Do you have a passion for writing?Join Ayra as a Writertoday and start earning.

ಅಮ್ಮ ಎಂಬ ಸಂಕಲನವೂ..ಅಮ್ಮ ಎಂಬ ವ್ಯವಕಲನವೂ..

ಅಮ್ಮ ಹೇಳುವುದಲ್ಲಾ ಅವಳಿಗಲ್ಲ.

ProfileImg
24 Mar '24
4 min read


image

                    ಅಮ್ಮ ಎಂಬ ಸಂಕಲನವೂ…ಅಮ್ಮ ಎಂಬ ವ್ಯವಕಲನವೂ..

 ಅಮ್ಮ ಹೇಳುವುದಲ್ಲಾ ಅವಳಿಗಲ್ಲ. 

ಹಸಿರು ಬಳೆ,ಮುಡಿ ತುಂಬಾ ಮಲ್ಲಿಗೆ, ನವಮಾಸ, ಮನೆಗೆ ಮಗು ಬರುವ ಆತುರ. ಜೀವದೊಳಗೊಂದು ಜೀವದ ಕಲ್ಪನೆಯೇ ಒಂದು ಅಚ್ಚರಿ. 

ಜಗತ್ತಿನಲ್ಲಿ ತುಂಬಾ ಸುಲುಭವಾದ ಹೋಲಿಕೆಯಿಲ್ದದ ಒಂದು  ಸುಂದರ ಪದವೆಂದರೆ ಅದು ಅಮ್ಮ. ಅಮ್ಮ ಎಂದರೆ ಕುಟುಂಬವನ್ನು ಕೂಡಿಡುವ ಸಂಕಲನ. ಕುಟುಂಬಕ್ಕಾಗಿ ತನ್ನತನವನ್ನು ಕಳೆದುಕೊಳ್ಳುವ ವ್ಯವಕಲನ.ಮಕ್ಕಳನ್ನು ಹುಟ್ಟಿಸಿದ ಮಾತ್ರಕ್ಕೆ  ಎಲ್ಲರೂ ತಾಯಿಯಾಗುವುದಿಲ್ಲ.ಅದೊಂದು ತುಂಬಾ ತೂಕಬದ್ಧ ಪದ. ತಾಯಿಯೆಂದರೆ ಸಹನೆ, ತಾಯಿಯೆಂದರೆ ಜವಬ್ಧಾರಿ, ತಾಯಿಯೆಂದರೆ ತ್ಯಾಗ. ಜೊತೆ ನಿಲ್ಲುವ ಮನೋಭಾವ,  ನೆಮ್ಮದಿಯ ನೆಲೆಯೆಂದರೆ ಅದು ತಾಯಿಯ ಮಡಿಲು ಮಾತ್ರ. ತಾಯಿಯ ತೊಡೆಯ ಮೇಲೆ ತಲೆ ಇಟ್ಟರೆ ಸಾಕು ಎಲ್ಲಾ ಮರೆತು ನೆಮ್ಮದಿ ಆವರಿಸಿ ಬಿಡುತ್ತದೆ. 

ಅಮ್ಮನಾಗುವ ಮೊದಲೇ ಮಾನಸಿಕ ತಯಾರಿ  ಮಾಡಿಕೊಳ್ಳ ಬೇಕಾಗುತ್ತದೆ. ಉತ್ತಮ ಆಹಾರ , ಆಹಾರದಲ್ಲಿ ಇತಿಮಿತಿ. ರಕ್ತದ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಕೂರುವಾಗ ,ನಿಲ್ಲುವಾಗ, ನಡೆಯುವಾಗ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಅನಿವಾರ್ಯ. ಎಲ್ಲವನ್ನೂ ಯೋಚನೆ ಮಾಡಿಕೊಂಡೇ  ಕಾ ರ್ಯೋನ್ಮುಖವಾಗಬೇಕಾಗುತ್ತದೆ. ಸ್ವಲ್ಪ ವ್ಯತ್ಯಾಸವಾದರೂ ಮಗುವಿನ ಜೀವಕ್ಕೇ ಅಪಾಯವಾಗುವ ಸಾದ್ಯತೆಗಳೇ  ಹೆಚ್ಚು. ಒಂಬತ್ತು ತಿಂಗಳು ಅವಳ ಮನಸ್ಸಿನ ಏರಿಳಿತಗಳು ಎಷ್ಟಿರುತ್ತದೆ ಎಂದು ತಾಯಿಯಾದವಳಿಗಷ್ಟೇ ಕಲ್ಪಿಸಿಕೊಳ್ಳಲು ಸಾಧ್ಯ.

ಅಮ್ಮನಾದ ನಂತರ ಜವಬ್ದಾರಿ ದುಪ್ಪಟ್ಟಾಗುತ್ತದೆ. ಮೊದಲಿನಂತೆ ಅವಳಿಗಾಗಿ ಯಾವ ಸಮಯವೂ ಸಿಗುವುದಿಲ್ಲ. ಊಟವಾಗಲೀ, ನಿದ್ದೆಯಾಗಲೀ ಅಂದುಕೊಂಡ ಸಮಯದಲ್ಲಿ ಆಗುವುದಿಲ್ಲ.  ತೆಳ್ಳನೆ ಬಳಕುವ ಶರೀರ ದಪ್ಪವಾಗತೊಡಗುತ್ತದೆ. ತಲೆಕೂದಲು ಉದರಲಾರಂಭಿಸುತ್ತದೆ.  ಬಳ್ಳಿಯಲ್ಲಿ ಮಲ್ಲಿಗೆ ಅರಳಿ ನಿಂತಿದ್ದರೂ  ಅದನ್ನು ಮುಡಿಯುವ ಮನಸ್ಸೇ ಇಲ್ಲವಾಗಿರುತ್ತದೆ.. ಅಲಂಕರಿಸಿಕೊಳ್ಳುವ ಮನಸ್ಸಾಗಲೀ, ಸಮಯವಾಗಲೀ ಇರುವುದೇ ಇಲ್ಲ. ಕನ್ನಡಿ  ನೋಡದೇ  ಎಷ್ಟೋ ದಿನಗಳೇ ಕಳೆದುಹೋಗಿರುತ್ತದೆ. ತೆಗೆದುಕೊಂಡ ಚಂದದ ಬಟ್ಟೆಗಳು ಧರಿಸಲಾಗದೇ ಮೂಟೆ ಕಟ್ಟಿ ಅಟ್ಟ ಸೇರಿರುತ್ತದೆ. ಮಗು ಮನೆಗೆ ಬಂದ ಖುಷಿ ಒಂದು ಕಡೆ ಇದ್ದರೂ ಇನ್ನೊಂದು ಕಡೆ ಅವಳು ಎಲ್ಲೋ ಮೊದಲಿನತನ ಕಳೆದುಕೊಂಡಿರುತ್ತಾಳೆ. 

ಅಮ್ಮ,  ಈ ಎರಡು ಅಕ್ಷರಗಳ ಪದದಿಂದ ಏನೆಲ್ಲಾ ಸಾಧಿಸಿಬಿಡಬಹುದು. ಅಮ್ಮಾ ತಿಂಡಿ ಕೊಡು , ನನ್ನ ಶೂ ಎಲ್ಲಿ? ತಲೆ ಬಾಚು. ಬಟ್ಟೆ ಐರನ್‌ ಮಾಡು ,ನನ್ನ ಪುಸ್ತಕ ನೋಡಿದ್ಯಾ? ಹೀಗೆ ದಿನ ಬೆಳಗಾದರೆ ಅಮ್ಮನನ್ನೇ ಕರೆಯೋದು. ಕೆಲವೊಮ್ಮೆ ತುಂಬಾ ತಾತ್ಸಾರದ ಪದವೆಂದರೆ ಕೂಡಾ ಅದು ಅಮ್ಮ, ಅಮ್ಮನಿದ್ದಾಳಲ್ಲ ಎಂದುಕೊಂಡು ಎಷ್ಟೋ ಸಲ   ತಾತ್ಸಾರ  ಮಾಡಿ ಬಿಡುತ್ತೇವೆ. ಯಾವ ಜವಬ್ಧಾರಿಯನ್ನಾಗಲೀ ತೆಗೆದುಕೊಳ್ಳಲು ಬಯಸುವುದಿಲ್ಲ. ಎಲ್ಲವನ್ನೂ ಎಲ್ಲೆಡೆ ಬಿಸಾಕಿ ತಿರುಗಿ ನೋಡದೇ ಹೊರಟು ಬಿಡುತ್ತೇವೆ. ಅಮ್ಮ ಮನೆಯಲ್ಲಿರುವಳಲ್ಲ ಎಂಬ ಅತಿಯಾದ ನಂಬಿಕೆ ಇದಕ್ಕೆ ಕಾರಣವಿರಬಹುದು. ಅಮ್ಮನಿರುತ್ತಾಳೆ ನಿಜ, ಆದರೆ ಅವಳ ಆರೋಗ್ಯ ಅವಳ ಜೊತೆಯಲ್ಲಿರುತ್ತದೆಯೇ? ಹೆಣ್ಣಿಗೆ ಹುಟ್ಟಿದಾಗಿನಿಂದ ಕೊನೆಯವಾರೆಗೂ ಒಂದಲ್ಲಾ ಒಂದು ರೀತಿಯ ವೇದನೆ ಇದ್ದದ್ದೇ. ಕೆಲಸಕ್ಕೆ ಹೋಗುವವರ ಪಾಡಂತೂ ಕೇಳಲೇಬೇಡಿ. ಸುಂದರ ಬದುಕನ್ನೇ ನಿಮಗಾಗಿ ನಿಮ್ಮ ಖುಷಿಗಾಗಿ ತ್ಯಾಗ ಮಾಡಿರುತ್ತಾರೆ. 

ಅವರ ಜೀವನ ಒಂದು ಹಂತಕ್ಕೆ ಬಂದ ನಂತರ ಮುಟ್ಟಿನ ಸಮಸ್ಯೆ, ನೋವು, ಕಿರಿಕಿರಿ, ನಂತರ ಮದುವೆ ,ಸಂಸಾರದ ನಿರ್ವಹಣೆ , ಗಂಡ ಕೂಲಿಯವನಾದರೆ ಕೂಲಿ ಕೆಲಸ, ರೈತನಾದರೆ ಹೊಲಗದ್ದೆಗಳ ಕೆಲಸ, ಕಂಪನಿಯಾದರೆ ಮೇಲುಸ್ತುವಾರಿ, ಇದ್ಯಾವುದೂ ಇಲ್ಲದಿದ್ದರೂ ಮುಸುರೆ ತಿಕ್ಕು, ಮನೆ ಸ್ವಚ್ಛ ಮಾಡು. ಬಟ್ಟೆ ತೊಳಿ, ದಿನಸಿ ತೆಗೆದುಕೊಂಡು ಬಾ. ಮಕ್ಕಳ ಡಬ್ಬಿ ತುಂಬು, ರೆಡಿ ಮಾಡು. ಅಯ್ಯೋ ಒಂದೇ ಎರಡೆ. ಬೆಳಿಗ್ಗೆ ಅಲರಾಂನಿಂದ ದಿನಚರಿ ಶುರುವಾಗಿ ಬಿಟ್ಟರೆ ರಾತ್ರಿಯಾದರೂ ಒಂದಲ್ಲಾ ಒಂದು ಕೆಲಸ ಬೆನ್ನತ್ತಿದ ಬೇತಾಳದಂತೆ ಇದ್ದೇ ಇರುತ್ತದೆ. 

ಅವಳು ಮನೆಯಲ್ಲಿ ಆರಾಮಾಗಿದ್ದು ಬಿಡುತ್ತಾಳೆ ಎಂದು ನಾವು ಅಂದುಕೊಳ್ಳುತ್ತೇವೆ, ಆ ಮನಸ್ಸಿನ ತುಡಿತ ನಮಗಾಗಿಯೇ ಇರುತ್ತದೆ. ಈ ಹಪ್ಪಳ-ಸಂಡಿಗೆ,ಸಾಂಬಾರು ಪುಡಿ ಮಗಳಿಗಾಗಿ ಎತ್ತಿಡುತ್ತೇನೆ. ಅವಳು ಕೆಲಸಕ್ಕೆ ಹೋಗುವುದರಿಂದ ಅವಳಿಗೆ ಸಹಾಯವಾಗಬಹುದು. ಈ ಹೊಸ ಬಟ್ಟೆ ಅವಳಿಗೆ ಖರೀದಿಸುತ್ತೇನೆ. ಹಬ್ಬಕ್ಕೆ ಧರಿಸಿ ಖುಷಿಪಡಲಿ.. ದೇವರ ಪೂಜೆಗೆ ಕೂತರೆ ಮಕ್ಕಳನ್ನು ಚೆನ್ನಾಗಿಡು ಎಂದು ಪ್ರತಿದಿನ ದೇವರಿಗೆ ನೈವೇದ್ಯ. ಫೋನ್‌ ಇದ್ದರೆ ಮುಗಿದೇ ಹೋಯಿತು.ಎಲ್ಲಿ ಇದೀಯ? ಏನು ಮಾಡ್ತಿದಿಯ? ಊಟ ಮಾಡಿದ್ಯ? ಬರೋದು ಎಷ್ಟು ಹೊತ್ತಿಗೆ ? ಹೀಗೆ ನೂರಾರು ಪ್ರಶ್ನೆಗಳ ಸುರಿಮಳೆ. ನಾವಿಲ್ಲದಿದ್ದರೂ ನಮ್ಮ ಬಗೆಗಿನ ಆಲೋಚನೆ ಅವಳಿಗೆ ತಪ್ಪಿದ್ದಲ್ಲ. ಆದರೆ ನಾವು ಮಾತ್ರ ಅವಳು ಊಟ ಮಾಡಿದಳೇ? ಬೆಳಿಗ್ಗೆ ತಿಂಡಿ ಅವಳಿಗೆ ಮಿಕ್ಕಿತ್ತೆ? ವಿಟಮಿನ್‌ ಮಾತ್ರೆ ತೆಗೆದುಕೊಂಡಳೆ? ಅವಳ ಕಾಲು ನೋವು ಹೇಗಿದೆ? ಡಾಕ್ಟರ್‌ ಹತ್ತಿರ ಹೋಗಬೇಕಾ? ಹೀಗೆ ಯಾವುದನ್ನೂ ವಿಚಾರಿಸುವುದೇ ಇಲ್ಲ. ಮನೆಗೆ ಬಂದರೆ ಎಲ್ಲವನ್ನೂ ಬಿಸಾಡಿ , ಅವಳು ಕೊಟ್ಟ ತಿಂಡಿ ತಿಂದು ಕೈಲಿ ರಿಮೋಟೋ , ಮೊಬೈಲೋ ಹಿಡಿದು ತಲೆ ತಗ್ಗಿಸಿ ಕುಳಿತುಬಿಡುತ್ತೇವೆ. ಅವಳು ಮತ್ತೆ ಯಾವುದೋ ಕೆಲಸದಲ್ಲಿ ತೊಡಗಿಬಿಡುತ್ತಾಳೆ, ಮಗಳಿಗೆ ಅದು ಇಷ್ಟ, ಮಗನಿಗೆ ಇದು ಇಷ್ಟ, ನಾಳೆ ಆ ತಿಂಡಿ ಮಾಡಬೇಕು. ಅಡುಗೆಗೆ ಈ ತರಕಾರಿ ತರಬೇಕು. ಬಟ್ಟೆ ಲಾಂಡ್ರಿಗೆ ಕೊಟ್ಟಿಲ್ಲ. ನಾಳೆಯ ಯುನಿಫಾರ್ಮ್‌ ಒಣಗಿತೆ? ಸಾಸಿವೆ ಡಬ್ಬಿ ಖಾಲಿಯಾಗಿದೆ .ತುಂಬಬೇಕು. ಹೀಗೆ ನೂರಾರು ಚಿಂತೆಯಲ್ಲಿಯೇ ದಿನ ಕಳೆದು ಬಿಡುತ್ತಾಳೆ. ಮತ್ತೆ ನಮಗಾಗಿಯೇ ಅವಳು ಸಂಜೆ ಖರೀದಿಗೆ ಹೊರಟು ಬಿಡುತ್ತಾಳೆ. ಬಂದಾಗ ಮತ್ತೆ ರಾತ್ರಿ ಅಡುಗೆ ಮಾಡು, ನೆನಸಿದ ಅಕ್ಕಿ ರುಬ್ಬು,  ಮತ್ತೆ ಅದೇ ಕಥೆ. ಅವಳು ಊಟ ಬಡಿಸಿ ಎಲ್ಲಾ ಸ್ವಚ್ಛಗೊಳಿಸಿ ಬರುವುದರೊಳಗೆ ನಾವು ನಿದ್ದೆಗೆ ಜಾರುತ್ತೇವೆ. ಮಾತಾಡುವುದು,ಅವಳ ಜೊತೆ ಹಾಡು-ಹರಟೆ   ದೂರದ ಮಾತು. ನಮಗೆಲ್ಲಾ ಏನೆನೋ ಮಾಡುವ ಇವಳಿಗೆ ನಾವೆಷ್ಟು ಸಮಯ ಮೀಸಲಿಡುತ್ತೇವೆ ಎಂದು ನಾವು ಯಾವತ್ತೂ ಯೋಚಿಸಿಲ್ಲ. ಕೆಲವೊಮ್ಮೆ ಹಾರ್ಮೋನ್‌ ವ್ಯತ್ಯಾಸದಿಂದಲೋ, ತಲೆ ನೋವಿನಿಂದಲೋ ಏನೇನೋ ಬಡಬಡಾಯಿಸುತ್ತಾಳೆ. ರೇಗುತ್ತಾಳೆ. ಆ ಸಮಯಕ್ಕೆ ನಾವು ಅವಳ ಸಹಾಯಕ್ಕೆ ಧಾವಿಸುವುದಿಲ್ಲ. ನಾವು ಕಿರುಚುತ್ತೇವೆ.ಅಳುತ್ತೇವೆ . ರಂಪ ಮಾಡುತ್ತೇವೆ. ಯಾವುತ್ತೂ ಏನು ಮಾತನಾಡದವಳು ಎಲ್ಲೋ ಒಮ್ಮೊಮ್ಮೆ ಕೂಗುತ್ತಾಳೆಂದರೆ ಅವಳ ಅಸಹಾಯಕತೆಯನ್ನು ನಾವು ಅರಿತುಕೊಳ್ಳುವಲ್ಲಿ ಸೋತಿದ್ದೇವೆ ಎಂದಾಯಿತಲ್ಲವೆ? ಎಲ್ಲವನ್ನೂ ಎಲ್ಲಾ ಸಮಯದಲ್ಲೂ ಮಾಡಲು ಅವಳು ಹೇಳುವುದಿಲ್ಲ. ನಿನ್ನ ಬಟ್ಟೆ ನೀನು ಮಡಿಚಿಕೋ. ಪುಸ್ತಕ ಜೋಡಿಸಿಡು. ರಂಗೋಲಿ ಕಲಿ, ಸಮಯ ವ್ಯರ್ಥ ಮಾಡಬೇಡ. ಮೊಬೈಲ್‌ ಹೆಚ್ಚು ನೋಡಬೇಡ. ಹೀಗೆ ಕೆಲವು. ತನಗೆ ಸಿಗದ ಅವಕಾಶ ತನ್ನಮಕ್ಕಳಿಗಾದರೂ ಸಿಕ್ಕು ಎನಾದರೂ ಸಾಧಿಸಲಿ ಎಂಬ ಭಾವನೆ ಇರಬಹುದು. ಎಷ್ಟೋ ಅಮ್ಮಂದಿರ ಕನಸು ಫಲಿಸದಿರುವುದರ ಪರಿಣಾಮವೂ ಇದಕ್ಕೆ ಕಾರಣವಿರಬಹುದು. ಒಂದು ವೇಳೆ ತನಗೇನಾದರೂ ತೊಂದರೆಯಾದರೆ ಅಥವಾ ಮಗಳು ಮದುವೆಯಾಗಿ ಬೇರೆಯವರ ಮನೆ ತುಂಬಿದಾಗ ಯಾವುದೇ ಸಮಸ್ಯೆ ಆಗದಿರಲಿ ಎಂದೋ ಅವಳ ಆಶಯವಾಗಿರಬಹುದು. ಅದನ್ನು ಅವಳು ಬಾಯಿ ಬಿಟ್ಟು ಹೇಳುವುದಿಲ್ಲವಷ್ಟೇ. ಗೆಳೆಯರೊಂದಿಗೆ , ಅಕ್ಕ- ಪಕ್ಕದವರೊಂದಿಗೆ ಲಗುಬಗೆಯಲಿ ಬೆರೆಯುವ ನಾವು ಅಮ್ಮ ಅಂತ ಬಂದಾಗ ವಿರುದ್ಧವೇ ಆಗಿಬಿಡುತ್ತೇವೆ.

ನಮಗೆ ಜ್ವರ ಬಂದಾಗ ಅವಳು ರಾತ್ರಿ - ಬೆಳಗು ನಿದ್ದೆಗೆಟ್ಟು ತಲೆಗೆ ಒದ್ದೆ ಬಟ್ಟೆ ಹಾಕಿ ಜ್ವರವನ್ನು ಹತೋಟಿಗೆ ತಂದಿರುವುದಾಗಲೀ, ಪ್ರಸವದ ಸಂದರ್ಭದಲ್ಲಿ ನಮಗಿಂತ ವೇದನೆ ಅನುಭವಿಸಿದ್ದಾಗಲೀ, ಆರು ತಿಂಗಳು ನಮ್ಮ ಮಕ್ಕಳ ಸೇವೆ ಮಾಡಿದ್ದಾಗಲೀ, ನೂರು ದೇವರಿಗೆ ಹರಕೆ ಹೊತ್ತದ್ದಾಗಲೀ, ತಾನು ತಿನ್ನುವುದರಲ್ಲಿ ನಮಗೆ ಅರ್ಧ ತೆಗೆದಿಟ್ಟಿರುವುದಾಗಲೀ ನಮ್ಮ ತಿಳುವಳಿಕೆಗೆ ಬಂದಿಲ್ಲವೆಂದರೆ ನಮ್ಮಲ್ಲಿ ಅರಿಯುವ ಸೂಕ್ಷ್ಮಗುಣವೇ ಇಲ್ಲ ಎಂದರ್ಥವಷ್ಟೆ. 

ತನ್ನ ಕನಸುಗಳನ್ನು ಮಕ್ಕಳ ಮೂಲಕ ಸಾಧಿಸಲು ಎಷ್ಟೋ ತಾಯಂದಿರು ಪ್ರಯತ್ನಪಡುತ್ತಾರೆ. ತಮ್ಮಂತೆ ಮಕ್ಕಳಾಗದಿರಲಿ ಎಂದು ಬಯಸುತ್ತಾರೆ. ಮಕ್ಕಳನ್ನು ಒಂದು ಜವಬ್ಧಾರಿಯುತ ಸ್ಥಾನದಲ್ಲಿ ಇಟ್ಟು ನೋಡಲು ಬಯಸುತ್ತಾರೆ. ಸಾಧಿಸಿದಾಗ ತಾವೇ ಸಾಧಿಸಿದಂತೆ ಬೀಗುತ್ತಾರೆ. ತಮಗಾದ ನೋವು ಮರೆಯುತ್ತಾರೆ. ನಮ್ಮ ಸಾಧನೆಯನ್ನು ಮನಸಾರೆ ಆನಂದಿಸುವುದಾದರೆ ಅದು ತಾಯಿ ಮಾತ್ರ ! ಅದರಲ್ಲಿ ಅವಳ ಪಾತ್ರವೇ ಬಹುಪಾಲಿರುತ್ತದೆ. ಮಾತನಾಡುವುದು ಹೆತ್ತವರ ಹಕ್ಕು. ನಾವು ಹೆತ್ತವರಾದ ಮೇಲೂ ನಾವೂ ಹೀಗೆ ನಡೆದುಕೊಳ್ಳುತ್ತೇವೆ. ಅದು ಕೌಟುಂಬಿಕ ಧರ್ಮ ಕೂಡಾ . ನಮ್ಮ ಮನೆಯಲ್ಲಿ ಅಂತೆಯೇ ಅಲ್ಲ. ಎಲ್ಲಾ ಕುಟುಂಬದ ಅಮ್ಮನಾದವಳ ಕಥೆಯೂ ಇದೇ..ವ್ಯಥೆಯೂ ಇದೇ....ಸಮಾನತೆ,ಸ್ವಾತಂತ್ರ್ರ್ಯ ಎಂದು ಹೋರಾಟ ಮಾಡುವವರ ಬಗ್ಗೆ ನಾನೆಂದೂ ಮಾತನಾಡುವುದಿಲ್ಲ. ತಮ್ಮ ಸಂತೋಷವನ್ನು ತ್ಯಾಗ ಮಾಡಿ ನೋವು ನುಂಗಿ ನಗುವ ಕುಟುಂಬದ ಜೊತೆ ನಿಂತ ಎಷ್ಟೋ ಅಮ್ಮಂದಿರನ್ನು ನಾನು ನೋಡಿದ್ದೇನೆ. ಅಂತಹಾ ತ್ಯಾಗಮಯಿ ತಾಯಿಯ ಬಗ್ಗೆ ಅಷ್ಟೇ ಈ ಬರಹ…!

Category : Parenting and Family


ProfileImg

Written by Soumya Jambe