ಭವಿಷ್ಯದ ನಮ್ಮುಸಿರಿಗೆ ಜಲಮೂಲ ಸಂರಕ್ಷಣೆಯೊಂದೇ ದಾರಿ.
ಗ್ರಿಷ್ಮ ಋತು ಆರಂಭವಾದರೂ ಸೂರ್ಯಬೇಸಿಗೆಯಲ್ಲಿ ಉರಿಯುವಂತೆ, ಬೆಂಕಿಯುಂಡೆಗಳನ್ನುಕಾರುತ್ತಾ, ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ, ಕಾಟ ಕೊಡುತಿದ್ದಾನೆ. ದಕ್ಷಿಣ ಭಾರತದಲ್ಲಿ ಹಾಗೂ ಹೀಗೂ ಒಂದಿಷ್ಟು ಮಳೆಯಾದರೆ, ಉತ್ತರ ಭಾರತವಂತೂ ಅಕ್ಷರಷಃ ನಿಗಿ ನಿಗಿ ಕೆಂಡವಾಗಿ ಉರಿಯುವ ಒಲೆಯಂತಾಗಿದೆ. ಈಪರಿಯ ಬಿಸಿಲಿನ ಹೊಡೆತದ ಪರಿಣಾಮ, ಅನೇಕರು ಸನ್ ಸ್ಟ್ರೋಕ್ ಒಳಗಾಗಿ, ಸಾವನ್ನಪ್ಪುತಿರುವುದು ನೋಡುತಿದ್ದೆವೆ. ಮರಳುಗಾಡು ಪ್ರದೇಶಗಳಾದ ಮಧ್ಯ ಪ್ರಾಚ್ಯ ದೇಶಗಳಂತು, 50-55 ಡಿಗ್ರಿ ತಾಪಮಾನದಿಂದ ಬಿಸಿಲಿನ ಹೊಡೆತ ತಾಳಲಾರದೇ ನಲುಗಿ ಹೋಗಿ, ಮೆಕ್ಕಾದಂತ ಪವಿತ್ರ ಸ್ಥಾನದಲ್ಲಿ ಪ್ರಕೃತಿಯ ವೈಚಿತ್ರಕ್ಕೆ, ಸಾವಿರಾರು ಮಾನವ ಬಲಿಯಾಗುತ್ತಿರುವುದು ಕಳವಳ ಸೃಷ್ಟಿಸಿದೆ. ಬಿಸಿಲಿನ ಹೊಡೆತ ಕೇವಲ ಮರಳುಗಾಡು ಪ್ರದೇಶಕ್ಕೆ ಮಾತ್ರ ಸಿಮಿತವಾಗದೆ. ಅನೇಕ ಹಿಮಾಚ್ಚಾದಿತ, ತಂಪಿನ ಪ್ರದೇಶಗಳೆಂದು ಮಧುಚಂದಕ್ಕೆ ಜೋಡಿಗಳು ಹೋಗಲು ಬಯಸುವ ತಾಣಗಳು ಸಹ ಬಿಸಿಲಬ್ಬರಕ್ಕೆ ತುತ್ತಾಗಿ, ಒದ್ದಾಡುತ್ತಿವೆ. ಕಾರಣವಿಲ್ಲದೆ ಪ್ರಕೃತಿ ಸುಮ್ಮನೆ ನಮ್ಮ ಮೇಲೆ ಪ್ರಹಾರ ಮಾಡುವುದಿಲ್ಲ. ಪ್ರಕೃತಿಯ ತನ್ನ ನಿಯಮ ಬದ್ಧ ಕೈಂಕರ್ಯದಲ್ಲಿ ಏನಾದರೂ ವ್ಯತ್ಯಾಸವಾದಾಗ, ತಹದ ಘಟನೆಗಳು ಸಂಭವಿಸುತ್ತವೆ. ಹಾಗಾದರೆ ನಾವು ತಪ್ಪಿದ್ದೇಲ್ಲಿ? ನೋಡಿ ನಮ್ಮ ಜೀವನ ಶೈಲಿ, ದುರಾಸೆ, ದುಷ್ಕೃತ್ಯದಿಂದ, ವಾತಾವರಣದಲ್ಲಾಗುವ ಬದಲಾವಣೆಯನ್ನು ನಾವು ಗಮನಿಸಿವುದೇ ಇಲ್ಲ. ಇದಕ್ಕೆಲ್ಲ ಕಾರಣ ನೀಡಬಹುದಾದರೆ, ಏರುತ್ತಿರುವ ಜನ ಸಂಖ್ಯೆಯಿಂದಾಗಿ ಕಾಡುಗಳ ವಿಸ್ತಿರ್ಣ ಕಡಿಮೆಯಾಗುತ್ತಿರುವುದು. ಕಾಡುಗಳಿದ್ದರೆ ತಾನೆ ಮಳೆ. ಮರಗಿಡಗಳ ಸಂಖ್ಯೆ ಕಡಿಮೆಯಾದಂಗೆ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಅಂಶ ಜಾಸ್ತಿಯಾಗಿ, ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾಗುತ್ತದೆ. ಇವತ್ತು ಜಾಗತಿಕ ತಾಪಮಾನ ಏರುವಲ್ಲಿ ಈ ಕಾರಣವೂ ಒಂದಾಗಿದೆ. ಜೊತೆಗೆ ಪಳಯುಳಿಕೆ ಇಂಧನವಾದ ಪೆಟ್ರೋಲ್ ಡೀಸೇಲ್ ನ್ನು ಭೂಮಿಯ ಗರ್ಭವನ್ನು ಸೀಳಿ, ಬೇಕಾಬಿಟ್ಟಿಯಾಗಿ ತೆಗೆದು, ಉರಿಸಿ ವಾತಾವರಣಕ್ಕೆ ಕಾರ್ಬನ್ ಅಂಶ ಸೇರಿಸುತ್ತಿರುವುದು ಪರಿಣಾಮವೂ ಹೌದು. ಹೀಗೆ ಹತ್ತು ಹಲವು ಕಾರಣಗಳು ಸೇರಿವೆ. ಈಗ ಬಿಸಿಲಧಗೆ ಜೊತೆ ನೀರಿನ ಕೊರತೆಯ ಸಂಕಟದ ಇಕ್ಕಳದಲ್ಲಿ ಸಿಕ್ಕು ಈಗ ನಾವು ಒದ್ದಾಡುತಿದ್ದೆವೆ. ಭೂಮಿ ಸೃಷ್ಟಿಯಾದಾಗ ಸಿಹಿ ನೀರಿನ ಪ್ರಮಾಣ ಎಷ್ಟಿತ್ತೋ ಈಗಲೂ ಅಷ್ಟೇ ಅಂದರೆ ಶೇಕಡಾ ಎರಡರಷ್ಟೆ ಇದೆ, ಅದೇಂದೂ ಬದಲಾಗದ ಪ್ರಾಕೃತಿಕ ಸ್ಥಿತಿ, ಆ ಶೇಕಡಾ ಎರಡರಷ್ಟೇನೀರೆ ನದಿ, ಸರೋವರ, ಕೆರೆಕುಂಟೆ, ಅಂತರ್ಜಲ ರೂಪದಲ್ಲಿ ನಮ್ಮ ಬಳಕೆಗಿದೆ. ಬೇಸಿಗೆಯಲ್ಲಿಬಿಸಿಲಿನ ಧಗೆಯಿಂದ ಸಮುದ್ರ, ಕೆರೆಕುಂಟೆ, ನದಿಗಳ ನೀರು, ಅಷ್ಟೇಕೆ ಭೂಮಿಯ ಆಳದಲ್ಲಿ ಅಡಗಿ ಕೂತಿರುವ, ಅಂತರ್ಜಲದ ನೀರು ಸಹ ಆವಿಯಾಗಿ ಮೋಡ ಕಟ್ಟುವ ಪ್ರಕ್ರೀಯೆಯಲ್ಲಿ ಪಾತ್ರವಹಿಸುತ್ತವೆ.ಇದು ನಿಸರ್ಗದ ಸಹಜ ಕ್ರೀಯೆ,ಮತ್ತದೇ ನೀರು ಮಳೆ ರೂಪದಲ್ಲಿ ನಮಗೆ ಬರುತ್ತದೆ, ಆದರೆ ಕಾಡು ನಾಶ, ನದಿ ಕೆರೆಕುಂಟೆಗಳ ಒಡಲಿಗೆ ತ್ಯಾಜ್ಯ ಸುರಿಯುವಿಕೆ, ಗಣಿಗಾರಿಕೆಯಂತಹ ಕೆಲಸಗಳ ಮೂಲಕ, ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಭೂಮಿಯ ಧಾರಣ ಶಕ್ತಿಯನ್ನೇ ಹಾಳು ಮಾಡಿಬಿಟ್ಟಿದ್ದೆವೆ. ಪರಿಣಾಮ ನೀರಿನ ಕೊರತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇರುವ ಜಲಮೂಲಗಳನ್ನು ಸಹ ಜಲಚರಗಳೂ ಜೀವಿಸಲಾರದಂತೆ, ಹೊಲಸನ್ನೇಲ್ಲಾ ಸುರಿದು ವೈತರಣಿಯನ್ನಾಗಿ ಮಾಡಿ ನಾವೂ ಕುಡಿಯುವ ನೀರಿಗಾಗಿ ಒದ್ದಾಡುತಿದ್ದೆವೆ.
ಪ್ರಕೃತಿಯ ಮುಂದೆ ನಾವು ಲಿಲ್ಲಿಪುಟ್ ಗಳು, ಪ್ರಕೃತಿಯನ್ನು ಮೀರಿಸುವ ಶಕ್ತಿ ಮಾನವನಿಗೆಂದೂ ದೊರಕದು, ಆದರೆ ತಾನು ಎಲ್ಲವನ್ನೂ ಮೀರಿ ಬದುಕಬಲ್ಲೇ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುವ ಮಾನವ, ದುರಾಚಾರ, ದುರಾಸೆಯಿಂದಾಗಿ, ಪ್ರಕೃತಿಯ ಮೇಲೆ ನಿರಂತರವಾಗಿ, ಅತ್ಯಾಚಾರವನ್ನು ತನಗರಿವಿಲ್ಲದಂತೆ ಎಸಗುತಿದ್ದಾನೆ.ಅದರೆ ಪ್ರಕೃತಿಯ ತಾಳ್ಮೆ, ಸಂಯಮ ಮೀರಿದಾಗ, ನೀಡುವ ಹೊಡೆತ ಮಾನವ ಸೇರಿದಂತೆ, ಸಕಲ ಜೀವರಾಶಿಯಾದಿಯಾಗಿ ನರಳುವಂತೆ ಮಾಡುತ್ತದೆ ಎಂಬುದಕ್ಕೆ ಸಾವಿರಾರು ನಿದರ್ಶನಗಳಿವೆ. ನದಿಗಳ ತೀರದಲ್ಲೇ ನಾಗರಿಕನಾಗಿ ಬೆಳದ ಮಾನವ, ಅನಾಗರಿಕನಂತೆ, ಅದೇ ಮಾತೃಸ್ವರೂಪಿ ಜೀವನದಿಗಳನ್ನು, ಜಲಮೂಲಗಳನ್ನು ಹಾಳು ಮಾಡಿ, ತಿನ್ನುವ ಆಹಾರ, ಉಸಿರಾಡುವ ಗಾಳಿ, ಕೃಷಿ, ಎಲ್ಲವನ್ನು ವಿಷಮಯಗೊಳಿಸಿಬಿಟ್ಟಿದ್ದಾನೆ. ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಭೂಮಿಯನ್ನು ಸ್ಮಶಾನ ಮಾಡಿದರು ಅಚ್ಚರಿ ಪಡಬೇಕಿಲ್ಲ. ಅದಕ್ಕೆ “ಮಹಾತ್ಮ ಗಾಂಧಿಯವರು ಪ್ರಕೃತಿಗೆ ಮಾನವನ ಆಸೆಗಳನ್ನು ತೀರಿಸುವ ಶಕ್ತಿ ಇದೆ, ಆದರೆ ದುರಾಸೆಗಳನ್ನಲ್ಲ” ಎಂದಿರುವುದು.
ಇತ್ತೀಚಿನದಿನಗಳಲ್ಲಿ ಕಲುಷಿತ ನೀರು ಕುಡಿದು, ಇಷ್ಟು ಸಾವು, ವಾಂತಿ ಭೇದಿಯಿಂದಾಗಿ ನರಳುತ್ತಿರುವ ಜನರು ಆಸ್ಪತ್ರೆಗೆ ಧಾಖಲು, ಎಂಬ ಸುದ್ದಿಗಳನ್ನು ನೀವು ಓದುವುದು, ಕೇಳುವುದು ಸಾಮಾನ್ಯವೆಂಬಂತಾಗಿದೆ. ಬದುಕಿಗೆ ಬೇಕಾದ ಎಲ್ಲಾಸೌಲಭ್ಯಗಳನ್ನು ಪ್ರಕೃತಿಯಿಂದ ನಿರ್ದಯವಾಗಿ ಕಿತ್ತುಕೊಳ್ಳುತ್ತಾ, ಭವಿಷ್ಯದ ಯಾವ ಆಲೋಚನೆ ಇಲ್ಲದೇ ಬದುಕುವ, ಜ್ಞಾನ ವಿಜ್ಞಾನದ ಏರು ಹಾದಿಯಲ್ಲಿ ಸಾಗುತ್ತಿದ್ದೆವೆ ಎಂಬ ಭ್ರಮೆಯಲ್ಲಿ ಜೀವಿಸುತ್ತಿರುವ ನಮಗೆ ಈ ಕ್ಷಣದಲ್ಲೂ ಜನರಿಗೆಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅಸಮರ್ಥವಾಗಿರುವುದು, ದೊಡ್ಡ ಸಾಮಾಜಿಕ ವೈಫಲ್ಯ ಎಂದು ಅನಿಸದೇ ಹೋಗಿರುವುದು ದುರಂತವಲ್ಲದೇ ಮತ್ತೇನು? ಅಲ್ಲೇಲ್ಲೋ ಯಾರಿಗೋ ಕುಡಿಯುವ ನೀರಿನ ಸಮಸ್ಯೆಯಾದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಯೋಚಿಸುವ ನಾವು, ಮುಂದೊಂದು ದಿನ ಇದೇ ಕಲುಷಿತ ನೀರಿನ ಸಮಸ್ಯೆ ನಮಗೂ ಬರಬಹುದು ಎನ್ನುವುದು ಹೊಳೆಯುವುದೇ ಇಲ್ಲ, ನೋಡಿ ಗಂಗೆಯನ್ನು ಪವಿತ್ರ ಆಕೆಯ ಸ್ಪರ್ಷದಿಂದ ಸಕಲ ಪಾಪವೂ ನಿವಾರಣೆಯಾಗುತ್ತದೆ ಎಂದು ಹೇಳುವ ನಾವು, ಇಂದು ಗಂಗೆಯ ನೀರನ್ನು ತೀರ್ಥವೆಂದು ಸೇವಿಸುವುದಿರಲಿ, ಸ್ಪರ್ಷ ಮಾಡದಷ್ಟು, ನಗರಗಳ ಉಚ್ಚಿಷ್ಟ, ನಾಗರಿಕ ಪ್ರಜ್ಙೆ ಕಳೆದುಕೊಂಡ ಯಾತ್ರಿಕರು ಬಿಟ್ಟು ಹೋಗುವ ಕೊಳಕು ವರ್ಜ್ಯಗಳು, ಅರೆಬೆಂದ ಹೆಣಗಳನ್ನು ಬಿಸಾಡುವು ಮೂಲಕ, ಪರಮ ಪಾಪಿಷ್ಟರಾಗಿ ಹೋಗಿದ್ದೆವೆ.
ಭೂಮಿಯ ತಾಪಮಾನ ಏರುತ್ತಿದೆ, ಮೇಲೆ ಆಕಾಶದಲ್ಲೇಲ್ಲೋ ಓಝೋನ್ ಪದರ ಛಿದ್ರವಾಗಿದೆ ಎಂದುವಿಜ್ಞಾನಿಗಳು ಎಚ್ಚರಿಸುತಿದ್ದರು, ಈ ವಿಚಾರಗಳು ನೇರವಾಗಿನಮ್ಮ ದೈನಂದಿನ ಬದುಕಿಗೆ ಸಂಬಂಧಸಿದವು ಎನ್ನುವ ಪ್ರಾಥಮಿಕ ತಿಳುವಳಿಕೆಯೂ ನಮಗಿಲ್ಲದಂತೆ ದೊಡ್ಡ ದೊಡ್ಡ ಪದವಿ ಪಡೆದ ನಾವುಗಳು ನಿರ್ಲಿಪ್ತರಾಗಿ ಬದುಕುವುದರ ಜೊತೆ, ಅತಿ ಮಳೆ, ಅತಿ ಬಿಸಿಲ ಧಗೆ, ಬರದಂತಹ ಕಾರಣಗಳಿಗೆ, ವಿಜ್ಞಾನಿಗಳು ಹೇಳುತ್ತಿರುವ ಅನೇಕ ವಿಚಾರಗಳಲ್ಲಿ ಈ ಕಾರಣಗಳು ಒಂದು ಎನ್ನುವುದು ಅರ್ಥಮಾಡಿಕೊಳ್ಳದೇ ನಿರ್ಲಿಪ್ತರಂತಿದ್ದೆವೆ. ನಿಮ್ಮೂರಿನ ಕೆರೆಗೆ ಪ್ರತಿ ವರ್ಷ ಸಂತಾನಭಿವೃದ್ದಿಗೆ ಎಲ್ಲಿಂದಲೋ ಬರುತಿದ್ದ ವಲಸೆಹಕ್ಕಿಗಳು ಈ ವರ್ಷ ಬರದಿದ್ದರೂನಮ್ಮ ಗಮನಕ್ಕೆ ಬರುವುದಿಲ್ಲ. ಯಾಕೆ ಎನ್ನುವ ಸಣ್ಣ ಆಲೋಚನೆಯೂ ನಮ್ಮನ್ನು ಕಾಡುವುದಿಲ್ಲ, ಯಾರಿಗೇನಾದರೆ ನನಗೇನು?
ಎನ್ನುವ ಧೋರಣೆಯಿಂದ, ಕೆರೆಗೆ ಊರಿನ ಹೊಲಸನ್ನು ಸುರಿಯುತ್ತಾ, ಎಮ್ಮೆ ಹಸು,ಲಾರಿ ಟ್ಯ್ರಾಕ್ಟರ್, ಸೈಕಲನ್ನು ತೊಳೆಯುತ್ತ,ನಮ್ಮನ್ನು ಸೇರಿದಂತೆ, ಜನಜಾನುವಾರುಗಳ ಬಳಕೆಗೆ ಅದೇ ನೀರು ಎನ್ನುವ ಜ್ಙಾನ ಕಳೆದುಕೊಂಡು ಜೀವಿಸುತ್ತೆವೆ. ಜನ ಸಂಖ್ಯೆಯೂ ಏರುತ್ತಿದೆ,ಅದಕ್ಕೆ ತಕ್ಕಂತೆ ಪ್ರಾಕೃತಿಕ ಸಂಪನ್ಮೂಲವಾದ ನೀರಿನ ಬಳಕೆಯೂ ಏರುತ್ತಲೇ ಇದೆ, ಈಗಲಾದರೂ ನಮ್ಮ ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸುವ ಮಿತವ್ಯಿಗಳಾಗುವುದರ ಜೊತೆ, ನಮ್ಮ ಜಲಮೂಲಗಳನ್ನು ನಮ್ಮ ಮಿತಿಯಲ್ಲಿ ಶುದ್ದವಾಗಿಟ್ಟುಕೊಳ್ಳುವುದರ ಜೊತೆ ರಕ್ಷಿಸಿಕೊಳ್ಳುವ ಜರೂರತ್ತಿದೆ. ನಮಗೆ ಅಭಿವೃದ್ದಿ ಬೇಕು, ಆದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಭಿವೃದ್ದಿ ಬಗ್ಗೆ ಯೋಚಿಸಬೇಕಿದೆ.
ಈಗ ನಾವು ಎದುರಿಸುತ್ತಿರುವ ಪ್ರಾಕೃತಿಕ ಹಾಹಾಕಾರವನ್ನುಕಂಡಮೇಲೂ ನಾವು ಜೀವಿಸುವ ಪರಿಯ ಮಹತ್ವ ನಮ್ಮಅರಿವಿನ ಪ್ರಜ್ಞೆಯೋಳಗೆ ಮೂಡಿಬರದಿದ್ದರೆ? ನಮ್ಮ ನಾಗರಿಕತೆಗೆ ಸಾರ್ಥಕತೆ ಇರಲು ಸಾಧ್ಯವೇ? ನಾವೇ ಆಲೋಚಿಸುವುದೊಳಿತು. ಈಗಾಗಲೇ ನೀವು ಅನೇಕ ಬಾರಿ ಕೇಳಿರುವ, ಮತ್ತೇ ಮತ್ತೇ ಕೇಳಲೇ ಬೇಕಿರುವ, ಅಮೇರಿಕಾದ ಕ್ರೀ ಜನಾಂಗದ ಮಾತೊಂದನ್ನು ನೆನಪಿಸುತ್ತೆನೆ.
ಕಟ್ಟಕಡೆಯಮರವೊಂದನ್ನು ಕಡಿದಾಗ, ಕಟ್ಟ ಕಡೆಯ ನೀರಿನ ಹನಿಯನ್ನು ಬಳಸಿದಾಗ, ಕಟ್ಟಕಡೆಯ ಮೀನನ್ನು ತಿಂದಾಗ, ನಮ್ಮಲ್ಲಿರುವ ಹಣವನ್ನು ತಿನ್ನಲು ಸಾಧ್ಯವಿಲ್ಲ ಎಂದರಿವಾಗುತ್ತದೆ.ಮಾನವ ಪಕೃತಿಯ ನಡುವಿನ ಸಂಬಂಧದ ನಡುವಿನ ಸರಳ ತಿಳುವಳಿಕೆಗೆ ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ?