ಅಣ್ಣಾ, ಪದ್ಮಾ ಡಿವೋರ್ಸ್ ಕೇಳ್ತಾ ಇದ್ದಾಳೆ ಕಣೋ...

ಕಥೆ..

ProfileImg
15 Mar '24
4 min read


image

ಪಾತ್ರ ಪರಿಚಯ : 
ಅಣ್ಣ- ಅತ್ತಿಗೆ : ಪ್ರಕಾಶ್ , ಆಶಾ
ತಮ್ಮ-ಅವನ ಹೆಂಡತಿ : ಅರುಣ್ , ಪದ್ಮಾ
ಆಶಾಳ ಗೆಳತಿ : ಸೀಮಾ
 

"ಹೋ ಆಶಾ... ಹೇಗಿದ್ದೀ? ದೇವಸ್ಥಾನಕ್ಕೆ ಬಂದಿದ್ದಾ?" ಎಂದು ನಗುಮೊಗದಿಂದ ಸೀಮಾ ಮಾತನಾಡಿಸಿದಳು.

"ಹೌದು ಕಣೆ, ದೇವಸ್ಥಾನಕ್ಕೆ ಬಂದೆ, ನವರಾತ್ರಿ ಅಲ್ವಾ... ಅದಕ್ಕೆ." ಎಂದಳು ಆಶಾ.

ಇಬ್ಬರೂ ಸುತ್ತು ಹಾಕಿ ದೇವಳದ ಹೊರಭಾಗದಲ್ಲಿ ಇರುವ ಸುಂದರ ಗಾರ್ಡನ್ ನಲ್ಲಿ ಕುಳಿತುಕೊಂಡರು. ಪ್ರಸಾದ ತಿನ್ನುತ್ತ ಮಾತಿಗಿಳಿದರು.

ಆಶಾಳ ಮುಖ ಸಪ್ಪೆಯಾಗಿತ್ತು. ಏನೇ ಆಯ್ತು?? ಯಾಕೆ? ಚಿಂತಿಸ್ತಾ ಇದ್ದೀಯಾ? ಎಂದು ಸೀಮಾ‌ ಕೇಳಿದಳು.

"ಏನಿಲ್ಲ ಕಣೆ. ಅದೇ ನಮ್ಮ ಗಂಡನ ತಮ್ಮ ಏಕಾಏಕಿ ಶ್ರೀಮಂತರಾಗಿ ಬಿಟ್ಟಿದ್ದಾರೆ ಕಣೆ." ಕಾರು ಅಪಾರ್ಟ್ಮೆಂಟ್ ಖರೀದಿಸಿದರು. ನಮಗೆ ವಿಷಯವೇ ಗೊತ್ತೇ ಇಲ್ಲ. ಎಂದಳು.

ಸೀಮಾ : ಹೌದಾ. ಅಣ್ಣನಿಗೆ ಹೇಳದೇ ಇರ್ತಾರೇನೇ? ನಿನಗೆ ಗೊತ್ತಾಗಲಿಲ್ಲ ಅನ್ನಿಸುತ್ತದೆ. ಎಂದಳು.

ಆಶಾ : ಇಲ್ಲ ಕಣೆ. ನನ್ನ ಗಂಡನಿಗೂ ಹೇಳಲಿಲ್ಲ. ಮನೆ ಬದಲಾಯಿಸ್ತೇವೆ ಅಂದರು. ಹೊಸ ಮನೆಗೆ ಹೋಗಿದ್ದೇವೆ ಎಂದು. ಒಂದು ಹಿರಿಯ, ಅಣ್ಣ ಎನ್ನುವ ಗೌರವವೇ ಇಲ್ಲ ಕಣೆ. ಹಾಲು ಉಕ್ಕಿಸಲು ಕೂಡ ಕರೆದಿಲ್ಲ. ಅವರೇ ಗಂಡ ಹೆಂಡತಿ ಮನೆ ಹುಡುಕಿದ್ದು. ಶಿಫ್ಟ್ ಆದದ್ದು.

ಮತ್ತೆ ಕಾರು??

ಅತ್ತೆ ಫೋನ್ ಮಾಡಿ ಮಳ್ಳಿ ತರಹ ಹೇಳ್ತಾರೆ. ಕಾರು ಇಡಲು ಜಾಗ ಬೇಕಲ್ವಾ.. ಅದಕ್ಕೆ ದೊಡ್ಡ ಮನೆ ತಗೊಂಡ್ರು ಅಂತ. ಅಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಇದೆಯಂತೆ ಅದಕ್ಕೆ. ಕಾರು ತಗೊಂಡಿದ್ದೂ ಗೊತ್ತೇ ಇಲ್ಲ‌. ಕಣೆ‌‌ ಎಂದು ಆಶಾ ಗೋಳೋ ಎಂದು ಅಳತೊಡಗಿದಳು.
 

"ನೀನು ಏಕೆ ಅಳೋದು. ಅಯ್ಯೋ?? ನಿನಗೇನಾಗಿದೆ ಈಗ. ನಿನಗೆ ಏನು ಕಡಿಮೆಯಾಗಿದೆ ಹೇಳು. ಅಮ್ಮ ಅಮ್ಮಾ... ಅಂತ‌ ಕಾಲಿಗೆ ಸುತ್ತಿಕೊಂಡಿರೋ ಮುದ್ದಾದ ಮಕ್ಕಳು. ಪ್ರತಿಯೊಂದಕ್ಕೂ ನಿನ್ನನ್ನೆ ಅವಲಂಬಿಸಿರೋ ಗಂಡ. ಇನ್ನೇನು ಬೇಕೇ?? ಪ್ರೀತಿಸೋ ಜೀವಗಳು ಜೊತೆಗಿರುವಾಗ ಆ ಆಸ್ತಿ ಮನೆಗೆ, ನಗ ನಾಣ್ಯಕ್ಕೆ ಏಕೆ‌ ಹಂಬಲಿಸುವೆ?? ಸೀಮಾ ಕೇಳಿದಳು.

ಆಶಾ : ಹೌದು. ಯಾವಾಗ್ ನೋಡಿದ್ರೂ ಅಮ್ಮಾ..ಅಮ್ಮಾ.. ಅಂತ ಸುತ್ತತಾನೇ ಇರ್ತಾವೆ. ನನಗೂ ಒಂದು ಜಾಬ್ ಅಂತ ಇದ್ದಿದ್ರೆ... ಹೀಗೆ ಇರ್ತಿತ್ತಾ... ಅವರಿಬ್ಬರೂ ದುಡಿಯೋರು? ಮನೆ ಕಾರು ಅಂತ ಎಲ್ಲ ಮಾಡಿಸಿಕೊಂಡರು. ನನಗೆ ಏನೂ ಇಲ್ಲ. ಒಬ್ಬರೇ ದುಡಿದರೆ  ಇಷ್ಟೆಲ್ಲ ಮಾಡೋಕೆ ಆಗುತ್ತ ಅಂತ ಅತ್ತೆ ಪದೇಪದೇ ಚುಚ್ಚಿ ಮಾತನಾಡ್ತಾರೆ‌.ಅತ್ತೆಗೆ ಬಾರಿ ಖುಷಿ. ಸಣ್ಣವ ಬಲುಜಾಣ ಅಂತ ಯಾವಾಗಲೂ ಹೇಳೋದು. ನನ್ನ ಗಂಡನೇ ಪೆದ್ದನ ಹಾಗೆ ಮಾಡ್ತಾರೆ.  ತಮ್ಮನಿಗೆ ಓದಿಸಿ ಮದುವೆಗೂ ಸ್ವಲ್ಪ ಹಣ ಕೊಟ್ಟು ಈ ದೋಣಿ ನಡೆಸುವವನ ತರಹ. ಆ ತಮ್ಮನನ್ನು ದಡ ಸೇರಿಸೋಕೆ ಎಷ್ಟು ಕಷ್ಟ ಪಟ್ಟರು. ತಂದೆಯ್ಲದ ಅವನಿಗೆ ತಂದೆ ಸ್ಥಾನದಲ್ಲಿ ನಿಂತು ಎಲ್ಲ ಸೇವೆ ಮಾಡಿದರು. ಅವನು ದಡ ಸೇರಿದ ಮೇಲೇ ಈ ತೆಪ್ಪದವನು ಯಾಕೆ ಬೇಕು ಅಂತ ಕಾಲಿಂದ ತುಳಿದು ಮೇಲೆ‌ಮೇಲೆ ಏರಿದ. ಅಂತ ಆಶಾ ಮತ್ತೆ ಅಳಲು ಶುರುಮಾಡಿದಳು.ಸೀಮಾ : ಅಯ್ಯೋ!! ಪೆದ್ದಿ. ಜೀವನಕ್ಕೆ ನೆಮ್ಮದಿ ಮುಖ್ಯ ಕಣೆ.ಅವರಿವರ ನೋಡಿ ಹೋಲಿಕೆಮಾಡಿಕೊಂಡು ಬದುಕಬಾರದು.  ಸ್ವಂತ ಮನೆ ಕಾರು ಒಂದಷ್ಟು ಒಡವೆ ಸೈಟ್ ತಗೊಂಡರೆ ಮಾತ್ರ ಶ್ರೀಮಂತರಾ?? ಅಷ್ಟಕ್ಕೂ ಅವರೆಲ್ಲ ಖುಷಿಯಿಂದ ಇದ್ದಾರೆ ಅಂತ ನೀನು ಹೇಗೆ ಹೇಳುವೆ?ಒಂದು ನಾಣ್ಯಕ್ಕೆ ಎರಡು ಮುಖವಿದೆ. ಆಚೆಕಡೆ ಏನಿದೆ, ಅವರ ಜೀವನ ಹೇಗೆ ನಡಿತಾ ಇದೆ ಅಂತ ಗೊತ್ತಾ ನಿನಗೆ. ಎದುರು ನೋಡಲು ಪಳಪಳ ಹೊಳೆಯುವ ಚಿನ್ನದಂತೆ. ಒಳಗೆ ಕೊಳೆತ ಬದನೆಕಾಯಿ ತರಹ ಆಗಿರುತ್ತದೆ. ಪ್ರತಿ ತಿಂಗಳು ಇ.ಎಮ್.ಐ ಕಟ್ಟಲೇಬೇಕು. ಗಂಡ ಹೆಂಡತಿ ಇಬ್ಬರೂ ದುಡಿದರೆ ಮಾತ್ರ ಜೀವನ ನಡೆಯುವುದು. ಖರ್ಚು ಜಾಸ್ತಿ. ಹಣದ ಸಮಸ್ಯೆ ಚಿಂತೆ ಕಾಡುವುದು. ಯಾವಾಗ ನೋಡಿದರೂ ಹಣದ ವಿಷಯವಾಗಿ ಜಗಳ ನಡಿತಾ ಇರುತ್ತದೆ. ನನ್ನ ಹಣ, ನನ್ನ ದುಡಿಮೆ ಎಂದು.ನಿನ್ನ ವಾರಗಿತ್ತಿ (ಎರಡನೇ ಸೊಸೆ) ಒಮ್ಮೆಯಾದರು ಅತ್ತೇನಾ ಚೆನ್ನಾಗಿ ಮಾತನಾಡಿಸಿದ್ದಾಳಾ?? ಹೋಗ್ಲಿ ನೀನು ,ನಿನ್ನ ಗಂಡ ನೋಡಿಕೊಂಡಷ್ಟು ಅವನು ನೋಡಿದ್ದಾನಾ?? ಕೇವಲ ಅವನು ಅವನ ಜೀವನಾ ಅಂತ ನೋಡಿಕೊಂಡರೆ ಆಯ್ತಾ?? ಹೋಗಲಿ. ನಿಮ್ಮನ್ನಾದರು ಮಾತನಾಡಿಸ್ತಾರಾ? ಅವರ ಮನೆಗೆ ಯಾರು ಹೋಗ್ತಾರೆ ಹೇಳು? ಯಾರನ್ನಾದರೂ ಕರೆದು ಊಟ ಹಾಕುತ್ತಾರಾ ಹೇಳು? ಅಷ್ಟು ದೊಡ್ಡ ಮನೇಲಿ ಇಬ್ಬರೇ ಇರೋದು. ಯಾರೂ ಬೇಡ. ಒಂದು ಖುಷಿಯನ್ನು ಖುಷಿಯಿಂದ ಹಂಚಿಕೊಳ್ಳುವ ಮನಸ್ಸಿನಲ್ಲದವರು. ಅದೊಂದು ಜೀವನವಾ? ಒಬ್ಬರ ಶ್ರೀಮಂತಿಕೆ ನೋಡಿ ಮತ್ಸರ ಪಡಬಾರದು. ಹಾಗೆಯೇ ಶ್ರೀಮಂತಿಕೆಯ ಸೋಗಿಗೆ ಬಿದ್ದು ಸಂಬಂಧಗಳನ್ನು ಕಡಿದುಕೊಳ್ಳಬಾರದು.ಆಶಾ : ಸಣ್ಣ ಮಗ ಅಂತ ಅವನಿಗೆ ಯಾವ ಜವಾಬ್ದಾರಿ ಕೊಡದೇ ಹೋದರು. ಎಲ್ಲ ನನ್ನ ಗಂಡನ ತಲೆಗೆ ಕಟ್ಟಿದರು ನಾವು ಮಾತ್ರ ಇದ್ದಲ್ಲೇ ಇರಬೇಕು. ಅಂತ ಅಳತೊಡಗಿದಳು.ನೀನು ಮೊದಲು ಅಳುವುದನ್ನು ನಿಲ್ಲಿಸು. ಅವರ ಜೀವನ ಅವರಿಗೆ. ಅದು ಎಷ್ಟೋ ಮನೆಯಲ್ಲಿ ಹಾಗೆಯೇ. ಮನೆಯ ಹಿರಿಯಣ್ಣ ಅತ್ತಿಗೆ ಸವೆದಷ್ಟು ತ್ಯಾಗ ಮಾಡುವಷ್ಟು ಉಳಿದ ಮಕ್ಕಳ ಮೇಲೆ ಜವಾಬ್ದಾರಿ ಬೀಳುವುದಿಲ್ಲ.

ಆದರೆ ನಿಮಗೂ ಒಂದು ಕಾಲ ಬರುತ್ತದೆ. ಎಲ್ಲವೂ ಈಗಲೇ ಆಗಬೇಕು ಅಂದರೆ ಆಗುವುದಿಲ್ಲ. ಸಮಯ ಕೊಡು. ಗಂಡನ ತಲೆ ತಿನ್ನಬೇಡ. ಅವರಿಗೆ ನೆಮ್ಮದಿಯಲ್ಲಿ ಇರಲು ಬಿಡು. ನಿನಗೆ ಏನು ಬೇಕು ನೀವು ಹೇಗೆ ಬದುಕಬೇಕು? ಎಂಬುದನ್ನು ಅವರಿಗೂ ಹೇಳು. ಎಲ್ಲವೂ ಸರಿಹೋಗುತ್ತದೆ ಎಂದು ಸಮಾಧಾನ ಮಾಡಿದಳು.

ಆಶಾಳಿಗೆ ಸಮಾಧಾನವಾಗಲಿಲ್ಲ. ಆದರೂ ಕಣ್ಣೊರೆಸಿಕೊಂಡು ಸರಿ ಬಿಡು. ಟೈಮ್ ಆಯ್ತು. ಮನೆಗೆ ಹೋಗುವಾ..‌ಎಂದು ಎದ್ದು ನಿಂತಳು.

ಸೀಮಾ ಕೂಡ ಸರಿ‌ಹೋಗೋಣ ಬಾ... ಎಂದು  ದನಿಗೂಡಿಸಿದಳು.

ಒಮ್ಮೆ ಹೀಗೆ ಆಶಾ ಫ್ಯಾಮಿಲಿ ಬೇಸಿಗೆ ರಜೆಗೆ ಊರಿಗೆ ಹೋದಾಗ ಅವಳ ಗಂಡನ ಜೊತೆ ಅತ್ತೆ ಏನೋ ಪಿಸುಪಿಸು ಮಾತನಾಡುತ್ತ ಇದ್ದರು. ಆಶಾ ಬಂದ‌ಕೂಡಲೇ ಮಾತು ತಿರುಗಿಸಿ ಬಿಟ್ಟರು
‌ಸಣ್ಣ ಅನುಮಾನ ಬಂದಿತು. ಆದರೂ ತೋರಗೊಡದೆ ಅವಳ ಕೆಲಸ ನೋಡಿಕೊಂಡು ಹೋದಳು.

ಸಂಜೆ ವಾಕಿಂಗ್ ಗೆ ಗಂಡನ ಜೊತೆ ಅಂಗಡಿಗೆ ಹೋಗುವ ಎಂದು ಕರೆದಳು. ವಾಕಿಂಗ್ ಕೂಡ ಆಗುತ್ತೆ. ಅಂಗಡಿಗೂ ಹೋಗಬಹುದು ಎಂದಳು. ಮೊಬೈಲ್ ನಲ್ಲೇ ಬಿದ್ದುಕೊಂಡಿದ್ದ ಅವನು ಎದ್ದು ಹೊರಟ.

ಆಶಾ ಕೇಳಿದಳು : ಅತ್ತೆ ಏನು ಮಾತನಾಡ್ತ ಇದ್ದರು? ಎಂದು.
ಮೊದಲು ಏನು ಹೇಳಲಿಲ್ಲ.
ಹೋ ನನಗೆ ಗೊತ್ತಾಗಬಾರದಾ? ನೀವುನೀವೇ ಮಾತನಾಡಿಕೊಳ್ಳೋದಾ? ಎಂದಳು.

ಹಾಗೇನಿಲ್ಲ. ಅದೇ ನಮ್ಮ ತಮ್ಮನ ಕತೆ. 
ಅದೇ ಗಂಡ ಹೆಂಡತಿ ಇಬ್ಬರೂ ಸೇರಿ ಅಪಾರ್ಟಮೆಂಟ್ ಕಾರು ಖರೀದಿಸಿದರಲ್ಲ. ಈಗ ಸಾಲದ ಹೊರೆ ಹೆಚ್ಚಾಗಿದೆ ಅಂತೆ. ಕಟ್ಟಲು ಕಷ್ಟವಾಗ್ತಿದೆ. ಮತ್ತೆ ಲೋನ್ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅಣ್ಣನ ಕೇಳಿ ಹತ್ತು ಲಕ್ಷ ಸಾಲ‌ ಕೊಡಿಸ್ತೀಯಾ ಅಂತ ಕೇಳಿದ್ದಾನಂತೆ....

ಹೋ. ಅಣ್ಣನ ಹತ್ರವೇ ಕೇಳಬಹುದಲ್ವಾ.. ಕಾರು ಬಂಗಲೆ ಮಾಡೋವಾಗ ನಮ್ಮ‌ ನೆನಪಾಗಿತ್ತಾ.... ಒಂದು ಕರ್ಟೆಸಿಗಾದ್ರು ಚರ್ಚಿಸುವುದು ಖುಷಿಯ ವಿಚಾರ ಹಂಚಿಕೊಳ್ಳೋದು ಏನಾದರು ಮಾಡಿದ್ರಾ???

ಯಾವ ಮುಖದಲ್ಲಿ  ಸಾಲ ಕೇಳ್ತಾರಂತೆ.. ಎಂದು ಸಿಟ್ಟಾದಳು.

ಗಂಡ : ಅಯ್ಯೋ ನೀನ್ಯಾಕೆ ಸಿಟ್ಟಾಗ್ತಿ. ನಮ್ಮ ಹತ್ರ ಹತ್ತು ಲಕ್ಷ ಹಣವಿದೆಯಾ.. ಕ್ಯಾಶ್ ಕೊಡೋಕೆ.?

ಅವನು ಕೇಳಿದ ಕೂಡಲೆ ಕೊಡೋಕೆ? ಆಗುತ್ತಾ.. ನಾವು ಯೋಚಿಸಬೇಕಲ್ವಾ. ಸುಮ್ಮನಿರು. ಮಾಡಿದ್ದುಣ್ಣೋ ಮಹರಾಯ. ಎಂದ.

ಆರು ತಿಂಗಳ ನಂತರ
**************
ಹಲೋ ಅತ್ತಿಗೆ, ಅಣ್ಣ ಇಲ್ವಾ...

ಇದ್ದಾರೆ. ಹೊರಗೆ‌ಕುಳಿತಿದ್ದಾರೆ ? ಯಾಕೆ? ಏನಾಯ್ತು?

ಅವನ ಫೋನ್ ಗೆ ಕರೆ ಮಾಡಿದೆ. ರಿಸೀವ್ ಮಾಡ್ತಾ ಇಲ್ಲ...

ಹೌದಾ. ಇರು ಕೊಡ್ತೇನೆ.

ಅರುಣ್ ಕಾಲ್‌ ಮಾಡಿದ್ನಂತೆ. ನಿಮ್ಮ ಮೊಬೈಲ್ ಎಲ್ಲಿ?

ಹೋ. ಅದು ಸ್ವಿಚ್ ಆಫ್ ಆಗಿದೆ. ಅದಕ್ಕೆ.

ಸರಿ ಮಾತನಾಡಿ...

ಅಣ್ಣಾ, ಪದ್ಮ ಡಿವೋರ್ಸ್ ಕೇಳ್ತಾ ಇದ್ದಾಳೆ ಕಣೋ... ಏನೋ‌ ಮಾಡೋದು?

ವಾಟ್... ಏನಾಯ್ತು? ಯಾಕೆ?

ಅವಳಿಗೆ ಈಗ ನಾನು ಬೇಡವಾದೆ. ಈ ಅಪಾರ್ಟಮೆಂಟ್ ಅವಳ ಹೆಸರಿನಲ್ಲಿದೆ. ಅಷ್ಟು ಧೈರ್ಯ ಹೇಗೆ ಬಂತು ಅಂತ ಕೇಳಿದರೆ ಏನು ಹೇಳಿರಲಿಲ್ಲ.
ಈಗೀಗ ಮನೆಯಲ್ಲಿ ಪ್ರತಿದಿನ ಜಗಳ. ಇದು ನನ್ನ ಮನೆ ನಿಮಗೆ ಇರಲು ಜಾಗ ಇಲ್ಲ. ಹೊರಟು ಹೋಗಿ ಅಂತ ಹೇಳ್ತಾಳೆ.

ಅಯ್ಯೋ ಶಿವನೇ.. ಏನಾಯ್ತಂತೆ ಅವಳಿಗೆ.??

ತಮ್ಮ : ಅವಳ ಬಾಸ್, ಯಾವಾಗಲೂ ಮನೆಗೆ ಬರ್ತಾ ಇರ್ತಾನೆ. ಅವರಿಬ್ಬರ ನಡುವೆ ಅಫೇರ್ ನಡಿತಾ ಇದೆ. ಅವನು ಹಣ ಹಾಕಿದ್ದಾನಂತೆ. ಅದಕ್ಕೆ ನನಗೆ ಜಾಗ ಇಲ್ಲ ಅಂತ ಇದ್ದಾಳೆ. ಅವನೇ ಹೇಳಿರೋದು. 
ಮನೆಯಿಂದ ಹೊರಹಾಕು ಹಾಕು. ಅಂತ.
ಛೀ... ನನ್ನ ಹೆಂಡತಿ ಹೀಗೆ ಮಾಡ್ತಾಳೆ ಅಂತ ಯೋಚಿಸಿಯೇ ಇರಲಿಲ್ಲ‌ ಕಣೋ... ಏಕಾಏಕಿ‌ ಶ್ರೀಮಂತಿಕೆ ಬರುವುದಾದರೂ ಹೇಗೆ? 
ಮೊದಲೆಲ್ಲ ಏನೂ ಗೊತ್ತೇ ಆಗಲಿಲ್ಲ. ಈಗ ಡಿವೋರ್ಸ್ ಕೇಳ್ತಾ ಇದ್ದಾಳೆ.

ಅಣ್ಣ ಪ್ರಕಾಶ್  : ಹ್ಮ.. ಅಮ್ಮನಿಗೆ ಹೇಳಿದ್ಯಾ??

ತಮ್ಮ : ಇಲ್ಲ ಕಣೋ.. ಅವರಿಗೆ ಇದನ್ನೆಲ್ಲ ಕೇಳಿ ಸಹಿಸಿಕೊಳ್ಳಲು ಆಗೋದಿಲ್ಲ.

ಅಣ್ಣ :  ಅದೂ ನಿಜ. ನಿನ್ನ ಜೀವನ ನಿನ್ನ ನಿರ್ಧಾರ‌ ಕಣೋ. ನಾನೇನು ಹೇಳಲು ಸಾಧ್ಯ. ನೀನೇ ಒಂದು ನಿರ್ಧಾರಕ್ಕೆ ಬಾ.. ಫೋನ್ ಕತ್ತರಿಸಿಬಿಟ್ಟ.

- ಸಿಂಧು ಭಾರ್ಗವ ಬೆಂಗಳೂರು

 

Category:Relationships



ProfileImg

Written by Tulasi Naveen

Freelance writer