ನಾನು ಮದುವೆಯಾಗಿ ಹೋದುದು ಪಂಜಾಬಿನ ಲೂಧಿಯಾನಕ್ಕೆ . ನಾನು ಕುಕ್ಕರ್ ಬಳಕೆ ಮಾಡಲು ಪ್ರಾರಂಭಿಸಿದ್ದು ಮದುವೆಯಾದ ನಂತರ. ನಾನು ಹೋಗುವ ಮೊದಲೇ ನನ್ನವರು ಕುಕ್ಕರ್ ತೆಗೆದಿಟ್ಟಿದ್ದರು.ಉತ್ತರ ಭಾರತದಲ್ಲಿ ಹೆಚ್ಚಾಗಿ ಉಪಯೋಗಿಸುವುದು ಹಾಕಿನ್ಸ್ ಕುಕ್ಕರ್.
ಅದನ್ನು ಉಪಯೋಗಿಸುವಾಗ ಅದರ ಮುಚ್ಚಳ ಮುಚ್ಚುವಾಗ ನನಗೆ ಕೋಪ ಬರುತ್ತಿತ್ತು. ಯಾಕೆಂದರೆ ಹಾಕಿನ್ಸ್ ಕುಕ್ಕರ್ನ ಗ್ಯಾಸ್ಕೆಟ್ ಸಪೂರವಾಗಿದ್ದು ಮೇಲಿನಿಂದ ಹಾಕುವಂಥದ್ದು. ಅದು ಲೀಕ್ ಆಗುವುದು ಹೆಚ್ಚು ನನ್ನ ಪ್ರಕಾರ. ಲಿಡ್ ಹಾಕಿದ ಮೇಲೆ ಸರಿಯಾಗಿ ಫಿಕ್ಸ್ ಆಗಿದೋ ಇಲ್ಲವೋ ಅಂತ ನೋಡಲೇ ಬೇಕು. ಇಲ್ಲಾಂದ್ರೆ ಹಬೆ ತಪ್ಪಿಸಿಕೊಂಡು ಬಿಡುತ್ತದೆ.
ಒಮ್ಮೆ ಗ್ಯಾಸ್ಕೆಟ್ ಸರಿಯಾಗಿ ಕೂತಿದೋ ಇಲ್ಲವೋ ಅಂತ ನೋಡುವ ಟೆಕ್ನಿಕ್ ಗೊತ್ತಾಯಿತು. ಹೇಗೆಂದರೆ ಕುಕ್ಕರನ್ನು ಯಾಕೋ ಅಂಗಡಿಗೆ ತೆಗೆದುಕೊಂಡು ಹೋಗಿದ್ದೆವು. ಗ್ಯಾಸ್ಕೆಟ್ ಹಾಕಿದ ಸರದಾರ್ಜಿ ಲೀಕ್ ಆಗುತ್ತದೋ ಅಂತ ಚೆಕ್ ಮಾಡಿದ್ದು ಹೇಗೆ ಗೊತ್ತೇ?
ವೈಟ್ ಸಿಕ್ಕಿಸುವ ಗೂಟದಲ್ಲಿ ಬಾಯಿಯಿಟ್ಟು ಗಾಳಿ ಊದಿದ. ಗಾಳಿ ಗೂಟದ ಮುಖಾಂತರವೇ ಹೊರಬಂದರೆ ಲೀಕ್ ಇಲ್ಲ ಅಂತ . ಅಯ್ಯಪ್ಪಾ.....ನಾವು ಅನ್ನಕ್ಕಿಟ್ಟು ಹಾಗೆ ಊದಲಿಕ್ಕಾಗುತ್ತದೆಯೇ? ಎಂಜಿಲಾಗುವುದಲ್ಲಾ... ನನಗೆ ಈ ಹಾಕಿನ್ಸ್ ಕುಕ್ಕರ್ ಮೇಲೆ ಪ್ರೀತಿಯೇ ಬೆಳೆಯಲಿಲ್ಲ.ಈಗ ಹಾಕಿನ್ಸ್ ಬಿಟ್ಟು ಬೇರೆ ಬ್ರಾಂಡಿನ ಕುಕ್ಕರುಗಳನ್ನೆ ತೆಗೆದುಕೊಳ್ಳುವುದು. ಅದೇನು ಅಷ್ಟೊಂದು ಕುಕ್ಕರ್ ಗಳು ಬೇಕಾ ಅಂತ ಕೇಳಿದಿರಾ ..ಹೌದು ರೀ ..ಮೂರು, ಐದು ,ಏಳೂವರೆ ಲೀಟರ್ ಕುಕ್ಕರ್ ಮತ್ತೆ ಜಾಸ್ತಿ ಅತಿಥಿಗಳು ಬಂದಾಗ ದೊಡ್ಡ ಗಾತ್ರದ ಕುಕ್ಕರ್ ..
ಕುಕ್ಕರಿನ ತಳದಲ್ಲಿ ನೀರು ಕಡಿಮೆ ಹಾಕಿಯೋ ,ನೀರಿಲ್ಲದೆಯೋ ಬೇಯಿಸಿದಾಗ ಕುಕ್ಕರ್ ಢಮಾರ್ ಆಗುತ್ತದಲ್ಲಾ.. ಅದರ ತಳ ಉಬ್ಬಿ ಹೋಗುತ್ತದೆ..ಅಲ್ಯುಮಿನಿಯಂ ಕುಕ್ಕರ್ಗಳಲ್ಲಿ ಸೆಪರೇಟರ್ಗಳಿಲ್ಲದೆ ನೇರವಾಗಿ ಬೇಯಿಸಿದಾಗ ಉಪ್ಪು ಮಸಾಲೆಗಳು ಅಲ್ಯೂಮಿನಿಯಂ ಜೊತೆ ರಾಸಾಯನಿಕ ಕ್ರಿಯೆ ನಡೆಸಿ ಆಹಾರದೊಂದಿಗೆ ಸೇರಿಕೊಳ್ಳುತ್ತವೆ. ಅಂತಹ ಆಹಾರ ಸೇವಿಸುವುದು ಮೆದುಳಿಗೆ ಹಾನಿಕರವಂತೆ.ಸ್ವಲ್ಪ ಹಳೆಯದಾದಾಗ ಬೇರೆಯೇ ಕುಕ್ಕರ್ ತೆಗೆದುಕೊಳ್ಳಬೇಕು. ಇಲ್ಲವೇ ಸ್ಟೀಲಿನ ಕುಕ್ಕರ್ ನನ್ನು ಉಪಯೋಗಿಸಬೆಕು
ಒತ್ತಡ ತಂತ್ರಜ್ಞಾನದಿಂದ ಬೇಯಿಸುವ ಈ ಪಾತ್ರೆ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡಿದ್ದಂತೂ ನಿಜ.
ವೇಗದ ಬದುಕಿಗೆ ಸರಿಹೊಂದುವಂತೆ ಅನ್ವೇಷಣೆ ಮಾಡಿದ ಅತೀ ಮುಖ್ಯವಾದ ಸಲಕರಣೆಯೇ ಈ ಒತ್ತಡದ ಪಾತ್ರೆ ಅರ್ಥಾತ್ ಕುಕರ್! ಎಲ್ಲಾ ಕ್ಷೇತ್ರಗಳಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ಅನ್ವೇಷಣೆಗಳಾಗುತ್ತಿರುವಾಗ ಅಡಿಗೆಮನೆ ಕ್ಷೇತ್ರದಲ್ಲಿಯೂ ಅದರ ಗಾಳಿ ಬೀಸಿದೆ.ಬೀಸುತ್ತಲೇ ಇದೆ.ಅಡಿಗೆ ಮಾಡಲು ಸೌದೆಒಲೆಯಲ್ಲಿ ಹೊಗೆಗೆ ಕಣ್ಣೀರು ಹಾಕಿ ಅಡಿಗೆ ಮಾಡುತ್ತಿದ್ದ ಗೃಹಿಣಿಯರಿಗೆ ವಿದ್ಯುತ್ ,ಒಲೆ , ಗ್ಯಾಸ್ ಒಲೆ ,ಗೋಬರ್ ಗ್ಯಾಸ್ ಒಲೆಗಳು ದೊರಕಿದಾಗ ಅದೊಂದು ವರವೇ ಆಗಿತ್ತು.
ಕುಕ್ಕರ್ ಕೂಗಿತು ಅಂದರೆ ಅಡಿಗೆ ಆದ ಹಾಗೆ ಲೆಕ್ಕ. "ಅಯ್ಯೋ ಮಾತೇ ಆಯಿತು. ಕುಕ್ಕರ್ ಕೂಗಿಸಬೇಕು" ಅಂತ ಮಾತಿನಲ್ಲಿ ತಲ್ಲೀನರಾದ ಮಹಿಳೆಯರು ಅಡಿಗೆಯ ನೆನಪಾದಾಗ ಎದ್ದು ಹೋಗುವುದು ಸಾಮಾನ್ಯ. ಸೆಪರೇಟರ್ ಇಟ್ಟು ಅಕ್ಕಿ ಬೇಳೆ ತರಕಾರಿ ಎಲ್ಲವನ್ನೂ ಒಟ್ಟಿಗೆ ಬೇಯಿಸಿ ಸಮಯ ಉಳಿತಾಯ ಮಾಡಲು ಅನುಕೂಲ ಈ ಕುಕ್ಕರ್.
ವಿವಿಧ ಗಾತ್ರಗಳಲ್ಲಿ ಹಾಗೂ ಸ್ಟೀಲ್ ಅಥವಾ ಅಲ್ಯೂಮಿನಿಯಂ ಕುಕ್ಕರ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದರಲ್ಲೂ ಹಲವಾರು ಬ್ರಾಂಡ್ಗಳ ಕುಕ್ಕರ್ಗಳಿವೆ.
ಕೇವಲ ಅನ್ನ ಸಂಬಾರು ಮಾಡಲಷ್ಟೇ ಅಲ್ಲ ,ಇದನ್ನು ಪಾಪ್ಕಾರ್ನ್ ಮಾಡಲು , ಕೇಕ್ ಮಾಡಲೂ ಉಪಯೋಗಿಸಬಹುದು.ಹಾಗಾಗಿ ಕುಕ್ಕರ್ ಒಂದು ವಿವಿದೋದ್ಧೇಶದ ಪಾತ್ರೆ.
ಕುಕ್ಕರಿನಲ್ಲಿ ಸೇಫ್ಟಿ ವಾಲ್ವ್ ಮತ್ತು ಗ್ಯಾಸ್ಕೆಟ್ ಅತಿ ಮುಖ್ಯ ಕುಕ್ಕರ್ ತಳದಲ್ಲಿ ನೀರು ಹಾಕದೆ ಒಲೆ ಮೇಲಿಟ್ಟರೆ ಬಿಸಿಯಾಗಿ ಪ್ರೆಷರ್ ಉಂಟಾದಾಗ ಸೇಫ್ಟಿ ವಾಲ್ವ್ ಎಗರುತ್ತದೆ. ಕೆಲವೊಮ್ಮೆ ಕುಕ್ಕರ್ ಮುಚ್ಚಳ ಹಾರುವುದೂ ಉಂಟು. ಒಮ್ಮೆ ಅಡಿಗೆಮನೆಯಿಡೀ ತೊಳೆಯುವ ಕೆಲಸವಾಗಿತ್ತು ನನ್ನ ಎಡವಟ್ಟಿನಿಂದ. ತುಂಬಾ ಅವಸರದಲ್ಲೇ ಇಂತಹ ಅನಾಹುತ ಆಗುವುದೆಂದು ಕೆಲವರಿಗಾದರೂ ಅನುಭವವಾಗಿರಬೇಕು ಅಲ್ಲವೇ.
ವಿದ್ಯುತ್ ಕುಕ್ಕರ್ಗಳೂ ಇವೆ. ಅವು ಬೆಂದ ನಂತರವೂ ಬಿಸಿಯಾಗಿಯೇ ಇರುತ್ತವೆ. ಉದ್ಯೋಗಸ್ಥ ಮಹಿಳೆಯರಿಗೆ ಇದು ಉತ್ತಮ. ಅದರಷ್ಟಕ್ಕೆ ಬೇಯಿಸಿ ತಣ್ಣಗೆ ಅಲ್ಲ, ಬೆಚ್ಚಗೆ ಕುಳಿತುಕೊಂಡಿರುತ್ತವೆ. ಆದರೆ ಸ್ವಲ್ಪ ಅನ್ನ ಸ್ವಲ್ಪ ಗಟ್ಟಿಯಾಗುತ್ತದೆ..
ಇನ್ನೊಂದು ವಿಧದ ಕುಕ್ಕರ್ ಇದೆ ಗೊತ್ತಾ.ಅದು ಒನ್ ಪಾಟ್ ಒನ್ ಶಾಟ್ 'OPOS' ಅಂತ. ಅದನ್ನು ಉಪಯೋಗಿಸುವವರ ಬಳಗಗಳು ಫೇಸ್ಬುಕ್ ನಲ್ಲಿ ಸಾಕಷ್ಟು ಇವೆ. ನನ್ನನ್ನೂ ನನ್ನ ವಿದ್ಯಾರ್ಥಿನಿ ಒಬ್ಬಳು ಒಪೋಸ್ ಸಪೋರ್ಟ್ ಗ್ರೂಪಿಗೆ. ಸೇರಿಸಿದ್ದಳು. ಒಂದೆ ಕುಕ್ಕರಿನಲ್ಲಿ ಒಟ್ಟಿಗೆ ತಯಾರು ಮಾಡುವ ಕುಕ್ಕರ್. ಅದರಲ್ಲಿ ಕಲಿಯಲಿಕ್ಕಿದೆಯಂತೆ. ಅದರಲ್ಲೂ ಪಾಠ ಒಂದು ,ಎರಡು ಅಂತ ಲೆವೆಲ್ಗಳಿವೆ. ಡೆಮೊಗಳಿವೆ. ಒಗ್ಗರಣೆ ಸಾಮಗ್ರಿಯ ಸಹಿತ ಕುಕ್ಕರಿನಲ್ಲಿ ಒಟ್ಟಿಗೆ ಇಟ್ಟು ಕೆಲವೇ ನಿಮಿಷಗಳಲ್ಲಿ ತಯಾರಾಗುವ ಮಾಡುವ ಕ್ರಮ. ಅದಕ್ಕೆ oposed ಮಾಡಿ ಅಂತ ಹೇಳ್ತಾರೆ. ಇಲ್ಲಿ ಒಪೋಸ್ಡ್ ಎಂದರೆ ವಿರೋಧಿಸಿ ಅಂತ ಅಲ್ಲ ಮಾರಾಯ್ರೆ.
'One Pot One Shot' ನ ಪುಟ್ಟ ಹೆಸರದು. ನಾನು ಅದನ್ನು ಕಲಿಯಲು ಹೋಗಲಿಲ್ಲಾ.
ಯಾವುದೇ ಆದರೂ ಕುಕ್ಕರಿಲ್ಲದ ಮನೆಯಿಲ್ಲ..ಅಂದ ಹಾಗೆ ಒಬ್ಬರು ಹೇಳಿದ ಮಾತು ತಮಾಷೆಗೆ ಕಾರಣವಾಗಿತ್ತು. ಅವರು ಇಂಗ್ಲಿಷ್ ಶಬ್ದದ ಅರ್ಥ ತಿಳಿಯದೇ ಹೇಳಿದ್ದು. ಆತ ಹೇಳಿದ್ದು.".ನಮ್ಮ ಮನೆಯಲ್ಲಿ ಕುಕ್ಕರ್ ಇದ್ದಾನೆ "ಅಂತ. ಅಡಿಗೆಯವನನ್ನು ಕುಕ್ಕರ್ ಅಂತ ಹೇಳಿದ್ದರು..
ಹಾಹಾಹಹಹ.ನಾವೆಲ್ಲಾ ಒಂದು ರೀತಿಯಲ್ಲಿ
ಕುಕ್ಕರ್ಗಳೇ ಅಲ್ಲವೇ...
ಇಂದಿನ ಧಾವಂತದ ಯುಗದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಒಂದಲ್ಲಾ ಒಂದು ಕೆಲಸದಲ್ಲಿ ತಲ್ಲೀನರಾಗಿರುತ್ತೇವೆ. ಅದರಲ್ಲೂ ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರ ಪಾಡು ಹೇಳಿತೀರದು. ಮಕ್ಕಳನ್ನು ಶಾಲೆಗೆ ತಯಾರು ಮಾಡುವಾಗ ಒಂದು ಕಣ್ಣು ಗಡಿಯಾರದೆಡೆಗೆ."ಬೇಗ ತಿನ್ನು ,ಬೇಗ ಯುನಿಫಾರ್ಮ್ ಹಾಕಿಕೋ.ಹೋಂವರ್ಕ್ ಪುಸ್ತಕ ಇಟ್ಟುಕೊಂಡೆಯಾ.. ಅಬ್ಬಬ್ಬಾ ಒಂದರ ಹಿಂದೆ ಒಂದು ಪ್ರಶ್ನೆಗಳ ಸುರಿಮಳೆಯೊಂದಿಗೇ ಮಗಳತಲೆ ಬಾಚುತ್ತಲೋ ಟಿಫಿನ್ ಕ್ಯಾರಿಯರ್ ತುಂಬಿಸುತ್ತಲೋ ಗಡಿಬಿಡಿಯಲ್ಲಿ ತಾನೂ ತಯಾರಾಗುವ ಆಧುನಿಕ ಮಹಿಳೆ.
ಅಷ್ಟಾಗುವಾಗ ತಾನು "ಹೋಂ ವರ್ಕ್ ಕಂಪ್ಲೀಟ್ ಮಾಡಿಲ್ಲವೆಂದೋ, ಪ್ರಾಜೆಕ್ಟ್ ಸಬ್ಮಿಟ್ ಮಾಡಬೇಕಾದ ದಿನವೆಂದೋ ಇಲ್ಲವೇ ಟೀಚರ್ ಕಲರ್ ಪೇಪರ್ ತರಬೇಕೆಂದೋ ಹೇಳಿದರೆ ಆ ತಾಯಿಗೆ ಹೇಗಾಗಬೇಡ!
ತಾನು ಹಿಂದಿನ ಟಿಫಿನ್ ಬಾಕ್ಸ್ನಲ್ಲಿ ಹಾಕಿ ಕಳುಹಿಸಿದ ಬಿಸಿ ಬೇಳೆ ಬಾತನ್ನು ತಿನ್ನದೆ ಹಾಗೆ ಬಂದಿದ್ದಾರೆಂದು ಅವರಿಗೆ ಇಷ್ಟದ ತಿಂಡಿಯನ್ನು ಮುತುವರ್ಜಿಯಿಂದ ಮಾಡಿದರೆ ಆ ಮಕ್ಕಳು ತಮ್ಮ ಕರ್ತವ್ಯವನ್ನು ಮಾಡೇ ಇಲ್ಲ. ಗಂಡನಾದರೂ ಮಕ್ಕಳು ಶಾಲಾ ಕೆಲಸದ ಮೇಲ್ತನಿಖೆ ಮಾಡಿಯಾನು ಅಂತ ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಆತ ಬರುವಾಗ ರಾತ್ರಿಯಾಗುತ್ತದೆ. ಅಲ್ಲದೆ ಸುಸ್ತಾಗಿ ಬಂದವನಿಗೆ ತೊಂದರೆ ಕೊಡಲು ಇಷ್ಟವಿಲ್ಲದೆ ತಾನೆ ಎಲ್ಲಾ ನೋಡಿಕೊಳ್ಳುತ್ತಾಳೆ.ಆಕೆಗೆ ಹನ್ನೆರಡು ಕೈಗೊಂಡಿದ್ದಾರೆ ಚೆನ್ನ .
ಆಫೀಸಿನಿಂದ ಬಂದಾಗ ಅಡಿಗೆ ಮನೆ ಕಾಯುತ್ತಿರುತ್ತದೆ. ವಿರಾಮಕ್ಕೆ ಸಮಯವಿಲ್ಲ. ರಾತ್ರಿಯ ಅಡಿಗೆ ಮರುದಿನದ ಉಪಾಹಾರಕ್ಕೆ ತಯಾರಿ .ಇವೆಲ್ಲದರಿಂದ ಅವಳ ಮೆದುಳಿನಲ್ಲಿ ಒತ್ತಡ ಉಂಟಾಗದೇ? ಹಾಗಾಗಿ ಅವಳು ಮೆದುಳನ್ನು ಪ್ರೆಷರ್ ಕುಕ್ಕರಿಗೆ ಹೋಲಿಸಬಹುದಲ್ಲವೇ?
ನಿಜಕ್ಕೂ ಅಡಿಗೆ ಮನೆಗೆ ಹೋದಾಗ ಅಷ್ಟೊಂದು ಪ್ರೆಷರ್ ಇರುತ್ತಲ್ಲವೇ?
✍️ಪರಮೇಶ್ವರಿ ಭಟ್