ಸಂತೂ ಮತ್ತು ಸಿನೆಮಾ
ಸಂತು ಅಂತ ಇದಾನೆ, ಅಂವ ನಿಮಗೆ ಗೊತ್ತಿಲ್ಲ, ಹಾಗಾಗಿ ಅವನ ವಿವರ ಮೊದಲು ಹೇಳುತ್ತೇನೆ ಕೇಳಿ, ತಾಲ್ಲೂಕಿನ ಸಣ್ಣ ಹೋಬಳಿಯಲ್ಲಿ ಹುಟ್ಟಿ ಬೆಳೆದು ಓದಿ ಹಣ ಗಳಿಸುವ ಮಾರ್ಗ ಹಲವಾರು ನೋಡಿದ ಜನ, ಆದರೆ ವಿಚಿತ್ರ ಎಂದರೆ ಮಾರ್ಗಗಳು ನೂರಾರು ತೋರುತ್ತಿತ್ತು ಆದರೆ ಒಂದೂ ಫಲಿಸುತ್ತಿರಲಿಲ್ಲ.ದಿನದ ಖರ್ಚಿಗೆ ಆಗುವಷ್ಟು ಎಲ್ಲಿಂದಲೋ ಸಂಪಾದನೆಯಾಗುತ್ತಿತ್ತು.ಹೀಗಾಗಿ ಯೌವನ ಹಣವಿಲ್ಲದ ಕಾರಣ ಮದುವೆ ಮುಂತಾದ ಗೊಡವೆಯ ಯೋಚನೆ ಬಾರದೆ ಮೂವತ್ತೈದರ ಹರೆಯಕ್ಕೆ ಬಂದು ನಿಂತಿದ್ದ.
ಸಂತೂಗೆ ಹೊಸ ಹೊಸ ಐಡಿಯಾಗಳು ತಲೆಯೊಳಗಿಂದ ಪುಂಖಾನುಪುಂಕವಾಗಿ ಬರುತ್ತಲೆ ಇರುತ್ತಿತ್ತು. ಈ ಐಡಿಯಾಗಳೆ ಹಾಗೆ ಅದು ಮನಸೊಳಗೆ ಮೂಡಿದಾಗ ಓಹ್ ಇದು ಕ್ಲಿಕ್ ಆಗತ್ತೆ ಅನ್ನೋ ಭಾವ ಮೂಡಿ ಚಕಚಕನೆ ಫಲಿತಾಂಶಗಳು ಬಂದುಬಿಡುತ್ತವೆ ಅದು ತಲೆಯೊಳಗೆ ಅಷ್ಟೆ ,ಆದರೆ ಪ್ರಾಕ್ಟಿಕಲ್ ಹಾಗೆ ಇರೋದಿಲ್ಲ.
ಇಂಗ್ಲೀಷ್ ಸಿನೆಮಾ ನೋಡುವ ಹುಚ್ಚಿರುವ ಸಂತುವಿನ ತಲೆಯೊಳಗೆ ತಾನೂ ಒಂದು ಭರ್ಜರಿ ಸಿನೆಮಾ ಮಾಡಬೇಕೆಂಬ ಯೋಚನೆ ಬಂದು ಅದರ ಹಿಂದೆ ಕನಸುಕಂಡು ಅದನ್ನು ಸಾಕಾರ ಮಾಡಲು ಹೊರಟ.
ಗಟ್ಟಿ ಕತೆ ಮಾತ್ರಾ ಸಿನೆಮಾವನ್ನು ಗೆಲ್ಲಿಸುತ್ತದೆ ಅಂತ ಅದೆಲ್ಲೋ ಓದಿದ್ದ. ಕತೆಯೇ ಇಲ್ಲದ ಸಿನೆಮಾವೂ ಗೆದ್ದಿದೆಯಲ್ಲ ಅನ್ನೋ ಯೋಚನೆ ಸಂತೂಗೆ ಬಂತು, ಸಹಜವಾಗಿರೋದ ತೋರಿಸಿದರೆ ಹೇಗೆ? ಅಥವಾ ವಾಸ್ತವದಲ್ಲಿ ಇಲ್ಲದ್ದನ್ನು ತೋರಿಸಿದರೆ ಹಿಟ್ ಆಗಬಹುದಾ? ಬುಡದಿಂದ ಕಡೆಯವರೆಗೂ ಹಾಡಿನಲ್ಲೇ ಕತೆ ಹೇಳಿದರೆ ಹೇಗೆ? ಕತೆಯ ಅಂತ್ಯವನ್ನೇ ಮೊದಲು ತೋರಿಸಿ ಅಂತ್ಯವನ್ನೆ ಆರಂಭ ಮಾಡಿದರೆ ಚನ್ನಾಗಿರಬಹುದಾ? ಹೀಗೆಲ್ಲ ಯೋಚಿಸಿ ಯೋಚಿಸಿ ಯೋಚಿಸಿ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದು "ಒಂದು ಥಿಯೇಟರ್ ಕತೆ " ಅಂತ ದಾಖಲಿಸಿದ.
ಲಕ್ಷಾಂತರ ಮಂದಿ ಕುಳಿತು ನೋಡಿ ಆನಂದಿಸಿದ ನೂರಾರು ಚಲನಚಿತ್ರ ಮಂದಿರಗಳಿವೆ, ಅವುಗಳ ಹುಟ್ಟು ಬದುಕು ಉಚ್ರಾಯ ಸ್ಥಿತಿ ಹಾಗೂ ಸಾವು ಎಲ್ಲವೂ ಮನುಷ್ಯರಂತೆ ಇದೆ ಅದನ್ನು ಕತೆಯನ್ನಾಗಿಸಿದ. ಕತೆ ತುಂಬಾ ಚನ್ನಾಗಿತ್ತು ಅಲ್ಲಿ ಮನುಷ್ಯರುಗಳೇ ಹೀರೋ ಇರಲಿಲ್ಲ, ಹೀರೋಯಿನ್ ಕೂಡ ಮನುಷ್ಯರಲ್ಲ, ಮನುಷ್ಯರು ನಿರ್ಜೀವ ವಸ್ತುಗಳು ಎಂದೆಲ್ಲ ಕರೆಯುವ ಪರಿಕರಗಳೆಲ್ಲಾ ಹೀರೋ ಹೀರೋಯಿನ್ ಹಾಸ್ಯನಟ ಆಗಿದ್ದವು. ತನ್ನೊಡಳೊಗೆ ನೂರಾರು ಜನರನ್ನು ಕುಳ್ಳಿರಿಸಿಕೊಂಡು ನಗಿಸುವ ಅಳಿಸುವ ಸಿನೆಮಾ ಥಿಯೇಟರ್ ಅಮ್ಮನಂತೆ ಗುರುಗಳಂತೆ ಸೃಷ್ಟಿಸಿದ. ಜನರೇಷನ್ ಇಂದ ಜನರೇಷನ್ ಗೆ ಬದಲಾದ ಎಲ್ಲವನ್ನೂ ದಾಖಲಿಸಿದ.
ನೂರಾರು ಕಷ್ಟಗಳ ನಡುವೆ ಸಿನೆಮಾ ಅದ್ಬುತವಾಗಿ ಮೂಡಿ ಬಂತು ,
ಆದರೆ ವಿಪರ್ಯಾಸವೆಂದರೆ ಸಿನೆಮಾ ಬಿಡುಗಡೆಗೆ ಯಾವ ಚಲನಚಿತ್ರ ಮಂದಿರವೂ ಸಿಗಲೇ ಇಲ್ಲ . ಒಟ್ಟಿನಲ್ಲಿ ಸ್ವಂತದವರ ಏಳ್ಗೆ ಹಾಗೂ ಕತೆಯನ್ನು ಯಾರೂ ಸಹಿಸಲಾರರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ;)