಮೈಗೆ ತಂದುಕೊಂಡು ವೈರಿಗಳಿಂದ ರಕ್ಷಿಸಿಕೊಳ್ಳುತ್ತದೆ. ಕೆಲವು ಕೀಟಗಳು ಎಲೆಗಳಂತೆ ಕಡ್ಡಿಗಳಂತೆ ಕಾಣುತ್ತವೆ. ಅವುಗಳನ್ನು ಗುರುತಿಸಲು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಹೀಗೆ ಪ್ರಕೃತಿಯು  ಪ್ರಾಣಿಗಳ ರಕ್ಷಣೆಗಾಗಿ  ಮುಚ್ಚಾಲೆ ಆಟ ಆಡುತ್ತಿದೆ.‌

 ಇನ್ನು ನನ್ನ ಚಿಕ್ಕ ವಯಸ್ಸಿನ ಕಣ್ಣಾ ಮುಚ್ಚಾಲೆಯ ಅನುಭವಗಳು ನೆನಪಾಗುತ್ತವೆ. ಒಮ್ಮೆ ನಾವು ಒಬ್ಬ ದೂರದ ನೆಂಟರ ಮನೆಯಲ್ಲಿ ಇಳಿದುಕೊಂಡು ಅಲ್ಲಿಂದ ಮುಂದೆ ರಾಮೇಶ್ವರಕ್ಕೆ ಒಂದು ದಿನಕ್ಕಾಗಿ ಹೋಗಿ ಬರುವುದು ಎಂದು ಯೋಜನೆ ಹಾಕಿದ್ದೆವು. ನನ್ನ ಚಿಕ್ಕ ತಂಗಿಗೆ ಅಲ್ಲಿದ್ದ ನನ್ನ ಅತ್ತೆಯ ಜೊತೆ ಇರಬೇಕು ಎಂದು ಆಸೆ. ಆದರೆ ನಮ್ಮ ತಾಯಿ ಎಲ್ಲರೂ ಬರಲೇಬೇಕೆಂದು ಹೇಳಿದ್ದರು. ಮಾರನೇ ದಿನ ಬೆಳಗ್ಗೆ ಹೊರಡುವ ಸಮಯಕ್ಕೆ ನನ್ನ ತಂಗಿ ಕಾಣಲೇ ಇಲ್ಲ. ಎಲ್ಲರೂ ಹುಡುಕಿದ್ದೆ ಹುಡುಕಿದ್ದು!! ಕೊನೆಗೆ ಪ್ರಯಾಣಕ್ಕೆ ತಡವಾಗುತ್ತದೆ ಎಂದು ತಂದೆಯವರು ಹೊರಡುವ ಇವರೆಲ್ಲ ಇದ್ದಾರೆ ಅವರೊಂದಿಗೆ ಒಂದು ದಿನ ಇರುತ್ತಾಳೆ ಎಂದು ಹೇಳಿ ಹೊರಟುಬಿಟ್ಟರು. ಕಾರು ಹೋದಮೇಲೆ ಹೊದಿಕೆಗಳ ಹಿಂದೆ ಅಡಗಿದ್ದ ಅವಳು ಆಚೆಗೆ ಬಂದಳು. ಮನೆಯವರೆಲ್ಲ ನಕ್ಕು ಸುಮ್ಮನಾದರು. ಈಗ ನನ್ನ ಮಗನೆದು ಇದೇ ಸ್ವಭಾವ, ಎಲ್ಲರೂ ಹೋದ ಕಡೆ ಬಿಟ್ಟು ತನ್ನದೇ ದಾರಿ ಎಂದು ಹೋಗಿ ಒಂದಲ್ಲ ಒಂದು ಪೇಚಿಗೆ ಸಿಲುಕಿ ಕೊಳ್ಳುತ್ತಾನೆ. ನಂದಿ ಬೆಟ್ಟಕ್ಕೆ ಹೋದಾಗ ನಾವೆಲ್ಲ ಒಂದು ಕಡೆ ನಿಂತು ಮಾತನಾಡುತ್ತಿದ್ದರೆ ತಾನೇ ಜಾಗ ನೋಡುತ್ತೇನೆ ಎಂದು ಹೊರಟು ಹೋದೆನು. ಮಾತಿನ ಮಧ್ಯೆ ಅವನಿಗೆ ಹುಡುಕಿದಾಗ ಎಂಟು ವರ್ಷದ ಹುಡುಗ ನಾಪತ್ತೆ!! ಎಲ್ಲರೂ ಗಾಬರಿನಿಂದ ಆಚೀಚೆ ಓಡಾಡಿ ಹುಡುಕ ತೊಡಗಿದೆವು. ಕೊನೆಗೂ ಒಂದು ಕಡೆ ಸಿಕ್ಕಿದ್ದರಿಂದ ಪೊಲೀಸರ ತನಕ ಹೋಗಲಿಲ್ಲ. ದೇವರ ದಯೆ.

ಹೀಗೆ ಬಚ್ಚಿಟ್ಟುಕೊಳ್ಳುವ ಆಟ ಸಂದರ್ಭಕ್ಕೆ ತಕ್ಕಂತೆ ಎಲ್ಲರೂ ಆಡುತ್ತಾರೆ ಅನಿಸುತ್ತದೆ. ಸಾಲಗಾರರಿಂದ ಮೇಲಧಿಕಾರಿಗಳಿಂದ ಕೆಲವು ವೇಳೆ ಬೇಡದ ಅತಿಥಿಗಳಿಂದ ಸಹ ನಾವು ಬಚ್ಚಿಟ್ಟುಕೊಳ್ಳುತ್ತೇವೆ. ಮನೆಯಲ್ಲಿ ಇಲ್ಲ ಎಂಬ ಸುಳ್ಳು ಸಹ ಹೇಳಿಸುತ್ತೇವೆ.

ಹೀಗೆ ಲೋಕದಲ್ಲಿ ಎಲ್ಲಾ ಕಾಲದಲ್ಲೂ ಎಲ್ಲಾ ದೇಶಗಳಲ್ಲೂ ಕಣ್ಣ ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ. ನಮ್ಮ ಡಿವಿ ಗುಂಡಪ್ಪ ನವರು ಮಂಕುತಿಮ್ಮನ ಕಗ್ಗದ ಒಂದು ಪದ್ಯದಲ್ಲಿ

ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು

ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ

ಚಿನ್ನರಾಟವ ಬೇಡವೆಂಬುವರನು ನಾಂ ಬಿಡುನು

ಎನ್ನುವಜ್ಜಿಯೋ ಬೊಮ್ಮ – ಮಂಕುತಿಮ್ಮ .

ಎಂದು ಹೇಳಿದ್ದಾರೆ. ಅದರಂತೆ ಅಜ್ಜಿಯಂತೆ ಇರುವ ದೇವನ ಈ ಲೀಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಲೇಬೇಕು ಅಲ್ಲವೇ?

ಅಂಬಿಕ ರಾವ್.

 

Category : Entertainment


ProfileImg

Written by Ambika Rao