ಕಡಲಿಂದ ಕೊಂಚ ದೂರವೇ ಇರುವಂತಹ ಕರಾವಳಿ ತೀರ ನಮ್ಮೂರು! ಮನೆಯಿಂದ ಇಂಜಿನಿಯರಿಂಗ್ ಅಂತ ಓದೋಕೆ ಓಡಿಬಂದು ಸುಮಾರು ಮೂರು ವರ್ಷ ಕಳೆಯಿತು. ಒಂದಿಷ್ಟು ಕನಸುಗಳು, ಒಂದಿಷ್ಟು ಕಥೆಗಳು, ಮತ್ತಷ್ಟು ಪ್ರಯತ್ನಗಳು ಸಾವಿರದಷ್ಟು ಊರಿನ ಹಸಿನೆನಪುಗಳೆಲ್ಲದರ ಜೊತೆಯಲ್ಲಿ ಬಂದು ತಲುಪಿದ್ದು ಬೆಂಗಳೂರನ್ನ!
ಬೆಂಗಳೂರು ಎಂದ ಮರುಕ್ಷಣನಮ್ಮವರಿಗೆ ನೆನಪಾಗೋದು ಟ್ರಾಫಿಕ್. ಸಂದುಗೊಂದುಗಳಲ್ಲಿ ಹಾದುಹೋದ ಹಾವಿನಾಕೃತಿಯ ರಸ್ತೆಯಲ್ಲಿ ತಾ ಮುಂದು ನಾ ಮುಂದು ಎಂಬಂತೆ ರಭಸದಲ್ಲಿ ಓಡಾಡೋ ಗಾಡಿಗಳು. ಇವೆಲ್ಲದರ ನಡುವೆ ನನ್ನ ಪ್ರಯಾಣದ ರೂವಾರಿ ಯಾರೂ ಮೆಚ್ಚದ, ಯಾರೂ ದೂರಲಾಗದ ಬೆಂಗಳೂರಿನ ಜೀವಾಳ ಬಿಎಂಟಿಸಿ! ದೂರದೂರೇ ಆಗಲಿ, ಹತ್ತಿರದ ಜಾಗವೇ ಆಗಲಿ, ಈ ಬಸ್ಸಿನಲ್ಲಿ ಹೋಗೋದು ಹರಸಾಹಸವೇ ಸರಿ! ಇಂತ ಬಸ್ಸಿನಲ್ಲಿ ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಕಾಲೇಜು ಎಂಬ ಒಂದೇ ಕಾರಣಕ್ಕೆ ಓಡಾಡೋನು ನಾನು. ಬಹುಪಾಲು ನನ್ನ ಅರ್ಧ ದಿನವನ್ನೇ ಈ ಬಸ್ಸಿನಲ್ಲಿ ಕಳೆಯುತ್ತೇನೆ ಎಂದರೂ ತಪ್ಪಾಗದು ಪ್ರಾಯಷಃ. ಅದಕ್ಕೆ ಅನಿಸುತ್ತೆ, ನನ್ನ ಸ್ನೇಹಿತರು 'ಬಿಎಂಟಿಸಿ ನಿನ್ನ ತವರುಮನೆ' ಎಂದೇ ಹೇಳೋರು.
ಬಿಎಂಟಿಸಿಯ ಪ್ರಯಾಣ ಎಷ್ಟು ಕಿರಿಕಿರಿಯೋ ಅಷ್ಟೇ ಸುಂದರ. ಮುಂದೆರಡು ಹಿಂದೆ ನಾಲ್ಕು ಎಂಬಂತೆ ಆರು ಗಾಲಿಯ ಬಸ್ಸಿನಲ್ಲಿ, ಆರಕ್ಕೇರದ ಮೂರಕ್ಕಿಳಿಯದ ನನ್ನಂತ ಅದೆಷ್ಟೋ ಸಾಮಾನ್ಯರು ತಮ್ಮ ಜೀವನದ ವಿವಿಧ ಘಟ್ಟಗಳನ್ನ ತಲುಪಿಬಿಡುತ್ತಾರೆ. ಒಂದು ಬಸ್ಸಿನೊಳಗೆ ಕೂತ ಕಂಡಕ್ಟರು, ಡ್ರೈವರ್ ಗಳನ್ನು ಕೂಡ ಸೇರಿಸಿ ವಿಭಿನ್ನವಾದ, ವಿಶಿಷ್ಟವಾದ ಅಷ್ಟೇ ಸಾಮಾನ್ಯವೂ ಆದಂತಹ ತರತರದ ವ್ಯಕ್ತಿಗಳು ಪ್ರತಿದಿನ ನಮಗೆ ಎದುರಾಗುತ್ತಾರೆ. ಇಂತದ್ದೇ ವಿಭಿನ್ನ ವಿಚಾರ ಹೊತ್ತವರ ಬಗೆಗೆ ನನ್ನ ಬಳಿ ಹಲವಾರು ಕಥೆಗಳಿವೆ. ಎಲ್ಲವನ್ನ ನಿಧಾನವಾಗಿ, ಒಂದೊಂದೇ ಬಿಚ್ಚಿಡುವ ಪ್ರಯತ್ನ ಆಗುತ್ತಲೇ ಇದೆ. ಅದಕ್ಕೆಂದೇ ಒಂದು ಪುಸ್ತಕ ಕೂಡ ಮೀಸಲಿಟ್ಟಿದ್ದೇನೆ. ಇಂತಹ ಹಲವು ಕಥೆಗಳಲ್ಲೊಂದು ಈ ಜುಮ್ಕಿಯ ಕಥೆ, ಮನಸ್ಸು ಕೊಂಚಕಾಲ ಚಡಪಡಿಸಿದ ಕಥೆ!
ಸುಡುಬಿಸಿಲು ಕೂಗಾಡಿ, ಹೊರಗಿದ್ದವರನ್ನೆಲ್ಲ ಮನೆಗೆ ಓಡಿ ಎಂದು ಅಟ್ಟುವ ಪ್ರಯತ್ನಲ್ಲಿದ್ದಂತಹ ಒಂದು ಮಧ್ಯಾಹ್ನ. ಸಾವಿರವೋ ಲಕ್ಷವೋ ಎಂಬಂತೆ ಸಾಲಾಗಿ ನಿಂತಿದ್ದ ಬಸ್ಸುಗಳ ನಡುವೆ ಅಡಗಿ ಕುಳಿತಂತಿದ್ದ ನಮ್ಮ ಬಸ್ಸನ್ನು ಓಡೋಡಿ ಬಂದು ಹತ್ತಿದ್ದೆ. ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ಕಿಟಕಿಗೆ ಒರಗಿದ್ದ ಸೀಟ್ ಒಂದು ಕಾಲಿ ಕಂಡು ಖುಷಿಪಟ್ಟು, ಕಷ್ಟಪಟ್ಟು ಹೋಗಿ ಕೂತೆ. ನನ್ನ ಹಿಂದೆಯೇ ಬಂದ ಕೊಂಚ ಬಿಳಿಯಾಗಿದ್ದ ಗಡ್ಡ ಹೊಂದಿದ್ದ ವ್ಯಕ್ತಿಯೊಬ್ಬರು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ಪ್ರಾಯಷಃ ಸೀಟು ಬೇಕಿತ್ತೇನೋ ಅವರಿಗೆ. ಆದರೆ ನಾನು ಆ ಕ್ಷಣದಲ್ಲಿ 'ಈ ಬಸ್ಸು ನಿಮ್ಮನೆ ಕಡೆಗೆ ಹೋಗೋದಿಲ್ಲ ಕಣಯ್ಯ' ಅಂತ ಯಾರಾದರೂ ಹೇಳಿದ್ದರೂ ಕೂಡ ಸೀಟ್ ಬಿಟ್ಟುಕೊಡುವ ಪರಿಯಲ್ಲೇ ಇರಲಿಲ್ಲ. ಎಡೆಬಿಡದೇ ಕೇಳಿಬರುತ್ತಿದ್ದ ತರತರದ ಮಾತುಗಳ ತಡೆಯಲು ಕಿವಿಗೆ ನನ್ನ ಅರ್ಧ ಜೀವದಂತೆ ಜೊತೆಯಲ್ಲಿರೋ ಇಯರ್ ಬಡ್ಸ್ ಗಳನ್ನ ಕಿವಿಗೆ ಸಿಕ್ಕಿಸಿಕೊಂಡು ಕೂತೆ. 'ಸಪ್ತ ಸಾಗರದಾಚೆ ಎಲ್ಲೋ' ಹಾಡು ಕೇಳುತ್ತಾ, ಅದನ್ನೇ ಸದ್ದಿಲ್ಲದೆ ಹಾಡುತ್ತಾ ತಲ್ಲೀನನಾದೆ. ಕಿಕ್ಕಿರಿದ ಕಾರು ಬಸ್ಸುಗಳ ನಡುವೆ ನಮ್ಮ ಬಸ್ಸು ಕುಂಟುತ್ತಲೇ ಹೊರಟಿತು. ಒಂದೇ ಹಾಡನ್ನ ಮತ್ತೆ ಮತ್ತೆ ಕೇಳುತ್ತಾ, ಕಳೆದೇ ಹೋಗಿದ್ದ ನನಗೆ, ಕಣ್ತೆರೆದು ಎದುರು ಕಂಡಾಗ ಕಂಡದ್ದು ಒಂದು ಜುಮ್ಕಿ! ನನ್ನಿಂದ ಕೈಗೆಟಕದ ದೂರದಲ್ಲಿ, ಒಂದು ಆರು ಅಡಿಯ ಅಂತರದಲ್ಲಿ, ಕಣ್ಕಟ್ಟುವಷ್ಟು ತುಂಬಿದ್ದ ಜನರ ಮಧ್ಯೆ ಜಾಗವಿಲ್ಲದೆ ನಿಂತ ಒಂದು ಕಿವಿಯಲ್ಲಿ. ಆ ಕಡೆ, ಈ ಕಡೆ ವಾಲಾಡುತ್ತಾ, ಮುಂಗುರುಳ ಒಂದೆಳೆಯನ್ನ ಜೊತೆಗೆ ಸಿಕ್ಕಿಸಿಕೊಂಡು, ಏನನ್ನೋ ಬಡಬಡಿಸಿದಂತಿತ್ತು. ಅಷ್ಟೇ, ಮತ್ತೆ ಕಳೆದೇ ಹೋದೆ ನಾನು, ಆ ಮೊಗವನ್ನ ಕಾಣುವ ಆತುರದಲ್ಲಿ!
ಅತ್ತ ಇತ್ತ ಕುಣಿಯುತ್ತಾ, ಪಕ್ಕದಲ್ಲಿದ್ದವಳ ಜೊತೆ ಹರಟುತ್ತ, ಎತ್ತಲೋ ಕಾಣುತ್ತಿದ್ದ ಆ ಕಂಗಳು, ನಾನಿದ್ದ ಕಡೆ ಕಂಡವು! ನನ್ನ ಕಂಡವೋ ಇಲ್ಲವೋ ನಾ ಕಾಣೆ, ನಾ ಮಾತ್ರ ಮೂಕನಂತೆ ಅವಳನ್ನೇ ದಿಟ್ಟಿಸುತ್ತಿದ್ದೆ. ಅಷ್ಟು ಮುದ್ದಾದ ಮುಖ ನನ್ನ ಕನಸಿನಲ್ಲಿ ಕೂಡ ಕಂಡಿರಲಿಲ್ಲ. ಹಸಿರು ಬಣ್ಣದ್ದು ಒಂದು ಬಟ್ಟೆ, ಕುರ್ತಾ ಅಂತಾರೆ ಪ್ರಾಯಷಃ, ಆ ಜುಮ್ಕಿ, ಪದೆ ಪದೆ ಮುಖದ ಮೇಲೆ ಬೀಳುವ ಮುಂಗುರುಳು, ಎಲ್ಲವನ್ನೂ ಮತ್ತಷ್ಟು ಮುದ್ದಾಗಿಸಲು ಆ ನಗು, ಯಾರೋ ಬರೆದ ಕವಿತೆಯಂತೆ ಕಂಡಳು ಕಣ್ಣಿಗೆ! ಯಾರೋ, ಎಲ್ಲಿಯಳೋ, ಎಲ್ಲಿಗೆ ಹೊರಟಿದ್ದಳೋ ಗೊತ್ತಿರಲಿಲ್ಲ. ತಿಳಿದುಕೊಳ್ಳಬೇಕು ಎಂಬ ಆಲೋಚನೆಯೂ ಬರಲಿಲ್ಲ. ಬರೀ ಅವಳನ್ನ ನೋಡಬೇಕು, ನೋಡುತ್ತಲೇ ಇರಬೇಕು ಎಂಬುದಷ್ಟೇ ನನ್ನ ಕಂಗಳು ಅರಿತದ್ದು. ಹೇಗಾದರೂ ಮಾಡಿ ಮಾತನಾಡಿಸಬೇಕು, ದಯಮಾಡಿ ಮನೆಯಲ್ಲಿ ದೃಷ್ಟಿ ತೆಗಿಸಿಕೋ ಅನ್ನಬೇಕು ಎಂಬ ಆಸೆಯಾಗುತ್ತಿತ್ತು. ನಾನೇಲ್ಲಾದರೂ ಎದ್ದು ಆ ಕಡೆ ಹೋದರೆ, ಅವಳನ್ನ ಕಾಣಲು ಆಗುತ್ತದೆ ಎಂಬ ನಂಬಿಕೆಯೇ ಇರಲಿಲ್ಲ ನನಗೆ! ಎದ್ದು ನಿಂತು ನಾನೊಂದೆಜ್ಜೆ ಇಡುವಷ್ಟರಲ್ಲಿ ಈ ಬಸ್ಸು, ಬಸ್ಸಿನ ಜನrರು ಅದೆಷ್ಟು ಬದಲಾವಣೆಗಳನ್ನ ಕಾಣುತ್ತಾರೋ ಹೇಳಲಾಗದು. ಸದ್ಯಕ್ಕೆ ಅವಳನ್ನ ಕಾಣುವ ಅವಕಾಶವಾದರೂ ಇದೆಯಲ್ಲ, ಅದಕ್ಕೆ ಸುಮ್ಮನೆ ಕೂತೆ, ಅವಳನ್ನೇ ನೋಡುತ್ತಾ, ಅವಳ ಜುಮ್ಕಿಯನ್ನೇ ಆರಾಧಿಸುತ್ತಾ, ನನ್ನನ್ನೂ ಕೂಡ ಯಾರೂ ನೋಡುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳುತ್ತಾ!
ಆರಂಭದಿಂದ ನನ್ನ ಕಣ್ಣು ಅವಳ ಆ ಜುಮ್ಕಿಯ ಹೊರತಾಗಿ ಬೇರೇನನ್ನೂ ಕಾಣುತ್ತಿರಲಿಲ್ಲ, ಕಾಣುವ ಅವಶ್ಯಕತೆಯೂ ನನ್ನ ಅಮಾಯಕ ಕಂಗಳಿಗೆ ಕಾಣಲಿಲ್ಲ ಆನ್ನಬಹುದೇನೋ. ಕಿವಿಯೊಳಗೆ ಗುನುಗುತಿದ್ದ ಹಾಡು ಬದಲಾಗುತ್ತಾ ಹೋಯಿತು, ಆದರೆ ನನ್ನ ಮನಸ್ಸು ಹಾಡುತ್ತಿದ್ದದ್ದು ಒಂದೇ ಹಾಡು, ಅಲ್ಲ ಒಂದೇ ಸಾಲು, "ಸಪ್ತ ಸಾಗರದಾಚೆ ಎಲ್ಲೋ!" ನಾನಿಳಿವಲ್ಲೇ, ಅವಳೂ ಬಸ್ ಇಳಿವಂತಾಗಲಿ ಎಂದು ಕೋರಿಕೊಳ್ಳುತ್ತಿದ್ದೆ. ಹಾಗೇನಾದರೂ ಆದರೆ, ಏನಂತ ಮಾತನಾಡಿಸುವುದು ಎಂಬ ತಯಾರಿ ಕೂಡ ಒಳಗೊಳಗೇ ನಡೆಯುತ್ತಿತ್ತು. ಬಸ್ಸು ಮುಂದೆ ಮುಂದೆ ಸಾಗುತ್ತಾ, ಒಂದೊಂದೇ ಜಾಗದಲ್ಲಿ ನಿಲ್ಲಿಸಿದಾಗೆಲ್ಲ ಅದೇನೋ ವಿಶಿಷ್ಟ ಭಯ. ದಯಮಾಡಿ ಇವಳು ಇಲ್ಲಿ ಇಳಿಯೋದು ಬೇಡ ಎಂಬ ಪ್ರಾರ್ಥನೆ. ವಿಚಿತ್ರ ಎನಿಸಿದರೂ, ಒಂತರ ಖುಷಿಯಾಗುತ್ತಿತ್ತು. ಜೊತೆಗೆ ನಾ ನೋಡುತ್ತಿರುವುದನ್ನ ಅವಳೇನಾದರೂ ಗಮನಿಸಿದರೆ ನನ್ನ ಕಥೆಯೇನು, ಎಷ್ಟು ಮುಜುಗರ ಆಗಬಹುದು ಎಂಬ ಭಯ ಕೂಡ. ಅದಕ್ಕೆ ಆಗಾಗ ಕಿಟಕಿಯಿಂದ ಹೊರ ಇಣುಕುತ್ತಿದ್ದೆ. ಆದರೂ ಈ ಕಂಗಳಿಗೆ ಸಂತೃಪ್ತಿ ಸಿಕ್ಕಿದ್ದು ಅವಳ ಜುಮ್ಕಿಯಲ್ಲಷ್ಟೇ! ಕೂತಿದ್ದೆ, ಕಾಯುತ್ತಿದ್ದೆ, ಅವಳನ್ನೇ ಕಾಣುತ್ತಿದ್ದೆ, ನಗುತ್ತಿದ್ದೆ, ನಾಚುತ್ತಿದ್ದೆ. ಆದರೇನು ಫಲ! ನನ್ನಿಂದ ಒಂದು ನಿಲ್ದಾಣ ಹಿಂದೆಯೇ, ಈ ಬಸ್ ಬೇಡ ಎಂಬ ನೋಟದಲ್ಲಿ ಇಳಿದು, ಮತ್ತೊಂದು ಬಸ್ ಹತ್ತಿದಳು. ನೋಡನೊಡುತ್ತಲೇ ನನ್ನಿಂದ ಮರೆಯಾಗಿಯೇ ಬಿಟ್ಟಳು!🙃
ಅವಳನ್ನ, ಅವಳ ಮೊಗವನ್ನ, ನಗುವನ್ನ ಮುಖ್ಯವಾಗಿ ಅವಳ ಜುಮ್ಕಿಯನ್ನೇ ನೆನೆಯುತ್ತಾ ನಾನು ಕೂತಲ್ಲಿಂದ ಎದ್ದೆ, ಕನಸಿನಿಂದ ಎದ್ದಂತೆ! ಸಾಮಾನ್ಯವಾಗಿ ನನ್ನದು ಒಂದು ಸಾರಿಗೆ ಸುಮಾರು ಒಂದೂವರೆ ಅಥವಾ ಎರಡು ಗಂಟೆಯ ಬಿಎಂಟಿಸಿ ಪ್ರಯಾಣ. ಇಷ್ಟು ದಿನ ಇನ್ನೆಷ್ಟು ದೂರ, ಇನ್ನೆಷ್ಟು ಹೊತ್ತು ಎಂದು ಕಾಯುತ್ತಿದ್ದ ನನಗೆ, ಇಂದೇಕೋ ಇಷ್ಟು ಬೇಗ ಬಂದುಬಿಟ್ಟೆnನಾ ಅನಿಸುತ್ತಿತ್ತು. ನನ್ನೆಡೆಗೆ ನಾನೇ ನಗುತ್ತಾ, ನಡುವಲ್ಲೊಂಚೂರು ನಾಚುತ್ತಾ! ಮತ್ತವಳನ್ನ ಕಾಣುವುದು ಸಾಧ್ಯವೇ ಇಲ್ಲವೇ ಎಂದು ಮರುಗುತ್ತಾ ನನ್ನ ನಿಲ್ದಾಣದಲ್ಲಿ ನಿಂತ ಬಸ್ಸಿನಿಂದ ಇಳಿದೆ, ಮತ್ತದೇ ಓಡೋ ಗಾdಡಿಳ ನಡುವೆ ಓಡಿಬಂದೆ.
ಆಕೆ ಯಾರು? ತಿಳಿದಿಲ್ಲ. ತಿಳಿಯೋ ಆಸೆಯೂ ಇಲ್ಲ! ಆದರೆ ಇನ್ನೊಮ್ಮೆ ಅವಳನ್ನ ಕಾಣಬೇಕು ಎಂಬ ಆಸೆಯಷ್ಟೇ ಇರೋದು ನನ್ನೊಳಗೆ. ಸಿಕ್ಕರೆ ಖಂಡಿತ ಮಾತನಾಡಿಸುತ್ತೇನೆ. ನಿಮ್ಮಿಂದ ನಾ ಅದೆಷ್ಟು ಪಾಡು ಪಟ್ಟೆ ಗೊತ್ತಾ ಎಂದು ಕೇಳಿಯೇ ಕೇಳುತ್ತೇನೆ. ಎಲ್ಲಕಿಂತ ಮುಖ್ಯವಾಗಿ ಅವಳಲ್ಲಿ ಆ ಜುಮ್ಕಿಯನ್ನ ಸಾಲ ಕೇಳಬೇಕು! ಕಡೆಪಕ್ಷ ಮುಂದೊಂದು ದಿನ ನನಗಾಗೇ ಸಿಗುವವಳಿಗಾದರೂ ಅದನ್ನ ಹಾಕಿ ನೋಡಲಿಕ್ಕೆ!
ಇಂಜಿನಿಯರಿಂಗ್ ವಿದ್ಯಾರ್ಥಿ, ಬದುಕನರಿಯುವ ಆಸಕ್ತಿ! ಪದಗಳ ನಡುವೆ ಪರದಾಡೋ ಫಕೀರ!
0 Followers
0 Following