ಒಂದೆರಡು ದಶಕಗಳ ಹಿಂದೆ ಶಾಪಿಂಗ್ ಹೇಗಿತ್ತು ಎಂಬುದು ನಿಮಗೆ ನೆನಪಿದೆಯೇ..? ನಮ್ಮ ಅಗತ್ಯಗಳನ್ನು ತಕ್ಷಣ ಪೂರೈಸಲು ಅವಾಗ ವಿವಿಧ ಆಪ್ ಗಳು ಇರಲಿಲ್ಲ. ನಾವೆಲ್ಲಾ ಪ್ರತಿ ಸಣ್ಣ- ಸಣ್ಣ ವಸ್ತುಗಳ ಖರೀದಿಗೆ ಹೊರಗಡೆ ಹೋಗಬೇಕಾಗಿತ್ತು. ಆದರೆ ಇದೀಗ ವಿವಿಧ ಆನ್‌ಲೈನ್ ಶಾಪಿಂಗ್ ಆಪ್‌ನಲ್ಲೇ ನೀವು ಕೂತಲ್ಲೇ ಏನನ್ನಾದರೂ ಹುಡುಕಬಹುದು ಮತ್ತು ಖರೀದಿಸಬಹುದು. ಆದರೆ ಈ ಚಟುವಟಿಕೆ ಏನು ಮಾಡುತ್ತಿದೆ ಎಂಬುದು ನಿಮಗೆ ಗೊತ್ತಾ..?
ಇದು ಶಾಕಿಂಗ್ ಆದರೂ ಸತ್ಯ. ನೀವು ಮಾಡುತ್ತಿರುವ ಆನ್‌ಲೈನ್ ಶಾಪಿಂಗ್ ಒಂದು ರೀತಿಯಲ್ಲಿ ವ್ಯಸನಕಾರಿಯಾಗಬಹುದು. ಹೀಗಾಗಿ ಸ್ಪಲ್ಪ ಇರಲಿ ಎಚ್ಚರ, ಎಚ್ಚರ..!
ಕೆಲವೊಮ್ಮೆ ನಾವೆಲ್ಲರೂ 'ಕನ್ಫೆಷನ್ಸ್ ಆಫ್ ಎ ಶೋಪಹೋಲಿಕ್' ಚಿತ್ರದ ರೆಬೆಕಾ ಬ್ಲೂಮ್‌ವುಡ್‌ನಂತೆ ಭಾವಿಸಿದ್ದೇವೆ. ಹೌದು. ಆನ್‌ಲೈನ್ ಶಾಪಿಂಗ್ ವ್ಯಸನಿಯಾಗುವ ಸಾಧ್ಯತೆಯಿದೆ ಎಂದು ಗುರುಗ್ರಾಮದ ಆರ್ಟೆಮಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಅಂಕುರ್ ಸಿಂಗ್ ಕಪೂರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆನ್‌ಲೈನ್ ಶಾಪಿಂಗ್ ವ್ಯಸನದಿಂದಾಗಿ ಪರ್ಯಾಯವಾಗಿ ಖರೀದಿಯ ಅಸ್ವಸ್ಥತೆ ಉಂಟಾಗುತ್ತದೆ. ಇದನ್ನು ಒನಿಯೋಮೇನಿಯಾ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳ ನಡವಳಿಕೆಗೆ ಕಾ ಆಗಬಹುದು.
ಈ ಅಭ್ಯಾಸದಿಂದಾಗಿ ನೀವು ಅತಿಯಾಗಿ ಶಾಪಿಂಗ್ ಮಾಡಲು ಅತಿಯಾದ ಪ್ರಚೋದನೆಯನ್ನು ಅನುಭವಿಸಬಹುದು. ಇದು ಆರ್ಥಿಕ ಸಮಸ್ಯೆಗಳು, ಸಂಬಂಧದ ಸಮಸ್ಯೆಗಳು ಮತ್ತು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮುಂಬೈ ಮೂಲದ ಮನಶ್ಶಾಸ್ತ್ರಜ್ಞ ಅಲಿಶಾ ಲಾಲ್ಜಿ ಅವರು ಆನ್‌ಲೈನ್ ಶಾಪಿಂಗ್, ತಕ್ಷಣದ ಸಂತೋಷ ಮತ್ತು ಉತ್ಸಾಹವನ್ನು ನೀಡುತ್ತದೆ ಎಂದು ವಿವರಿಸುತ್ತಾರೆ. ಇದು ಅನುಕೂಲಕರವಾಗಿದೆ ಮತ್ತು ಗ್ರಾಹಕರಿಗೆ ಸಾಕಷ್ಟು ವೈವಿಧ್ಯತೆಯನ್ನು ಒದಗಿಸುತ್ತದೆ ಎಂದಿದ್ದಾರೆ.
ಒತ್ತಡ, ಆತಂಕ, ಖಿನ್ನತೆ ಅಥವಾ ಒಂಟಿತನವನ್ನು ನಿಭಾಯಿಸಲು ವ್ಯಕ್ತಿಗಳು ಶಾಪಿಂಗ್ ಅನ್ನು ಒಂದು ಮಾರ್ಗವಾಗಿ ಬಳಸಬಹುದು. ಶಾಪಿಂಗ್ ನಿಂದ ಪಡೆದ ತಾತ್ಕಾಲಿಕ ಪರಿಹಾರ ಅಥವಾ ಸಂತೋಷವು ಈ ನಡವಳಿಕೆಯನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಿಸಲಾಗಿದೆ.
ಪ್ರಚೋದನೆ ಅಥವಾ ಕಡಿಮೆ ಸ್ವಾಭಿಮಾನದಂತಹ ಕೆಲವು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಶಾಪಿಂಗ್ ವ್ಯಸನವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಆನ್ ಲೈನ್ ಶಾಪಿಂಗ್ ಕೆಲವೊಂದು ವಿಚಾರದಲ್ಲಿ ಒಳ್ಳೆಯದೇ. ಆದರೆ ಮಿತಿಮೀರಿದ್ರೆ ಹಾಲು ಕೂಡಾ ವಿಷ ಅಲ್ವಾ.? ಅದೇ ರೀತಿ ಆನ್‌ಲೈನ್ ಶಾಪಿಂಗ್ ವ್ಯಸನದ ರೂಪದಲ್ಲಿ ನಮ್ಮನ್ನು ಕಾಡದಂತೆ ನೋಡಿಕೊಳ್ಳಿ ಎಂಬುದೇ ನಮ್ಮ ಆಶಯ.
- ಶಂಶೀರ್ ಬುಡೋಳಿ
Author, Journalist, Poet, Anchor, PhD Scholar