ಆಡಂಕಸ್:‌ ಅಧ್ಯಾಯ-1

ಆಡಂಕಸ್

ProfileImg
17 Apr '24
13 min read


image

       ನನಗೆ ನಿನ್ನೆ ನಡೆದಿದ್ದೆಲ್ಲ ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ಮಂಚದ ಮೇಲೆ ನಿತ್ರಾಣನಾಗಿ ಮಲಗಿ ಸೂರು ದಿಟ್ಟಿಸುತ್ತಿದ್ದ ನನಗೆ ಇನ್ನೂ ನಡೆದಿದ್ದನ್ನೆಲ್ಲ ನಂಬಲು ಸಾಧ್ಯವಾಗುತ್ತಿಲ್ಲ. ಆತಂಕದ ಮುಖಭಾವ ಹೊತ್ತು ಪಕ್ಕದಲ್ಲೇ ನಿಂತಿದ್ದ ನನ್ನ ಗೆಳೆಯ ಅರವಿಂದನ ಮುಖ ನಾನು ಕಣ್ಣುಬಿಟ್ಟಕೂಡಲೇ ಅರಳಿದ್ದು ನನ್ನ ಗಮನಕ್ಕೆ ಬಾರದಿರಲಿಲ್ಲ. “ಮೂರ್ತಿ, ನಿನಗೇನೂ ಆಗಿಲ್ಲ ತಾನೇ? ಹುಷಾರಾಗಿದ್ದೀಯ ಅಲ್ಲವೇ?” ಅವನು ಎತ್ತಲೋ ನೋಡುತ್ತ ನನ್ನ ಕೈಹಿಡಿದು ಪ್ರಶ್ನಿಸಿದ. ಅವನ ಪ್ರಶ್ನೆ ಕೇಳಿದಮೇಲೆ ನಿನ್ನೆ ಏನೋ ಆಗಿದ್ದಂತೂ ಹೌದೆಂದು ನನಗೆ ಖಚಿತವಾಯಿತು. ಆದರೆ ನಡೆದಿದ್ದು ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲ. ಚೆನ್ನಾಗಿದ್ದೇನೆಂದು ಮುಗುಳ್ನಗೆಯ ಮೂಲಕವೇ ಅವನಿಗೆ ತಿಳಿಸಿ ನಡೆದಿದ್ದೇನೆಂದು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದೆ. 

       ನನ್ನ ಬಹುದಿನಗಳ ಕನಸೆಂದರೆ ತಿಮಿಂಗಿಲಗಳನ್ನು ನೋಡಬೇಕೆನ್ನುವುದು. ಅದರಲ್ಲೂ ನೀಲಿ ತಿಮಿಂಗಿಲವನ್ನು ನೋಡುವುದು ನನ್ನ ಬಲುದೊಡ್ಡ ಆಸೆಯಾಗಿತ್ತು. ಭೂಮಿಯ ಮೇಲೆ ಯಾವುದೇ ಕಾಲಘಟ್ಟದಲ್ಲಿ ಬದುಕಿದ್ದ ಅತಿದೊಡ್ಡ ಪ್ರಾಣಿಯನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದಲೇ ನಾನು ಮತ್ತು ಗೆಳೆಯ ಅರವಿಂದ ತಿಮಿಂಗಿಲ ದರ್ಶನಕ್ಕಾಗಿ ಟಿಕೆಟ್‌ ಕಾದಿರಿಸಿ ಹೋಗಿದ್ದೆವು. ಸಂಜೆ ನಾಲ್ಕು ಗಂಟೆಗೆ ಕಾರವಾರ ಬೀಚ್‌ನಿಂದ ಯಾಂತ್ರೀಕೃತ ದೋಣಿಯಲ್ಲಿ ತಿಮಿಂಗಿಲಗಳನ್ನು ನೋಡುವುದಕ್ಕಾಗಿ ಹೊರಟಿದ್ದೆವು. ಬಹುಶಃ ದಡದಿಂದ ಸುಮಾರು ಇಪ್ಪತ್ತು ಕಿಲೋಮೀಟರ್‌ ಹೋಗಿರಬಹುದು. ಅಷ್ಟರಲ್ಲಿ ದೊಡ್ಡ ಸುಂಟರಗಾಳಿಗೆ ಸಿಲುಕಿದಂತೆ ನಮ್ಮ ದೋಣಿ ಹೊಯ್ದಾಡತೊಡಗಿತು. ನಾವು ಗಾಬರಿಯಿಂದ ಚಾಲಕನತ್ತ ನೋಡಿದೆವು. ಆತ ಕೂಡ ಗಾಬರಿಯಾಗಿದ್ದು ಅವನ ಮುಖಭಾವದಿಂದ ಗೊತ್ತಾಗುತ್ತಿತ್ತು. ಏಕೆಂದರೆ ದೋಣಿ ಸುಂಟರಗಾಳಿಗೆ ಸಿಲುಕಿದಂತೆ ಹೊಯ್ದಾಡುತ್ತಿದ್ದುದು ನಿಜವಾದರೂ ಅಲ್ಲಿ ಗಾಳಿಯೇ ಬೀಸುತ್ತಿರಲಿಲ್ಲ! ಯಾವುದೋ ಅದೃಶ್ಯ ಹಸ್ತವೊಂದು ಉದ್ದೇಶಪೂರ್ವಕವಾಗಿ ನಮ್ಮನ್ನು ನೀರಿಗೆ ಬೀಳಿಸಲೆಂದೇ ಆ ರೀತಿ ಮಾಡುತ್ತಿದೆಯೆಂದು ನಮಗನ್ನಿಸತೊಡಗಿತು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ನಾನು ನೀರಿಗೆ ಬಿದ್ದೆ. ಅರವಿಂದ ಗಾಬರಿಯಿಂದ ನನ್ನ ಹೆಸರು ಹಿಡಿದು ಕೂಗತೊಡಗಿದ. ಆದರೆ ಅವನು ಹೇಗೋ ಬೀಳದೇ ಕುಳಿತಿದ್ದ. ನಾನು ನೋಡನೋಡುತ್ತಿದ್ದಂತೆ ದೋಣಿ ನನ್ನಿಂದ ದೂರ ಹೋಯಿತು. ಶಕ್ತಿಯಿದ್ದಷ್ಟು ಹೊತ್ತು ಕೈಕಾಲು ಬಡಿದೆ. ಆಮೇಲೆ ನೀರಲ್ಲಿ ಮುಳುಗತೊಡಗಿದೆ. ಸುತ್ತಲೂ ಗಾಢಾಂಧಕಾರ ಕವಿದಿತ್ತು. ಆ ಕಗ್ಗತ್ತಲಲ್ಲಿ ಅಸ್ಥಿಪಂಜರವೊಂದು ನನ್ನನ್ನೇ ದಿಟ್ಟಿಸುತ್ತ ಗಹಗಹಿಸಿ ನಗುವುದಷ್ಟೇ ಕಾಣಿಸುತ್ತಿತ್ತು. ನನ್ನ ತಂದೆ, ತಾಯಿ, ಗೆಳೆಯರು ಎಲ್ಲರಿಗೂ ಅಲ್ಲೇ ಅಂತಿಮ ವಿದಾಯ ಹೇಳಿ ಕಣ್ಮುಚ್ಚಿದ್ದಷ್ಟೇ ನನಗೆ ನೆನಪು. ಎಚ್ಚರವಾದಾಗ ಹಾಸಿಗೆಯ ಮೇಲಿದ್ದೆ. 

       ನಾನು ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಉದ್ದೇಶದಿಂದ ಅರವಿಂದ ಎದ್ದುಹೋಗಿದ್ದ. ಅರ್ಧಗಂಟೆ ಕಳೆದಬಳಿಕ ಕೈಯಲ್ಲೊಂದು ಕಾಫಿ ಕಪ್‌ ಹಿಡಿದುಕೊಂಡು ನನ್ನ ಬಳಿ ಬಂದ. “ಈಗ ಹೇಗಿದೀಯಾ? ತಗೋ ಕಾಫಿ ಕುಡಿ. ಮತ್ತೆ ಮೊದಲಿನಂತಾಗುತ್ತೀಯಾ” ಎಂದು ನನ್ನ ಕೈಗೆ ಕೊಟ್ಟ. ನಾನು ಹಾಸಿಗೆಯಲ್ಲೇ ಎದ್ದುಕುಳಿತು ಕಾಫಿ ಗುಟುಕರಿಸತೊಡಗಿದೆ. ಅರವಿಂದ ನಿಧಾನವಾಗಿ ಹಿಂದಿನ ದಿನ ನಡೆದಿದ್ದನ್ನೆಲ್ಲ ಹೇಳತೊಡಗಿದ. ಸಮುದ್ರದಲ್ಲಿ ಸಾಕಷ್ಟು ದೂರ ಸಾಗಿದ್ದಾಗ ಇದ್ದಕ್ಕಿದ್ದಂತೆ ನಮ್ಮ ದೋಣಿ ಹೊಯ್ದಾಡತೊಡಗಿತ್ತು. ನಾನು ನೀರಿಗೆ ಬಿದ್ದಾಗ ಗಾಬರಿಯಾಗಿದ್ದ ಅರವಿಂದ ನನ್ನನ್ನು ಕಾಪಾಡಲು ತಾನೂ ನೀರಿಗೆ ಹಾರುವವನಿದ್ದ. ಆದರೆ ದೋಣಿಯಲ್ಲಿದ್ದ ಇನ್ನಿಬ್ಬರು ಅವನನ್ನು ಬಲವಾಗಿ ಹಿಡಿದು ಕೂರಿಸಿದರು. ದೋಣಿಯ ಚಾಲಕ ನನ್ನತ್ತ ದೋಣಿ ನಡೆಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಅದು ವಿರುದ್ಧ ದಿಕ್ಕಿಗೇ ತೇಲತೊಡಗಿತು. ಅಷ್ಟರಲ್ಲಿ ನಾನೂ ಮುಳುಗಿದ್ದರಿಂದ ವಿಧಿಯಿಲ್ಲದೆ ನಮ್ಮನ್ನು ಬಿಟ್ಟು ದೋಣಿ ದಡದತ್ತ ಹೊರಟಿತು. ನನ್ನನ್ನು ಮತ್ತೆಂದೂ ಕಾಣಲು ಸಾಧ್ಯವಾಗುವುದಿಲ್ಲವೆಂದೇ ಎಲ್ಲರೂ ತಿಳಿದಿದ್ದರು. ಅರವಿಂದ ನೇರವಾಗಿ ನನ್ನ ಮುಖ ನೋಡದೆ ಎತ್ತಲೋ ನೋಡಿ ಮಾತನಾಡುತ್ತಿದ್ದ. ನನ್ನನ್ನು ಕಾಪಾಡಲು ಸಾಧ್ಯವಾಗದ ಮುಜುಗರ, ಅಪರಾಧಿ ಪ್ರಜ್ಞೆ ಅವನ ಮನಸ್ಸಿನಲ್ಲಿದ್ದುದು ಸ್ಪಷ್ಟವಾಗಿತ್ತು. ನನ್ನ ಗೆಳೆಯನಾಗಿದ್ದರಿಂದ ಅವನಿಗೆ ಹಾಗನ್ನಿಸುವುದು ಸಹಜವೇ ಆಗಿದ್ದರೂ ನನಗಂತೂ ಅದರ ಬಗ್ಗೆ ಒಂದಿಷ್ಟೂ ಬೇಸರವಿರಲಿಲ್ಲ. ಏಕೆಂದರೆ ಅಂಥ ಭೋರ್ಗರೆಯುವ ಸಮುದ್ರದಲ್ಲಿ ಬಿದ್ದವನೊಬ್ಬನ್ನು ಕಾಪಾಡುವುದು ಇನ್ನೊಬ್ಬ ಮನುಷ್ಯಮಾತ್ರನಿಂದ ಖಂಡಿತ ಸಾಧ್ಯವಿರಲಿಲ್ಲ. ನಾನು ಬದುಕಿಬಂದಿದ್ದು ಜಗತ್ತಿನ ಅತಿದೊಡ್ಡ ಪವಾಡಗಳಲ್ಲೊಂದಾಗಿತ್ತೇ ವಿನಃ ಇನ್ನೇನೂ ಆಗಿರಲಿಲ್ಲ. ನನ್ನನ್ನು ನಡುನೀರಿನಲ್ಲಿ ಕೈಬಿಟ್ಟುಹೋದರೆಂದು ಯಾರ ಮೇಲೂ ಆರೋಪ ಹೊರಿಸುವ ಹಕ್ಕು ನನಗಿರಲಿಲ್ಲ. ಏಕೆಂದರೆ ಅಂಥ ಪರಿಸ್ಥಿತಿಯಲ್ಲಿ ನನ್ನನ್ನು ಕಾಪಾಡಲು ಬಂದವನು ತಾನೂ ನನ್ನೊಡನೆ ಜಲಸಮಾಧಿಯಾಗಬೇಕಿತ್ತೇ ಹೊರತು ನನ್ನನ್ನು ಕಾಪಾಡುವುದು ಸಾಧ್ಯವೇ ಇರಲಿಲ್ಲ. 

       ದಡಕ್ಕೆ ಮರಳಿದ ನಂತರ ಅರವಿಂದ ದುಃಖದಿಂದ ದಂಡೆಯ ಮೇಲೆ ಕುಸಿದು ಕುಳಿತನಂತೆ. ಅವನನ್ನು ಸಮಾಧಾನಪಡಿಸಿ ಜೊತೆಯಲ್ಲಿದ್ದವರು ರೂಮಿಗೆ ಕರೆದೊಯ್ದರಂತೆ. ರಾತ್ರಿ ಎಷ್ಟೋ ಹೊತ್ತು ನಿದ್ರೆಯಿಲ್ಲದೆ ಹೊರಳಾಡಿದಮೇಲೆ ಅರವಿಂದ ಮತ್ತೆ ಎದ್ದು ಸಮುದ್ರದ ಬಳಿಗೆ ಬಂದನಂತೆ. ಆಗ ನಾನು ಅಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಕಂಡಿದ್ದ. ಕೂಡಲೇ ಒಂದಿಷ್ಟು ಜನರನ್ನು ಒಟ್ಟುಗೂಡಿಸಿ ನನ್ನನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದ. ಅದೇ ಆಸ್ಪತ್ರೆಯ ಕೋಣೆಯಲ್ಲೀಗ ನಾನು ಮಲಗಿದ್ದೆ. 

       ಆದರೆ ನನಗೆ ಅವನ ವಿವರಣೆಗಳಿಂದ ಗೊಂದಲ ಬಗೆಹರಿಯುವ ಬದಲು ಇನ್ನಷ್ಟು ಹೆಚ್ಚಿತು. ನಾವು ಸಮುದ್ರದ ದಂಡೆಯಿಂದ ಕನಿಷ್ಟ ಇಪ್ಪತ್ತು ಕಿಲೋಮೀಟರ್‌ ದೂರವಂತೂ ಖಂಡಿತ ಹೋಗಿದ್ದೆವು. ನಮ್ಮ ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಯಾವ ದಿಕ್ಕಿನಲ್ಲೂ ನೆಲ ಕಾಣುತ್ತಿರಲಿಲ್ಲ. ಹಾಗಿರುವಾಗ ನಾನು ಅಲ್ಲಿಂದ ದಡಕ್ಕೆ ಬಂದು ಬಿದ್ದಿದ್ದಾದರೂ ಹೇಗೆ? ಸಮುದ್ರ ತನ್ನೊಡಲಲ್ಲಿ ಬಿದ್ದಿದ್ದನ್ನೆಲ್ಲ ಹೊತ್ತುತಂದು ದಡಕ್ಕೆ ಹಾಕುತ್ತದೆ ಎನ್ನುವುದನ್ನೇ ಆಧಾರವಾಗಿಟ್ಟುಕೊಂಡರೂ ನನ್ನನ್ನು ಸಾಯದಂತೆ ಅಲ್ಲಿಗೆ ಹೇಗೆ ತಂದಿತು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ. ಅದರ ಬಗ್ಗೆ ಅರವಿಂದನಿಗೂ ಏನೂ ಗೊತ್ತಿರಲಿಲ್ಲ. ಆದರೆ ನಾನು ಬದುಕಿಬಂದಿದ್ದೇ ಅವನಿಗೆ ಅತ್ಯಂತ ಸಂತೋಷದ ಸಂಗತಿಯಾಗಿತ್ತು. ಹಾಗಾಗಿ ಅವನು ಅದರ ಬಗ್ಗೆ ಹೆಚ್ಚೇನೂ ಯೋಚಿಸಲು ಹೋಗಿರಲಿಲ್ಲ. ಅಲ್ಲದೇ ನಾನು ದಡದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರೂ ತೀರಾ ಗಂಭೀರವಾದ ಆರೋಗ್ಯ ಸಮಸ್ಯೆ ಏನೂ ಆಗಿಲ್ಲವೆಂದೂ ಹೆಚ್ಚು ನೀರನ್ನೇನೂ ಕುಡಿದಿಲ್ಲವೆಂದೂ ವೈದ್ಯರು ಹೇಳಿದ್ದರಂತೆ. ಇದೆಲ್ಲ ನನಗೂ ಅಯೋಮಯವಾಗಿ ಕಂಡಿತು. ಇದರಲ್ಲೇನೋ ರಹಸ್ಯ ಇದ್ದೇ ಇದೆ ಎಂದು ನನಗೆ ತೀವ್ರವಾಗಿ ಅನ್ನಿಸಿತು.

       ಅದಾಗಿ ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಬಂದ ವೈದ್ಯರು ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಹೇಳಿದರು. ನನಗೆ ಯಾವುದೇ ಗಂಭೀರ ಸಮಸ್ಯೆಯೂ ಆಗಿಲ್ಲವೆಂದೂ ಸಮುದ್ರದಲ್ಲಿ ಮುಳುಗಿದ ಗಾಬರಿಗೆ ಪ್ರಜ್ಞೆ ಹೋಗಿತ್ತೆಂದೂ ಹೆಚ್ಚು ನೀರನ್ನೇನೂ ಕುಡಿದಿರಲಿಲ್ಲವೆಂದೂ ಹೇಳಿದರು. ನಾನು ಮತ್ತು ಅರವಿಂದ ಇಬ್ಬರೂ ಅವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆವು. 

       ಆಸ್ಪತ್ರೆಯಿಂದ ಹೊರಬಂದ ನಾವಿಬ್ಬರೂ ಅಲ್ಲಿಂದ ಹೆಚೇನೂ ದೂರವಿಲ್ಲದ ಸಮುದ್ರದ ದಂಡೆಯ ಬಳಿ ಬಂದೆವು. ನಾವು ಹಿಂದಿನ ದಿನ ಹೋಗಿದ್ದ ಅದೇ ದೋಣಿ ಅಲ್ಲೇ ನಿಂತಿತ್ತು. ಅದರ ಚಾಲಕ ಕೂಡ ಅಲ್ಲೇ ಇದ್ದ. ನನ್ನನ್ನು ಕಂಡಕೂಡಲೇ ಅವನ ಮುಖದಲ್ಲಿ ಗಾಬರಿ ಎದ್ದುಕಂಡಿತು. ಆದರೆ ಅದನ್ನು ತೋರಿಸಿಕೊಳ್ಳದೆ ಅವನು ನನ್ನ ಬಳಿ ಬಂದು ಅಚ್ಚರಿ ನಟಿಸುತ್ತ “ಹೇಗಿದ್ದೀರಿ ಸರ್?‌ ನೀವು ಆರಾಮಾಗಿದೀರಾ? ನೀವು ಹೋಗಿಯೇಬಿಟ್ಟಿರೆಂದು ನಾನು ಗಾಬರಿಯಾಗಿದ್ದೆ. ಸದ್ಯ, ದೇವರು ದೊಡ್ಡವನು. ನೀವು ಸುರಕ್ಷಿತವಾಗಿ ಬಂದಿರಲ್ಲ, ಅಷ್ಟೇ ಸಾಕು” ಎಂದ.

       ನಾವಿಬ್ಬರೂ ದಂಡೆಯ ಮೇಲೆ ಸ್ವಲ್ಪದೂರ ನಡೆಯುತ್ತ ಹೋದೆವು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ದಡಕ್ಕೆ ಸಮೀಪವಾಗಿ ಡಾಲ್ಫಿನ್‌ಗಳ ಗುಂಪೊಂದು ಸಮುದ್ರದಿಂದ ಮೇಲೆ ಜಿಗಿದು ಆಡುತ್ತಿರುವುದು ಕಣ್ಣಿಗೆ ಬಿತ್ತು. ನಮಗಾದ ಸಂತೋಷ ಅಷ್ಟಿಷ್ಟಲ್ಲ. ಅವುಗಳನ್ನೇ ನೋಡುತ್ತ ಮೈಮರೆತು ನಿಂತೆವು. ಕೆಲವು ಕ್ಷಣಗಳಲ್ಲಿ ಎಲ್ಲ ಡಾಲ್ಫಿನ್‌ಗಳೂ ಕಣ್ಮರೆಯಾದವು. ಆದರೆ ಒಂದು ಮಾತ್ರ ಪದೇ ಪದೇ ನೀರಿನಿಂದ ಮೇಲಕ್ಕೆ ಎಗರುತ್ತ, ದಡಕ್ಕೆ ಸಮೀಪ ಬರತೊಡಗಿತು. ನಾವು ನೋಡುತ್ತಿದ್ದಂತೆ ಅದು ಇನ್ನಷ್ಟು ಹತ್ತಿರವಾಗಿ ನಮ್ಮತ್ತಲೇ ಬರತೊಡಗಿತು. ಸಾಮಾನ್ಯವಾಗಿ ಡಾಲ್ಫಿನ್‌ಗಳದ್ದು ಒಂದು ರೀತಿಯ ಮುಗ್ಧವಾದ ನಗುಮುಖ ಎನ್ನುವುದು ಎಲ್ಲರ ಅಭಿಪ್ರಾಯ ಹಾಗೂ ಆ ಮುದ್ದುಮುಖ ಕಂಡವರೆಲ್ಲ ಅವುಗಳ ಗೆಳೆತನ ಬಯಸುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಈ ಡಾಲ್ಫಿನ್‌ನ ಮುಖ ಕೂಡ ಅದಕ್ಕೆ ಅಪವಾದವಾಗಿರಲಿಲ್ಲ. ಅದು ನನ್ನನ್ನು ಕಂಡು ಅಗತ್ಯಕ್ಕಿಂತ ಹೆಚ್ಚೇ ನಗುತ್ತಿದೆ ಎಂದು ನನಗನ್ನಿಸಿತು. ಅರವಿಂದ ಕೂಡ ಅಚ್ಚರಿಯಿಂದ ನೋಡುತ್ತ ನಿಂತಿದ್ದ. ಅಷ್ಟರಲ್ಲಿ “ಆರ್‌ ಯೂ ಆಲ್‌ರೈಟ್?” ಎಂದು ಯಾರೋ ಕೇಳಿದಂತಾಯಿತು!

       ಸಮುದ್ರದ ಅಲೆಗಳ ಭೋರ್ಗರೆತದ ನಡುವೆಯೂ ಸ್ಪಷ್ಟವಾಗಿ ಕೇಳಿಸಿದ ಆ ಧ್ವನಿ ಎಲ್ಲಿಂದ ಬಂತು? ನಾನು ನಿಂತಲ್ಲೇ ಸುತ್ತೆಲ್ಲ ತಿರುಗಿ ನೋಡತೊಡಗಿದೆ. ಆದರೆ ನನ್ನ ಕಣ್ಣಿಗೆ ಯಾರೂ ಕಾಣಲಿಲ್ಲ. ಅರವಿಂದ ಕೂಡ ಡಾಲ್ಫಿನ್‌ ಕಂಡ ದಿಕ್ಕಿನತ್ತಲೇ ನೋಡುತ್ತಿದ್ದನೇ ಹೊರತು ಏನೂ ಮಾತಾಡುತ್ತಿರಲಿಲ್ಲ. ಹಾಗಾದರೆ ಮಾತಾಡಿದ್ದು ಯಾರು?

       ನಾನು ಗೊಂದಲದಿಂದ ಅತ್ತಿತ್ತ ನೋಡುತ್ತಿರಬೇಕಾದರೆ ಮತ್ತೆ ಆ ಧ್ವನಿ ಕೇಳಿಸಿತು “ನಿನಗೇನೂ ಸಮಸ್ಯೆಯಾಗಿಲ್ಲ ತಾನೆ? ಆರೋಗ್ಯವಾಗಿದ್ದೀ ಅಲ್ಲವೇ?” ಎಂಬ ಧ್ವನಿ. ಯಾರೋ ನನ್ನ ಆತ್ಮೀಯ ಗೆಳೆಯನೋ ಅಥವಾ ಅಣ್ಣನೋ ಕೇಳಿದಂತಿತ್ತು ಆ ಧ್ವನಿ. ಆದರೆ ನನ್ನ ಗೊಂದಲ ಬಗೆಹರಿಯಲಿಲ್ಲ. ಅಥವಾ ಅದು ನನ್ನ ಭ್ರಮೆಯೇ? ಅರವಿಂದನ ಮುಖ ನೋಡಿದರೆ ಅವನು ಏನನ್ನೂ ಕೇಳಿಸಿಕೊಂಡಂತೆ ಕಾಣಲಿಲ್ಲ. ಅವನು ಡಾಲ್ಫಿನ್‌ ಕಂಡ ಬೆರಗಿನಿಂದ ಇನ್ನೂ ಹೊರಬಂದಂತಿರಲಿಲ್ಲ. ಆದರೆ ಎರಡೆರಡು ಸಲ ಆ ಧ್ವನಿ ಕೇಳಿಸಿದ್ದು ಖಂಡಿತ ನನ್ನ ಭ್ರಮೆಯಲ್ಲ ಎಂದು ಮನಸ್ಸು ಬಲವಾಗಿ ಹೇಳುತ್ತಿತ್ತು. ಆದರೆ ಯಾರು ಅನ್ನುವುದು ಗೊತ್ತಾಗಲಿಲ್ಲ. 

       ಅಷ್ಟರಲ್ಲಿ ಇನ್ನೊಮ್ಮೆ ಆ ಧ್ವನಿ ಕೇಳಿಸಿತು “ಯಾರು ಮಾತನಾಡುತ್ತಿರುವುದು ಎಂದು ಯೋಚಿಸುತ್ತಿದ್ದೀಯಾ? ನಾನು ಆಡಂಕಸ್‌ ಮಾತನಾಡುತ್ತಿದ್ದೇನೆ. ನಿನ್ನೆ ನಿನಗೇನೂ ಆಗಿಲ್ಲವಷ್ಟೆ?” ಧ್ವನಿ ಕೇಳಿದ ಕೂಡಲೇ ನನ್ನ ತಲೆಯಲ್ಲಿ ಮಿಂಚು ಹರಿದಂತಾಯಿತು. ಆಡಂಕಸ್?‌ ಎಲ್ಲೋ ಕೇಳಿದ್ದೇನಲ್ಲ ಈ ಪದವನ್ನು? ಎಲ್ಲಿ? ಆಡಂ ಮತ್ತು ಈವ್?‌ ಅಲ್ಲಲ್ಲ, ಅರ್ಥಶಾಸ್ತ್ರದ ಪಿತಾಮಹ ಆಡಂ ಸ್ಮಿತ್?‌ ಅಲ್ಲ, ಎಲ್ಲೋ ಈ ಶಬ್ದವನ್ನು ಕೇಳಿದ್ದೇನೆ. ಒಂದೆರಡು ಸಲ ಅಲ್ಲ, ಎಷ್ಟೋ ಸಲ ಕೇಳಿದ್ದೇನೆ. ಆದರೆ ಎಲ್ಲಿ? ತಲೆ ಕೊಡವಿದೆ. ಆದರೆ ನೆನಪಾಗಲೇ ಇಲ್ಲ…

       ಅಷ್ಟರಲ್ಲಿ ಬೀಚಿನತ್ತ ನೂರಾರು ಜನ ನಡೆದುಬರತೊಡಗಿದರು. ಅವರನ್ನು ಕಂಡು ಆಟವಾಡುತ್ತಿದ್ದ ಡಾಲ್ಫಿನ್‌ ದೂರಕ್ಕೆ ಹೊರಟುಹೋಯಿತು. ಆ ಧ್ವನಿ ಕೂಡ ನನಗೆ ಮತ್ತೆ ಕೇಳಿಸಲಿಲ್ಲ. ಜನಜಂಗುಳಿ ಹೆಚ್ಚಾಗುತ್ತಿದ್ದಂತೆ ನಾನು ಅರವಿಂದನನ್ನು ಕರೆದುಕೊಂಡು ನಮ್ಮ ರೂಮಿನತ್ತ ಹೊರಟೆ. ಆದರೆ ಹಿಂದಿನ ದಿನ ನನ್ನನ್ನು ಕಾಪಾಡಿದ ಮಹಾನುಭಾವ ಯಾರೆಂದು ತಿಳಿಯಲೇ ಇಲ್ಲ. ನಾವು ಮರುದಿನವೇ ಊರಿಗೆ ಹೊರಡಬೇಕಿತ್ತು. ಹಾಗಾಗಿ ಅವತ್ತು ಸಂಜೆ ಮತ್ತೊಮ್ಮೆ ಅಲ್ಲಿಗೆ ಬಂದು ನಮ್ಮನ್ನು ಕಾಪಾಡಿದವರ ಸುಳಿವು ಸಿಗುತ್ತದೆಯೇ ಎಂದು ನೋಡೋಣ ಎಂದು ಅರವಿಂದನಿಗೆ ಹೇಳಿದೆ. ಅವನೂ ಒಪ್ಪಿದ.

       ಮಧ್ಯಾಹ್ನವಾಗುತ್ತಿದ್ದಂತೆ ಬಿರುಬಿಸಿಲಿನ ಬೇಗೆ ಹೆಚ್ಚಿತು. ಜೊತೆಗೆ ಕಡಲತೀರ ಬೇರೆ. ಸೆಕೆ ಮಿತಿಮೀರಿತ್ತು. ಮಂಚದ ಮೇಲೆ ಸುಮ್ಮನೆ ಅಡ್ಡಾದೆ. ಬೇಸಿಗೆಯ ಮಧ್ಯಾಹ್ನ ಮಲಗಿದರೆ ನಿದ್ರೆ ಬರಲು ಹೆಚ್ಚು ಹೊತ್ತೇನೂ ಬೇಕಾಗುವುದಿಲ್ಲ. ಕೆಲವೇ ಕ್ಷಣಗಳಲ್ಲಿ ಇಬ್ಬರಿಗೂ ನಿದ್ರೆ ಆವರಿಸಿಕೊಂಡುಬಿಟ್ಟಿತು. ಆದರೆ ನನಗೆ ಒಂದರ ಹಿಂದೊಂದರಂತೆ ಕನಸುಗಳು ಬೀಳತೊಡಗಿದವು. ಸಮುದ್ರದ ದಂಡೆಯಲ್ಲಿ ನಾನು ನಿಂತಂತೆ, ನೂರಾರು ಡಾಲ್ಫಿನ್‌ಗಳು ಚಿನ್ನಾಟವಾಡುತ್ತಿದ್ದಂತೆ, ಅವುಗಳ ನಡುವಿನಿಂದ ಒಂದು ಡಾಲ್ಫಿನ್‌ ನನ್ನತ್ತಲೇ ಗಾಳಿಯಲ್ಲಿ ತೇಲಿಕೊಂಡು ಬಂದಂತೆ, ನನ್ನ ಸಮೀಪಕ್ಕೆ ಬಂದು ನನ್ನ ಮುಖ ನೋಡಿ ನಕ್ಕಂತೆ, ತನ್ನ ಈಜುರೆಕ್ಕೆಯನ್ನೇ ಮುಂದಕ್ಕೆ ಚಾಚಿ ನನ್ನ ಕೈಕುಲುಕಿದಂತೆ ಏನೇನೋ ಕನಸು!

       ನನಗೆ ಎಚ್ಚರವಾದಾಗ ಸಮಯ ಮೂರು ಗಂಟೆಯಾಗಿತ್ತು. ಹೊರಗಡೆ ಇನ್ನೂ ರಣಬಿಸಿಲು ಸುಡುತ್ತಿತ್ತು. ಅರವಿಂದ ಆಗಲೇ ಎದ್ದು ಮುಖ ತೊಳೆದುಬಂದು ಮೊಬೈಲಿನಲ್ಲಿ ಏನನ್ನೋ ನೋಡುತ್ತ ಕುಳಿತಿದ್ದ. ನನಗೆ ಬಿದ್ದ ವಿಚಿತ್ರ ಕನಸನ್ನು ಅವನಿಗೆ ಹೇಳಿದಾಗ ನಕ್ಕುಬಿಟ್ಟ. “ನಿನ್ನ ಮನಸ್ಸಿನಲ್ಲಿ ಸದಾ ಪ್ರಾಣಿಗಳೇ ತುಂಬಿರುತ್ತವೆ. ಅದಕ್ಕೇ ನಿನಗೆ ಯಾವಾಗಲೂ ಪ್ರಾಣಿಗಳ ಬಗ್ಗೆ ಕನಸು ಬೀಳುವುದು. ಡಾಲ್ಫಿನ್‌ಗಳು ಎಲ್ಲಾದರೂ ಗಾಳಿಯಲ್ಲಿ ಹಾರಾಡಲು ಸಾಧ್ಯವೇ? ಏನೇನೋ ಯೋಚನೆ ಮಾಡಬೇಡ. ಹೋಗಿ ಮುಖ ತೊಳೆದು ಬಾ. ನಾನು ಇಬ್ಬರಿಗೂ ಕುಡಿಯಲು ಏನಾದರೂ ತರಿಸುತ್ತೇನೆ” ಎಂದ. 

       ನಾನು ಬಾತ್‌ರೂಮಿಗೆ ಹೋದೆ. ಬಕೆಟ್‌ನಲ್ಲಿ ಮುಕ್ಕಾಲುಪಾಲು ನೀರಿತ್ತು. ನಾನು ಪಕ್ಕದಲ್ಲಿದ್ದ ಜಗ್‌ನಿಂದ ನೀರೆತ್ತಿಕೊಂಡು ಅದನ್ನು ಮುಖಕ್ಕೆ ಸಿಂಪಡಿಸಿಕೊಂಡೆ. ಬಿರುಬೇಸಗೆಯಲ್ಲಿ ಹೀಗೆ ಮುಖಕ್ಕೆ ತಣ್ಣಿರು ಎರಚಿಕೊಳ್ಳುವ ಖುಷಿಯನ್ನು ಅನುಭವಿಸಿಯೇ ತೀರಬೇಕು. ಅದನ್ನು ಯಾರಿಗೂ ಹೇಳಿ ಅರ್ಥಮಾಡಿಸಲು ಸಾಧ್ಯವಿಲ್ಲ. ಆ ನೀರು ಬಾವಿಯ ನೀರಿನಷ್ಟು ತಂಪಾಗೇನೂ ಇರಲಿಲ್ಲ. ಆದರೆ ಆ ಕ್ಷಣದ ಸೆಕೆಯನ್ನು ದೂರಮಾಡಲು ಅದು ಸಾಕಿತ್ತು.

       ಮುಖವನ್ನೆಲ್ಲ ತೊಳೆದುಕೊಂಡು ಜಗ್‌ನಲ್ಲಿದ್ದ ನೀರನ್ನು ಮತ್ತೆ ಬಕೆಟ್‌ಗೆ ಸುರಿದೆ. ಅಷ್ಟರಲ್ಲಿ ಬಕೆಟ್‌ ಒಳಗಡೆ ಒಂದು ಪುಟಾಣಿ ಡಾಲ್ಫಿನ್‌ ನನ್ನತ್ತ ನೋಡಿ ನಕ್ಕಂತಾಯಿತು! ಇದೇನು ನನ್ನ ಭ್ರಮೆಯೇ? ನನಗೆ ನಿಜಕ್ಕೂ ಮೊನ್ನೆಯಿಂದ ಹುಚ್ಚು ಹಿಡಿದಿದೆಯೇ? ಯಾಕೆ ಹೀಗೆ ಕಂಡಲ್ಲೆಲ್ಲ ಡಾಲ್ಫಿನ್‌ ನೋಡಿದಂತಾಗುತ್ತಿದೆ? ಕಣ್ಣು ಹೊಸಕಿಕೊಂಡು ಮತ್ತೊಮ್ಮೆ ದಿಟ್ಟಿಸಿದೆ. ಇಲ್ಲ, ಆ ಬಕೆಟ್‌ ನೀರಿನಲ್ಲಿ ಯಾವ ಜೀವಿಯೂ ಇಲ್ಲ! ಹಾಗಾದರೆ ಕ್ಷಣಗಳ ಹಿಂದೆ ನಾನು ಕಂಡಿದ್ದೇನನ್ನು?

       ಏನೊಂದೂ ಅರ್ಥವಾಗದೆ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಒಳಕ್ಕೆ ಬಂದೆ. ನನ್ನನ್ನು ಕಂಡು ಗಾಬರಿಯಾದ ಅರವಿಂದ ಓಡಿಬಂದು ನನ್ನನ್ನು ಮಂಚದ ಮೇಲೆ ಕೂರಿಸಿ ಕುಡಿಯುವ ನೀರು ಹಿಡಿದುಕೊಂಡು ಬಂದ. ಅವನ ಮುಖ ನೋಡಿ ಮುಗುಳ್ನಕ್ಕು ಗಾಬರಿಪಡಲು ಏನೂ ಕಾರಣವಿಲ್ಲವೆಂದೂ ಬಿಸಿಲಿನ ಕಾರಣ ಸ್ವಲ್ಪ ತಲೆ ಸುತ್ತಿದಂತಾಯಿತೇ ವಿನಃ ಬೇರೆ ಗಂಭೀರವಾದ ಸಮಸ್ಯೆ ಏನೂ ಇಲ್ಲವೆಂದೂ ಅವನನ್ನು ಸಮಾಧಾನಪಡಿಸಿದೆ. 

       ಸಂಜೆಯಾಗುತ್ತಿದ್ದಂತೆ ಮತ್ತೆ ಇಬ್ಬರೂ ಸಮುದ್ರದ ದಂಡೆಗೆ ಹೋದೆವು. ಅಲ್ಲಿ ಇನ್ನೂ ಜನ ಸಾಕಷ್ಟು ಸಂಖ್ಯೆಯಲ್ಲಿದ್ದರು. ಇಷ್ಟೊಂದು ಜನಸಂದಣಿ ಇದ್ದರೆ ಡಾಲ್ಫಿನ್‌ಗಳು ದಂಡೆಯ ಸಮೀಪ ಬರುವುದು ಅಸಂಭವವೆಂದು ನಮಗೆ ಗೊತ್ತಿತ್ತು. ಆದರೆ ನಾವು ಸಮುದ್ರದಲ್ಲಿ ಒಂದಿಷ್ಟು ಮುಂದೆ ಹೋಗಿ ನೋಡಬೇಕೆಂದು ನಿರ್ಧರಿಸಿದೆವು. ನಿಜ ಹೇಳಬೇಕೆಂದರೆ ನಾನಂತೂ ಹಿಂದಿನ ದಿನ ನಾನು ಸಮುದ್ರಕ್ಕೆ ಬಿದ್ದ ಜಾಗದವರೆಗೂ ಹೋಗಬೇಕೆಂದು ಮನಸ್ಸಿನಲ್ಲೇ ದೃಢನಿಶ್ಚಯ ಮಾಡಿದ್ದೆ. ಆದರೆ ಅದನ್ನು ಅರವಿಂದನಿಗೂ ಹೇಳಿರಲಿಲ್ಲ. ಸಮುದ್ರದಲ್ಲಿ ಸ್ವಲ್ಪ ಮುಂದೆ ಹೋಗೋಣ ಎಂದಷ್ಟೇ ಹೇಳಿದ್ದೆ. ಆದರೆ ಈ ಸಲ ಹಿಂದಿನ ದಿನ ಹೋಗಿದ್ದ ದೋಣಿಯಲ್ಲಿ ಬೇಡ, ಬೇರೆ ದೋಣಿಯಲ್ಲಿ ಹೋಗೋಣವೆಂದು ಸಹ ಹೇಳಿದ್ದೆ. ಅವನೂ ಅದಕ್ಕೆ ಒಪ್ಪಿಕೊಂಡಿದ್ದ. 

       ಸಮುದ್ರದ ದಂಡೆಯುದ್ದಕ್ಕೂ ನೂರಾರು ದೋಣಿಗಳು ನಿಂತಿದ್ದವು. ತಿಮಿಂಗಿಲ ದರ್ಶನಕ್ಕೆಂದು ಬುಕಿಂಗ್‌ ಮಾಡಿದ್ದವರು ದೋಣಿಗಳಲ್ಲಿ ಹತ್ತಿ ಮುಂದೆ ಹೋಗುತ್ತಿದ್ದರು. ಅದನ್ನು ನೋಡಿ ನಾವೂ ಅಲ್ಲೊಂದು ದೋಣಿಯ ಬಳಿ ಹೋಗಿ ವಿಚಾರಿಸಿದೆವು. ಅವನು ನಮ್ಮನ್ನು ಕರೆದೊಯ್ಯಲು ಒಪ್ಪಿದ. ಆದರೆ ನನಗೆ ಈಗ ಇನ್ನೊಂದು ಪ್ರಶ್ನೆ ಎದುರಾಯಿತು. ಈಗ ಬೇರೆಯವನನ್ನು ಜೊತೆ ಮಾಡಿಕೊಂಡು ಹೋಗುವಾಗ ನಿನ್ನೆಯ ಆ ಜಾಗಕ್ಕೆ ಕರೆದೊಯ್ಯಬೇಕೆಂದು ಅವನನ್ನು ಕೇಳುವುದಾದರೆ ಆ ಜಾಗದ ಗುರುತನ್ನು ಹೇಗೆ ಹೇಳುವುದು? ಭೂಮಿಯ ಮೇಲಾದರೆ ನೂರಾರು ಗುರುತುಗಳಿರುತ್ತವೆ. ಅವುಗಳ ಆಧಾರದ ಮೇಲೆ ಇಂಥದ್ದೇ ಜಾಗಕ್ಕೆ ಕರೆದೊಯ್ಯುವಂತೆ ಕೇಳಬಹುದು. ಸಮುದ್ರದ ಮೇಲೆ ಯಾವ ಗುರುತಿನ ಆಧಾರದ ಮೇಲೆ ಅವನಿಗೆ ಆ ಸ್ಥಳದ ಬಗ್ಗೆ ಹೇಳುವುದು? ಅರವಿಂದನಂತೂ ಆ ಜಾಗಕ್ಕೆ ಹೋಗುವ ಯೋಚನೆಯನ್ನೇ ಮಾಡದಿದ್ದರಿಂದ ನನ್ನ ಚಿಂತೆ ಅವನ ತಲೆಗೇ ಹೋಗಿರಲಿಲ್ಲ. ಅವನು ದೋಣಿಯವನೊಂದಿಗೆ ಚೌಕಾಶಿ ಮಾಡುವುದರಲ್ಲಿ ಮಗ್ನನಾಗಿದ್ದ.

       ಕಡೆಗೆ ನಾನು ಆ ಜಾಗವನ್ನು ನೋಡುವ ಆಸೆಯನ್ನು ಕೈಬಿಟ್ಟೆ. ಅದೇ ದೋಣಿಯ ಚಾಲಕನ್ನು ಹುಡುಕಿದ್ದರೆ ಮಾತ್ರ ಅಲ್ಲಿಗೆ ಹೋಗುವುದು ಸಾಧ್ಯವಿತ್ತು. ಆದ್ದರಿಂದ ಯಾವುದಾದರೊಂದು ದೋಣಿ ಎಂದುಕೊಂಡು ಅರವಿಂದ ಚೌಕಾಶಿ ಮಾಡುತ್ತಿದ್ದ ಅದೇ ದೋಣಿಯನ್ನೇರಿದೆ. ಆತನದ್ದು ಮಾತಿಗಿಂತ ಕೃತಿಯಲ್ಲಿ ನಂಬಿಕೆ ಜಾಸ್ತಿ ಎನ್ನುವುದು ನೋಡಿದರೆ ಗೊತ್ತಾಗುತ್ತಿತ್ತು. ಮೌನವಾಗಿ ದೋಣಿ ಓಡಿಸುತ್ತಿದ್ದ. ಮಧ್ಯೆ ಮಧ್ಯೆ ಅಲೊಂದು ಇಲ್ಲೊಂದು ಮೀನು ನೀರಿನಿಂದ ಮೇಲಕ್ಕೆ ಹಾರುತ್ತಿತ್ತು. ಸಮುದ್ರದಲ್ಲಿ ಇನ್ನೂ ಸಾಕಷ್ಟು ಮುಂದೆ ಹೋದಮೇಲೆ ಅಲ್ಲೊಂದು ಡಾಲ್ಫಿನ್‌ ಕಣ್ಣಿಗೆ ಬಿತ್ತು. ಅದಾಗಿ ಕೆಲಕ್ಷಣಗಳಲ್ಲೇ ಇನ್ನೊಂದು ಕಣ್ಣಿಗೆ ಬಿತ್ತು. ಕೆಲವೇ ನಿಮಿಷಗಳಲ್ಲಿ ನೂರಾರು ಡಾಲ್ಫಿನ್‌ಗಳು ನೀರಿನಿಂದ ಮೇಲೆ ಎಗರಿ ಆಡುವುದು ಕಾಣಿಸಿತು. ಅದನ್ನು ನೋಡಿ ಅರವಿಂದ ಖುಷಿಯಿಂದ ದೋಣಿಯಲ್ಲೇ ಕುಣಿಯಲು ಎದ್ದ. ಅವನನ್ನು ತಣ್ಣಗೆ ಮಾಡಿ ಕೆಳಕ್ಕೆ ಕುಳ್ಳಿರಿಸಿ ನಾನೂ ಅವುಗಳ ಚಿನ್ನಾಟವನ್ನು ನೋಡತೊಡಗಿದೆ. 

       ಕೆಲವು ಕ್ಷಣಗಳ ನಂತರ ಇದ್ದಕ್ಕಿದ್ದಂತೆ ನಮ್ಮ ದೋಣಿ ಹಿಂದಿನ ದಿನದಂತೆಯೇ ಹೊಯ್ದಾಡಲಾರಂಭಿಸಿತು. ನನಗೆ ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಇದೇಕೆ ಹೀಗಾಗುತ್ತಿದೆ? ಯಾರೋ ನಮ್ಮನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿರಿಸಿಕೊಂಡು ಹೀಗೆ ಮಾಡುತ್ತಿದ್ದಾರೆಯೇ? ನಮ್ಮ ಮೇಲೆ ಅಂಥ ದ್ವೇಷ ಯಾರಿಗಿದೆ? ಇದು ನಿಜವಾಗಿಯೂ ನನ್ನ ಮೇಲೆ ನಡೆದ ದಾಳಿಯೇ ಅಥವಾ ಅರವಿಂದನ ಮೇಲೆ ನಡೆದ ದಾಳಿಯೇ ಅಥವಾ ಇಬ್ಬರ ಮೇಲೂ ನಡೆದ ದಾಳಿಯೇ? ಈ ಸಲ ನಾನು ಬೀಳದಂತೆ ನನ್ನನ್ನು ಅರವಿಂದ ಹಿಡಿದುಕೊಂಡ. ಅಷ್ಟರಲ್ಲಿ ನಮ್ಮ ಅಂಬಿಗ ಇಬ್ಬರಿಗೂ ದೋಣಿಯ ಮೇಲೆ ಅಂಗಾತ ಮಲಗುವಂತೆ ಕೂಗಿಹೇಳಿದ. ಅವನ ಆಜ್ಞೆಯಂತೆಯೇ ನಾವು ದೋಣಿಯ ಮೇಲೆ ಉದ್ದಕ್ಕೆ ಮಲಗಿದೆವು. ಅವನು ವೇಗವಾಗಿ ದೋಣಿ ನಡೆಸುತ್ತ ಆ ಜಾಗದಿಂದ ನಮ್ಮನ್ನು ದೂರಕ್ಕೆ ಕರೆದೊಯ್ಯತೊಡಗಿದ. ನಾವು ದೋಣಿಯ ಬುಡದಲ್ಲಿ ಉದಕ್ಕೆ ಮಲಗಿದ್ದೆವು. ನಮ್ಮ ದೋಣಿ ತುಂಬಾ ಅಪಾಯಕಾರಿಯಾಗಿ ಹೊಯ್ದಾಡುತ್ತಿತ್ತು. ನಮ್ಮ ಮೇಲೆ ನೀರಿನ ಅಲೆಗಳು ಅಪ್ಪಳಿಸುತ್ತಿದ್ದವು. ಇನ್ನು ಹೆಚ್ಚುಹೊತ್ತು ನಾವು ಆ ಅಪಾಯಕಾರಿ ಪರಿಸ್ಥಿತಿಯಲ್ಲಿ ದೋಣಿಗೆ ಅಂಟಿಕೊಂಡಿರುವುದು ಸಾಧ್ಯವಿಲ್ಲವೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಆ ನುರಿತ ಅಂಬಿಗ ಸಾಕಷ್ಟು ಶ್ರಮವಹಿಸಿ ದೋಣಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೂ ಅಲ್ಲಿ ಪ್ರಕೃತಿಯ ಅಂಶಗಳಲ್ಲದೆ ಬೇರೆ ಇನ್ನೇನೋ ನಮ್ಮನ್ನು ಮುಳುಗಿಸಲು ಪ್ರಯತ್ನಿಸುತ್ತಿದೆ ಎಂದು ನನಗೆ ಬಲವಾಗಿ ಅನ್ನಿಸತೊಡಗಿತ್ತು. ಅವನ ಶತಪ್ರಯತ್ನವನ್ನೂ ಮೀರಿ ದೋಣಿ ಹೊಯ್ದಾಡತೊಡಗಿತು. ಒಮ್ಮೆಯಂತೂ ಹೆಚ್ಚುಕಡಿಮೆ ತೊಂಬತ್ತು ಡಿಗ್ರಿಗಳಷ್ಟು ನೆಟ್ಟಗಾಯಿತು. ಹಾಗೆಯೇ ಉಲ್ಟಾ ಮಗುಚಿಕೊಂಡು ಇನ್ನೇನು ನಮ್ಮ ಕಥೆ ಮುಗಿಯಿತೆಂದು ನಾವು ಅಂದುಕೊಳ್ಳುತ್ತಿದ್ದಂತೆ ಅದ್ಯಾವುದೋ ಮಾಯದಲ್ಲಿ ಮತ್ತೆ ಮೊದಲಿನಂತೆ ಆಯಿತು. ಅಷ್ಟರಲ್ಲಿ ನಮ್ಮ ದೋಣಿ ಅನಾಮತ್ತಾಗಿ ಯಾವುದೋ ಅದೃಶ್ಯ ಹಸ್ತವೊಂದು ಎತ್ತಿಹಿಡಿದಂತೆ ನೀರಿನಿಂದ ಸ್ವಲ್ಪ ಮೇಲೆದ್ದಿತು. ಇದೇನೆಂದು ನಾವು ಅಚ್ಚರಿಯಿಂದ ನೋಡುತ್ತಿದ್ದಂತೆ ದೋಣಿ ನಿಧಾನವಾಗಿ ದಂಡೆಯತ್ತ ಸಾಗತೊಡಗಿತು. ನಮ್ಮ ದೋಣಿಯ ಸುತ್ತಲೂ ಅಲೆಗಳು ಆಳೆತ್ತರಕ್ಕೆ ಚಿಮ್ಮುವುದು ಕಾಣುತ್ತಲೇ ಇತ್ತು. ಆದರೆ ಅವುಗಳ ನಡುವೆ ನಮ್ಮ ದೋಣಿ ನಿಶ್ಚಲವಾದ ನೀರಿನ ಮೇಲೆ ಸಾಗುವಂತೆ ಒಂದೇ ಹದದಲ್ಲಿ ಸಾಗತೊಡಗಿತು. ಹಿಂದಿನ ದಿನ ನಮ್ಮನ್ನು ಮುಳುಗಿಸಲು ಪ್ರಯತ್ನಿಸಿದ ಕಬಂಧಬಾಹು ಯಾವುದೆಂಬ ಪ್ರಶ್ನೆ ನಮಗೆ ಚಿದಂಬರ ರಹಸ್ಯವಾಗಿ ಕಾಡುತ್ತಿದ್ದಂತೆ ಈಗ ರಕ್ಷಿಸುತ್ತಿರುವ ಈ ಅಭಯಹಸ್ತ ಕೂಡ ಯಾವುದೆಂದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡುತ್ತ ಸುಮ್ಮನೆ ಕುಳಿತೆವು. ಈ ಎಲ್ಲ ಗೊಂದಲಗಳ ನಡುವೆಯೂ ಎತ್ತರೆತ್ತರಕ್ಕೆ ಚಿಮ್ಮುತ್ತಿದ್ದ ಅಲೆಗಳ ನಡುವೆ ಆ ಅಸ್ಥಿಪಂಜರ ನನ್ನನ್ನು ನೋಡಿ ಗಹಗಹಿಸುತ್ತಲೇ ಇತ್ತು!

       ನಮ್ಮ ದೋಣಿ ಸುರಕ್ಷಿತವಾಗಿ ದಡ ಸೇರಿತು. ನಮ್ಮ ದೋಣಿಯ ಅಂಬಿಗ ಆತಂಕಿತನಾಗಿ ಕುಳಿತಿದ್ದ. ದಡಕ್ಕೆ ಬಂದಮೇಲೆ ನಿಟ್ಟುಸಿರುಬಿಟ್ಟ. “ನಿಮಗೆ ಏನೂ ಆಗಿಲ್ಲವಷ್ಟೆ? ನನಗೆ ನಿಜಕ್ಕೂ ವಿಪರೀತ ಭಯವಾಗಿತ್ತು. ನಾನು ಸಮುದ್ರಕ್ಕಿಳಿದಾಗ ಎಷ್ಟೋ ವಿಪ್ಲವಗಳನ್ನೆದುರಿಸಿದ್ದೇನೆ. ಆದರೆ ಪ್ರತಿಸಲವೂ ನನಗೆ ನನ್ನ ದೋಣಿಯಲ್ಲಿ ಬಂದ ಗ್ರಾಹಕರನ್ನು ಸುರಕ್ಷಿತವಾಗಿ ಮರಳಿ ಕರೆದೊಯ್ಯಬಲ್ಲೆನೆಂಬ ಆತ್ಮವಿಶ್ವಾಸ ಇರುತ್ತಿತ್ತು. ಆದರೆ ಇಂದು ಮಾತ್ರ ನನಗೆ ನಿಜಕ್ಕೂ ಭಯವಾಗಿಬಿಟ್ಟಿತ್ತು. ಇದು ಮಾಮೂಲಿ ಸಮಸ್ಯೆ ಆಗಿರಲಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ನಮ್ಮನ್ನು ಮುಳುಗಿಸಲೆಂದೇ ಪಿತೂರಿ ಮಾಡಿದ್ದಂತೆ ನನಗೆ ಬಲವಾಗಿ ಅನ್ನಿಸುತ್ತಿತ್ತು. ಆದರೆ ನಾನು ಒಮ್ಮೆ ದೋಣಿಯಲ್ಲಿ ಯಾರನ್ನಾದರೂ ಸಮುದ್ರದಲ್ಲಿ ಕರೆದೊಯ್ದರೆ ಅವರನ್ನು ಸುರಕ್ಷಿತವಾಗಿ ಮರಳಿ ಕರೆದೊಯ್ಯುವುದು ನನ್ನ ಜವಾಬ್ದಾರಿಯಾಗಿರುತ್ತದೆ. ಇವತ್ತು ಆ ಜವಾಬ್ದಾರಿಯಲ್ಲಿ ನಾನು ಖಂಡಿತ ಸೋಲುತ್ತೇನೆ ಎಂದು ನನಗನ್ನಿಸತೊಡಗಿತ್ತು. ಅದೃಷ್ಟವಶಾತ್‌ ನೀವು ಸುರಕ್ಷಿತವಾಗಿ ಬಂದಿರಿ. ಆದರೆ ಇದು ನನ್ನ ಗೆಲುವಲ್ಲ. ನಮಗೆ ಯಾವುದೋ ಕಾಣದ ಕೈ ಸಹಾಯ ಮಾಡಿದ್ದರಿಂದ ನೀವಿಬ್ಬರೂ ಸುರಕ್ಷಿತವಾಗಿ ಬಂದಿರಿ. ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನ ಕೆಲಸವನ್ನು ನಾನು ಸಮರ್ಪಕವಾಗಿ ಮಾಡಲಿಲ್ಲ” ಎಂದು ಕೈಮುಗಿದ. “ಛೆ ಛೆ ನೀವ್ಯಾಕೆ ನಮಗೆ ಕೈಮುಗಿಯುತ್ತೀರಿ? ನಮ್ಮಿಂದಾಗಿ ನೀವಿಂದು ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದಿರಿ. ಈ ದಾಳಿ ನಿಮ್ಮ ಮೇಲಲ್ಲ, ನಮ್ಮ ಮೇಲೆ ಆಗಿದ್ದು. ನಿಜ ಹೇಳಬೇಕೆಂದರೆ ನಿಮ್ಮನ್ನು ಅಪಾಯಕ್ಕೆ ಸಿಲುಕಿಸಿದ್ದಕ್ಕಾಗಿ ನಾವು ನಿಮ್ಮ ಕ್ಷಮೆ ಕೇಳಬೇಕು” ಎಂದು ಹೇಳಿ ಅರವಿಂದ ಅವನನ್ನು ಸಮಾಧಾನಪಡಿಸಿದ. 

       ನಾವು ಅಲ್ಲಿಂದ ಮರಳಿ ನಮ್ಮ ರೂಮಿನತ್ತ ಹೊರಟೆವು. ಆದರೆ ನಮ್ಮ ಮನಸ್ಸಿನ ಶಾಂತಿ ಸಂಪೂರ್ಣವಾಗಿ ನೆಲಕಚ್ಚಿತ್ತು. ಅನುಮಾನವೇ ಇಲ್ಲ, ನಮ್ಮನ್ನು ಯಾರೋ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದ್ದಾರೆ. ಯಾರಿರಬಹುದೆಂದು ಎಷ್ಟು ಯೋಚಿಸಿದರೂ ನಮಗೆ ಏನೊಂದೂ ಹೊಳೆಯಲಿಲ್ಲ. ಆದರೆ ನಾವು ನಮ್ಮ ಪ್ರಯಾಣವನ್ನು ಮುಂದೂಡುವಂತಿರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ಊರಿಗೆ ಹೊರಡಲೇಬೇಕಿತ್ತು. ಹಾಗಾಗಿ ನಮ್ಮ ತನಿಖೆಯನ್ನು ಅರ್ಧಕ್ಕೇ ಮೊಟಕುಗೊಳಿಸುವುದು ಅನಿವಾರ್ಯವಾಗಿತ್ತು. 

       ಅಂದು ರಾತ್ರಿ ಅರವಿಂದ ಆರಾಮವಾಗಿ ನಿದ್ರೆ ಮಾಡಿದರೂ ನನಗೆ ನಿದ್ರೆ ಬರಲೇ ಇಲ್ಲ. ಹನ್ನೆರಡು ಗಂಟೆಯವರೆಗೂ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ನನಗೆ ಇನ್ನೂ ನಿದ್ರೆ ಮಾಡಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲವೆನ್ನಿಸಿತು. ಅರವಿಂದ ಗಾಢವಾದ ನಿದ್ರೆಯಲ್ಲಿದ್ದ. ಅವನ ನಿದ್ರೆಗೆ ಭಂಗ ತರಬಾರದೆಂದು ಟಿವಿಯ ಧ್ವನಿಯನ್ನು ಮ್ಯೂಟ್‌ ಮಾಡಿ ಟಿವಿ ಹಾಕಿಕೊಂಡೆ. ಅದರಲ್ಲಿ ನಾನು ನೋಡುವುದು ಕೆಲವೇ ಚಾನೆಲ್‌ಗಳು. ಕ್ರಿಕೆಟ್‌ ಇದ್ದರೆ ನೋಡುತ್ತೇನೆ. ಅದಿಲ್ಲವಾದರೆ ನ್ಯಾಶನಲ್‌ ಜಿಯಾಗ್ರಫಿಕ್‌, ಅನಿಮಲ್‌ ಪ್ಲಾನೆಟ್‌, ಡಿಸ್ಕವರಿ ಅಥವಾ ನ್ಯಾಟ್‌ಜಿಯೋ ವೈಲ್ಡ್‌ ನೋಡುತ್ತೇನೆ ಅಷ್ಟೆ. ಅಂದು ಯಾವುದೇ ಕ್ರಿಕೆಟ್‌ ಪಂದ್ಯ ಇರಲಿಲ್ಲ. ಉಳಿದ ಚಾನೆಲ್‌ಗಳಲ್ಲೂ ಯಾವುದೇ ಒಳ್ಳೆಯ ಕಾರ್ಯಕ್ರಮ ಕಾಣಿಸಲಿಲ್ಲ. ಅಷ್ಟರಲ್ಲಿ ಚಾನೆಲ್‌ ಬದಲಾಯಿಸುತ್ತ ಹೋದವನಿಗೆ ನನ್ನ ಅಚ್ಚುಮೆಚ್ಚಿನ ಸರ್‌ ಡೇವಿಡ್‌ ಅಟೆನ್‌ಬರೋ ಅವರ ಮುಖ ಕಂಡಂತಾಯಿತು. ಅವರ “ಲೈಫ್‌” ಸರಣಿಯ ಯಾವುದೋ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮ. ಅದರ ಜೊತೆಗೆ ಅವರ ಧ್ವನಿ ಸಹ ನನ್ನ ಅತ್ಯಂತ ಪ್ರೀತಿಯ ಧ್ವನಿಗಳಲ್ಲೊಂದು. ಆದರೆ ನಿದ್ರೆಯಲ್ಲಿದ್ದ ಅರವಿಂದನಿಗೆ ತೊಂದರೆಯಾಗಬಾರದೆಂದು ಆ ಕಾರ್ಯಕ್ರಮವನ್ನು ಮೂಕಿಚಿತ್ರದಂತೆ ನೋಡತೊಡಗಿದೆ. ಅವರ “ರಿಟರ್ನ್‌ ಟು ದ ವಾಟರ್” ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.

       ಸುಮಾರು ಒಂದು ತಾಸು ಅದನ್ನು ವೀಕ್ಷಿಸಿದ ಬಳಿಕ ಎದ್ದು ಮತ್ತೆ ಬಚ್ಚಲುಮನೆಗೆ ಹೋದೆ. ಕೋಣೆಯಲ್ಲಿ ಫ್ಯಾನ್‌ ಸುತ್ತುತ್ತಲೇ ಇದ್ದರೂ ಸೆಕೆ ಅಸಹನೀಯವಾಗಿತ್ತು. ಹಾಗಾಗಿ ತಣ್ಣೀರಿನಲ್ಲಿ ಒಂದು ಸ್ನಾನ ಮಾಡೋಣವೆಂದು ನಲ್ಲಿ ತಿರುಗಿಸಿದೆ. ಸ್ವಲ್ಪಹೊತ್ತು ನೀರು ಬಿದ್ದ ಬಳಿಕ ನಲ್ಲಿಯ ತುದಿಯಿಂದ ಗಾಳಿ ಬರತೊಡಗಿತೇ ಹೊರತು ನೀರು ಬರಲಿಲ್ಲ. ಇದೇನಾಯಿತೆಂದು ಅಚ್ಚರಿಯಿಂದ ನೋಡಿದೆ. ನಲ್ಲಿಯೊಳಕ್ಕೆ ಕೈಬೆರಳು ತೂರಿಸಿದೆ. ಕೈಗೆ ಏನೋ ಲೋಳೆಯಂಥ ಪದಾರ್ಥ ಅಂಟಿಕೊಂಡಂತಾಯಿತು. ಹಾಗೇ ಕೈಯನ್ನು ಇನ್ನೊಂದಿಷ್ಟು ಒಳಕ್ಕೆ ತೂರಿಸಲು ಪ್ರಯತ್ನಿಸಿದೆ. ಅಷ್ಟರಲ್ಲಿ ಆ ಲೋಳೆಯಂಥ ಜೀವಿ ಕೆಳಕ್ಕೆ ಬಕೆಟ್‌ನೊಳಕ್ಕೆ ಬಿದ್ದಿತು. ಅದರ ಹಿಂದೆಯೇ ಅಡ್ಡಿ ನಿವಾರಣೆಯಾಗಿದ್ದರಿಂದ ನೀರು ಸರಾಗವಾಗಿ ಬೀಳತೊಡಗಿತು. ನಾನು ಮತ್ತೆ ಅಚ್ಚರಿಯಿಂದ ಕಣ್ಣು ಹೊಸಕಿಕೊಂಡು ನೋಡಿದೆ. ಬಕೆಟ್‌ ಒಳಗೆ ಇದ್ದಿದ್ದು ಮತ್ತದೇ ನಗುಮುಖದ ಪುಟಾಣಿ ಡಾಲ್ಫಿನ್!‌ ಅದು ನನ್ನ ಮುಖ ನೋಡಿ ಕೋಲ್ಮಿಂಚಿನಂತೆ ನಕ್ಕಿತು. ಅಥವಾ ಅದು ನನ್ನ ಭ್ರಮೆಯೋ? ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡಿದೆ. ಏನಾಶ್ಚರ್ಯ? ಅಲ್ಲಿ ಡಾಲ್ಫಿನ್‌ ಇದ್ದಿದ್ದೇ ಸುಳ್ಳೇನೋ ಎನ್ನುವಂತೆ ಮಾಯವಾಗಿತ್ತು! ಹಾಗಾದರೆ ನನಗೆ ನಿಜಕ್ಕೂ ಹುಚ್ಚು ಹಿಡಿದಿದೆಯೇ?

       ಸ್ನಾನ ಮಾಡಲು ಮನಸ್ಸಾಗದೆ ಮರಳಿ ಬಂದು ಹಾಸಿಗೆಯಲ್ಲಿ ಬಿದ್ದುಕೊಂಡೆ. ನಿದ್ರೆ ಬರುವುದಂತೂ ದೂರದ ಮಾತಾಗಿತ್ತು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನವಾಗಿ ಧ್ಯಾನ ಮಾಡೋಣವೆಂದು ಎದ್ದುಕುಳಿತೆ. ಅದೂ ಸಾಧ್ಯವಾಗಲಿಲ್ಲ. ಕಡೆಗೆ ಬೇರೆ ಇನ್ನೇನೂ ತೋಚದೆ ಸುಮ್ಮನೆ ಮೊಬೈಲ್‌ ಹಿಡಿದುಕೊಂಡು ಜಾನ್‌ ಗ್ರಿಬಿನ್‌ ಅವರ “ಇನ್‌ ಸರ್ಚ್‌ ಆಫ್‌ ಶ್ರೋಡಿಂಜರ್‌ಸ್‌ ಕ್ಯಾಟ್” ಪುಸ್ತಕ ಓದತೊಡಗಿದೆ. 

       ಬೆಳಿಗ್ಗೆ ಐದು ಗಂಟೆಗೆ ಅರವಿಂದ ಎದ್ದಾಗ ನಾನಿನ್ನೂ ಓದುತ್ತಲೇ ಇದ್ದೆ. “ಮೂರ್ತಿ, ನೀನೇನು ಇಡೀ ರಾತ್ರಿ ಮಲಗಿಲ್ವಾ?” ಎಂದು ಕೇಳಿದ. “ಇಲ್ಲ ಕಣೋ, ಮಲಗಿದ್ದೆ. ಈಗೊಂದರ್ಧ ಗಂಟೆಯ ಹಿಂದೆ ಎಚ್ಚರವಾಯಿತು ಅಷ್ಟೆ” ಎಂದು ಹಸೀ ಸುಳ್ಳೊಂದನ್ನು ಹೇಳಿದೆ. ಅದನ್ನು ಅವನೂ ನಂಬಿದ ಅಥವಾ ನಂಬಿದಂತೆ ನಟಿಸಿದ! ಬೇಗಬೇಗ ನಿತ್ಯಕರ್ಮಗಳು, ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ಕಾಫಿ, ತಿಂಡಿ ಮುಗಿಸಿಕೊಂಡು ಊರಿನತ್ತ ಮರಳಿ ಹೊರಟೆವು. ನನಗೇಕೋ ವಿಪರೀತ ತಲೆ ನೋಯುತ್ತಿತ್ತು. ಅಲ್ಲದೇ ಹಿಂದಿನ ಇಡೀ ರಾತ್ರಿ ನಿದ್ರೆಯಿಲ್ಲದಿದ್ದರಿಂದ ಕಾಋು ಚಲಾಯಿಸುವ ಉತ್ಸಾಹವಿರಲಿಲ್ಲ. ಕೀಯನ್ನು ಅರವಿಂದನಿಗೆ ಕೊಟ್ಟು “ನನಗೇಕೋ ಡ್ರೈವ್‌ ಮಾಡುವ ಮೂಡಿಲ್ಲ. ನೀನೇ ಓಡಿಸು” ಎಂದು ಹೇಳಿ ಪಕ್ಕದ ಸೀಟಿನಲ್ಲಿ ಕುಳಿತು, ಸೀಟನ್ನು ಹಿಂದಕ್ಕೆ ವಾಲಿಸಿಕೊಂಡು ಕಣ್ಮುಚ್ಚಿದೆ. 

       ರಾತ್ರಿ ನಿದ್ರೆ ಆಗಿಲ್ಲದ ಕಾರಣ ಕಾರಿನಲ್ಲಿ ಗಾಢವಾದ ನಿದ್ರೆ ಆವರಿಸಿಕೊಂಡಿತು. ಆಗುಂಬೆ ಘಾಟಿ ಬರುವವರೆಗೂ ನಿದ್ರೆ ಮಾಡಿದೆ. ಘಾಟಿಯ ಬುಡಕ್ಕೆ ಬಂದಕೂಡಲೇ ಎಚ್ಚರಿಸುವಂತೆ ಅರವಿಂದನಿಗೆ ಹೇಳಿದ್ದರಿಂದ ಅವನು ಎಚ್ಚರಿಸಿದ. ಅಲ್ಲಿ ಕಣ್ಣಿಗೆ ಬೀಳುವ ಅಪರೂಪದ ಸಿಂಗಳೀಕಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಅವನಿಗೆ ಎಬ್ಬಿಸಲು ಹೇಳಿದ್ದೆ. 

       ಆಗುಂಬೆ ಘಾಟಿ ನನ್ನ ಅಚ್ಚುಮೆಚ್ಚಿನ ಸ್ಥಳಗಳಲ್ಲೊಂದು. ಘಾಟಿಯ ಕೆಳಗೆ ಇರುವ ಸೆಕೆ, ಘಾಟಿಯನ್ನು ಏರುತ್ತಿದ್ದಂತೆಯೇ ಮಾಯವಾಗುತ್ತದೆ. ಜೊತೆಗೆ ರಸ್ತೆಯ ಇಕ್ಕೆಲಗಳಲ್ಲೂ ಸಿಂಗಳೀಕಗಳು ಜಿಗಿದಾಡುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಂದು ಕೂಡ ನನಗೆ ನಿರಾಶೆಯಾಗಲಿಲ್ಲ. ಹತ್ತಾರು ಸಿಂಗಳೀಕಗಳು ಕಣ್ಣಿಗೆ ಬಿದ್ದವು. 

       ನಾವು ಮನೆಗೆ ತಲುಪಿ ಕೂಡಲೇ ಕಚೇರಿಗೆ ಹೋಗಬೇಕಾದ್ದರಿಂದ ಅವಸರವಾಗಿ ಹೊರಟೆವು. ಅಂದು ಕಚೇರಿಯಲ್ಲಿ ಸಾಕಷ್ಟು ಕೆಲಸ ನಮಗಾಗಿ ಕಾಯುತ್ತಿದೆ ಎನ್ನುವುದು ಗೊತ್ತಿತ್ತು. ಆದ್ದರಿಂದ ಸಂಜೆ ಕೆಲಸ ಮುಗಿದಮೇಲೆ ಮತ್ತೆ ಭೇಟಿಯಾಗೋಣ ಎಂದು ಮಾತನಾಡಿಕೊಂಡೆವು. ಅರವಿಂದ ಹೀಗೆ ನಮ್ಮ ಮೇಲೆ ಎರಡು ಸಲ ದಾಳಿಯಾಗಿದೆ ಎಂದು ಪೋಲೀಸರಿಗೆ ದೂರು ಕೊಡುವುದೇ ಒಳ್ಳೆಯದು ಎಂದು ಹೇಳಿದ. ಆದರೆ ನನಗೆ ಅದು ಸರಿಯೆಂದು ಕಾಣಲಿಲ್ಲ. ಏಕೆಂದರೆ ನಮ್ಮ ಮೇಲೆ ನಡೆದ ದಾಳಿ ಸಾಮಾನ್ಯ ದಾಳಿಗಳಂತಿರಲಿಲ್ಲ. ಅದರಲ್ಲಿ ಯಾವುದೋ ಮಾನವಾತೀತ ಶಕ್ತಿಯ ಕೈವಾಡವಿದೆ ಎಂದು ಬಲವಾಗಿ ನನಗೆ ಅನ್ನಿಸುತ್ತಿತ್ತು. ಜೊತೆಗೆ ದಾಳಿ ನಡೆದಿದ್ದು ಸಮುದ್ರದ ಮಧ್ಯದಲ್ಲಿ. ಅದಕ್ಕೆ ಯಾವ ಸಾಕ್ಷಿ ಕೂಡ ಇರಲಿಲ್ಲ. ಯಾವುದಕ್ಕೂ ಸಂಜೆ ಭೇಟಿಯಾಗೋಣ ಎಂದು ಹೇಳಿ ಅವನನ್ನು ಕಳುಹಿಸಿ ನಾನೂ ಕಚೇರಿಗೆ ಹೊರಟೆ. 

       ಅಂದು ಕಚೇರಿಯ ಕೆಲಸಗಳಲ್ಲೂ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ ಊಟದ ವಿರಾಮದ ವೇಳೆ ನನ್ನ ಕಂಪ್ಯೂಟರಿನ ಡೆಸ್ಕ್‌ಟಾಪ್‌ ಚಿತ್ರವನ್ನಾದರೂ ಬದಲಾಯಿಸೋಣ ಎಂದುಕೊಂಡು ಎಲ್ಲ ವಿಂಡೋಗಳನ್ನು ಕ್ಲೋಸ್‌ ಮಾಡಿ ಡೆಸ್ಕ್‌ಟಾಪನ್ನು ಯಾವ ಚಿತ್ರದಿಂದ ಅಲಂಕರಿಸಲಿ ಎಂದು ಯೋಚಿಸತೊಡಗಿದೆ. ಅಷ್ಟರಲ್ಲಿ ನನ್ನ ಕಣ್ಣುಗಳನ್ನು ನಾನೇ ನಂಬಲಾರದಂಥ ಘಟನೆಯೊಂದು ನಡೆಯಿತು. ಆ ಡೆಸ್ಕ್‌ಟಾಪಿನಲ್ಲಿ ನನಗಿಷ್ಟ ಎಂಬ ಕಾರಣಕ್ಕೆ ಒಂದು ಡಾಲ್ಫಿನ್‌ನ ಚಿತ್ರವನ್ನು ಹಾಕಿಟ್ಟುಕೊಂಡಿದ್ದೆ. ಈಗ ಆ ಡಾಲ್ಫಿನ್‌ ಪರದೆಯಿಂದ ಹೊರಕ್ಕೆ ತಲೆಹಾಕಿ ನನ್ನನ್ನು ನೋಡಿ ಮುಗುಳ್ನಗುತ್ತಿದೆ! ಅದರ ಹಿಂದೆಯೇ “ಎಚ್ಚರ, ಅಪಾಯ ನಿನ್ನ ಬೆನ್ನುಹತ್ತಿದೆ!” ಎಂದು ಯಾರೋ ಪಿಸುದನಿಯಲ್ಲಿ ನುಡಿದಂತಾಯ್ತು! ಇದೇನಾಗುತ್ತಿದೆ ನನಗೆ? ನಿಜಕ್ಕೂ ಬುದ್ಧಿಭ್ರಮಣೆಯಾಗುತ್ತಿದೆಯೇ? ನಾನು ಕಂಪ್ಯೂಟರ್‌ ಪರದೆಯನ್ನು ಇಡೀ ದಿನ ದಿಟ್ಟಿಸುವುದರಿಂದ ಅದರ ವಿಕಿರಣಗಳನ್ನು ಸ್ವಲ್ಪಮಟ್ಟಿಗಾದರೂ ತಡೆಯಲೆಂದು ಒಂದು ಸಾದಾ ಕನ್ನಡಕ ಧರಿಸುತ್ತಿದ್ದೆ. ಆ ಕನ್ನಡಕವೇನಾದರೂ 3ಡಿ (ಮೂರು ಆಯಾಮಗಳ ದೃಶ್ಯವನ್ನು ತೋರಿಸುವ ಕನ್ನಡಕ) ಕನ್ನಡಕವಾಗಿ ಬದಲಾಗಿದೆಯೇ? ಕನ್ನಡಕ ತೆಗೆದು ಮತ್ತೊಮ್ಮೆ ಕಣ್ಣುಜ್ಜಿಕೊಂಡು ಪರದೆಯನ್ನು ನೋಡತೊಡಗಿದೆ. ಎಲ್ಲವೂ ಇದ್ದಂತೆಯೇ ಇದೆ! ಡಾಲ್ಫಿನ್‌ ಚಿತ್ರ ಅದರಷ್ಟಕ್ಕೆ ಇದ್ದ ಹಾಗೆಯೇ ಇದೆ! ನನ್ನ ಪಕ್ಕದಲ್ಲೇ ನಿಂತಿದ್ದ ಸಹೋದ್ಯೋಗಿ ಪ್ರಕಾಶ್‌ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ನಿಂತಿದ್ದ. ಹಾಗಾದರೆ ಈಗ ಕಂಡಿದ್ದು, ಕೇಳಿಸಿದ್ದು ಎಲ್ಲ ನನಗೆ ಮಾತ್ರ! ನನಗೆದುರಾಗಲಿರುವ ಅಪಾಯದ ಬಗ್ಗೆ ಯಾರೋ ಎಚ್ಚರಿಸುತ್ತಿದ್ದಾರೆ! ಆದರೆ ಯಾರದು? ಯಾಕೆ ಸ್ಪಷ್ಟವಾದ ಎಚ್ಚರಿಕೆ ನೀಡುತ್ತಿಲ್ಲ? ಕೆಲವೇ ಕ್ಷಣಗಳವರೆಗೆ ಮಿಂಚಿ ಮರೆಯಾಗುತ್ತಿರುವ ಈ ಡಾಲ್ಫಿನ್‌ ಮಹಾಶಯ ಯಾರು? ಅದೇಕೆ ಏನನ್ನು ಹೇಳಬೇಕೋ ಅದನ್ನು ಸ್ಪಷ್ಟವಾಗಿ, ಸಂಪೂರ್ಣವಾಗಿ ಹೇಳುತ್ತಿಲ್ಲ?

       ನನಗೆ ತಲೆ ಸಿಡಿಯಲಾರಂಭಿಸಿತು. ಇನ್ನು ಕೂರುವುದು ಸಾಧ್ಯವೇ ಇಲ್ಲವೆಂದೆನಿಸಿ ಬಾಸ್‌ ಕೊಠಡಿಗೆ ಹೋಗಿ, ತಲೆ ವಿಪರೀತ ನೋಯುತ್ತಿದೆಯೆಂದೂ ಕೂರಲು ಸಾಧ್ಯವಾಗುತ್ತಿಲ್ಲವೆಂದೂ ಹೇಳಿ ಅರ್ಧದಿನ ರಜಾ ಹಾಕಿ ಮನೆಯತ್ತ ಹೊರಟೆ. ಮನೆಗೆ ಬಂದು ಕೋಣೆಗೆ ಹೋಗಿ ಸುಮ್ಮನೆ ಮಲಗಿದೆ. ಮಲಗಿದ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು.

       ಮೂರು ತಾಸು ಗಾಢವಾದ ನಿದ್ರೆ ಬಂತು. ಈ ಸಲ ಯಾವ ಕನಸು ಸಹ ಬೀಳಲಿಲ್ಲ. ಹಾಗಾಗಿ ಸಂಜೆ ಐದು ಗಂಟೆಗೆ ಎದ್ದಾಗ ಒಂದು ರೀತಿಯ ಹೊಸ ಉಲ್ಲಾಸದಲ್ಲಿದ್ದೆ. ಎದ್ದು ಮನೆಯ ಬಾಗಿಲು ತೆಗೆದು ಹೊರಬರುತ್ತಿದ್ದಂತೆ ಅಚ್ಚರಿಯಿಂದ ಮೂಕನಾಗುವ ಸರದಿ ನನ್ನದಾಯಿತು. ನನ್ನ ಗೆಳೆಯ, ಜಾದೂಗಾರ ಬೆನ್‌ ಫ್ಯಾಂಟಮ್‌ ಮನೆಯ ಗೇಟು ತೆಗೆದು ಒಳಬರುತ್ತಿದ್ದ!

Category:Stories



ProfileImg

Written by Srinivasa Murthy

Verified