ಸಮಯ ಮಧ್ಯಾಹ್ನ ಹನ್ನೆರಡು ಗಂಟೆ. ಅಡುಗೆ ತಯಾರಿಯಲ್ಲಿ ಇದ್ದಳು ಅವಂತಿಕಾ. ಏನೋ ಶಬ್ದವಾಯಿತು ಎಂದೆನಿಸಿ ಕಟರ್ ನಿಂದ ಬೆಂಡೆಕಾಯಿ ಕಟ್ ಮಾಡುವುದನ್ನು ನಿಲ್ಲಿಸಿದಳು. ಕೆಳೆಗೆ ನೆಟ್ಟಿದ್ದ ದೃಷ್ಟಿ ಶಬ್ದವನ್ನು ಹುಡುಕಿ ಹೊರಳಿತು. ಅಷ್ಟರಲ್ಲೆ ಅವಳ ಸೊಂಟವನ್ನು ಬಿರುಸಾದ ಎರಡು ಕೈಗಳು ಬಂಧಿಸಿ ಅದುಮಿದವು. ಬೆನ್ನಿಗೆ ಅವನ ಇಡೀ ಶರೀರ ತಾಕಿತ್ತು, ಬಿಸಿ ಉಸಿರು ಅವಳ ಭುಜಕ್ಕೆ ಬಡಿಯುತ್ತಿತ್ತು. ಅವಳು ಗಾಬರಿಯಾಗಿ ಹಿಂದೆ ನೋಡಿದಾಗ. "ಅವಿ ಅಂಟಿ... ಅವಿ ಅಂಟಿ...ನಿಮಗೆ ಭಯ ಆಯ್ತು ತಾನೆ, ಹೇಗಿತ್ತು ನನ್ನ 'ಪ್ರಾಂಕ್'" ಎಂದು ತೊದಲಿಸುತ್ತ ಮುಂದಿನ ಮನೆಯ ಪ್ರಣೀತ್ ಬಂದಿದ್ದ.ಅವಳು ಅವನಿಂದ ಕೊಸರಿಕೊಂಡು ದೂರ ಸರಿಯುತ್ತ, "ಅಬ್ಬಾ ಏನೋ ಪ್ರಣೀತ್ ನೀನು.....ನನಗೆ ಎಷ್ಟು ಭಯ ಆಯ್ತು ಗೊತ್ತಾ. ಪಲ್ಲು ಅಕ್ಕ ಟ್ಯೂಷನ್ ಗೆ ಹೋಗಬೇಕಾದರೆ ಮೇನ್ ಡೋರ್ ಮುಂಚಿಕೊಂಡು ಹೋಗ್ಲಿಲ್ಲವಾ... ಎಂದು ಓಡುತ್ತಾ ಹೊರ ನಡೆದಳು. ಬಾಗಿಲು ತರೆದಿತ್ತು. ಪ್ರಣೀತ ಹಿಂದೆನನೇ ಬಂದು, ಆಂಟಿ ಬಾಗಿಲು ಹಾಕಿ ಎಂದ, ಯಾಕೆ ಪ್ರಣೀತ ನಿಮ್ಮ ಅಮ್ಮ ಒಬ್ಬರೇ ಇರತಾರೆ ಮನೆಯಲ್ಲಿ ನೀನು ಎಲ್ಲರಿಗಿಂತ ಸ್ಟ್ರಾಂಗ್ ಮ್ಯಾನ್ ಅಲ್ವಾ ಮನೆಗೆ ಹೋಗು. ನೀನು ಎಲ್ಲಿಯಾದರೂ ಹೋದರೆ ಪಾಪ ಅವರಿಗೆ ಟೆನ್ಶನ್ ಆಗುತ್ತೆ ಅಂತ ಅವಂತಿಕಾ ಹೇಳುವಾಗ, ಅವನ ಕಣ್ಣುಗಳು ಅವಳನ್ನೇ ದಿಟ್ಟಿಸಿ ನೋಡುತ್ತಿದ್ದವು.
ಪ್ರಣೀತ ಇಪತ್ತು ವರ್ಷದ ಯುವಕನ ಆರೋಗ್ಯವಂತ ದೇಹ ಹೊಂದಿದ್ದ, ಆದರೆ ಮೆದಳು ಮಾತ್ರ ಚಿಕ್ಕ ಮಗುವಿನಂತೆ. ಕಪೂರ್ ಎಂಬ ಪಂಜಾಬಿ ಕುಟುಂಬದ ಏಕೈಕ ಗಂಡು ವಾರಸುದಾರ. ಇವನ ಅಕ್ಕನಿಗೆ ಇವನಿಗೆ ಹದಿನೈದು ವರ್ಷದ ಅಂತರ. ಅವಳ ಮದುವೆಯಾಗಿ ನಾಗಪುರ್ ದಲ್ಲಿ ಸೆಟಲ್ ಆಗಿದ್ದಳು. ಲೇಟ್ ಪ್ರೆಗನನ್ಸಿಯ ಕಾರಣದಿಂದ 'ಚಂದಾ ಕಪೂರ್' ಅವಧಿ ಪೂರ್ವ ಪ್ರಸವ ಆಗಿತ್ತು ಕಾರಣ ಮಗುವಿನ ಸರಿಯಾಗಿ ಬುದ್ಧಿ ಬೆಳವಣಿಗೆ ಆಗಿರಲಿಲ್ಲ.ಪೇಪರ್ ಮಿಲ್, ಟೆಕ್ಸಟೈಲ್ಸ್ ಕಾರ್ಖಾನೆಗಳು, ಶೋ ರೂಮ್ ಗಳು ಹೀಗೆ ನಾನಾ ವ್ಯಪಾರ-ವ್ಯವಹಾರದಲ್ಲಿ ಇದ್ದ ದಿಲಜೀತ ಕಪೂರ್, ಪ್ರಣೀತನ ತಂದೆಗೆ ಬೇಕಾದಷ್ಟು ಆಸ್ತಿ ಇತ್ತು.
ವ್ಯಾಪಾರದಲ್ಲಿ ಯಾವಾಗಲೂ ವ್ಯಸ್ತವಾಗಿರುವ ತಂದೆ, ಪ್ರಣೀತ ಮೇಲೆ ಅಷ್ಟೊಂದು ಗಮನ ಕೊಡುತ್ತಿರಲಿಲ್ಲ. ಒಳಗೊಳಗೇ ಕಪೂರ್ ಸಾಹಾಬ್ಗೆ, ಬೇಡಿ ಬಯಸಿ ಹಡೆದ ಮಗ ಹೀಗಿದ್ದಾನಲ್ಲ ಎಂಬ ಹತಾಶೆ ಇತ್ತು.
ಚಂದಾ ಭಾಬಿ ಇವನ ಈ ಅವಸ್ಥೆ ನೋಡಿ ಮಾನಸಿಕವಾಗಿ ಕುಂದಿ ಹೋಗಿದ್ದಳು. ಕಾಯಿಲೆ ಎಂದು ಸದಾ ಹಾಸಿಗೆ ಮೇಲೆ ಮಲಗಿರುತಿದ್ದಳು. ಅಡುಗೆಯವಳು ಅಡುಗೆ ಮಾಡಿ ಹೋಗುತ್ತಿದ್ದಳು. ಕೆಲಸದವರು ಕೆಲೆಸ ಮಾಡಿ ಹೊರಡುತ್ತಿದ್ದರು. ಇಷ್ಟೆಲ್ಲಾ ಸೌಕರ್ಯ ಮಾಡಿಕೊಟ್ಟಿದ್ದೇನೆ, ಪ್ರಣೀತ್ ನನ್ನೂ ಚೆನ್ನಾಗಿ ನೋಡಿಕೋ ಎಂದು ದಿಲಜೀತ್ ತನ್ನ ಹೆಂಡತಿಯಿಂದ ಬಯಸುತ್ತಿದ್ದ. ಆದರೆ ಅವಳಿಗೆ ಅದರಲ್ಲೂ ಆಸಕ್ತಿ ಇರಲಿಲ್ಲ. ಸುಮ್ಮನೆ ಏನೋ ಯೋಚನೆ ಮಾಡುತ್ತಾ ಮಲಗಿಕೊಂಡೆ ಕಾಲ ಕಳೆಯುತ್ತಿದ್ದಳು .ಇತ್ತ ಪ್ರಣೀತ, ಕೆಲೆಸದವರ ಜೊತೆ ಮಾತಾಡುತ್ತ, ರಗಳೆ ಮಾಡುತ್ತಾ, ಅದು ಇದು ತಿನ್ನುತ್ತಾ ಸಮಯ ತಳ್ಳುತ್ತಿದ್ದ. ಒಮ್ಮೊಮ್ಮೆ ವಿಪರೀತ ಹಟ. ಬರೀ ತಿಂದು ಕೂಡುವದರಿಂದ, ಯಾವುದೇ ಚಟುವಟಿಕೆ ಇರದೆ ಅವನ ದೇಹ ಮಾತ್ರ ಬೆಳದಿತ್ತು, ನೋಡಿದರೆ ಇಪತ್ತ ಐದರ ಪ್ರೌಢ ಪುರುಷನಂತೆ ಕಾಣಿಸುತ್ತಿದ್ದ. ಅವನ ಬುದ್ಧಿ ಚುರುಕಾಗಿಸಲು ಹಲವಾರು ಚಿಕಿತ್ಸೆಯ ಪ್ರಯತ್ನಗಳು ಮಾಡಿದ್ದರು, ಫಲಕಾರಿ ಆಗಿರಲಿಲ್ಲ. ವಯೋಸಹಜ ಆಂತರಿಕ ಹಾಗು ಬಾಹಿಕ ಬೆಳವಣಿಗೆ ಆಗಿತ್ತು. ಯವ್ವನದ ಬದಲಾವಣೆಗಳಳೂ ಆಗಿರಬಹುದು. ಹಾರ್ಮೋನ್ ಚೇಂಜಿಸ್ ಕೂಡ ಘಟಿಸಿರಬಹುದು. ಆದರೆ ಅದು ಅವನಿಗೆ ತಿಳಿಯದು, ವ್ಯಕ್ತ ಪಡಿಸಲು ಬರುತ್ತಿರಲಿಲ್ಲ. ಯಾರು ಅವನನ್ನು ಅರ್ಥ ಮಾಡಿಕೊಳ್ಳುವರಿರಲಿಲ್ಲ. ಇದು ಸರಿ ಇದು ತಪ್ಪು ಅಂತ ತಿಳಿಸಿಕೊಡುವರಿರಲಿಲ್ಲ. ತಿಳಿಸಿ ಕೊಟ್ಟರು, ಅದು ಅವನಿಗೆ ತಿಳುವಳಿಕೆಗೆ ಸರಿ ಹೊಂದುತ್ತಿರಲಿಲ್ಲ.ಆದರೆ ಅವಂತಿಕಾ ಆಂಟಿ ಕಳೆದ ಒಂದೂವರೆ ವರ್ಷದಿಂದ ಅವನ ಮಸುಕ ಮಸುಕಾದ ಬಾಳಿಗೆ ಪ್ರಖರ ಬೆಳ್ಳನೇ ಬೆಳಕಾಗಿ ಬಂದಿದ್ದಳು. ಪಲ್ಲು ಅಕ್ಕನ ಜೊತೆ ಆಗಾಗ ಕೇರಂ ಆಡಲು ಬರತೊಡಗಿದ. ಅವಂತಿಕಾ ಅವನ ಸ್ಥಿತಿ ನೋಡಿ ಮರುಗಿ, ಅವನಿಗೆ ತುಂಬಾ ಪ್ರೀತಿಯಿಂದ ಮಾತಾಡಿಸುತ್ತಿದ್ದಳು. ಕೆನ್ನೆ ಸವರಿ, ತಲೆ ಮೇಲೆ ಕೈಯಾಡಿಸಿ "ಶಹಭಾಷ ಬೇಟಾ! ಪ್ರಣೀತ ಕುಮಾರ್" ಅನ್ನುತ್ತಿದ್ದಳು.
ಅವಳ ಅಕ್ಕರೆಯ ಸ್ಪರ್ಶ ಪ್ರಣೀತಗೆ ಮೈಯಲ್ಲಿ ಮಿಂಚು ಸಂಚರಿಸಿದಂತಾಗುತ್ತಿತ್ತು. "ಆಂಟಿ ನೀವು ಎಷ್ಟು ಒಳ್ಳೆಯವರು. ಯು ಆರ್ ಬ್ಯುಟಿಫುಲ್! ಅಂತ ಹರಕು ಮುರುಕ್ ಇಂಗ್ಲಿಷ್ ನಲ್ಲಿ ಹೇಳುತ್ತಿದ್ದ. ಅವಳನ್ನೇ ನೋಡುತಿದ್ದ. ಪಾಪ ಅವನಿಗೆ ಅಷ್ಟೊಂದು ಅಕ್ಕರೆಯಿಂದ ತನ್ನ ಸ್ವಂತ ತಂದೆ ತಾಯಿಯೇ ಮಾತಾಡಿಸಿರಲಿಲ್ಲ. ಒಂದು ಬಾರಿ ಅವಂತಿಕಾ ಅವನಿಗೆ ತಿನ್ನಲು ಮೊಸರನ್ನ ಕೊಟ್ಟಿದ್ದಳು. ಅವನಿಗೆ ಅನ್ನ ಉಣ್ಣುವಾಗ ಚೆಲ್ಲಿಕೊಳ್ಳುತ್ತಾನೆ ಎಂದು ಅನ್ನ ಹಾಕುತ್ತಿರಲಿಲ್ಲ. ಬರೀ 'ರೋಟಿ' ತಿಂದು ರೋಸಿ ಹೋದ ಪ್ರಣೀತ, ಅವಿ ಆಂಟಿ ಮಾಡಿದ ಕೆನೆ ಮೊಸರನ್ನ ಅವನ ಬಾಯಿಗೆ ತುತ್ತು ಇಟ್ಟಾಗ. ಅವನಿಗೆ ಅತಿಯಾದ ಖುಷಿ ಕೊಟ್ಟಿತ್ತು. ಬಂದಾಗಲೆಲ್ಲ ಮೊಸರನ್ನ ಕೇಳುತ್ತಿದ್ದ. ಮನೆಯಲ್ಲಿ ಅವನು ಎಲ್ಲದಕ್ಕೂ ಬೈಗುಳ ತಿನ್ನಬೇಕಾಗುತ್ತಿತ್ತು. ಕೆಲಸದವರ ಅಲಕ್ಷ, ಅಸಡ್ಡೆಗೆ ಗುರಿಯಾಗುತ್ತಿದ್ದ. ಕೆಲೆಸದವರು ಇವನ ಹಠ, ಕೂಗಾಟ ತಾಳಲಾರದೇ, ಯಜಮಾನರಿಗೆ ಹೇಳಿ ಕೋಣೆಯಲ್ಲಿ ಕೂಡಿಹಾಕಿಸುತ್ತಿದ್ದರು. ಅವನ ಹೆತ್ತ ತಾಯಿ ಇದನ್ನೆಲ್ಲಾ ನೋಡಿಯೂ ನೋಡದಂತೆ, "ಪ್ರಣೀತ ಬೇಟಾ ಹೀಗೆಲ್ಲ ಮಾಡಬೇಡ ಕಂದ " ಅಂತ ಹೇಳಿ ಸುಮ್ಮನಾಗಿ ಬಿಡುತ್ತಿದ್ದಳು.
ಅವಾಗ ಅವಾಗ ಅಕ್ಕ ಫೋನ್ ಮಾಡಿ, ಮಮ್ಮಿ ಪ್ರಣೀತ ಗೆ ಆಶ್ರಮಕ್ಕೆ ಅಥವಾ 'ಸ್ಪೆಷಲ್ ಸ್ಕೂಲ್' ಹಾಸ್ಟೆಲ್ ಗೆ ಹಾಕಿ ಬೀಡಿ ಎಂದು ಸಲಹೆ ನೀಡುತ್ತಿದ್ದಳು.
ಅಕ್ಕನ ಆ ಹಾಸ್ಟೆಲ್ ಸಲಹೆ ಈಗ ಸೀರಿಯಸ್ ಆಗ್ತಾ ಬರುತ್ತಿತ್ತು. ಅದು ಪ್ರಣೀತ ಕಿವಿಗೆ ಬಿದ್ದಿತ್ತು. ಅದನ್ನು ಮರೆಯಲು, ಅದರಿಂದ ದೂರ ಉಳಿಯಲು, ಅವನು ಅವಂತಿಕಾ ಮನೆಗೆ ಬರ ಹತ್ತಿದ್ದ. ಅವಂತಿಕಾ ಅವರ ಪರಿವಾರದ ಬಗ್ಗೆ ದಿಲಜಿತ್ ಗೆ ವಿಶ್ವಾಸ ಇತ್ತು. ಹೀಗಾಗಿ ಅವನನ್ನು ಇವರ ಮನೆಗೆ ಹೋಗಲು ತಡೆಯುತ್ತಿರಲಿಲ್ಲ. ಇಲ್ಲವಾದರೆ, ಅವನು ಒಬ್ಬನೇ ಎಲ್ಲಿಯೂ ಕದಲಲೂ ಬಿಡುತ್ತಿರಲಿಲ್ಲ.ಆದರೆ, ಇವತ್ತು ಯಾಕೋ ಅವನು ಬಂದ ರೀತಿ, ಅವನ ಕಣ್ಣು, ಅವನ ಬಾಡಿ ಲಾಂಗ್ವೇಜ್ ನೋಡಿ ಅವಂತಿಕಾಗೆ ಕಸಿವಿಸಿ ಆಗಿತ್ತು. ಏನೋ ಸರಿ ಇಲ್ಲ ಅಂತ ಅವಳ ಎದೆ ಡವ ಡವ ಅನ್ನುತಿತ್ತು. ಈ ಗುಮಾನಿ ಅವಳಿಗೆ ಪ್ರಣೀತ, ಮಗಳ ಜೊತೆ ಆಡ ಬೇಕಾದರೂ ಬಂದಿತ್ತು. ಆದರೆ ಅವಳು, ಅದನ್ನು ಬೇಕೆಂದಲೇ ಮರೆತ್ತಿದ್ದಳು. ಪಾಪ ಚಿಕ್ಕ ಹುಡುಗನ ಮನಸ್ಸು, ಎಂಥ ಕೆಟ್ಟ ಆಲೊಚನೆ ನನಗೆ ಎಂದು ಕೆನ್ನೆ ಕೆನ್ನೆ ಬಡಿದುಕೊಂಡಿದ್ದಳು. " ನಾವು ಹೆಂಗಸರೇ ಇಷ್ಟು ಯಾವಾಗಲೂ ಎಲ್ಲರ ಮೇಲೆ ಸಂಶಯ ಪಡ್ತೀವಿ. ಅದರಲ್ಲಿ ಬೆಳೆಯುವ ಮಗಳು ಇದ್ದರೆ, ಸೆರಗಿನಲ್ಲಿ ಕೆಂಡ ಹಿಡಿದುಕೊಂಡು ಅಡ್ಡಾಡಿದ ಹಾಗೆ" ಎಂದು ಕೊಂಡು ಸುಮ್ಮನಾಗಿದ್ದಳು.
ಆದರೆ ಇವತ್ತು, ಅವನು ಯಾಕೋ ಎಂದಿನಂತೆ ಅನಿಸ್ತಾ ಇಲ್ಲ. ಅವಂತಿಕಾ ಕೊಸರಿಕೊಂಡಾಕ್ಷಣ, ಥಟ್ ಅಂತ ಕೇರಂ ಬೋರ್ಡ್ ಮುಂದೆ ಕುಳಿತಿದ್ದ, ಪ್ರಣೀತ. ಸಡನ್ ಆಗಿ ಕೇರಂ ಕಾಯಿನ್ ಮನೆಯಲ್ಲ ತುರಾಡಿ ಬಿಟ್ಟ.
ಅವಳ ಯೋಚನಾ ಲಹರಿ ಮತ್ತೆ ಮುರಿದಿತ್ತು. "ಹೇ ಪ್ರಣೀತ ಎನ್ ಮಾಡ್ತಾ ಇದ್ದಿಯಾ, ಯಾಕೆ ಹೀಗೆ ಹುಚ್ಚನ ಹಾಗಾಡ್ತಾ ಇದ್ದಿಯಾ" ಅಂತ ಜೋರಾಗಿ ಕಿರುಚಿದಳು. ಅವನು ಈ ಮಾತಿಗೆ ಕೋಪದಿಂದ ನಡುಗಿದ, ಮೈ ಕೈ ಅದರುತಿದ್ದವು.
" ಆಂಟಿ ನಾನು ಹುಚ್ಚ ಅಲ್ಲ, ನಾನು...ನಾನು ಜಾಣ, ನಾನ್ ಜಾಣ ಅಂತ ನೀವೊಬ್ಬರೇ ಅಂದಿದ್ದು. ಅದಕ್ಕೆ ನಾನು ನಿಮ್ಮನ ಲವ್ ಮಾಡೋದು. ಬಾಕಿ ಎಲ್ಲರು ನನ್ನ ಹುಚ್ಚ ಅಂತಾನೆ ಅಂತಾರೆ. ನನ್ನ ಎಲ್ಲೋ ಕಳಿಸಿಬಿಡ್ತಾರಂತೆ, ಮನೆಯಿಂದಯಾಚೆ, ನಿಮ್ಮಿಂದಾಚೆ. ನನಗೆ ನಿಮ್ಮನ್ನ ಬಿಟ್ಟು ಎಲ್ಲೂ ಹೋಗಕ್ಕೆ ಇಷ್ಟ ಇಲ್ಲ. ನನಗೆ ಅಪ್ಪ ಬೆಲ್ಟ್ ತೊಗೊಂಡು ಹೊಡೀತಾರೆ ನೋಡಿ ನೋಡಿ, ಎಂದು ಟೀಶರ್ಟ್ ಬಿಚ್ಚಿ ತೋರಿಸಿದ. ಎದೆಯ ಮೇಲೆಲ್ಲ ಕೆಂಪು ಕೆಂಪು ಬಾರು ಮುಡಿದ್ದವು . ಇಷ್ಟು ನೋವಾದರೂ ನಾನು, ನೀವಿದ್ದೀರಲ್ಲ ನನ್ನ ಪ್ರೀತಿಸುವರು ಎಂದು ಸಹಿಸಿಕೊಳ್ಳುತ್ತೇನೆ ಗೊತ್ತಾ ಅಂತ ಇನ್ನೂ ತೊದಲಿಸಿದ. ನನಗೆ ನಿಮ್ಮ ಜೊತೇಲಿ ನಿಮ್ಮ ಮನೆಯಲ್ಲಿ ಇರಬೇಕು. ನಿಮ್ಮ ತೊಡೆಯ ಮೇಲೆ ತಲೆ ಇಟ್ಟು ಮಲ್ಕೋ ಬೇಕು ನೀವು ನಿಮ್ಮ ಕೈಯಿಂದ ನನ್ನ ತಲೆ ಸವರಬೇಕು. ಹಣೆಯ ಮೇಲಿನ ಕೂದಲನ್ನು ಮೆಲ್ಲೆಗೆ ಸರಿಸಬೇಕು. "ಆವತ್ತು ಮಾಡಿದ್ದರಲ್ಲ ಹಾಗೆ ಅವಿ ಅಂಟಿ" .
" ನೀವು ಕಥೆ ಹೇಳ್ಬೇಕು, ನಿಮ್ಮ ಧ್ವನಿ ಕೇಳ್ತಾ ನಾನು ನಿದ್ದೆ ಮಾಡಬೇಕು. ಅಪ್ಪನಿಂದ ದಿನಾ ರಾತ್ರಿ ಹೊಡಿಸಿಕೊಂಡು, ಅಳ್ತಾ ಮಲಗೋದು ನನಗೆ ಇಷ್ಟವಿಲ್ಲ. ನನಗೆ ಹಾಸ್ಟೆಲ್ ಗೆ ಹೋಗುವದು ಇಷ್ಟವಿಲ್ಲ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾ, ಅವಂತಿಕಾಳನ್ನು ಬಿಗಿದಪ್ಪಿದ.ಅವನ ಈ ಸ್ಥಿತಿ ನೋಡಿ, ಅವಂತಿಕಾಗೆ ಅಳು ಬಂದಿತು. ಅವನ ತಲೆ ನೇವರಿಸ ಬೇಕೆಂದು ಎತ್ತಿದ ಕೈ ಯಾಕೋ ನಿಂತಿತು. ಅವನ ಅಪ್ಪುಗೆ ಯಾಕೋ ಬಿಗಿಯಾದಂತೆ ಅನಿಸಿತು. ಮತ್ತೆ ಅವಳ ಕನಿಕರ ಭಾವ ಕರಗಿ, ಸಂಶಯ ಪಿಶಾಚಿ ಎಚ್ಚೆತ್ತುಕೊಂಡಿತು. " ಸರಿ ಸರಿ ನೀನು, ಬಿಡು ನನ್ನ, ಮನೆಗೆ ಹೋಗು. ಎಂದು ಗೋಡೆಗೆ ಮುಖ ಮಾಡಿ, ಅವನನ್ನು ನೋಡದೆಯೇ ಕೂಗಿದಳು. ಆಂಟಿ ಅಂಟಿ ಎಂದು ಮತ್ತೆ ಅವಳ ಹತ್ತಿರ ಬರ ತೊಡಗಿದ. ಅವಳು ಬೇಗನ ಸರಿದು, ಮೇನ್ ಡೋರ್ ನಿಂದ ಹೊರ ಓಡಿದಳು, ಚಂದಾ ಭಾಬಿ ಎಂದು ಕೂಗಿದಳು. ಅಷ್ಟರಲ್ಲಿ ಅವಳ ಪಾದಗಳನ್ನು ಹಿಡಿದು ಸಾಷ್ಟಾಂಗ ಅಡ್ಡ ಬಿದ್ದಿದ್ದ ಪ್ರಣೀತ. " ಆಂಟಿ ನೀವು ಮನೆಲಿ ನನ್ನ ಬಗ್ಗೆ ಕಂಪ್ಲೇಂಟ್ ಹೇಳ್ಬೇಡಿ ಪ್ಲೀಸ್. ನೀವೂ ಹೇಳಿದರೆ ನಾಳೆನೇ ನಾನು ಹಾಸ್ಟೆಲ್ಗೆ ಹೋಗಬೇಕಾಗುತ್ತದೆ. ಎಂದು ಅಳುತ್ತಿದ್ದ." ಪ್ರಣೀತ ನಾನು ಹೇಳುವುದಿಲ್ಲ, ಆದರೆ ನೀನು ಇವತ್ತೇ ಕೊನೇ ಇನ್ಮೇಲೆ ನಮ್ಮ ಮನೆಗೆ ಬರಬೇಡ. ಬರೋದಿಲ್ಲ ಅಂತ ಪ್ರಾಮಿಸ್ ಮಾಡು ಎಂದು ಹೇಳಿದಳು. ಅದಕ್ಕೆ ಅವನು ಸರಿ ಎಂದು ಹೇಳಿ ಬಿಕ್ಕುತ್ತ ಮನೆಯತ್ತ ಹೊರಟ.
ಒಂದು ವಾರದ ನಂತರ ....
ದಿಲಜೀತ ಕಾರಿನಿಂದ ಇಳಿಯುತ್ತ, ಯಾರೊಟ್ಟಿಗೊ ಫೋನ್ ನಲ್ಲಿ ಮಾತನಾಡುತಿದ್ದರು. ಅದನ್ನು ಕೇಳಿಸಿ ಕೊಂಡ ಅವಂತಿಕಾ ಅಲ್ಲಿ ನಿಲ್ಲಲಾಗಲಿಲ್ಲ .
ಅವರು ಹೇಳಿದ ಪ್ರಕಾರ....ಪ್ರಣೀತ ಆಸ್ಪತ್ರೆಯ ಇಂಟನ್ನಿಸಿವ ಕೇರ್ ನಲ್ಲಿ ಸಾವು ಬದುಕಿನೊಂದಿಗೆ ಹೊರಾಡುತ್ತಿದ್ದಾನೆ. ಆಗಾಗ ಫಿಟ್ಸ್ ಬರ್ತಾ ಇದೆ. ಇನ್ನೊಮ್ಮೆ ಫಿಟ್ಸ್ ಬಂದರೆ ಅವನು ಉಳಿಯಲ್ಲ ಎಂದು ಡಾಕ್ಟರ್ ಹೇಳಿದ್ದರು. ಅದನ್ನು ಕೇಳಿ ಅವಂತಿಕಾಗೆ ದುಃಖ ಉಮ್ಮಳಿಸಿತು. ಅವನ ಈ ಸ್ಥಿತಿಗೆ ನಾನೇ ಹೊಣೆ ಎಂದು ಕೊಂಡಳು. ತಕ್ಷಣ ಆಸ್ಪತ್ರೆ ಓಡಿದಳು. ಅವನಿಗೆ ಆಗ ತಾನೇ ಎಲೆಕ್ಟ್ರಿಕ್ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದರು. ಸುಟ್ಟ ಬದನನೆಕಾಯಿಯಂತಾಗಿದ್ದ ಪ್ರಣೀತ. ಅವಂತಿಕಾ ಅವನ ತಲೆ ಸವರಿ, ಹಣೆಯ ಕೂದಲು ಸರಿಸುತ್ತ," ಪ್ರಣೀತ" ಎಂದು ಮೆಲ್ಲೆಗೆ ಕರೆದಳು. ಅವನು ಒಂದು ಘಳಿಗೆ ಕಣ್ಣು ತಗೆದು, ತುಟಿ ಅಲುಗಾಡಿಸಿ,ಮತ್ತೆ ಚಿರ ನಿದ್ರೆಗೆ ಜಾರಿದ.
ಮೃಣಾಲಿನಿ
DO PLACE YOUR VALUABLE COMMENT
English,Kannada Blogger
0 Followers
0 Following