ತುಳುನಾಡಿನ ದೈವವಾದ ಅರಬ್ ದೇಶದ ಖರ್ಜೂರ ವ್ಯಾಪಾರಿ

ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ

ProfileImg
16 May '24
3 min read


image

ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ  ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರೆ 

 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ  ದೇಶ ,ಜಾತಿ ಧರ್ಮದ ಮಿತಿ ಇಲ್ಲ.

 ಕೆಲವು ಹೊರದೇಶದ ಜನರೂ ಇಲ್ಲಿ ಬಂದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಅರಬ್ಬಿ ಭೂತ ಮತ್ತು ಚೀನೀ ಭೂತಗಳು ಅನ್ಯದೇಶೀಯ ಮೂಲದ ದೈವಗಳಾಗಿವೆ. . ಹೀಗೆ ನಾನಾ ಕಾರಣಗಳಿಂದ ಜೈನರು, ಮುಸ್ಲೀಮರು, ಕ್ರಿಶ್ಚಿಯನ್ನರು, ಅರಬಿಗಳು, ಚೀನಿ ವ್ಯಕ್ತಿಗಳು ಕೂಡ ದೈವತ್ವವನ್ನು ಪಡೆದಿದ್ದಾರೆ 

 ಭೂತಗಳಾದ ನಂತರ ಇವರು ಮೂಲತಃ ಯಾರಾಗಿದ್ದರು ಹೇಳುವ ವಿಚಾರ ಇಲ್ಲಿ ಬರುವುದೇ ಇಲ್ಲ! ಭೂತವಾದ ನಂತರ ಅವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ಭೂತಗಳು ಸಮಾನರು !.ಎಲ್ಲ ಭೂತಗಳಿಗೂ ಒಂದೇ ರೀತಿಯ ಭಕ್ತಿಯ ನೆಲೆಯಲ್ಲಿ ಆರಾಧನೆ ಇದೆ. ಇದು ನಮ್ಮ ತುಳು ಸಂಸ್ಕೃತಿಯ ವೈಶಿಷ್ಟ್ಯ ,


 

ಅರಬ್ ಭೂತ ಚಿತ್ರ ಕೃಪೆ ;ಗಗ್ಗರ ಪದಿನಾಜಿ ಕಟ್ಲೆದದ ಸುತ್ತ


ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ  ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. 

ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ. 

 ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ .ಮಲರಾಯಿ ದೈವದ ಕೋಪಕ್ಕೆ ತುತ್ತಾಗಿ ದೈವತ್ವ ಹೊಂದಿದ ಭೂತ ಅರಬ್ಬಿ ಭೂತ .


 

 ಮಂಗಳೂರಿನ ಉರ್ವ ಚಿಲಿಂಬಿಯ ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಪ್ರಧಾನ ದೈವ ಮಲರಾಯಿಯ ಸೇರಿಗೆಯ ದೈವವಾಗಿ ‘ಅರಬ್ಬಿ ಭೂತ’ ಆರಾಧನೆ ಪಡೆಯುತ್ತಿದೆ . 

ಹೆಸರೇ ಸೂಚಿಸುವಂತೆ ಈ ದೈವತದ ಮೂಲ ಒಬ್ಬ ಅರಬ್ ವ್ಯಕ್ತಿ. ಈತನೊಬ್ಬ ಖರ್ಜೂರ ವ್ಯಾಪಾರಿ. ಒಂದು ದಿನ ಖರ್ಜೂರ ಮಾರಾಟ ಮಾಡಿಕೊಂಡು ಚಿಲಿಂಬಿಯ ಬಳಿಗೆ ಬರುತ್ತಾನೆ. ಅಲ್ಲಿ ಒಂದು ನೀರಿನ ಕಟ್ಟ ಇರುತ್ತದೆ. 

ಅಳಕೆ ಮೇಲ್ಮನೆಗೆ ಸೇರಿದ ಅವಿವಾಹಿತ ಹೆಣ್ಣು ಮಗಳು ತಿಂಗಳ ಸೂತಕ ಸ್ನಾನಕ್ಕೆ ಬಂದವಳು ಕಟ್ಟದ ನೀರಿಗಿಳಿದು ಸ್ನಾನ ಮಾಡುತ್ತಿರುತ್ತಾಳೆ. ಅವಳನ್ನು ನೋಡಿದ ಆ ಅರಬ್ ದೇಶದ ಖರ್ಜೂರ ವ್ಯಾಪಾರಿಯು ಅವಳಲ್ಲಿ ವ್ಯಾಮೋಹಗೊಂಡು ಅವಳ ಮೇಲೆ ಅತ್ಯಾಚಾರಕ್ಕೆ ಮಾಡಲು ಹೋಗುತ್ತಾನೆ. 

 ಆಗ ಅವಳು ತನ್ನ ಕುಲದೈವ ಮಲರಾಯಿ ಧೂಮಾವತಿಯಲ್ಲಿ ಮಾನರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾಳೆ. 

ಆಗ ಮಲಾರಾಯಿ ಧೂಮಾವತಿ ದೈವ ಅವಳನ್ನು ಮಾಯ ಮಾಡಿ ಅವಳ ಮಾನರಕ್ಷಣೆ ಮಾಡಿದ್ದಲ್ಲದೆ ತನ್ನ ಸೇರಿಗೆ ದೈವವಾಗಿಸಿ ಆರಾಧನೆ ಹೊಂದುವಂತೆ ಮಾಡುತ್ತದೆ.ಅವಳು ಬ್ರಾಂದಿ (ಬ್ರಾಹ್ಮಣತಿ)ಭೂತವಾಗಿ ಅಲ್ಲಿ ಆರಾಧನೆ ಪಡೆಯುತ್ತಾಳೆ 
  .ಆ ಆರಬ್ ವ್ಯಾಪಾರಿಯನ್ನು ಶಿಕ್ಷಿಸುವ ಸಲುವಾಗಿ ಆತನನ್ನು ಮಾಯ ಮಾಡುತ್ತದೆ ಮಲರಾಯಿ ದೈವ . ದೈವದ ಆಗ್ರಹಕ್ಕೆ ತುತ್ತಾಗಿ ಮಾಯವಾದರೂ ದೈವದ ಸೇರಿಗೆಗೆ ಸೇರಿ ದೈವತ್ತ್ವ ಪಡೆಯುವುದು ತುಳುನಾಡಿನಲ್ಲಿ ಸಾಮಾನ್ಯವಾದ ವಿಚಾರವಾಗಿದೆ. ಅಂತೆಯೇ ಈ ಅರಬ್ ವ್ಯಾಪಾರಿ ಕೂಡ ದೈವತ್ತ್ವವನ್ನು ಪಡೆದು ಅರಬ್ಬಿ ಭೂತ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ. ಮಲರಾಯಿ ಧೂಮಾವತಿ ದೈವಸ್ಥಾನದಲ್ಲಿ ಅರಬ್ಬಿ ಭೂತದ ಕಲ್ಲು ಇದೆ. ಆ ಬ್ರಾಹ್ಮಣ ಹುಡುಗಿ ಸ್ನಾನ ಮಾಡಿದ ನೀರಿನ ಕಟ್ಟ ಈಗ ಕೂಡ ಅಲ್ಲ್ಲಿದೆ ಅವಳ ನೇವಳದ ಗುರುತು ಎಂಬ ಒಂದು ಗೆರೆ ಅಲ್ಲಿನ ಪಾದೆಕಲ್ಲಿನ ಮೇಲೆ ಇದೆ .ಆ ಅರಬ್ ವ್ಯಾಪಾರಿಯ ಪಾದದ ಗುರುತು ಎಂದು ನಂಬ ಲಾಗುವ ಸಣ್ಣ ಸಣ್ಣ ಗುರುತುಗಳನ್ನ್ನು ಅಲ್ಲಿನ ಸ್ಥಳಿಯರು ತೋರುತ್ತಾರೆ
.              ಬ್ರಾಹ್ಮಣತಿ ಬೂತೋ ಚಿತ್ರ ಕೃಪೆ :ನಮ್ಮ ಸತ್ಯೊಲು

ಅರಬ್ಬಿ ಭೂತಕ್ಕೆ ಒಂದು ಕಲ್ಲು ಹಾಕಿ ಆರಾಧಿಸುತ್ತಾರೆ .ಬ್ರಾಹ್ಮಣತಿ (ಬ್ರಾಂದಿ )ಭೂತಕ್ಕೆ ಒಂದು ಕಟ್ಟೆ  ಇದೆ.ಆ ಕಟ್ಟೆ ಯ ಹತ್ತಿರ  ಈ ಭೂತಕ್ಕೆ ಕೋಲ ನೀಡಿ ಆರಾಧಿಸುತ್ತಾರೆ .ಮಲರಾಯಿ ಧೂಮಾವತಿ ದೈವದ ನೇಮಕ್ಕೆ ಮೊದಲು ಬ್ರಾಹ್ಮಣ ಕನ್ಯೆ(ಬ್ರಾಂದಿ ಭೂತ) ಮತ್ತು ಅರಬ್ಬಿ ಭೂತಕ್ಕೆ ನೇಮ ನೀಡುತ್ತಾರೆ.   ©  ಅರಬ್ಬಿ ಭೂತವನ್ನು ಬಂಧಿಸಿ ಶಿಕ್ಷಿಸಿ ಮಾಯ ಮಾಡಿದ್ದರ ಸೂಚಕವಾಗಿ ಆತನಿಗೊಂದು ಬೆಳ್ಳಿಯ ಸರಿಗೆಯ ಬಂಧನ ಇರುತ್ತದೆ. ಅರಬ್ಬಿ ಭೂತಕ್ಕೆ ಒಂದು ಅರಬರ ಟೊಪ್ಪಿಗೆಯನ್ನು ಹೋಲುವ ಟೊಪ್ಪಿಗೆಯ(ಮುಂಡಾಸು ) ಅಲಂಕಾರ ಇರುತ್ತದೆ

.ವಾಸ್ತವಿಕ ನೆಲೆಯಿಂದ ಆಲೋಚಿಸುವುದಾದರೆ ಆ ಅರಬ್ ವ್ಯಾಪಾರಿಯಿಂದ ತಪ್ಪಿಸಿ ಕೊಳ್ಳುವುದಕ್ಕಾಗಿ ನೀರಿನಲ್ಲಿ ಮುಂದೆ ಮುಂದೆ ಸಾಗಿದ ಆ ಕನ್ಯೆ ದುರಂತವನ್ನಪ್ಪಿರಬಹುದು .ಅವಳನ್ನು ಹಿಂಬಾಲಿಸಿದ ಆ ಅರಬ್ ಖರ್ಜೂರ ವ್ಯಾಪಾರಿ ಕೂಡ ದುರಂತವನ್ನಪ್ಪ್ಪಿರಬಹುದು ಅಥವಾ ಆ ಹುಡುಗಿಯ ದುರಂತಕ್ಕೆ ಕಾರಣನಾದ ಅರಬ್ ವ್ಯಾಪಾರಿಯನ್ನು ಊರ ಜನರು ಸೇರಿ ಶಿಕ್ಷಿಸಿರಬಹುದು  .ಆಗ ಆತ ದುರಂತವನ್ನಪ್ಪಿರಬಹುದು .ಕಾಲಾಂತರದಲ್ಲಿ ಅವರಿಬ್ಬರೂ ದೈವತ್ವವನ್ನು ಪಡೆದು ಆರಾಧಿಸಲ್ಪಟ್ಟಿರಬೇಕು 

  © ಡಾ.ಲಕ್ಷ್ಮೀ ಜಿ ಪ್ರಸಾದ
 


                                                   ಅರಬ್ಬಿ ಭೂತ (ಹಳೆಯ ಫೋಟೋ )
 

 


 

Category:Stories



ProfileImg

Written by Dr Lakshmi G Prasad

Verified