Do you have a passion for writing?Join Ayra as a Writertoday and start earning.

ಆಡಂಕಸ್:‌ ಅಧ್ಯಾಯ-2

ಆಡಂಕಸ್

ProfileImg
17 Apr '24
14 min read


image

‌        ನಾನು ಓಡಿಹೋಗಿ ಫ್ಯಾಂಟಮ್‌ನನ್ನು ಎದುರುಗೊಂಡು ಮನೆಯೊಳಕ್ಕೆ ಕರೆದುಕೊಂಡು ಬಂದೆ. ಯಾವುದೇ ಮುನ್ಸೂಚನೆಯಿಲ್ಲದೆ ದಿಢೀರ್‌ ಎಂದು ಅವನು ಬಂದಿದ್ದು ನನಗೆ ಆಶ್ಚರ್ಯವನ್ನುಂಟುಮಾಡಿತ್ತು. “ಮೂರ್ತಿ, ನಿನ್ನ ನಂಬರ್‌ಗೆ ಕಾಲ್‌ ಮಾಡಲು ಮೂರು ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದೇನೆ, ಸ್ವಿಚಾಫ್‌ ಬರುತ್ತಿದೆ. ಆದ್ದರಿಂದ ಹೀಗೆ ಹುಡುಕಿಕೊಂಡು ಮನೆಗೇ ಬರಬೇಕಾಯಿತು” ಎಂದ. ಆಗಲೇ ನನಗೆ ನಾನು ಮಾಡಿದ ಪ್ರಮಾದದ ಅರಿವಾಗಿದ್ದು!

       ಪ್ರವಾಸಕ್ಕೆ ಹೊರಡುವ ಹಿಂದಿನ ದಿನ ಬೆಳಗಿನ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಒಂದು ಹಿಂಡು ಮಂಗಗಳು ರಸ್ತೆ ದಾಟುತ್ತಿದ್ದವು. ಅವುಗಳನ್ನು ನೋಡುತ್ತ ನಿಂತಿದ್ದಾಗ ಮೊಬೈಲ್‌ ಕೂಗಲಾರಂಭಿಸಿತು. ಅದನ್ನು ಕಿಸೆಯಿಂದ ತೆಗೆಯುವಾಗ ನನ್ನ ಗಮನ ಮಂಗಗಳ ಮೇಲೇ ಇದ್ದುದರಿಂದ ಅದನ್ನು ಸರಿಯಾಗಿ ಹಿಡಿದುಕೊಳ್ಳಲಿಲ್ಲ. ಕೈಜಾರುತ್ತಿದ್ದ ಅದನ್ನು ಬಲವಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿದೆ. ಆ ಪ್ರಯತ್ನದಲ್ಲಿ ಕಾಲನ್ನು ಪಕ್ಕದಲ್ಲಿದ್ದ ಗುಂಡಿಯೊಂದರೊಳಕ್ಕೆ ಇಟ್ಟೆ. ನನ್ನ ಇಡೀ ದೇಹದ ಸಮತೋಲನ ತಪ್ಪಿ ಬಿದ್ದೆ. ಬೀಳುವಾಗ ಮೊಬೈಲ್‌ ನನ್ನ ಕೈಯಿಂದ ಚಿಮ್ಮಿ ದೂರಕ್ಕೆ ಬಿತ್ತು. ನಾನು ಸಾವರಿಸಿಕೊಂಡು ಎದ್ದೇಳುವಷ್ಟರಲ್ಲಿ ಆ ಮೊಬೈಲನ್ನು ಕೋತಿಯೊಂದು ಎತ್ತಿಕೊಂಡು ಕಾಡಿನ ಕಡೆಗೆ ಪಲಾಯನ ಮಾಡಿತ್ತು! ನಾನು ಅದೇ ನಂಬರಿಗೆ ನಕಲಿ ಸಿಮ್‌ ತೆಗೆದುಕೊಳ್ಳುವ ಬದಲು ಅವಸರಕ್ಕೆ ನನ್ನ ಬಳಿ ಇದ್ದ ಇನ್ನೊಂದು ಸಿಮ್‌ ಬಳಸಲಾರಂಭಿಸಿದ್ದೆ. ಆದರೆ ಆ ನಂಬರ್‌ ಫ್ಯಾಂಟಮ್‌ನ ಬಳಿ ಇರಲಿಲ್ಲ. ಬಹುಶಃ ಕೋತಿ ಎತ್ತಿಕೊಂಡು ಹೋದ ಮೊಬೈಲಿನಲ್ಲಿ ಚಾರ್ಜ್‌ ಖಾಲಿಯಾಗಿತ್ತೆಂದು ತೋರುತ್ತದೆ. ಆಮೇಲೆ ನಾನೆಷ್ಟು ಸಲ ಪ್ರಯತ್ನಿಸಿದರೂ ಅದು ಸ್ವಿಚ್‌ಆಫ್‌ ಎಂದೇ ಬರುತ್ತಿತ್ತು. ಆದ್ದರಿಂದ ನಾನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೆ. ಈಗ ಫ್ಯಾಂಟಮ್‌ ಹೇಳಿದಮೇಲೆ ಮತ್ತೆ ಅದೆಲ್ಲ ನೆನಪಾಯಿತು. 

       ನಾನು ಅವನ ಬಳಿ ಕ್ಷಮೆ ಕೋರಿ, ನಡೆದ ಘಟನೆಯನ್ನೆಲ್ಲ ಅವನಿಗೆ ವಿವರಿಸಿ ಅವನನ್ನು ಮನೆಯೊಳಕ್ಕೆ ಕರೆದೊಯ್ದೆ. ಅವನ ಮುಖ ಬಹಳ ಗಂಭೀರವಾಗಿತ್ತು. ಅವನನ್ನು ನಾನೆಂದೂ ಅಷ್ಟು ಗಂಭೀರ ಮುಖಭಾವದಲ್ಲಿ ಕಂಡಿರಲಿಲ್ಲ. ಸದಾ ಉಲ್ಲಾಸದಿಂದ ಎಲ್ಲರನ್ನೂ ನಕ್ಕುನಗಿಸುತ್ತಿದ್ದ ಆತ ಇಂದು ಅಷ್ಟೊಂದು ಗಂಭೀರವಾಗಿದ್ದಾನೆ ಎಂದರೆ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಊಹಿಸಿದೆ. “ಫ್ಯಾಂಟಮ್‌, ಏನಾಗಿದೆ ನಿಮಗೆ? ಯಾಕಿಷ್ಟು ಗಂಭೀರವಾಗಿದ್ದೀರಿ? ಏನಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೀರಾ? ನನ್ನಿಂದೇನಾದರೂ ಸಹಾಯ ಬೇಕಿದೆಯೇ?” ಎಂದು ಕೇಳಿದೆ. “ಸಮಸ್ಯೆ ಇರುವುದು ನಿಜ ಮೂರ್ತಿ, ಆದರೆ ಅದು ನನಗಲ್ಲ, ನಿಮಗೆ. ಅದರ ಬಗ್ಗೆ ನಿಮ್ಮನ್ನು ಎಚ್ಚರಿಸಲೆಂದೇ ಫೋನ್‌ ಮಾಡುತ್ತಿದ್ದೆ. ಆದರೆ ಸ್ಚಿಚಾಫ್‌ ಆಗಿದ್ದರಿಂದ ನಾನೇ ಎದ್ದುಬಂದೆ” ಎಂದ. ಸೋಫಾದ ಮೇಲೆ ಆಸೀನನಾದ ಅವನಿಗೆ ತಣ್ಣೀರು ತಂದುಕೊಟ್ಟೆ. 

       “ನಿಮ್ಮ ಮೊಬೈಲನ್ನು ಕೋತಿ ಎತ್ತಿಕೊಂಡು ಹೋದ ಜಾಗವನ್ನು ನಾನೊಮ್ಮೆ ನೋಡಬೇಕು. ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೀರಾ?” ಎಂದು ಕೇಳಿದ. “ನೀವು ಈಗಷ್ಟೇ ಬಂದಿದ್ದೀರಿ. ಇಂದು ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಅಲ್ಲಿಗೆ ಹೋಗಿ ನೋಡೋಣ. ಈಗ ಅಂಥ ಅವಸರವೇನಿದೆ?” ಎಂಬ ನನ್ನ ಸಲಹೆಯನ್ನು ನಿರ್ಲಕ್ಷಿಸಿ ಆ ಕೂಡಲೇ ಹೊರಡಬೇಕೆಂದು ಆಗ್ರಹಪಡಿಸಿದ. ಆತ ಬಲವಾದ ಕಾರಣವಿಲ್ಲದೆ ಹಾಗೆ ಹೇಳುವುದಿಲ್ಲವೆಂದು ನನಗೆ ಗೊತ್ತಿತ್ತು. ಹಾಗಾಗಿ ನಾನು ತಡಮಾಡದೆ ಹೊರಟೆ. 

       ಆ ಜಾಗ ನನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್‌ ದೂರವಿತ್ತು. ಇಬ್ಬರೂ ನಡೆದೇ ಹೊರಟೆವು. ಆ ಜಾಗಕ್ಕೆ ಬಂದಾಗ ನಾನು ಕಾಲು ಹಾಕಿದ್ದ ಗುಂಡಿಯನ್ನು ಅವನಿಗೆ ತೋರಿಸಿದೆ. ಮೊಬೈಲ್‌ ನೆಲಕ್ಕೆ ಬಿದ್ದಿದ್ದ ಅಂದಾಜು ಜಾಗವನ್ನು ಸಹ ಅವನಿಗೆ ತೋರಿಸಿದೆ. ಅವನು ಅಲ್ಲಿ ನಿಂತು ತಲೆಯೆತ್ತಿ ನೋಡಿದ. ಕೋತಿ ಅಲ್ಲಿಂದ ಮೊದಲು ಯಾವ ಮರಕ್ಕೆ ಹಾರಿತೆಂದು ನೆನಪಿದೆಯೇ ಎಂದು ಕೇಳಿದ. ಅದು ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ನೇರಳೆ ಮರಕ್ಕೆ ಹಾರಿದ್ದನ್ನು ಕಂಡಿದ್ದೆ. ಅದನ್ನೇ ಅವನಿಗೆ ಹೇಳಿದೆ. ಅವನು ಆ ಮರದ ಬುಡಕ್ಕೆ ಹೋಗಿ ತಲೆಯೆತ್ತಿ ನಿಂತು ಏನನ್ನೋ ಧ್ಯಾನಿಸತೊಡಗಿದ. 

       ನನಗೆ ಅವನ ನಡವಳಿಕೆ ಬಹಳ ವಿಚಿತ್ರವಾಗಿ ಕಂಡಿತು. “ಫ್ಯಾಂಟಮ್‌ ಸರ್‌, ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಅದನ್ನು ಈಗ ಕಂಡುಹಿಡಿಯಲು ಆಗುವುದಿಲ್ಲ. ಕಾಡಿನಲ್ಲಿ ಎಲ್ಲೋ ಬಿದ್ದುಹೋಗಿರುತ್ತದೆ. ನಾನು ಅದನ್ನು ಮತ್ತೆ ಪಡೆಯಬೇಕೆಂಬ ಆಸೆಯನ್ನೇನೂ ಹೊಂದಿಲ್ಲ. ಅಷ್ಟಕ್ಕೂ ಅದನ್ನು ಎತ್ತಿಕೊಂಡು ಹೋಗಿದ್ದು ಒಂದು ಕೋತಿಯಷ್ಟೆ? ಯಾರಾದರೂ ಮನುಷ್ಯರು ಕೊಂಡುಹೋಗಿದ್ದರೆ ಚಿಂತಿಸಲು ಕಾರಣವಿತ್ತು. ಅದನ್ನು ಇಟ್ಟುಕೊಂಡು ಏನೇನು ಮಾಡುತ್ತಾರೋ ಎನ್ನುವ ಭಯ ಇರುತ್ತಿತ್ತು. ಆದರೆ ಕೋತಿ ಹೆಚ್ಚೆಂದರೆ ಅದನ್ನು ಕುಟ್ಟಿ ಪುಡಿಪುಡಿ ಮಾಡಿರುತ್ತದೆ ಅಷ್ಟೆ. ಅದಕ್ಕಿಂತ ಹೆಚ್ಚು ಇನ್ನೇನೂ ಇಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದೆ. ಆದರೆ ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. “ನಿಮ್ಮ ದೃಷ್ಟಿಯಲ್ಲಿ ಅದೊಂದು ಬರೇ ಪುಂಡ ಕೋತಿಯಾಗಿರಬಹುದು. ಆದರೆ ನಾನು ಅದನ್ನು ನಂಬಲು ಸಿದ್ಧನಿಲ್ಲ. ನೀವಿಲ್ಲಿಗೆ ಬಂದಾಗಲೇ ನಿಮಗೆ ಕರೆ ಬಂದಿದ್ದು, ನೀವು ಹೊಂಡದೊಳಕ್ಕೆ ಕಾಲು ಹಾಕಿ ಬಿದ್ದಿದ್ದು, ನಿಮ್ಮ ಮೊಬೈಲ್‌ ಎಗರಿಬಿದ್ದಿದ್ದು, ಅದನ್ನು ಕೋತಿ ಎತ್ತಿಕೊಂಡು ಹೋಗಿದ್ದು ಇದು ಯಾವುದೂ ಆಕಸ್ಮಿಕವಲ್ಲ” ಎಂದು ಫ್ಯಾಂಟಮ್‌ ಮತ್ತೇನೋ ಯೋಚನೆ ಮಾಡುತ್ತ ನಿಂತ. 

       ನನಗೆ ಅವನ ಮಾತು ಕೇಳಿ ಆಘಾತವಾಯ್ತು. ಇವನು ಏನು ಹೇಳುತ್ತಿದ್ದಾನೆ? ಇದೆಲ್ಲ ಆಕಸ್ಮಿಕವಲ್ಲ ಎಂದರೆ ಯಾರು ಇದನ್ನೆಲ್ಲ ಮಾಡಿದ್ದು? ಕೋತಿಗಳು ಮನುಷ್ಯನಷ್ಟು ಬುದ್ಧಿವಂತಿಕೆಯಿಂದ ಆಲೋಚಿಸಿ ನನ್ನ ಮೊಬೈಲ್‌ ಲಪಟಾಯಿಸಲು ತಂತ್ರ ಮಾಡಿದ್ದವು ಎನ್ನುವುದು ನನಗೆ ನಿಜಕ್ಕೂ ನಂಬಲು ಕಷ್ಟವಾಯ್ತು. ಒಂದುವೇಳೆ ಅವು ಹಾಗೇ ಮಾಡಿದ್ದವು ಎಂದುಕೊಂಡರೂ ಅದರಿಂದ ಅವಕ್ಕೇನು ಲಾಭ? ಒಂದುವೇಳೆ ಅದೇನಾದರೂ ತಿನ್ನುವ ವಸ್ತುವಾಗಿದ್ದರೆ ಅದನ್ನು ಲಪಟಾಯಿಸಲು ತಂತ್ರ ಹೂಡಿದ್ದವು ಎನ್ನುವುದನ್ನು ನಂಬಬಹುದು. ಆದರೆ ಮೊಬೈಲ್‌ ತಗೊಂಡು ಅವು ಏನು ಮಾಡುತ್ತವೆ? ಕೋತಿಗಳಿಗೂ ಮೊಬೈಲ್‌ ಹುಚ್ಚು ಹಿಡಿದಿದೆಯೇ?

       ಫ್ಯಾಂಟಮ್‌ ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗದೆ ಮರದ ಮೇಲ್ಭಾಗವನ್ನೇ ದಿಟ್ಟಿಸುತ್ತಿದ್ದ. ಸ್ವಲ್ಪ ಹೊತ್ತಿನ ಬಳಿಕ ಸುತ್ತಮುತ್ತಲಿನ ಮರಗಳನ್ನೆಲ್ಲ ನೋಡತೊಡಗಿದ. ಅವನು ಮಂಗಗಳು ಎತ್ತ ಹೋದವೆಂದು ಊಹಿಸಲು ಪ್ರಯತ್ನಿಸುತ್ತಿದ್ದಾನೆಂದು ಭಾವಿಸಿದೆ. ಆಮೇಲೆ ತನ್ನ ಕೆಲಸ ಮುಗಿಯಿತೆಂದು ವಾಪಸ್‌ ಹೋಗೋಣವೆಂದು ಹೇಳಿದ. 

       ನಾವು ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕತೊಡಗಿದೆವು. ಆಗಲೇ ಸಂಜೆಗತ್ತಲು ಕವಿಯುತ್ತಿತ್ತು. ನಾನು ಮತ್ತು ಫ್ಯಾಂಟಮ್‌ ಇಬ್ಬರೂ ಅಕ್ಕಪಕ್ಕದಲ್ಲೇ ನಡೆಯುತ್ತಿದ್ದೆವು. ಫ್ಯಾಂಟಮ್‌ಗೆ ನಾನು ಪ್ರವಾಸ ಹೋಗಿದ್ದನ್ನೂ ಅಲ್ಲಿ ನಡೆದ ಸಂಗತಿಗಳನ್ನೂ ಚಾಚೂತಪ್ಪದೆ ವಿವರಿಸತೊಡಗಿದೆ. ಒಂದೊಂದು ವಾಕ್ಯವನ್ನೂ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತ, ಮಧ್ಯೆಮಧ್ಯೆ ಸಂಶಯ ಬಂದಾಗ ಪ್ರಶ್ನಿಸಿ ಪರಿಹರಿಸಿಕೊಳ್ಳುತ್ತ ಸಾಗಿದ.      

       ಮನೆಗೆ ಬಂದಮೇಲೆ ನಾನು ಇಬ್ಬರಿಗೂ ಕಾಫಿ ಮಾಡಿ ತಂದೆ. ಕಾಫಿ ಕುಡಿಯುತ್ತ ಫ್ಯಾಂಟಮ್‌ ಮತ್ತೆ ಮಾತಿಗಾರಂಭಿಸಿದ “ನೀವು ನಾಳೆಯಿಂದ ಒಂದು ವಾರ ರಜಾ ಹಾಕಿ. ನಾವು ಮತ್ತೆ ಆ ಬೀಚ್‌ ಹತ್ತಿರ ಹೋಗಬೇಕಿದೆ. ಅಪಾಯ ಇನ್ನೂ ದೂರವಾಗಿಲ್ಲ. ನಿಮ್ಮ ವಿವರಣೆಗಳನ್ನೆಲ್ಲ ಕೇಳುತ್ತಿದ್ದರೆ ಆ ವ್ಯಕ್ತಿ ನಿಮ್ಮನ್ನು ಮುಗಿಸಲು ಇನ್ನೂ ಪ್ರಯತ್ನಿಸುತ್ತಿದ್ದಾನೆ ಎಂದು ನನ್ನ ಮನಸ್ಸು ಹೇಳುತ್ತಿದೆ. ನೀವು ಎರಡು ಬಾರಿ ಸಮುದ್ರದ ನಡುವಿನಿಂದ ಸುರಕ್ಷಿತವಾಗಿ ಬಂದಿದ್ದರೂ ಇನ್ನೂ ಆ ವ್ಯಕ್ತಿ ನಿಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಲೇ ಇದ್ದಾನೆ. ನನ್ನ ಜೊತೆ ಬನ್ನಿ. ಅವನನ್ನು ಪತ್ತೆಹಚ್ಚಿ ಮುಗಿಸಲೇಬೇಕು. ಇಲ್ಲವಾದರೆ ನಿಮಗೆ ಉಳಿಗಾಲವಿಲ್ಲ. ಕೇವಲ ನಿಮಗಷ್ಟೇ ಅಲ್ಲ, ಇಡೀ ಜಗತ್ತಿಗೇ ದೊಡ್ಡ ಗಂಡಾಂತರಕಾರಿಯಾದ ವ್ಯಕ್ತಿ ಅವನು. ಆದಷ್ಟು ಬೇಗ ಅವನನ್ನು ಮುಗಿಸಬೇಕು” ಎಂದ. 

       ನನಗೆ ಆಶ್ಚರ್ಯವಾಯಿತು. ಈ ವ್ಯಕ್ತಿ ಏನು ಹೇಳುತ್ತಿದ್ದಾನೆ? ಹಾಗಾದರೆ ನಾವೀಗ ಕೊಲೆ ಮಾಡಲು ಹೋಗಬೇಕೆ? ಇಷ್ಟಕ್ಕೂ ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿ ಯಾರು ಮತ್ತು ಅವನು ಫ್ಯಾಂಟಮ್‌ಗೆ ಹೇಗೆ ಗೊತ್ತು? ತಡಮಾಡದೇ ನಾನು ಮರುಪ್ರಶ್ನೆ ಎಸೆದೆ “ಫ್ಯಾಂಟಮ್‌, ನನ್ನನ್ನು ಕೊಲ್ಲಲು ಯಾರು ಮತ್ತು ಏಕೆ ತಾನೆ ಪ್ರಯತ್ನಿಸುತ್ತಾರೆ? ನಾನು ಯಾರಿಗೂ ಯಾವತ್ತೂ ಕೇಡು ಬಯಸಿಲ್ಲ. ನನಗೆ ಅಂಥ ಶತ್ರುಗಳೂ ಯಾರೂ ಇಲ್ಲ. ಹಾಗಾದರೆ ಯಾರು ಆ ವ್ಯಕ್ತಿ? ಅವನೇಕೆ ನನ್ನನ್ನು ಗುರಿಮಾಡಿದ್ದಾನೆ ಮತ್ತು ಅದು ನಿಮಗೆ ಹೇಗೆ ಗೊತ್ತು?” ಇಷ್ಟೂ ಪ್ರಶ್ನೆಗಳನ್ನು ಒಂದೇ ಉಸಿರಿಗೆ ಕೇಳಿದೆ.

       “ಇದಕ್ಕೆಲ್ಲ ಉತ್ತರಿಸುವ ಕಾಲ ಶೀಘ್ರದಲ್ಲೇ ಬರುತ್ತದೆ. ಸದ್ಯಕ್ಕೆ ನೀವು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾಳೆಯಿಂದಲೇ ರಜಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ನಾನು ಸಹ ನಿಮ್ಮೊಂದಿಗೆ ನಾಳೆ ಬರುತ್ತಿದ್ದೇನೆ. ಸಾಧ್ಯವಾದರೆ ನಿಮ್ಮ ಗೆಳೆಯ ಅರವಿಂದರನ್ನೂ ಜೊತೆಗೆ ಬರಲು ಹೇಳಿ. ಈಗ ವಿಶ್ರಾಂತಿ ಬೇಕಿದೆ, ನನಗೆ ಹಾಗೂ ನಿಮಗೆ ಇಬ್ಬರಿಗೂ… ಹಾಗಾಗಿ ಬೇಗ ಮಲಗೋಣ” ಎಂದ. ನಾನು ಒಪ್ಪಿ ತಲೆಯಾಡಿಸಿ, ರಜಕ್ಕಾಗಿ ಬಾಸ್‌ಗೆ ಹಾಗೂ ಮರುದಿನ ನಮ್ಮೊಂದಿಗೆ ಬರುವಂತೆ ಅರವಿಂದನಿಗೆ ಇಬ್ಬರಿಗೂ ಒಂದೊಂದು ವಾಟ್ಸಪ್‌ ಮೆಸೇಜ್‌ ಕಳುಹಿಸಿ ಮಲಗಿದೆ. 

       ಮರುದಿನ ಬೆಳಿಗ್ಗೆ ಬೇಗನೇ ಎದ್ದೆ. ಅರವಿಂದ ಕೂಡ ತಯಾರಾಗಿ ಬಂದ. ಅವನಿಗೆ ಫ್ಯಾಂಟಮ್‌ನ ಪರಿಚಯ ಮಾಡಿಸಿದೆ. ಫ್ಯಾಂಟಮ್‌ನನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂಬ ಕನಸು ಕಂಡಿದ್ದ ಅವನಿಗೆ ಬಹಳ ಸಂತೋಷವಾಗಿತ್ತು. ಈ ಸಲ ನನ್ನ ಕಾರನ್ನೂ ತಾನೇ ಚಲಾಯಿಸುವುದಾಗಿ ಫ್ಯಾಂಟಮ್‌ ಹೇಳಿದ. ನಾನು ಒಪ್ಪಿಕೊಂಡು ಕಾರಿನ ಕೀಯನ್ನು ಅವನಿಗೆ ಹಸ್ತಾಂತರಿಸಿದೆ. 

       ನಾವು ಬೀಚನ್ನು ತಲುಪಿದಾಗ ಫ್ಯಾಂಟಮ್‌ ನನಗೆ ಹೇಳಿದ “ಇಂದು ಸಂಜೆ ನಾವು ಮತ್ತೆ ತಿಮಿಂಗಿಲಗಳನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ. ನೀವು ಒಂದು ದೋಣಿಯಲ್ಲಿ ಮುಂದೆ ಇರುತ್ತೀರಿ ಮತ್ತು ನಾನು ಇನ್ನೊಂದು ದೋಣಿಯಲ್ಲಿ ನಿಮ್ಮನ್ನು ಹಿಂಬಾಲಿಸುತ್ತೇನೆ. ನಿಮಗೇನಾದರೂ ಸಮಸ್ಯೆ ಎದುರಾದರೆ ಕೂಡಲೇ ಅದೇನೆಂದು ನಾನು ಪರಿಶೀಲಿಸುತ್ತೇನೆ ಹಾಗೂ ಅದಕ್ಕೆ ಶೀಘ್ರದಲ್ಲೇ ಪರಿಹಾರ ಕೂಡ ಕಂಡುಹಿಡಿಯುತ್ತೇನೆ” ಎಂದ. ನಾವು ಅವನನ್ನು ನಮ್ಮದೇ ದೋಣಿಯಲ್ಲಿ ಬರಲು ಕೇಳಿಕೊಂಡೆವು. ಆದರೆ ತನ್ನ ಉದ್ದೇಶ ಕೊಲೆಗಾರರನ್ನು ಕಂಡುಹಿಡಿಯುವುದು ಹಾಗೂ ನಮ್ಮೊಂದಿಗೇ ಬಂದರೆ ಆ ಉದ್ದೇಶ ಈಡೇರುವುದಿಲ್ಲವೆಂದು ಹೇಳಿದ. ಅಲ್ಲದೇ ನಮಗೆ ಮೊದಲ ದಿನ ನಮ್ಮನ್ನು ಮುಳುಗಿಸಲು ಪ್ರಯತ್ನಿಸಿದ ಅದೇ ದೋಣಿಯ ಅದೇ ಚಾಲಕನನ್ನು ಪತ್ತೆಹಚ್ಚಿ ಅವನ ದೋಣಿಯಲ್ಲೇ ಹೊರಡುವಂತೆ ಕೇಳಿಕೊಂಡ. ತಾನು ಇನ್ನೊಂದು ದೋಣಿ ಹಿಡಿದುಕೊಂಡು ಕಣ್ಣಳತೆಯಲ್ಲೇ ನಮ್ಮನ್ನು ಹಿಂಬಾಲಿಸುವುದಾಗಿ ಮಾತುಕೊಟ್ಟ. 

       ಮೊನ್ನೆ ಹತ್ತಿದ್ದ ದೋಣಿಯ ಮಾಲೀಕನನ್ನು ಹೇಗೆ ಹುಡುಕುವುದು? ಯೋಚನೆ ಮಾಡುತ್ತಿದ್ದಂತೆ ಅವನೊಂದಿಗೆ ದೋಣಿಯೇರುವಾಗ ತೆಗೆದುಕೊಂಡಿದ್ದ ಸೆಲ್ಫಿ ನೆನಪಾಯಿತು. ನನ್ನ ಮೊಬೈಲಿನಲ್ಲಿ ತಡಕಾಡಿ ಆ ಫೋಟೋ ತೆಗೆದು ಅದನ್ನು ಅಲ್ಲಿದ್ದ ಬೇರೆಬೇರೆ ದೋಣಿಯವರ ಮುಖಕ್ಕೆ ಹಿಡಿಯತೊಡಗಿದೆ. ಆತ ಯಾರೆಂದು ಕೇಳಿದೆನಲ್ಲದೆ, ಅವನ ದೋಣಿಯಲ್ಲಿ ನನ್ನ ಕ್ಯಾಮರಾದ ಲೆನ್ಸ್‌ ಒಂದನ್ನು ಬಿಟ್ಟಿರುವುದರಿಂದ ಅವನೊಡನೆ ಮಾತನಾಡಬೇಕಾಗಿದೆ ಎಂದೆ. ಏಕೆಂದರೆ ಅವನ ದೋಣಿಯಲ್ಲೇ ಹೋಗಲು ನಾವು ಯೋಚಿಸುತ್ತಿದ್ದೇವೆ ಎನ್ನುವುದನ್ನು ಬೇರೆ ದೋಣಿಯವರಿಗೆ ಹೇಳಿದರೆ, ಅವರು ಖಂಡಿತ ಅವನ ಹೆಸರು ಅಥವಾ ಬೇರೆ ವಿವರಗಳನ್ನು ಹೇಳುವುದಿಲ್ಲವೆಂದು ಗೊತ್ತಿತ್ತು. ತಮಗೆ ಬರಬೇಕಾದ ಗಿರಾಕಿಯನ್ನು ಯಾರಾದರೂ ತಾವಾಗಿಯೇ ಇನ್ನೊಬ್ಬನಿಗೆ ಬಿಟ್ಟುಕೊಡುತ್ತಾರೆಯೇ? ನನ್ನ ಪ್ರಶ್ನೆಗೆ ಅಲ್ಲಿದ್ದ ಪ್ರತಿಯೊಬ್ಬ ಅಂಬಿಗನಿಂದಲೂ ಗೊತ್ತಿಲ್ಲ ಎನ್ನುವ ಉತ್ತರವೇ ಬಂತು. ಏನು ಮಾಡುವುದೆಂದು ಫ್ಯಾಂಟಮ್‌ನತ್ತ ತಿರುಗಿದೆ. ಅವನು ಯಾವುದಾದರೊಂದು ದೋಣಿ ಹತ್ತಿಕೊಳ್ಳಿ ಪರವಾಗಿಲ್ಲ ಎಂಬ ಸಲಹೆ ಕೊಟ್ಟ. ಆಮೇಲೆ ಯಾವುದೋ ಒಂದು ದೋಣಿಯನ್ನು ಹತ್ತಿಕೊಂಡೆವು. ನಮ್ಮ ದೋಣಿ ಮುಂದೆ ಹೋಗುತ್ತಿದ್ದಂತೆಯೇ ಫ್ಯಾಂಟಮ್‌ ಹಿಂದಿನ ಇನ್ನೊಂದು ದೋಣಿಯಲ್ಲಿ ನಮ್ಮನ್ನು ಹಿಂಬಾಲಿಸಿಕೊಂಡು ಬರುವುದು ಕಣ್ಣಿಗೆ ಬಿತ್ತು. 

       ನಾವು ಎಂದಿನಂತೆ ಸಮುದ್ರದಲ್ಲಿ ಡಾಲ್ಫಿನ್‌ಗಳಿರುವ ಪ್ರದೇಶಕ್ಕೆ ಬರುತ್ತಿದ್ದಂತೆ ಸಮುದ್ರದ ಆಳದಲ್ಲಿ ಪ್ರಕ್ಷುಬ್ಧತೆ ಆರಂಭವಾಯಿತು. ದೋಣಿಯನ್ನು ಎತ್ತಿಹಾಕಲು ಆಳೆತ್ತರದ ಸಮುದ್ರದ ಅಲೆಗಳು ಎದ್ದುಬಂದವು. ನಮ್ಮ ಹಿಂದಿನ ದಿನದ ಅನುಭವದ ಆಧಾರದ ಮೇಲೆ ನಾವು ದೋಣಿಯ ನೆಲದ ಮೇಲೆ ಉದ್ದಕ್ಕೆ ಮಲಗಿದೆವು. ಗಟ್ಟಿಯಾಗಿ ತಬ್ಬಿಕೊಂಡು ಮಲಗುವಂತೆ ದೋಣಿಯ ಚಾಲಕ ಕೂಗಿಹೇಳಿದ. 

       ಆದರೆ ಆ ಹೊಯ್ದಾಟ ಕ್ಷಣಮಾತ್ರದ್ದಾಗಿತ್ತು. ಒಂದೇ ನಿಮಿಷದಲ್ಲಿ ದೋಣಿ ಸ್ತಬ್ಧವಾಗಿ ನೀರಿನ ಮೇಲೆ ನಿಂತಿತು. ಆ ಕ್ಷಣ ಸುತ್ತಮುತ್ತಲೂ ಆಳೆತ್ತರದ ಅಲೆಗಳು ಏಳುತ್ತಲೇ ಇದ್ದರೂ ನಮ್ಮ ದೋಣಿಯ ಬುಡದಲ್ಲಿ ಮಾತ್ರ ಯಾವುದೇ ಅಲೆಗಳು ಏಳಲಿಲ್ಲ. ನಿಧಾನವಾಗಿ ಹರಿಯುವ ನೀರಿನ ಮೇಲೆ ಮೆಲ್ಲಗೆ ತೇಲುವ ತೆಪ್ಪದಂತೆ ದೋಣಿ ತೇಲತೊಡಗಿತು. ಸುತ್ತಲಿನ ಅಲೆಗಳು ನಮಗೆ ಸ್ವಲ್ಪವೇ ದೂರದ ಯಾವ ದೃಶ್ಯವೂ ಕಣ್ಣಿಗೆ ಕಾಣದಷ್ಟು ಎತ್ತರಕ್ಕೆ ಎದ್ದು ಕೋಟೆಯಂತೆ ನಮ್ಮ ದೋಣಿಯನ್ನು ಸುತ್ತುವರೆದಿದ್ದರೂ ನಮ್ಮ ದೋಣಿಯ ಅಡಿಯ ನೀರು ಮಾತ್ರ ಯಾವುದೋ ಬಲವಾದ ಅದೃಶ್ಯಹಸ್ತದಿಂದ ಒತ್ತಿಹಿಡಿದಂತೆ ಶಾಂತವಾಗಿತ್ತು. ಸುತ್ತಲಿನ ಅಲೆಗಳ ನಡುವೆ ನನಗೆ ಅದೇ ಅಸ್ಥಿಪಂಜರ ಕಾಣಿಸಿಕೊಂಡರೂ ಈ ಸಲ ಅದು ಗಹಗಹಿಸಿ ನಗುತ್ತಿರಲಿಲ್ಲ. ಅಸಹನೆಯಿಂದ ಮುಖ ಕಿವುಚುತ್ತಿತ್ತು. ತನ್ನಿಂದ ಈತ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನುವ ಅಸಹನೆ ಇರಬೇಕು. ದೋಣಿ ಯಾವುದೋ ಒಂದು ದಿಕ್ಕಿಗೆ ತನ್ನಷ್ಟಕ್ಕೆ ತಾನೇ ಚಲಿಸತೊಡಗಿತು. ಅದರ ಚಾಲಕ ಗಾಬರಿಯಿಂದ ಕುಳಿತಿದ್ದ. ಅವನಿಗೆ ಸುಮ್ಮನೆ ಕೂರುವಂತೆ ನಾವೇ ಸನ್ನೆ ಮಾಡಿದೆವು. ಹಿಂದಿನ ದಿನ ನಮ್ಮನ್ನು ಕಾಪಾಡಿದ್ದ ಅಗೋಚರ ವ್ಯಕ್ತಿಯೇ ಇಂದು ಸಹ ಕಾಪಾಡುತ್ತಿದ್ದಾನೆ, ಆದ್ದರಿಂದ ಯೋಚನೆ ಮಾಡಬೇಕಾಗಿಲ್ಲ ಎನ್ನುವುದು ನನಗೆ ಅರ್ಥವಾಗಿತ್ತು. 

       ನಮ್ಮ ದೋಣಿ ಸುರಕ್ಷಿತವಾಗಿ ದಡಕ್ಕೆ ತಲುಪಿತು. ನಾನು ದೋಣಿಯಿಂದ ಕೆಳಕ್ಕಿಳಿಯುತ್ತಿದ್ದಂತೆ ಅಲ್ಲಿ ಇನ್ನೊಂದು ದೋಣಿಯ ಬಳಿ ಬೆನ್‌ ಫ್ಯಾಂಟಮ್‌ ನಿಂತಿದ್ದ. ಅವನನ್ನು ಕಂಡೊಡನೆ ನನಗೆ ಒಮ್ಮೆಲೇ ಕೋಪ ಉಕ್ಕಿತು. “ನಮ್ಮನ್ನು ಕಾಪಾಡುತ್ತೇನೆ, ನಮ್ಮ ಹಿಂದೆಯೇ ಇರುತ್ತೇನೆಂದು ಹೇಳಿ ನಮ್ಮನ್ನು ಸಮುದ್ರಕ್ಕೆ ತಳ್ಳಿ ನೀವೇನು ಚಂದ ನೋಡುತ್ತ ನಿಂತಿದ್ದೀರಾ? ನಮ್ಮನ್ನು ಮೊನ್ನೆ ಕಾಪಾಡಿದ ಅದೃಶ್ಯವ್ಯಕ್ತಿ ಇಲ್ಲದಿದ್ದರೆ ನಾವು ಇವತ್ತು ಸಾಯಬೇಕಾಗಿತ್ತು. ಯಾಕೆ ಹೀಗೆ ಕೈಕೊಟ್ಟಿರಿ?” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದೆ. ಫ್ಯಾಂಟಮ್‌ ಅದಕ್ಕೆ ಮುಗುಳ್ನಗುವಿನ ಹೊರತು ಯಾವ ಉತ್ತರವನ್ನೂ ಕೊಡಲಿಲ್ಲ. ನಮಗಿಂತ ಮೊದಲೇ ಅಲ್ಲಿ ಬಂದು ಸುರಕ್ಷಿತವಾಗಿ ನಿಂತಿದ್ದಲ್ಲದೇ ಈಗ ಕೇಳಿದರೆ ಸುಮ್ಮನೆ ನಗುತ್ತಿದ್ದಾನೆ! ಈ ವ್ಯಕ್ತಿಯನ್ನು ನಂಬಿಕೊಂಡು ನಾನು ತಪ್ಪು ಮಾಡಿದೆನೇ?

       ನನ್ನ ಬಳಿ ಬಂದು ನನ್ನ ಹೆಗಲ ಮೇಲೆ ಕೈಹಾಕಿ ಹೇಳಿದ “ಸಮಾಧಾನದಿಂದಿರಿ ಮೂರ್ತಿ, ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿಕ್ಕೇ ನಾನಿಲ್ಲಿಗೆ ಬಂದಿರುವುದು. ಸಮಸ್ಯೆಯ ಮೂಲ ಗೊತ್ತಾಯಿತು. ಇನ್ನು ಪರಿಹಾರ ಕಂಡುಹಿಡಿಯುವುದೇನೂ ಕಷ್ಟವಿಲ್ಲ. ನಾಳೆ ಸಂಜೆಯೊಳಗೆ ಶತ್ರುಸಂಹಾರ ಆಗುತ್ತದೆ. ಆಮೇಲೆ ನಾವು ವಾಪಸ್‌ ಹೋಗಬಹುದು” ಎಂದ. ನನಗೆ ಎಲ್ಲವೂ ಅಯೋಮಯವಾಗಿ ಕಂಡಿತು. 

       ನಾವು ನಮ್ಮ ಕೋಣೆಯತ್ತ ಹೊರಟೆವು. ಫ್ಯಾಂಟಮ್‌ ನಮ್ಮ ಜೊತೆಗೇ ನಡೆದುಬರುತ್ತಿದ್ದರೂ ಸುತ್ತೆಲ್ಲ ನೋಡುತ್ತ ಜಾಗರೂಕತೆಯಿಂದ ಬರುತ್ತಿದ್ದ. ಅವನು ಯಾರಿಗಾಗಿ ಹಾಗೆ ಮಾಡುತ್ತಿದ್ದಾನೆ ಎನ್ನುವುದು ತಿಳಿಯಲಿಲ್ಲ. ಕೋಣೆಗೆ ಹೋದಮೇಲೆ ಮೂವರೂ ಕುಳಿತು ಒಟ್ಟಿಗೆ ಊಟ ಮಾಡಿದೆವು. ಹಿಂದಿನ ದಿನದ ಆತಂಕ ಫ್ಯಾಂಟಮ್‌ ಮುಖದಲ್ಲಿ ಮಾಯವಾಗಿ ಪ್ರಸನ್ನತೆ ಕಂಡುಬಂದಿತು. ಊಟವಾದ ಬಳಿಕ ನಮ್ಮನ್ನು ಆ ಕೋಣೆಯಲ್ಲಿ ಬಿಟ್ಟು ಅವನು ಪಕ್ಕದ ಕೋಣೆಗೆ ಹೋದ. 

       ಮರುದಿನ ಬೆಳಿಗ್ಗೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಕಾಫಿ ಕುಡಿದು ನಮ್ಮ ಕೋಣೆಯಿಂದ ನಾನು ಮತ್ತು ಅರವಿಂದ ಹೊರಕ್ಕೆ ಬಂದೆವು. ಫ್ಯಾಂಟಮ್‌ ಅವನ ಕೋಣೆಯಿಂದ ಹೊರಕ್ಕೆ ಬಂದು ನಮ್ಮನ್ನು ಕಂಡು ಗುಡ್‌ ಮಾರ್ನಿಂಗ್‌ ಹೇಳಿದ. ಅವನು ತನ್ನ ಎಲ್ಲ ಚಿಂತೆಗಳನ್ನೂ ಬದಿಗಿಟ್ಟು ಪ್ರಸನ್ನವದನನಾಗಿ ನಿಂತಿದ್ದ. “ಬನ್ನಿ, ಒಂದು ವಾಕ್‌ ಹೋಗಿಬರೋಣ” ಎಂದು ಕರೆದ. ನಾವು ಮರುಮಾತನಾಡದೆ ಅವನನ್ನು ಹಿಂಬಾಲಿಸಿದೆವು. 

       ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದೆಡೆ ರಸ್ತೆಯ ಬದಿಗೆ ಒಂದಿಷ್ಟು ಜನ ಗುಂಪಾಗಿ ಸೇರಿದ್ದುದು ಕಣ್ಣಿಗೆ ಬಿತ್ತು. ಅದೇನೆಂದು ನೋಡಲು ನಾವು ಹತ್ತಿರ ಹೋದೆವು. ಪೋಲೀಸರು ಅಲ್ಲಿ ಗುಂಪಾಗಿದ್ದ ಜನರನ್ನು ಸ್ವಲ್ಪ ದೂರಕ್ಕೆ ನಿಲ್ಲಿಸಿದ್ದರು. ನೆಲದ ಮೇಲೆ ಸುಮಾರು ನಲವತ್ತು ವರ್ಷ ವಯಸ್ಸಿನ ವಿದೇಶೀಯನೊಬ್ಬನ ಶವ ಇತ್ತು. ಆದರೆ ನನ್ನ ಗಮನಸೆಳೆದಿದ್ದು ಆ ಶವದ ಹಣೆಯ ಮೇಲಿದ್ದ ಅಸ್ಥಿಪಂಜರದ ಚಿತ್ರ! ಈ ಸಲ ಆ ಅಸ್ಥಿಪಂಜರ ಅಡ್ಡಡ್ಡ ಮಲಗಿದಂತೆ ನಿಶ್ಚಲವಾಗಿತ್ತು. ಪೋಲೀಸರು ಅಲ್ಲಿ ನಿಂತಿದ್ದ ಭಯಭೀತ ವ್ಯಕ್ತಿಯೊಬ್ಬನನ್ನು ಪ್ರಶ್ನಿಸುತ್ತಿದ್ದರು. ಆತ ಹೇಳುತ್ತಿದ್ದ “ನಾನು ಎಂದಿನಂತೆ ಬೆಳಿಗ್ಗೆ ವಾಕಿಂಗ್‌ ಬಂದಾಗ ಈ ವ್ಯಕ್ತಿ ಇಲ್ಲಿ ಬಿದ್ದಿದ್ದು ಕಣ್ಣಿಗೆ ಬಿತ್ತು ಅಷ್ಟೆ. ನಾನು ಗಾಬರಿಯಾಗಿ ಬಂದು ನಿಮಗೆ ಹೇಳಿದೆ. ಅದು ಬಿಟ್ಟರೆ ನನಗೇನೂ ಗೊತ್ತಿಲ್ಲ” ಎನ್ನುತ್ತಿದ್ದಾನೆ. ಪೋಲೀಸರು ಹುಷಾರಾಗಿ ಶವವನ್ನು ತಿರುಗಿಸಿ ಬೆನ್ನು ಮೇಲೆ ಮಾಡಿ ಮಲಗಿಸಿದರು. ಶವದ ಮೈಮೇಲೆಲ್ಲ ಹಲ್ಲಿನಿಂದ ಕಚ್ಚಿದ ಗುರುತುಗಳಿದ್ದವು. ರಕ್ತ ಧಾರಾಕಾರವಾಗಿ ಹರಿದಿತ್ತು. ಆದರೆ ಆ ಹಲ್ಲುಗಳು ಯಾವ ಪ್ರಾಣಿಯದ್ದೆಂದು ಪೋಲೀಸರು ನಿರ್ಧರಿಸದಾಗಿದ್ದರು. 

       “ಬನ್ನಿ, ನಾವು ಮುಂದೆ ಹೋಗೋಣ” ಎಂದು ಫ್ಯಾಂಟಮ್‌ ನಮ್ಮನ್ನು ಮುಂದಕ್ಕೆ ಕರೆದೊಯ್ದ. “ಮೂರ್ತಿ, ನಿಮ್ಮ ಸಂಶಯಗಳಿಗೆ ಈಗ ಒಂದೊಂದಾಗಿ ಪರಿಹಾರ ಹೇಳುತ್ತೇನೆ ಕೇಳಿ. ನಿಮ್ಮನ್ನು ಮೊದಲ ಸಲ ದೋಣಿಯಿಂದ ಕೆಳಕ್ಕೆ ಕೆಡವಿ ಕೊಲ್ಲಲು ಪ್ರಯತ್ನಿಸಿದಾಗ ಇನ್ನೇನು ಮುಳುಗಿಹೋಗುತ್ತಿದ್ದ ನಿಮ್ಮನ್ನು ನನ್ನ ಸ್ನೇಹಿತ ಆಡಂಕಸ್‌ ರಕ್ಷಿಸಿದ. ಎರಡನೇ ದಿನ ಮತ್ತೆ ನಿಮ್ಮ ದೋಣಿಯನ್ನು ತಲೆಕೆಳಗೆ ಮಾಡಲು ಪ್ರಯತ್ನಿಸಿದಾಗಲೂ ಆಡಂಕಸ್‌ ನಿಮ್ಮ ಸಹಾಯಕ್ಕೆ ಬಂದ. ಅವನ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ನಿಮ್ಮ ದೋಣಿಗೆ ಸಮುದ್ರದ ಅಲೆಗಳ ಹೊಡೆತ ತಾಗದಂತೆ ಬಲವಾದ ರಕ್ಷಣಾಕೋಟೆಯನ್ನೇ ನಿರ್ಮಿಸಿದ. ನಿನ್ನೆ ಸಹ ಅವನೇ ತನ್ನ ಸ್ನೇಹಿತರ ಜೊತೆ ಬಂದು ನಿಮ್ಮನ್ನು ಕಾಪಾಡಿದ್ದು. ಆಡಂಕಸ್‌ ನನ್ನ ಆತ್ಮೀಯ ಸ್ನೇಹಿತ. ಆತ ನನಗೆ ಬೇಕಾದವರಿಗೆ ಯಾವುದೇ ತೊಂದರೆಯಾದರೂ ಸಹಿಸುವುದಿಲ್ಲ” ಎಂದ. ನನ್ನ ತಲೆಯಲ್ಲಿ ಮಿಂಚು ಹೊಳೆದಂತಾಯಿತು. ನಾನು ಮೊದಲ ಸಲ ಬಚಾವಾಗಿ ಬಂದ ಮರುದಿನ ದಂಡೆಯ ಮೇಲೆ ಓಡಾಡುತ್ತಿದ್ದಾಗ ಕೇಳಿದ ಅಪರಿಚಿತ ಧ್ವನಿ ತನ್ನನ್ನು ತಾನು ಆಡಂಕಸ್‌ ಎಂದು ಪರಿಚಯಿಸಿಕೊಂಡಿತ್ತು ಅಲ್ಲವೇ? ಆದರೆ ಆ ಧ್ವನಿಯ ಮೂಲವನ್ನು ಕಂಡುಹಿಡಿಯಲು ನನಗೆ ಸಾಧ್ಯವಾಗಿರಲಿಲ್ಲ. ಫ್ಯಾಂಟಮ್‌ನನ್ನೇ ಕೇಳಿದೆ “ಫ್ಯಾಂಟಮ್‌, ಈ ಆಡಂಕಸ್‌ ಎಂದರೆ ಯಾರು? ಕನಿಷ್ಠ ಅವನನ್ನು ನೋಡಿ ಒಂದು ಧನ್ಯವಾದವನ್ನಾದರೂ ಅವನಿಗೆ ಅರ್ಪಿಸಬೇಕಿತ್ತು. ಆದರೆ ಆತ ನನ್ನ ಕಣ್ಣಿಗೇ ಕಾಣಿಸಿಕೊಂಡಿಲ್ಲ. ಅವನು ಸಹ ನಿನ್ನಂತೆ ಜಾದೂಗಾರನೇ? ಯಾಕೆ ಒಮ್ಮೆಯೂ ಕಣ್ಣಿಗೆ ಕಾಣಿಸಿಕೊಂಡಿಲ್ಲ?” ಎಂದು ಕೇಳಿದೆ. “ಯಾರು ಹೇಳಿದ್ದು ಕಾಣಿಸಿಕೊಂಡಿಲ್ಲ ಎಂದು? ಅವನು ತುಂಬಾ ಸಲ ನಿಮಗೆ ಕಾಣಿಸಿಕೊಂಡಿದ್ದಾನೆ, ಆದರೆ ನೀವೇ ಅವನನ್ನು ಗುರುತಿಸಿಲ್ಲ ಅಷ್ಟೇ” ಎಂದು ನಕ್ಕ. 

       “ಅದೆಲ್ಲ ಸರಿ, ಆದರೆ ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವ ಮಹಾನುಭಾವ ಯಾರು? ಆತ ಯಾಕೆ ನನ್ನ ಮೇಲೆ ದಾಳಿ ಮಾಡಿದ? ಆ ವಿಷಯ ನಿನಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದೆ. “ನಾನು ಒಂದೊಂದಾಗಿ ಹೇಳುತ್ತೇನೆ ಕೇಳಿ. ನಿನ್ನ ಕಳೆದುಹೋದ ಮೊಬೈಲ್‌ ಮೂಲಕ ನಿನ್ನ ಯೋಜನೆಗಳನ್ನೆಲ್ಲ ಆ ವ್ಯಕ್ತಿ ತಿಳಿದುಕೊಂಡ. ಅದರಲ್ಲಿ ನಿಮ್ಮ ಎಲ್ಲ ಯೋಜನೆಗಳನ್ನೂ ವಾಟ್ಸಪ್‌ನಲ್ಲಿ ನಿಮ್ಮ ಗೆಳೆಯನ ಜೊತೆ ಚರ್ಚಿಸಿದ್ದಿರಲ್ಲ? ಅದನ್ನೆಲ್ಲ ಆ ವ್ಯಕ್ತಿ ತಿಳಿದುಕೊಂಡಿದ್ದಾನೆ. ನೀವು ಸಮುದ್ರಕ್ಕೆ ತಿಮಿಂಗಿಲ ನೋಡಲು ಹೋಗುವುದನ್ನು ತಿಳಿದುಕೊಂಡ ಆ ವ್ಯಕ್ತಿ ಮೊದಲಿಗೆ ನಿಮಗೆ ಬುಕ್‌ ಆಗಿದ್ದ ದೋಣಿಯ ಚಾಲಕನನ್ನು ಹಣ ಕೊಟ್ಟು ತನ್ನ ಕಡೆ ಮಾಡಿಕೊಂಡ. ಆ ವ್ಯಕ್ತಿಯೇ ಮೊದಲ ದಿನ ನಿಮ್ಮನ್ನು ಕೆಳಕ್ಕೆ ಬೀಳಿಸಲು ಯತ್ನಿಸಿದ್ದು. ಆದರೆ ನಾನು ಆಡಂಕಸ್‌ಗೆ ಮೊದಲೇ ತಿಳಿಸಿ ನಿಮ್ಮ ರಕ್ಷಣೆಗೆ ಏರ್ಪಾಟು ಮಾಡಿದ್ದರಿಂದ ನೀವು ಉಳಿದುಕೊಂಡಿರಿ” ಎಂದ. ನನಗೆ ಕೂಡಲೇ ಮರುದಿನ ನನ್ನನ್ನು ಜೀವಂತವಾಗಿ ಕಂಡಕೂಡಲೇ ಆ ದೋಣಿಯ ಚಾಲಕ ಗಾಬರಿಯಾಗಿದ್ದೇಕೆಂದು ನನಗೆ ಆಗ ಅರ್ಥವಾಯಿತು.

       “ನಿಮಗೆ ಅಪಾಯ ಉಂಟಾಗಿದ್ದು ನನ್ನ ಗಮನಕ್ಕೆ ಬಂದಕೂಡಲೇ ನಿಮ್ಮನ್ನು ಎಚ್ಚರಿಸುವ ಸಲುವಾಗಿ ನನ್ನ ವಿಶೇಷ ಟೆಲಿಪತಿ ತಂತ್ರಜ್ಞಾನದ ಮೂಲಕ ಡಾಲ್ಫಿನ್‌ ಒಂದನ್ನು ಬಳಸಿಕೊಂಡು ನಿಮಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದೆ. ಆದರೆ ನಾನು ನಿಮ್ಮಿಂದ ಇದ್ದ ಅತಿಯಾದ ದೂರ ನನಗೆ ಅಡ್ಡಿಯಾಯಿತು. ನನ್ನ ಟೆಲಿಪತಿಯಲ್ಲಿ ನಾನಿನ್ನೂ ಸಂಪೂರ್ಣವಾದ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಷ್ಟು ದೂರದಿಂದ ಡಾಲ್ಫಿನ್‌ ಅನ್ನು ಸರಿಯಾಗಿ ನಿಯಂತ್ರಿಸಲಾಗಲಿಲ್ಲ. ಅದು ನಿಮ್ಮೆದುರು ಮೂರ್ತರೂಪ ತಳೆದ ಕೆಲವೇ ಕ್ಷಣಗಳಲ್ಲಿ ಅದೃಶ್ಯವಾಯಿತು. ಸದ್ಯಕ್ಕೆ ನನ್ನ ಈ ಟೆಲಿಪತಿ ಸುಮಾರು ಹತ್ತು ಕಿಲೋಮೀಟರ್‌ ವ್ಯಾಪ್ತಿಯೊಳಗೆ ಮಾತ್ರ ಸಮರ್ಥವಾಗಿ ಕೆಲಸ ಮಾಡುತ್ತದೆ. ಆದರೆ ನಾನು ಅದಕ್ಕಿಂತ ದೂರದಲ್ಲಿದ್ದುದರಿಂದ ನನ್ನ ಪ್ರಯತ್ನ ಯಶಸ್ವಿಯಾಗಲಿಲ್ಲ. ಹಾಗಾಗಿ ಇಲ್ಲಿಗೇ ಹುಡುಕಿಕೊಂಡು ಬಂದೆ” ಎಂದ. 

       ಅಷ್ಟರಲ್ಲಿ ಬಿಸಿಲೇರಲಾರಂಭಿಸಿತು. ನಾವು ವಾಪಸ್‌ ಹೊರಟೆವು. “ನೀವು ಹೋಗಿರಿ. ನನಗೆ ಸ್ವಲ್ಪ ಕೆಲಸವಿದೆ. ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ” ಎಂದು ಹೇಳಿ ಫ್ಯಾಂಟಮ್‌ ನಮ್ಮನ್ನು ಕಳುಹಿಸಿದ. ನಾವು ಕೋಣೆಗೆ ಬಂದು ಕುಳಿತು ದಣಿವಾರಿಸಿಕೊಳ್ಳುತ್ತ ಏನನ್ನೋ ಓದುತ್ತ ಕುಳಿತೆವು. ಅರ್ಧಗಂಟೆಯ ಬಳಿಕ ಫ್ಯಾಂಟಮ್‌ ಬಂದ. “ಮೂರ್ತಿ, ನಾವು ಆಗ ನೋಡಿದೆವಲ್ಲ, ಆ ಮನುಷ್ಯ ಸತ್ತಿದ್ದು ಡಾಲ್ಫಿನ್‌ಗಳ ದಾಳಿಯಿಂದ ಎಂದು ಕಾಣುತ್ತದೆ. ಮಧ್ಯರಾತ್ರಿ ಎದ್ದು ಸಮುದ್ರದ ದಂಡೆಯ ಮೇಲೆ ಕುಳಿತಿದ್ದನಂತೆ. ಆಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿರಬೇಕು. ಅಲ್ಲಿ ಡಾಲ್ಫಿನ್‌ಗಳು ಅವನನ್ನು ಯಾವುದೋ ತಪ್ಪು ಕಲ್ಪನೆಯಿಂದ ಕಚ್ಚಿ ಕೊಂದುಹಾಕಿವೆ ಎನ್ನಿಸುತ್ತದೆ” ಎಂದ.

       “ನಾವು ಇಂದು ಸಂಜೆ ಸಮುದ್ರದಲ್ಲಿ ಇನ್ನೊಂದು ಪ್ರಯಾಣ ಹೋಗೋಣ. ಇವತ್ತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್‌ಗಳನ್ನು ನೋಡುವ ಅವಕಾಶ ಸಿಗಲಿದೆ. ನಾನು ಸ್ವಲ್ಪಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಸಂಜೆ ಐದು ಗಂಟೆಗೆ ಸಿದ್ಧವಾಗಿ” ಎಂದು ತನ್ನ ಕೋಣೆಗೆ ಹೋದ. ನಾನು ಅಲ್ಲೇ ಸಮೀಪದಲ್ಲಿದ್ದ ಗ್ರಂಥಾಲಯಕ್ಕೆ ಹೋದೆ. ಅಲ್ಲಿ ಎಸ್.ಎಚ್.‌ ಪ್ರೇಟರ್‌ ಅವರ ದ ಬುಕ್‌ ಆಫ್‌ ಇಂಡಿಯನ್‌ ಅನಿಮಲ್ಸ್‌ ತೆಗೆದುಕೊಂಡು ಓದತೊಡಗಿದೆ. ಅದರಲ್ಲಿ ಇಂಡೋ-ಪ್ಯಾಸಿಫಿಕ್‌ ಬಾಟಲ್‌ನೋಸ್‌ ಡಾಲ್ಫಿನ್‌ನ ಪರಿಚಯ ಇತ್ತು. ಅದರಲ್ಲಿ ಅದರ ವೈಜ್ಞಾನಿಕ ನಾಮಧೇಯ ಟರ್ಸಿಯೋಪ್ಸ್‌ ಆಡಂಕಸ್‌ ಎಂದಿತ್ತು! 

       ನನ್ನ ತಲೆಯಲ್ಲಿ ಮತ್ತೊಮ್ಮೆ ಮಿಂಚಿನ ಸಂಚಾರವಾಗಿತ್ತು! ಆಡಂಕಸ್‌ ಎಂದರೆ ಬಾಟಲಿಮೂತಿಯ ಡಾಲ್ಫಿನ್!‌ ಹಾಗಾದರೆ ಮೊನ್ನೆ ನನ್ನೊಂದಿಗೆ “ನಾನು ಆಡಂಕಸ್” ಎಂದು ಸಂಭಾಷಿಸಿದ್ದು ಮನುಷ್ಯನಲ್ಲ, ಡಾಲ್ಫಿನ್‼‌ ಬೇರೆಲ್ಲ ಡಾಲ್ಫಿನ್‌ಗಳು ಹೋದ ಬಳಿಕವೂ ಒಂದು ಡಾಲ್ಫಿನ್‌ ಬಹಳ ಸಮಯ ಇತ್ತಲ್ಲ, ಅದೇ ಈ ಫ್ಯಾಂಟಮ್‌ನ ಸ್ನೇಹಿತ ಆಡಂಕಸ್‌ ಇರಬಹುದೇ? ಅನುಮಾನವೇ ಇಲ್ಲ! ನನಗೆ ಎಲ್ಲವೂ ಸ್ಪಷ್ಟವಾಗತೊಡಗಿತು! ನಾನು ಲೈಬ್ರರಿಯಿಂದ ಹೊರಕ್ಕೆ ಬರುತ್ತಿದ್ದಂತೆ ಫ್ಯಾಂಟಮ್‌ ಸಹ ನಿದ್ರೆಯಿಂದ ಎಚ್ಚೆತ್ತು ಹೊರಕ್ಕೆ ಬಂದ. ಅವನ ಮುಖದಲ್ಲಿ ಮುಗುಳ್ನಗೆ ಮೂಡಿತು. ನನಗೆ ಎಲ್ಲ ತಿಳಿಯಿತೆಂದು ಅವನಿಗೂ ಅರ್ಥವಾಯಿತೆಂದು ತೋರುತ್ತದೆ. 

       ಮೂವರೂ ಸೇರಿ ಸಮುದ್ರಕ್ಕೆ ಮತ್ತೆ ಹೊರಟೆವು. ಈ ಬಾರಿ ನಾವು ದಂಡೆಗೆ ಹೋಗುವಷ್ಟರಲ್ಲಿ ಮೊದಲ ದಿನ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದ ಅದೇ ಅಂಬಿಗ ಇದ್ದ! ನಮ್ಮನ್ನು ನೋಡಿ ಅವನು ಅದುರಿಬಿದ್ದ. ಬೆನ್‌ ಫ್ಯಾಂಟಮ್‌ ನನ್ನನ್ನುದ್ದೇಶಿಸಿ ಗಟ್ಟಿಯಾಗಿ ಹೇಳಿದ “ಮೂರ್ತಿ, ನಾವಿವತ್ತು ಇದೇ ದೋಣಿಯಲ್ಲಿ ಹೋಗುತ್ತಿದ್ದೇವೆ. ನಾವು ನಾಲ್ವರೂ ಯಾವುದೇ ಅಪಘಾತಗಳಿಲ್ಲದೆ ಸುರಕ್ಷಿತವಾಗಿ ಮರಳಿಬರುತ್ತೇವೆ ಎಂದು ಆಶಿಸಿದ್ದೇನೆ. ಏನಾದರೂ ಹೆಚ್ಚುಕಡಿಮೆಯಾಗಿ ನಾನು, ನೀವು ಮತ್ತು ಅರವಿಂದ ಮೂವರೇ ಮರಳಿಬರುವಂಥ ಪರಿಸ್ಥಿತಿ ನಿರ್ಮಾಣವಾಗುವುದು ಬೇಡ ಎನ್ನುವುದು ನನ್ನ ಆಸೆ. ಆದರೆ ಈ ಅಂಬಿಗನ ಮನಸ್ಸಿನಲ್ಲೂ ಅದೇ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ” ಅವನತ್ತ ತೀಕ್ಷ್ಣವಾಗಿ ನೋಡುತ್ತ ಫ್ಯಾಂಟಮ್‌ ಹೇಳಿದ. ಗಡಗಡನೆ ನಡುಗುತ್ತಿದ್ದ ಆತ “ಅರ್ಥವಾಯಿತು ಸ್ವಾಮಿ, ಎಲ್ಲರೂ ಸುರಕ್ಷಿತವಾಗಿ ಮರಳಿಬರುತ್ತೇವೆ. ಇದು ಖಂಡಿತ” ಎಂದು ತೊದಲಿದ. ಫ್ಯಾಂಟಮ್‌ ನನ್ನನ್ನು ನೋಡಿ ಮುಗುಳ್ನಕ್ಕು ದೋಣಿಯನ್ನೇರುವಂತೆ ಹೇಳಿದ. ನಾವು ಮೂವರೂ ದೋಣಿ ಏರಿದೆವು. 

       ನಾವು ಎಂದಿನಂತೆ ಡಾಲ್ಫಿನ್‌ ವಲಯದತ್ತ ಹೋದೆವು. ಈ ಸಲ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಸಮುದ್ರದಲ್ಲಿ ಮಾಮೂಲಿಯಾಗಿ ಅಲ್ಲೊಂದು ಇಲ್ಲೊಂದು ಅಲೆ ಏಳುತ್ತಿದ್ದರೂ ನಮ್ಮ ದೋಣಿಯನ್ನು ಗುರಿಯಾಗಿರಿಸಿಕೊಂಡು ಯಾವುದೇ ದಾಳಿ ನಡೆಯಲಿಲ್ಲ. ಆದರೆ ಅಂಬಿಗ ಮಾತ್ರ ಪ್ರತಿಯೊಂದು ಅಲೆ ಮೇಲೆದ್ದಾಗಲೂ ಗಡಗಡನೆ ನಡುಗುತ್ತ ಫ್ಯಾಂಟಮ್‌ನತ್ತ ನೋಡುತ್ತಿದ್ದ. ಎಲ್ಲಿ ಫ್ಯಾಂಟಮ್‌ ಅದನ್ನು ನಮ್ಮ ಮೇಲೆ ಮಾಡಿದ ದಾಳಿ ಎಂದು ತಿಳಿದು ತನ್ನ ಮೇಲೆ ಕೋಪಗೊಂಡಾನೇನೋ ಎನ್ನುವ ಭಯ ಅವನಿಗೆ. 

       ಅಷ್ಟರಲ್ಲಿ ಡಾಲ್ಫಿನ್‌ಗಳ ಮೆರವಣಿಗೆ ನಮ್ಮ ದೋಣಿಯ ಬಳಿ ಬರತೊಡಗಿತು. ಅವುಗಳ ನಡುವಿನಿಂದ ನನ್ನ ಚಿರಪರಿಚಿತ ಆಡಂಕಸ್‌ ಕೂಡ ಮೇಲೆದ್ದು ಬಂತು. ಈ ಸಲ ನಾನು ಅದನ್ನು ನೋಡಿದಕೂಡಲೇ ಕೈ ಮೇಲೆತ್ತಿ “ಆಡಂಕಸ್, ನಿನಗೆ ಅನಂತಾನಂತ ಧನ್ಯವಾದಗಳು” ಎಂದು ಜೋರಾಗಿ ಕೂಗಿದೆ. ಆಡಂಕಸ್‌ಗೆ ಇದು ಅಚ್ಚರಿ ಉಂಟುಮಾಡಿರಬೇಕು. ವೇಗವಾಗಿ ನಮ್ಮ ದೋಣಿಯತ್ತ ಬಂದು, ದೋಣಿಯ ಪಕ್ಕದಲ್ಲೇ ನಿಂತು ನಮ್ಮತ್ತ ಮುಖ ಮುಂದೆಮಾಡಿತು. ನಾನು ಅದನ್ನು ಮೆಲ್ಲಗೆ ನೇವರಿಸಿದೆ. “ಮೂರ್ತಿ, ನನಗಿವತ್ತು ಬಹಳ ಸಂತೋಷವಾಗಿದೆ. ಇನ್ನು ನಿನಗೆ ಯಾವ ತೊಂದರೆಯೂ ಎದುರಾಗುವುದಿಲ್ಲ. ಮೂರು ಸಲ ನಾನು ನಿನ್ನನ್ನು ಕಾಪಾಡಲು ಪ್ರಯತ್ನಿಸಿದ್ದು ಸಾರ್ಥಕವಾಯಿತು. ಸದಾ ಖುಷಿಯಾಗಿರು” ಎಂದಿತು. ಫ್ಯಾಂಟಮ್‌ ಸಹ ಪ್ರೀತಿಯಿಂದ ಅದರ ತಲೆ ನೇವರಿಸಿದ. ಅರವಿಂದನಂತೂ ಇದೇ ಮೊದಲ ಸಲ ಇಷ್ಟು ಹತ್ತಿರದಿಂದ ಡಾಲ್ಫಿನ್‌ಅನ್ನು ನೋಡುತ್ತಿದ್ದ. 

       ಡಾಲ್ಫಿನ್‌ಗಳನ್ನು ಬೀಳ್ಕೊಟ್ಟು ನಾವು ಕೋಣೆಗೆ ಮರಳಿದೆವು. ಅವತ್ತೇ ಊರಿಗೆ ಮರಳಬೇಕೆಂದು ಫ್ಯಾಂಟಮ್‌ನಲ್ಲಿ ವಿನಂತಿಸಿಕೊಂಡು ಹೊರಟೆವು. ಮನೆಗೆ ಬರುವಾಗ ರಾತ್ರಿ ಹತ್ತುಗಂಟೆ ಆಗಿತ್ತು. ಅರವಿಂದ ತನ್ನ ಮನೆಗೆ ಹೋದ. ಫ್ಯಾಂಟಮ್‌ ಸಹ ಅಂದು ರಾತ್ರಿಯ ಬಸ್ಸಿಗೇ ಬೆಂಗಳೂರಿಗೆ ಹೊರಟ. ಹಾಗಾಗಿ ಮನೆಯಲ್ಲಿ ನಾನೊಬ್ಬನೇ ಉಳಿದೆ.

       ಮರುದಿನ ಬೆಳಿಗ್ಗೆ ಎದ್ದು ಮಾಮೂಲಿನಂತೆ ಕಾಫಿ ಹೀರುತ್ತ ಪೇಪರ್‌ ತೆಗೆದೆ. ಅದರ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ “ಖ್ಯಾತ ಜಾದೂಗಾರ ಮೈಕೆಲ್‌ ಸ್ಮಿತ್‌ ಸಾವು” ಎಂಬ ವರದಿ ಬಂದಿತ್ತು. ಕುತೂಹಲದಿಂದ ಆ ವರದಿಯನ್ನು ಓದತೊಡಗಿದೆ. ಆಸ್ಟ್ರೇಲಿಯಾದ ಖ್ಯಾತ ಜಾದೂಗಾರ ಮೈಕೆಲ್‌ ಸ್ಮಿತ್‌ ಭಾರತದ ಕುದಾಪುರ ಬೀಚ್‌ನ ಬಳಿ ಸಮುದ್ರಕ್ಕೆ ಬಿದ್ದು ರಾತ್ರಿ ಡಾಲ್ಫಿನ್‌ಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ ಎಂಬ ವರದಿ ಅದರಲ್ಲಿತ್ತು. ಜೊತೆಗೆ ಅಲ್ಲಿದ್ದ ಚಿತ್ರ ಕೂಡ ಹಿಂದಿನ ದಿನ ನಾವು ನೋಡಿದ್ದ ಅದೇ ಮೃತದೇಹ! ಹಾಗಾದರೆ ನಾವು ನೋಡಿದ್ದು ಇದೇ ಮೈಕೆಲ್‌ ಸ್ಮಿತ್‌ನನ್ನೇ! ಹಿಂದೆಂದೂ ಆತನನ್ನು ಟಿವಿಯಲ್ಲಾಗಲೀ ಪೇಪರ್‌ನಲ್ಲಾಗಲೀ ನೋಡಿರದಿದ್ದರಿಂದ ನನಗೆ ಅದು ಅವನೆಂದು ಗೊತ್ತಾಗಿರಲಿಲ್ಲ. “ಏನು ಮೂರ್ತಿ, ಪೇಪರ್‌ ಓದಿ ನನಗೆ ಫೋನ್‌ ಮಾಡುತ್ತಿದ್ದೀರಾ?” ಎಂದು ನಗುತ್ತ ಕೇಳಿದ. “ಹೌದು, ನನ್ನ ಸಂಶಯಗಳು ಒಂದೊಂದಾಗಿ ನಿವಾರಣೆಯಾಗುತ್ತಿವೆ. ಆದರೆ ಇನ್ನೂ ಪೂರ್ತಿ ನಿವಾರಣೆಯಾಗಿಲ್ಲ” ಎಂದೆ. “ಮೂರ್ತಿ, ನೀವು ಎಂಎಸ್‌ ಎಂಬ ಎರಡು ಪದಗಳನ್ನು ನೆನಪಿಸಿಕೊಳ್ಳಿ. ಆಗ ನಿಮಗೆ ಎಲ್ಲವೂ ನೆನಪಾಗುತ್ತದೆ. ಹತ್ತು ವರ್ಷಗಳ ಹಿಂದೆ ನನ್ನನ್ನು ನೀವು ಕಾಪಾಡಿದ್ದಕ್ಕೆ ಪ್ರತಿಯಾಗಿ ನಾನು ನಿಮ್ಮನ್ನು ಕಾಪಾಡಿದ್ದೇನೆ ಎಂದು ಬೇಕಾದರೂ ಅಂದುಕೊಳ್ಳಿ. ಆದರೆ ಅವನಿಂದ ಇಡೀ ಜಗತ್ತಿಗೇ ಅಪಾಯವಿದ್ದುದಂತೂ ನಿಜ” ಎಂದು ಹೇಳಿ ಫೋನ್‌ ಇಟ್ಟ.

           ಸುಮಾರು ಹತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಜಾದೂಗಾರರ ಸಮಾವೇಶಕ್ಕೆ ನಾನು ಹೋಗಿದ್ದಾಗ ಅಲ್ಲಿ ಮೊದಲ ದಿನ ಬೆನ್‌ ಫ್ಯಾಂಟಮ್‌ನ ಪ್ರದರ್ಶನದ ಸಂದರ್ಭದಲ್ಲಿ ನಾನು ಅವನ ಜೊತೆ ಇದ್ದೆ. ಅಂದು ರಾತ್ರಿ ನಾನು ಮತ್ತು ಫ್ಯಾಂಟಮ್‌ ಅಲ್ಲಿದ್ದ ಉದ್ಯಾನದಲ್ಲಿ ಓಡಾಡುತ್ತಿದ್ದಾಗ ಮುಖಕ್ಕೆ ಮಾಸ್ಕ್‌ ಮತ್ತು ತಲೆಯನ್ನು ಸುತ್ತುವರೆದಿದ್ದ ಮಫ್ಲರ್‌ ಧರಿಸಿದ್ದ ವ್ಯಕ್ತಿಯೊಬ್ಬ ಫ್ಯಾಂಟಮ್‌ನ ತಲೆಗೆ ದೊಡ್ಡ ಕಬ್ಬಿಣದ ರಾಡ್‌ನಿಂದ ಹೊಡೆಯಲು ನುಗ್ಗಿದ್ದ. ನಾನು ಅವನಿಗಿಂದ ಸ್ವಲ್ಪ ಹಿಂದೆ ಇದ್ದಿದ್ದರಿಂದ ನನಗೆ ಅದು ಕಣ್ಣಿಗೆ ಬಿತ್ತು. ಕಡೆಯ ಕ್ಷಣದಲ್ಲಿ ನಾನು ಮುನ್ನುಗ್ಗಿ ಆ ವ್ಯಕ್ತಿಯನ್ನು ಪಕ್ಕಕ್ಕೆ ತಳ್ಳಿದ್ದೆ. ಫ್ಯಾಂಟಮ್‌ಗೆ ಬೀಳಬೇಕಾಗಿದ್ದ ಏಟು ತಪ್ಪಿತ್ತು. ಆದರೆ ಅವನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ನಮ್ಮಿಬ್ಬರ ಕಣ್ಣುತಪ್ಪಿಸಿ ಅವನು ಓಡಿಹೋಗಿದ್ದ. ನಾವು ಈ ಬಗ್ಗೆ ಆಸ್ಟ್ರೇಲಿಯನ್‌ ಪೋಲೀಸರಿಗೆ ದೂರು ಕೊಡಬೇಕೆಂದು ನಿರ್ಧರಿಸಿದ್ದೆವು. ಆದರೆ ಅದಾಗಿ ಕೆಲವೇ ಕ್ಷಣಗಳಲ್ಲಿ ಫ್ಯಾಂಟಮ್‌ನ ತಂದೆ ತೀರಿಕೊಂಡಿದ್ದಾರೆಂದು ವರ್ತಮಾನ ಬಂದಿತ್ತು. ಆದ್ದರಿಂದ ಮರುದಿನದ ಸಮ್ಮೇಳನಕ್ಕೆ ಸಹ ನಾವು ಹಾಜರಾಗದೆ ರಾತ್ರೋರಾತ್ರಿ ಸಿಡ್ನಿಯ ವಿಮಾನ ನಿಲ್ದಾಣಕ್ಕೆ ಓಡಿ ಲಂಡನ್‌ ವಿಮಾನಕ್ಕೆ ಅವಸರವಾಗಿ ಹತ್ತಿದ್ದೆವು. ಈ ಗಡಿಬಿಡಿಯಲ್ಲಿ ನಾವು ಆ ದಾಳಿಯ ವಿಚಾರವನ್ನೇ ಮರೆತುಬಿಟ್ಟಿದ್ದೆವು. ಇದಾಗಿ ಕೆಲವು ದಿನಗಳ ಬಳಿಕ ಫ್ಯಾಂಟಮ್‌ ಒಮ್ಮೆ “ಅಂದು ನನ್ನ ಮೇಲೆ ದಾಳಿ ಮಾಡಿದ್ದ ವ್ಯಕ್ತಿ ಎಂಎಸ್‌ ಎಂಬ ಜಾದೂಗಾರ ಇರಬೇಕು. ಆದರೆ ಅವನೇ ಎಂದು ಸಾಬೀತುಪಡಿಸಲು ನನ್ನಲ್ಲಿ ಸಾಕ್ಷ್ಯಗಳಿಲ್ಲ. ಅವನು ಪ್ರಾಣಿಗಳನ್ನು ವಶೀಕರಣ ಮಾಡಿಕೊಂಡು ಅವುಗಳಿಂದ ದುಷ್ಕೃತ್ಯಗಳನ್ನು ಮಾಡಿಸುವ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾನೆ. ಒಂದುವೇಳೆ ಅವನು ಅದರಲ್ಲಿ ಯಶಸ್ವಿಯಾದರೆ ದೊಡ್ಡ ಗಂಡಾಂತರವೇ ಕಾದಿದೆ. ಅವನು ಪ್ರಾಣಿಗಳನ್ನು ಛೂಬಿಟ್ಟು ತನಗಾಗದವರನ್ನೆಲ್ಲ ಕೊಲ್ಲಿಸಬಹುದು ಅಥವಾ ತೊಂದರೆಗೆ ಸಿಕ್ಕಿಹಾಕಿಸಬಹುದು. ಅದು ಪ್ರಾಣಿಗಳ ದಾಳಿ ಎಂದೇ ದಾಖಲಾಗುವುದರಿಂದ ಯಾರೂ ಅವನ ಮೇಲೆ ಅನುಮಾನ ಪಡುವಂತೆಯೇ ಇಲ್ಲ” ಎಂದು ವಿವರಿಸಿದ್ದ. ಆ ಎಂಎಸ್‌ನೇ ಈ ಮೈಕೆಲ್‌ ಸ್ಮಿತ್‌ ಎಂದು ನನಗೀಗ ಅರ್ಥವಾಯಿತು. 

         ಫ್ಯಾಂಟಮ್‌ಗೆ ಮತ್ತೆ ಕರೆ ಮಾಡಿ ನನ್ನ ನೆನಪಿಗೆ ಬಂದ ವಿಷಯವನ್ನೂ ನನ್ನ ಊಹೆಗಳನ್ನೂ ಹೇಳಿದೆ. “ಹೌದು, ಅದೇ ಈ ಮೈಕೆಲ್‌ ಸ್ಮಿತ್.‌ ಅವನು ಅಸಾಮಾನ್ಯ ವ್ಯಕ್ತಿ. ಅಂದು ನೀವು ನನ್ನನ್ನು ಕಾಪಾಡಿದ್ದಕ್ಕೆ ನಿಮ್ಮ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ನನ್ನ ಬಳಿಯೂ ಜಾದೂ ತಂತ್ರಗಳಿರುವುದರಿಂದ ನೇರವಾಗಿ ನನ್ನನ್ನು ಎದುರಿಸಲು ಅವನಿಂದ ಸಾಧ್ಯವಿಲ್ಲ. ಆದರೆ ನನ್ನನ್ನು ಕಾಪಾಡಿದ ನಿಮ್ಮನ್ನು ಮುಗಿಸಿದರೆ ನನ್ನನ್ನು ದುರ್ಬಲಗೊಳಿಸಬಹುದು ಎಂಬ ಊಹೆಯಿಂದ ಅವನು ನಿಮ್ಮ ಬೆನ್ನುಹತ್ತಿದ. ಆ ಕೋತಿ ನಿಮ್ಮ ಮೊಬೈಲನ್ನು ಎಗರಿಸಿದ್ದು ಆಕಸ್ಮಿಕ ಅಲ್ಲವೇ ಅಲ್ಲ. ಅದು ಅವನು ವಶೀಕರಿಸಿಕೊಂಡು ಅವನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕೋತಿ. ಅವನು ನಿಮ್ಮ ಹಿಂದೆ ಬಿದ್ದಿರುವುದು ನನಗೆ ಗೊತ್ತಾಗುವಷ್ಟರಲ್ಲಿ ಕೋತಿ ನಿಮ್ಮ ಮೊಬೈಲನ್ನು ಎಗರಿಸಿಬಿಟ್ಟಿತ್ತು. ಹಾಗಾಗಿ ನಾನೇ ಖುದ್ದಾಗಿ ಬಂದೆ. ಹಾಗೆಯೇ ಸಮುದ್ರದಾಳದಲ್ಲಿ ಸಹ ನಿಮ್ಮ ದೋಣಿಯ ಕೆಳಗೆ ಅಗೋಚರ ಮಾರುತಗಳನ್ನು ಸೃಷ್ಟಿಸಿ, ನಿಮ್ಮನ್ನು ಮುಳುಗಿಸುವ ಹುನ್ನಾರ ಮಾಡಿದ್ದ. ಆದರೆ ನನ್ನ ಮಿತ್ರ ಆಡಂಕಸ್‌ ನೆರವಿನಿಂದ ನಿಮ್ಮನ್ನು ಉಳಿಸುವುದು ಸಾಧ್ಯವಾಯಿತು. ಅಲ್ಲದೇ ಅವನನ್ನು ಕೊಂದಿದ್ದು ಸಹ ಅದೇ ಆಡಂಕಸ್.‌ ಅಂದು ರಾತ್ರಿ ನೀವು ಮಲಗಿದಮೇಲೆ ನಾನು ನಿಮ್ಮಂತೆ ವೇಷ ಬದಲಾಯಿಸಿಕೊಂಡು ಅವನ ಕೋಣೆಯ ಎದುರಿನಿಂದಲೇ ಹಾದು ಸಮುದ್ರದ ಬಳಿಗೆ ಹೋದೆ. ಅವನು ನೀವೆಂದೇ ತಿಳಿದು ನನ್ನ ಹಿಂದೆ ಬಂದ. ಆಗ ಅವನು ಸಮುದ್ರಕ್ಕೆ ಬೀಳುವಂತೆ ಮಾಡಿ, ಆಡಂಕಸ್‌ನ ಬಾಯಿಗೆ ಸಿಲುಕಿಕೊಳ್ಳುವಂತೆ ಮಾಡಿ ಅವನ ಮಂತ್ರವನ್ನು ಅವನಿಗೇ ತಿರುಮಂತ್ರ ಮಾಡಿದೆ. ಅವನನ್ನು ಕೊಲ್ಲದೇ ಬೇರೆ ದಾರಿಯೇ ಇರಲಿಲ್ಲ. ನೀವು ಇನ್ನು ಚಿಂತೆ ಮಾಡಬೇಡಿ. ಒಬ್ಬ ದುಷ್ಟನ ಸಂಹಾರವಾಯಿತು” ಎಂದು ಹೇಳಿ ಫೋನ್‌ ಇಟ್ಟ. 

          ಮರುದಿನ ಪ್ರಾಣಿಗಳ ವಶೀಕರಣಕ್ಕೆ ಸಂಬಂಧಿಸಿದ ಯಾವುದೋ ಲೇಖನವೊಂದು ಯಾವುದೋ ಬ್ಲಾಗ್‌ನಲ್ಲಿ ಪ್ರಕಟವಾಗಿತ್ತು. “ಪ್ರಾಣಿಗಳನ್ನು ವಶೀಕರಿಸಿಕೊಂಡು ಅವುಗಳನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಅಪಾಯಕಾರಿಯಾದ ಈ ವಿದ್ಯೆಯನ್ನು ಯಾರಾದರೂ ಕಲಿತಿದ್ದೇ ಆದರೆ ಮನುಕುಲಕ್ಕೆ ಘೋರವಾದ ಗಂಡಾಂತರ ಒದಗಲಿದೆ. ಯಾರಾದರೂ ಅದನ್ನು ಕಲಿತರೆ, ಅಂಥವರು ಯಾರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಾರೋ ಆ ವ್ಯಕ್ತಿ ಭ್ರಮೆಯ ಉತ್ತುಂಗಕ್ಕೆ ತಲುಪುತ್ತಾನೆ. ಅವನಿಗೆ ತನ್ನ ಮೇಲೆ ದಾಳಿ ನಡೆದಾಗಲೆಲ್ಲ ಅಸ್ಥಿಪಂಜರದ ಆಕಾರ ಕಣ್ಣಮುಂದೆ ಬಂದಂಥ ಭ್ರಮೆ ಉಂಟಾಗುತ್ತದೆ…” 

Category : Stories


ProfileImg

Written by Srinivasa Murthy