ಸಂತೆ

ProfileImg
26 Feb '24
4 min read


image

ಸಂತೆ.

'ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.' ಗಾದೆಯನ್ನು ಕೇಳಿಕೊಂಡೇ ಬೆಳೆದವರು ನಾವು. ತರಕಾರಿಯ ರಾಶಿಯೇ ಹಾಸಿಗೆ, ಆಕಾಶವೇ ಹೊದಿಕೆಯನ್ನಾಗಿ ಮಾಡಿಕೊಂಡು ಸಂತೆಯ ಗಿಜಿಬಿಜಿಯ ನಡುವೆ ಸುಖನಿದ್ದೆಯಲ್ಲಿ ಮೈಮರೆತವರನ್ನು ನೋಡಿರುತ್ತೇವೆ.  ಹಗಲಿರುಳು ಶ್ರಮವಹಿಸಿ ದುಡಿಯುವ ಜೀವಗಳಿಗೆ ನಿದ್ರಿಸಲು ಶಾಂತತೆಯ ಹಂಗಿಲ್ಲದ ಸಂತೆಯಾದರೂ ಸರಿಯೇ‌.

ಇಂದಿನ ಮಕ್ಕಳಿಗೆ ಈ ಗಾದೆಯನ್ನೇನಾದರೂ ಹೇಳಿದರೆ....ಸಂತೆ? ಹಾಗೆಂದರೇನು? ಎನ್ನುವ ಎರಡು ಪ್ರಶ್ನೆಗಳು ಎದುರಾಗುವುದರಲ್ಲಿ ಸಂದೇಹವಿಲ್ಲ.

ಹಿಂದೆ ಒಂದು ಗ್ರಾಮ ಅಥವಾ ಹತ್ತಾರು ಸಣ್ಣ ಗ್ರಾಮಗಳ ಕೃಷಿಕರು ಬೆಳೆದ ಬೆಳೆಯನ್ನು ಪರಸ್ಪರರಲ್ಲಿ ವಿನಿಮಯ ಮಾಡಿಕೊಳ್ಳುವ ಪ್ರಕ್ರಿಯೆಗಾಗಿ ಸಂತೆ ಸೇರುವ ಪದ್ಧತಿ ಹುಟ್ಟುಹಾಕಿಕೊಂಡಿತು. ಕಮ್ಮಾರರು ತಾವೇ ತಯಾರಿಸಿದ ಕಬ್ಬಿಣದ ಆಯುಧ- ಕೃಷಿ ಸಲಕರಣೆಗಳು, ಕುಂಬಾರರ ಮಣ್ಣಿನ  ಉತ್ಪನ್ನಗಳಾದ ಮಡಿಕೆ ಕುಡಿಕೆಗಳು,  ಕುರುಬರು ನೇಯ್ದ ಉಣ್ಣೆಯ ಕಂಬಳಿ, ಆಚಾರಿಗಳಿಂದ ಮರದ ವಸ್ತುಗಳು....ಇತ್ಯಾದಿಗಳನ್ನು ದವಸ ಧಾನ್ಯಗಳಿಗೆ ವಿನಿಮಯ ಮಾಡಿಕೊಳ್ಳುವತ್ತ ಸಂತೆಯ ಅರ್ಥವಿಸ್ತಾರ ಬೆಳೆಯಿತು.  
ನಾಗರಿಕ ಜಗತ್ತಿನ ವೇಗದೊಂದಿಗೆ ತನ್ನ ಹೆಜ್ಜೆ ಸೇರಿಸಲೇಬೇಕಾದ ಅನಿವಾರ್ಯತೆಯಲ್ಲಿ ನಿತ್ಯ ಜೀವನದಲ್ಲಿ ನಾವು ಹಲವು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಲೇ ಇದ್ದೇವೆ.

ವಸ್ತು ಅಥವಾ ದವಸಗಳ ನಡುವೆ ನಡೆಯುತ್ತಿದ್ದ ವಿನಿಮಯವು ಕಾಲನ ಓಟದಲ್ಲಿ ಪರಿವರ್ತನೆಯನ್ನು ಕಾಣುತ್ತ ಹಣಕ್ಕೆ ವಿನಿಮಯಕ್ಕೆ ಕಾಲಿಟ್ಟಿತು.
ಇಂತಹ  ಮಾರಾಟ ಮಾಡುವ - ಪ್ರಕ್ರಿಯೆಗೆ ವಾರದ ದಿನವೊಂದನ್ನು ನಿಗದಿಪಡಿಸಿ, ಗ್ರಾಮ ಅಥವಾ ಪಟ್ಟಣದ ಬಯಲಿನಲ್ಲಿ ಒಂದೆಡೆಗೆ ಸೇರಿಕೊಳ್ಳುವ ಪದ್ಧತಿ ಬಂದು ಅದನ್ನು ಸಂತೆ ಎಂದೂ ಸ್ಥಳವನ್ನು ಸಂತೆ ಬಯಲು ಅಥವಾ ಸಂತೆ ಮಾಳವೆಂದು ಕರೆದರು.‌ ಹಿಂದೆ ರಾಜರುಗಳ ಆಡಳಿತವಿದ್ದ ಕಾಲದಲ್ಲಿ ಸಂತೆಗೆ ಬಹಳ ಪ್ರಾಶಸ್ಯ್ಯವನ್ನು ಕೊಡಲಾಗುತ್ತಿತ್ತು. ಸಂತೆ ಮಾಳಕ್ಕೆ ಬರುವ ವರ್ತಕರಿಂದ ಸಂಗ್ರಹಿಸುತ್ತಿದ್ದ  ಸುಂಕವು ರಾಜ್ಯದ ಬೊಕ್ಕಸದ ಮೌಲ್ಯ ಹೆಚ್ಚಲು ಕಾರಣವಾಗುತ್ತಿತ್ತು.  

ವ್ಯಾಪಾರವಷ್ಟೇ ಅಲ್ಲದೇ ಕರಡಿ ಕುಣಿತ, ದೊಂಬರಾಟ ಮುಂತಾದ ಜಾನಪದ ಕಲಾಪ್ರದರ್ಶನಗಳಿಗೂ ಸಂತೆಯೊಂದು ವೇದಿಕೆಯಾಗಿ ಜಾನಪದ ಕಲಾಪ್ರಕಾರವು ತಲೆಮಾರುಗಳನ್ನು ದಾಟಿ ಬೆಳೆಯಲು ಕಾರಣವಾಯಿತು. ಇಷ್ಟೇ ಅಲ್ಲದೇ ಬೇಸಿಗೆಯ ರಜಾದಿನಗಳಲ್ಲಿ ಟೆಂಟು ಹಾಕುತ್ತಿದ್ದ ಉತ್ತರ ಕರ್ನಾಟಕದ ನಾಟಕ ಕಂಪನಿಗಳ ಕಲೆಕ್ಷನ್ ಸಹ ಸಂತೆಯ ದಿನ ವಿಪರೀತವಾಗಿ, ಅಂದಿನ ದಿನ ಹೆಚ್ಚುವರಿ ಶೋ ನಡೆಯುತ್ತಿದ್ದವು.  ಹೀಗಾಗಿ...ಸಂತೆಯು ವ್ಯಾಪಾರ ವಹಿವಾಟಿಗೆ ಸೀಮಿತವಾಗಿರದೇ, ಹಲವು ಕಲಾಪ್ರಕಾರಗಳಿಗೆ ವೇದಿಕೆಯಾಗಿ ಜನಸಾಮಾನ್ಯರ ಏಕತಾನತೆಯ ಬದುಕಿನಲ್ಲಿ ಮನೋರಂಜನೆ ಒದಗಿಸುವ ತಾಣವಾಗಿಯ ಪಾತ್ರವಹಿಸಿತ್ತು.

ಸಂತೆ ಎಂದಾಗ ನಾನು ನನ್ನ  ಎಪ್ಪತ್ತರ ದಶಕದ ಬಾಲ್ಯದ ದಿನಗಳಿಗೆ ಹೋಗುತ್ತೇನೆ. ಮನೆ ಮತ್ತು ಶಾಲೆ ಇವೆರಡಲ್ಲದೇ ಮೂರನೆಯ ಜಗತ್ತೊಂದಿದೆ ಎನ್ನುವುದನ್ನು ಸಂತೆಯಿಂದಲೇ ಅರಿತೆ ಎಂದರೆ ತಪ್ಪಾಗಲಾರದು.

ಅಮ್ಮನ ಸೆರಗನ್ನು ಹಿಡಿದು ಸಂತೆಯೊಳಗೊಂದು ಸುತ್ತು ಹಾಕುವಷ್ಟರಲ್ಲಿ...ಸಾಮಾನ್ಯಜ್ಞಾನದ ಥಿಯರಿ, ಪ್ರಾಕ್ಟಿಕಲ್ ಎರಡರ ಪಾಠವೂ ನನಗಾಗುತ್ತಿತ್ತು.

ಅಪ್ಪ ಕೊಟ್ಟ ೨೫ ರೂಪಾಯಿ ಬಜೆಟ್ ಹಿಡಿದು ಹೊರಡುತ್ತಿದ್ದ ಅಮ್ಮ  ಮನಸ್ಸಿನಲ್ಲೇ ಆ ವಾರದ ಖರೀದಿಯ ಬಗ್ಗೆ ಲೆಕ್ಕ ಹಾಕುತ್ತಿದ್ದರೇನೋ, ಬಟ್ಟೆಯ ಚೀಲಗಳನ್ನು ಹಿಡಿದು ಆರ್ಥಿಕ ತಜ್ಞರಂತೆ  ಲೆಕ್ಕ ಹಾಕುತ್ತಲೇ ಮೌನವಾಗಿ ನಡೆಯುತ್ತಿದ್ದ ಅವರಿಗೆ ನಾನು ಸಾಥ್ ಕೊಡುತ್ತಿದ್ದೆ.

ಬೇಸಿಗೆಕಾಲದ ಸಂತೆಯಾದರೆ ಅಮ್ಮನ ಬಜೆಟ್ ಹೆಚ್ಚಿ, ಅಮ್ಮ ಕೇಳಿದಷ್ಟು ಹಣ ಕೊಡಲು ಅಪ್ಪನಿಗೆ ಇಷ್ಟವಿರದೇ "ಕೈ ಸ್ವಲ್ಪ ಚಿಕ್ಕದು ಮಾಡ್ಕೋ." ಮಾರ್ಮಿಕವಾಗಿ‌ ಅಮ್ಮನಿಗೆ  ಖರ್ಚಿನ ಬಗ್ಗೆ ಎಚ್ಚರಿಕೆ ಕೊಡುತ್ತಲೇ ಕೈಗೆ ಹಣವನ್ನಿಡುತ್ತಿದ್ದರು.

ಸಂತೆಯೊಳಗೆ ಕಾಲಿರಿಸುತ್ತಿದ್ದಂತೆ ಅದು ತೆರೆದುಕೊಳ್ಳುತ್ತಲೇ ಹೋಗುತ್ತಿದ್ದ ಪರಿ ನನ್ನಲ್ಲಿ ಬೆರಗು‌ ಮೂಡಿಸುತ್ತಿತ್ತು!

ಬೇಸಿಗೆಯ ಸಂತೆಯಲ್ಲಿ ಕೊಳ್ಳುವ ಸಾಮಾನಿನ ಪಟ್ಟಿಯೂ ದೊಡ್ಡ ಬಜೆಟ್ಟಿಗೆ ತಕ್ಕುದಾಗಿಯೇ ಇರುತ್ತಿತ್ತು. ಅಪ್ಪೆ ಮಿಡಿ ಉಪ್ಪಿನಕಾಯಿಗೆ ಅಗತ್ಯವಿದ್ದ ಕೆಂಪು ಸುಂದರಿ, ಬಣ್ಣ-ರುಚಿ-ಖಾರ ಎಲ್ಲದರ ವಿಶಿಷ್ಟ ಸಂಗಮವಾದ ಬ್ಯಾಡಗಿಯ ಕಡ್ಡಿ ಮೆಣಸಿನಕಾಯಿಗಾಗಿ ಅಮ್ಮ ಪೂರ್ತಿ ಸಂತೆಗೆ ಒಮ್ಮೆ ಸುತ್ತುಹಾಕಿ ಚೌಕಾಶಿ ನಡೆಸಿ ಕೊಳ್ಳುವಾಗ ಅವರ ಹಿಂದೆ ಬಾಲದಂತೆ ನಾನು ಸುತ್ತಲೇಬೇಕಿತ್ತು.

ರೆಫ್ರಿಜರೇಟರ್ ಇಲ್ಲದಿದ್ದ ಆ ದಿನಗಳಲ್ಲಿ ಸಂತೆಯಲ್ಲಿ ಕೊಂಡು ತರುತ್ತಿದ್ದ ತರಕಾರಿಗಳು ಒದ್ದೆಬಟ್ಟೆಯನ್ನು ಹೊದ್ದುಕೊಂಡು ಬಿದಿರಿನ‌ಬುಟ್ಟಿಯಲ್ಲಿ ಅದುಹೇಗೆ ತಾಜಾ ಆಗಿರುತ್ತಿದ್ದವೋ.  ಫ್ರಿಡ್ಜ್ ಇಲ್ಲದ ಮನೆ ಕಾಣಸಿಗುವುದೇ ಅಪರೂಪವಾಗಿರುವ ಇಂದು, ಅದೊಂದು ವಿಸ್ಮಯದ ಸಂಗತಿ!

ನಮ್ಮೂರಿನಲ್ಲಿ  ಮಂಗಳವಾರ ಸಂತೆ ನಡೆಯುತ್ತಿತ್ತು. ಊರಿನ ಮಧ್ಯಭಾಗದ ಒಂದು‌ ಪಾರ್ಶ್ವದಲ್ಲಿ ಬಸ್ ನಿಲ್ದಾಣವಿದ್ದರೆ ಇನ್ನೊಂದೆಡೆ ಸಂತೆ ಬಯಲು. ಹಳ್ಳಿಗಳಿಂದ ರೈತರು ತಾವು ಬೆಳೆದ ತರಕಾರಿಗಳನ್ನು ತಂದು ಮಾರಾಟಮಾಡಲು ಬಸ್ ನಿಲ್ದಾಣವೂ ತನ್ನದೇ ಆದ ಕೊಡುಗೆಯನ್ನು ಕೊಟ್ಟಿತ್ತು. ಸಂತೆಯ ಖರೀದಿ ಮುಗಿದಮೇಲೆ ಮಂಡಕ್ಕಿ, ಕಡಲೆಯನ್ನು ಪೊಟ್ಟಣ ಕಟ್ಟಿಸಿಕೊಂಡು ಮನೆಗೆ ಹೋಗುವುದಿತ್ತು.

ಸಂತೆಯಲ್ಲಿ ಟಾರ್ಪಾಲಿನ ಡೇರೆಯೇ ತಾತ್ಕಾಲಿಕ ಅಂಗಡಿ. ಪೂರ್ವ ಮುಂಗಾರಿನ ದಿನಗಳ ಜೋರುಗಾಳಿ ಮಳೆಯು ಡೇರೆಗಳನ್ನು ಅನಾಮತ್ತಾಗಿ ಹಾರಿಸಿಕೊಂಡು ಹೋಗುತ್ತಿದ್ದುದುಂಟು. ವರ್ತಕರು ದೂರದೂರುಗಳಿಂದ ತಂದ ಸರಕುಗಳು ಮಳೆಗೆ ಒದ್ದೆ ಮುದ್ದೆಯಾಗುತ್ತಿದ್ದರೆ ಅಸಹಾಯಕತೆಯಿಂದ ಅವರ ಕಂಗಳಲ್ಲಿ ಜಿನುಗುತ್ತಿದ್ದ ಕಂಬನಿಯೂ ಮಳೆಹನಿಗಳ ಜೊತೆಗೆ ಮಿಳಿತಗೊಂಡು ಕಾಣದಾಗುತ್ತಿತ್ತು.
ಸೂರಿನ ಮರೆಯಿಲ್ಲದ ಬಯಲಿನಲ್ಲಿ ಸಂತೆಗೆ ನೆರೆದ ಜನರ ನೂಕುನುಗ್ಗಲು, ಸರಕುಗಳ ರಕ್ಷಣೆಗೆ ವರ್ತಕರ ಪರದಾಟವಂತೂ ಹೇಳಲಸದಳ. ಪವನಕುಮಾರ ಮತ್ತು ವರುಣನ ಜಂಟಿ ಕಾರ್ಯಾಚರಣೆಯಲ್ಲಿ ಸಂತೆ ಬಯಲಿನಲ್ಲಿ ಅಣಬೆಗಳಂತೆ ಎದ್ದಿದ್ದ ಡೇರೆಗಳೆಲ್ಲ ಧರಾಶಾಹಿಗಳಾಗಿ ಬಯಲೇ ಆಗುತ್ತಿದ್ದರೂ ಸಂತೆಯ ಸೆಳೆತದಿಂದ ಯಾರೂ ವಿಮುಖರಾಗುತ್ತಿರಲಿಲ್ಲ.  

ನಮ್ಮೂರ ಸಂತೆಯ ದಿನಕ್ಕಾಗಿ ನಾಗರೀಕರು  ಕಾಯುತ್ತಿದ್ದುದೇನೋ ಸಹಜವೇ. ಆದರೆ ನಮ್ಮೂರ ಬಿಡಾಡಿ ದನಗಳಿಗೆ ಅಂದು ಸಂತೆ ಎಂದು ಅದುಹೇಗೆ ತಿಳಿಯುತ್ತಿತ್ತೋ ಇಂದಿಗೂ ನಿಗೂಢ.

ತರಾತುರಿಯಲ್ಲಿ ಜನರು ಹೋಗುವಂತೆಯೇ ದನಗಳೂ ಸಂತೆಬಯಲಿನ ತರಕಾರಿ ಅಂಗಡಿಗಳಿಗೆ ನಾಮುಂದು, ತಾಮುಂದು ಎನ್ನುತ್ತ ನುಗ್ಗುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ.  

ಚೌಕಾಶಿ ಮಾಡುವ ಗಿರಾಕಿಗಳ ಕಿರಿಕಿರಿಯ ನಡುವೆ  ರೈತರಿಂದ ಕೊಂಡ ತಾಜಾ ತರಕಾರಿಗಳಿಗೆ ಚೌಕಾಶಿ ಇರಲಿ, ಬೆಲೆಯನ್ನು ಸಹ ಕೇಳದೇ ಬಾಯಿ ಹಾಕುವ ದನಗಳನ್ನು ಓಡಿಸುವ ಅಂಗಡಿಯವರು ಪಡುತ್ತಿದ್ದ ಪಾಡು ದೇವರಿಗೇ ಪ್ರೀತಿ.  ಜನರ ನಡುವೆ ಮೂತಿ ತೂರಿಸಿ ಮುಲಾಜಿಲ್ಲದೇ ಸರಕುಗಳಿಗೆ ಬಾಯಿಹಾಕುವ ದನಗಳನ್ನು ಓಡಿಸಲು ಉದ್ದದ ಬಿದಿರಕೋಲನ್ನು ಬೀಸುತ್ತ, ವರ್ತಕರು ಇಂದಿನ ವಹಿವಾಟಿನ ಕೆಲ ಅಂಶಗಳನ್ನು ದನಗಳ ಮೇವಿಗಾಗಿ ಕಳೆಯಬೇಕಾಗಿ ಬಂದ ತಮ್ಮ ಹಣೆಬರಹವನ್ನು ದೂರುತ್ತಿದ್ದರು.  

ಸಂತೆಯೊಳಗೊಂದು ಮನೆಯ ಮಾಡಿ 
ಹುಲಿ ಕರಡಿಗಳಿಗಂಜಿದೊಡೆಂತಯ್ಯ | 
ಅಕ್ಕಮಹಾದೇವಿಯ ಈ ವಚನವು ನಮ್ಮೂರಿನ ಸಂತೆಯಲ್ಲಿ....

ಸಂತೆಯೊಳಗೊಂದು ಅಂಗಡಿಯ ಮಾಡಿ
ದನಕರುಗಳಿಗಂಜಿದೊಡೆಂತಯ್ಯ|

ಎಂದು  ಎಂದೋ ಬದಲಿಸಿಕೊಂಡುಬಿಟ್ಟಿದ್ದರು ನಮ್ಮೂರಿನ ಸಂತೆಯ ವರ್ತಕರು. ಹೀಗೆ ಹುಂಬತನ ತೋರುತ್ತಿದ್ದ ದನಗಳು ಜನರನ್ನು ತಿವಿಯುವ ಪ್ರಸಂಗಗಳು ಸಹ ಸಾಮಾನ್ಯವಾಗಿದ್ದವು. ಕಾಡಿನ ಹುಲಿಗಳಿಗೆ ಅಂಜುವಂತೆಯೇ ನಮ್ಮೂರ ಸಂತೆಯ ದನಗಳ ಬಗ್ಗೆಯೂ ನಮಗೆ ಅಷ್ಟೇ ಅಂಜಿಕೆಯಿತ್ತು.

ಸಂತೆಯು ಕೇವಲ ವ್ಯಾಪಾರ ವಹಿವಾಟಿನ ಕೇಂದ್ರವಾಗಿರದೇ ಮಾನವ ಸಂಬಂಧಗಳ ಉನ್ನತಿಗೂ ದಾರಿ ತೋರುವ ಗುರುವಾಗುತ್ತಿತ್ತು. ಕ್ಲುಪ್ತ ಸಮಯದಲ್ಲಿ ವರ್ತಕ‌ ಮತ್ತು ಗ್ರಾಹಕರ ನಡುವಿನ ಸಂವಹನದಿಂದ ಸೌಹಾರ್ದದ ವಾತಾವರಣ ಸೃಷ್ಟಿಯಾಗದೇ ಇರುತ್ತಿರಲಿಲ್ಲ. ವರ್ತಕನ ಅಮ್ಮ, ಅಕ್ಕಾ, ರಾಯ್ರೇ ಮುಂತಾದ ಸಂಬೋಧನೆಯಿಂದ  ಗ್ರಾಹಕರು ಫುಲ್ ಖುಶ್. ಪರಿಣಾಮ ಯಾವ ಅಂಗಡಿಯವನ ಮಾತು ಹೂವಿನಂತೆ  ಮೃದುವಾಗಿರುತ್ತಿತ್ತೋ‌ ಆ ಅಂಗಡಿಯಲ್ಲಿ ವ್ಯಾಪಾರ ಜೋರು. ಒಂದು ಪರಿಚಯದ ನಗು, ಆತ್ಮೀಯ ನೋಟಕ್ಕೆ ಮಾರುಹೋಗದ ಮನುಷ್ಯನಿಲ್ಲವಲ್ಲ.

ಕಾಲನ ಓಟದಲ್ಲಿ 'ಸಂತೆ' ತನ್ನ ಅರ್ಥವ್ಯಾಪ್ತಿಯನ್ನು ಮೊಟಕುಗೊಳಿಸಿಕೊಂಡಿದೆ. ತೀವ್ರತರವಾದ ಆಧುನಿಕತೆಯ ಓಘದಲ್ಲಿ ಜನಪದರ ಸಂತೆ  ಮರೆಯಾಗುತ್ತಿದೆ.  ಪಟ್ಟಣಗಳಲ್ಲಿ  ಸಂತೆ ನಡೆಯುತ್ತಿದ್ದ ಆ ದಿನಗಳ ಗೌಜು ಗದ್ದಲ ಇಂದಿನ ಅತಿವೇಗದ ಜಗತ್ತಿನ ಶಬ್ದಸಂತೆಯಲ್ಲಿ ಕೇಳದಾಗಿದೆ.

ಇಂದಿಗೂ ರೈತಾಪಿ ಜನರೇ ಹೆಚ್ಚಾಗಿರುವ  ಸಣ್ಣ ಊರುಗಳಲ್ಲಿ ಸಂತೆಗಳು ನಡೆಯುತ್ತವೆ. ನನ್ನ ಪ್ರಯಾಣದ ನಡುವೆ ಎಂದಾದರೂ ಸಂತೆ ನಡೆಯುವ ಸ್ಥಳದ ಮೂಲಕ ಹಾದುಹೋಗುವ ಸನ್ನಿವೇಶ ಎದುರಾದಾಗ... ಕೂಡಲೇ ಇಳಿದುಹೋಗಿ ಸಂತೆಬಯಲಿನುದ್ದಕ್ಕೂ ಓಡಾಡುತ್ತ ಬಾಲ್ಯದ ಸಂತೆಯೊಳಗೊಂದು ಸುತ್ತುಹಾಕದೇ ಇರುವುದಿಲ್ಲ.

ಮಾಲ್ ಮತ್ತು ಆನ್‌ಲೈನ್ ಖರೀದಿಯ ಇಂದಿನ ದಿನಗಳಲ್ಲಿ ಕೆಲವು ಗ್ರಾಮಗಳಿಗಷ್ಟೇ ಸೀಮಿತವಾಗಿರುವ ಸಂತೆ, ಮುಂದೊಂದು ದಿನ  ನೆನಪಿನ ಸಂತೆಯ ಪಳೆಯುಳಿಕೆಯಾಗಲಿದೆ ಎಂದು ಅನಿಸದೇ ಇರುವುದಿಲ್ಲ.

ಶೋಭಾ.

Category:World



ProfileImg

Written by shobha murthy

Writer