ವಯಸ್ಸು ಅರವತ್ತು ಮನಸ್ಸು ಹದಿನೆಂಟು

ವಯಸ್ಸು ಅರವತ್ತು ಮನಸ್ಸು ಹದಿನೆಂಟು

ProfileImg
11 Jul '24
5 min read


image

        ಬೆಳಿಗ್ಗೆ ಒಂಬತ್ತೂವರೆಗೆ ಎಂದಿನಂತೆ ನೀಟಾಗಿ ಪ್ಯಾಂಟ್‌ ಶರ್ಟ್‌ ತೊಟ್ಟು ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತ್ತಿದ್ದ ಜಗದೀಶರಾಯರನ್ನು ಕಂಡು ಅವರ ಹೆಂಡತಿ ಕಮಲಮ್ಮ ಕೇಳಿದರು “ಎಲ್ಲಿಗೆ ಹೊರಟಿದ್ದು ಇಷ್ಟೆಲ್ಲ ಅಲಂಕಾರ ಮಾಡಿಕೊಂಡು?” ರಾಯರು ಮರುಪ್ರಶ್ನೆ ಎಸೆದರು “ಇದೇನೇ ಹೀಗೆ ಕೇಳ್ತಾ ಇದ್ದೀಯಾ? ಬ್ಯಾಂಕಿಗೆ ಹೋಗೋದು ಬೇಡವೇ?” ಕಮಲಮ್ಮ ಹಣೆಹಣೆ ಚಚ್ಚಿಕೊಂಡು ಹೇಳಿದರು “ ಅಯ್ಯೋ ನಿಮ್ಮ ಮರೆವಿಗಿಷ್ಟು, ನಿನ್ನೆಯೇ ನಿಮಗೆ ಗಂಧದ ಹಾರ ಹಾಕಿ, ಶಾಲು ತೊಡಿಸಿ, ಬೆಳ್ಳಿಬಟ್ಟಲು ಕೊಟ್ಟು ಮನೆಗೆ ಕಳಿಸಿಲ್ಲವೇ? ಇವತ್ತು ಮತ್ತೆ ಹೋಗಿ ಏನು ಮಾಡುತ್ತೀರಿ?” ಎಂಬ ಮರುಪ್ರಶ್ನೆಗೆ ಕಕ್ಕಾಬಿಕ್ಕಿಯಾದ ರಾಯರಿಗೆ ಹಿಂದಿನ ದಿನವಷ್ಟೇ ತಾನು ನಿವೃತ್ತಿಯಾಗಿದ್ದು ನೆನಪಾಯಿತು. 

       ರಾಯರನ್ನು ಕಂಡರೆ ಅವರಿಗೆ ಅರವತ್ತಾಗಿದೆ ಎಂದು ಯಾರೂ ಹೇಳುವಂತೆಯೇ ಇರಲಿಲ್ಲ. ತಲೆಯಲ್ಲಿ ಒಂದೇ ಒಂದು ಬಿಳಿಕೂದಲಿರಲಿಲ್ಲ. ಜೊತೆಗೆ ಮುಖದಲ್ಲಿ ಒಂದೇ ಒಂದು ಸುಕ್ಕು ಕೂಡ ಇರಲಿಲ್ಲ. ಅವರಿಗೆ ನಿವೃತ್ತಿ ಎಂದರೆ ಯಾರೂ ನಂಬುವಂತೆಯೇ ಇರಲಿಲ್ಲ. ಮೂರು ವರ್ಷಗಳ ಹಿಂದೆಯೇ ಒಮ್ಮೆ ಹೃದಯಾಘಾತಕ್ಕೊಳಗಾಗಿ ಅನಾರೋಗ್ಯದ ಕಾರಣ ಸ್ವಯಂನಿವೃತ್ತಿ ತೆಗೆದುಕೊಂಡಿದ್ದ ಅವರ ಸ್ನೇಹಿತ ಜನಾರ್ದನರಾಯರು ಅವರಿಗೆ ಸದಾ ತಮಾಷೆ ಮಾಡುತ್ತಿದ್ದರು. “ಅಲ್ಲಯ್ಯ, ನಿನ್ನದೂ ಒಂದು ಜೀವನವಾ? ವಯಸ್ಸು ಅರವತ್ತಕ್ಕೆ ಹತ್ತಿರ ಬಂತು. ಮರ್ಯಾದೆಗಾದರೂ ತಲೆಯಲ್ಲಿ ಒಂದು ಬಿಳಿಕೂದಲು ಬೇಡವಾ? ಇನ್ನೂ ಬಿಪಿ ಇಲ್ಲ, ಶುಗರ್‌ ಇಲ್ಲ, ಕೊಲೆಸ್ಟ್ರಾಲ್‌ ಇಲ್ಲ ಅಂದ್ರೆ ಮೂವತ್ತೈದು ವರ್ಷ ಬ್ಯಾಂಕಿನಲ್ಲಿ ನೀನು ಕೆಲಸ ಮಾಡಿದ್ದು ಹೌದಾ? ಎಲ್ಲ ನಿನ್ನಂಥವರೇ ಆದರೆ ಡಾಕ್ಟರುಗಳು, ಮೆಡಿಕಲ್‌ ಶಾಪಿನವರು ಹೇಗೆ ಬದುಕಬೇಕು? ನನ್ನನ್ನು ನೋಡು, ಅವರಿಗೆಲ್ಲ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ವ್ಯಾಪಾರ ನನ್ನಿಂದ ಗ್ಯಾರಂಟಿ. ನಿನ್ನ ಯೋಗ್ಯತೆಗೆ ನಿನ್ನ ಅರವತ್ತು ವರ್ಷ ಜೀವನದಲ್ಲಿ ವೈದ್ಯರಿಗಾಗಿ ಕನಿಷ್ಠ ಒಂದುಸಾವಿರ ರೂಪಾಯಿ ಆದ್ರೂ ಕೊಟ್ಟಿದ್ದೀಯಾ?” ಎಂದು ಚಟಾಕಿ ಹಾರಿಸುತ್ತಿದ್ದರು. 

       ರಾಯರಿಗೆ ಇವತ್ತು ಬ್ಯಾಂಕಿಗೆ ಹೋಗಬೇಕಿಲ್ಲ ಎನ್ನುವುದಕ್ಕಿಂತ ತಿಂಗಳ ಹಿಂದಷ್ಟೇ ಹೊಸದಾಗಿ ಬಂದ ಕ್ಯಾಷಿಯರ್‌ ಸ್ವಪ್ನಾಳನ್ನು ನೋಡುವುದು ತಪ್ಪಿಹೋಗುತ್ತದಲ್ಲ ಎನ್ನುವುದೇ ಬೇಜಾರು! ಹೆಣ್ಣುಮಕ್ಕಳ ವಿಷಯದಲ್ಲಿ ಅವರಿಗೆ ಸ್ವಲ್ಪ ಜಾಸ್ತಿಯೇ ಸಲಿಗೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಅವರು ಅದನ್ನೂ ಎಷ್ಟು ನಾಜೂಕಾಗಿ ನಿಭಾಯಿಸುತ್ತಾರೆಂದರೆ ಇದುವರೆಗೂ ಯಾವ ಹುಡುಗಿಯೂ ಅವರ ಬಗ್ಗೆ ದೂರು ಕೊಟ್ಟಿದ್ದಿಲ್ಲ. ಅವರ ಈ ಒಂದು ಸ್ವಭಾವ ಮಾತ್ರ ಕಮಲಮ್ಮನವರಿಗೆ ಇಷ್ಟವಾಗುವುದಿಲ್ಲ. ಈ ವಿಷಯದಲ್ಲಿ ಮಾತ್ರ ತಮ್ಮ ಗಂಡನನ್ನು ಆಗಾಗ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ರಾಯರೂ ಈ ವಿಷಯಗಳನ್ನು ಹೆಂಡತಿಯ ಗಮನಕ್ಕೆ ಬರದಂತೆ ರಹಸ್ಯವಾಗಿಡಲು ಸಾಕಷ್ಟು ಪ್ರಯತ್ನಪಡುತ್ತಾರೆ. ಆದರೂ ಒಮ್ಮೊಮ್ಮೆ ವಿಷಯ ಹೆಂಡತಿಯವರೆಗೂ ಬಂದೇಬರುತ್ತದೆ. ಆಗೆಲ್ಲ ಮೌನವಾಗಿ ಬೈಗುಳಗಳನ್ನು ಕೇಳಿಸಿಕೊಂಡು ಸುಮ್ಮನಾಗುತ್ತಾರೆ. ಏಕೆಂದರೆ ತಾನು ಮಾಡುತ್ತಿರುವುದು ತಪ್ಪೆಂದು ಅವರಿಗೆ ಗೊತ್ತು. 

       ಸ್ವಪ್ನಾ ಹೊಸದಾಗಿ ಬ್ಯಾಂಕಿಗೆ ಸೇರಿದ್ದ ಕ್ಲರ್ಕ್.‌ ಅವಳು ಬ್ಯಾಂಕಿಗೆ ಬಂದ ಮೊದಲ ದಿನ ಎಲ್ಲರೂ ಅವಳ ಕೈಕುಲುಕಿ ಆತ್ಮೀಯವಾಗಿ ಸ್ವಾಗತಿಸಿದ್ದರು. ಅಂದು ರಾಯರು ತುಸು ಹೆಚ್ಚು ಹೊತ್ತೇ ಅವಳ ಕೈಹಿಡಿದು ಕುಲುಕಿದ್ದರು. ಅದು ಆಕೆಗೆ ಅಸಹಜವೆನ್ನಿಸಿದ್ದರೂ ತೋರಿಸಿಕೊಟ್ಟಿರಲಿಲ್ಲ. ಅಲ್ಲದೇ ಅವರ ಸ್ಫುರದ್ರೂಪ, ಮುಗುಳ್ನಗೆ ಅವಳನ್ನು ಸುಮ್ಮನಾಗಿಸಿದ್ದರೂ ಇರಬಹುದು! ಆದರೆ ಅವರೀಗ ನಿವೃತ್ತಿಯಂಚಿನಲ್ಲಿರುವವರೆಂದು ತಿಳಿದಾಗ ನಂಬಲಾರದೆ ಹುಬ್ಬೇರಿಸಿದ್ದಳು! ಇದಾದಮೇಲೆ ಪ್ರತಿದಿನ ಅವಳಿಗೆ ಏನನ್ನಾದರೂ ಹೇಳಿಕೊಡುವ ನೆಪ ಮಾಡಿಕೊಂಡು ಅವಳ ಪಕ್ಕದಲ್ಲೇ ಬಹಳ ಹೊತ್ತು ನಿಂತುಕೊಳ್ಳುತ್ತಿದ್ದರು. ಜೊತೆಗೆ ಬಂದ ಮೊದಲ ದಿನವೇ “ಅವಳಿಗೆ ಹದಿನೆಂಟು, ಅವನಿಗೆ ಅರವತ್ತೆಂಟು, ಇದು ಯಾವ ಜನ್ಮದ ನಂಟು, ಆದರೂ ಈಗ ಅವಳು ಪ್ರೆಗ್ನಂಟು” ಎಂಬ ಡುಂಡುರಾಜರ ಹನಿಗವನವನ್ನು ಅವಳಿಗೆ ಹೇಳಿ ಅವಳನ್ನು ನಗಿಸಿದ್ದರು. ತಿಂಗಳ ಹಿಂದಷ್ಟೇ ನಿವೃತ್ತಿಯಂಚಿನಲ್ಲಿದ್ದ ಉದ್ಯೋಗಿಗಳಿಗಾಗಿ ನಡೆಸಲಾಗಿದ್ದ ಕಾರ್ಯಾಗಾರದಲ್ಲಿ “ನಿಮಗೀಗ ಅರವತ್ತು ತುಂಬಿದೆ ಎಂದು ಯಾರೂ ಚಿಂತೆ ಮಾಡಬೇಡಿ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆಯಷ್ಟೆ. ನೀವು ಮನಸ್ಸಿನಲ್ಲಿ ಹದಿನೆಂಟರ ಯುವಕನಂತೆ ಇದ್ದರೆ ಯಾವಾಗಲೂ ಉತ್ಸಾಹಭರಿತರಾಗಿಯೇ ಇರುತ್ತೀರಿ” ಎಂದು ಹೇಳಿದ್ದನ್ನು ರಾಯರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಅವರ ಸಹೋದ್ಯೋಗಿಗಳೆಲ್ಲ ಒಳಗೊಳಗೆ ಕಿಸಿಕಿಸಿ ನಗುತ್ತಿದ್ದರು. ಕೆಲವು ದಿನಗಳಾದಮೇಲೆ ಶಾಖಾ ವ್ಯವಸ್ಥಾಪಕರು ಅವಳನ್ನು ಕ್ಯಾಷ್‌ ಕೌಂಟರಿಗೆ ಹಾಕಿದಾಗಲೂ ಮೊದಲ ದಿನವೇ ಅವಳ ಬಳಿ ಹೋಗಿ “ಕ್ಯಾಷ್‌ ಕೌಂಟರಿನಲ್ಲಿದ್ದ ಚೆಲುವೆಯತ್ತ ಹರಿದು ನೋಟ, ಗಮನಿಸಲೇ ಇಲ್ಲ ಅವಳು ಕೊಟ್ಟ ಹರಿದ ನೋಟ” ಎಂಬ ಡುಂಡಿರಾಜರ ಇನ್ನೊಂದು ಹನಿಗವನವನ್ನು ಅವಳೆದುರು ಹೇಳಿದಾಗ ಆಕೆ ನಾಚಿ ತಲೆತಗ್ಗಿಸಿದ್ದಳು. ಶಾಖೆಯಲ್ಲಿದ್ದ ಇನ್ನೊಬ್ಬ ಕ್ಲರ್ಕ್‌ ಶ್ರೀಧರ ಅವರನ್ನು ಕಂಡು ಹಲ್ಲುಕಡಿಯುತ್ತಿದ್ದ. ಏಕೆಂದರೆ ಎರಡು ವರ್ಷಗಳ ಹಿಂದೆ ಬ್ಯಾಂಕಿಗೆ ಸೇರಿದ್ದ ಆತ ತನಗೆ ಜೂನಿಯರ್‌ ಆಗಿ ಬಂದ ಹುಡುಗಿಗೆ ಎಲ್ಲವನ್ನೂ ತಾನೇ ಹೇಳಿಕೊಟ್ಟು ಅವಳನ್ನು ಒಲಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದ. ಆದರೆ ರಾಯರು ಅವನಿಗೆ ಆ ಅವಕಾಶವನ್ನೇ ಕೊಡುತ್ತಿರಲಿಲ್ಲ!

       ಹೆಂಡತಿಗೆ ಯಾವ ಕಾರಣ ಹೇಳಿ ಹೋಗುವುದು ಎಂದು ಗೊಂದಲಕ್ಕೊಳಗಾದ ರಾಯರು ಒಂದು ಕ್ಷಣ ಕಣ್ಣುಮುಚ್ಚಿ ಧ್ಯಾನಿಸುತ್ತ ನಿಂತರು. “ಏನು, ಕಣ್ಣುಮುಚ್ಚಿ ಅದ್ಯಾವ ಸ್ವಪ್ನಸುಂದರಿಯನ್ನು ನೆನಪಿಸಿಕೊಳ್ಳುತ್ತಿದ್ದೀರಾ? ನಾನು ಹೇಳಿದ್ದು ಕೇಳಿಸಲಿಲ್ಲವೇ? ಕೂತ್ಕೊಳ್ಳಿ, ಆರಾಮವಾಗಿ ತಿಂಡಿ ತಿನ್ನಿ” ಎಂಬ ಕಮಲಮ್ಮನವರ ಮಾತಿನಿಂದ ಬೆಚ್ಚಿಬಿದ್ದು ವಾಸ್ತವಕ್ಕೆ ಬಂದರು. “ಇಲ್ಲ ಕಣೇ, ಗೆಳೆಯ ಕಂಠುಗೆ ಅದೇನೋ ಬ್ಯಾಂಕಿನಲ್ಲಿ ಕೆಲಸ ಇದೆಯಂತೆ. ಅವನಿಗೆ ಗೊತ್ತಾಗಲ್ಲ ಪಾಪ. ನಾನು ಜೊತೆಗೆ ಹೋಗಿ ಅದೇನಂತ ನೋಡ್ಕೊಂಡು ಅವನಿಗೆ ಸಹಾಯ ಮಾಡಿಬರ್ತೀನಿ ಇರು” ಎಂದು ಹೇಳಿ ಹೆಂಡತಿಯ ಉತ್ತರಕ್ಕೂ ಕಾಯದೆ ಹೊರಟರು. 

       ಮನೆಯಿಂದ ಬ್ಯಾಂಕಿಗೆ ಸುಮಾರು ಎರಡು ಕಿಲೋಮೀಟರ್‌ ಆಗುತ್ತದೆ. ದಿನಾ ಆ ದೂರವನ್ನು ನಡೆದೇ ಕ್ರಮಿಸುವುದೂ ರಾಯರ ಆರೋಗ್ಯಕ್ಕೆ ಒಂದು ಕಾರಣ. ಅವತ್ತು ಸಹ ಚಪ್ಪಲಿ ಮೆಟ್ಟಿಕೊಂಡು ನಡೆಯುತ್ತ ಹೊರಟರು. ದಾರಿಯಲ್ಲಿ ಅವರನ್ನು ಕಂಡ ಒಂದಿಬ್ಬರಿಗೆ ಅವರು ಹಿಂದಿನ ದಿನವೇ ನಿವೃತ್ತಿಯಾಗಿದ್ದ ವಿಷಯ ಹೇಗೋ ಗೊತ್ತಾಗಿತ್ತು. ಅವರನ್ನು ಕಂಡಕೂಡಲೇ “ಓ ರಾಯರು ಏನು ಸಮಾಚಾರ? ನಿಮ್ಗೆ ರಿಟೈರ್‌ ಆಯ್ತಂತೆ? ಇನ್ನೇನು ಆರಾಮಾಗಿ ತಿಂದ್ಕೊಂಡು ತಿರುಗಾಡಿಕೊಂಡು ಮಜಾ ಮಾಡ್ಕೊಂಡು ಇರಿ” ಎಂದನೊಬ್ಬ. ಆತ ತನ್ನ ನಿವೃತ್ತಿಗೆ ಶುಭ ಹಾರೈಸಿದ್ದೋ ಅಥವಾ ಗೇಲಿ ಮಾಡಿದ್ದೋ ಎಂದು ಅರ್ಥವಾಗದೆ ಅವನನ್ನೇ ದುರುಗುಟ್ಟಿ ನೋಡಿ ಮಾತನಾಡದೆ ಮುಂದಕ್ಕೆ ಹೆಜ್ಜೆಹಾಕಿದರು. ಸ್ವಲ್ಪ ಮುಂದೆ ಹೋದಂತೆ ಇನ್ನೊಬ್ಬ ಸಿಕ್ಕಿ “ಓ ರಾಯ್ರು ರಿಟೈರ್‌ ಆದ್ರಂತೆ? ಇನ್ನೇನು ಮನೇಲೇ ಇರೋದು. ಟೈಮ್‌ಪಾಸ್‌ ಮಾಡೋದು ಕಷ್ಟ ಆಗುತ್ತೆ ಅಲ್ವಾ? ಯಾವುದಾದರೂ ಸೀನಿಯರ್‌ ಸಿಟಿಜನ್‌ ಕ್ಲಬ್‌ ಅಥವಾ ಬೇರೆ ಯಾವುದಕ್ಕಾದರೂ ಸೇರ್ಕೊಳ್ಳಿ. ಇಲ್ಲಾಂದ್ರೆ ಮನೇಲೇ ಕೂತ್ಕೊಂಡು ಹುಚ್ಚು ಹಿಡಿದಹಾಗೆ ಆಗುತ್ತೆ. ನಮ್ಮ ಪರಿಚಯದವ್ರೊಬ್ರು ಹೀಗೇ ರಿಟೈರ್‌ ಆಗಿ ಒಂದು ತಿಂಗಳು ಸುಮ್ಮನೆ ಮನೆಯಲ್ಲಿ ಕೂತಿದ್ರು. ಡಿಪ್ರೆಶನ್‌ ಆಗಿ ಸೂಸೈಡ್‌ ಮಾಡ್ಕೊಂಬಿಟ್ರು. ನಿಮಗೂ ಹಾಗಾಗ್ಬಾರ್ದು ನೋಡಿ” ಎಂದು ಪುಕ್ಕಟೆ ಸಲಹೆ ಕೊಟ್ಟ! ಅವನ ದನಿಯಲ್ಲಿದ್ದ ವ್ಯಂಗ್ಯ ಮತ್ತೆ ರಾಯರನ್ನು ರೊಚ್ಚಿಗೆಬ್ಬಿಸಿತು. ಅಲ್ಲ, ಕೆಲಸಕ್ಕೆ ಹೋಗುತ್ತಿರುವವರೆಲ್ಲ ಮುಂದೊಂದು ದಿನ ತಮಗೂ ನಿವೃತ್ತಿ ಆಗುತ್ತೆ ಅನ್ನೋದನ್ನ ಯಾಕೆ ಮರೆತುಬಿಡ್ತಾರೆ? ಅವರ ದೃಷ್ಟಿಯಲ್ಲಿ ರಿಟೈರ್‌ ಆದವರೆಲ್ಲ ಕೆಲಸಕ್ಕೆ ಬಾರದವರಾ? ಅವನನ್ನು ಅಲ್ಲೇ ಹಿಡಿದು ನಾಲ್ಕು ತದುಕಬೇಕೆಂಬ ಕೋಪವನ್ನು ಕಷ್ಟಪಟ್ಟು ಹತ್ತಿಕ್ಕಿಕೊಂಡು ಬ್ಯಾಂಕಿನತ್ತ ಬಿರಬಿರನೆ ನಡೆದರು. 

       ಬ್ಯಾಂಕಿನಲ್ಲಿ ಅವರನ್ನು ಕಂಡಕೂಡಲೇ ಎಲ್ಲರೂ ಆತ್ಮೀಯವಾಗಿಯೇ ಬರಮಾಡಿಕೊಂಡರು. “ಬನ್ನಿ ಸಾರ್.‌ ಯಾಕೆ ರಿಟೈರ್‌ ಆಗಿದ್ದು ಮರ್ತುಹೋಯ್ತಾ ಅಥವಾ ಮನೇಲಿ ಕೂತು ಬೋರಾಯ್ತು ಅಂತ ಬಂದ್ರಾ?” ಎಂದು ಸಿಬ್ಬಂದಿಗಳಲ್ಲೊಬ್ಬನಾದ ಹರೀಶ್‌ ಕೇಳಿದ. ರಾಯರಿಗೆ ಈ ಪ್ರಶ್ನೆಯಿಂದ ಕಸಿವಿಸಿ ಆಗಿದ್ದು ಸ್ಪಷ್ಟವಾಗಿತ್ತು. ಹರೀಶ್‌ ಕೇಳಿದ್ದರ ಉದ್ದೇಶ ಗೇಲಿ ಮಾಡುವುದೇನೂ ಆಗಿರಲಿಲ್ಲ. ಆದರೆ ಅವನ ಪ್ರಶ್ನೆಯ ಮೊದಲರ್ಧ ತಮ್ಮ ನೆನಪಿನ ಶಕ್ತಿಯನ್ನು ಪ್ರಶ್ನಿಸಿದಂತೆ ಹಾಗೂ ಉತ್ತರಾರ್ಧ ತಮಗೇನೂ ಕೆಲಸವಿಲ್ಲ ಎಂದು ತಮ್ಮನ್ನು ಗೇಲಿಮಾಡಿದಂತೆ ಅವರಿಗೆ ಅನ್ನಿಸಿತು. ತಮ್ಮ ಕಸಿವಿಸಿಯನ್ನು ಮುಚ್ಚಿಟ್ಟುಕೊಳ್ಳುತ್ತ ಹೇಳಿದರು “ಹಾಗೇನಿಲ್ಲ, ರಿಟೈರ್‌ ಆದರೂ ಇಷ್ಟುವರ್ಷ ನೀವೆಲ್ಲ ಕೊಟ್ಟ ಪ್ರೀತಿಯನ್ನು ಮರೆಯಲಾದೀತೇ? ಅದಕ್ಕೇ ನಿಮ್ಮನ್ನೆಲ್ಲ ಮಾತಾಡಿಸ್ಕೊಂಡು ಹೋಗೋಣ ಅಂತ ಬಂದೆ. ಜೊತೆಗೆ ಇವತ್ತು ಜಾಸ್ತಿ ರಷ್‌ ಇರುತ್ತೆ ಅಂತ ಗೊತ್ತು. ಆದ್ದರಿಂದ ನಿಮಗೆ ಹೊಸಬಳಾದ ಸ್ವಪ್ನಾಗೆ ಸಹಾಯ ಮಾಡೋಕೆ ಕಷ್ಟ ಆಗಬಹುದು. ಆದ್ದರಿಂದ ಅವಳಿಗೂ ಸ್ವಲ್ಪ ಸಹಾಯ ಮಾಡೋಣ ಅಂತ ಬಂದೆ” ಅವರ ಮಾತನ್ನು ಕೇಳಿ ಶ್ರೀಧರ್‌ ಹಲ್ಲು ಕಡಿಯುತ್ತ ಅವರನ್ನೇ ನುಂಗುವಂತೆ ನೋಡುತ್ತಿದ್ದುದು ಅವರ ಕಣ್ಣಿಗೆ ಬೀಳದಿದ್ದರೂ ಅಂಥ ಗೂಢಚಾರಿಕೆಯಲ್ಲೆಲ್ಲ ಎತ್ತಿದ ಕೈಯಾದ ಅಟೆಂಡರ್‌ ಸುಬ್ಬಯ್ಯನ ಕಣ್ಣಿಗೆ ಬಿತ್ತು. “ಬಲೇ ರಸಿಕ ಈ ಮುದುಕ. ಹುಣಸೆಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಅನ್ನೋ ಗಾದೆ ಇವನನ್ನು ನೋಡಿಯೇ ಹುಟ್ಟಿಕೊಂಡಿರಬೇಕು” ಎಂದು ಮನಸ್ಸಿನಲ್ಲೇ ನಕ್ಕ. 

       ರಾಯರು ಗ್ರಾಹಕರಂತೆ ಹೊರಗಡೆ ನಿಲ್ಲದೇ ಎಂದಿನಂತೆ ನೇರವಾಗಿ ಒಳಬಂದು ಕ್ಯಾಷ್‌ ಕೌಂಟರಿನ ಒಳಗೇ ಹೊಕ್ಕರು. ಅದನ್ನು ನಿರೀಕ್ಷಿಸಿರದಿದ್ದ ಸ್ವಪ್ನಾ ಒಂದು ಕ್ಷಣ ಅವಾಕ್ಕಾದರೂ ಕೂಡಲೇ ಸಾವರಿಸಿಕೊಂಡು ಕೇಳಿದಳು “ನಮಸ್ಕಾರ ಸರ್‌, ಕ್ಯಾಷ್‌ ಬೇಕಿತ್ತಾ?” ಅಂತ. “ಇಲ್ಲಮ್ಮಾ, ಕ್ಯಾಷ್‌ ಏನೂ ಬೇಡ. ನನಗೂ ಮನೆಯಲ್ಲಿ ಕೂತು ಬೋರಾಗ್ತಾ ಇತ್ತು. ಅದಕ್ಕೆ ಒಂದು ಸಲ ಬ್ಯಾಂಕಿಗೆ ಹೋಗಿಬರೋಣವೆಂದುಕೊಂಡು ಬಂದೆ. ಇಲ್ಲೂ ರಷ್‌ ಇರುತ್ತದಲ್ಲ, ಹಾಗಾಗಿ ನಿನ್ನ ಕಡೆ ಗಮನಹರಿಸಲು ಬೇರೆಯವರಿಗೆ ಸಮಯ ಇರುವುದಿಲ್ಲ. ಹಣದ ವಿಷಯದಲ್ಲಿ ಏನಾದರೂ ಹೆಚ್ಚುಕಮ್ಮಿ ಆದರೆ ಪಾಪ ನೀನೇ ಕೈಯಿಂದ ಕಟ್ಟಬೇಕಲ್ಲ, ಆದ್ದರಿಂದ ನಿನಗೂ ಸಹಾಯವಾದೀತೆಂದು ಬಂದೆ. ನನಗೆ ಇವತ್ತು ಬೇರೆ ಏನೂ ಕೆಲಸ ಇಲ್ಲ. ಇಲ್ಲೇ ಇದ್ದುಕೊಂಡು ನಿನಗೆ ಸಹಾಯ ಮಾಡ್ತೀನಿ” ಎಂದರು. ಸ್ವಪ್ನಾಳಿಗೆ ಇದು ನಿಜಕ್ಕೂ ಇರುಸು ಮುರುಸಾಯಿತು. ನಿನ್ನೆಯವರೆಗೆ ಸರಿ, ಅವರು ಸಿಬ್ಬಂದಿಯಾಗಿದ್ದರು. ಆದರೆ ಈಗ ನಿವೃತ್ತರಾದಮೇಲೂ ಅವರು ತನ್ನ ಕೌಂಟರಿನೊಳಗೆ ಬಂದು ಕೂರುವುದು ಅವಳಿಗೆ ಸರಿಕಾಣಲಿಲ್ಲ. “ಪರವಾಗಿಲ್ಲ ಸರ್‌, ನನಗೂ ಈಗ ಅಭ್ಯಾಸ ಆಗಿದೆ. ಕ್ಯಾಷ್‌ ಅಂದರೆ ಮೊದಲಿನಂತೆ ಭಯ ಏನಿಲ್ಲ. ನಾನು ನಿಭಾಯಿಸುತ್ತೇನೆ ಯೋಚನೆ ಮಾಡಬೇಡಿ. ಎಷ್ಟು ದಿನ ಇನ್ನೊಬ್ಬರ ಮೇಲೆ ಅವಲಂಬಿತವಾಗಿರುವುದು ಹೇಳಿ? ಅಲ್ಲದೇ ಇಷ್ಟು ದಿನ ಆದಮೇಲೂ ನಾನು ಸರಿಯಾಗಿ ಕಲಿತಿಲ್ಲವೆಂದರೆ ಅದು ನನಗೆ ಇಷ್ಟೊಂದು ಶ್ರದ್ಧೆಯಿಂದ ಎಲ್ಲವನ್ನೂ ಕಲಿಸಿದ ನಿಮಗೆ ಮಾಡುವ ಅವಮಾನ. ಆದರೂ ಸಹಾಯಹಸ್ತ ಚಾಚಿದ್ದಕ್ಕೆ ನಿಮಗೆ ಧನ್ಯವಾದ ಸರ್. ನಾನು ನಿಭಾಯಿಸುತ್ತೇನೆ ಯೋಚಿಸಬೇಡಿ. ನೀವು ಮನೆಗೆ ಹೋಗಿ ಆರಾಮವಾಗಿ ಕುಟುಂಬದವರ ಜೊತೆ ಕಾಲ ಕಳೆಯಿರಿ” ಎಂದು ಜಾಣ್ಮೆಯ ಉತ್ತರ ನೀಡಿದಳು. 

       ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕ್ಯಾಷ್‌ ಕೌಂಟರಿನಿಂದ ಆಚೆ ಬರುತ್ತಿದ್ದ ರಾಯರನ್ನು ನೋಡಿ ಶ್ರೀಧರ ಒಳಗೊಳಗೇ ನಗುತ್ತ ಅವರ ಬಳಿ ಬಂದ. “ಏನು ರಾಯರೇ? ಮನೆಯಲ್ಲಿ ಬೇಜಾರಾಗ್ತಾ ಇದೆಯಾ? ಹಾಗಾದರೆ ಪಾರ್ಕಿಗೆ ಹೋಗಿ ಸುತ್ತಾಡಿ. ಎಲ್ಲಾದರೂ ಟ್ರಿಪ್‌ ಹೋಗಿ. ನಿಮಗೇನು ಅರವತ್ತು ವರ್ಷ ಆಗಿದೆ ಅಂತ ಯಾರೂ ಹೇಳುವ ಹಾಗೇ ಇಲ್ಲ. ಅಷ್ಟೊಂದು ಕಳೆಕಳೆಯಾಗಿದ್ದೀರಿ. ದೇವರು ಒಳ್ಳೇ ಆರೋಗ್ಯ ಕೂಡ ಕೊಟ್ಟಿದ್ದಾನೆ. ಯಾಕೆ ಚಿಂತೆ ಮಾಡ್ತೀರಿ? ಮೂವತ್ತೈದು ವರ್ಷ ಬ್ಯಾಂಕಿಗಾಗಿ ದುಡಿದಿದ್ದೀರಿ. ಇನ್ನು ತಲೆಕೆಡಿಸಿಕೊಂಡಿದ್ದು ಸಾಕು. ಕ್ಯಾಷಿಯರ್‌ಗೆ ಏನಾದರೂ ಸಮಸ್ಯೆ ಬಂದರೆ ನಾನಿದ್ದೇನೆ. ನೀವು ಯೋಚನೆ ಮಾಡಬೇಡಿ. ಆರಾಮವಾಗಿ ಮನೆಗೆ ಹೋಗಿ” ಎಂದು ತನ್ನ ನಗುವನ್ನು ಕಷ್ಟಪಟ್ಟು ಮುಚ್ಚಿಟ್ಟುಕೊಂಡು ಹೇಳಿದ. ರಾಯರು ಬೇಸರದಿಂದ ಕ್ಯಾಷ್‌ ಕೌಂಟರನ್ನೇ ದಿಟ್ಟಿಸುತ್ತ ಹೊರಕ್ಕೆ ನಡೆದರು.




ProfileImg

Written by Srinivasa Murthy

Verified

0 Followers

0 Following