ಬಣ್ಣದ ಲೋಕ ಬದುಕಿಗೊಂದು ಅರ್ಥ ಜೀವನಕೊಂದು ರೂಪ



image

ಬಣ್ಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ನಾವು ಜಗತ್ತನ್ನು ಹೇಗೆ ಗ್ರಹಿಸುತ್ತೇವೆ ಮತ್ತು ಸಂವಹನ ನಡೆಸುತ್ತೇವೆ ಎಂಬುದರಲ್ಲಿ ಅವು ಅಪಾರವಾದ ಪಾತ್ರವನ್ನು ವಹಿಸುತ್ತವೆ. ಪ್ರತಿಯೊಂದು ಬಣ್ಣವು ನಮ್ಮ ಮಾನಸಿಕ, ದೈಹಿಕ ಸ್ಥಿತಿಗಳ ಮೇಲೆ ಪರಿಣಾಮ ಬೀರುವ ನಿರ್ದಿಷ್ಟ ಸಂಕೇತಗಳನ್ನು ಹೊರಸೂಸುತ್ತದೆ. ಆದರೆ ಬಣ್ಣಗಳು ನಮ್ಮ ಮನಸ್ಥಿತಿಗಳು, ಭಾವನೆಗಳು ಮತ್ತು ಭಾವನೆಗಳ ಮೇಲೆ ನಾಟಕೀಯವಾಗಿ ಪರಿಣಾಮ ಬೀರುತ್ತವೆ. ಆದರೂ ಬಣ್ಣಗಳು ಮನಸಿಗೆ ಉಲ್ಲಾಸ ನೀಡಿ ಆಕರ್ಷಣೆಯನ್ನು,ರೂಪವನ್ನು ಹೆಚ್ಚಿಸುತ್ತವೆ. ಕೆಲವು ಬಣ್ಣಗಳ ಉಡುಪುಗಳು ಮನುಷ್ಯನ ಸೌಂದರ್ಯ ಹೆಚ್ಚಿಸುತ್ತವೆ.
    
ಹಿಂದೂ ಧರ್ಮದಲ್ಲಿ ಬಣ್ಣಗಳು ಆಳವಾದ ಪ್ರಾಮುಖ್ಯತೆಯನ್ನು ಹೊಂದಿವೆ. ಹಿಂದೂ ಕಲಾವಿಧರು ದೇವತೆಗಳ ಮೇಲೆ ಬಣ್ಣಗಳನ್ನು ಬಳಸಿ ದೇವಿಯರ ಸೌಂದರ್ಯವಲ್ಲದೇ,ಭಕ್ತಿಯನ್ನು ಹೆಚ್ಚಿಸುತ್ತಾರೆ.ಮತ್ತು ಬಣ್ಣದ ಉಡುಪುಗಳು ಅವರ ಗುಣಗಳನ್ನು ಸೂಚಿಸುತ್ತದೆ.ಧಾರ್ಮಿಕ ಸಮಾರಂಭದಲ್ಲಿ ಬಳಸುವ ಕೆಲವು ಮುಖ್ಯ ಬಣ್ಣಗಳೆಂದರೆ ಕೆಂಪು, ಹಳದಿ, ಎಲೆಗಳಿಂದ ಹಸಿರು, ಬಿಳಿ ಇತ್ಯಾದಿಗಳು.

ಕೆಂಪು 
ಕೆಂಪು ಇಂದ್ರಿಯತೆ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ.ಮದುವೆಗಳು,ಮಗುವಿನ ಜನನ,ಹಬ್ಬಗಳು,ಮಂಗಳಕರ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಲಾಗುವ ಬಣ್ಣ ಇದಾಗಿದೆ.ಸಮಾರಂಭಗಳಲ್ಲಿ, ದೇವಿಯ ದೇವಸ್ಥಾನದಲ್ಲಿ ಕೆಂಪಾದ ಕುಂಕುಮ ಬಳಸಲಾಗುತ್ತದೆ.ಮದುವೆಯ ಸಂಕೇತವಾಗಿ ಬೈತಲೆಗೆ ಕೆಂಪು ಸಿಂಧೂರವನ್ನು ,ಹಣೆಗೆ ಕುಂಕುಮವನ್ನು ಬಳಸುತ್ತಾರೆ.ಕೆಂಪು ಶಕ್ತಿಯನ್ನು ಸಂಕೇತಿಸುವದರಿಂದ ಕೆಂಪು ಸೀರೆಯನ್ನು ಶುಭಸಂದರ್ಭದಲ್ಲಿ ಉಪಯೋಗಿಸುತ್ತಾರೆ.ನಮ್ಮ ದೇಶದಲ್ಲಿ ಮದುವೆಯಾದ ಸ್ತ್ರೀಯರು ಪತಿಯ ದೀರ್ಘಾಯುಷ್ಯದ ಸಂಕೇತವೆಂದು ಕುಂಕುಮವನ್ನು ಉಪಯೋಗಿಸುತ್ತಾರೆ.ಕುಂಕುಮವನ್ನು ಪೂಜೆಯ ಅಕ್ಷತೆಗೆ,ಮದುವೆ ಅಕ್ಷತೆಗೆ,ಗೆಜ್ಜೆವಸ್ತ್ರಕ್ಕೆ ಉಪಯೋಗಿಸುತ್ತಾರೆ.ನಮ್ಮ ಸಂಸ್ಕೃತಿಯ ಅತ್ಯಂತ ಪೂಜನೀಯ ಕೆಂಪು ಕುಂಕುಮವಾಗಿದೆ.

ಕೇಸರಿ
ಅತ್ಯಂತ ಪವಿತ್ರ ಬಣ್ಣ ಕೇಸರಿಯಾಗಿದೆ.ಇದು ಬೆಂಕಿಯನ್ನು ಪ್ರತಿನಿಧಿಸುತ್ತದೆ.ಕಲ್ಮಶವನ್ನು ಬೆಂಕಿಯಲ್ಲಿ ಸುಡುವದರಿಂದ ಕೇಸರಿ ಬಣ್ಣವು ಶುದ್ಧತೆಯನ್ನು ಸಂಕೇತಿಸುತ್ತದೆ.ಇದು ಧಾರ್ಮಿಕ ಇಂದ್ರಿಯ ನಿಗ್ರಹವನ್ನು ಪ್ರತಿನಿಧಿಸುತ್ತದೆ.ಕೇಸರಿಯು ಪವಿತ್ರ ಪುರುಷರ,ತಪಸ್ವಿಗಳ ಬಣ್ಣವಾಗಿದೆ.ನಮ್ಮ ದೇಶದ ಧ್ವಜದಲ್ಲೂ ಕೂಡ ಈ ಬಣ್ಣ ರಾರಾಜಿಸುತ್ತಿದೆ.

ಹಸಿರು
ಹಸಿರು ಹಬ್ಬದ ಬಣ್ಣ,ಶಾಂತಿ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತದೆ.ಹಸಿರು ಮನಸ್ಸನ್ನು ಸ್ಥಿರಗೊಳಿಸುತ್ತದೆ.ಬಣ್ಣವು ತಂಪನ್ನು ನೀಡುತ್ತದೆ.ಪ್ರಕೃತಿಯನ್ನು ಪ್ರತಿನಿಧಿಸುತ್ತದೆ.ಆದ್ದರಿಂದ ಮದುವೆಯಲ್ಲಿ ,ಬಸಿರಿ ಹೆಣ್ಣುಮಗಳಿಗೆ ಹಸಿರು ಬಳೆ,ಹಸಿರುಸೀರೆಯ ಪದ್ಧತಿ ನಮ್ಮಲ್ಲಿದೆ.ಹಸಿರು ಬಳೆಗಳು ಮುತೈದೆಯರ ಲಕ್ಷಣಗಳಲ್ಲಿ ಒಂದಾಗಿದೆ.

ಹಳದಿ
ಹಳದಿ ಜ್ಞಾನ ಮತ್ತು ಕಲಿಕೆಯ ಬಣ್ಣವಾಗಿದೆ.ಇದು ಸಂತೋಷ,ಶಾಂತಿ,ಧ್ಯಾನ,ಸಾಮರ್ಥ್ಯ,ಮಾನಸಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ.ವಸಂತದ ಬಣ್ಣಗಳು ಮನಸ್ಸನ್ನು ಸಕ್ರೀಯಗೊಳಿಸುತ್ತವೆ.ಭಗವಾನ್ ವಿಷ್ಣುವಿನ ವಸ್ತ್ರವು ಅವನ ಜ್ಞಾನದ ಪ್ರಾತಿನಿಧ್ಯವನ್ನು ಸಂಕೇತಿಸುತ್ತದೆ.

ಬಿಳಿ
ಬಿಳಿ ಬಣ್ಣವು ಏಳು ವಿಭಿನ್ನ ಬಣ್ಣಗಳ ಮಿಶ್ರಣವಾಗಿದೆ.ಶುದ್ಧತೆ,ಸ್ವಚ್ಛತೆ,ಶಾಂತಿ ಮತ್ತು ಜ್ಞಾನವನ್ನು ಪ್ರತಿನಿಧಿಸುತ್ತದೆ.ಜ್ಞಾನದ ದೇವತೆಯಾದ ಸರಸ್ವತಿಯನ್ನು ಯಾವಾಗಲೂ ಬಿಳಿಯ ಉಡುಪನ್ನು ಧರಿಸಿ ಬಿಳಿ ಕಮಲದ ಮೇಲೆ ಕುಳಿತಿರುವಂತೆ ತೋರಿಸಲಾಗುತ್ತದೆ.

ನೀಲಿ
ಸೃಷ್ಟಿಕರ್ತನು ಪ್ರಕೃತಿಗೆ ಗರಿಷ್ಟ ನೀಲಿ ಬಣ್ಣವನ್ನು ನೀಡಿದ್ದಾನೆ.ಆಕಾಶ,ಸಾಗರಗಳು,ನದಿಗಳು,ಸರೋವರಗಳು,ಶೌರ್ಯ,ಪೌರುಷ,ಸಂಕಲ್ಪ,ಕಷ್ಟಕರ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯ,ಸ್ಥಿರ ಮನಸ್ಸುಪಾತ್ರದ ಆಳದ ಗುಣಗಳನ್ನು ಹೊಂದಿರುವ ದೇವತೆಯನ್ನು ನೀಲಿ ಬಣ್ಣದಲ್ಲಿ ಪ್ರತಿನಿಧಿಸಲಾಗುತ್ತದೆ.ಭಗವಾನ್ ರಾಮ,ಕೃಷ್ಣ ಮಾನವೀಯತೆಯನ್ನು ರಕ್ಷಿಸಲು , ದುಷ್ಟರನ್ನು ನಾಶಮಾಡಲು ತಮ್ಮ ಜೀವನ ಕಳೆದರು.ಆದ್ದರಿಂದ ಅವರು ನೀಲಿ ಬಣ್ಣವನ್ನು ಹೊಂದಿರುವರು.

ಬಣ್ಣಕ್ಕೆ ಸೋಲದ ಮನಸ್ಸು ಇಲ್ಲ, ಚಿನ್ನಕ್ಕೆ ಸೋಲದ ಸ್ತ್ರೀಯರಿಲ್ಲ,ಕಾಮನಬಿಲ್ಲಿಗೆ ಹೆಸರು ಬಂದಿದ್ದು ಬಣ್ಣಗಳ ಮನಸೂರೆಗೊಳ್ಳುವ ಸಂಯೋಜನೆಯಿಂದ. ನವರತ್ನಗಳಿಗೆ ಖ್ಯಾತಿ ಮತ್ತು ಬೆಲೆ ಬಂದಿರುವದು ಅವುಗಳ ವರ್ಣಾಕರ್ಷಣೆಯಿಂದ. ಬಣ್ಣದ ಲೋಕ ಬದುಕಿಗೊಂದು ಅರ್ಥ ಜೀವನಕೊಂದು ರೂಪ ಕೊಡುವದರಲ್ಲಿ ಸಂಶಯವಿಲ್ಲ.

ಮನುಷ್ಯನಲ್ಲಿ ಅಡಗಿದ ಕೆಟ್ಟ ಭಾವನೆಗಳ ದಹನವಾಗಲಿ
ಕಪ್ಪು ಬಿಳುಪಿನ ಕನಸುಗಳೆಲ್ಲ
ಅಂದದ ಬಣ್ಣಗಳಿಂದ ತುಂಬಿದ
ನನಸಾಗಲಿ ಬದುಕು ಬಣ್ಣಗಳಂತೆ
ಸುಂದರವಾಗಿರಲಿ.
ಬಣ್ಣ ಬಣ್ಣದ ರಂಗು
ಕೆಂಪು ಪ್ರೀತಿಯನ್ನು ಹೆಚ್ಚಿಸಲಿ
ಹಸಿರು ಗುರಿಯನ್ನು ಸಾಧಿಸಲಿ
ನೀಲಿ ನಂಬಿಕೆಯನ್ನು ರಕ್ಷಿಸಲಿ
ಕಿತ್ತಳೆ ಆರೋಗ್ಯ ಕಾಪಾಡಲಿ
ಹಳದಿ ಹರುಷವನ್ನು ಪರಿಚಯಿಸಲಿ.
ಎಲ್ಲ ಬಣ್ಣಗಳ ಮಿಶ್ರಣ ಬಿಳಿ ಸದಾ ಶಾಂತಿಯೊಂದಿಗೆ ಬಾಳೋಣ. ಶುಭವಾಗಲಿ.




ProfileImg

Written by ಗಿರಿಜಾ ಎಸ್ ದೇಶಪಾಂಡೆ

Verified

0 Followers

0 Following