ಚಿಕ್ಕದಿರುವಾಗ ಯಾರು ತಾನೇ ಚಿಮಣಿ ದೀಪದಲ್ಲಿ ಓದಿಲ್ಲ ಹೇಳಿ… ನಮ್ಮ ಹೆತ್ತವರು, ನಾವು ಎಲ್ಲರೂ… !! ರಾತ್ರಿಯಾದರೆ ಸಾಕು, ಕರೆಂಟ್ ಮಾಯ. ದಿನಕ್ಕೆ ಅರ್ಧವೋ, ಒಂದೋ ಗಂಟೆ ಕರೆಂಟ್ ಕಟ್ ಆಗುತ್ತಿತ್ತು. ಆದರೆ ಅದಕ್ಕೊಂದು ನಿಯಮವಿತ್ತು. ಅದು ವಾರಕ್ಕೊಂದು ಕ್ರಮದಂತೆ ನಿಶ್ಚಿತವಾಗಿತ್ತು. ಶಾಲೆಯ ಪಿರಿಡ್ ಗೆ ಗಂಟೆ ಬಡಿಯುವಂತೆ...!! ಹಾಗಾಗಿ, ಆದಷ್ಟು ಶಾಲೆಯ ಬರೆಯುವ ಕೆಲಸವನ್ನು ಸಂಜೆಯೇ ಮಾಡಿ ಮುಗಿಸುತ್ತಿದ್ದೆವು. ಕೇವಲ ಓದುವುದನ್ನು ಮಾತ್ರ ರಾತ್ರಿಗೆ ಇಡುತ್ತಿದ್ದೆವು.
ಚಿಕ್ಕದಾದ ಚಿಮಣಿ ದೀಪ. ಎಣ್ಣೆಯಲ್ಲಿ ಮುಳುಗಿ ತನ್ನ ಅಹಂನ್ನು ಬೆಂಕಿಗೆ ಆಹುತಿಯಾಗಿಸಿ ನಗುತ್ತಾ ಬತ್ತಿಯಲ್ಲಿ ಬೆಳಗುವ ದೀಪ... ಕತ್ತಲೆಂಬ ಕೊಳಕನು ತೊಳೆದು ಮನುಜನ ಬಾಳಿಗೆ ಬೆಳಕಾಗುವ ದೀಪ..!! ಎಣ್ಣೆಯೆಂಬ ನೀರಿನಲ್ಲಿ ಮುಳುಗಿ ಎದ್ದು, ಕಿಚ್ಚೆಂಬ ಹಿರಿಯರ ಮುಂದೆ ತಗ್ಗಿಬಗ್ಗಿ ನಡೆದರೆ ನೆಮ್ಮದಿಯಿಂದ ಬದುಕಬಹುದೆಂಬ ಪಾಠವನ್ನು ಈ ದೀಪ ನಮಗೆ ಕಲಿಸುತ್ತದೆ.
ಬೆಳಕು ಯಾರಿಗೆ ಬೇಡ ಹೇಳಿ... ರಾತ್ರಿಯಾದರೆ ಸಾಕು, ಹಾರಾಡುವ ಪತಂಗವೂ ಬೆಳಕಿಗೆ ಹಾತೊರೆದು ದೀಪದ ಸನಿಹಕೆ ಬಂದು ಅಜ್ಞಾನದಿಂದ ತನ್ನ ಜೀವವನ್ನೇ ಕಳೆದುಕೊಳ್ಳುತ್ತದೆ. !!
ಬರೆಯಲು ಶಾಯಿಪೆನ್ನು ಬಳಸುತ್ತಿದ್ದೆವು. ಮುಗಿದ ಶಾಯಿಕುಪ್ಪಿಯನ್ನು ದೀಪ ಮಾಡುತ್ತಿದ್ದೆವು. ಹಾಗೇ ಮಾತ್ರೆಯ ಕುಪ್ಪಿ, ಎಲ್ಲ ಕುಪ್ಪಿಯಿಂದಲೂ ಚಿಮಣಿ ದೀಪ... ಹಗಲಲ್ಲೇ ದೀಪಕ್ಕೆ ಎಣ್ಣೆಯನ್ನು ಹಾಕಿ ರಾತ್ರಿಗಾಗಿ ಸಿದ್ಧಪಡಿಸುತ್ತಿದ್ದೆವು. ಇದು ನಿತ್ಯ ಕಾರ್ಯವಾಗಿತ್ತು. ಮರೆತರೆ ಕರೆಂಟ್ ಹೋಗುವ ಸಮಯಕ್ಕೆ ಸ್ವಲ್ಪ ಕಷ್ಟವಾಗುತ್ತಿತ್ತು.
ದೀಪದಲ್ಲಿ ಓದುವುದೂ ಒಂದು ರೀತಿಯ ಖುಷಿಯನ್ನು ಕೊಡುತ್ತಿತ್ತು. ಅಷ್ಟೇ ಅಲ್ಲ, ಪಡಿತರ ಅಂಗಡಿಯಿಂದ ಎಣ್ಣೆಯೂ ಕೊರತೆ ಇರಲಿಲ್ಲ. ನಿಧಾನಕ್ಕೆ ಯಾವಾಗ ನಮ್ಮೂರಿಗೆ ಅಡಿಗೆ ಅನಿಲ ಕಾಲಿಟ್ಟಿತೋ... ಸರಕಾರ "ಅಡಿಗೆ ಅನಿಲ ಬಳಸುವವರಿಗೆ ಸೀಮೆ ಎಣ್ಣೆ ಇಲ್ಲ" ಎಂಬ ನಿರ್ಧಾರಕ್ಕೆ ಬಂತು. ಇದು ನಮಗೆ ನುಂಗಲಾರದ ತುತ್ತಾಯಿತು..!! ಅವಕಾಶ ವಂಚಿತರಾದೆವು. ಇದಕ್ಕೆ ಪೂರಕವಾಗುವಂತೆ ಬೇರೆ ಯೋಚನೆ ಮಾಡಲೇ ಬೇಕಾಯಿತು. ಮೇಣದ ಬತ್ತಿ, ಚಾರ್ಜರ್ ಲೈಟ್ ಮಾರುಕಟ್ಟೆಯನ್ನು ಪ್ರವೇಶಿಸಿತು.
ಈಗ ಚಿಮಣಿ ದೀಪ ಮರೆಯಾಗಿದೆ. ಅಲ್ಲೋ ಇಲ್ಲೋ ಕಾಣಲು ಸಿಗುವುದೇ ಅಪರೂಪ. ಮಾನವನ ಜೀವನ ಶೈಲಿಯೇ ಬದಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳೇ ಇರಲಾರವು. ಹಳ್ಳಿಯ ಕಡು ಬಡವರ ಮನೆಯಲ್ಲಿ ಮಾತ್ರ ಈ ದೀಪ ಕಾಣಲು ಸಾಧ್ಯ. ಎಲ್ಲರೂ ಈಗಿನ ಕಾಲಕ್ಕೆ ಹೊಂದಿಕೊಂಡು ಇನ್ವರ್ಟರ್, ಚಾರ್ಜರ್ ಲೈಟ್ ಗಳ ಮೊರೆ ಹೋಗಿದ್ದಾರೆ.
✍ ಮುರಳಿಕೃಷ್ಣ ಕಜೆಹಿತ್ತಿಲು
DTP Worker, Vittal, Mangalore
0 Followers
0 Following