ನೀನು ಇನ್ನು ಚಿಕ್ಕವಳು ಎಂದುಕೊಂಡಿದ್ದೆವು. ಆದರೆ ನಿನ್ನೊಳಗೊಬ್ಬಳು ದೊಡ್ಡ ಸ್ವಾರ್ಥಿ ಇದ್ದಾಳೆ ಎಂಬುದನ್ನು ಗುರುತಿಸಲು ನಾವು ಸೋತಿದ್ದೇವೆ. ಇದು ನಮ್ಮ ತಪ್ಪಲ್ಲ. ನಮ್ಮ ಸೋಲಿಗೆ ನಿನ್ನ ಮೇಲಿನ ನಂಬಿಕೆ ಕಾರಣ.
ನೀನು ಇವತ್ತು ಓಡಿ ಹೋಗಿದ್ದೀಯ. ಹಾಗಂತ ನಾವೇನು ಇಲ್ಲಿ ಕೊರಗುತ್ತಿಲ್ಲ. ಅಪ್ಪ ಅಮ್ಮನಿಗೂ ಸಹ ಸಂಕಟವಿಲ್ಲ. ನಾವು ನಿನ್ನನ್ನು ಹುಡುಕುತ್ತಲೂ ಇಲ್ಲ. ಕಂಪ್ಲೇಂಟ್ ಕೂಡ ಕೊಡುವುದಿಲ್ಲ. ನೀನಿನ್ನು ನಮ್ಮ ಕುಟುಂಬದ ಭಾಗವೇ ಅಲ್ಲ. ಅಕ್ಕಪಕ್ಕದವರು, ಸಂಬಂಧಿಕರು, ಸ್ನೇಹಿತರು ಯಾರು ಏನೆಂದುಕೊಳ್ಳುತ್ತಾರೆ ಎಂಬ ಯಾವ ದಿಗಿಲೂ ನಮ್ಮಲ್ಲಿ ಇಲ್ಲ. ಏಕೆಂದರೆ ನಾವು ತಪ್ಪು ಮಾಡಿಲ್ಲ, ನಾವು ಯಾವ ಜವಾಬ್ದಾರಿಯನ್ನೂ ಮರೆತಿಲ್ಲ. ಆದರೆ ಈ ಪತ್ರ ಬರೆದು ಮುಗಿಯುವಷ್ಟರಲ್ಲೇ ನಿನ್ನನ್ನು ಮರೆತುಬಿಡುತ್ತೇವೆ. ನಿನ್ನ ಯೋಗಕ್ಷೇಮ ಇನ್ಮುಂದೆ ನಮ್ಮ ಜವಾಬ್ದಾರಿಯೇ ಅಲ್ಲ. ನೀನು ನಮ್ಮೊಂದಿಗೆ ಮನೆಯಲ್ಲಿ ಇರಲು ಯೋಗ್ಯಳೂ ಅಲ್ಲ, ಈಗ ಆ ಹಕ್ಕೂ ಕೂಡ ನೀನು ಉಳಿಸಿಕೊಂಡಿಲ್ಲ. ನಮ್ಮನ್ನು ಮತ್ತು ನಮ್ಮ ಪ್ರೀತಿಯನ್ನು ಧಿಕ್ಕರಿಸಿದ್ದೀಯ. ಹಾಗಾಗಿ ವಿಧಿ ನಿನ್ನನ್ನು ಈ ಮನೆಯಿಂದ ಹೊರಗೆ ಹಾಕಿದೆ ಎಂದುಕೊಂಡಿದ್ದೇವೆ. ಒಳ್ಳೆಯದೇ ಆಯಿತು.
ನಿನ್ನನ್ನು ಕರೆದುಕೊಂಡು ಹೋಗಿರುವ ಹುಡುಗ ನಿಜಕ್ಕೂ ದುರಾದೃಷ್ಟವಂತ. ನೀನು ಹುಟ್ಟಿದಾಗಿನಿಂದ ಯಾವುದಕ್ಕೂ ಕಡಿಮೆ ಮಾಡದೆ, ನಿನ್ನನ್ನು ರಾಜಕುಮಾರಿಯಂತೆ ಮೆರೆಸಿದ ಮನೆಯವರ ಪ್ರೀತಿಯನ್ನೇ ತಿಳಿಯದ ನೀನು ಅದ್ಯಾರೋ ನೆನ್ನೆ ಮೊನ್ನೆಯವನನ್ನು ಪ್ರೀತಿಸುತ್ತೀಯ ಎಂದರೆ ನಗು ಬರುತ್ತದೆ. ನಿನ್ನ ಪ್ರೀತಿಯನ್ನು ನೀನು ಮತ್ತು ಅವನೇ ಮೆಚ್ಚಿಕೊಳ್ಳಬೇಕು.
ನಿನ್ನ ಸಾಕಲು, ನಿನ್ನ ಪ್ರತಿಯೊಂದು ಬಯಕೆಯನ್ನು ಈಡೇರಿಸಲು ಅಪ್ಪ ಅಮ್ಮ ಪಟ್ಟಿರುವ ಪಾಡು ಎಂಥದ್ದು ಅನ್ನೋದರ ಬಗ್ಗೆ ನಿನಗೆ ಪರಿವೇ ಇಲ್ಲ. ನಿನ್ನನ್ನು ಹೊತ್ತು ಸಾಕಿದ ಮನೆಯವರನ್ನೇ ಬಿಟ್ಟು ಹೋಗಿಬಿಟ್ಟೆ. ಅಂಥದ್ರಲ್ಲಿ ಇತ್ತೀಚೆಗೆ ಪರಿಚಯ ಆದವನ ಜೊತೆ ಕಷ್ಟ ಸುಖ ಅರ್ಥ ಮಾಡಿಕೊಂಡು ಅವನ ಜೊತೆ ಇರುತ್ತೀಯ ನೀನು ? ಸಾಧ್ಯವಾದರೆ ಇರು.
ನಿನ್ನ ವಿಷಯದಲ್ಲಿ ಅಪ್ಪ ಅಮ್ಮ ಏನೇನೋ ಕನಸುಗಳನ್ನು ಕಟ್ಟಿಕೊಂಡಿದ್ದರು. ನಿನ್ನ ವಿದ್ಯಾಭ್ಯಾಸಕ್ಕಾಗಿ, ನಿನ್ನ ಅಗತ್ಯತೆಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ನಿನಗಾಗಿ ಲಕ್ಷ ಲಕ್ಷ ಸಾಲ ಮಾಡಿ ಚಿನ್ನಾಭರಣ ಮಾಡಿಸಿದ್ದರು. ನಿನ್ನ ಮದುವೆಯ ಬಗ್ಗೆ ಅವರ ಆಕಾಂಕ್ಷೆಗಳು ಮುಗಿಲೆತ್ತರದಲ್ಲಿದ್ದವು. ಇವುಗಳ ಬಗ್ಗೆ ನೀನು ಒಮ್ಮೆಯೂ ಯೋಚಿಸಲೇ ಇಲ್ಲ. ಅವರು ನಿನಗೆ ಕಟ್ಟಿ ಕೊಡಬೇಕು ಎಂದುಕೊಂಡಿದ್ದ ಬದುಕನ್ನು ನೀನೆಂದಿಗೂ ಕಟ್ಟಿಕೊಳ್ಳಲಾರೆ.
ನೂರಾರು ಕಷ್ಟಗಳ ಮಧ್ಯೆಯೂ ಒಂದೇ ಒಂದು ವಿಷಯದಲ್ಲು, ಯಾವತ್ತೂ ನಿನಗೆ ಕಡಿಮೆ ಮಾಡಲಿಲ್ಲ. ನೀನು ಕೇಳಿದ್ದೆಲ್ಲವನ್ನೂ ದಯಪಾಲಿಸುತ್ತಿದ್ದರು. ಇನ್ನು ಮುಂದೆ ನೀನು ಬಯಸಿದ್ದೆಲ್ಲಾ ಸಿಗುವುದಿಲ್ಲ. ನಿನ್ನ ಮದುವೆ ವಿಷಯದಲ್ಲೂ ಅವರು ನಿನ್ನ ಇಷ್ಟದಂತೆಯೇ ನಡೆದುಕೊಳ್ಳುತ್ತಿದ್ದರು. ಆದರೆ ನೀನು ಅಪ್ಪ ಅಮ್ಮನ ಪ್ರೀತಿಯನ್ನು ಅವಮಾನಿಸಿಬಿಟ್ಟೆ. ಅವರ ಆಶೀರ್ವಾದ ಪಡೆಯುವಲ್ಲಿ ವಿಫಲವಾದೆ. ಅಂಥ ಆಶೀರ್ವಾದ ನಿನಗೆ ಈ ಭೂಮಿ ಮೇಲೆ ಇನ್ಯಾರಿಂದಲೂ ಸಿಗುವುದಿಲ್ಲ. ನೀನು ಒಂದೊಳ್ಳೆ ಜೀವನವನ್ನು ಜಾಡಿಸಿ ಒದ್ದುಬಿಟ್ಟೆ. ಹಾಗಾದರೆ ನೀನು ಪಡೆದುಕೊಂಡಿದ್ದೇನು. ಇವೆಲ್ಲಕ್ಕಿಂತ ನಿನ್ನ ಪ್ರೇಮ ದೊಡ್ಡದು ಎಂದು ಭಾವಿಸಿದ್ದೀಯ ? ಹಾಗಾದರೆ ನಿನ್ನಂತಹ ದಡ್ಡಿ ಬೇರಾರು ಇಲ್ಲ.
ಪ್ರೀತಿಯನ್ನು ಉಳಿಸಿಕೊಳ್ಳಲು ಪ್ರೇಮಿಯ ಜೊತೆ ಓಡಿ ಹೋಗುವುದೇ ದಾರಿ ಎಂದಾದರೆ, ಮನೆಯವರ ಪ್ರೀತಿಯನ್ನು ಉಳಿಸಿಕೊಳ್ಳುವ ದಾರಿ ಯಾವುದು ? ಅದನ್ನು ಉಳಿಸಿಕೊಳ್ಳುವುದು ಬೇಡವೇ ? ಪ್ರೇಮಿಯ ಪ್ರೀತಿಯನ್ನು ಪಡೆಯಲು ಹೆತ್ತವರ ಪ್ರೀತಿಯನ್ನು ಬಿಡುವುದು ಪ್ರೀತಿಗೆ ಕೊಡುವ ಗೌರವವೇ ? ಇದ್ಯಾವ ರೀತಿಯ ಪ್ರೀತಿ. ಅಂಥ ಪ್ರೀತಿಗೆ ಹೆಸರೂ ಇಲ್ಲ, ಅರ್ಥವೂ ಇಲ್ಲ. ಅದು ಶಾಶ್ವತವೂ ಅಲ್ಲ. ಹೇಳಲು ಇನ್ನೇನು ಇಲ್ಲ ಅಷ್ಟೇ.
ಈ ಪತ್ರವನ್ನು ಆಕೆಯ ಪ್ರಿಯಕರ ಓದಿದ ನಂತರ ಆಕೆಗೆ ಹೇಳಿದ್ದು, ಇಂಥಾ ತಂದೆ ತಾಯಿಯಿಂದ ನಿನ್ನನ್ನು ಬೇರ್ಪಡಿಸಿದರೆ ನನಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಅವರಂಥ ಪ್ರೀತಿಯನ್ನು ನಿನಗೆ ನಾ ಕೊಡಲಾರೆ. ನಾನು ನಿನ್ನನ್ನು ಕರೆದುಕೊಂಡು ಬಂದಿರುವ ಬಗ್ಗೆ ನನಗೆ ಪಾಪಪ್ರಜ್ಞೆ ಶುರುವಾಗಿದೆ. ಬೇರೆಯವರಿಂದ ಏನೋ ಕಸಿದುಕೊಂಡು ಬಂದಿರುವಂತೆ ಭಾಸವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಅಣ್ಣನ ಈ ಪತ್ರವನ್ನು ಬರೆಯುವ ಸ್ಥಿತಿ ನನಗೆ ಬಂದಿರುತ್ತಿದ್ದರೆ ಹೇಗಿರುತ್ತಿತ್ತು ಎಂಬುದನ್ನು ನನ್ನಿಂದ ಊಹಿಸಲು ಸಹ ಆಗುತ್ತಿಲ್ಲ. ಈಗ ನೀನು ನಿನ್ನ ಹೆತ್ತವರ ಬಳಿ ಹೋಗು. ಸಾಧ್ಯವಾದರೆ ಅವರನ್ನು ಒಪ್ಪಿಸು. ಅವರ ಒಪ್ಪಿಗೆ ಇದ್ದರೆ ಮದುವೆಯಾಗೋಣ ಎಂದು ಹೇಳಿ ಬಳಿಕ ತಾನೇ ಆಕೆಯನ್ನು ಆಕೆಯ ಮನೆಗೆ ಬಿಡುತ್ತಾನೆ.
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ
0 Followers
0 Following